ಗೊತ್ತಿರಲೇ ಇಲ್ಲ
ಫಲವತ್ತಾದ
ಕಪ್ಪು ನೆಲವೆಂದು
ನೀನು ಬಂದು ಬೇರೂರಿ
ಆಕಾಶದೆತ್ತರ
ಬೆಳೆದು ನಿಲ್ಲುವವರೆಗೂ

ಯಾರು ತಂದು ಬಿಸುಟರು
ನಿನ್ನ
ನನ್ನ ಎದೆಯಾಳದಲಿ?

ಹುಲ್ಲಿನ ಜೊತೆ ಹುಲ್ಲಿನಂತೆ
ಬೆಳೆದು
ಹುಲ್ಲಾಗಿ ಒಣಗಿ ಹೋಗದೆ
ಮರವಾಗಿ
ಬೆಳೆದು ನಿಂತುಬಿಟ್ಟೆ

ನನ್ನೆದೆ
ಬರೀ ಹುಲ್ಲು ಬೆಳೆಯುವ
ಬಂಜರು
ಎಂದವರ ಸುಳ್ಳಾಗಿಸಿದ್ದು
ಒಂದು ಸೋಜಿಗ

ನೋವು ತಿಳಿಯಲಿಲ್ಲ
ಬಿರುಕು
ಹುಡುಕಿ ಬೇರು ಬಿಟ್ಟು
ರಸ ಹೀರುವಾಗ
ಭಾರ
ಗೊತ್ತಾಗಲಿಲ್ಲ
ಹಾಲುಗೆನ್ನೆಯಂತ ಚಿಗುರು ತೊಟ್ಟಾಗ
ಕಂದ
ನಗುವಿನಂತ ಹೂವು
ಮುಡಿದಾಗ

ನೀನೊಂದು ಬರೀ
ನೆನಪು
ಹೊತ್ತ ಹೆಮ್ಮರವೆಂದು ತಿಳಿದೂ
ಕೊಡವಿ
ಕೆಡವಿ ಬೀಳಿಸುವ ತಾಕತ್ತು
ಇಲ್ಲದೇ ಹೋಗಿದ್ದು
ನನ್ನ ಬದುಕಿನ ದುರಂತ

ನಿನ್ನ ಹೂವು ಹಣ್ಣು
ನೆರಳು
ಮತ್ತಾರದೋ ಹೊಟ್ಟೆ ತುಂಬಿಸುವಾಗ
ಹಸಿದ ಬಸಿರು
ನಿನ್ನದೊಂದು ಬೀಜಕ್ಕಾಗಿ ಕಾತರಿಸುತ್ತದೆ
ನಾಚಿಕೆಯಿಲ್ಲದೆ

ಎಷ್ಟೊಂದು ಬಿಸಿಲು ಬಿರುಗಾಳಿ
ಗುಡುಗು ಸಿಡಿಲು
ಬೆಂಕಿ ಮಳೆ
ತಡೆದು ನಿಂತೆ
ಬೇರು ಸಹಿತ
ಕೊಳೆತು
ಬಿದ್ದು ಹೋಗುವವರೆಗೆ
ನೆನಪ ನೆರಳಿನ ಭಾರ
ಹೊರದೆ ಬೇರೆ ವಿಧಿಯಿಲ್ಲ

ಹೆಣ್ಣಾಗಿ ಹುಟ್ಟಿ
‘ಭೂಮಿ’
ಎಂದು ಕರೆಸಿಕೊಳ್ಳುವುದು
ಸಾಕು
ಸಿಡಿಯಬೇಕು

ಇನ್ನಾದರೂ ಜ್ವಾಲಾಮುಖಿಯಾಗಿ
*****