ಎರಡು ಕತೆಗಳು

ಎರಡು ಕತೆಗಳು

ಸಾಲು ಸಾಲು ಅತ್ಯಾಚಾರಗಳ ಸುದ್ದಿ ದಿನವೂ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಹೊತ್ತಿನಲ್ಲಿ ಕನ್ನಡದ ಎರಡು ಕತೆಗಳು ಅತ್ಯಾಚಾರವನ್ನು ಕುರಿತು ಚಿತ್ರಿಸಿದ್ದು ನೆನಪಾಗುತ್ತಲಿದೆ. ಚಿತ್ತಾಲರ ‘ಆಬೊಲಿನಾ’ ಹಾಗು ಪೂರ್ಣಚಂದ್ರ ತೇಜಸ್ವಿಯವರ ‘ಕುಬಿ ಮತ್ತು ಇಯಾಲ’ ಎಂಬ ಎರಡು ಕತೆಗಳೇ ಅವು.

ಅತ್ಯಾಚಾರವೆನ್ನುವುದು ದೈಹಿಕ ಮಾತ್ರವಲ್ಲ ಅದು ಮಾನಸಿಕ ಕೂಡ. ಅದರ ಸುತ್ತ ಒಂದು ಸಾಮಾಜಿಕ ಲೋಳೆ ಪದರ ಇರುತ್ತದೆ. ಅದರ ಇರವು ಗೊತ್ತೇ ಆಗದಂತೆ. ಒಮ್ಮೆ ಗುಟ್ಟಾದ ಸಂಗತಿ ಸ್ಫೋಟವಾಯಿತೋ ಅಲ್ಲಿಗೆ ಎಲ್ಲ ಮುಗಿದಂತೆ, ಅದು ಪರಮ ಸಾಮಾಜಿಕವಾದ ಸಂಗತಿಯಾಗಿ ಎಲ್ಲರ ಬಾಯಲ್ಲಿ ಹರಿದಾಡತೊಡಗುತ್ತದೆ. ಇದು ಇನ್ನೊಂದು ಬಗೆಯ ಬಹಿರಂಗ ಅತ್ಯಾಚಾರ. ಇವೆರಡನ್ನು ಧ್ವನಿಸುವುದು ಚಿತ್ತಾಲರ ‘ಆಬೊಲಿನಾ’ ಹಾಗು ತೇಜಸ್ವಿಯವರ ‘ಕುಬಿ ಮತ್ತು ಇಯಾಲ’ ಎಂಬ ಕತೆಗಳು.

ಚಿತ್ತಾಲರ ‘ಆಬೊಲಿನಾ’ ಕತೆ ಬಂದಿದ್ದು ೧೯೫೭ ರಲ್ಲಿ. ಅಲ್ಲಿ ಬರುವ ಮುಗ್ಧ ಹುಡುಗಿ ಆಬೊಲಿನಾ. ಅವಳನ್ನು ತನ್ನ ಲಾಲಸೆಗಾಗಿ ಉಪಯೋಗಿಸಿಕೊಂಡ ಮನವೇಲ ಅವಳ ಮುಗ್ಧ ಮನಸ್ಸಿನಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸುತ್ತಾನೆ. ತನ್ನ ಕೌಮಾರ್‍ಯದ ಭಂಗವು ಗಂಡಸಿನ ಎಂಜಲಿನಿಂದ ಆಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಆ ಹುಡುಗಿ ಆಬೊಲಿನಾ ಮಾನಸಿಕವಾಗಿ ನರಳುತ್ತಾಳೆ. ಅವಳನ್ನು ತನ್ನ ದಾರಿಗೆಳೆದುಕೊಳ್ಳಲು ನೋಡಿದ ಧೂರ್‍ತ ತನ್ನ ವಯಸ್ಸಿಗೆ ತೀರಾ ಸಣ್ಣವಳಾದ ಹುಡುಗಿಯನ್ನು ತಾನು ಯಾವ ಪರಿ ನೋಯಿಸುತ್ತಿದ್ದೇನೆಂಬ ಅರಿವು ಕೂಡ ಇಲ್ಲದ ಅಸೂಕ್ಷ್ಮ ವ್ಯಕ್ತಿಯಾಗಿರುತ್ತಾನೆ. ಊರಿಗೆಲ್ಲಾ ಹಬ್ಬುವ ಸುಳ್ಳು ಸುದ್ದಿಯನ್ನು ಪುಟ್ಟ ಆಬೊಲಿನಾ ತಡೆದುಕೊಳ್ಳದೇ ಹೋಗುತ್ತಾಳೆ. ತಾನು ಗರ್‍ಭಿಣಿಯಾಗಿರುವೆನೆಂದು ತಪ್ಪಾಗಿ ತಿಳಿದುಕೊಂಡ ಮುಗ್ಧ ಹುಡುಗಿ ಕೊನೆಗೊಮ್ಮೆ ಸಾಯುತ್ತಾಳೆ.

‘ಕುಬಿ ಮತ್ತು ಇಯಾಲ’ ಎಂಬ ಕತೆ ಬಂದಿದ್ದು ೧೯೭೩ ರಲ್ಲಿ. ಅದು ಕೂಡ ಒಬ್ಬ ಮುಗ್ಧ ಹರಯದ ಹುಡುಗಿಯ ಅತ್ಯಾಚಾರ ಕೊಲೆಯ ಸುತ್ತ ಬೆಳೆಯುವ ಘಟನೆಗಳನ್ನು ಕುರಿತದ್ದು. ಇಯಾಲ ಎಂಬ ಪುಟ್ಟ ಸುಂದರಿ ಆಗ ತಾನೇ ಹರಯಕ್ಕೆ ಬಂದಿದ್ದವಳು ಅತ್ಯಾಚಾರಕ್ಕೀಡಾಗಿ ಕೊಲೆಯಾಗುವ ಸನ್ನಿವೇಶ ಇಡೀ ಭೈರಾಪುರದ ಕೇಡಿಗೆ ಸಂಕೇತವೆಂಬಂತೆ ಕಾಣತೊಡಗುತ್ತದೆ. ಇಯಾಲಳನ್ನು ಯಾರು ಕೊಂದರು? ಯಾಕೆ ಕೊಂದರು? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಜರೂರಿಗಿಂತಲೂ ಇಯಾಲಳ ಸಾವನ್ನು ಯಾರೆಲ್ಲಾ ತಮ್ಮ ಸ್ವಾರ್‍ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಸಂಗತಿ ಬೆಚ್ಚಿ ಬೀಳಿಸುವಂತಿರುತ್ತದೆ. ಆ ಪುಟ್ಟ ಸುಂದರಿಯ ಅತ್ಯಾಚಾರವು ಆಗಿರುವುದು ಲೋರಿ ಎಂಬ ಲುಚ್ಛಾ ಮನುಷ್ಯನಿಂದ. ಅವನಿಗೆ ಯಾರೋ ಹೇಳಿದರೆಂದು ಮುಟ್ಟಾಗದ ಹುಡುಗಿಯನ್ನು ಕೂಡಿದರೆ ಹೆಂಗಸರ ರೋಗ ಹೋಗುತ್ತದೆ ಎಂಬ ನಂಬಿಕೆಯಿಂದ ಇಯಾಲಳ ಮೇಲೆ ಆಕ್ರಮಣ ಮಾಡಿದ ಅವನಿಗೆ ಅವಳು ದೊಡ್ಡವಳಾದುದು ತಿಳಿದು ರೇಗಿ ಅವಳನ್ನು ಕೊಂದಿದ್ದಾನೆ. ಇದನ್ನೆಲ್ಲಾ ಕಂಡು ಕುಬಿ ಡಾಕ್ಟರ್ ಬೇಸತ್ತು ಹೋಗುತ್ತಾನೆ.

ಕನ್ನಡ ಸಾಹಿತ್ಯದಲ್ಲಿ ಎಷ್ಟೋ ಅತ್ಯಾಚಾರಗಳ ಪ್ರಸಂಗಗಳು ಬಂದಿರಬಹುದು. ಅವುಗಳಿಗೆ ಸಾಂದರ್‍ಭಿಕವಾಗಿ ವಿಶೇಷವಾದ ಅರ್‍ಥವೂ ಒದಗಿ ಬಂದಿರಬಹುದು. ಆದರೆ ವಿಶೇಷವಾಗಿ ಈ ಎರಡು ಕತೆಗಳೇ ಏಕೆ ಕಾಡಿದವು ಎಂದರೆ ಅತ್ಯಾಚಾರಗಳ ಸಂಗತಿಗಳು ಢಾಳಾಗಿ ಮನಸ್ಸನ್ನು ದ್ರವಿಸುವಂತೆ ಚಿತ್ರಿಸುವುದು ಈ ಕತೆಗಳ ಅಂತರಂಗ ಅಲ್ಲವೇ ಅಲ್ಲ. ಸಾಮಾಜಿಕವಾಗಿ ಭೀಭತ್ಸ ರಸವನ್ನು ಉಕ್ಕಿಸಬಲ್ಲ ಅತ್ಯಾಚಾರ ಪ್ರಸಂಗಗಳನ್ನು ಬಳಸಿ ಜನಪ್ರಿಯವಾದ ಓದಿಗೂ ಬಳಕೆಯಾಗುತ್ತಲಿಲ್ಲ. ನವ್ಯ ಸಾಹಿತ್ಯದ ಕಾಲದಲ್ಲಿ ಬಂದ ಈ ಎರಡು ಕತೆಗಳು ಅತ್ಯಾಚಾರದ ವಿವಿಧ ಆಯಾಮಗಳನ್ನು ತೋರಿಸಿಕೊಟ್ಟವು. ಚಿತ್ತಾಲರು ಮುಗ್ಧ ಹುಡುಗಿಯ ಮನಸ್ಸು ಕೆಡಿಸುವ ಗಂಡಸಿನ ಕ್ರೌರ್‍ಯವನ್ನು ಮಾನಸಿಕ ಅತ್ಯಾಚಾರವನ್ನಾಗಿ ಚಿತ್ರಿಸುತ್ತಾರೆ. ‘ಆಬೊಲಿನಾ’ ಕತೆಯು ಪುಟ್ಟ ಹುಡುಗಿಯ ಮನಸ್ಸಿನೊಳಗೆ ಗಂಡಸಿನ ಬಗ್ಗೆ ಉಂಟಾಗುವ ಭೀತಿ ಇಡೀ ಗಂಡಸು ಕುಲದ ಮೇಲೆ ನಂಬಿಕೆಯನ್ನು ಕದಡುತ್ತದೆ. ಚಿತ್ತಾಲರಿಗೆ ಮಾನವೀಯತೆಯ ಅಂಚು ದಾಟುವ ಎಲ್ಲ ಲಿಂಗತ್ವಗಳೂ ಕೇಡಿನ ಸಂಕೇತವಾಗಬಲ್ಲವು. ಜನಪ್ರಿಯವಾಗುವ ಸೆಂಟಿಮೆಂಟುಗಳ ಬಳಕೆ ಮಾಡದೆ ಕತೆಯನ್ನು ಹೇಳುವ ಚಿತ್ತಾಲರು ಕೀರ್‍ತಿನಾಥ ಕುರ್‍ತುಕೋಟಿಯವರು ಗುರುತಿಸುವಂತೆ ದಾರುಣತೆಯನ್ನು ಮನಗಾಣಿಸಿ ತೋರಿಸಿದ್ದಾರೆ. ಪೂರ್‍ಣಚಂದ್ರ ತೇಜಸ್ವಿಯವರ ಕತೆಯಲ್ಲಿ ಅತ್ಯಾಚಾರವು ಮುಖ್ಯ ಭೂಮಿಕೆಯಲ್ಲಿ ಬರದೆ ಊರಿನ ಕೇಡಿನ ಕಾರಣಗಳಲ್ಲಿ ಸೇರಿಕೊಳ್ಳುತ್ತದೆ. ಇಯಾಲಳ ಅತ್ಯಾಚಾರ ಮತ್ತು ಕೊಲೆಯೆನ್ನುವುದು ಗಂಡಸಿನ ಮನಸ್ಸಿನ ಕ್ರೌರ್‍ಯವನ್ನು ಸಾಮಾಜಿಕ ಪರದೆಯಲ್ಲಿಯೇ ವಿವರಿಸುತ್ತದೆ. ವಾಸ್ತವವಾಗಿ ಆಗ ತಾನೇ ದೊಡ್ಡವಳಾಗಿದ್ದ ಇಯಾಲ ತನ್ನ ಕೌಮಾರ್‍ಯಕ್ಕೆ ತಾನೇ ನಾಚಿಕೊಂಡು ತನ್ನ ಹೊಟ್ಟೆ ನೋವಿಗೆ ಔಷಧ ತೆಗೆದುಕೊಳ್ಳಲೇ ನಾಚಿಕೊಳ್ಳುವಂತವಳು. ಅವಳನ್ನು ಕುಮಾರಿ ಎಂದು ಭಾವಿಸಿ ಅವಳನ್ನು ಭೋಗಿಸಿದರೆ ತನ್ನ ಹೆಂಗಸರ ಕಾಯಿಲೆ ಗುಣವಾಗುತ್ತದೆ ಎನ್ನುವ ಮೂಢನಂಬಿಕೆಯಿಂದ ಅವಳ ಮೇಲೆ ಅತ್ಯಾಚಾರ ಮಾಡುವ ಲೋರಿ ಈ ಊರಿನ ಕೇಡಿಗೆ ಇನ್ನಷ್ಟು ಪ್ರಖರತೆಯನ್ನು ತರುತ್ತಾನೆ. ಆಳದಲ್ಲಿ ಅತ್ಯಾಚಾರ ಎನ್ನುವುದು ಊರ ಸಂಗತಿಯಾಗಿ ಪರಿವರ್‍ತನೆಯಾಗುವ ಸಂದರ್‍ಭದಲ್ಲಿ ಅದು ಇಡೀ ಸಮಾಜದ ಕೇಡಿನಂತೆ ಧ್ವನಿಸುವುದು ತೇಜಸ್ವಿಯವರ ಕತೆಯಲ್ಲಿದೆ.

ಒಳತೋಟಿಯನ್ನು ತುಂಬಿ ಅತ್ಯಾಚಾರದಂತಹ ಸಂಗತಿಯು ಹೇಗೆ ಸಮಾಜದ ಅವನತಿಗೆ ಕಾರಣವಾಗುತ್ತಾ ಮನಸ್ಸನ್ನು ಕೋಭೆಗೊಳಿಸುತ್ತವೆ ಎನ್ನುವುದಕ್ಕೆ ಉದಾಹರಣೆಯಾಗಿ ಈ ಎರಡು ಕತೆಗಳು ನಿಲ್ಲುತ್ತವೆ. ಸ್ತ್ರೀವಾದದ ಕನ್ನಡಕದಲ್ಲಿ ಅತ್ಯಾಚಾರವನ್ನು ನೋಡುವಾಗ ಎಲ್ಲ ಗಂಡಸರೂ ಅತ್ಯಾಚಾರಿಗಳೆಂಬಂತೆ ಕಾಣುವ ಆಭಾಸವಿರುತ್ತದೆ. ಎಲ್ಲ ಗಂಡಸರೂ ಕೇಡಿಗಳ೦ತೆ ಕಾಣತೊಡಗಿ ಮಾನವೀಯತೆಯೆನ್ನುವುದು ಅನಪೇಕ್ಷಿತ ಸಂಗತಿಯಾಗಿಬಿಡುತ್ತದೆ. ಈ ಅತಿಗೆ ಹೋಗದೆ ಸ್ತ್ರೀ ಎನ್ನುವ ಸಂವೇದನೆಯೆನ್ನುವುದು ಮಾನವೀಯ ಎಂದು ಭಾವಿಸುವ ಸಂದರ್‍ಭಗಳೇ ಬಹುಶಃ ಈ ಎರಡು ಕತೆಗಳು ನನಗೆ ನೆನಪಾಗಿದ್ದಕ್ಕೆ ಕಾರಣವಿರಬಹುದು. ಅತ್ಯಾಚಾರವೆನ್ನುವುದು ಸಾಮಾಜಿಕವಾದ ಕೇಡಿನ ಸಂಕೇತ ಎಂದು ತೋರಿಸಿಕೊಟ್ಟ ಈ ಎರಡೂ ಕತೆಗಳನ್ನು ಬರೆದ ಚಿತ್ತಾಲ ಹಾಗು ತೇಜಸ್ವಿಯವರಿಗೆ ನಮಸ್ಕಾರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಂಜಿ – ರತ್ನ
Next post ಮಳೆಯ ನಾಡಿಗೆ ಬಂದೆನೆ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…