ತಾಯೇ ನಿನ್ನ ಪ್ರೀತಿಯ ಬಾಗಿನ
ಎಲ್ಲಕು ಮೀರಿದ್ದೆ,
ಗಾಳಿ, ನೀರು, ಅನ್ನದ ರಕ್ಷೆ
ಮಾತಿಗೆ ನಿಲುಕದ್ದೆ.

ಕನ್ನಡದಂಥ ಕಂಪಾಡುವ ನುಡಿ
ನಾಲಿಗೆಗೇರಿದ್ದು,
ಪಂಪ ಕುವೆಂಪು ಕುಮಾರವ್ಯಾಸ
ಬಂಧುಗಳಾದದ್ದು,

ಸಾಮಾನ್ಯವೆ ಶ್ರೀ ಪುರಂದರ ಬಸವ
ಜಕಣರು ಕಡೆದದ್ದು,
ಕನ್ನಂಬಾಡಿಯ ಬಣ್ಣದ ಬೆಡಗು
ಲೋಕವ ಮಣಿಸಿದ್ದು

ಭಾರಿ ಅರಳಿಮರ, ನಡುವೆ ಪುಟ್ಟ ಎಲೆ
ಎಲೆಗೆ ಎಂಥ ಬೆರಗು!
ನಿನ್ನ ಪರಂಪರೆಯಲ್ಲಿ ಬಂದು ನಾ
ಯಾರಿಗೂನು ಮಿಗಿಲು.

ಕಾಲಿಗೆ ಎರಗಿದೆ ಕಾಪಾಡಮ್ಮ
ನಿನ್ನ ಕಂದನನ್ನು,
ಸದಾ ನೆನೆವೆ ನಾ ನನ್ನೀ ಹೆಮ್ಮೆಯ
ಕನ್ನಡ ನಾಡನ್ನು.
*****