ಬಾಳಿಽಯ ಬನ ಚೆಲುವಽ|
ಬಾಳಿಽಯ ಗೊನೊ ಚೆಲುವಽ|
ಬಾಳ್ಯಾಗ ಇರುವ ಗಿಽಣಿ ಚೆಲುವಽಽ| ಸೋಬಾನಮ||
ಬಾಳಿಯಾಗಽಽ ಇರುವ ಗಿಣಿ ಚೆಲುವ ತಮ್ಮನ
ಬಾಗಲಽ ಮಾಟ ಕರಚೆಲುವ| ಸೋ… ||೧||
ನಿಂಬೀಯ ಬನ ಚೆಲುವಾಽ|
ನಿಂಬೀಯ ಗೊನಿ ಚೆಲುವಾಽ|
ನಿಂಬ್ಯಾಗ ಇರುವ ಗಿಣಿಽ ಚೆಲುವ| ಸೋ…
ನಿಂಬಿಯಾಗಽ ಇರುವ ಗಿಣಿ ಚೆಲುವ ತಮ್ಮನ
ಕಂಬಽದ ಮಾಟ ಕರಚೆಲುವ| ಸೋ ||೨||
ನಿಂಬೀಯ ಬನದಾಗ ಚಂದರನ ಕಾವಲ|
ಬಂದಽವರ್‍ಯಾರ ಒಳಹೊರಗಽ| ಸೋ….
ಬಂದುವವಽರ್‍ಯಾರ ಒಳಹೊರಗಽ ತಂಗೆವನ
ಅಪ್ಪದವರಲ್ಲ ಪರಮಂದೆ| ಸೋ… ||೩||
ಬಾಳೀಯ ಬನದಾಗ ಭಾವನ ಕಾವಲ|
ಬಂದಽವರ್‍ಯಾರ ಒಳಹೊರಗಽ| ಸೋ….
ಬಂದುವವಽರ್‍ಯಾರ ಒಳಹೊರಗಽ ತಂಗೆವನ
ಅವ್ವದವರಲ್ಲ ಪರಮಂದೆ| ಸೋ ||೪||
ಅತ್ತಿಕಾಯೀ ತಂದು ಅತ್ತೆ ಉಡಿಯಲಿ ತುಂಬಿ|
ಅತ್ತ್ಯೆದ್ದು ಹರಕಿ ಕುಡತಾಳಽ| ಸೋ…
ಅತ್ತೆಽಯೆದ್ದು ಹರಕಿ ಕುಡತಾಳ ತಂಗೆವಗ
ಹತ್ತು ಮಕ್ಕಽಳ ಹಡೆಯೆಂದು| ಸೋ ||೫||
ಮಾವಿನ ಕಾಯಿ ತಂದು ಮಾವ ಉಡಿಯಲಿ ತುಂಬಿ|
ಮಾಯಽದ ಮಕ್ಕಳ ಹಡೆಯೆಂದು| ಸೋ…
ಮಾಯಽದ ಮಕ್ಕಳ ಹಡೆಯೆಂದು ತಂಗೆವಗ|
ಮಾವ ಬಂದ್ಹರಕಿ ಕೊಡೆತಾನ| ಸೋ ||೬||
ಬಾಳಿಕಾಯೀ ತಂದು ಭಾವ ಉಡಿಯಲಿ ತುಂಬಿ|
ಭಾವ ಎದ್ದು ಹೆರಕಿ ಕೊಡೆತಾನ| ಸೋ…
ಭಾವ ಎದ್ದು ಹರಕಿ ಕೊಡೆತಾನ ತಂಗೆವ್ವಾ|
ಭಾಳ ಮಕ್ಕಽಳ ಹಡೆಯವ್ವಾ| ಸೋ ||೭||
ಅತ್ತಿಂದ ಬಂದಾವ ಮುತ್ತಿನೆರಡಾರೂತಿ|
ಉಪ್ಪರಗಿ ಗಗನ ತುಳುಕೂತ। ಸೋ…
ಉಪ್ಪುವರಗಿಽ ಗಗನ ತುಳುಕೂತ ತಂಗೆವ್ವನ|
ಆತ್ತೆಯಾರೂತಿ ಬೆಳಗ್ಯಾಳ| ಸೋ ||೮||
*****