ಬಾಲ್ಯದ ಬರಿಮೈ ತಿರುಗಾಟ
ಬೆಳೆದಂತೆಲ್ಲಾ ನಾಚಿಕೆ ಇಷ್ಟಿಷ್ಟೆ ಮೈಮುಚ್ಚಿತು
ಮೀಸಲ ಸೊಬಗು ನೋಡಿದವರು ಹಾಡಿದರು
ಆಗ ಹರಿದದ್ದೆಲ್ಲಾ ಸಿದ್ಧ ರಸ-ತರುವೆಲ್ಲ ಕಲ್ಪತರು
ದನವೆಲ್ಲಾ ಕಾಮಧೇನು ಇತ್ಯಾದಿ ಇತ್ಯಾದಿ
ಮೈತುಂಬ ಮರ್ಯಾದೆಯುಟ್ಟು
ಪ್ರಸನ್ನತೆ ಮುಡಿದು ಸೊಬಗ ತೊಟ್ಟು
ಮೇಲೊಂದು ದಿಟ್ಟಿ ಬೊಟ್ಟಿಟ್ಟು ನೀನಿದ್ದೆ
ಆ ಮಡಿಲ ಶಾಂತಿ
ನೆನಪಿನ ಹಾಳೆಗಳಲ್ಲಿಂದೂ ಹಚ್ಚಿಹಸಿರು
ಈಗಾದರೋ
ಸಂಶೋಧನೆಯ ಕತ್ತಿ
ಸೀರೆಯನಿಷ್ಟಿಷ್ಟೆ ಕಿತ್ತಿ
ಸುಧಾರಣೆಯ ಬೀದಿಯಲ್ಲೊಬ್ಬ ಬಜಾರಿ ಮೆರೆಯುತ್ತಾಳೆ
ಬಯಲಾದ ನಾಚಿಕೆಯ ಸೀಮೆ ಬಾಯ್ಬಿಟ್ಟ ನೆಲ
ಬಂಜೆಯಾದ ಕಾಮಧೇನು
ಕೀವುಗಾಯಗಳ ರಣರಂಗ
ನುಸಿ ಹತ್ತಿದ ಕಳೆ
ಅರಿಷ್ಟವಾದ ಪ್ರೇತ ನರ್ತನ
ಇದು ನಿನ್ನಲ್ಲಾದ ಪರಿವರ್ತನ
*****.


















