ಹಬ್ಬಗಳು

‘ಹಬ್ಬ’ ಎಂಬ ಶಬ್ದ ಕೇಳಿದರೇನೇ ಎಷ್ಟೊಂದು ಖುಷಿ ಅನಿಸುತ್ತದೆ. ಎಲ್ಲರೂ ಕುಣಿದು  ಕುಪ್ಪಳಿಸುವವರೇ, ಬಾಯಿ ಚಪ್ಪರಿಸುವವರೇ ಎಲ್ಲರಿಗೂ ಅವರವರದೇ’ ಆದ ಧರ್ಮದ ಹಬ್ಬಗಳು ಶ್ರೇಷ್ಠ.

ಹತ್ತಾರು ವರ್ಷಗಳಿಂದ ನಮ್ಮ ಕ್ಯಾಂಪಸ್ಸಿನಲ್ಲಿ ಅಚರಿಸುವ ಕ್ರಿಶ್ಚಿಯನ್ ಧರ್ಮದ ಹಬ್ಬಗಳ, ನಗರದಲ್ಲಿನ ಮುಸ್ಲೀಂ ಧರ್ಮದ ಹಬ್ಬಗಳನ್ನು ಅತಿ ಸಮೀಪದಿಂದ ನೋಡುತ್ತಲೇ ಬಂದಿದ್ದೇನೆ. ಪ್ರತಿಯೊಂದು ಹಬ್ಬದಲ್ಲೂ ಏನೇನೋ ವಿಶೇಷತೆಗಳು ಇದ್ದೇ ಇವೆ. ಅನ್ನಿಸಿದೆ.

ರಮದಾನ್ (ರಮಜಾನ್) ಹಬ್ಬ ಭಾರತದಲ್ಲಿ ನೋಡಿದ್ದ ನನಗೆ, ಸೌದಿ ಅರೇಬಿಯ ಪ್ರವೇಶಿಸಿದ ನಂತರ ಅದೇನೋ ಒಂದು ಏಶಿಷ್ಟ ರೀತಿಯಲ್ಲಿ ಕಾಣಿಸಿತು. ನಮಗಿಂತಲೂ ಯುರೋಪಿಯನ್ನರು, ಅಮೇರಿಕನ್ನರಿಗಂತೂ ಅತಿ ಅಶ್ಚರ್ಯ.
ಹಗಲಿನಲ್ಲಿ  ಉಪವಾಸ, ರಾತ್ರಿ ಊಟ, ಹಗಲಿನಲ್ಲಿ ನಿದ್ದೆ, ರಾತ್ರಿ ಎಚ್ಚರ ಅಂಗಡಿ ವ್ಯವಹಾರಗಳೆಲ್ಲ ರಾತ್ರಿಯಲ್ಲೇ.

ಇಸ್ಲಾಂ ಕ್ಯಾಲೆಂಡರ್ ಪ್ರಕಾರ 9ನೆಯ ತಿಂಗಳಲ್ಲಿ ನಾವು 1980ರಲ್ಲಿ ಮೊದಲು ಹೋದಾಗ ಬಹುಶಃ  October ನಲ್ಲಿತ್ತು. ಈಗ 1995ರಲ್ಲಿ Februaryನಲ್ಲಿ ಮುಗಿದು ಹೋಯಿತು. ಪ್ರತಿವರ್ಷ15ದಿನ ಮೊದಲೇ ಬರುತ್ತದೆ. ಬರುವ
ಈ ಹಬ್ಬ ಒಂದು ದಿನದ್ದಲ್ಲ, ಇಲ್ಲಿ ಪೂರ್ತಿ ಒಂದು ತಿಂಗಳು ಅತೀ ಸಂಭ್ರಮವಾಗಿಯೇ ಅದನ್ನು ಆಚರಿಸುತ್ತಾರೆ. ಈ ತಿಂಗಳಲ್ಲಿ ಮೂಡುವ ಅಂದರೆ ಅಮಾವಾಸ್ಯೆಯ ಮರುದಿನ ಅಥವಾ ಎರಡನೆಯ ದಿನದ ಮೊದಲು ಚಂದ್ರನ ದರ್ಶನ ಆದ ತಕ್ಷಣ ಇಲ್ಲಿಯ ಮುಲ್ಲಾಗಳು ಟೆಲಿವಿಜನ್ನಲ್ಲಿ ಬಿತ್ತರಿಸುತ್ತಾರೆ. ಟಿ.ವಿ.ಬರುವದಕ್ಕಿಂತ ಮೊದಲು ಅಲ್ಲಲ್ಲಿ ಸಿಡಿಮದ್ದು ತೋಪು ಹಾರಿಸಿ ಸಪ್ಪಳ ಮಾಡಿ ಜನರಿಗೆಲ್ಲ ಗೊತ್ತುಪಡಿಸುತ್ತಿದ್ದರಂತೆ. ಈಗಲೂ ಗ್ರಾಮೀಣ ಭಾಗದಲ್ಲಿ ಹಾಗೆಯೇ ಇದೆ. ಟಿ.ವಿ. ಇದ್ದರೂ ಈ ಗ್ರಾಮೀಣ ಜನರಿಗೆ ಸಿಡಿಮದ್ದುಗಳ ಸಪ್ಪಳದಲ್ಲೇ ಭರವಸೆ ಹೆಚ್ಚು. ಒಟ್ಟಿಗೆ ಸುದ್ದಿ ತಿಳಿದಂತೆ ರಮದಾನದ ದಿನ ಅಥವಾ ಉಪವಾಸದ ದಿನ ಶುರುವಾದಂತೆ. ಅಂದಿನ ರಾತ್ರಿ ಎಚ್ಚರವಿದ್ದು ನಸುಕಿನ ವೇಳೆಗೆ ಮೊದಲೇ ಊಟಮಾಡಿ ಮುಗಿಸುವರು.

ರಮದಾನದ ಒಂದು ತಿಂಗಳು ಹಬ್ಬದಲ್ಲಿ ಇಲ್ಲಿಯ ಸರಕಾರಿ ಆಫೀಸುಗಳು-ಶಾಲೆ-ಕಾಲೇಜುಗಳು ಪೇಟೆಗಳು ಇನ್ನಿತರ ಖಾಸಗಿ ಕಂಪನಿಗಳೆಲ್ಲ ಸಮಯ ಬದಲಾಯಿಸಿಕೊಳ್ಳುತ್ತವೆ. ಇಂತಹ ದಿನಗಳಲ್ಲಿ ಸರಕಾರ ಮಸ್ಲೀಂರಿಗೂ, ಮುಸ್ಲೀಂ
ಮೇತರರಿಗೂ ಕೆಲವೊಂದು ಕಟ್ಟಪ್ಪಣೆ ಹಾಕಿದ್ದಾರೆ. ಮುಸ್ಲೀಂ ಜನರಂತೂ ಹಗಲಿನಲ್ಲಿ ತಿಂಡಿ ನೀರು ಎಂದು ಏನೊ ಸೇವಿಸಲೇಬಾರದು. ಆಕಸ್ಮಿಕ ಗೊತ್ತಾದರೆ ಅವರಿಗೆ ಕಠಿಣ ಶಿಕ್ಷೆ ಮುಸ್ಲಿಂಮೇತರರು ಮನೆಯೊಳಗೆ ಬೇಕಾದುದು ಮಾಡಬಹುದು. ಅದರ ಹೊರಗಡೆ ಸಾರ್ವಜನಿಕವಾಗಿ ನೀರು ಕುಡಿಯುವದು, ತಿನ್ನುವದು ಸಿಗರೇಟ್ ಸೇದುವದು
ಮಾಡಕೂಡದು. ಆಕಸ್ಮಿಕ ಈ ತರಹ ಮಾಡಿದರೆ, ಮುಸ್ಲಿಂ ಜನರ ಎದುರಿಗೆ ಮಾಡಿ ಸಿಟ್ಟುಬರಿಸಿದರಂತೂ ಶಿಕ್ಷೆ ಕಟ್ಟಿಟ್ಟದ್ದೆ. ಉದ್ದೇಶಪೂರ್ವಕವಾಗಿ ಯಾರಾದರೂ ಮಾಡುತ್ತಿದ್ದಾರೆಂದು ಸುಳಿವು ತಿಳಿದರಂತೂ ನೇರವಾಗಿ ಅವರೂರಿಗೂ ಹತ್ತಿಸಿ ಬಿಡುತ್ತಾರೆ. ಈ ತರಹ ಕೆಲವು ಅಲ್ಲಲ್ಲಿ ಅದದ್ದು ಪೇಪರ ಸುದ್ದಗಳ ಮುಖಾಂತರ ಗೊತ್ತಾಗುತ್ತದೆ.

ಒಂದು ತಿಂಗಳು ಮುಸ್ಲಿರರಿಗೆ ಸಮಯದ ಬಗೆಗೆ ಒತ್ತಾಯಏಲ್ಲ. ನಿಧಾನಕ್ಕೆ ಎದ್ದು ಅಫೀಸು-ಕೆಲಸಗಳೆಂದು ಹೋಗಬಹುದು. ಅಲ್ಲಿಯೂ ಮೈಮುರಿದು ದುಡಿಯದಿದ್ದರೂ ನಡೆಯುವುದು. 4-5 ತಾಸು ಹಾಜರಿಕೊಟ್ಟು ಅಷ್ಟು ಸುತ್ತಾಡಿ ಹೋಗುತ್ತಾರೆ. ಅದರೆ ನಿಜವಾಗಿಯೂ ಬಿಸಿಲಿನಲ್ಲಿ ದುಡಿಯುವವರು ಹೊರದೇಶ ದವರು, ನೀರಿಲ್ಲದೆ ಸಾಯಂಕಾಲದವರೆಗೆ ರೊಳ್ಳೆಯಾಗುವರು ಬಾಯಿ ಒಣಗಿ ಮುಖ ಇಳಿದಿರುತ್ತದೆ.

ಹಬ್ಬಗಳು ಇರಲಿ ಬಿಡಲಿ ದಿನಕ್ಕೆ ಐದು ಸಲ ನಮಾಜು ಮಾಡುವರು. ಹಬ್ಬಗಳಲ್ಲಿಯಂತೂ ಮಕ್ಕಳು ಮಹಿಳೆಯರೂ ಎಲ್ಲರೂ ಮಾಡಬೇಕು. ನಸುಕಿನ ವೇಳೆಗೆ ಮೊದಲನೆಯ ಪ್ರಾರ್ಥನೆ. ನಂತರ ಮದ್ಯಾಹ್ನ 12 ರ ಸುಮಾರಿಗೆ, ಅಮೇಲೆ 4 ಗಂಟೆಗೆ ಸಂಜೆ 7 ಗಂಟೆಗೆ, ಕೊನೆಗೆ ರಾತ್ರಿ 8 1/2 ಗೊಮ್ಮೆ. ನಿಜವಾಗಿಯೂ ತಾಳ್ಮೆಬೇಕು ಮನಸ್ಸಿಟ್ಟು ನಮಾಜು ಮಾಡಲಿಕ್ಕೆ. ಮುಂಜಾನೆಯಿಂದ ಉಪವಾಸ ಇದ್ದ ಮಹಿಳೆಯರು ಸಂಜೆ 4ರ ನಮಾಜು ಮುಗಿದ ನಂತರ ಅಡುಗೆ ಮನೆ ಸೇರುವರು. ತಿಂಡಿ ಊಟದ ಸಾಮಾನುಗಳೆಲ್ಲ ಹೊಂದಿಸಿಕೊಂಡು ಕೆಲಸದಲ್ಲಿ ತೊಡಗುವರು. ಸುಮಾರು 6.30ಕ್ಕೆ ಸಮಯಕ್ಕೆ ಸೂರ್ಯಾಸ್ತವಾಗುವದು.

ಸಂಜೆಗೆ ಉಪವಾಸ ಬಿಡಬೇಕಲ್ಲ; ಜನ ಹಸಿದಿರುತ್ತಾರೆ, ಸೂರ್ಯಾಸ್ತ ಆಗುತ್ತಿದ್ದಂತಯೇ ಮಸೀದಿಗಳಿಂದ  ಸಿಡಿಮದ್ದುಗಳು ಹಾರಿಸುವರು. ಅಷ್ಟರೊಳಗಾಗಿಯೇ ಜನ ತಿಂಡಿ ತಿನಿಸು, ನೀರು ತುಂಬಿಟ್ಟುಕೊಂಡು ಈ ಸಪ್ಪಳಕ್ಕಾಗಿಯೇ ಕಾಯುತ್ತಾರೆ. ಆ ಮದ್ದುಗಳ ಸಪ್ಪಳ ಬರುವದೇ ತಡ, ಜನ ಎಲ್ಲ ಖುಷಿಯಿಂದ ತಾಟಿಗೆ ಕೈ ಹಾಕಿ ತಿಂಡಿ-ಊಟ ಶುರುಮಾಡುವರು.

ಸಂಜೆ ಐದರ ಸುಮಾರಿಗೆ ಸಣ್ಣ ಸಣ್ಣ ತಿಂಡಿ ಅಂಗಡಿಗಳು ತೆಗೆದು ತಾಜಾ ದಿನಸಿಗಳು ತಯಾರಿಸಲು ಶುರುಮಾಡಿ ಎಲ್ಲ ಹೊಂದಿಸಿಡುವರು. ರಮದಾನ್‌ದಲ್ಲಿ ಇಲ್ಲಿ ಸಮೋಸಾಗಳಿಗೆ ಬಹಳ ಬೇಡಿಕೆ. ನಮ್ಮ ಕಡೆಯಂತೆ ತರಕಾರಿ ಹಾಕಿದ ಸಮೋಸಗಳು ಅಲ್ಲ; ಇವುಗಳಿಗೆ ಇಲ್ಲಿ ಒಳಗಡೆ ಮಾಂಸದ ತುಣುಕುಗಳು ತುಂಬಿಡುವರು. ಸಂಜೆ ಉಪವಾಸ ಬಿಡುವ ಈ ಜನರು (ಹೆಚ್ಚಾಗಿ ಕೆಲಸಗಾರರು) ಈ ಅಂಗಡಿಗಳ ಮುಂದೆ ಸಾಲಾಗಿ ನಿಂತು ಇವನ್ನು ಖರೀದಿಸಿ ಒಯ್ಯುವರು. ಅಷ್ಟೇ ಅಲ್ಲದೆ ತರಹ ತರಹಗಳ ಬ್ರೆಡ್‌ಗಳನ್ನು-ಉಪ್ಪಿನಕಾಯಿಗಳು-ಚೀಸ್‌ಗಳು ತಂಪು ಪಾನೀಯಗಳನ್ನು ಒಯ್ಯುತ್ತಾರೆ.

ಉಪವಾಸ ಬಿಡುವದೆಂದರೆ ಕೆಲವರು  ಉಪ್ಪುನೀರು ಕುಡಿಯುವರು. ನಂತರ ಅರೇಬಿಯದ ತುಂಬೆಲ್ಲ್ ಸಿಗುವ  ಜಾತಿಯ ಖರ್ಜೂರ ತಿಂದು ನೀರು ಕುಡಿದು 7ರ ನಮಾಜಿಗೆ ಮಸೀದಿಗೆ ಹೊರಡಲನುವಾಗುಪರು. ಅಲ್ಲಿಂದ ಬಂದ ನಂತರವೇ ಅವರ ದೊಡ್ಡ ಊಟ. ಅಷ್ಟೊತ್ತಿಗಾಗಲೇ ಮನೆಯ, ಮಹಿಳೆಯರ ಮಕ್ಕಳು ಊಟದ ಮಾಡಿದ ಅಡುಗೆಯೆಲ್ಲ ಹಾಕಿಟ್ಟು ಇವರಿಗಾಗಿ ಕಾಯುತ್ತಾರೆ.  ಯಜಮಾನ ಬಂದ ನಂತರ ತಾಟದ ಸುತ್ತೆಲ್ಲ  ಕುಳಿತು ಅದರೊಳಗೆ ಕೈಹಾಕಿ ಊಟ ಮಾಡುತ್ತ ಖುಷಿಪಡುವರು.

ಈ ಸಮಯದಲ್ಲಿ ಹೊರಗಡೆ ರಸ್ತೆಗಳೆಲ್ಲ ಪೂರ್ತಿ ಖಾಲಿ. ಯಾವೊಂದು ವಾಹನವೂ ಓಡಾಡುವದಿಲ್ಲ. ಅಂಗಡಿಗಳಂತೂ ಮುಚ್ಚಿಯೇ ಇರುತ್ತವೆ. ಎಲ್ಲಾ ಶಾಂತ ವಾತಾವರಣ. ದಿನದ 24 ತಾಸೂ ಪ್ರತಿ ರಸ್ತೆ ದೊಡ್ಡ ದೊಡ್ಡ ಕಟ್ಟಡಗಳು ಬ್ಯಾಂಕು ಇನ್ನಿತರ ಫ್ಯಾಕ್ಟರಿಗಳಿಗೆ ಇಷ್ಟೊಂದು ಭದ್ರ ಪೋಲೀಸ ಕಾವಲು ಇರುತ್ತದೆಯಲ್ಲ; ಅದರೆ ಈ ಸಮಯದಲ್ಲಿ ಅವರೊಬ್ಬರೂ ಕಾಣಿಸಿಗುವದಿಲ್ಲ. ಎಲ್ಲರೂ ಊಟ-ತಿಂಡಿ ಹರಟೆಯಲ್ಲಿ ಮಗ್ನರಾಗಿರುತ್ತಾರೆ. ಸುಮಾರು 8 1/2ಗೆ , ದಿನದ ಕೊನೆಯ ದೊಡ್ಡ ನಮಾಜು. (ಪ್ರಾರ್ಥನೆ) ಹೊಟ್ಟೆ ತುಂಬ ಊಟ ಮಾಡಿ ಜಡವಾಗಿ ಕಾಲೆಳೆಯುತ್ತ
ಮಸೀದಿಯ ಕಡೆಗೆ ನಡೆಯುತ್ತಾರೆ. ಸುಮಾರು ಒಂದು ಒಂದೂವರೆ ತಾಸುಗಳಷ್ಟು ನಮಾಜು, ಕುರಾನ್ ಓದುವದು, ಮುಲ್ಲಾಗಳ ಭಾಷಣ ನಡದೇ ಇರುತ್ತದೆ. ಈ ಸಮಯದಲ್ಲಿ ಕುರಾನ್ ಪಠಣ, ಭಾಷಣ ಕೇಳಬೇಕು; ನಮ್ಮ ಕಡೆಯಲ್ಲಿ ಮದುವೆ ಮಂತ್ರವೋ ಹರಿಕಥೆಯೋ ನೆನಪಾಗುವದು.

ಸಾವಕಾಶವಾಗಿ ರಾತ್ರಿ 10 ಗಂಟೆಗೆ ಸ್ಥಳೀಯ ವರ್ತಕರು ತಮ್ಮ ತಮ್ಮ ಅಂಗಡಿಗಳನ್ನು ತೆಗೆಯುವರು. ಎಷ್ಟೋ ಅಫೀಸುಗಳು ವಾಣಿಜ್ಯ ವ್ಯವಹಾರಗಳು ಸಂಜೆ 9-10ರಿಂದ ನಸುಕಿನ 3ರ ವರೆಗೆ ತೆರದಿರುತ್ತವೆ. ಆಗೆಲ್ಲ ಮನೆಗಳು, ರಸ್ತೆಗಳು ಅಂಗಡಿಗಳನ್ನು ನೋಡಬೇಕು, ಎಲ್ಲ ಬಣ್ಣಗಳ ಲೈಟಿನಲ್ಲಿ ಝಗಝಗಿಸುತ್ತವೆ. ಇಲ್ಲಿಯ ಶ್ರೀಮಂತ ಅರಬ್ಬಿಗಳು ಪ್ರತಿ ವರ್ಷ ಮನೆಯ ಹಳೆಯ ಸಾಮಾನುಗಳೆಲ್ಲ ಕಸದ ಬುಟ್ಟಿಗೆ ಎಸೆದು ಮತ್ತೆ ಹೊಸ ಹೊಸ ಕಾರ್ಪೆಟ್, ಸೋಫಾಗಳು ಹಾಸಿಗೆಗಳು, ಪರದೆಗಳು ಇತ್ಯಾದಿ ಸಾಕಷ್ಟು ಸಾಮಾನುಗಳನ್ನು ಕೊಂಡುಕೊಳ್ಳುವರು – ನಮ್ಮ ಕಡೆಗೆ
ಯುಗಾದಿಗೊಮ್ಮೆ ಮನೆಯ ಧೂಳು ಹೊಡೆದು ಬಣ್ಣ ಹಚ್ಚಿ ಕೌದಿ ಚೆದ್ದರು ಒಗೆದು ಮಡಿ ಮಾಡಿಕೊಂಡಂತೆ.

ರಾತ್ರಿ 10 ಆಯಿತೆಂದರೆ ಶುರುವಾಯ್ತು-ರಸ್ತೆಯ ಮೇಲೆ ಕಾರುಗಳ ಹರಿದಾಟ ಎಲ್ಲ ಸಂದಿಗೊಂದಿಗಳಿಂದ ಜನ ಹೊರಬೀಳುವರು. ಈ ಒಂದು ತಿಂಗಳ ಹಬ್ಬದಲ್ಲಿ ಸುತ್ತ ಮುತ್ತಲಿನ ಮರುಭೂಮಿಯ ಜನರು (ಬಡುವಿನ್‌ಗಳೇ ಹೆಚ್ಚು) ಪಟ್ಟಣಕ್ಕೆ ಬಂದು ಸೇರಿರುತ್ತಾರೆ. ಇಸ್ಲಾಂ ಧರ್ಮದ ಪ್ರಕಾರ ಈ ಹಬ್ಬದಲ್ಲಿ ಬಡಬಗ್ಗರಿಗ ದಾನ ಮಾಡಬೇಕೆಂಬ ಪದ್ಧತಿ. ನಾವು ಹೋದ ಮೊದಲಿನ 5-6 ವರ್ಷ ಅ ತರಹ ಬಹಳ ನೋಡುತ್ತಿದ್ದೆವು. ಈಗ ಸರಕಾರದ ಕಾಯ್ದೆ ಅನ್ವಯ ಅವರು ಬೇಡುವಂತಿಲ್ಲ. ವಿದೇಶಿ ಜನರಿಂದ ತುಂಬಿರುವ, ದೇಶವಾದುದರಿಂದ ಈ ತರಹ ಸ್ವಜನರೇ ಭಿಕ್ಷೆಬೇಡುವದು ಕಳಂಕವೆಂದು ಭಾವನೆಯಿಂದ ನಿರ್ಣಯ ತೆಗೆದುಕೊಂಡಂತಿದೆ.

ಈ ಸಮಯದಲ್ಲಿ ಪೇಟೆಯಲ್ಲಿ ಸಾಮಾನುಗಳ ಮಹಾಪೂರವೇ ಬಂದು ಬೀಳುವದು. ಬಂಗಾರದ ಆಭರಣಗಳಿಂದ ಹಿಡಿದು ಬಟ್ಟೆ ಬರೆ, ವಿವಿಧ ತಿಂಡಿ ತಿನಿಸು, ಹಣ್ಣುಗಳು ಕಾಯಿಪಲ್ಲೆಗಳು, ಫ್ಯಾನ್ಸಿ ದಿನಸಿಗಳು ಅಬ್ಬ ನೋಡಿದ್ದೆಲ್ಲ ಖರೀದಿಸುವಂತೆನಿ ಸುತ್ತದೆ. ಇಲ್ಲಿಯವರಲ್ಲ ಹಬ್ಬಕ್ಕೆಂದು ಹೊಸ ಬಟ್ಟೆಗಳು- ಬಂಗಾರ ಆಭರಣಗಳು ಕೂಡಿಸಿಕೊಳ್ಳಲು ಓಡಾಡುವರು. ಎಷ್ಟೋ ಬೆಲೆಯುಳ್ಳ ವಸ್ತುಗಳಿಗೆ ರಿಯಾಯಿತಿ ಕೂಡಾ ಇರುತ್ತದೆ.  ದೊಡ್ಡ ಅಕ್ಷರಗಳಲ್ಲಿ ಸೇಲ್ ಸೇಲ್ ಎಂದು ಬರೆದು ಜನರನ್ನು ಆಕರ್ಷಿಸಿ ಸಾಮಾನು ಮಾರುವ ಅಂಗಡಿಗಳು ಸಾಕಷ್ಟು. ಈ ಹಬ್ಬದಲ್ಲಿ ಇವರು ಹಣಕ್ಕೆ
ಚಿಂತೆಮಾಡುವುದಿಲ್ಲವೆಂದೆನಿಸಿತು. ನೋಡಿದ್ದೆಲ್ಲ ಕೊಂಡುಕೊಳ್ಳುವದೇ, ಈಗ ಪೇಟೆಯಲ್ಲಿ ಒಳ್ಳೆಯ ಖರ್ಜೂರ ಹಾಗೂ ನೂರಾರು ಬಗೆಯ ಹಣ್ಣುಗಳನ್ನು ನೋಡುವಾಗ ಬಾಯಿ ನೀರೂರುತ್ತದೆ. ಅಂತಹ ತುಟ್ಟಿಯೂ ಇರುವುದಿಲ್ಲ. ಇಲ್ಲಿಯ ಹಣಕ್ಕೆ ಹೊಂದುವಂತೆಯೇ ಸಿಗುವವು. ಸೂಪರ್ ಮಾರ್ಕೆಟ್ಟಗಳಲ್ಲಿಯಂತೂ ಬೇಕಾದದ್ದೆಲ್ಲ ತುಂಬಿರುತ್ತದೆ.
ಸೌದಿಗಳು ಟ್ರಾಲಿ ತುಂಬೇ ತುಂಬುತ್ತಾರೆ. ಇವರು ತಿನ್ನುವದರಲ್ಲಿ ಜಾಣರು. ವ್ಯಾಯಾಮ ಬೇಡ, ಗಂಡಸರೂ, ಹೆಂಗಸರೂ ಸಿಕ್ಕಾಪಟ್ಟೆ ಮೈ ಬೆಳೆಸಿಕೊಂಡು ನಡೆಯಲಿಕ್ಕೆ ಕೂಡಾ ಸರಿಯಾಗಿ ಬಾರದಂತಿರುತ್ತಾರೆ. ಸಣ್ಣ ಹುಡುಗರೂ ಅಷ್ಟೇ. ಡಂ ಡಂ ಆಗಿರುತ್ತವೆ. ಪೂರ್ತಿ ಬುರಕಾ ಹಾಕಿ ನಡೆಯುವ ಇಲ್ಲಿಯ ಮಹಿಳೆಯರ ಗುಂಪಂತೂ ಪೆಂಗ್ವಿನ್ ದಂಡಿನಂತೆನಿಸುವದು. ಆ ತರಹ ಈ ಕಡೆ ಆ ಕಡೆ ಅಲಗಾಡುತ್ತ ನಿಧಾನವಾಗಿ ಮಕ್ಕಳು ಮೊಮ್ಮಕ್ಕಳನ್ನು ಎಳದಾಡಿಕೊಂಡು ನಡೆಯುವರು. ಇತ್ತೀಚಿಗಂತೂ ಇವರ ಶ್ರೀಮಂತಿಗೆ ಹೆಚ್ಚಾಗಿದೆಯಲ್ಲ; ಮನೆ ಕೆಲಸಕ್ಕೆ ಫಿಲಿಫೈನ್ ಶ್ರೀಲಂಕದ ಹುಡುಗಿಯರನ್ನು ಇಟ್ಟುಕೊಂಡು  ಕೆಲಸ ತೆಗೆದುಕೊಳ್ಳುವರು. ಸಿಹಿಯಂತೂ ಸೌದಿಗಳು ತಿಂದೇ ತಿನ್ನುತ್ತಾರೆ. ಬಹಳಷ್ಟು ಜನರಿಗೆ ಸಿಹಿ ಕೊಬ್ಬುಗಳಿಂದಾಗುವ ಹಾನಿ ಗೊತ್ತಿಲ್ಲ.

ದಿನನಿತ್ಯ ಸಂಜೆ ನಡೆಯುವ ಭಾರತೀಯರ ಹಾಗೂ ಪಾಕಿಸ್ತಾನಿಗಳ (ಮುಸ್ಲೀಂರ) ಪಾರ್ಟಿಗಳು ನೋಡುವಂತಿರುತ್ತವೆ. ಹೈದರಾಬಾದ್‌-ಮಂಗಳೂರು-ಬೆಂಗಳೂರು ಸ್ನೇಹಿತರು  ಪಾರ್ಟಿಗೆ ಕರೆಯುವರು. ಗ್ಯ್ರಾಂಡ್ ಆಗಿ ಊಟ-ತಿಂಡಿ ಅಗುತ್ತವೆ. ನಂತರ ಅವರವರದೇ ಮುಶಾಯರ್‌ ಓದುವುದು. ಹಾಡುವುದು ಮಾಡುತ್ತ ಬೆಳಗಿನ
3-4 ಮಾಡಿಯೇ ಬಿಡುತ್ತಿದ್ದರು. ಉರ್ದು ಬರದ ನಮಗೆ ಅದರರ್ಥ ಏನೂ. ಆಗುತ್ತಿರಲಿಲ್ಲ. ಕೇವಲ ‘ವ್ಹಾ ವ್ಹಾ’ ಎನ್ನುವದಾಗಲೀ ಅಥವಾ ಅವರಂದದ್ದೆ ಮತ್ತೊಬ್ಬರು  ಪುನರಾವರ್ತನೆ ಮಾಡುವುದಾಗಲೀ ನೋಡಿ ಅಷ್ಟೇ ಖುಷಿ ಪಟ್ಟು ಹುಡುಗರ ನೆಪ ಹೇಳಿ ಬಂದುಬಿಡುತ್ತಿದ್ದೆವು.

ರಮಜಾನದ ರಾತ್ರಿಗಳೆಲ್ಲ ಜಾತ್ರೆಯಂತೆಯೇ. ಅಂಗಡಿಗಳ ಮುಂದೆ ಮತ್ತೊಂದು ಎಕ್ಸ್‌ಟ್ರಾಸ್ಟಾಲ್‌ಗಳನ್ನು ಹಾಕಿ ನೂರಾರು ಬಗೆಯ ಚಾಕಲೇಟ್‌ಗಳನ್ನು ಹರವಿರುತ್ತಾರೆ. ಅದರಂತೆ ಸುವಾಸಿ ದ್ರವ್ಯಗಳ ಬಾಟಲಿಗಳು, ಉಡುಗೊರೆ ವಸ್ತುಗಳು ನೂರಾರು ತುಂಬಿ ತುಳುಕುವವು.

ರಮದಾನ್‌ದ ಕೊನೆಯ ದಿನ ಪ್ರಸಾರಿಸಿದ ನಂತರ ಎಲ್ಲರಿಗೆ ಖುಷಿಯೋ ಖುಷಿ. ಮರುದಿನ ಸುವಾಸಿ ದ್ರವ್ಯಗಳಿಂದ ಸ್ನಾನ ಮಾಡಿ ಹೊಸಬಟ್ಟೆಗಳು ತೊಟ್ಟು ನಮಾಜ ಮಾಡಲು ಮಸೀದಿಗೆ ಹೊರಡುವರು. ಅಂದು ಕೂಡಾ ಭಾರೀ ಭೋಜನ ಕುರಿಯೋ ಒಂಟೆಯೋ ಬೀಳಲೇಬೇಕು. ಕೋಳಿ ಇಲ್ಲಿ ಮಾಮೂಲು.

ನಂತರ ಮೂರು ದಿನಗಳವರೆಗೆ ಎಲ್ಲೆಡೆಗೆ ರಜ. ಅಂಗಡಿ – ಅಫೀಸುಗಳು, ಏನೆಲ್ಲ ಕೆಲಸ ನಿಂತುಬಿಡುವವು. ಉಳಿದ ತಿಂಡಿ ತೀರ್ಥ ಕಟ್ಟಿಕೊಂಡು ಮುಸ್ಲೀಂ ಕುಟುಂಬವೆಲ್ಲ ಪಿಕ್‌ನಿಕ್ ಮಾಡುವರು. ಸಂಬಂಧಿಗಳನ್ನು ಭೆಟ್ಟಿಯಾಗುವರು. ಆದರೆ ಉಳಿದವರು? ಬೇಕಿದ್ದರೆ ಆರಾಮವಾಗಿ ನಿದ್ದೆ ಮಾಡಬಹುದು. ಇಲ್ಲದಿದ್ಧರೆ ಬೀಚ್ ಕಡೆಗೊಡಿ ಸ್ನೇಹಿತರ ಮನೆಗಳಿಗೊ, ಅದೂ ಬೇಡವಾಗಿದ್ದರೆ ಒಂದಷ್ಟು ಒಳ್ಳೆಯ ಕ್ಯಾಸೆಟ್ಸ್  ಸಂಗ್ರಹಿಸಿಕೊಂಡು ಕಾರ್ಯಕ್ರಮಗಳನ್ನು ನೋಡುತ್ತ ಕಳೆಯಬಹುದು. ಇದೂ ಬೇಡವಾದರೆ ಸಮಾಧಾನವಾಗಿ ಮನೆಯ ಸಾಮಾನುಗಳು ಕೈತೋಟಗಳನ್ನು ಸ್ವಚ್ಛಮಾಡಿ ನೀಟಾಗಿ ಇಡಬಹುದು. ಅದೆಲ್ಲ ಅವರವರ ಅನುಕೂಲ.

ಮನೆಗೆ ಬೇಕಾದ ಸಾಮಾನು ತರಲಿಕ್ಕೆ ನಾವೂ ಆಗಾಗ ರಾತ್ರಿ 10ರ ಸುಮಾರಿಗೆ ಹುಡುಗರನ್ನು ಮಲಗಿಸಿ ಹೊರಡುತ್ತಿದ್ದೆವು. ಮಕ್ಕಳಿಬ್ಬರೂ ಬ್ರಿಟೀಷ್‌ ಸ್ಕೂಲ್‌ಗೆ ಹೋಗುತ್ತಿರುವದರಿಂದ ಮರುದಿನ ಬೆಳಿಗ್ಗೆ ಸ್ಕೂಲ್‌ಗೆ ಇಬ್ಬರೂ 7-30ಕ್ಕೆ ಮನೆ ಬಿಡಲೇ ಬೆಆಕಾಗುತ್ತಿತ್ತು. ಬೇರೆ ಬೇರೆ ದೇಶಗಳ ಶಾಲೆಗಳೆಲ್ಲ ತಮ್ಮ ಮೊದಲಿನ ಸಮಯದ
ಪ್ರಕಾರದರಿತೆಯೇಶಾಲೆ ನಡೆಸುವವು. ನಾವು ಪೇಟೆಯಿಲದ ಮರಳಿ ಮನೆಗೆ ಬರುವಾಗ 1-2 ಗಂಟೆ ಅಗಿಯೇಬಿಡುತ್ತಿತ್ತು. ಮರುದಿನ ಮೈ ಎಲ್ಲ ಜಡ. ನೆಮ್ಮದಿ ಅನಿಸುವದಿಲ್ಲ. ಅದರೆ ಈ ಉಪವಾಸಿಗಳು ರಾತ್ರಿ ಇಡೀ ಎಚ್ಚರಎದ್ದು ಉಣ್ಣುವದು ಮಲಗುವದು ಮತ್ತೆ ಎದ್ದು ಬೆಳಗಿನ ಜಾವ ಊಟ ಮಾಡುವದು ಹೇಗೆ ಹೊಂದಿಕೊಳ್ಳುತ್ತಾರೋ ಏನೋ ಎಂದು ಎಷ್ಟೋಸಲ ಅನಿಸದೇ ಇರಲಿಲ್ಲ.

ಇದರಂತೆ “ಬಕ್ರಿದ್” ಹಬ್ಬ ಕೂಡಾ ಸಡಗರದ್ದೇ ನಮ್ಮ ಕಡಗೆ ಬಕ್ರಿದ್ ಎಂದು ಆಚರಿಸುವ ಹಬ್ಬವೇ ಇಲ್ಲಿ “ಈದುದ್ದೋಹಾ’ (ಈದ್‌-ಆಲ್-ದೊಹಾ) ಎಂದು ಕರೆಯುವರು. ಈ ಸಮಯದಲ್ಲಿ ಜಗತ್ತಿನ ಮುಸ್ಲಿಂ ಭಕ್ತರು (ಹಣ ಇದ್ದವರು) ಸಾಧ್ಯತೆ ಮಾಡಿಕಕೊಂಡು ಮಕ್ಕಾಗೇ ಬಂದು ತಮ್ಮ ವಿಧಿವಿಧಾನ ತೀರಿಸಿ ಹಾಜ್ ಅಥವಾ ಹಾಜಿ
ಗಳೆಂದಾಗಿ ಮರಳುವರು. ಇದೇ ಹಾಜ್‌ಯಾತ್ರೆ. 6ನೆಯ ಶತಮಾದಲ್ಲಿ ಇಸ್ಲಾಂ ಧರ್ಮದ ಪ್ರವರ್ತಕರಾದ ಮಹಮ್ಮದ್ ಪೈಗಂಬರರ  ಸ್ಥಳ ಇದು. ಇಲ್ಲಿಂದಲೇ ತಮ್ಮ ಅನುಯಾಯಿಗಳೊಂದಿಗೆ ಧರ್ಮಪ್ರಸಾರ ಕೈಗೊಂಡರೆಂದು ಪ್ರತೀತಿ. ಇಲ್ಲಿ ಅವರ ಮಸೀದಿ  ಅದಕ್ಕೆ ಅರಬ್ಬದಲ್ಲಿ ‘ಕಾಬಾ’ ಎಂದು ಕರೆಯುವರು. ಕಾಬಾ
ಎಂದರೆ ದೇವರ ಮನೆ ಎಂದರ್ಥ ಹೀಗಾಗಿ ಮುಸ್ಲಿಂಮರು ಜಗತ್ತಿನ ಯಾವುದೇ ಮೂಲೆಗಿರಲಿ, ಅವರು ಮಕ್ಕಾದೆಡೆಗೆ ಮುಖ ತಿರುಗಿಸಿ ದಿನಾಲೂ 5 ಸಲ ನಮಾಜ ಮಾಡುವರು.

ಈ ‘ಕಾಬಾ’ಕ್ಕೆ ಕಪ್ಪು ಸ್ಯಾಟಿನ್ ಬಟ್ಟೆಯಿಂದ ಚೌಕಾಕಾರದಲ್ಲಿ ಹೊದೆಸಿದ್ದಾರೆ ಈ ಬಟ್ಟೆ ಮೇಲೆಲ್ಲ ಅರಬ್ಬಿಯಲ್ಲಿ ಬರೆದ ಕುರಾನ ಪಂಕ್ತಿಗಳಿವೆ. ಮೊದ ಮೊದಲು ಇಜಿಪ್ತದ ಕೈರೊಂದಿಂದ ಈ ಕರಕುಶಲತೆಯ  ತರುತ್ತಿದ್ದರಂತೆ. ಅದರೆ ಇತ್ತೀಚೆಗೆ
ಸ್ಥಳೀಯರೇ ತಯಾರಿಸುತ್ತಿದ್ದಾರೆ. ಮುಸ್ಲಿಂರಲ್ಲದವರಿಗೆ ಮಕ್ಕಾದಲ್ಲಿ ಪ್ರವೇಶವಿಲ್ಲ. ಹೀಗಾಗಿ ನಮಗೆ ಸಮೀಪದಿಂದ ನೋಡಲು ಸಾಧ್ಯವಾಗಲಿಲ್ಲ. ಟಿ.ವಿ. ಮಾಧ್ಯಮದಲ್ಲಿ ಅತಿ ಸ್ಪಷ್ಟವಾಗಿ ಅಲ್ಲಿಯ ಧಾರ್ಮಿಕ ವಿಧಿವಿಧಾನಗಳೆಲ್ಲ ಬಿತ್ತರಿಸುತ್ತಾರೆ.

ಮಕ್ಕಾಯಾತ್ರೆ ಕೈಗೊಳ್ಳುವದರಲ್ಲಿ ಎರಡು ವಿಧಾನಗಳಿವೆ. ‘ಉಮ್ರಾ’ ಎನ್ನುವ ಅರ್ಥದಲ್ಲಿ ಯಾತ್ರಿಕರು ವರ್ಷದ ಯಾವುದೇ ಸಮಯದಲ್ಲಿ ಬಂದು ಮಕ್ಕಾ ಮದೀನಕ್ಕೆ ಭೇಟಿಕೊಟ್ಟು ವಿಧಿವಿಧಾನಗಳನ್ನು ಮುಗಿಸಿಕೊಂಡು ಹೋಗುವರು. ನಂತರ ‘ಹಾಜ್’ ಎನ್ನುವ ಅರ್ಥದಲ್ಲಿ ಯಾತ್ರಿಕರು ವರ್ಷಕ್ಕೊಮ್ಮೆ ಬರುವ ಬಕ್ರೀದ್ ಹಬ್ಬದಲ್ಲಿ ಬಂದು
ಸಾಂಪ್ರದಾಯಕ ಪದ್ಧತಿಗಳನ್ನು ಮಾಡುವರು.

ಈ ಬಕ್ರಿದ್ ಹಬ್ಬವು ಮುಸ್ಲೀಂ ಸಂವತ್ಸರದ ಕಡೆಯ ತಿಂಗಳಾದ ‘ಜಿಲ್‌ಹಜ್’ದ ಹತ್ತನೆಯ ತಾರೀಖಿನಂದು ಬರುವದು. ಅಂದು ಜಗತ್ತಿನ ಮುಸ್ಲೀಂ ಸಮುದಾಯಕ್ಕೆಲ್ಲ ಸಂಭ್ರಮದ ಹಬ್ಬ.

‘ಅಲ್ಲಾನ’ ಸ್ಹೇಹಿತನಾದ ಪ್ರವಾದಿ ಹಜರತ್ ಇಬ್ರಾಹೀಮ್ ತನ್ನ ಮಗ ಇಸ್ಮಾಯಿಲ್‌ನನ್ನು ಮಕ್ಕಾದಲ್ಲಿ ಬಲಿಕೊಡಲು ನಿಶ್ಚಯಿಸಿದ್ದರಂತೆ. ಬಲಿದಾನ ಪವಿತ್ರ ಕೆಲಸ ಎಂದು ತಿಳಿದು ನಂಬಿದ್ದರೂ ಇಬ್ರಾಹೀಂ ಕೊನೆಯ ಗಳಿಗೆಯಲ್ಲಿ ಅನುಕಂಪಿಸಿದಾಗ ಮಗ ಇಸ್ಮಾಯಿಲ್ ಧೈರ್ಯ ಕೊಟ್ಟನಂತೆ. ನಂತರ ಇಬಾಸ್ಸೂಹೀಂ ತನ್ನ ಪವಿತ್ರ ಕಾರ್ಯ
ನೆರವೇರಿಸಲು ಕತ್ತಿ ಮೇಲೆತ್ತುತ್ತಿದ್ದಂತೆಯೇ ಅಲ್ಲಾ ತನ್ನ ದೇವದೂತರನ್ನು ಕಳಿಸಿದರಂತೆ. ಹೀಗೂ ಆ ದೇವದೂತನು ಇಬ್ರಾಹೀಂ ಎತ್ತಿದ ಕತ್ತಿಯನ್ನು ಸರಿಸಿ ಇಸ್ಮಾಯಲ್‌ನನ್ನೂ ಸರಿಸಿ ಆ ಸ್ಥಳದಲ್ಲಿ ಒಂದು ಅಡನ್ನು ಮಲಗಿಸಿ ಇದನ್ನು ಬಲಿಕೊಡಿರಿ ಎಂದನಂತೆ. ಶ್ರದ್ಧೆ, ನಂಬಿಕೆಯಿಂದ ಏನೆಲ್ಲ ಪಡೆಯಬಹುದೆನ್ನುವ ನಂಬಿಕೆ ಇವರದು. ಹೀಗಾಗಿ ಆ
ನಂಬಿಕೆಯಿಂದ ಮುಂದೆ ಪ್ರತಿ ವರ್ಷವೂ ಆಡನ್ನು ಅಥವಾ ಒಂಟೆಯನ್ನು ಬಲಿಕೊಡುವ ಸಂಪ್ರದಾಯ ಶುರುಮಾಡಿದರು. ಕೆಲವು ಬೇರೆ ಬೇರೆ ಅರಬ್ ನಾಡುಗಳಲ್ಲಿ ಒಂಟೆಯನ್ನೂ ಬಲಿಕೊಡುವರು.

ಹೀಗಾಗಿ ಇಬ್ರಾಹೀಂನ ಭಕ್ತಿ ಇಸ್ಮಾಯಿಲ್‌ನ ಧೈರ್ಯಗಳನ್ನು ಮೆಚ್ಚಿ ಕೊನೆಯ ಪ್ರವಾದಿಯಾದ ಮಹಮ್ಮದ ಪೈಗಂಬರರು ಎಲ್ಲ ಅನುಯಾಯಿಗಳಿಗೆ ಇವರ ನೆನಪಿ ಗೋಸ್ಕರ ಹಬ್ಬ ಆಚರಿಸಲು ಹೇಳಿದರು. ಈ ತರಹದ ಬಲಿದಾನದಿಂದ ಮನುಷ್ಯನಲ್ಲಿ ಭಯ ಭಕ್ತಿಗಳ ಭಾವನೆಗಳು ಜಾಗ್ರತಗೊಳ್ಳಲಿ ಎಂದು ಬಕ್ರೀದ್ ಆಚರಿಸುವರು.
ನಮಗೆಲ್ಲಾ ಲಕ್ಷಾನುಲಕ್ಷ ಪ್ರಾಣಿಗಳವಧೆಯಲ್ಲಾ ಎಂದು ಚಿಂತೆ.

ಈ ಹಬ್ಬದಲ್ಲಿ ಜಗತ್ತಿನ ಎಲ್ಲ ದೇಶಗಳಿಂದ ಬರುವ ಲಕ್ಷಾನುಗಟ್ಟಲೇ ಜನರು ಹಡಗು ವಿಮಾನಗಳ ಮೂಲಕ ಪ್ರವಾಸ ಕೃಗೊಳ್ಳುವರು. ಈ ತಿಂಗಳಲ್ಲಿ ಜಿಡ್ಡಾದ ಹಡಗು ಬಂದರು ಹಾಗೂ ವಿಮಾನ ನಿಲ್ದಾಣಗಳು ಯಾತ್ರಿಕರಿಂದ ಗಿಜ
ಗುಡುತ್ತಿರುತ್ತವೆ. ಸೌದಿ ಸರಕಾರ ಇತ್ತೀಚಿಗೆ ಸಾಕಷ್ಟು ವ್ಯವಸ್ಥೆ ಮಾಡಿದೆ. ಇನ್ನೂ ಮಾಡುತ್ತಲೂ ಇದೆ.

ಹಜ್ ಸಂಪ್ರದಾಯಗಳಿಗೆ ಬೇಕಾಗುವ ಎಲ್ಲ ಎಲ್ಲ ಅನುಕೂಲತೆಗಳನ್ನು ಮಾಡಿ ದ್ದಾರೆ. ಬಲಿಗಾಗಿ ಬೇಕಾಗುವ ಕುರಿಗಳನ್ನು ತುಂಬಿದ ಹಡಗುಗಳು ಹೊರದೇಶಗಳಿಂದ ಬರುತ್ತವೆ. ಆ ದಿನ ಮಕ್ಕಾದಿಂದ ಸ್ವಲ್ಫ ದೂರದಲ್ಲಿರುವ ‘ಮೀನಾ’ ಎಂಬ ಸ್ಥಳದಲ್ಲಿ ಈ ಬಲಿದಾನಗಳು, ಶುರುವಾಗುತ್ತವೆ. ರಕ್ತ-ಮಾಂಸಗಳು ಹರಿಯುತ್ತವಂತೆ. ನಮ್ಮ
ಬೆಂಗಳೂರು ಮುಸ್ಲೀಂ ಸ್ನೇಹಿತರು ಅಲ್ಲಿ ನಡೆಯುವದೆಲ್ಲ ಹೇಳುವರು. ಬಲಿಯ ಮಾಂಸ ಹಾಗೇ ಒಗೆಯುವದಕ್ಕಿಂತ ಇತ್ತೀಚಿನ 6-7 ವರ್ಷಗಳಲ್ಲಿ ಹಚ್ ಯಾತ್ರಿ ವಿಮಾನುಗಳ ಮೂಲಕ ಅಂದಿನದಂದೇ ಅತೀ ಬಡದೇಶಗಳಾದ ಅಫ್ರಿಕ, ಸುಡಾನ್, ಸೋಮಾಲಿ, ಹಾಗೂ ಬಂಗ್ಲಾದೇಶ-ಪಾಕಿಸ್ತಾನಗಳಿಗೆ ಪುಕ್ಕಟೆಯಾಗಿ ಸಾಕಷ್ಟು ಲೋಡ್ ತುಂಬಿ
ಕಳಿಸುತ್ತಾರೆ. ಈ ಬಡದೇಶಗಳಿಗೆ ಹಬ್ಬವೊ ಹಬ್ಬ. ಯಾತ್ರೀ ವಿಮಾನಗಳು ಬಲಿಮಾಂಸ ಪವಿತ್ರ ಮಾಂಸ ತುಂಬಿಕೊಂಡು ಬರುತ್ತಿವೆಯೆಂದರೆ ಅದರ ಖುಷಿ ಆ ಜನರಿಗೇ ಗೊತ್ತು ಎನೆಲ್ಲ ದೇವರಿಚ್ಛೆ.

ಮಕ್ಕಾ ಯಾತ್ರೆಗೆ ಬಂದವರು ಮುಂದೆ, ಮದೀನಾದಲ್ಲಿರುವ ಪೈಗಂಬರರ ಸಮಾಧಿಗೆ ಭೆಟ್ಟಿಕೊಡುವರು. ಅಲ್ಲಿಯೂ ದೊಡ್ಡ ದೊಡ್ಡ ಮಸೀದಿಗಳಿವೆ. ಬಹಳ ಬೇಸಿಗೆಯ ದಿನಗಳಲ್ಲಿಯೇ ಹಜ್ ಬರುವದರಿಂದ ವಯಸ್ಸಾದ ಯಾತ್ರಿಕರು ತತ್ತರಿಸಿ ಹೋಗುವರು. ಅಂತಹವರಿಗೆ ಮಕ್ಕಾದಲ್ಲಿ ಮಸೀದಿ ಸುತ್ತಾಡಲು ಅಗದಿದ್ದರೆ ಖುರ್ಚಿಗಳ
ಮೇಲೆ ಕುಳ್ಳಿರಿಸಿ ಇಬ್ಬರು ಧಡೂತಿ ವ್ಯಕ್ತಿಗಳು ಹೊತ್ತುಕೊಂಡು ಸುತ್ತಾಡಿಸುತ್ತಾರೆ.

ಈ ಹಬ್ಬದಲ್ಲಿ ಬೇರೆ ಬೇರೆ ದೇಶಗಳ ಪ್ರಮುಖ ವ್ಯಕ್ತಿಗಳು ಬಂದಿರುತ್ತಾರೆ. ಆದರೆ ಅಲ್ಲಿ ಯಾರೂ ಭೇದ ಭಾವ ಇಲ್ಲದೆ ಬಿಳಿಯ ಪಂಚೆ ಸೊಂಟಕ್ಕೆ, ಹಾಗೂ ಹೆಗಲ ಮೇಲೆ ಮತ್ತೊಂದು ಬಿಳಿಯ ಬಟ್ಟೆ ಹಾಕಿಕೊಂಡು ಶ್ರದ್ದೆ, ಭಕ್ತಿಯಿಂದ ಪ್ರಾರ್ಥಿಸುವರು. ಹೆಂಗಸರು-ಗಂಡಸರು ಎಂದು ವಿಂಗಡಿಸದೇ ಎಲ್ಲರಿಗೂ .ಮಕ್ಕಾದ ಕಾಬಾವರೆಗೆ ಹೋಗಲು ಅವಕಾಶವಿದ್ದು ಕಾಬಾ ಹಾಗೂ ಪಕ್ಕದಲ್ಲಿರುವ ಕಪ್ಪು ಶಿಲೆ (ಈ ಕಪ್ಪು ಶಿಲೆ ಸ್ವತಃ ದೇವರೇ ತಂದಿಟ್ಟಿದ್ದಾನೆಂದು ನಂಬಿಕೆ)ಯನ್ನು ಮುಟ್ಟುತ್ತಾ ಕಾಬಾ ವನ್ನು ಎಡಗಡೆಯಿಂದ ಏಳುಸಲ ಸುತ್ತುಹಾಕುವರು. ಮೊದಲಿನ ಮೂರು ‘ಸುತ್ತು ಜೋರಾಗಿ ನಂತರ ನಿಧಾನವಾಗಿ ಮಾಡುತ್ತ ಸರಿಯುವರು. ಈ ಕಪ್ಪು ಶಿಲೆಯ ಹತ್ತಿರ ಅದೆಷ್ಟು ಗದ್ದಲವೆಂದರೆ ಪೋಲಿಸರು ಅವರನ್ನು ಸರಿಸುತ್ತಿರುತ್ತಾರೆ.

ಈ ಕಪ್ಪು ಶಿಲೆಯನ್ನು ಪ್ರತಿಯೊಬ್ಬರೂ ಮುಟ್ಟಿ-ಮುದ್ದಿಸುವದೊಂದು ಪದ್ಧತಿ. ಯಾಕೆಂದರೆ ಮಹಮ್ಮದ ಪೈಗಂಬರರು-ಹಜರತ್ ಇಬ್ಬಾಹೀಂರು ಭಕ್ತಿಯಿಂದ ಮುಟ್ಟಿ ಮುದ್ದಿಸುತ್ತಿದ್ದರಂತೆ. ಅದಕ್ಕೆ ತಾವು ಮುಟ್ಟಿ-ಮುದ್ದಿಸುವದರಿಂದ ಪ್ರವಾದಿಗಳಲ್ಲಿರುವ ಸ್ಥೈರ್ಯತಮ್ಮಲ್ಲೂ ಬೆಳೆಯುತ್ತದೆ ಎಂಬ ಭಾವನೆ.

ಮಕ್ಕಾ-ಮದೀನಾಗಳೆಲ್ಲ ಜಾತ್ರೆಯಂತೆ ಝಗಝಗಿಸುತ್ತವೆ. ಸುತ್ತಮುತ್ತಲ ಪಟ್ಟಣಗಳೆಲ್ಲ ಜಗತ್ತಿನ ಫ್ಯಾನ್ಸಿ ಸಾಮಾನುಗಳಿಂದ ತುಣಬಿರುತ್ತವೆ. ಹಜ್ ಆದ ನಂತರ ಜನರು ಷಾಪಿಂಗ್ ಮಾಡಲು ಶುರುಮಾಡುವರು. ಸಂತೆ, ಸಂತೆ, ಸಂತೆ ಬ್ಯಾಗ್‌ಗಳನ್ನು ತುಂಬಿಕೊಂಡು ಖುಷಿಯಾಗಿ ಜನ ಹಾಜಿಗಳಾಗಿ ತಾಯ್ನಾಡಿಗೆ ಮರುಳುವರು.

ನಾವಿರುವ ಕ್ಯಾಂಪಸ್ಸಿನಲ್ಲಿ ಆಚರಿಸುವ ಕ್ರಿಶ್ಚಿಯನ್ನರಸ್ಸೂ ಹಬ್ಬಗಳ ಕಳೆಯೇ ಬೇರೆ. “ಈಸ್ಟರ್‌ಡೇ”  ಬಂದರೆ ಸಾಕು, ಹುಡುಗರು ಕುಣಿದು ಕುಪ್ಪಳಿಸುವವು. ಮಾರ್ಚ್ ಕೊನೆಗೆ ಬರುವ ಈ ಹಬ್ಬ ಜೀಸಸ್ ದೇವರು ಪುನಃ ಜನ್ಮ ತಳೆದು
ಬಂದನೆಂದು ಖುಷಿ.  ಆ ದಿನ ಅವರು ಮಾಡುವ ತಿಂಡಿಗಳೆಲ್ಲ ಗುಂಡಗೆ ಅಥವಾ ಮೊಟ್ಟೆ. ಆಕಾರದಲ್ಲಿರುತ್ತವೆ. ಜಗತ್ತಿನ ಪ್ರತಿ ಅಣುವೆಲ್ಲ ಮೊಟ್ಟೆಯಾಕಾರದಲ್ಲಿದೆ ಎಂದು ನಂಬಿದವರು ಇವರು. ಈ ನಂಬಿಕೆಯ ಮೇರೆಗೆ ಈಸ್ಟರ ದಿನದಂದು ಮೊಟ್ಟೆಯಾಕಾರದ ವಸ್ತುಗಳ ಪ್ರಾಮುಖ್ಯತೆ ಬಹಳ. ಸೂಪರ್ ಸ್ಟೋರ್‌ಗಳಲ್ಲಿ ‘ಈಸ್ಟರ ಬನಿ’ಗಳ ಗುಂಪು ತುಂಬಿರುತ್ತವೆ. ಮೊಲಕ್ಕೆ ಪ್ರೀತಿಯಿಂದ ಬನಿ ಎಂದು ಕರೆಯುವರು. ಈ ಮೊಲಗಳನ್ನು ನೋಡುವದೇ ಹುಡುಗರಿಗೆ ಖುಷಿ. ಕೊಂಡು ಕೊಳ್ಳುವಲ್ಲಿಯಂತೂ ತಾಯಿ ತಂದೆಯರ ಜೀವ ತಿನ್ನುತ್ತವೆ. ಇದರಂತೆ ಚಾಕಲೇಟು, ಕೇಕ್‌ಗಳು ಮೊಲದ ಆಕಾರ ಅಥವಾ ಆಕಾದದಲ್ಲಿಯೇ ಹೊಂದಿಸಿಟ್ಟಿರುತ್ತಾರೆ. ಆ ದಿನ ಶಾಲೆಗಳಲ್ಲಿಯಂತೂ ಹುಡುಗರಿಗೆ ಖುಷಿಯೋ ಖುಷಿ.

ನಮ್ಮ ಮಗನ ಶಾಲೆಯಲ್ಲಿ ಆ ದಿನ ಬೇಯಿಸಿದ ತತ್ತಿಗೆ ವಿವಿಧ ಬಣ್ಣಗಳನ್ನು ಕೊಟ್ಟು ಚಿತ್ರ ತೆಗೆದು ಮಕಮಲ್ಲಿನಂತಿರುವ ಜಾಳಿಗೆ ಬಟ್ಟೆಯಲ್ಲಿ ಸುತ್ತಿ ಕ್ಲಾಸಿನಲ್ಲಿ ಅಲ್ಲಲ್ಲಿ ಮುಚ್ಚಿಡುತ್ತಾರೆ. ಹುಡುಗರು ಅವನ್ನೆಲ್ಲ ಹುಡುಕಿ ತೆಗೆಯಬೇಕು. ನಂತರ
ಅವುಗಳನ್ನೇ ಹುಡುಗರಿಗೆ ಉಡುಗೊರೆಯಾಗಿ ಕೊಡುತ್ತಾರೆ. ನಮಗೂ ಇದು ಹೊಸದೇ. ನಾವೂ ಚಾಕಲೇಟು-ಈಸ್ಟರ್ ಬನಿ ಹುಡುಗರಿಗೆ ಕೊಡಿಸಿ ಅವರ ಖುಷಿಯಲ್ಲಿ ಪಾಲಾಗುತ್ತಿದ್ದವು.

ಇದರಂತೆ ‘ಹ್ಯಾಲೋವಿನ್ ಹಬ್ಬ’ ಅಕ್ಟೋಬರ್ ಕೊನೆಗೆ ಬರುತ್ತದೆ. ಚಳಿ ಆರಂಭವಾಗುವ ದಿನಗಳು, ನಿಸರ್ಗ ಸೌಂದರ್ಯ ತನ್ನ ಪ್ರಭಾವ ಹೊರ ಹೊಮ್ಮಿಕ್ಕ ತೊಡಗುವ ಸಮಯ. ಅಯರ್ಲ್ಂಡ್ ರೈತರು ಸುಗ್ಗಿ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವ ದಿನಗಳೆಂದು ಹೇಳುವರು. ಈ ಹ್ಯಾಲೋವಿನ್ ಹಬ್ಬದ ಅಕರ್ಷಣೆಯೇ ಬೇರೆ. ಭೂತ – ಪ್ರೇತಗಳ ಮನೆಯ ಹಾಗೆ ಕುಂಬಳಕಾಯಿ ಕೊರೆದು ಉಳಿದೆಲ್ಲ ಭಾಗ ಟೊಳ್ಳುಮಾಡಿ ಒಳಗಡೆ ಮೇಣದ ಬತ್ತಿಯನ್ನು ಇಡುವರು. ರಾತ್ರಿ ವೇಳೆಯಲ್ಲಿ ನಾವು ಕಾರ್ತಿಕ ಬುಟ್ಟಿ ತೂಗುಹಾಕಿದಂತೆ ಈ ಕುಂಬಳಕಾಯಿ ತೂಗುಹಾಕುವರು. ರಾತ್ರಿ, ಗಾಳಿಗೆ ಮೆಲ್ಲನೆ ಅಲಗಾಡುವದು. ಅದರಂತೆ ರಟ್ಟಿನ ತುಣುಕುಗಳಲ್ಲಿ ಅಸ್ಥಿಪಂಜರ ಮಾಡಿ  ಹಚ್ಚಿ ತೂಗು ಹಾಕುವರು. ಮನೆಯ ಒಳಗಡೆ ಗೋಡೆಯ ಮೇಲ್ಗಡೆ ಮೂಲೆಗಳಲ್ಲೆಲ್ಲ ರೇಶ್ಮೆದಾಠಗಳಿಂದ ಜೇಡರ ಬಲೆ (ಜೂಡ ಬೂಡು) ತಯಾರಿಸುತ್ತಾರೆ. ಮನೆಯ ಒಳಗಡೆ ದೀಪಹಚ್ಚದೆ ಮೇಣಬತ್ತಿ ಉರಿಸುವರು. ನಿಜವಾದ ಭೂತದ ಮನೆ ಸಿಂಗರಿಸುವಲ್ಲಿ
ಸ್ಪರ್ಧೆಗಳಿರುತ್ತವೆ.

ಸಂಜೆಯಾಗುತ್ತಿದ್ಧಂತೆ ದೊಡ್ಡವರು ಸಣ್ಣವರೆನ್ನದೇ ವಿಕಾರವಾದ ಮುಖ ವಾಡಗಳನ್ನು ಧರಿಸಿ ಕರಿಯ ಎಳೆದಾಡುವ ಗೌನುಗಳನ್ನು (ಮೇಲುಡುಗೆ) ಹಾಕಿ ಕೊಂಡು ರಸ್ತೆಗುಂಟ-ಮನೆ-ಮನೆಗಳಿಗೆ ಹೋಗಿ “ಟ್ರಿಕ್ ಆರ್ ಟ್ರೀಟ್’ ಎಂದು ಬಾಗಿಲು ದಬ ದಬ ಬಡೆಯುವರು. ಅ ಸಮಯದಲ್ಲಿ ಮನೆಯವರು ಏನಾದರೂ ಟ್ರಿಕ್ (ಮೋಜು) ಮಾಡಿ ಖುಷಿಗೊಳಿಸಬೇಕು ಅಥವಾ ಅವರಿಗೆ ಚೆನ್ನಾಗಿ ಟ್ರೀಟ್ (ತಿಂಡಿ .ತೀರ್ಥಕೊಟ್ಟು ವ್ಯವಸ್ಥೆ ) ಅದರೂ ಮಾಡಬೇಕು, ಹೆಚ್ಚಾಗಿ ಮಕ್ಕಳೇ ಓಡಾಡುವದರಿರಿದ ತರತರದ ಚಾಕಲೇಟುಗಳು- ಹಣ ಕೊಡಬೇಕಾಗುವುದು, ನಮ್ಮ ಕಡೆಯ ಸಂಕ್ರಾಂತಿಯ ದಿನದಂತೆ ಒಂದು ದೊಡ್ಡ ತಟ್ಟೆಯಲ್ಲಿ ಬೇರೆ ಬೇರೆ ಬಣ್ಣ-ಆಕಾರಗಳನ್ನು ಹೊಂದಿದ ಚಾಕ್‌ಲೇಟ್ ತುಂಬಿಡುತ್ತಿದ್ದೆವು. ನಮ್ಮ ಮಕ್ಕಳು ಅವರ ಕ್ರಿಶ್ಚಿಯನ್ ಗೆಳೆಯ-ಗೆಳತಿಯರೆಲ್ಲ ಒಂದೆಡೆ ಕೂಡಿ ಮುಖಕ್ಕೆ ವಿಚಿತ್ರ ಬಣ್ಣ
ಹಚ್ಚಿಕೊಂಡು ಅಥವಾ ಕಣ್ಣು-ಮೂಗು ಕೊರೆದ ಕುಂಬಳಕಾಯಿಯೋ ಅಥವಾ ಅಸ್ಥಿಪಂಜರದಂತ ಸಿಗುವ ಬಟ್ಟೆಗಳನ್ನೋ ಹಾಕಿಕೆಂಡು ಗುಂಪು ಗುಂಪು ಕಟ್ಟಿಕೊಂಡು ಮನೆ ಮನೆಗೆಲ್ಲ ಓಡಾಡುತ್ತಿದ್ದರು. ನನಗ್ಯಾಕೋ ಇದು ಸರಿ ಅನಿಸುತ್ತಿರಲಿಲ್ಲ. “ಚಾಕ್ಲೇಟ್ ಸಲುವಾಗಿ ಏನೇನೋ ಬಣ್ಣ ಬಡಕೊಂಡು ಮಂದಿ ಮನೆಗೇಕೆ ಹೋಗುತ್ತಿರೆಂದು
ಹುಡುಗರಿಗೆ ನಾನು ಬಯ್ಯುತ್ತಿದ್ದೆ. ‘ನಿಮಗದೆಷ್ಟು ಬೇಕೋ ನಾನು ಕೊಡಿಸಿಕೊಡುತ್ತೇನೆ’ ಎಂದು ಸಿಟ್ಟಿಗೇಳುತ್ತಿದ್ದ. ನಡುವೆ ಗುತ್ತಿಯವರು ಬಂದು’ ಯಾಕಷ್ಟು ಸೀರಿಯಯಸ್ ಆಗಿ ತೆಗೆದುಕೊಳ್ಳುತ್ತೀ, ಇದು ಹುಡುಗರು ಎಂಜಾಯ್ ಮಾಡುವ ಸಮಯ. ನಮ್ಮ ಹುಡುಗರಷ್ಟೇ ಇದ್ದಾರೇನು? ಕ್ಯಾಂಪಸ್ಸಿನ ನೂರಾರು ಮಕ್ಕಳು ಓಡಾಡುತ್ತವೆ ನೋಡು’ ಎಂದು ನನ್ನನ್ನು ಸಮಾಧಾನಿಸುತ್ತಿದ್ದರು.

ರಾತ್ರಿ ಮಕ್ಕಳಿಬ್ಬರೂ ಹ್ಯಾಲೋವಿನ್ ಕಥೆ ಊಟಕ್ಕೆ ಕುಳಿತಾಗ ಹೇಳುವರು, ಈ ಟ್ರಿಕ್ಆರ್ ಟ್ರೀಟ್ (trick or treat) ಪದ್ಧತಿ ಆಯರ್ಲಂಡ ರೈತ ಸಮೂಹದಿಂದ ಪ್ರಾರಂಭವಾಯಿತೆಂದೂ ಸುಗ್ಗಿಯ ಕಾಲದಲ್ಲಿ ರೈತರ ಗುಂಪುಗಳು ಜನರ ಮನೆ ಮನೆಗೆ ಹೋಗಿ ಹ್ಯಾಲೋವಿನ್ ಹಬ್ಬಕ್ಕೆ ಕಾಳು, ಕಡಿ ಬೇಡುತ್ತಿದ್ಧರಂತೆ. ಆಗ ಕೊಟ್ಟವರನ್ನು ಹಾಡಿ, ಹೊಗಳಿ, ಹಾರೈಸಿ, ಕೊಡದವರನ್ನು ಶಾಪಹಾಕಿ ಬರುವರಂತೆ. ಹಬ್ಬದ ದಿನ ಅಯರ್ಲಂಡ ಜನ ಬೆಟ್ಟಗಳಲ್ಲಿ ಬೆಂಕಿಹಚ್ಚಿ ಭೂಮಿ ಮೇಲೆ ಇರುವ ಭೂತ-ಪ್ರೇತಗಳಿಗೆ ಬೆದರಿಸಿ ದೂರ ಇಡುತ್ತಿದ್ದರಂತೆ. ಈ ನನೆಪಿಗೋಸ್ಕರ ,ಮಕ್ಕಳು ರಾತ್ರಿಯಾದ ತಕ್ಷಣ ಭೂತಗಳ ಹಾಗೆ ಮುಖವಾಡ ಹಾಕಿಕೊಂಡು ಕೈಯಲ್ಲಿ ದೀಪ ಹಿಡಿದು ಭೂತದ ಹಾಗೆ ತಿರುಗುತ್ತ ಅವರಿವರ ಮನೆಯ ಬಾಗಿಲಿಗೆ ಬಂದು ಬಾಗಿಲು ಬಡೆಯುತ್ತವೆ. ಅವಕ್ಕೆ ತಿಂಡಿ ತಿನಿಸು ಕೊಡಬೇಕು. ಇಲ್ಲದೇ ಹೋದರೆ ಭೂತಗಳು ಕಾಡುವಂತೆ ಈ ಮಕ್ಕಳು ಬಾಗಿಲಲ್ಲಿ ನಿಂತು ಏನಾದರೂ ಕಿಡಿಬಿಡಿ ಮಾಡುತ್ತವೆ. ಕೆಟ್ಟಧ್ವನಿಯಿಂದ ಕೂಗುವದು, ಬಾಗಿಲು ತೆಗೆಯುದ್ದಂತೆಯೇ ಹೆದರಿಸುವದು ಮಾಡುವವು. ಮೊದಲನೆಯ ವರ್ಷ ಈ ಹಬ್ಬ ಗೊತ್ತಿರದ ನಾವು ಸಾಕಷ್ಟು ಗೊಂದಲ ಕ್ಕೀಡಾದೆವು. ನಂತರ ವರುಷಗಳಲ್ಲಿ ಹುಡುಗರು ಬಂದಾಗ ನಾವೂ ಎಂಜಾಯ್ ಮಾಡುತ್ತಿದ್ದೆವು, ಗುತ್ತಿಯವರು ಯಾವಾಗಲೂ ಹಾಗೇ ಟ್ರೀಟ್ ಮಾಡಿ ಕಳಿಸುತ್ತಿರಲಿಲ್ಲ. ಅವರನ್ನು ನಿಲ್ಲಿಸಿ ಅಥವಾ ಅವರು ಬಾಗಿಲಗೆ ಬರಬರುತ್ತಿದ್ದಂತೆಯೇ ಏನಾದರೂ ಹೊಸ ಟ್ರಿಕ್ ಮಾಡಿ ನಗಿಸಿ ಕೆಲವೊಂದು ಸಲ ಪೇಚಿಗೆ ಸಿಲುಕಿಸಿದ ನಂತರವೇ ಸೋಲೊಪ್ಪುಕೊಳ್ಳುತ್ತಿದ್ದರು. ನಂತರ ಅವರಿಗೆ ಚಾಕಲೇಟ್ ಕ್ಯಾಂಡಿಗಳು ಕೊಟ್ಟು ಕಳಿಸುತ್ತಿದ್ದೆವು.

“ವ್ಯಾಲೆಂಟೈನ್ ಡೇ” ಎನ್ನುವದು ಇನ್ನೂಂದು ಇವರ ಹಬ್ಬ. ಈ ದಿನದಂದು ಎಲ್ಲರೂ ತಮ್ಮ ತಮ್ಮ ಪ್ರೀತಿಗಳನ್ನು ವಿವಿಧ ರೂಪದಲ್ಲಿ ಹಂಚಿಕೊಳ್ಳುವರು. ಪ್ರಣಯಿಗಳು ಪರಸ್ಪರ ಭಾವನೆಗಳನ್ನು ಹಂಚಿಕೊಂಡರೆ, ಸ್ನೇಹಿತರು, ಅಕ್ಕ ತಮ್ಮಂದಿರು ತಂದೆ ತಾಯಿಯರು ಮಕ್ಕಳು ಪ್ರೀತಿ ವಾತ್ಸಲ್ಯವೆಲ್ಲ ಹೊರಗೆಡವುತ್ತಾರೆ. ಸಂತ ವ್ಯಾಲಂಟ್ಟೆನ್ ಸೆರೆಮನೆಯಲ್ಲಿದ್ದಾಗ ಸೆರೆಮನೆಯ ಅಧಿಕಾರಿಯ ಮಗಳು ಸಂತನಿಗೆ ಭಾವನಾವೂರ್ವಕವಾಗಿ ಪತ್ರ ಮುಖಾಂತರ ಸಂದೇಶಗಳನ್ನು ಕಳಿಸುತ್ತಿದ್ದಳಂತೆ. ಇದೇ ರೂಡಿ ಈಗಿನವರು ಗ್ರೀಟಿಂಗ್ ಕಾರ್ಡುಗಳ ಮುಖಾಂತರ ಪ್ರೀತಿ ಪ್ರೇಮ
ವ್ಯಕ್ತಪಡಿಸಿಕೊಳ್ಳುವಲ್ಲಿ ವಿನಿಯೋಗಿಸುವರು.

“ಕ್ರಿಸ್ ಮಸ್ ಹಬ್ಬ” ಡಿಸೆಂಬರ್ 25ಕ್ಕೆ ಬರುತ್ತಿದ್ದಂತೆಯೇ ಹಬ್ಬದ ತಯಾರಿ ಜೋರು ನಡೆಯುತ್ತೆದೆ. ಸೌದಿ ಪೇಟೆಯೂ ಕ್ರಿಶ್ಚಿಯನ್ನರ ಭಾವನೆಗಳಿಗೆ ಬೆಲೆಕೊಟ್ಟು ಅವರಿಗೇ ಬೇಕೆನಿಸಿದ ವಸ್ತುಗಳನ್ನೆಲ್ಲ ತರಿಸಿಟ್ಟಿರುತ್ತಾರೆ. ಕ್ರಿಸ್‌ಮಸ್ ಗಿಡಗಳು, ವಿವಿಧ ಆಕಾರದ ಮೇಣದಬತ್ತಿಗಳು, ಕ್ರಿಸ್‌ಮಸ್ ಕಾರ್ಡುಗಳು, ಕ್ರಿಸ್‌ಮಸ್ ಕಾಣಿಕೆಗಳು, ಸಾಂಟಾಕ್ಲಾಸ್ ಗೊಂಬೆ ಮುಂತಾದವುಗಳಿಂದ ಮನೆಗೊಂದು ಸುಮದರ ಕಳೆ ಬರುತ್ತದೆ. ಎಷ್ಟೋ ಜನರು ಭಕ್ತಿ-ಭಾವನಗಳಿಂದ ಅಚರಿಸಿದರೆ ಶೇಕಡ 90 ಜನ ಹಬ್ಬದ ನೆಪದಲ್ಲಿ ಗ್ರಾಂಡ್ ಪಾರ್ಟಿ ಇಟ್ಟುಕೊಂಡು ತಿಂದು ತೇಗಿ, ಕುಡಿದು ಡ್ಯಾನ್ಸ್ ಮಾಡುವ ರೀತಿ ಹೇಳತೀರದಷ್ಟು ಬೆಳಗಿನ 4-5 ಗಂಟೆಯವರಗೆ ಸ್ಟೀರಿಯೋಗಳ ಸಪ್ಪಳ ಆಜೂ-ಬಾಜೂ ಮನೆ- ಯವರಿಗೆ ದೊಡ್ಡ ತಲೆನೋವು. ನಾವು ಜರ್ಮನ್  + ಅಮೇರಿಕನ್ ಕ್ಯಾಂಪಸ್‌ದಲ್ಲಿ ಇದ್ದುದರಿಂದ ಈ ಎಲ್ಲ ಹಬ್ಬಗಳು ತಮ್ಮ ದೇಶದಲ್ಲಿ ಅಚರಿಸಿದಷ್ಟೇ ಸಂಭ್ರಮಪಾಗಿ ಆಚರಿಸುತ್ತಿದ್ದರು. ಕೆಲವೊಂದು ಸಲ ಇಂತಹ ಹಬ್ಬ ಪಾರ್ಟಿಗಳಲ್ಲಿ ನಾವು ಪ್ರಪಂಚದ ಯಾವ ಛಾಗದಲ್ಲಿದ್ದೇವೆ ಅನ್ನೋದೆ ಮರೆತಂತಾಗುತ್ತಿತ್ತು.

“ನ್ಯೂ ಇಯರ್” (New Year) ಕೂಡ ಅಷ್ಟೇ. 31ನೇ ಡಿಸೆಂಬರ್ ಇಡೀ ದಿವಸ ರಜೆ ಇರುತ್ತದೆ. ಜನ ಮಧ್ಯಾಹ್ನ ಮಲಗಿ ಆರಾಮ ತೆಗೆದುಕೊಂಡು ಸಂಜೆ 7 ಗಂಟೆ ಅಲ್ಲಲ್ಲಿ ಸ್ನೇಹಿತರ ಮನೆಯಲ್ಲಿ ಸೇರುತ್ತಾರೆ. ತೀರ್ಥ(ಡ್ರಿಂಕ್ಸ್) ಈ ದೇಶದಲ್ಲಿ ಸಿಗುವುದಿಲ್ಲವೆಂದರೂ ಹೇಗೋ ಇವರು ಒಳಗಿಂದೊಳಗೆ ಆರೇಂಜ್ ಮಾಡಿರುತ್ತಾರಂತೆ. ಮಾತು, ತಿಂಡಿ ಹರಟೆ, ಕುಡಿತ, ಡಾನ್ಸ್ ತೆಪ್ಪರಗಾಲು ಹಾಕುತ್ತ ಕುಣಿದೇ ಕುಣಿಯುತ್ತಾರೆ. ನ್ಯೂ ಇಯರ್ ಮತ್ತು ಕ್ರಿಸ್‌ಮಸ್ ಹಬ್ಬಗಳು ನಾವು ಇಂಡಿಯಾದಲ್ಲಿ ಅಚರಿಸುವಂತೆಯೇ ಇಲ್ಲಿಯೂ ಕೂಡ. ಅದಕ್ಕೆ ಏನೂ ಹೇಳುವದಿಲ್ಲ.

ಇತ್ತೀಚೆಗೆ ಈ ಕ್ರಿಶ್ಚಿಯನ್ ಹಬ್ಬಗಳನ್ನೆಲ್ಲವನ್ನು ಮುಲ್ಲಾಗಳು ಬಂದು ಮಾಡುತ್ತಿದ್ದಾರೆ. ಸ್ವತಃ  ಮನೆಯಲ್ಲಿ ಇಂಥಹ ಹಬ್ಬಗಳನ್ನು ಆಚರಿಸಿದ ವಿಷಯ ಮುಲ್ಲಾಗಳಿಗೆ ಗೊತ್ತಾದರೆ ಅಂಥಹ ಜನರನ್ನೆಲ್ಲಾ ಮರು ದಿನವೇ ದೇಶದಿಂದ
ದಬ್ಬುತ್ತಾರೆ. ಬೇರೆ ಧರ್ಮಗಳ ಆಚರಣೆಗೆ ಗುಂಜಿಯಷ್ಟು ಅವಕಾಶಏಲ್ಲ. ಬೇರೆ ಧರ್ಮಗಳ ಯಾವುದೇ ಪುಸ್ತಕಗಳೂ ಇಲ್ಲಿ ಸಿಗುವುದಿಲ್ಲ. ಇಲ್ಲಿಯ ಎಷ್ಟೋ ಜನರಿಗೆ ಬೇರೆ ಧರ್ಮಗಳು ಇವೆ, ಈ ಪ್ರಪಂಚದಲ್ಲಿ ಅನ್ನುವುದೂ ಕೂಡ ಗೊತ್ತಿಲ್ಲ.

ನಮ್ಮ ಹಿಂದೂಗಳ ಹಬ್ಬ. ಇಲ್ಲಿ ಅವನ್ನು ಕಳ್ಳತನದಿಂದ ಆಚರಿಸುವ ವಿಧಾನಗಳೇ ಬೇರೆ. ನಾವೆಲ್ಲ ಮೂರ್ತಿ ಪೂಜಕರು. ಸೌದಿ ಅಥವಾ ಮುಸ್ಲಿಂರ ಪ್ರಕಾರ ಮೂರ್ತಿ ಪೂಜೆ ಮಾಡಬಾರದು. ಸರಿ, ಮತ್ತೊಬ್ಬರ ಭಕ್ತಿ, ಭಾವನೆಗಳನ್ನು ಕೆರಳಿಸುವದಾದರೂ ಯಾಕೆ ಅಲ್ಲವೆ? ಅದರಿಂದಾಗುವ ಪ್ರಯೋಜನವಾದರೂ ಏನು?

ನಾವು ನಮ್ಮ ಹಬ್ಬಗಳನ್ನು ಕ್ಯಾಲೆಂಡರ್‌ನಲ್ಲಿ ನೋಡಿಯೇತಿಳಿದುಕೊಳ್ಳಬೇಕು ಸಂಕ್ರಾಂತಿ, ದಸರಾ, ದೀಪಾವಳಿ, ಲಕ್ಷ್ಮಿ, ಗಣಪತಿ ಹಬ್ಬಗಳಿಂದು ನಾವು ಮನೆಯಲ್ಲಿ ಸಿಹಿ ಊಟ-ತಿಂಡಿ ಏನಾದರೂ ಮಾಡಿ ಸಂಜೆಗೆಲ್ಲ ಹೊರಗಡೆ ಬಣ್ಣ ಬಣ್ಣದ ದೀಪಗಳ ಸಾಲು ಹಾಕಿ (ಕ್ರಿಶ್ಚಿಯನ್, ಮುಸ್ಲಿಂರು ಹಬ್ಬಗಳಲ್ಲಿ ಹಾಕುವರು) ದಸರಾ, ದೀಪಾವಳಿಯ ಲಕ್ಷ್ಮಿ-ಸರಸ್ವತಿಯರ ಸಂಕೇತವಾಗಿ ಬಂಗಾರದ ಏನಾದರೂ ಒಡವೆಗಳನ್ನು ನೋಟುಗಳು ಇಟ್ಟು ಪೂಜಿಸಿ ಊದಿನಕಡ್ಡಿ ಬೆಳಗುತ್ತಿದ್ದೆವು. ಇಲ್ಲಿ ಒಳ್ಳೆಯ ಸುವಾಸಿ ಊದುಬುತ್ತಿಗಳು ಸಿಗುತ್ತವೆ. ಸಂಜೆಗೆ ಹಿಂದೂ ಕುಟುಂಬಗಳು ಹಾಗೂ ಅತೀ ಪರಿಚಯದ ಕ್ರಿಶ್ಚಿಯನ್ ಕುಟುಂಬಗಳು ಇಂಡಿಯಾದ ಆತ್ತಿಆಯ ಮುಸ್ಲಿರಿ ಕುಟುರಿಬಗಳೊಂದಿಗೆ ಊಟ-ಹರಟೆಯೆಂದು ಖುಷಿಯಾಗಿ ಕಳೆಯುತ್ತಿದ್ದೆವು. ನಮಗೇನೂ ಇಲ್ಲಿ ಧರ್ಮದ ವಿಷಯವಾಗಿ ಸಮಸ್ಯೆ ಅನಿಸಲೇ ಇಲ್ಲ. ವ್ಯಕ್ತಿಗತವಾಗಿ ಆದರೆ ನಮ್ಮದೇಶ ಎಂಥಹ ಮಹಾನ್ ಉದಾರ ದೇಶ ಅನ್ನುವ ಮನವರಿಕೆ ಆದದ್ದು ಇಲ್ಲಿ ಬಂದ ಮೇಲೆಯೇ.

ನಾವು ಪೇಟೆಯಲ್ಲಿ ಅಡ್ಡಾಡುವಾಗೆಲ್ಲ ಆಗೀಗ ಅರಬರು ನಮ್ಮ ಸೀರೆ,  ಕುಂಕುಮಗಳಿಂದ ನಾವು ಭಾರತದವರು, ಹಿಂದುಗಳು ಎಂದು ಗುರುತಿಸಿ ಇಂಡಿಯಾ, ಹಿಂದಿ ಎಂದು ಕೇಳಿ ‘ನಮಸ್ತೆ’ ಎಂದು ಅನ್ನುತ್ತಿದ್ದರು. ಹಾಗೆಯೇ ಭಾರತದವರ ಬಗೆಗೆ ಹೆಮ್ಮೆ ಕೂಡಾ ಇದೆ. ಹಾಗೆಯೇ ಅಮೇರಿಕ ಯುರೋಪದ ಬಿಳಿಜನರಿಗೆ ಇನ್ನೂ ಹೆಚ್ಚಿನ ಅದರ ಸತ್ಕಾರವೂ ಮಾಡುವರು. ನಾನಿರುವ ಹದಿನೈದು ವರ್ಷಗಳಲ್ಲಿ ಯಾವ ಅರಬ್ಬರೂ ಅಪ್ತಿತಪ್ಪಿಯೂ ಅಸಭ್ಯರಾಗಿ ನೆಡೆದುಕೊಂಡಿಲ್ಲ. ನಾನು ಇಂಡಿಯಾದಿಂದ ಹೊರಡುವಾಗ ಎಷ್ಟೋ ಜನರು-ಅರಬರು ಹಾಗೇ ಹೀಗೆ ಎಂದು ಹೆದರಿಸಿದ್ದರು. ಆದರೆ ಇಲ್ಲಿ ಯಾವುದೇ ದೃಷ್ಟಿಯಿಂದಲೂ ಹೆದರಿಕೆ ಅನಿಸಲೇ ಇಲ್ಲ. ಬಹುಶಃ ನಾವು ಕ್ಯಾಂಪಸ್ಸಿನ
ಬಿಗಿಯಾದ (ಕಾವಲು) ಬಂದೋಬಸ್ತದಲ್ಲಿ ಇರುವದರಿಂದ ಆರಾಮವಾಗಿ ಯಾವ ಹೆದರಿಕೆ ಇಲ್ಲದೆ  ಕಳೆದಿರಬೇಕೆನಿಸುತ್ತದೆ. ಕ್ಯಾಂಪಸಿನ ಹೊರಗಿನ ಅಂದರ ಯಥಾ ಪಟ್ಟಣವಾಸಿಗಳಿಂದ (ಭಾರತೀಯರಿಂದ) ನೂರಾರು ಗೋಳಿನ ಕಥೆಗಳನ್ನು ಕೇಳಿದ್ದೇವೆ!

ನಗರಗಳಲ್ಲಿ ಅಷ್ಟಿಷ್ಟು ಅದು ಇದು ಎಂದು ಏನೇನೋ ಕಥೆಗಳು ಕೇಳುತ್ತಿದ್ದೆವು. ಇನ್ನೂ ಗುಡ್ಡಗಾಡಿನ ಒಂಟೆ- ಕುರಿ ಓಡಾಡಿಸುವ ಜನಾಂಗ, ಹೊಡೆಯವದು, ಬಡೆಯು ವದು, ದಬ್ಬಾಳಿಕೆ ಮಾಡುವದೇ ಅವರ ಪರಂಪರಾಗತದಲ್ಲಿ ಬಂದಿರುವಾಗ ಒಮ್ಮೆಲೆ ಬದಲಾದರೂ ಹೇಗಾದೀತು?

***

ಸಂತೋಷ ಕೂಟಗಳು

ವಿಮಾನನಿಲ್ದಾಣದ ಜರ್ಮನ್ ಕಂಪೆನಿಯವರು ತಮ್ಮ ಕಾಂಟ್ರಾಕ್ಟ್‌ದ ಕೊನೆಗೆ ‘ಅಲ್ ಅಮ್ರಾ ಹೋಟೆಲ್’ ದಲ್ಲಿ ವೈಬವದ ಪಾರ್ಟಿ ಏರ್ಪಡಿಸಿದ್ದರು. ಸುಮಾರು 60 ಕುಟುಂಬಗಳಾದರೂ ಇರಬೆಕು, ಸರಿಯಾದ ಸಮಯಕ್ಕೆ ಎಲ್ಲರೂ
ಬಂದಿದ್ದರು. ಮಕ್ಕಳು ಮರಿಗಳಂತೂ ಇವರ ಪಾರ್ಟಿಗಳಲ್ಲಿ ಇರುವದಿಲ್ಲ. 7-30ಕ್ಕೆಂದರೆ ಮಕ್ಕಳು ಮಲಗಿಬಿಡುತ್ತವೆ. ಅಂದರೆ ಹಾಗರ ಮಲಗುವ ಅಭ್ಯಾಸ ಮಾಡಿಸಿರುತ್ತಾರೆ.

10 ವರ್ಷಗಳಿಂದ ಗಮನಿಸುತ್ತಿದ್ದೇನೆ. 1 ರಿಂದ 5 ವರ್ಷದ ಮಕ್ಕಳನ್ನು ಮುಂಜಾನೆಯಿಂದ ಸಂಜೆಯವರೆಗೆ ಸಾಕಷ್ಟು ಅದು ಇದು ಎಂದು (ಈಜು, ಆಟ ಮುಂತಾದ) ಚಟುವಟಿಕೆಗಳಲ್ಲಿ ಸುಸ್ತು ಹೊಡೆಸುವರು. ಸಂಜೆ ಕುಟುಂಬ   ಸಮೇತ ಹರಟೆ ಹೊಡೆಯುತ್ತ ಒಂದೆರಡು ತಾಸು ಟಿ.ವಿ., ಊಟ, ಡಾನ್ಸ್ ಎಂದು ಕಳೆದು ಮಕ್ಕಳನ್ನು ಬೇಗ ಮಲಗಿಸುವುದು ಇವರ ರೂಢಿ. ಮಕ್ಕಳು ಮಲಗಿದ ನಂತರ ತಂದೆ ತಾಯಿಯರು ಸ್ವೇಚ್ಛೆಯಾಗಿ 2-3 ತಾಸು ತಮ್ಮ ವೈಯಕ್ತಿಕ ಹವ್ಯಾಸಗಳೇನಾದರೂ ಇದ್ದಲ್ಲಿ (ಓದುವುದು, ಬರೆಯುವುದು, ನಾಟಕ ಸಿನೆಮಾ, ಟಿ.ವಿ. ನಡುರಾತ್ರಿ ಕೂಟಗಳು
ಮುಂತಾದವುಗಳು)  ಅದರಲ್ಲಿ ತೊಡಗುವರು. ಹೀಗಾಗಿ ಮಕ್ಕಳು ಒಂದು ದಿನಚರಿಗೆ ಹಟಮಾಡದೆ ಸುಮ್ಮನೆ ಹೊದಿಕೊಂಡು  ಬಿಟ್ಟಿರುತ್ತವೆ.

ಆದರೆ ನಮ್ಮಲ್ಲಿ ಹಾಗಿಲ್ಲ. ಮಧ್ಯಾಹ್ನ ಹೊಟ್ಟೆತುಂಬ ಊಟ ಮಾಡಿ ತಾಯಂದಿರು ಮಕ್ಕಳನ್ನು ಕರೆದುಕೊಂಡು (ಎಳೆದುಕೊಂಡು) 2 ತಾಸು ನಿದ್ದೆ ಮಾಡಿಯೇ ಬಿಡುವರು. ನಂತರ ರಾತ್ರಿ ತಾವು ಮಲಗುವವರೆಗೂ ಈ ಹುಡುಗರ ಒದರಾಟ – ಜಗಳ ಕೇಳುತ್ತ ಕೊನೆಗೆ ಸುಸ್ತಾಗಿ ಬಯ್ದೋ-ಬಡಿದೋ ಮಲಗಿಸುವದು ದಿನ ನಿತ್ಯ ನೋಡುತ್ತೇವೆ. ಹೀಗಾಗಿ ನಮ್ಮ ಕಡೆಗೆ ಪಾಲಕರು ತಮಗಾಗಿ ತಮ್ಮ ಹವ್ಯಾಸಗಳೇ ನಾದರೂ ಇದ್ದು ಅವುಗಳಿಗೂ ಒಂದಿಷ್ಟು ಪ್ರಾಶಸ್ತ್ಯಕೊಟ್ಟು ಆರಾಮವಾಗಿ ಶಾಂತವಾಗಿ ಸಮಯ ಉಪಯೋಗಿಸುವುದಿಲ್ಲವೇನೋ ಅನಿಸುವುದು. ಅದೇನೋ ಮನೆ, ಮಕ್ಕಳು,
ಹೆಂಡತಿ ಎಂದು ದೊಡ್ಡ ಜಂಜಾಟದಲ್ಲಿ ಬಿದ್ದು ಸುಸ್ತು ಹೊಡೆದವರ ತರಹ ಜೋಲು  ಮಖ ಹಾಕಿಕೊಂಡು ಅಡ್ಡಾಡುವವರನ್ನು ಸಾಮಾನ್ಯವಾಗಿ ಎಲ್ಲ ಕಡೆಗೆ ನೋಡುತ್ತೇವೆ.

ಸರಿ ನಮ್ಮ ಪಾರ್ಟಿಗೆ ಬರೋಣ – ನಮ್ಮ ಮಕ್ಕಳಿಗೆ ರಜೆ ಇದ್ದುದರಿಂದ ಇಂಡಿಯಾಕ್ಕೆ ಹೋಗಿದ್ದರು. ಹೀಗಾಗಿ ನಾವು ಸ್ವಲ್ಪ free (ಸ್ವತಂತ್ರರಾಗಿಯೇ) ಇದ್ದೆವು. ಬೇರೆ ಬೇರೆ ಭಾಷೆಯ 2-3 ಕುಟುಂಬಗಳು ಬಿಟ್ಟರೆ ಉಳಿದೆಲ್ಲರೂ ಜರ್ಮನ್ನರೇ. ತಮ್ಮ ಭಾಷೆಯಲ್ಲಿ ಹರಟುತ್ತ ಅಲ್ಲಲ್ಲಿ ಕುಳಿತಿದ್ದರು. ಸ್ವಾಗತಕಾರರು ನಮಗೆಲ್ಲ ಮೇಲಿನ ಮಹಡಿಗೆ ಹೋಗಲು ಹೇಳಿದರು. ಮೇಲೆ ಹೋಗಿ ವಿಶಾಲವಾದ ಡ್ರಾಯಿಂಗ ಹಾಲ್‌ಗೆ ಹೆಜ್ಜೆ ಇಡುತಿದ್ದಂತೆಯೇ ಒಂದು ಬದಿಗೆ ಆಕರ್ಷಕವಾದ ‘ಬುಡವಿನ್’ (ಗ್ರಾಮೀಣ ಜನಾಂಗ) ಗಳ ಗುಡಿಸಲು ಒಳಗಡೆ ಕಂಬಳಿ ಹಾಸಿ, ಬೆನ್ನಿಗೆ ಅಧಾರವೆಂದು ಲೋಡ್‌ಗಳು, ಹೊರಗಡೆ ಗುಡಿಸಲಿನ ತುದಿಗೆ ಜೋತುಬಿಟ್ಟ ಕಂದೀಲು (ಲಾಟೀನು) ಗೋಡೆಯ ಮೇಲೆ ಮೂರು ಅಯಾಮಗಳ ಮರುಭೂಮಿ – ಒಂಟೆ, ಕುರಿ, ಓಯಾಸಿಸ್, ಖರ್ಜೂರದ ಗಿಡಗಳಿರುವ ಹಿನ್ನೆಲೆ ವರ್ಣಚಿತ್ರದಲ್ಲಿ ಸೌದಿ ಅರೇಬಿಯದ ಈ ಸಾಂಕೇತಿಕ ದೃಶ್ಯ ಕಣ್ಣನ ಸೆಳೆಯಿತು.

ಡೈನಿಂಗ್ ಹಾಲ್ ಕೂಡಾ ಅಷ್ಟೇ ದೊಡ್ಡದು. ಊಟಕ್ಕೆ ಮೊದಲು ಕಾಕ್‌ಟೈಲ್ (Cocktail) (ಎಲ್ಲ ಹಣ್ಣಿನ ರಸ ಕೂಡಿದ್ದು) ಯೂರೋಪ್-ಅಮೇರಿಕ ತರಹ ಇಲ್ಲಿ ಊಟಕ್ಕೆ ಮೊದಲು ಬೀರ್, ವಿಸ್ಕಿ,  ಸಿಗುವದಿಲ್ಲ. ಈ ಕಾಕ್‌ಟೈಲ್‌ನ್ನೇ ಜರ್ಮನಿಯ ಈ ಜನರು ಮುಖ ಸೊಟ್ಟುಮಾಡಿಕೊಂಡು ಕುಡಿಯತೊಡಗಿದರು. ಆದರೆ ನಾವು ಬಹಳ ಖುಷಿಪಡುತ್ತ ಕುಡಿದೆವು. ಇದಾದ ನಂತರ ಅವರವರು ಇಷ್ಟಪಟ್ಟಂತೆ ಸೂಪುಗಳು. ಕುರಿ, ಕೋಳಿಯ ಸೂಪ್‌ಗಳವು. ಕೆಲವೊಂದು ಹೆಸರು ಕೇಳಿದರೇನೇ ವಾಂತಿ ಬರುವಂಥವು. ಆದರೆ ಈ ಜನರಿಗೆ ಬಾಯಲ್ಲಿ ನೀರೂರುತ್ತಿತ್ತು. ನಾವು ಮಾತ್ರ ಟೊಮ್ಯಾಟೋ ಸೂಪ್ ತರಿಸಿಕೊಂಡು ಕುಡಿದೆವು. ಆಗಲೇ ಕಾಕ್‌ಟೇಲ್, ಸೂಪ್‌ಗಳಿಂದ ಹೊಟ್ಟೆತುಂಬಿತ್ತು.

ಊಟಕ್ಕೆಂದು ಅದೇನೇನೋ ಅರ್ಡರ್ ಮಾಡಿದ್ಧರು. ಟೇಬಲ್ ತುಂಬ ವಿಚಿತ್ರ  ವಿಚಿತ್ರ ಭಕ್ಷ್ಯಗಳಿಂದ ತುಂಬಿಹೋಗಿತ್ತು. ಎಲ್ಲಾ ಮಾರಿಸಾಹಾರಿ ಊಟವೇ. ಕೆಲವು ತಿಂಡಿ ತಿನಿಸುಗಳನ್ನು ಹೆಸರಿಸಬೇಕೆಂದರೆ ನೆನಪಿಗೆ ಬರುತ್ತಿಲ್ಲ. ಅರೇಬಿಕ್ ಭಾಷೆಗಳ ಶಬ್ದ ಗಳನ್ನು ನೆನಪಿನಲ್ಲಿಡುವದು ಬಹಳ ಕಷ್ಟ. ಅದರ ಜೊತೆಗೆ ಬ್ರೆಡ್ ಚೀಸ್,  ಜ್ಯಾಮ್ ಕೂಡ ಇದ್ದವು. ಈ ಜರ್ಮನ್ ಜನರು ಅರಾಮವಾಗಿ ಅದು ಇದು ಸೇರಿಸಿ ಊಟ ಹೊಗಳುತ್ತ,ಖುಷಿಪಡುತ್ತಿದ್ದರು.

ನಾವು ಮಾತ್ರ  ಬೆಣ್ಣೆ, ಜ್ಯಾಮ್, Cheese ಎಂದು ಊಟ ಮಾಡುತ್ತಿದ್ದೆವು. ಸಲಡ್ ಮಾತ್ರ ತಾಜಾ ಇದ್ದುದರಿಂದ ಹೆಚ್ಚಾಗಿ ನಾವೇ ತಿಂದೆವು. ಟೊಮಾಟೋ, ಪಾರ್ಸಲಿ, ಲೆಟ್ಯೂಸ್ ಎಲೆಗಳು, ಸಣ್ಣಾಗಿ ಹೆಚ್ಚಿದ ಈರುಳ್ಳಿ, ಸ್ಪೇನ್‌ದ ಓಲಿವ್ ಕಾಯಿಗಳೆಲ್ಲ ಕೂಡಿಸಿ ರುಚಿಗೆ ತಕ್ಕಂತೆ ಉಪ್ಪು, ಮೆಣಸಿನ ಪುಡಿ ಕೂಡಿಸಿ ಲಿಂಬಿಹಣ್ಣಿನ ರಸದೊಂದಿಗೆ ಡ್ರೆಸ್ಸಿಂಗ್ ಮಾಡಿ ಇಟ್ಟಿದ್ದರು. ಬಹಳ ರುಚಿಯಾದುದು ಖುಷಿಪಟ್ಟೆವು.

ನಮ್ಮ ಬ್ರೆಡ್, ಸಲಡ್ ಊಟ ನೋಡಿ ಉಳಿದವರಿಗೆ ಆಶ್ಚರ್ಯ. ಇಷ್ಟೊಂದು ತರತರಹದ ತಿನಿಸುಗಳಿರುವಾಗ ಇದೇನು ಸಪ್ಪೆ. ಊಟ ಎಂದು ಅಕ್ಕ ಪಕ್ಕದವರು ಇದು ತೆಗೆದುಕೊಳ್ಳಿರಿ, ಅದು ಚೆನ್ನಾಗಿದೆ, ರುಚಿಯಾದರೂ ನೋಡಿರಿ ಎಂದು ಹೇಳುತ್ತ ನಗುತ್ತಿದ್ದರು.

ನಡು ನಡುವೆ ಈ ಜನ ಎದ್ದು ಹೋಗಿ ಒಂದು ಮೂಲೆಯಲ್ಲಿ ದೊಡ್ಡ ತಾಟಿನಲ್ಲಿ ಇಟ್ಟ ತಿಂಡಿ ಏನನ್ನೋ ತೆಗೆದುಕೊಂಡು ಬರುತ್ತಿದ್ದರು. ಶ್ರೀಮತಿ ಮತ್ತು ಶ್ರೀ ಓಲ್ಜ್  (Olze) ನಮ್ಮನ್ನು ಎಬ್ಬಿಸಿಕೊಂಡು ಹೋದರು. ಅಲ್ಲಿ ನೋಡುತ್ತೇನೆ
ಅಬ್ಬಬ್ಬಾ-ಮರೆಯಲಾರದಂತಹ ದೃಶ್ಯ ಅದು. ಇಡಿಯಾದ ಒಂಟೆಯ ಹೊಟ್ಟೆ.  ಅದರೊಳಗೆ ಮಸಾಲೆ ತರಕಾರಿಗಳ್ಳುಳ್ಳ ಮಸಾಲೆ ಅನ್ನ. ಒಂಟೆಯ ಮುಖ ಕೈ ಕಾಲು ತೆಗೆದು ಅದರ ಎದೆಗೊಡಿನಿಂದ ಹೊಟ್ಟೆಯವರೆಗೆ ಒಳಗೆಲ್ಲ ಅಕ್ಕಿ ನೀರು-ಮಸಾಲೆ ಅದೇನೇನು ರುಚಿಗೆ ಬೇಕೋ ಅದೆಲ್ಲ ತುರುಕಿ ಇಡಿಯಾಗಿ ಕುದಿಸುತ್ತಾರೋ, ಸುಡುತ್ತಾರೋ ಅಂತೆ. ನಂತರ ಸುಟ್ಟ ಚರ್ಮ ಎಲ್ಲ ತೆಗೆದೊಗೆದು ಇಡಿಯಾದ ಒಂಟೆ  ದೊಡ್ಡ ಬೆಳ್ಳಿ ಲೇಪಿತ ತಟ್ಟೆ (ಹರಿವಾಣ)ಯಲ್ಲಿ ವಿಧ ವಿಧವಾಗಿ ಹಣ್ಣು ಎಲೆಗಳಿಂದ ಅಷ್ಟೆ ಅಲ್ಲದೆ ಬೆಳ್ಳಿ ಎರಕಗಳಿಂದ ಅಲಂಕರಿಸಿ ಮೇಲೆ ತಿಳಿಯಾದ ಹಸಿರೋ, ಹಳದಿಯೋ ಬಣ್ಣದ ಲೈಟ್ ಇಟ್ಟು ಏನೇನೋ ಅಲಂಕಾರ ಮಾಡಿದ್ದರು. (ಬದನೆಕಾಯಿ ಸುಟ್ಟು ಅದರ ಸಿಪ್ಪೆ ತೆಗೆದನಂತರ ಹೇಗೆ ಕಾಣುವುದೋ ಹಾಗೆ ಇದು ಅನಿಸಿತು) ಪಕ್ಕದ ಒಂದು ತಟ್ಟೆಯಲ್ಲಿ ಮುಳ್ಳಿನ ಚಮಚಗಳು, ಚಾಕುಗಳು ಇಟ್ಟಿದ್ದರು.

ಈ ಮಾಂಸಾಹಾರಿ ಜನರಿಗೆ ಕುರಿಕೋಳಿ ಆದರೂ ಅಷ್ಟೇ, ಎಮ್ಮೆ ಒಂಟೆ, ಹಂದಿಗಳಾದರೊ ಅಷ್ಟೇ, ಬದಲಾವಣೆ ಎಂದು ಎಂಜಾಯ್ ಮಾಡುವರು.

ಚಾಕುವಿನಿಂದ ಅದರ ಹೊಟ್ಟೆಯಲ್ಲಿ ಕುಕ್ಕಿ ಅಥವಾ ಚುಚ್ಚಿ ಚುಚ್ಚಿ ಮಾಂಸ ತೆಗೆದುಕೊಳ್ಳುತ್ತಿದ್ದರು. ದೊಡ್ಡ ಚಮಚಗಳಿಂದ ಅದರೊಳಗಿನ ಮಸಾಲೆ ಅನ್ನ ಹಾಕಿಕೊಳ್ಳುವದು, ಅದರ ಸುತ್ತೆ ಮುತ್ತ ಅಲ್ಲೇ ನಿಂತು ತಮ್ಮ ದವಡೆಗೆ ಒಂಟೆ ಮಾಂಸ ಹಾಕಿ ಜಗ್ಗಾಡುತ್ತ ತಿನ್ನುವದನ್ನು ನೋಡುತ್ತಿದ್ದಂತೆಯೇ ಕಣ್ಣಿಗೆ ಕತ್ತಲು ಬಂದಂತಾಯ್ತು. ಗುತ್ತಿಯವರು ಮರಳಿ ನನ್ನನ್ನು ಕುರ್ಚಿಗೆ ತಂದರು. ಮತ್ತೊಂದು ತಂಪಾದ ಕೋಲಾ ಕುಡಿದು ಚೇತರಿಸಿಕೊಳ್ಳಬೇಕಾಯ್ತು.

ಇದು ತ್ರಿತಾರಾ ಹೋಟೆಲು. ಇಲ್ಲಿ ಚಾಕು, ಚಮಚದಿಂದ ಮಾಂಸ ತಿನ್ನುವ ಪಾಶ್ಚಾತ್ಯರಾದರೆ ಇಲ್ಲಿಯ ಅರಬ್ಬೀಯರ ಪದ್ದತಿಯೇ ಬೇರೆ; ದೊಡ್ಡ ತಟ್ಟೆಯಲ್ಲಿ ಒಂಟೆ ಹೊಟ್ಟೆ ಇಟ್ಟು ಸುತ್ತೆಲ್ಲ ಜನ ಕುಳಿತು ಕೈಯಿಂದ ಹರಿದು ತಿನ್ನುತ್ತಾರೆ. ಮತ್ತೆ ಮತ್ತೆ ಬೇಕಿದ್ದರೂ ಮುಸುರೆ ಕೈಯಿಂದಲೇ ಹರಿದಾಡಿ ಜಗ್ಗಾಡಿ ಪಚ ಪಚ ತಿನ್ನುವರು. ಆ ಅವಸ್ಥೆ ನೋಡಿದರೆ ಇನ್ನೂ ಎಷ್ಟು ಮೂರ್ಚೆ: ಅನಿಸುತ್ತಿತ್ತೋ ಏನೋ,  ಎಲ್ಲಿಯೂ ನೋಡಲಿಲ್ಲ. ಟಿ.ವಿ.ಯಲ್ಲಿ ಅಗೀಗ ನೋಡಿದೆ ಅಷ್ಟೆ. ಅಷ್ಟಷ್ಟು ಸೌದಿ ಕುಟುಂಬಗಳು ಪಿಕನಿಕ್ ಎಂದು ಬಂದಾಗ ಒಟ್ಟಿಗೆ ತಟ್ಟೆಯಲ್ಲಿ ತಿನ್ನುವದು ನೋಡಿದೆ.

ಊಟದ ನಂತರ ಒಳ್ಳೆಯ ಕೇಕ್‌ಗಳು ಬಂದವು. ಕೇಕಿನ ತುಂಬೆಲ್ಲ ಪಿಸ್ತಾ, ಬದಾಮ್, ದ್ರಾಕ್ಷಿ, ಇನ್ನೇನೇನೋ ಹಣ್ಣುಗಳು. ಅದರ ಸುತ್ತೆಲ್ಲ ಜೇನುತುಪ್ಪ, ಬೆಣ್ಣೆ ಕ್ರೀಂಗಳು, ಆಸೆ ಪಟ್ಟು ಕೇಕ್‌ತಿಂದೆ. ಅದರೆ ಮನಸ್ಸಿಗೇ, ಕಣ್ಣಿಗೇ, ತಿರುತಿರುಗಿ ಒಂಟೆ ಹೊಟ್ಟೆಯ ಹರಿಹಂಚಾದ ಮಾಂಸವೇ ಕಾಣಿಸಿದಂತಾಗಿ ಹೊಟ್ಟೆಯಲ್ಲಿ ತಳಮಳ
ಶುರುವಾದಂತಾಯ್ತು. ಒಂಥರಾ ಉಸಿರು ಧಮಕಿಸಿದ ಹಾಗಾಗಿ ಯಾವಾಗ ಹೊರಬಿದ್ದು ತಾಜಾಗಳಿಗೆ ನಿಂತು ಒಂಟೆ ಹೊಟ್ಟೆ ಮರೆತು ಮತ್ತೇನಾದರೂ ಸುಂದರ ದೃಶ್ಯ ನೋಡೇನೋ ಅನಿಸಿತು.

ಕೆಲವೊಂದು ಸಲ ಇಂತಹ ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಫಜೀತಿ. ಅದಷ್ಟು ತಾಳ್ಮೆಯಿಂದ ಎಲ್ಲ ಸಹಿಸಿಕೊಂಡು – ‘ಹೀಗೂ ಜಗತ್ತು; ಜನ ಇರ್ತಾರೆ’ ಎಂದು ತಿಳಿದುಕೊಳ್ಳಲು ಇದು ಅವಕಾಶವೆಂದು ಸುಮ್ಮನಾಗುತ್ತಿದ್ದೆ.

ಸೌದಿ ಅರೇಬಿಯಾದ ತುಂಬೆಲ್ಲ ರೆಡಿಮೇಡ್ ರೋಟಿಗಳು ಸಿಗುತ್ತವೆ. ರೋಟಿಗೆ ಇಲ್ಲಿ ‘ಕೂಬ್ಸ್’ ಎಂದು ಕರೆಯುವರು. ಇವು ದಪ್ಪನೆಯ ರೊಟ್ಟಿಗಳು. ಅವಸರಕ್ಕೋ ಅಥವಾ ಬದಲಾವಣೆಗೊ ತಿನ್ನಲು ಸರಿ ಅಷ್ಟೇ. ಇವುಗಳಲ್ಲಿಯೇ ಮತ್ತೊಂದು ವಿಧಾನ ಇರುತ್ತದೆ. ರೋಟಿಗೆ ಎಳ್ಳು-ಜೀರಿಗೆ, ಉಪ್ಪು ಹಚ್ಚಿ Olive oil ಸವರಿ ಬೇಯಿಸಿರುತ್ತಾರೆ. ಇವು ಸ್ವಲ್ಪ ರುಚಿ ಬರುತ್ತವೆ. 1 ರಿಯಾಲ್‌ಗೆ 4 ರೋಟಿಗಳು ಜನಸಾಮಾನ್ಯರಿಗೆ ಕೈಗೆಟಕುವಂತಹ ಬೆಲೆಯಲ್ಲಿ ಸಿಗುವದರಿಂದ ಹೆಚ್ಚಾಗಿ ಜನ ಈ ಕೂಬ್ಸ್‌ಗಳ ಮೇಲೆಯೇ ಅವಲಂಬಿಸಿರುತ್ತಾರೆ.

ಪಾಶ್ಚಾತ್ಯರು ಮೊಸರು ತಿನ್ನುವದೇ ಒಂದು ವಿಶೇಷವೇನೋ ಅನ್ನೋತರಹ ಮಾಡುತ್ತಾರೆ. ಶಾಖಾಹಾರಿಗಳಾದ ನಾವು ನಮ್ಮ ಊರಕಡೆಗಳಲ್ಲೆಲ್ಲ ಸಾಕಷ್ಟು ತಾಜಾ ಹಾಲು ಮೊಸರು, ಬೆಣ್ಣೆ, ತುಪ್ಪ ತಿಂದು ನಿಜವಾದ ರುಚಿ ಗೊತ್ತಿದ್ದ ನಮಗೆ ಇಲ್ಲಿಯ ಹಾಲು-ಮೊಸರಿನ ವಾಸನೆ ಸರಿ ಬರುತ್ತಿರಲಿಲ್ಲ. ನಿರ್ವಾಹವೇ ಇಲ್ಲ. ಹಾಲೆಂಡಿನ (ನೆದರಿಲ್ಯಾಂಡ್) ಹಾಲು-ಚೀಸ್,  ಪೌಡರದಿಂದ ಮಾಡಿದ ಮೊಸರು ತಿನ್ನುವಾಗೆಲ್ಲ ಊರ ಕಡೆಯ ಕೆನೆಮೊಸರು ನೆನಪಾಗದೇ ಇರುತ್ತಿರಲಿಲ್ಲ. ಹಾಲಿನ ಲೀಟರ್ ಟಿನ್‌ಗಳನ್ನು ಒಮ್ಮಯೇ 50 ಲೀಟರ್‌ಗಳನ್ನು ತಂದು ಸಂಗ್ರಹಿಸಿಟ್ಟುಕೊಳ್ಳಬಹುದು.
ಕೆಡುವದಿಲ್ಲ (4-6 ತಿಂಗಳು ಇಡಬಹುದು).

ನಮ್ಮ ಹುಡುಗರು ಇಲ್ಲಿಯ ಈ ಹಾಲು, ಮೊಸರು, ಬೆಣ್ಣೆಗಳಿಗೆ ಅದೆಷ್ಟು ಹೊಂದಿಕೊಂಡಿದ್ದರೆಂದರೆ ಊರಿಗೆ ಹೋದಾಗ ಅಲ್ಲಿಯ ತಾಜಾ ಹಾಲು ಮೊಸರು ಬೆಣ್ಣೆ ವಾಸನೆ ಹಿಡಿಸುತ್ತಿರಲೇ ಇರಲಿಲ್ಲ. ಇಲ್ಲಿಯ ಲಾಬಾನ್ (ಮಜ್ಜಿಗೆ)  ಕುಡಿದ
ಇವರಿಗೆಲ್ಲ ಊರಿನ  ಮಜ್ಜಿಗೆ ಹಿಡಿಸಲೇ ಇಲ್ಲ. 3 ರಿಯಾಲ್‌ಗೆ ಒಂದು ಲೀಟರ್ ಹಾಲು 24ರೂ.) ಹಾಲಿನದೇನೊ ತೊಂದರೆ ಇಲ್ಲ. ಉಪಯೋಗಿಸುವ ವಿಧಾನಗಳು ಬೇರೆ. ಹಾಲು ಬೆರೆಸಿದ ಚಹ-ಕಾಫಿ ಶೇ. 95 ಅರಬ್ಬಿಯರು, ಪಾಶ್ಚಾತ್ಯರು ಕುಡಿಯುವದಿಲ್ಲ. ನಮ್ಮಲ್ಲಿ ಒಂದು ಸ್ವಲ್ಪ ಕರಿ ಚಹಾ ಆದರೆ ಹಿಂದೆ ಮುಂದೆ ಮಾತಾಡಿ ದೊಡ್ಡ
ರಾದ್ದಾಂವನ್ನೇ ಮಾಡುತ್ತಾರೆ.

ಸೌದಿ ತುಂಬೆಲ್ಲ ಅಲ್ಲಲ್ಲಿ (Pizza shop) ಪಿಜ್ಜಾಷಾಪ್‌ಗಳು ಶುರುವಾಗಿದೆ. ನಾವು 86ರಲ್ಲಿ ಯುರೋಪಕ್ಕೆ ಹೋದಾಗಲೇ ಅಲ್ಲಿಯೇ ಮೊದಲು ಪೀಜ್ಜ್‌ದ ರುಚಿಗೊತ್ತಾದಡ್ಡು. ಬಿಸಿ ಇರುವಾಗಲೇ ತಿನ್ನುವದೊಂದು ರೂಢಿ. ನಮ್ಮ ಕಡೆಗೆ ಹೋಟೆಲ್‌ಗೇ ಹೋಗಿ ಕುಳಿತ ಮೇಲೆ ಅರ್ಡರ್ ತೆಗೆದುಕೊಂಡು ಬಿಸಿ ಬಿಸಿ ದೋಸೆ ಸಪ್ಲೈ ಮಾಡಿದಂತೆ ಇಲ್ಲಿಯೂ ಸ್ವಲ್ಪ ಸಮಯ ಕಾಯಬೇಕಾಗುವದು. ಮೈದಾ ಹಿಟ್ಟಿಗೆ ಈಸ್ಟ್ ಪುಡಿ ಹಾಕಿ ಸ್ವಲ್ಪ ನೀರಿನಲ್ಲಿ ನೆನಸಿಡಬೇಕು. ನಂತರ ಅದಕ್ಕೆ ದೊಣ್ಣೆಮೆಣಸಿನಕಾಯಿ ಚೂರುಗಳು, ಕೋತಂಬರಿ, ಲವಂಗ ಸೇರಿಸಿ ಮಾಡಿ owen ದಲ್ಲಿಟ್ಟಿದ್ದಾದರೆ
ಅರ್ದತಾಸಿನಲ್ಲಿ ಫಮ ಫಮ pizza ತಯಾರು. ನಾನು ಶ್ರೀಮತಿ ವಾಲ್ಟರ್‌ಮನ್‌  (ಅಮೇರಿಕದವರು)ರವರಿಂದ ಕಲಿತುಕೊಂಡೆ. ನಮ್ಮ ಹುಡುಗರಿಗೂ ನಮಗೂ ಒಂದು ಹೊಸ ಅಚ್ಚು ಮೆಚ್ಚಿನ ತಿಂಡಿ ಕಲಿತುಕೊಂಡತಾಯ್ತು.

ಸಂಜೆಯೆಲ್ಲಾ ಪಟ್ಟಣದಲ್ಲಿರುವ ಪಿಜ್ಜಾ ಷಾಪ್‌ಗಳು ಭರ್ತಿಯಾಗಿರುತ್ತವೆ. ನಮ್ಮ ಮಹಿಳಾ ಮಂಡಳದವರು ವಿಶೇಷವಾಗಿ pizzaತಿನ್ನಲಿಕ್ಕೆಂದು ಬಸ್ ಮಾಡಿ ಕೊಂಡು ಹೋಗಿ ತಿಂದು ಬರುತ್ತಾರೆ. ಮನೆಯಿಂದ ನಾವು ಸಾಯಂಕಾಲ ಹೋಗಿ ಅದನ್ನು ಸವಿದು ಬರುತ್ತಿದ್ದೆವು.

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಳತೇನ ಕೇಳ
Next post ಹೋರಾಟಕೆ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys