ಭೂಲೋಕದಿಂದ ತನ್ನ ಕಡೆಗೆ ಬಂದ ವಿಪುಲ ಅರ್ಜಿಗಳ ಒಟ್ಟಣೆಯನ್ನು ನೋಡಿ, ಅವುಗಳಿಗೆಲ್ಲ ಉತ್ತರ ಬರೆಯಿಸುತ್ತ ಕುಳಿತುಕೊಳ್ಳುವುದಕ್ಕಿಂತ ಸ್ವತಃ ಭೂಲೋಕಕ್ಕೆ ಹೋಗಿ, ಅಲ್ಲಿಯವರಿಗೆ ಬೇಕಾದ ಪರಿಹಾರವನ್ನು ಒದಗಿಸಿ ಬರುವುದು ಲೇಸೆಂದು ಬಗೆದು ಬ್ರಹ್ಮದೇವನು ತನ್ನ ಸಿಬ್ಬಂದಿಯೊಡನೆ ಪೃಥ್ವಿಗಿಳಿದನು. ಅರ್ಜಿದಾರರಿಗೆ ಕೊಡಬೇಕಾದ ಪರಿಹಾರಗಳನ್ನೂ ಹೊತ್ತುತಂದನು.

ಊರಮುಂದಿನ  ಧರ್ಮಶಾಲೆಯಲ್ಲಿ ಬೀಡುಬಿಟ್ಟು ಊರಲ್ಲೆಲ್ಲ ಡಂಗುರ ಹೊಡಿಸಿದನು. “ಯಾರಾರ ಬೇಡಿಕೆ ಏನೇನಿದೆಯೆಂಬುದನ್ನು ಸಮಕ್ಷಮದಲ್ಲಿ ತಿಳಿಸಿ ಪರಿಹಾರ ಪಡೆಯಬೇಕು” ಎನ್ನುವ ಸುದ್ಧಿ ಕಣ್ಣುಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಊರವರಿಗೆ ತಿಳಿದುಬ೦ತು.

ಮರುದಿನ ಮುಂಜಾನೆ ಧರ್ಮಶಾಲೆಯತ್ತ ಜನರು ಸಾಲುಗಟ್ಟಿ ಸಾಗಿಯೇ ಸಾಗಿದರು. ತಮ್ಮ ಬೇಡಿಕೆಗಳನ್ನು ಬ್ರಹ್ಮದೇವನ ಮುಂದಿಟ್ಟರು. ಬ್ರಷ್ಮದೇವನಾದರೂ ಯಾರನ್ನೂ ಬರಿಗೈಯಿಂದ ಕಳಿಸದೆ, ಕೈಸಡಿಲು ಬಿಟ್ಟು ಕೇಳಿದವರಿಗೆ ತೃಪ್ತಿಯಾಗುವಂತೆ ಅವರವರ ಬೇಡಿಕೆಗಳನ್ನು ಪೂರಯಿಸಿದನು. ಸಂತ್ರಸ್ತರಲ್ಲಿ ಕೆಲವರಿಗೆ ಹೊಲ ಸಿಕ್ಕವು. ಕೆಲವರಿಗೆ ಮನೆ ಸಿಕ್ಕವು. ಹಿಂಡುವ ಎಮ್ಮೆ ಕೆಲವರಿಗೆ, ಹೂಡುವ ಎತ್ತು ಕೆಲವರಿಗೆ ದೊರೆತವು. ಕುದುರೆ ಬೇಡಿದವರಿಗೆ ಕುದುರೆ, ಗಾಡಿ ಬೇಡಿದವರಿಗೆ ಗಾಡಿ, ಪ್ರಾಯ ಬೇಡಿದರೂ ಸಿಕ್ಕಿತು. ಆರೋಗ್ಯ ಬೇಡಿದರೂ ಸಿಕ್ಕಿತು. ಚೆಲುವಿಕೆ – ಆಭರಣಗಳನ್ನೂ ಬ್ರಹ್ಮದೇವನು ಇಲ್ಲೆನ್ನದೆ ಕೊಟ್ಟೇಕೊಟ್ಟನು.

ದೀಪ ಹಚ್ಚುವ ವೇಳೆಯಾಯಿತು. ಬಡ ನೇಕಾರನೊಬ್ಬನು ಧರ್ಮಶಾಲೆಗೆ ಬಂದು, ಬ್ರಹ್ಮದೇವರಿಗೆ ಕೈಮುಗಿದು ನಿಂತನು.

“ಏನು ಬೇಕಾಗಿತ್ತು ನಿನಗೆ” ಎಂದು ಕೇಳಿದನು ಬ್ರಹ್ಮದೇವ.

“ನನಗೆ ಅರಸೊತ್ತಿಗೆಯನ್ನು ಕೊಟ್ಟುಬಿಡಿರಿ” ಎಂದನು ಆ ನೇಕಾರ.

“ತೀವ್ರ ಏಕೆ ಬರಲಿಲ್ಲ ನೀನು ?”

“ಮಗ್ಗದ ಮೇಲಿನ ಸೀರೆ ನೆಯ್ದು ಮುಗಿಸ್ಲಬೇಕಾಗಿತ್ತು. ಆದ್ದರಿಂದ ತಡವಾಯಿತು” ಎಂದು ನೇಕಾರನು ಕೈತಿಕ್ಕುತ್ತ ನುಡಿದು ಮುಗಿಸಿದನು.

“ನಾನು ಕೊಡಬೇಕಾದ ಅರಸೊತ್ತಿಗೆಗಳೆಲ್ಲ ತೀರಿಹೋದವು. ಮತ್ತೇನಾದರು ಕೇಳಿಕೋ ಕೊಡುವೆನು.”

“ನನಗೆ ಅರಸೂತ್ತಿಗೆಯೇ ಬೇಕಾಗಿತ್ತು” ನೇಕಾರನು ತಡವರಿಸುತ್ತ ಹೇಳಿದನು.  ಬ್ರಹ್ಮದೇವನು ಕೆಲಹೊತ್ತು ವಿಚಾರಮಗ್ನನಾಗಿ ಆ ಬಳಿಕ ಹೇಳಿದನು –

“ರಾತ್ರಿರಾಜನಾಗುವೆಯಾ ?”

“ಆಗಲಿ. ಎಂಥದೇ ಆಗಲಿ. ರಾಜನಾದರೆ ಸಾಕು. ಕೊಟ್ಟುಬಿಡಿರಿ” ಎಂದು ಹಿರಿಹಿಗ್ಗಿನಲ್ಲಿ ಕೇಳಿದನು.

“ಕೊಟ್ಟಿದೆ ಹೋಗು” ಎಂದನು ಬ್ರಹ್ಮದೇವ.

*     *     *

ಹಳ್ಳಿಯ ಬಯಲಾಟದ ಮೇಳದವರು ಪ್ರತಿಯೊಂದು ಆಟದಲ್ಲಿ ಆ ನೇಕಾರನಿಗೇ ರಾಜನ ಸೋಗು ಕೊಡತೊಡಗಿದರು. ಬಡ ನೇಕಾರನು ದುಡಿದು ದುಡಿದು ಬಡಕಲಾಗಿದ್ದನು. ಗಲ್ಲಗಳೆಲ್ಲ ಕರಗಿ ದವಡಿಗೆ ಹತ್ತಿದ್ದವು. ಕಣ್ಣು ಒಳಸೇರಿದ್ದವು. ಅವು ಅಸಹ್ಯವಾಗಿ ಕಾಣಿಸಬಾರದೆಂದು ನೇಕಾರನು ಕಣ್ಣಿಗೆ ಬಣ್ಣದ ಕನ್ನಡಕ ಧರಿಸುವನು. ಗಲ್ಲಮೀಸೆ ಹಚ್ಚಿಕೊಳ್ಳುವನು. ಅದಕ್ಕಾಗಿ ಮೇಳದವರು ಬಣ್ಣದ ಕೋಣೆಯಲ್ಲಿ ಹರಕಲಾದ ಒಂದು ಉಣ್ಣೆಯ ಝಾನ (ಥಡಿ) ತಂದಿಟ್ಟರು. ಬಟ್ಟಲಲ್ಲಿ ಅರೆದ ಅಂಟು ನೆನೆಯಿಟ್ಟರು.

ಪ್ರತಿಯೊಂದು ಸೋಗು ರಂಗಸ್ಥಳಕ್ಕೆ ಕುಣಿಯುತ್ತಲೇ ಬರುವದು. “ಝೆಂತತ ಝಣತ ಕಡಕಡ ಝೇಂತತ ಝಣತ| ತಯಾ ತೋಮ್ಲದರಿನಲಾ” ಎಂದು ತಿಲ್ಲಾಣವಾಡುವುದು ವಾಡಿಕೆಯಾಗಿದೆ. ಆದರೆ ಅದಕ್ಕೆ ಅರ್ಥವೇನು, ಯಾರಿಗೂ ತಿಳಿಯದು.

“ಝಾನ್ ತಾ | ಕಡಕಡ್ಡು ತಾ |
ಜಿಗಿತಾ | ಝಾನತಾ
ತಗೊಂಡು ಬರಲಿಲ್ಲ ಲಾ”

ಎನ್ನುವುದೇ ಆ ವೀರಾವೇಶದ ರಾಜನ ವೀರವಾಣಿ.

ಬ್ರಹ್ಮದೇವರಿತ್ತ ವರಪ್ರಸಾದದಿಂದ ನೇಕಾರನು ರಾತ್ರಿರಾಜನಾಗುತ್ತಲೇ ಬಂದನು. ಅವನ ಆ ವತನವನ್ನು ಯಾರೂ ಕಸಿದುಕೊಳ್ಳುವಂತಿಲ್ಲ. ರಾತ್ರಿರಾಜ ಅವನು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)