ಒಲವಾದೊಡೆ ರೂಪಿನ ಕೋಟಲೆ ಏವುದು?

ಒಲವಾದೊಡೆ ರೂಪಿನ ಕೋಟಲೆ ಏವುದು?

ಚಿತ್ರ: ಸ್ಟೀಫನ್ ಕೆಲ್ಲರ್‍

‘ಚಿತ್ರಂ ಅಪಾತ್ರೇ ರಮತೇ ನಾರಿ’ ಎಂಬುದಾಗಿ ಅಮೃತಮತಿಯನ್ನು ಕುರಿತು ‘ಯಶೋಧರ ಚರಿತೆ’ಯ ಎರಡನೆಯ ಅವತಾರದಲ್ಲಿ ಜನ್ನ ಹೇಳಿದ್ದಾನೆ. ಈ ಸೂಕ್ತಿ ಬೃಹತ್ ಕಥಾಮಂಜರಿಯಲ್ಲಿ ‘ಲಕ್ಷ್ಮೀ ಲಕ್ಷಣ ಹೀನೇ ಚ ಕುಲಹೀನೇ ಸರಸ್ವತೀ ಅಪಾತ್ರೇ ರಮತೇ ನಾರೀ…’ ಎಂಬ ರೀತಿಯಲ್ಲಿ ಬಂದಿದೆ. ಜನ್ನ ಇದನ್ನು ನೇರವಾಗಿ ಅದೇ ರೀತಿಯಲ್ಲಿ ಕನ್ನಡ ಕಂದದಲ್ಲಿ ಬಳಸಿಕೊಳ್ಳುತ್ತ ‘ಚಿತ್ರಂ’ ಎಂಬ ಶಬ್ಧವನ್ನು ವಿಚಿತ್ರ-ಆಶ್ಚರ್ಯ ಎಂಬ ಅರ್ಥದಲ್ಲಿ ಪ್ರಯೋಗಿಸಿದ್ದಾನೆ.

ಜನ್ನನ ‘ಯಶೋಧರ ಚರಿತೆ’ ಒಂದು ಸಾಂಪ್ರದಾಯಿಕ ಜೈನ ಪ್ರಚಾರ ಕಾವ್ಯ. ಇದರ ನಾಯಕಿ ನರಕ ಭಾಜನಳಾಗಿ ಹಲವಾರು ಅನಿಷ್ಟ ಜನ್ಮಗಳನ್ನು ಪಡೆದು ಮನುಷ್ಯ ಜನ್ಮದಲ್ಲಿ ಮಾಡಿದ ವಾಪಕ್ಕೆ ವಿಮುಕ್ತಿಯನ್ನು ಪಡೆಯುತ್ತಾಳೆ. ಆದರೆ ಅಮೃತಮತಿಯನ್ನು ಕುಲಹೀನೆ, ಲಂಪಟಳನ್ನಾಗಿ ಚಿತ್ರಿಸಿ ಭಾರತೀಯ ನಾರೀಚರಿತ್ರೆಯನ್ನೆ ಕಲುಷಿತಗೊಳಿಸುವಲ್ಲಿ ಕವಿಯ ಮಹದುದ್ದೇಶವೇನೋ…. ಬೃಹತ್ ಕತೆಯಲ್ಲಿ ಬಂದ ನಾರಿಯ ಚರಿತ್ರೆಯ ಕುರಿತ ಈ ಉಕ್ತಿಯನ್ನು ತನ್ನ ನಾಯಕಿಗೆ ಅನ್ವಯಿಸುವಾಗ ಜನ್ನ ಬಯಸಿದ್ದು ಒಟ್ಟು ನಾರಿ ಜಾತಿಯ ಸ್ವಭಾವದ ಅವಗುಣವನ್ನು ಎತ್ತಿತೋರಿಸುವುದು ಮಾತ್ರವಾಗಿಲಾರದು. ‘ಯಾರರಿವರು ನಾರಿಯರಂತರಂಗದ ಹೋರೆಯನು’ ಈ ಸಂದೇಹದ ಪುಷ್ಟಿಯೂ ಕವಿಗೆ ಸಿಕ್ಕಿರಬಹುದು. ಇಲ್ಲವೆ ವಿಧಿವಿಲಾಸವಿದು. ‘ಬೆಂದ ಬಿದಿಗೆ ಕಣ್ಣಿಲ್ಲಕುಂ’ ಎಂದು ಅರಿತು ನಾರಿಯ ಸ್ವಭಾವದ ಅವನತಿಯನ್ನು ಚಿತ್ರಿಸಿ ದುರಂತಕ್ಕಿಂತಲೂ ಹೇಯವಾದ ಚಿತ್ರಕಥೆಯನ್ನು ಕಾವ್ಯದಲ್ಲಿ ಸೃಷ್ಟಿಸಿ ಜೈನ ಪ್ರಣಾಲಿಗೆ ಅದನ್ನು ತಿರುಗಿಸಿ ಅಮೃತಮತಿಯ ಕಾಮಕೇಳಿಯನ್ನು ಜನ್ನ ವಿವರಿಸಿದ.

ಅಯೋಗ್ಯನಾದ. ಅಪಾತ್ರನಾದ. ಕುರೂಪಿಯಾದ ಗಂಡಿಗೆ ಹೆಣ್ಣು ಯಾವ ಕಾರಣಕ್ಕಾಗಿ ಅಕೃಷ್ಟಳಾಗುತ್ತಾಳೊ…. ಅರಿತು ಕೊಳ್ಳುವುದು ಸುಲಭವಲ್ಲ. ಇದು ಮನೋವೈಜ್ಞಾನಿಕ ಗೂಢ. ಹೆಣ್ಣಿನ ಶರೀರ ಮತ್ತು ಮನಸ್ಸಿಗೆ ವಿಚಿತ್ರವಾದ ರಸಾಯನ ಸಮಷ್ಟಿ ಇರುತ್ತದೆ. ಶರೀರ ಅಪೇಕ್ಷಿಸಿದ್ದಕ್ಕೆ ಮನಸ್ಸಿನ ಅನುಮತಿ ಇರದಿರಲು ಸಾಧ್ಯವಿದೆ. ಹಾಗೆಯೆ ಮನಸ್ಸು ಬಯಸಿದ್ದನ್ನು ಶರೀರ ಪಡೆಯಲು ಒಪ್ಪದಿರಬಹುದು. ಮತ್ತು ಸಂಗೀತ ಹಾಗೂ ಶೌರ್ಯ ಸಾಹಸಕ್ಕೆ ಕಾಮ ಪ್ರಚೋದಕ ಶಕ್ತಿ ಉಂಟು. ಸಂಗೀತ ಲಯ, ಮಾಧುರ್ಯವೇ ಅಮೃತಮತಿಯ ಮನಸ್ಸನ್ನು ಅದರ ಕಡೆಗೆ ಸೆಳೆದಿರಬಹುದು. ಹಾಡುಗಾರ ಎಂಥವ? ಸುರೂಪಿಯೇ. ಕುರೂಪಿಯೇ, ಯುವಕನೇ, ಮುದುಕನೇ ಎಂಬ ವಿವೇಚನೆಯನ್ನು ಮಾಡದೆಯೆ ಅವಳು ಅವನತ್ತ ಆಕರ್ಷಿತಳಾಗುತ್ತಾಳೆ. ಮೋಹಿನೀ ಸೆಳೆತದಂತೆ. ಅಷ್ಟು ಮಧುರವಾದ ಹಾಡನ್ನು ಹಾಡುವಾತನೂ ಅಷ್ಟೇ ಚೆಲುವನಿರಬಹುದೆಂದು ಅವಳ ತಕ್ಷಣದ ಕಲ್ಪನೆ. ಆವರೆಗೂ ತನ್ನ ಪ್ರಿಯಕರ ಯಶೋಧರನ ತೋಳ ತೆಕ್ಕೆಯಲ್ಲಿ ರಮಿಸಿದ್ದ, ಮನ ಶರೀರದ ಆವರ್ಣನೀಯ ಲೈಂಗಿಕ ಸುಖವನ್ನು ಪಡೆದಿದ್ದ ಅಮೃತಮತಿ ಕ್ಷಣಮಾತ್ರದಲ್ಲಿ ಸಂಗೀತದ ಲಯಕ್ಕೆ ವಿಚಲಿತಳಾಗಿ ತಾನು ಈವರೆಗೂ ನೋಡದ ಅಷ್ಟಾವಂಕನನ್ನು ಕೂಡಬೇಕೆಂದು ಮನಸ್ಸು ಮಾಡಿದಳು. ಇದು ಸಧ್ಯವಾಗುವುದು, ತಮ್ಮಿಬ್ಬರಲ್ಲಿಯೂ ಪರಸ್ಪರ ಸುಖ ಕೊಡುವ ಕ್ಷಮತೆಯ ಬಗ್ಗೆ ಆತ್ಮವಿಶ್ವಾಸ ಕಡಿಮೆಯಾದಾಗ. ಅತಿಶಯ ರತಿಲೋಲುಪನಾದ ಯಶೋಧರ ತನ್ನ ಅತ್ಯಂತ ರಮಣೀಯ ಮದನರಾಣಿಗೆ ಲೈಂಗಿಕ ಸುಖವನ್ನು ಕೊಡುವಲ್ಲಿ ಸೋಲುತ್ತಿರುವ ಅನುಭವವಾಗಿ ಅದರಿಂದ ವಿಮುಖನಾಗುವ ಮನೋಸ್ಥಿತಿಯಲ್ಲಿದ್ದಿರಬಹುದು. ಇದೇ ಸಂದರ್ಭದಲ್ಲಿ, ಗಳಿಗೆಯಲ್ಲಿ ತನ್ನ ಪ್ರಬಲ ಕಾಮೇಚ್ಛೆಯು ದುರ್ಬಲಗೊಳ್ಳುವ ಶರೀರ ಮತ್ತು ಮನಸ್ಸಿನ ಯಾತನೆಯಲ್ಲಿ ಅಮೃತಮತಿ ಸಂಗೀತ ಲಹರಿಗೆ ಮೋಹಿತಳಾಗಿ ತನ್ನ ದೈಹಿಕ ಇಚ್ಛೆಯನ್ನು ಪೂರೈಸಿಕೊಳ್ಳಲು ನಿಶ್ಚಯಿಸಿರಬಹುದು. ಅವಳ ಮನಸ್ಸಿನಲ್ಲಿ ಜನಿಸಿದ ಕಾಮ ವಿಕೃತಿಗೆ ಇದುವೆ ಪರಿಹಾರ ಎಂಬಂತೆ. ಇದು ಕ್ಷಣಿಕ ಲಾಲಸೆಯಲ್ಲ. ಜುಗುಪ್ಸೆಯಾಗುವ ತನಕ ಉಳಿಯುವಂಥದ್ದು. ಅವಳ ಅಂತಃಸತ್ವವನ್ನು ಪ್ರಶ್ನಿಸುವಂತಿಲ್ಲ. ಅವಳ ಲೈಂಗಿಕ ಪತನದಲ್ಲಿ ಒಂದು ನಿರ್ಧಾರದ ಪ್ರಶ್ನೆ ಇರಲಿಲ್ಲ. ಬದಲಿಗೆ ಅದೊಂದು ಬಿರುಗಾಳಿಯಂತೆ ಬಂದು ಬದುಕನ್ನು ಹಾಳುಗೆಡಹಲು ಹವಣಿಸಿದ ವಿಧ್ವಂಸಕ ಕ್ರಿಯೆಯಾಗಿತ್ತು. ಇದರ ಪರಿಣಾಮವೇ ಕಾವ್ಯದ ಶರೀರ-

ನೋಡುವ ಕಣ್ಗಳಸಿರಿ ಮಾ
ತಾಡುವ ಬಾಯ್ಗಳ ರಸಾಯನಂ ಸಂತಸದಿಂ
ಕೂಡುವ ತೋಳ್ಗಳ ಪುಣ್ಯಂ
ನಾಡಾಡಿಯ ರೂಪ ಕುವರ ವಿಧ್ಯಾದರನಾ |
ಎಂಬ ಹೊಗಳಿಕೆಗೆ ಪಾತ್ರನಾದ ತನ್ನ ಪತಿ. ನೃಪತಿಯನ್ನು ಕಡೆಗಣಿಸಿ,
ಪರಿದಲೆ ಕುಳಿನೊಸಳ್ ಅಳಿಗ
ಕರ್ಣಣೋರೆವಾಯ್ ಹಪ್ಪಳಿ ಮೂಗು ಮುರುಟಿದ ಕಿವಿ ಬಿ
ಬ್ಬಿರುವಲ್ ಕುಸಿಗೊರಲಿಳಿದೆರ್ದೆ
ಪೊರಂಟ ಬಿನ್‌ಬಾತ ಬಿಸಿರಡಂಗಿದ ಜಘನಂ

ಮಾತ್ರವಲ್ಲದೆ ಮೈಯ್ಯನಾತ. ಚಿಕ್ಕ ಕಣ್ಣು, ಗೂನು ಬೆನ್ನು ಕರಡಿಯ ಸುಕ್ಕಿದ ತೊಗಲಿನಂತೆ ಕಪ್ಪಾಗಿ, ವಿಕಟಾಂಗನಾಗಿ, ಅಸಹ್ಯನಾಗಿ ಕಾಣುವ ಅಷ್ಟಾವಂಕನನ್ನು ಕಾಮಿಸಿದ್ದು ಉದ್ರಿಕ್ತ ಕಾಮೇಚ್ಛೆಯೆ. ಮನದ ದೌರ್ಬಲ್ಯವೇ ಅಥವಾ ಕಾವ್ಯ ಧರ್ಮದ ಮರ್ಮವೇ… ‘ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳು’ ಎನ್ನುವಂತೆ. ಅವಳ ಮನಸ್ಸು ಒಮ್ಮೆಲೆ ತತ್ತರಿಸಿತು. ಎದೆ ಮಿಡುಕಿತು. ಕಣ್ಣಿನಲ್ಲಿ ನೀರು ಬಂತು. ‘ಪುಳಿಂದನ ಕಣೆಗಟ್ಟಿನಿಂದ ವನಹರಿಣಿ’ಯಂತಾಯಿತು ಅವಳ ಸ್ಥಿತಿ. ಹೀಗಾದುದು ಸಹಜವೆ. ರಾತ್ರಿಯ ನಿಶ್ಶಬ್ದತೆಯನ್ನು ಭೇದಿಸಿಕೊಂಡು ಬಂದ ಮಾವಟಿಗನ ಇನಿದನಿ ಅವನ ವ್ಯಕ್ತಿತ್ವದ ಒಂದು ಸುಂದರ ಚಿತ್ರವನ್ನು ಅವಳೆದುರು ನಿಲ್ಲಿಸಿತ್ತು. ಅಮೃತಮತಿ ಅವನನ್ನು ಆ ಕ್ಷಣ ಬಯಸಿದಳು. ಬೇಟದ ಅದಮ್ಯ ಇಚ್ಛೆಯಾಯಿತು. ಮುಂಜಾವಿನಲ್ಲೆ ದೂತಿಯನ್ನು ಕರೆದು ಅವನ ಕುರಿತು ತಿಳಿದುಕೊಂಡು ಬರುವಂತೆ ಕಳಿಸಿದಳು. ದೂತಿಯ ಮುಖದಿಂದ ಅಷ್ಟಾವಂಕನ ವರ್ಣನೆಯನ್ನು ಕೇಳಿ ದುಗುಡವಾಯಿತು. ವೇಗವಾಗಿ ಓಡುವ ಹೆಣ್ಣು ಜಿಂಕೆ ಬೇಡನ ಬಾಣವನ್ನು ಎದುರಿಸಿ ದಿಕ್ಕುಗೆಟ್ಟಂತಾಗುವಂತೆ ಅವಳಿಗೆ ನಿರಾಶೆ ಕವಿಯಿತು. ಆದರೆ ತನ್ನ ಆಶೆಯನ್ನು ತಡೆಗಟ್ಟಲಾರದೆ ಪ್ರೇಮಕ್ಕೆ ರೂಪಿಲ್ಲ, ಕಣ್ಣಿಲ್ಲ ಎಂಬಂತೆ.

ಕರಿದಾದೊಡೆ ಕತ್ತುರಿಯಂ
ಮುರುಡಾದೊಡೆ ಮಲಯಜನಂ ಕೊಂಕಿದೊಡೇಂ
ಸ್ಮರಚಾಪಮನಿಳಿಕಯ್ವರೆ
ಮರುಳೆ ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್
ಒಲವಾದೊಡೆ ರೂಪಿನ ಕೋ
ಟಲೆಯೇವುದೊ….
ಇಂದೆನಗಾತವೆ ಕುಲದೈವಂ. ಕಾಮದೇವಂ

ಎಂದು ತರ್ಕಿಸುತ್ತ ಅವನನ್ನು ಹೊಗಳಿ. ಅವನ ಮಿಲನಕ್ಕಾಗಿ ಹಂಬಲಿಸಿದಳು. ಪ್ರೀತಿಯಾದರೆ ರೂಪ ಏನು ಮಾಡೀತು ಅದರ ಕೋಟಲೆ ಯಾವ ಲೆಕ್ಕಕ್ಕೆ? ದೂತಿಯ ಸಹಾಯದಿಂದ ಅವರಿಬ್ಬರೂ ಕೂಡುವಂತಾಯಿತು.

ಆ ವಿಕಟಾಂಗನೊಳಂತಾ
ದೇವಿಗೆ ರುಚಿಯಾಗೆ ರತಿಫಲಾಸ್ಥಾದನದೊಳ್….
ಜೀವಂ ಮೆಚ್ಚಿದ ಕಾಗೆಗೆ
ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ

ಮಾನವ ಚಿತ್ತ ಅತ್ಯಂತ ಅಮೇಯವಾದುದು. ಅದರಲ್ಲಿಯೂ ಹೆಣ್ಣಿನ ಚಿತ್ತದ ರಹಸ್ಯವನ್ನು ಯಾವ ಕವಿಯೂ ಇದೇ ಇದೆಂದು ಹೇಳಲಾರ. ಜನ್ನ ಜೈನ ಜೀವನಧರ್ಮ (ವೈರಾಗ್ಯ)ವನ್ನು ಕಾವ್ಯ ಧರ್ಮವೆಂದು ಬಿತ್ತರಿಸಲು ಕಾವ್ಯದ ಮುಖ್ಯ ಪಾತ್ರವನ್ನು ಕೆಡಿಸಿದ. ಯಶೋಧರನ ರತಿಲೋಲುಪತೆಯ ಹೆಡೆಯಲ್ಲಿ ಈರ್ಷೆಯನ್ನು ಹುಟ್ಟಿಸಿ ವೈರಾಗ್ಯ ತಾಳುವಂತೆ ಮಾಡಿದ. ಕೆಟ್ಟವಳಲ್ಲದ, ಶೀಲಕೆಡದ, ದೇವಿಯಂತಿದ್ದ ಅಮೃತಮತಿಯನ್ನು ಒಂದು ಪ್ರಬಲ ಇಂಪೆಲರ ಸ್ಪರ್ಶದಿಂದ ದುಶ್ಚರಿತ್ತಳನ್ನಾಗಿ, ನರಕಭಾಜಳನ್ನಾಗಿ ಮಾಡಿ ಕವಿ ಕಾವ್ಯ ಪ್ರಯೋಜನವನ್ನು ಸಾಧಿಸಿರಬಹುದು. ಅಮೃತಮತಿಯ ಈ ಮಾನಸಿಕ ದುಸ್ಥಿತಿಗೆ ‘ವಿಧಿಲೀಲೆ’ ಎಂದು ಹೆಸರು ಕೊಡಬಹುದು. ಆದರೆ ತಾನು ಈ ಹಿಂದೆ ನೆಚ್ಚಿ ಸುಖಿಸಿದ ಗಂಡನನ್ನು ಅರಸನೆಂಬ ಪಾತಕನೆನ್ನುವುದು. ‘ಗಜವೆಡಂಗ, ನಿನ್ನನುಳಿದೊಡೆ ಸಾವವಳ್. ಎನಗೆ ಮಿಕ್ಕ ಗಂಡರ್ ಸೋದರ ಸಮಾನರ್’ ಎಂದು ತಿರಸ್ಕರಿಸಿ, ಇನಿಯನು ಜಡೆಯೆಳೆದು ಹೊಡೆದು ಜರೆದರೂ ‘ಕಿವಿ ಸವಿದನಿ, ಕಣ್ಸವಿ ರೂಪ’ ಎಂದು ಪ್ರೇಮನಿಷ್ಠೆಯಿಂದ ಸಹಿಸಿಕೊಳ್ಳುವುದು ಅವಳಿಗೆ ಬಂದ ಭಾಗ್ಯ ಅಥವಾ ದುರ್ಭಾಗ್ಯ. ಅವಳನ್ನು ಅತಿಗಾಮಿ, ಜಾರೆ ಎನ್ನುವಂತೆಯೂ ಇಲ್ಲ. ಅಮೃತಮತಿ. ಅಷ್ಟವಂಕರ ಸಂಬಂಧ ಪ್ರಣಯವಲ್ಲ. ಅದೊಂದು ವಿಕೃತ ಲೈಂಗಿಕ ವ್ಯವಹಾರ. ಇದರಲ್ಲಿಯೂ ಆಕೆ ರೋಸಿ ಹೋಗುತ್ತಾಳೆ. ಯಶೋಧರನೊಡನೆ ಅವಳ ಸಂಬಂಧ ನೈತಿಕವಾಗಿದ್ದರೂ ಅತೃಪ್ತ, ಅನಿಶ್ಚಿತವಾಗಿತ್ತು. ಪತಿ ಮತ್ತು ಅತ್ತೆಯನ್ನು ವಿಷವುಣಿಸಿ ಕೊಲ್ಲುವುದು ಆಕೆಯ ಅಕೃತ್ಯದ ಪರಮಾವಧಿ. ಇದು ತಾನು ಎಸಗಿದ ಸ್ತ್ರೀಕುಲ ಕಲಂಕದ ಪ್ರತಿ ಪ್ರಯಶ್ಚಿತ್ತವೂ ಆಗಿರಬಹುದು. ಅವಳು ಸಂಪೂರ್ಣವಾಗಿ ತನ್ನ ಮಾನಸಿಕ ಸಮತೋಲನವನ್ನು ಕಳಕೊಂಡಿದ್ದಳು. ತನ್ನ ಮುಂದಿನ ಜನ್ಮಜನ್ಮಾಂತರಗಳಲ್ಲಿ ಅವಳಿಗೆ ಎದುರಾಗುವ ಬವಣೆಗಳ ಎಚ್ಚರ ತಾನು ಜೈನಳಾಗಿರುವುದರಿಂದ ಅವಳಿಗಾಗಿತ್ತು. ಹೇಸಿಗೆ ಪಟ್ಟು ಯಶೋಧರನೇ ಅವಳನ್ನು ಕೊಲ್ಲದೆ ಬಿಟ್ಟ. ಅವಳು ಮಾಡಿದ ಪಾಪಕ್ಕೆ ಹಿಟ್ಟಿನ ಹುಂಜದ ಬಲಿ ಕೊಡಲು ತಾಯಿ ಮಗ ಮುಂದಾದರು. ಹೀಗೆ ತನಗೆ ದ್ರೋಹ ಬಗೆದ, ಪರಸಂಗ ಮಾಡಿದ ಪತ್ನಿಯನ್ನು ಯಶೋಧರ ಮನಸ್ಸಿನಲ್ಲಿ ನೊಂದುಕೊಂಡು ಒಳಗೊಳಗೆ ಹೇಸಿದರೂ ತನ್ನ ಹಾಸಿಗೆಗೆ ಹೇಗೆ ಸೇರಿಸಿಕೊಂಡ, ಅವಳಿಗೆ ತಕ್ಕ ಶಿಕ್ಷೆಯನ್ನು ಏಕೆ ವಿಧಿಸದೆ ಹೋದ?

ಷೇಕ್ಸ್‌ಪೀಯರನ ‘ಒಥೆಲೊ’ದ ನಾಯಕಿ ಡೆಸ್ಪಮೋನಾ. ಇವಳು ವೆನಿಸ್ಸಿನ ಕುಲೀನ ಸೆನೆಟ ಸಭೆಯ ಸದಸ್ಯ ಡ್ಯೂಕನ ಗೌರವರ್ಣದ ಮಗಳು, ಷೋಡಶಿ, ಸುರಸುಂದರಿ.
`A maiden never bold
of spirit so still quiet, that her motion
Blushed at herself’
(ಧೈರ್ಯವಿಲ್ಲದ, ಮೌನ ಮನೋಭಾವದ, ತನಗೆ ತಾನೇ ನಾಚಿಕೊಳ್ಳುವ ಸ್ವಭಾವದವಳು) ಒಥೆಲೋ ಸೇನಾಧಿಪತಿ ಮೂರಿಶ್ ಜನಾಂಗದವನು. ಕವಿ ಯಾವಾಗಲೂ ನೀಗ್ರೋ, ಮೂರ್ ಎಂದು ಕರೆಯುವ ಕಪ್ಪು, ಸುದೃಢ, ಯೌವನ ಮೀರಿದ ಕಟ್ಟಾಳು. ಅವನು ತಾನು ಯುದ್ಧ ಭೂಮಿಯಲ್ಲಿ ಮಾಡಿದ ಸಾಹಸ ಕೃತ್ಯಗಳನ್ನು ಅತ್ಯಂತ ರೋಮಾಂಚಕ ರೀತಿಯಲ್ಲಿ ಡೆಸ್ಟಮೋನಾಳ ತಂದೆಯ ಎದುರು ಹೇಳುತ್ತಿರುವಾಗ ತಾನೂ ಕೇಳಿ, ಗಂಭೀರಚಿತ್ತಳಾಗಿ ಅವೆಲ್ಲವನ್ನೂ ಸಂಪೂರ್ಣವಾಗಿ ಒಥಲೊನ ಬಾಯಿಂದ ಏಕಾಂತದಲ್ಲಿ ಪುನಃ ಪುನಃ ಆಲಿಸಿ ಪರವಶಳಾಗುತ್ತಾಳೆ. ಒಥೆಲೊ ಮತ್ತು ಅವಳ ನಡುವೆ ಅನುರಾಗ ಉಂಟಾಗಿ ಮದುವೆಯಲ್ಲಿ ಕೊನೆಗೊಳ್ಳುತ್ತದೆ. She loved me for the dangers I had passed and, loved her that she did pity them. ಸಮಾಧಾನವಿಲ್ಲದ ಅವಳ ತಂದೆ ಆ ಮದುವೆಯನ್ನು `The marriage of eagle and dove’ ಎಂದೂ, ಜನಾಂಗ, ಮತಧರ್ಮ, ಸಂಸ್ಕೃತಿ ಸಮಾಜಪದ್ಧತಿ ಮತ್ತು ವೈಯಕ್ತಿಕ ಸ್ವಭಾವದ ಚರ್ಯೆಯಲ್ಲಿ ಅಸೀಮ ಅಂತರವಿದೆಯೆಂದೂ ನೊಂದುಕೊಳ್ಳುತ್ತಾನೆ. ತನ್ನ ಎಳೆಯ, ಸೌಮ್ಯ ಸ್ವಭಾವದ ಮಗಳ ಭವಿಷ್ಯದ ಕುರಿತು ಚಿಂತಿತನಾಗುತ್ತಾನೆ. ಒಥಲೊನನ್ನು ಕವಿ ‘ದಪ್ಪ ತುಟಿಯ ಕರಿಹೋತ’ (Thicklips Black ram) ‘ಇದ್ದಲಿನಂತೆ ಕಪ್ಪು ಎದೆವುಳ್ಳವನು (sooty bosom) ಎಂದು ಹೇಳಿಸಿದ್ದಾನೆ. ಅಂತಹ ‘ಅಪಾತ್ರ’ನನ್ನು ಡೆಸ್ಟಮೋನ ಪ್ರೀತಿಸಿದ್ದು. ತಂದೆಯ ಇಚ್ಛೆಯನ್ನು ಮೀರಿ ಮದುವೆಯಾದದ್ದು ಎಳೆತನದ ಸ್ತ್ರೀ ಸಹಜವಾದ ಅವಿವೇಕವೋ, ತರ್ಕಹೀನಭಾವುಕತೆಯೊ (Instinct)ಆಗಿರಬಹುದು. ಅವನ ಸಾಹಸಕೃತ್ಯಗಳ ಸಫಲ ಘಟನೆಗಳನ್ನು ಆಲಿಸಿ ಅವಳು ತಮ್ಮ ನಡುವಿನ ಅಂತರವನ್ನು ಮರೆತು ಭಾವನಾವಶಳಾಗಿ ಅವನೆಡೆಗೆ ಒಲಿದಳು. ಅವಳ ಕೋಮಲ ಭಾವನೆಯನ್ನು ಸಡಿಲಗೊಳಿಸುವಲ್ಲಿ ಒಥೆಲೊನ ಸಾಹಸ ಕತೆಗಳು ಸಹಾಯ ಮಾಡಿದವು. ಗಂಡನು ಟರ್ಕಿಯೊಡನೆ ಯುದ್ಧಕ್ಕೆ ಹೊರಟಾಗ ಡೆಸ್ಟಮೋನಾಳೂ ಜೊತೆಯಲ್ಲಿ ಹೊರಟಳು. ಯುದ್ಧ ಶಿಬಿರದಲ್ಲಿ ಬಹುಕಾಲ ದಿನಕಳೆಯುವ ಪ್ರಸಂಗದಲ್ಲಿ ಅವಳನ್ನು ಬಯಸಿದ್ದ ದಂಡಾಧಿಪತಿ ಕ್ಯಾಸಿನೋನ ನಿಕಟ ಸಂಪರ್ಕವಾಗುತ್ತದೆ. ಒಥೆಲೊಗೆ ಮೊದಲಿನಿಂದಲೂ ಕರುಬುತ್ತಿದ್ದ ಇಯಾಗೊ ಈ ವಿಷಯದ ಪ್ರಯೋಜನ ಪಡೆದು ಕ್ಯಾಸಿಯೋ ಮತ್ತು ಡೆಸ್ಟಮೋನಾರ ನಡುವೆ ಲೈಂಗಿಕ ಸಂಬಂಧಿವಿದೆಯೆಂದು ಹಿತ್ತಾಳೆ ಕಿವಿಯ ಒಥಲೊನ ಮನಸ್ಸಿನಲ್ಲಿ ಸಂಶಯದ ಬೀಜ ಬಿತ್ತುತ್ತಾನೆ. ಒಮ್ಮೆ ತಾನು ಹೆಂಡತಿಗೆ ಪ್ರೀತಿಯಿಂದ ಕೊಟ್ಟ ಕರವಸ್ತ್ರದಿಂದ ಕ್ಯಾಸಿಯೊ ತನ್ನ ಸುಂದರ ಗಡ್ಡ ಒರಸುವುದನ್ನು ಇಯಾಗೊನ ಮೂಲಕ ನೋಡಿ ಅವಳ ಶೀಲದ ಕುರಿತು ಬೆಳೆದ ಸಂಶಯ ಉಲ್ಬಣಗೊಳ್ಳುತ್ತದೆ. ಆಗ ಅವನ ಮನಸ್ಸು ದ್ವಂದ್ವದಲ್ಲಿ ಸಿಲುಕಿಕೊಳ್ಳುತ್ತದೆ. ತನ್ನ ‘ಅಪಾತ್ರ’ತೆಯ ಪ್ರಜ್ಞೆ ಅವನನ್ನು ಕೊರೆಯ ಹತ್ತುತ್ತದೆ. ಕ್ಯಾಸಿಯೊ ಅವಳಿಗೆ ಎಲ್ಲ ವಿಷಯದಲ್ಲಿಯೂ ಪಾತ್ರನು ಎನ್ನುವ ಸತ್ಯ ಅವನನ್ನು ನೋಯಿಸುತ್ತದೆ. ಅವನು ಯೋಧ ಪ್ರವೃತ್ತಿಯವನಾದುದರಿಂದ ಹಿಂಸೆಯ ಪರಿಹಾರವೇ ಸರಿ ಎಂದು ಬುದ್ಧಿ ಭ್ರಮೆಯಾಗುತ್ತದೆ. ಆದರೂ `Perditions catch my soul, but I love thee, when I love thee not the chaos fall again’ ಎನ್ನುವ ಸಂಶಯ ಆತಂಕ ಹೃದಯವನ್ನು ಹಿಂಡುತ್ತದೆ. ಆದರೂ ನಿನ್ನನ್ನು ನಾನು ಪ್ರೀತಿಸುತ್ತೇನೆ ಮನಸ್ಸಿನಿಂದ ನಿನ್ನ ಪ್ರೀತಿಯೇ ಹೋದಾಗ ವಿನಾಶ ಬರುತ್ತದೆ. ಹೀಗೆ ಸ್ವಗತದಲ್ಲಿ ತನ್ನ ಅಂತರಂಗವನ್ನು ಬಿಚ್ಚಿಕೊಳ್ಳುತ್ತಾನೆ.
If Casio do remain
he hath a daily beauty in his life
that makes me ugly
(ಕ್ಯಾಸಿಯೊ ಉಳಿದರೆ ಅವನಿಗೆ ಜೀವನದಲ್ಲಿ ಅನುನಿತ್ಯದ ರೂಪ ಇದೆ. ಅದು ನನ್ನನ್ನು ಕುರೂಪಗೊಳಿಸುತ್ತದೆ.)

ಒಥೆಲೊ ತಿಳಿಗೇಡಿಯಾಗುತ್ತಾನೆ. ಕ್ರೂರಿಯಾಗುತ್ತಾನೆ. ಅವಳನ್ನು ಮಾನಸಿಕ ಚಿತ್ರಹಿಂಸೆಗೆ ಒಳಪಡಿಸಿ ವೇಶ್ಯೆಯೆಂದು ಕರೆಯುತ್ತಾನೆ. ಆಕೆಯನ್ನು ಕೊಲ್ಲುವುದೇ ಲೇಸೆಂದು ನಿರ್ಧರಿಸಿ ಅವಳ ಕೊಲೆ ಮಾಡುತ್ತಾನೆ. ಎಲ್ಲವೂ ದುರಂತದಲ್ಲಿ ಕೊನೆಗೊಳ್ಳುವ ಈ ನಾಟಕಕ್ಕೆ ಧಾರ್ಮಿಕ ಆಧಾರಗಳಿಂದ ಪಾತ್ರಗಳನ್ನು ಪೋಷಿಸುವ ಅಗತ್ಯವಿರಲಿಲ್ಲ. ಇಯಾಗೋ ದ್ವೇಷಪರ. ಖಳ. ಡೆಸ್ಟಮೋನಾಳ ದುರಂತಕ್ಕೆ ವಿಧಿಕಾರಣವಲ್ಲ. ಮಾನವ ದ್ವೇಷ, ಕ್ರೌರ್ಯ ಕಾರಣ. ಒಥೆಲೊ ತಾನು ಮೆಚ್ಚಿದ ಪ್ರಿಯೆಯನ್ನು ಸಂಶಯದಿಂದ ಕಂಡು ಆಕೆಯ ವಿನಾಶ ಬಯಸಿದ. ಇದು ಅವನ ಸ್ವಭಾವದ ಅವನ ತನ್ನ ಸಂಗಡಿಗರ ಕುರಿತು ಇಟ್ಟಿದ್ದ ವಿಶ್ವಾಸದ ಕೊರತೆಯ ದೋಷ. ಸದಾಕಾಲ ತನ್ನ ಸಹ ಉದ್ಯೋಗಿಯನ್ನು ಮಿತ್ರನೆಂದು, ಪ್ರಾಮಾಣಿಕನೆಂದೂ ನಂಬಿ ಇಯೊಗೋನ ಮೋಸವನ್ನು ತಿಳಿಯದಾದ. ಡೆಸ್ಟಮೋನ ಒಥೆಲೊನಲ್ಲಿ ತನಗೆ ಅನುಕೂಲವಾದ ಗಂಡನನ್ನು ಕಂಡು ಒಲಿದಳು. ಅವಳ ಆಕರ್ಷಣೆ ಆತನ ಕುರಿತಾದ ಸಂವೇದನೆಯೇ ಆಗಿದೆ. ಅದು ಅಗಾಧವಾದ ಪ್ರೀತಿಯಲ್ಲ. ಲೈಂಗಿಕ ಆಕರ್ಷಣೆಯೂ ಅಲ್ಲ ಅದೊಂದು ಸುಕುಮಾರ ಭಾವನೆ. ಇವಳನ್ನು ಚರಿತ್ರೆ ಕೆಟ್ಟವಳು, ಪತಿತೆ ಎನ್ನುವುದು ಸರಿಯಾದ ಇಕ್ವೇಷನ್ ಆಗಲಾರದು. ಈಕೆಯನ್ನು `the most pathetic of Shakespeare’s women’ ಎಂದು ಬ್ರಾಡಲಿ ಹೇಳಿದ್ದಾನೆ.

ರಜಿಯಾ ಮೊಗಲರಿಂದ ಮೊದಲು ದಿಲ್ಲಿಯಲ್ಲಿ ಆಳಿದ ಅಲ್ತಮಶನ ಪ್ರೀತಿಯ ಮಗಳು. ಅಪಾರ ಸುಂದರಿಯೂ, ಧೈರ್ಯಸಾಹಸಗಳಿಗೆ ಒಡೆಯಳೂ ಆಗಿದ್ದು ಯುದ್ಧ ನೀತಿಯನ್ನೆಲ್ಲ ಕಲಿತು ತನ್ನ ಒಲವಿನ ತಂದೆಯ ರಾಜ್ಯ ವಿಸ್ತಾರದ ಕಾರ್ಯದಲ್ಲಿ ಸರಿಯಾಗಿ ಪಾಲುಗೊಂಡವಳು. ಅವಳ ಸಹೋದರ ಅಯ್ಯಾಶಿಯೂ, ದುರ್ಬಲ ಲಂಪಟನೂ ಆಗಿದ್ದುದರಿಂದ ಅಲ್ತಮಶನ ನಂತರ ದಿಲ್ಲಿಯನ್ನು ಆಳುವ ಅವಕಾಶ ರಜಿಯಾನ ಪಾಲಿಗೆ ಬರುವುದಿತ್ತು. ಇದುವೆ ದಿಲ್ಲಿಯ ಭವಿಷ್ಯದ ವಿಧಾನವೆಂದು ಅರಿತಿದ್ದ ಅಲ್ತಮಶ ರಜಿಯಾಳನ್ನು ಸರಿಯಾಗಿ ಸಿದ್ಧ ಮಾಡಿದ್ದ. ಅವನ ಅತ್ಯಂತ ನಿಷ್ಟಾವಂತ ಸೇವಕ, ಗುಲಾಮ ಯಾಕೂದ. ಇವನು ಒಥೆಲೊನಂತೆಯೆ ಕುರೂಪಿಯೂ, ಪ್ರಚಂಡ ಸಾಹಸವಂತನೂ, ಸುಲ್ತಾನನ ಅಂಗರಕ್ಷಕನೂ ಆಗಿದ್ದ. ಯುದ್ಧದ ಕೆಲವು ಶಸ್ತ್ರ ವಿದ್ಯೆಯನ್ನು ರಜಿಯಾಗೆ ಕಲಿಸಲು ಮುಂದಾದನು. ಅವನ ಸ್ವರೂಪಕ್ಕೆ ಹೇಸಿ ರಜಿಯಾ ಮೊದಮೊದಲು ಅವನನ್ನು ತಾತ್ಸಾರದಿಂದ ನೋಡಿದರೂ ಯಾಕೂದನ ಸೇವಾನಿಷ್ಠೆ, ತಂದೆಗೆ ಅವನಲ್ಲಿರುವ ವಿಶ್ವಾಸಗಳನ್ನು ವೀಕ್ಷಿಸುತ್ತಿದ್ದಂತೆ ಅವಳಲ್ಲಿದ್ದ ಹೀನ ಭಾವನೆ ಕಡಿಮೆಯಾಯಿತು. ಆಕೆಯ ನೇತೃತ್ವದಲ್ಲಿ ನಡೆದ ಒಂದು ಯುದ್ಧದಲ್ಲಿ ಅಂಗರಕ್ಷಕನಾಗಿ ಜೊತೆಗಿದ್ದ ಯಾಕೂದನು ಯುದ್ಧ ಮೈದಾನದಲ್ಲಿ ಗಾಯಗೊಂಡು ಬಿದ್ದ ತನ್ನ ಸುಲ್ತಾನನ ಮಗಳು ರಜಿಯಾಳನ್ನು ಎತ್ತಿಕೊಂಡು ಶಿಬಿರಕ್ಕೊಯ್ದು ಶ್ವೇತೋಪಚಾರ ಮಾಡಿದನು. ಇದರ ನಂತರ ಅವನ ಕುರಿತಾಗಿ ಅವಳ ಎದೆಯಲ್ಲಿ ಒಂದು ಅವ್ಯಕ್ತ ತುಮುಲ ಎದ್ದು ಅವಳ ಮನಸ್ಸನ್ನು ಅಶಾಂತಿಗೆ ಒಳಪಡಿಸಿತು. ಇದರ ಸುಳಿಯನ್ನು ಪಡೆದೋ ಏನೋ ಎಂಬಂತೆ ಯಾಕೂದನ ಹೃದಯವೂ ಕಂಪಿಸಿ, ಅಗೋಚರವಾದೊಂದು ಬಯಕೆ ಹುಟ್ಟಿ ಮನಸ್ಸನ್ನು ತಳಮಳಗೊಳಿಸಿತು. ಯಾವುದೇ ಬಗೆಯಲ್ಲಿ ಆ ಭಾವನೆಯು ಗೋಚರವಾಗದಂತೆ ಎಚ್ಚರವಹಿಸುವುದು ಅವನ ನಿತ್ಯಧರ್ಮವಾಯಿತು. ಸುಲ್ತಾನನ ಮಗಳನ್ನು, ರಾಜಕುಮಾರಿಯನ್ನು ತನ್ನಂಥ ನಿಕೃಷ್ಟ ಗುಲಾಮ ಪ್ರೀತಿಸ ಹತ್ತಿದನೆಂಬ ಸುಳಿವಾದರೂ ಅವನಿಗೆ ಫಾಸಿಯಾಗುವುದು. ಅಂತೆಯೇ ರಜಿಯಾಳ ಮನಸ್ಸಿನ ಹೊಯ್ದಾಟ. ಮುಂದೆ ಸುಲ್ತಾನಳಾಗುವ ತಾನೊಬ್ಬ ಗುಲಾಮನನ್ನು ಪ್ರೀತಿಸತೊಡಗಿದ್ದೇನೆಂದು ಗಾಳಿಯಲೆಗೂ ತಿಳಿಯಬಾರದೆಂಬ ಜಾಗೃತ ಪ್ರಜ್ಞೆ, ಖಲೀಫರು ಅಮೀರರೆಲ್ಲ ವಿರೋಧಿಸಿ, ಅವಳ ಭವಿಷ್ಯ ಮತ್ತು ಸಾಮ್ರಾಜ್ಯದ ಸಂರಕ್ಷಣೆಯ ಕಾರ್ಯಕ್ಕೆ ತೊಡಕೊಡ್ಡುವರೆಂಬ ಭೀತಿ ಆಕೆಯನ್ನು ಅಶಾಂತಗೊಳಿಸಿತು. ಇದೇ ಹೊತ್ತಿನಲ್ಲಿ ಅವಳನ್ನು ಮದುವೆಯಾಗಲಿದ್ದ ಸುಬೇದಾರ ಅಲ್ತೀನಿಯನ ಒತ್ತಾಯ ಅಲ್ತಮಶ್ ಮತ್ತು ರಜಿಯಾಳನ್ನು ಚಿಂತೆಗೊಳಪಡಿಸಿತು. ಅಲ್ತೂನಿ ಸಮರ್ಥ ಯುವಕನೂ, ಪರಾಕ್ರಮಿಯೂ ರಜಿಯಾಳನ್ನು ಮೊದಲಿನಿಂದಲೂ ಬಯಸಿದ್ದು ಅಲ್ತಮಶನಿಂದ ವಚನಪಡಕೊಂಡವನೂ ಆಗಿದ್ದ. ರಜಿಯಾಳ ಮೌನ ಬದುಕಿನೊಳಗೆ ಯಾಕೂದ ಮಾರ್ಮಿಕವಾಗಿ ನುಸುಳಿಕೊಳ್ಳದೇ ಇರುತ್ತಿದ್ದರೆ ಅಲ್ತೂನಿಯನ್ನೇ ಮದುವೆಯಾಗಿ ಅವಳು ತನ್ನ ಭವಿಷ್ಯವನ್ನು ರೂಪಿಸುತ್ತಿದ್ದಳು.

ಅಲ್ತಮಶ್ ಒಂದು ಗಂಭೀರ ಪರಿಸ್ಥಿತಿಯಲ್ಲಿ ಮೃತನಾದ ನಂತರ ಅಮೀರರನ್ನು ಒಡಂಬಡಿಸಿ ರಜಿಯಾ ತಾನೇ ಸುಲ್ತಾನಳಾಗುತ್ತಾಳೆ. ಕೆರಳಿದ ಅಲ್ತೂನಿ ಅವಳ ಮೇಲೆ ದಾಳಿ ಮಾಡಿದಾಗ ಯಾಕೂದನ ಸಹಾಯದಿಂದ ಅವನನ್ನು ರಜಿಯಾ ಹಿಮ್ಮೆಟ್ಟಿಸುತ್ತಾಳೆ. ಇದರೊಂದಿಗೆ ಇಬ್ಬರ ನಿಕಟ ಬರುವ ಇಚ್ಛೆಯೂ ಉಲ್ಬಣವಾಗುತ್ತದೆ. ಕೊನೆಗೆ ಸಿಂಹಾಸನವನ್ನು ತ್ಯಜಿಸಿ ಯಾಕೂದನೊಂದಿಗೆ ಮದುವೆಯಾಗಿ ಖಾಸಗಿ ಜೀವನ ನಡೆಸುವ ನಿರ್ಧಾರ ಮಾಡಿ ಘೋಷಣೆ ಮಾಡುತ್ತಾಳೆ. ಪ್ರಜೆಗಳ ಅಪೇಕ್ಷೆಯಂತೆ, ಮೀರರು, ಮಂತ್ರಿಗಳು, ದಳಪತಿಗಳನ್ನೆಲ್ಲ ಒಪ್ಪಿಸಿ ಅವರಿಬ್ಬರ ಮದುವೆಯಾಗುತ್ತದೆ. ಸೋಲು ಅಪಮಾನಗಳಿಂದ ಗಾಯಗೊಂಡ ಸಿಂಹದಂತಹ ಅಲ್ತೂನಿ ಕೆಲವು ಸಮಯದ ನಂತರ ಪುನಃ ಧಾಳಿ ಮಾಡುತ್ತಾನೆ. ಭೀಕರ ಹೋರಾಟದಲ್ಲಿ ಮತ್ತೆ ಹಿಮ್ಮೆಟ್ಟಿದರೂ ಮೋಸದಿಂದ ಅವರನ್ನು ಗಾಯಗೊಳಿಸುತ್ತಾನೆ.

ರಜಿಯ ಸುಲ್ತಾನ ಯಾಕೂದನ ಹೆಂಡತಿಯಾಗಿ ಪ್ರಜಾ ಜನರ ಅನಾದರಕ್ಕೆ ಒಳಗಾಗಲಿಲ್ಲ. ಅವರಿಬ್ಬರ ಪ್ರಣಯ ಅತ್ಯಂತ ಮಾರ್ಮಿಕವೂ, ಆಸ್ಥಾಪರವೂ ಆಗಿತ್ತು. ನಿರ್ಮಲ ಭಾವದ ಮಿಲನಾಪೇಕ್ಷೆ, ನಿತಾಂತ ಭೀತಿಯ ತಳಹದಿಯಲ್ಲಿ ನೆಲೆಸಿತ್ತು. ಕಾಮಾಸಕ್ತಿ, ರತಿಸುಖದ ಲಾಲಸೆ ಅವರ ಆಕರ್ಷಣೆಯ ಹೇತುವಾಗಿರಲಿಲ್ಲ.

ರಜಿಯಾ ಯಾಕೂದರ ಪ್ರೇಮ ಕಥೆ ಐತಿಹಾಸಿಕ ಸತ್ಯ. ದಿಲ್ಲಿಯ ಸಾಮ್ರಾಜ್ಯಶಾಹೀ ದರಬಾರದಲ್ಲಿ ಇಂಥಹ ಅನೇಕ ಪ್ರಣಯಗಾಥೆಗಳು ಇತಿಹಾಸದ ಸತ್ಯವಾಗಿ ಉಳಿದಿವೆ. ರಜಿಯು ರಾಣಿಯಾಗಿಯೂ ಒಬ್ಬ ಕನಿಷ್ಟ ಗುಲಾಮ ಕುರೂಪಿಯನ್ನು ಪ್ರೇಮಿಸಿದ್ದಳು. ಆ ಪ್ರೇಮದಲ್ಲಿ ಆಪಾದನೆಯ ಯಾವುದೇ ಅಂಶ ಪ್ರಧಾನವಾಗುವುದಿಲ್ಲ. ಡೆಸ್ಟಮೊನಾ ಒಥೆಲೋರ ಪ್ರೇಮವೂ ಇದೇ ರೀತಿಯಲ್ಲಿ ಯಾವುದೇ ತಗಾದೆಗೆ ಒಳಪಡದೆ ವಿಜ್ರಂಭಿಸಿತು. ಈ ಎರಡೂ ಪ್ರೇಮಕಥೆಗಳು ದುರಂತದಲ್ಲಿ ಕೊನೆಗೊಂಡವು. ಅಮೃತಮತಿಯು ಅಷ್ಟಾವಂಕವನ್ನು ಪ್ರೀತಿಸಿದ್ದಲ್ಲ. ಬಯಸಿದ್ದು. ಇದರ ಹೇತು ಕಾಮೇಚ್ಛೆ. ಅಲ್ಪಕಾಲದ ಸುಖ ಹಾಗೂ ಪತನ.

ವಿವರಣೆ :-
‘ಸ್ತ್ರೀ ಚರಿತಮದೇಂ ತಿಳಿಯಲರಿದು ಪೆಂಡಿರ ಕೃತಕಂ’

‘ಮಲ್ಲೀಗಿ ಹೂವಿನಂಥ ಮದ್ವೀ ಗಂಡನ ಬಿಟ್ಟು ಹುಲ್ಲ ಕೊಯ್ಯುವನ ಹುಡುಕ್ಯಾಳ’ ಇವೇ ಮುಂತಾದ ಹೆಣ್ಣಿನ ಚರಿತ್ರೆಯ ಕುರಿತು ಉದ್ಧರಿಸಲಾದ ಅನುಭವದ ಮಾತುಗಳಿಂದಲೇ ಸ್ತ್ರೀಚಾರಿತ್ರದ ವಿವರಣೆ ನೀಡುವುದು ಈ ಲೇಖನದ ಉದ್ದೇಶವಲ್ಲ. ಜಗತ್ತಿನ ಪ್ರಖ್ಯಾತ ಸಾಹಿತ್ಯ ಮತ್ತು ಇತಿಹಾಸದಲ್ಲಿ ನಿರೂಪಿಸಲಾದ ಮೂವರು ಸ್ತ್ರೀಯರ ಸ್ವಭಾವ ಗುಣಗಳ ಕಡೆಗೆ ಧ್ಯಾನ ಹರಿಸುವ ಪ್ರಯತ್ನ ಇದು. ಅಮೃತಮತಿ, ಡೆಸ್ಟಮೋನಾ, ರಜಿಯಾ ಒಲಿದು ಮೆಚ್ಚಿದ ಪುರುಷರು ಕುರೂಪಿಗಳು. ಯಾವುದೇ ಸುಂದರ ಸ್ತ್ರೀಯ ಆಕರ್ಷಣೆಯನ್ನು ಪಡೆಯಲು ಅನರ್ಹರು. ಅಪಾತ್ರರು. ದೈಹಿಕ ಸೊಬಗನ್ನು ಗಮನಿಸಿದಾಗ ಹೂವಿನಂಥ ಮದ್ವೀಗಂಡನ್ನು ಪಡೆಯುವ ಲಕ್ಷ್ಯ ಹೆಚ್ಚಿನ ಕನ್ಯಾಮಣಿಗಳಿಗಿದ್ದರೆ. ವೀರ ಸಾಹಸ, ಕಾವ್ಯ, ಕಲಾಪ್ರೌಢಿಮೆ, ಬುದ್ಧಿ ಸಿದ್ಧಿಗಳ ಆಕರ್ಷಣೆಯಿಂದಲೂ ಹೆಣ್ಣು ಮೈಮರೆಯುವ, ಬಯಕೆಗೊಳಗಾಗುವ ಸಂಗತಿಯೂ ಕಡಿಮೆಯಾಗಿಲ್ಲ. ಈ ರೀತಿಯ ಆಕರ್ಷಣೆ ಅಲ್ಪಕಾಲದ ರತಿಸುಖವನ್ನು ಪಡೆದು ತೃಪ್ತವಾಗುವ, ನಂತರ ಆ ಸುಖದಿಂದಲೂ ದೂರವಾಗ ಬಯಸುವ ಮನ ಮತ್ತು ದೇಹದ ಅಶಾಶ್ವತ ತುಡಿತ. ಈ ತುಡಿತಕ್ಕೆ ಈ ಮೂವರೂ ಸ್ತ್ರೀಯರು ಒಳಗಾದರೆ? ಅಮೃತಮತಿ ಹೌದು. ರಜಿಯಾ ಅಲ್ಲ. ಡೆಸ್ಟಮೋನಾ ಸಂದಿಗ್ಧಕ್ಕೆ ಸಿಕ್ಕಿಕೊಂಡವಳು. ಅಮೃತಮತಿಯದು ಪ್ರೀತಿಯ ಸೆಳೆತ ಅಲ್ಲ. ಅಷ್ಟಾವಂಕನಲ್ಲಿ ಅವಳಿಗೆ ಪ್ರೀತಿ ಹುಟ್ಟಿರಲಿಲ್ಲ. ಅವನ ಸಂಗೀತ ಕ್ಷಣಮಾತ್ರ ಅವಳನ್ನು ಯಾವುದೋ ಅತೃಪ್ತಿಯೇ ಕಾರಣವಾಗಿ ಅವನತ್ತ ಸೆಳೆಯಿತು. ಪ್ರಥಮ ದಿನದ ಅವರ ಕೂಟದ ನಂತರ ಸಂಗೀತಕ್ಕಾಗಿ ಅವನನ್ನೆಂದೂ ಆಕೆ ಕಾಡಲಿಲ್ಲ. ಸಂಗೀತ ಅವರ ರತಿ ಸುಖದ ಕೊಂಡಿಯಲ್ಲ. ತನ್ನ ಪತಿಯಲ್ಲಿ ಅದನ್ನು ಪಡೆದು ಬೇಸತ್ತ ಮೇಲೆ ಹೊಸ ಸುಖಕ್ಕಾಗಿ ಮನಗೊಂಡ ಸ್ಥಿತಿಯದು. ಅಲ್ಲದೆ ಆಕೆಯ ನಾರಿಯ ನೈತಿಕತೆಯ ಪತನಕ್ಕೆ ಕಾರಣ ಜನ್ನನೂ ಆಗಿರಬಹುದು. ದೈವ ಪ್ರತಿಕೂಲವೂ ಆಗಿರಬಹುದು. ಅವಳು ಈ ವಿಕೃತ ಸುಖದಲ್ಲಿ ತೊಡಗಿರುವಾಗ ತನ್ನ ನೈತಿಕ ಪತನದ ಕುರಿತು ಒಮ್ಮೆಯೂ ಎಚ್ಚರವಾಗದಿರುವುದು ನಂಬಲಾಗದ ವಿಷಯ. ಪಾಪಪ್ರಜ್ಞೆ ಅವಳನ್ನು ಏಕೆ ತಟ್ಟಲಿಲ್ಲ? ರಜಿಯಾ ಯಾಕೂದನನ್ನು ಪ್ರೀತಿಸಿದಳು. ಇದು ಕ್ಷಣಭಂಗುರ ನಶೆಯಲ್ಲ. ಇದು ಬಿಡಿಬಿಡಿಯಾಗಿ ಅಂಕುರಿಸಿ ಆತ್ಮವನ್ನು ಮುಟ್ಟಿದ ಪ್ರೀತಿ. ಅಲ್ತಮಶನ ಸೇವೆಯಲ್ಲಿ ಯಾಕೂದನನ್ನು ಎಳವಿನಿಂದಲೂ ನೋಡುತ್ತಿದ್ದಳು. ಅವನ ರೂಪ, ದೇಹ, ಗುಲಾಮಿತನ ಅವಳಲ್ಲಿ ಒಂದು ಬಗೆಯ ಹೇಯವನ್ನೇ ಬೆಳೆಸಿತ್ತು. ಇದೆಲ್ಲ ಭಟ್ಟಿಯಿಳಿದು ಪ್ರೀತಿಯ ಸೆಲೆಯಾಗಿ ನೆಲೆಸಲು ಯಾಕೂದನ ಸ್ವಾಮಿನಿಷ್ಠೆ, ದೇಶಪ್ರೇಮ, ಕೌರ್ಯಸಾಹಸ, ಸಮಯವೇ ಪ್ರಮುಖ ಕಾರಣವಾಯಿತು. ಅದರಲ್ಲಿಯೂ ಈ ಕೋಮಲ ಭಾವನೆಯನ್ನು ಗಾಢವಾಗಿ ಆವರಿಸಿಕೊಂಡ ಭೀತಿ ತನ್ನ ಮತ್ತು ಆತನ ಸ್ಥಾನ ಮಾನದ ರೂಪಿನ ಅಂತರಕ್ಕೆ ಸಂಬಂಧ ಪಟ್ಟದಾಗಿತ್ತು. ಯಾಕೂದನ ಮೌನ ಪ್ರತಿಕ್ರಿಯೆಯಲ್ಲಿ ರಜಿಯಾಳ ಮೇಲಿನ ಅಗಾಧ ಪ್ರೀತಿ ವೇದನೆಯಾಗಿ ನಿರಂತರ ಭೀತಿಯಾಗಿ ಅವನನ್ನು ಪ್ರತಿಕ್ಷಣವೂ ಕೊಲ್ಲುತ್ತಿತ್ತು. ತಾನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ಪ್ರಿಯೆಯನ್ನು ಎದುರಿಸಲಾರದೆ ಜರ್ಜರಿತನಾಗುತ್ತಿದ್ದ. ಈ ಪ್ರೀತಿ ಸ್ವಾರ್ಥದ ಆಧಾರದಲ್ಲಿ ನಿಂತದ್ದಲ್ಲ. ರೂಪ, ಅಂತಸ್ತಿನ ಭಯದ ನೆಲೆಯಲ್ಲಿ ನಿಂತದ್ದು. ಲೋಕನಿಂದೆ, ಸಾಮ್ರಾಜ್ಯಶಾಹೀ ಸತ್ತೆಯ ಅಹಿತ ಪ್ರಹಾರ ಭಯದ ಅಸಿಧಾರದಲ್ಲಿ ನಿಂತದ್ದು. ಕೊನೆಯಲ್ಲಿ ಅಮೃತಮತಿ, ರಜಿಯಾ, ಡೆಸ್ಟಮೊನಾ ಮೂವರೂ ಪರಮ ಸುಂದರಿಯರು. ಕುಲ ಅಂತಸ್ತು, ಸ್ಥಾನಮಾನದಲ್ಲಿ ಅದ್ವಿತೀಯರು. ಅಮೃತಮತಿಗೆ ಯಶೋಧರನಂತಹ ರಾಜನೇ ಪತಿ. ಅವಳು ರಾಣಿಯಾಗಿಯೂ ಅಷ್ಟಾವಂಕನಂಥಹ ಸೇವಕನ ಕೂಟದಲ್ಲಿ ಹಾದರ ಮಾಡಿದಳು. ರಜಿಯಾ ಸಾಮ್ರಾಜ್ಞಿಯಾಗಿಯೂ ಕುರೂಪಿಯಾದ ಅಬ್ಬಿಸೇನಿಯಾದ ಗುಲಾಮನನ್ನು ಪ್ರೀತಿಸಿ ಆ ಪ್ರೀತಿಗಾಗಿ ಸಿಂಹಾಸನ ತ್ಯಾಗ ಮಾಡಲು ಸಿದ್ಧವಾದಳು, ಡೆಸ್ಟಮೊನಾ ರಾಜಕುಮಾರಿ. ತನಗೆ ಎಂದೂ ಸಮಾನನಲ್ಲದ ‘ನಿಗ್ರೋ’ ಒಥೆಲೊನನ್ನು ಪ್ರೀತಿಸಿ ಮದುವೆಯಾದಳು. ತಾನು ಮಾಡಿದ್ದು ಪ್ರಮಾದವೆಂಬ ದ್ವಂದ್ವದಲ್ಲಿ ಸುಖವನ್ನು ಮರೆತಳು. ಯಶೋಧರ, ಕ್ಯಾಸಿಯೊ, ಅಲ್ತೂನಿ ಇವರು ಮೂವರು ಸ್ತ್ರೀಯರಿಗೂ ಯೋಗ್ಯರಾಗಿದ್ದ, ಪಾತ್ರರಾಗಿದ್ಧ ಗಂಡು ಯುವಕರು. ಅವರನ್ನು ಮೀರಿ ಕಡೆಗಣಿಸಿ ಈ ಮೂವರೂ ಅಪಾತ್ರರಾದ ಅಷ್ಟವಂಕ, ಯಾಕೂದ, ಒಥೆಲೊ ಎಂಬ ಗಂಡಸರನ್ನು ಬಯಸಿದ್ದೇಕೆ? ಷೇಕ್ಸ್‌ಪೀಯರ್ ಇಯಾಗೊನ ದ್ವೇಶ (ಇಂಟರಿಗ್) ಜನ್ನ ವಿಧಿಯ ಮೋಸ. ರಜಿಯಾ ನಿಷ್ಪಾಪ ಪ್ರೇಮವೇ ಸೂತ್ರ ಪ್ರಧಾನವೆಂದು ಮನಗಾಣಿಸುತ್ತಾರೆ. ಆದರೂ ಹೆಣ್ಣಿನ ಚರಿತ್ರೆಯಲ್ಲಿ ಅಪಾತ್ರರೊಂದಿಗೆ ರಮಿಸುವ ಗುಣವಿಶೇಷವಿರಲೂ ಬಹುದೆಂಬ ಗುಮಾನಿಯಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರ ಎರಡು ಕವನಗಳು
Next post ಕಷ್ಟ

ಸಣ್ಣ ಕತೆ

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…