ಚಾರು ಶಾರದ ಸಂಧ್ಯೆ,
ನೀರ ನೀಲಾಕಾಶ
ಪೇರಾಳದರ್ಣವವ ಹೋಲುತಿತ್ತು.
ಜಲಸಸ್ಯ ನಿವಹದೊಲು
ಜಲದವಂಚಿನೊಳಿತ್ತು,
ಎಳೆಯ ಪೆರೆ ಪಾತಾಳ ಯಾನದಂತೆ.
ಬಾನಿನಂತರದಲ್ಲಿ
ಮೀನಂತೆ ತೇಲಿದುವು
ವೈನತೇಯಗಳೆರಡು ಗರಿಯಲುಗದೆ.
ಅಡಿಯೊಳಗೆ ನಾನಿದ್ದೆ
ಕಡಲ ಕರುಮಾಡದೊಳು
ಬಿಡುವಿಗೆಳಸುವ ಮೀನಕನ್ಯೆಯಂತೆ.
“ಮೇಲೆ ಮೇಲೇರುತ್ತ
ನೀಲಸೀಮೆಯ ಮೀರೆ
ಲೀಲೆಯಿಂದೋಪನನು ಸೇರಲಳವು.
ಈಯಾಸೆ ಹುಚ್ಚಲ್ಲ,
ಆಯಾಸವಿನಿತಿಲ್ಲ,
ಕಾಯವೂ ನೆರವಿದಕೆ” ಎಂದಿತೊಲವು.
ಬಾಳುಬಾಳನು ಹಾಯ್ದು
ಬಾಳ ನಚ್ಚನು ಹೊಯ್ದು
ಕಾಳೋರಗಾಮಿಯೊಲು ನೆನಹು ನುಸುಳಿ,
“ನೀ ತಿರಸ್ಕೃತೆ, ಅದಕೆ
ಈ ತೆರದ ಬಾಳಾಯ್ತು,
ಏತಕೀ ಬಯಲಾಸೆ ನಿನಗೆಂ”ದಿತು.
ಎಂಥ ಕುಲ, ಎಂಥ ಚಲ,
ಎಂಥ ಮೋಹಕ ಕಾಯ,
ಎಂಥ ಕರಣದ ದೌತ್ಯ, ಮನದ ಮಂತ್ರ!
ಅಂತರಂಗಕೆ ಸಲ್ಲೆ
ಎಂಥ ನೋಂಪಿಯ ನೋಂತು
ಇಂತಿದೆಲ್ಲವ ಪಡೆದೆ! ಎಂತು ವ್ಯರ್ಥ!
ಚಾರು ಶಾರದ ಸಂಧ್ಯೆ,
ನೀರ ನೀಲಾಕಾಶ
ಪೇರಾಳದಬ್ದಿಯನು ಹೋಲುತಿತ್ತು.
ಆ ಮಹಾರ್ಣವ ತಲದಿ
ಕಾಮಹತ ನಾನಿದ್ದೆ
ಪ್ರೇಮವಂಚಿತ ಮೀನಕನ್ಯೆಯಂತೆ.
*****