ಎಲ್ಲಿ ಹೋದನೇ ಮರೆದು-ಹರಿ
ಎಲ್ಲಿ ಹೋದನೇ ತೊರೆದು?
ಎಲ್ಲಿ ಹೋದನೇ ನಲ್ಲೆ ನೀಡಿದಾ
ಹಾಲನು ಮಣ್ಣಿಗೆ ಸುರಿದು?

ಅಲೆದು ಬಂದೆನೇ ವನವ-ನಾ
ತೊರೆದು ಬಂದೆನೇ ಜನವ;
ಒಲಿದು ನೀಡಿದ ಹರಿಗೆ ನನ್ನನೇ
ಸುಲಿದು ಸವಿದನೇ ಫಲವ

ಮಾಸಿತೇ ಮನ ಗೆಳತಿ
ದಾಸನಾದ ಹರಿ ಎನಿಸಿ,
ಮೋಸಹೋದೆ ನಾ ಮೀಸಲು ನೀಡಿದ
ಒಲವನೆ ಬಾಗಿಸ ಬಯಸಿ

ಕಳೆದುಕೊಂಡೆನೇ ಅವನ
ಹಾರದೆ ಏಕಿದೆ ಹರಣ?
ತಂತಿ ಸಿಡಿಯಿತೇ ರಾಗ ಕಡಿಯಿತೇ
ಹಾಡದೆ ಮುಂದಿನ ಚರಣ
*****