ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಅವನಿಗೆ ದಿನಾ ಸಾಯಂಕಾಲದ ಹೊತ್ತು ಮುಳುಗಿತ್ತಿರುವ ಸೂರ್ಯನನ್ನು ಸೇತುವೆಯ ಮೇಲಿಂದ ನೋಡುವುದು ತುಂಬಾ ಇಷ್ಟ. ಆ ನದಿ ಪಶ್ಚಿಮಕ್ಕೆ ಹರಿಯುತ್ತಿರುತ್ತದೆ. ಪಶ್ಚಿಮದ ಗುಡ್ಡದ ಅಂಚಿನಲ್ಲಿ ಸೂರ್ಯ ಕಂತುವಾಗ ಕೆಂಪನೆ ಕಿರಣಗಳು ನೀರಿನ ಮೇಲೆ ಪ್ರತಿಫಲಿಸಿ ದಿವ್ಯತೆಯನ್ನು ಮೂಡಿಸುತ್ತವೆ. ಆ ಹೊತ್ತು ಸಂಜೆ ಹಕ್ಕಿಗಳು ವಿಭಿನ್ನ ಸ್ವರ ಹೊರಡಿಸುತ್ತವೆ. ಅವಕ್ಕೂ ಗೊಡಗಳಿಗೆ ಮರಳಲು ಇಷ್ಟವಿಲ್ಲವೇನೋ? ಆಕಾಶದಲ್ಲಿ ಬೆಳ್ಳಕ್ಕಿಗಳು ಹಿಂಡಾಗಿ ಹಾರುವುದನ್ನು ನೋಡುವುದೇ ಒಂದು ಖುಷಿ. ಅದಕ್ಕೆ ಪೂರಕವಾಗಿ ಕೆಳಗೆ ಹರಿಯುವ ನದಿಯ ಜುಳುಜುಳು ನಾದ.

ಆಗೆಲ್ಲಾ ಅವನಿಗೆ ಅವಳು ನೆನಪಾಗುತ್ತಾಳೆ. ಅವಳ ಆ ತುಂಬು ಗಲ್ಲಗಳನ್ನು ನೋಡುತ್ತಾ ಅವನು ಸೂರ್ಯಾಸ್ತದ ಬಣ್ಣಗಳನ್ನು ಕಲ್ಪಿಸಿಕೊಳ್ಳುತ್ತಿದ್ದ. ಅವನು ಅವಳಿಗೆ ಪ್ರಕೃತಿ ಎಂದು ಹೆಸರಿಟ್ಟಿದ್ದ. ಅವಳನ್ನು ನೋಡುವಾಗೆಲ್ಲಾ “ನಾನು ಪ್ರಕೃತಿ ವೀಕ್ಷಣೆ ಮಾಡುತ್ತಿದ್ದೇನೆ. ” ಎನ್ನುತ್ತಿದ್ದ. ಪ್ರಕೃತಿ ಸ್ಫೂರ್ತಿ ನೀಡುತ್ತದೆ. ಬರಡು ಜೀವನದಲ್ಲಿ ಜೀವಸೆಲೆ ಉಕ್ಕಿಸುತ್ತದೆ, ಕಾಡುವ ಏಕಾಂಗಿತನಕ್ಕೆ, ಜೀವನದೆ ಅಭದ್ರತೆಗೆ ಸಾಂತ್ವನ ನೀಡುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಬದುಕಿನಲ್ಲಿ ಮುನ್ನುಗ್ಗುವಂತೆ ಮಾಡುತ್ತದೆ ಎಂದು ಅವಳಲ್ಲಿ ಹೇಳುತ್ತಿದ್ದ. ಅವಳಿಗೂ ಅದು ಇಷ್ಟವಾಗಿತ್ತು!

ಕೆಲವೊಮ್ಮೆ ಆ ಪ್ರಕೃತಿ ತನ್ನದೇ ಆಗಿರಬೇಕೆಂದು ಸ್ವಾರ್ಥವೂ ಅವನನ್ನು ಕಾಡುತ್ತಿದ್ದುದುಂಟು. ಆಗೆಲ್ಲಾ ಅವನು ತಾನೆಷ್ಟು ಸಣ್ಣದಾಗಿ ಯೋಚಿಸಿದ್ದೇನೆ ಅಂದುಕೊಳ್ಳುತ್ತಿದ್ದ. ಆದರೂ ಸಂಜೆ ಅವನನ್ನು ನದಿಯ ಸೇತುವೆಯ ಬಳಿಗೆ ಕಾಲುಗಳು ಒಯ್ಯುತ್ತಿದ್ದವು. ಸೂರ್ಯಾಸ್ತದ ಬಣ್ಣಗಳಲ್ಲಿ ಅವನು ತನ್ನನ್ನು ಕಳಕಳ್ಳೊತ್ತಿದ್ದ. ಸದಾ ಪ್ರಕೃತಿ ವೀಕ್ಷಣೆಗಾಗಿ ಹಾತೊರೆಯುತ್ತಿದ್ದ.

ಒಂದು ಸಲ ಅವಳೊಡನೆ ಹರಟುವಾಗ ಆ ಸುಂದರ ಸಂಜೆಯ ಭಾವನೆ ಗಳನ್ನು ಅವಳ ಮುಂದಿರಿಸಿದ್ದ. ಅವಳು ನಕ್ಕಿದ್ದಳು. ಅಂತಹ ಮಾತುಗಳು ಅವಳಿಗೂ ಇಷ್ಟವೇ. ಅವನು ಹೇಳಿದ ಮೇಲೆ ಅವಳು ಮನೆಯ ಹಿಂಬದಿಯ ಗುಡ್ಡಕ್ಕೆ ಹೋಗಿ ಸೂರ್ಯಾಸ್ತವನ್ನು ನೋಡುತ್ತಿದ್ದಳು. ದಿವ್ಯತೆಯನ್ನು ಅನುಭವಿಸುತ್ತಿದ್ದಳು. ಆದರೆ ಅಲ್ಲಿ ನದಿ ಇರಲಿಲ್ಲ. ನಾದ ಮಾಧುರ್ಯ ಸವಿಯಲು ಅವಳಿಂದ ಆಗುತ್ತಿರಲಿಲ್ಲ.

ಎಷ್ಟು ದಿನಗಳು ಕಳೆದವೋ? ಅವರಿಬ್ಬರು ಹಾಗೆ ಸೇರುತ್ತಿದ್ದಾಗಲೆಲ್ಲಾ ಪ್ರಕೃತಿಯ ಬಗ್ಗೆ ಮಾತಾಡುತ್ತಿದ್ದರು. ಒಂದು ದಿನ ಅವನು ಅವಳ ಕೈ ಹಿಡಿದುಕೊಂಡು,”ಜೀವನದ ಕೊನೆಯವರೆಗೂ ಈ ಪ್ರೀತಿ ನನಗೆ ಸಿಗುತ್ತದಲ್ಲಾ?” ಎಂದು ಕಣ್ಣೀರಾದ, ಅವಳಿಗೆ ದಿಗಿಲು. ಅವ ತನ್ನಲ್ಲಿ ಏನು ಕಂಡು ತನಗೆ ಹತ್ತಿರವಾದ? ಅವನದಕ್ಕೆ ಹೇಳಿದ್ದ: ’ನಮಗೆ ಇಷ್ಟ ಆಗುವವರು ಕೇವಲ ಕೆಲವರು. ಅವರೂ ದೂರಾದರೆ ಬದುಕು ಅರ್ಥ ಕಳಕೊಳ್ಳುತ್ತದೆ.’ ಅವಳದಕ್ಕೆ ’ಒಂದಲ್ಲ ಒಂದು ದಿವಸ ದೂರವಾಗಲೇ ಬೇಕಲ್ಲ.’ ಎಂದು ಕೇಳಿದ್ದಳು. ಅವನು ನಗುತ್ತಾ ’ನೀನು ಸೂರ್ಯಾಸ್ತದ ಕಾಲದ ನದಿಯನ್ನು ನೋಡಿಲ್ಲ. ಒಂದು ಸಲ ನೋಡು. ಕೋಟಿಗಟ್ಟಲೆ ಮೈಲು ದೂರದ ಸೂರ್ಯ ನಮ್ಮ ಊರಿನ ನದಿಯ ಕೆನ್ನೆಯಲ್ಲಿ ಕೆಂಪು ಮೂಡಿಸುತ್ತಾನೆ. ಅದು ಪ್ರೀತಿಯ ಶಕ್ತಿ! ದೂರವಾದರೂ ಹತ್ತಿರ ಇರುವುದೆಂದರೆ ಹಾಗೆ’ ಎಂದಿದ್ದ. ಆ ಮಾತು ಅವಳಲ್ಲಿ ದಿವ್ಯತೆಯ ಅನುಭೂತಿಯನ್ನು ಮೂಡಿಸಿತ್ತು.

ಅಂದು ಅವಳು ಸೇತುವೆಯಲ್ಲೇ ಅವನನ್ನು ಭೇಟಿ ಯಾಗಿದ್ದಳು. ಅವನು ಹೇಳಿದ್ದ ದಿವ್ಯತೆಯನ್ನು ಅವನೊಟ್ಟಿಗೆ ಸವಿದಿದ್ದಳು. ನದಿಯ ಕೆನ್ನೆಯನ್ನು ರಂಗೇರಿಸುವ ಸೂರ್ಯನನ್ನು ಕಂಡಿದ್ದಳು. ಕತ್ತಲಾಗುವಾಗ ಅವಳು ಒಂದು ಪತ್ರವನ್ನು ಅವನಿಗೆ ಕೊಟ್ಟಳು. ಅವನು ಅದನ್ನು ತೆರೆಯಲಿಲ್ಲ. ’ಯಾವಾಗ ಮದುವೆ’ ಎಂದು ಪ್ರಶ್ನಿಸಿದ. “ತೆರೆದು ನೋಡು ನಿನಗೇ ಗೊತ್ತಾಗುತ್ತದೆ.” ಅವನು ತೆರೆಯಲಿಲ್ಲ. “ಗೊತ್ತಾಗಿ ಏನಾಗಬೇಕಿದೆ? ನಾನು ಮದುವೆಗೆ ಬರುವುದಿಲ್ಲ!” ಅವಳು ಪೆಚ್ಚಾದಳು.

“ಯಾಕೆ ಹಾಗೆ ಹೇಳುತ್ತೀಯಾ? ಏನಾಗಿದೆ ನಿನಗೆ?” ಅವನು ತಣ್ಣನೆಯ ಸ್ವರದಲ್ಲಿ ಹೇಳಿದ. “ನೀನು ಮದುವೆಯಾಗಬೇಕಾದದ್ದು ಪ್ರಕ್ಕತಿಯ ನಿಯಮ. ನನಗದರಲ್ಲಿ ಬೇಸರವೇನೂ ಇಲ್ಲ. ಆದರೆ ನಾನು ಮದುವೆಗೆ ಬಾರದಿದ್ದರೆ ನೀನು ನನ್ನವಳಾಗಿಯೇ ಇರುತ್ತೀಯ. ನಾನೆಷ್ಟೋ ದೂರದಲ್ಲಿದ್ದು ನಿನ್ನ ಕೆನ್ನೆ ಕೆಂಪೇರಿಸುವ ಸೂರ್ಯನಾಗಿರುತ್ತೇನೆ. ಕತೆ ಬರೆಯುವವಳಲ್ಲವೇ ನೀನು, ಸಾಧ್ಯವಾದರೆ ಒಂದು ಕತೆ ಬರೆದುಬಿಡು.”

ಅವಳು ನಿಶ್ಶಬ್ದವಾಗಿ ಹಿಂತಿರುಗಿದಳು. ಸುತ್ತ ಕತ್ತಲೆ ಕವಿಯುತ್ತಿತ್ತು. ಅವನ ಗಟ್ಟಿಯಾಗಿ ಹೇಳಿದ. “ಕತ್ತಲೆ ಕವಿಯುತ್ತಿದೆ ಎಂದು ಹೆದರಬೇಡ, ನಾಳೆ ಬೆಳಕಾಗುತ್ತದೆ. ನಾಳೆ ಸಂಜೆ ಮತ್ತೆ ಸೂರ್ಯ  ನದಿಯ ಕೆನ್ನೆಯನ್ನು ಕೆಂಪೇರಿಸುತ್ತಾನೆ! ”
*****

Latest posts by ಪ್ರತಿಮಾ ಪನತ್ತಿಲ (see all)