ಹೊತ್ತು ಏರುವ ಮುನ್ನ
ಮುತ್ತು ಸುರಿಯುವ ಮುನ್ನ
ಅಸ್ತಂಗತನಾದನು ರವಿಯು.
ಕತ್ತಲಾಯಿತು ಜೀವನ.
ಬರಿದಾಯಿತು ಒಡಲು
ಬತ್ತಿ ಹೋಯಿತು ಒಲವು
ನಿನ್ನ ನೆನಪಲ್ಲಿ ಕೊಚ್ಚಿ ಹೋಯಿತು
ಜೀವಿಸುವ ನಿಲುವು.
ಯಾವ ಜನ್ಮದ ವೈರಿ ನೀನು
ಈ ಜನ್ಮದಲಿ ಬಂದು
ನನ್ನ ಮಡಿಲು ತುಂಬಿದೆ ಕಂದ
ಯಾಕೆ ಪ್ರಹ್ಲಾದನ ದಾರಿ ಹಿಡಿದೆ ನೀನು?
ನಿನ್ನ ತುಂಟತನ, ನಿನ್ನ ನಗೆಯ ಹೊನಲು
ಮರೆಯಲಾರೆನು ನಾನು
ನೀನೇಕೆ ನನ್ನ ಬಿಟ್ಟು ಹೋದೆ ಈ ಪಯಣದಲಿ
ಉಸಿರಾಡುವ ಶವವಾಗಿ?
ಹೇಗೆ ಬದುಕಲಿ ನಾನು ನಿನ್ನ ನೋಡದೆ
ಯಾವ ಜನ್ಮದ ಸೇಡು ತೀರಿಸಲು
ಹುಟ್ಟಿದೆ ನೀನು ನನ್ನ ಒಡಲಲ್ಲಿ.
ಯಾವ ಜನ್ಮದ ವೈರಿ ನೀನು?
(ನನ್ನ ಗೆಳತಿಯೊಬ್ಬಳು ಬೆಳೆದ ಮಗನನ್ನು ಬಸ್ಸು ಅಪಘಾತದಲ್ಲಿ ಕಳಕೊಂಡ ಸಂದರ್ಭದ ಬರೆದದ್ದು)
*****