ಹೇಳತೇನ ಕೇಳ

ಪ್ಯಾರಿಸ್ಸಿನಿಂದ ಬೆಳಗಿನ ಎಂಟೂವರೆಗೆ ನಾವೇರಿದ ಇಂಟರ್‌ ಯುರೋಪು ವಿಮಾನ ಫ್ರಾನ್ಸಿನ ದಕ್ಷಿಣದ ಮಹಾನಗರ ತುಲೋಸಿನಲ್ಲಿಳಿದಾಗ, ಸರಿಯಾಗಿ ಒಂಬತ್ತೂ ಮುಕ್ಕಾಲು. ಅಲ್ಲಿ ತಪಾಸಣೆಯ ಕ್ಷಿರಿಕ್ಷಿರಿಗಳೇನಿರಲಿಲ್ಲ. ದ್ವಾರದಲ್ಲಿ ನಮಗಾಗಿ ಕಾದಿದ್ದ ಜುವಾನ್‌ಬುಯೋ ದೂರದಿಂದಲೇ ನಗುವಿನೊಡನೆ ಕೈ ಬೀಸಿದ. ಅವನೊಡನೆ ಫ್ರಾನ್ಸಿನ ರೋಟರಿ ಜಿಲ್ಲೆ 1700ರ ಸಮೂಹ ಅಧ್ಯಯನ ವಿನಿಮಯ ಕಾರ್ಯಕ್ಷ್ರಮ ಸಮಿತಿಯ ಮುಖ್ಯಸ್ಥ ಜಾಕ್‌ ಗಿಬೇ ಬಂದಿದ್ದ. ಬುಯೋ ಎತ್ತರದ ಆಜಾನುಬಾಹು ವ್ಯಕ್ಷ್ತಿ. ಅವನಿಗೆ ಹೋಲಿಸಿದರೆ ಗಿಬೇ ಕುಳ್ಳ. ಆದರೆ ವಯಸ್ಸಲ್ಲಿ ಗಿಬೇ ತುಂಬಾ ಚಿಕ್ಕವ. ಇಬ್ಬರಿಗೂ ಇಂಗ್ಲೀಷ್‌ ಚೆನ್ನಾಗಿ ಬರುತ್ತಿದ್ದುದರಿಂದ ಸಂವಹನದ ಸಮಸ್ಯೆ ಇರಲಿಲ್ಲ.

ನಮ್ಮನ್ನು ಅವರು ಕಾರಲ್ಲಿ ಕರೆದೊಯ್ದದು ದ್ಯುಮಿದಿ ಕಾಲುವೆ ದಂಡೆಯ ಮೇಲಿರುವ ಇಂಟರ್‌ನ್ಯಾಶನಲ್‌ ಕಂಫಟ್‌ರ್‌ ಇನ್ನ್‌ಗೆ. ಹೋಟೆಲಲ್ಲಿ ಬೆಳಗ್ಗಿನ ತಿಂಡಿ ನಡೆಯುತ್ತಿರುವಂತೆ ರೋಟರಿ ಜಿಲ್ಲಾ 1700 ರ ಗವರ್ನರ್ ‌ಹೋಸ್ಟ್‌ ಹಂಬರ್ಗ್‌ ನಮ್ಮನ್ನು ಸೇರಿಕೊಂಡ. ಆರೂವರೆ ಅಡಿ ಎತ್ತರದ, ಹಣ್ಣು ಟೊಮೇಟೋ ಬಣ್ಣದ ಅಪ್ಪಟ ಬಿಳಿಗೂದಲಿನ ಈತ ಜರ್ಮನಿಯವ. ತುಲೋಸ್‌ ವಿಶ್ವವಿದ್ಯಾಲಯದಲ್ಲಿ ಜರ್ಮನ್‌ ಭಾಷಾ ಪ್ರೊಫೆಸರನಾಗಿರುವ ಈತ, ಫ್ರೆಂಚಳೊಬ್ಬಳನ್ನು ಮದುವೆಯಾಗಿ ಫ್ರೆಂಚ್‌ ನಾಗರಿಕನಾಗಿ ಬಿಟ್ಟಿದ್ದಾನೆ. ಈತನ ಮುಖದಲ್ಲಿ ವಿಶ್ವಾಸ ಮೂಡಿಸುವ ನಗುವಿನ ಬದಲು ನನಗೆ ಕಂಡದ್ದು ದರ್ಪ. ಹಿಟ್ಲರ್‌ ಜರ್ಮನರು ಆರ್ಯರೆಂದೂ, ಆರ್ಯರು ಆಳಲಿಕ್ಕಾಗಿಯೇ ಹುಟ್ಟಿದವರೆಂದೂ ಹೇಳಿಕೊಂಡು ಏನೆಲ್ಲಾ ಅನಾಹುತ ಮಾಡಿ ಹಾಕ್ಷಿದ್ದ. ಇವನೂ ಅದೇ ಅಭಿಪ್ರಾಯವುಳ್ಳವನೊ ? ಹೌದೋ ಅಲ್ಲವೋ, ಅಂತೂ ಫ್ರಾನ್ಸಿನ ದಕ್ಷಿಣ ಭಾಗಕ್ಕೆ ಬಂದು ಕೆಲಸಗಿಟ್ಟಿಸಿ, ಇಲ್ಲಿಯವಳನ್ನೇ ಮದುವೆಯಾಗಿ ಕೊನೆಗೆ ಇಲ್ಲಿಯ ರೋಟರಿ ಜಿಲ್ಲಾ ಗವರ್ನರ್‌ ಆಗೋದು ಅಂದರೆ ಅದೇನು ಸಣ್ಣ ಸಾಧನೆಯೆ ?

ಹಂಬರ್ಗ್‌ ಬಗ್ಗೆ ನಾನು ಏನೇನೋ ಯೋಚಿಸುವಷ್ಟರಲ್ಲಿ ಆತ ನನ್ನ ಕೈ ಕುಲುಕ್ಷಿ ‘ಫ್ರಾನ್ಸಿಗೆ ಸ್ವಾಗತ. ನೀನು ಅರ್ಥಶಾಸ್ತ್ರದ ಪ್ರೊಫೆಸರನಲ್ಲವೆ? ನಮ್ಮ ಯೂನಿವರ್ಸಿಟಿಯಲ್ಲಿ ನಿನ್ನದೊಂದು ಕಾರ್ಯಕ್ಷ್ರಮ ಇರಿಸಿಕೊಳ್ಳುವ. ನಮ್ಮ ಮಕ್ಕಳಿಗೆ ಭಾರತದ ಸಂಸ್ಕೃತಿ ಮತ್ತು ಅರ್ಥವ್ಯವಸ್ಥೆಯ ಬಗ್ಗೆ ಹೇಳುವಿಯಂತೆ’ ಅಂದ. ನನಗೂ ಅಂತಹದ್ದೊಂದು ಅವಕಾಶ ಬೇಕೆಂದಿತ್ತು. ಆದರೆ ಹಂಬರ್ಗ್‌ನದ್ದು ಕೇವಲ ಪೊಳ್ಳು ಭರವಸೆಯಾಗಿ ಉಳಿದು ಬಿಟ್ಟಿತು. ನಾವು ತುಲೋಸಿನಲ್ಲಿ ಆರಂಭದ ನಾಲ್ಕು ಮತ್ತು ವಿದಾಯಕ್ಷ್ಕೆ ಮುನ್ನ ಮೂರು ದಿಗಳನ್ನು ಕಳೆದರೂ, ನನಗೆ ಆತನಾಗಿಯೇ ಹೇಳಿದ್ದ ಅವಕಾಶ ಒದಗಿಸಿಕೊಡಲೇ ಇಲ್ಲ. ಹೋಗಲಿ, ನಮ್ಮ ಜತೆ ಊರು ಸುತ್ತಲು ಬರುತ್ತಾನೆ, ನಮ್ಮ ಬೇಕುಬೇಡಗಳನ್ನು ವಿಚಾರಿಸಿಕೊಳ್ಳುತ್ತಾನೆ ಎಂದುಕೊಂಡರೆ ಅದೂ ಇಲ್ಲ. ಕೊನೆಗೆ ವಿದಾಯದಂದು ಭಾಷಣದಲ್ಲಿ ‘ಈ ವಿನಿಮಯ ಕಾರ್ಯಕ್ಷ್ರಮದ ಹೊಣೆ ಹೊರಬೇಕಾದವ ಹಿಂದಿನ ಗವರ್ನರ್‌. ಆದುದರಿಂದ ಕಾರ್ಯಕ್ಷ್ರಮದಲ್ಲಿ ಏನಾದರೂ ಏರುಪೇರಾದರೆ ಅದಕ್ಕೆ ತಾನು ಹೊಣೆಯಲ್ಲ’ ಎಂದು ಹೇಳಿ ಜಾರಿಕೊಂಡಿದ್ದ. ರೋಟರಿ ಗವರ್ನರ್‌ ಹಂಬರ್ಗ್‌ ಅಪ್ಪಟ ರಾಜಕಾರಣಿಯ ಭಾಷೆಯಲ್ಲಿ ಮಾತಾಡಿದ್ದ !

ಬುಯೋನ ಸಮಾಜಸೇವೆ

ಆದರೆ ಫ್ರೆಂಚ್‌ ಸಮೂಹ ವಿನಿಮಯ ತಂಡದ ನಾಯಕ್ಷನಾಗಿ ಭಾರತಕ್ಕೆ ಬಂದಿದ್ದ ಜುವಾನ್‌ ಬುಯೋ ಮಾತ್ರ ತನ್ನ ಸ್ವಭಾವದಿಂದ ನಮಗೆಲ್ಲರಿಗೂ ಆತ್ಮೀಯನಾದ. ನಮ್ಮ ಬೇಕು ಬೇಡಗಳನ್ನೆಲ್ಲಾ ವಿಚಾರಿಸಿದ. ತನ್ನ ಮನೆಗೆ ಟ್ಯೂಬು ರೈಲಲ್ಲಿ ಕರೆದುಕೊಂಡು ಹೋದ. ಡ್ರೈವರನೇ ಇಲ್ಲದೆ ಓಡುವ ಆ ರೈಲಲ್ಲಿ ಪಯಣಿಸುವುದೇ ಒಂದು ಗಮ್ಮತ್ತು. ಮನೆಯಲ್ಲಿ ತಿಂಡಿತೀರ್ಥಗಳನ್ನು ನೀಡಿದ. ಗುಂಡು ಪ್ರಿಯ ಗುರುವಿಗೆ ವೈವಿಧ್ಯಮಯ ತೀರ್ಥಗಳನ್ನು ನೋಡಿ ತುಂಬಾ ಖುಷಿಯಾಯಿತು. ಅಲ್ಲಿ ಫ್ರಾನ್ಸಿನ ವೈಶಿಷ್ಟ್ಯವಾದ ವೈಟ್‌ವೈನಿನ ರುಚಿ ನೋಡುವ ಅವಕಾಶವೂ ಸಿಕ್ಕ್ಷಿತು.

ಇವೆಲ್ಲಕ್ಕ್ಷಿಂತ ನನಗೆ ಬುಯೋನನ್ನು ಹೆಚ್ಚು ಇಷ್ಟವಾದುದು ಆತ ಅಂಗವಿಕಲರಿಗಾಗಿ ಸಂಸ್ಥೆಯೊಂದನ್ನು ನಡೆಸುತ್ತಾನೆ ಎನ್ನುವ ಕಾರಣಕ್ಕಾಗಿ. ತುಲೋಸಿನಲ್ಲಿ ನಾವು ಇಳಿದುಕೊಂಡಿದ್ದ ಕಂಫರ್ಟ್‌ ಇನ್ನ್‌ನಿಂದ ಕೇವಲ ಒಂದು ಕ್ಷಿಲೋಮೀಟರ್‌ ದೂರದಲ್ಲಿರುವ ಕಟ್ಟಡವೊಂದರಲ್ಲಿರುವ ಈ ಸಂಸ್ಥೆಯ ಸಂಸ್ಥಾಪಕ ಸ್ವತಾ ಬುಯೋನೇ. ಅವನ ಹಿರಿಮಗಳು ಅಪ್ಪನಿಗೆ ನಿರ್ವಹಣಾ ಸಹಾಯ ನೀಡುತ್ತಿದ್ದಾಳೆ. ಒಂದರ್ಥದಲ್ಲಿ ಅವಳೇ ಈ ಸಂಸ್ಥೆಯನ್ನು ನಡೆಸುವವಳು. ರೋಟರಿ ಮತ್ತು ಗ್ಲೈಡರ್ಸ್ ಕ್ಲಬ್ಬಿನ ಸದಸ್ಯನಾಗಿರುವ ಬುಯೋ, ಸಂಸ್ಥೆಯಲ್ಲಿರುವುದಕ್ಕ್ಷಿಂತ ಹೊರಗಡೆ ಇರುವುದೇ ಜಾಸ್ತಿ. ಫ್ರಾನ್ಸಿನಲ್ಲಿ ಮಾತ್ರವಲ್ಲದೆ ಇಟೆಲಿಯಲ್ಲೂ ಆತನ ಸಂಸ್ಥೆಗೆ ಒಳ್ಳೆಯ ಹೆಸರಿದೆ. ಹಾಗಾಗಿ ಇಟೆಲಿಗೂ ಆಗಾಗ ಹೋಗುತ್ತಿರುತ್ತಾನೆ. ಅರುವತ್ತೈದರ ಹರೆಯದ ಬುಯೋ ಜೀವನದ ನಶ್ವರತೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡ ಕಾರಣ ಮಗಳನ್ನು ಚೆನ್ನಾಗಿ ಪಳಗಿಸಿ ಬಿಟ್ಟಿದ್ದಾನೆ.

ಬುಯೋನ ಸಂಸ್ಥೆ ಹೊರಗಿನಿಂದ ಸಣ್ಣದಾಗಿ ಕಾಣುತ್ತದೆ. ಒಳಹೊಕ್ಕಾಗ ಅದರ ವೈಶಾಲ್ಯಕ್ಷ್ಕೆ ನಾವು ಬೆರಗಾಗಲೇಬೇಕು. ಪ್ರವೇಶಿಸುತ್ತಲೇ ಸಿಗುವ ಕೋಣೆಯ ಇಕ್ಕೆಲಗಳಲ್ಲಿ ಎಂಟು ಮಂದಿ ಕುರ್ಚಿ ದುರಸ್ತಿಯ ಕಾರ್ಯದಲ್ಲಿ ತಲ್ಲೀನರಾಗಿದ್ದರು. ನಮ್ಮ ಆಗಮನ ಅವರ ತನ್ಮಯತೆಗೆ ಭಂಗ ತಂದಿರಲಿಲ್ಲ. ಬುಯೋ ‘ಬೋಂಜೂರ್‌’ ಎಂದು ಅವರಿಗೆ ವಂದಿಸಿದಾಗ ಅವನ ಧ್ವನಿ ಗುರುತಿಸಿ, ಮುಖ ಅರಳಿಸಿ ಅವರು ಪ್ರತಿವಂದನೆ ಸಲ್ಲಿಸಿದರು. ಅವರೆಲ್ಲರೂ ದೃಷ್ಟಿ ಕಳಕೊಂಡವರು ಅ ಬುಯೋ ಫ್ರೆಂಚಲ್ಲಿ ನಮ್ಮ ಬಗ್ಗೆ ಹೇಳಿದ. ನಮ್ಮನ್ನು ಕಾಣಲಾಗದ ಅವರು ಒಟ್ಟಾಗಿ ‘ಬೋಂಜೂರ್‌’ ಎಂದು ಸ್ವಾಗತಿಸಿದರು. ನಾವು ಅವರ ಬಳಿಗೆ ಹೋಗಿ ಅವರು ಮಾಡುತ್ತಿದ್ದ ಕೆಲಸವನ್ನು ನೋಡತೊಡಗಿದೆವು. ಅವರು ಇಂಡೋನೇಶಿಯಾದಿಂದ ತರಿಸಿದ ಬಿಳಲಿನ ನಾರಿನಿಂದ ಕಲಾತ್ಮಕವಾಗಿ ಕುರ್ಚಿ ಹೆಣೆಯುತ್ತಿದ್ದರು. ಕೆಲವರು ಹಾಳಾದ ಕುರ್ಚಿಗಳ ತಳಭಾಗವನ್ನು ದುರಸ್ತಿ ಮಾಡುತ್ತಿದ್ದರು. ಬೇಜಾರು ಕಳೆಯಲು ಫ್ರೆಂಚ್‌ನಲ್ಲಿ ಅದೇನೇನೋ ಜೋಕು ಹಾರಿಸುತ್ತಾ ಜೀವಂತಿಕೆ ಉಳಿಸಿಕೊಳ್ಳುತ್ತಿದ್ದರು. ಅವರ ಕೈಯಲ್ಲಿದ್ದ ಗಡಿಯಾರ, ಬೇಕೆಂದಾಗ ಒಂದು ಗುಂಡಿಯನ್ನು ಅದುಮಿದರೆ ಗಂಟೆ ಎಷ್ಟೆಂಬುದನ್ನು ಗಟ್ಟಿಯಾಗಿ ಹೇಳುತ್ತಿತ್ತು.

ಒಳಗೆ ಇನ್ನಷ್ಟು ಕೋಣೆಗಳು, ಮತ್ತಷ್ಟು ಅಂಗವಿಕಲರು. ಬೇರೆ ಬೇರೆ ಕುರಕುಶಲ ವಸ್ತುಗಳ ತಯಾರಿ ಮತ್ತು ದುರಸ್ತಿ ಅವರ ಕೆಲಸ. ಲೆಕ್ಕಪತ್ರ, ಕಡತಗಳ ವಿಲೇವಾರಿಗಾಗಿ ನಾಲ್ಕು ಕಂಪ್ಯುಟರುಗಳಿವೆ. ಅವನ್ನು ಆಪರೇಟ್‌ ಮಾಡುವುದೂ ಕೂಡಾ ಅಂಗವಿಕಲರೇ. ಲೆಕ್ಕಪತ್ರಗಳನ್ನು ನಿಭಾಯಿಸುವವನೊಬ್ಬ ಒಕ್ಕಣ್ಣ. ಸಂಸ್ಥೆಯಲ್ಲಿರುವ ಒಟ್ಟು ಇಪ್ಪತ್ತಮೂರು ಮಂದಿ ಬೇರೆ ಬೇರೆ ಕೆಲಸ ಮಾಡಿಕೊಂಡು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ.

‘ನೀವು ಇವರನ್ನು ಧಾರಾಳವಾಗಿ ಮಾತಾಡಿಸಬಹುದು’ ಎಂದು ಬುಯೋ ತರ್ಜುಮೆದಾರನ ಪಾತ್ರ ವಹಿಸಲು ಸಿದ್ಧನಾದ. ನಾವು ಒಬ್ಬ ಕುರುಡನನ್ನು ಮಾತಾಡಿಸಿದೆವು.

‘ನೀನು ಓದಬಲ್ಲೆಯಾ?’

‘ಓದೋದು ಮಾತ್ರವಲ್ಲ, ಬರೆಯಲೂ ಬಲ್ಲೆ. ನಾನು ಬ್ರೈಲ್‌ ಕಲಿತಿದ್ದೇನೆ.’

‘ಇಲ್ಲಿ ಗಳಿಸಿದ ಹಣವನ್ನು ಏನು ಮಾಡ್ತೀಯಾ?’

‘ಅದೆಲ್ಲಾ ನನ್ನ ಹೆಂಡತಿಗೆ ಸೇರಿದ್ದು. ನನಗೆ ಇಬ್ಬರು ಮಕ್ಕಳು. ಶಾಲೆಗೆ ಹೋಗುತ್ತಿದ್ದಾರೆ. ಅವರ ಕಣ್ಣು ಸರಿಯಾಗಿದೆ’ ಎಂದು ನಕ್ಕ.

‘ಮಕ್ಕಳೊಡನೆ ನಿನ್ನ ಸಂಬಂಧ ಹೇಗಿದೆ!’

‘ಅಯ್ಯಯೋ ಅದೇನು ಕೇಳ್ತೀರಿ! ಅವರು ನಾನು ಮನೆಗೆ ಹೋಗೋದನ್ನೇ ಕಾಯ್ತಿರ್ತಾರೆ. ಸಂಜೆ ನಾವೆಲ್ಲಾ ಒಟ್ಟಾಗಿ ಈವ್‌ನಿಂಗ್‌ ವಾಕ್ಷಿಂಗ್‌ ಹೋಗ್ತೇವೆ. ರಾತ್ರೆ ಅವರು ಹೊಸ ಕಾದಂಬರಿಯನ್ನು ನನಗೆ ಓದಿ ಹೇಳ್ತಾರೆ. ನನ್ನ ಹೆಂಡ್ತಿ ಜತೆ ಕೂತು ನಾನು ಅದನ್ನು ಅನುಭವಿಸುತ್ತೇನೆ. ‘

‘ನಿನಗೆ ಜೀವನದಲ್ಲಿ ಬೇಸರ ಆಗೋದುಂಟೆ?’

‘ಮೊದಲು ಮಾಡಲು ಕೆಲಸವೇನೂ ಇಲ್ಲದಿದ್ದಾಗ ಹಾಗೆ ಆಗುತ್ತಿದ್ದುದುಂಟು. ಈಗ ಕೈ ತುಂಬಾ ಕೆಲಸ ಇದೆ. ನಾನೀಗ ಗಳಿಸುತ್ತಿದ್ದೇನೆ. ಯಾರದೇ ಕರುಣೆ ಮತ್ತು ಹಂಗಿಗೆ ಒಳಗಾಗದೆ ಬದುಕು ಸಾಗಿಸಲು ನನಗೆ ಸಾಧ್ಯವಾಗುತ್ತಿದೆ. ಹಾಗಾಗಿ ಬೇಸರವೇನೂ ಇಲ್ಲ.’

‘ನಿನ್ನ ಹೆಂಡತಿಗೆ ಕೆಲಸ ಉಂಟೆ?’

‘ಹೌದು. ಅವಳು ಒಂದು ಟೊಬ್ಯಾಕೋ ಶಾಪ್‌ ‘ಗೂಡಂಗಡಿ’ ನಡೆಸುತ್ತಿದ್ದಾಳೆ. ಅದು ನಮ್ಮ ಮನೆಯ ಮುಂಭಾಗದಲ್ಲೇ ಇದೆ. ನೀವು ನಂಬ್ತೀರೋ ಇಲ್ವೊ? ನಮ್ಮಲ್ಲಿ ಎಲ್ಲಾ ಅಂಗಗಳೂ ಸರಿ ಇದ್ರೂ ನೆಟ್ಟಗೆ ಸಂಸಾರ ಮಾಡಲು ಹೆಚ್ಚಿನವರಿಗೆ ಬರುವುದಿಲ್ಲ. ಹಾಗೆ ಹೇಳಿದರೆ ವಿಕಲಾಂಗರೇ ಇಲ್ಲಿ ಹೆಚ್ಚು ಸುಖಿಗಳು’ ಎಂದು ಆತ ನಮ್ಮೆಲ್ಲರನ್ನು ನಗಿಸಿದ. ಅವನು ಹೇಳಿದುದರಲ್ಲಿ ಅತಿಶಯೋಕ್ತಿ ಏನೂ ಇರಲಿಲ್ಲವೆಂದು ಬುಯೋ ಆ ಬಳಿಕ ನಮ್ಮಲ್ಲಿ ಹೇಳಿದ.

ಫ್ರಾನ್ಸಿನಲ್ಲಿ ನಿರುದ್ಯೋಗ ಭತ್ಯೆ ಇರುವುದರಿಂದ ವಿಕಲಾಂಗರು ದುಡಿಯಲೇಬೇಕಾದ ಅನಿವಾರ್ಯತೆ ಏನೂ ಇಲ್ಲ. ಆದರೆ ಈ ಮಂದಿ ದುಡಿದು ಬದುಕುವುದರಲ್ಲಿರುವ ಆನಂದವನ್ನು ಅರ್ಥ ಮಾಡಿಕೊಂಡಿದ್ದಾರೆ. ಬೇರೆಯವರಿಗೆ ಹೊರೆಯಾಗಿರಲು ಇವರಿಗೆ ಇಷ್ಟವಿಲ್ಲ. ಇವರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಬರುತ್ತದೆ. ಆದರೆ ಬುಯೋ ನೀಡುವ ಸಂಬಳ, ಸಂಸ್ಥೆಯ ಮೇಲುಸ್ತುವಾರಿ ಖರ್ಚು ಮುಂತಾದವುಗಳನ್ನು ನಿಭಾಯಿಸಲು ಅದು ಸಾಕಾಗುವುದಿಲ್ಲ. ಶ್ರೀಮಂತ ಫ್ರೆಂಚರು ಮತ್ತು ಇತಾಲಿಯನ್‌ ಗೆಳೆಯರು ನೀಡುವ ದೇಣಿಗೆಗಳಿಂದ ಸಂಸ್ಥೆಯನ್ನು ನಿಭಾಯಿಸಿಕೊಂಡು ಬರಲು ತನಗೆ ಸಾಧ್ಯವಾಗಿದೆ ಎಂದು ಬುಯೋ ಹೇಳಿದ.

ಅಷ್ಟು ಮಂದಿಗಳ ಆತ್ಮ ಸಂತೋಷಕ್ಕೆ ಕಾರಣಕರ್ತನಾದ ಬುಯೋನ ಬಗ್ಗೆ ನನಗೆ ಹೆಮ್ಮೆಯೆನಿಸಿತು. ಅವನನ್ನು ಆಲಂಗಿಸಿಕೊಂಡು ಪ್ರೀತಿಯಿಂದ ‘ಯೂ ಆರ್‌ ಎ ಗ್ರೇಟ್‌ ಮ್ಯಾನ್‌’ ಎಂದೆ. ಅವನು ಅತ್ಯಂತ ಸಹಜ ಸ್ವರದಲ್ಲಿ ‘ಎಸ್ಸ್‌ ಎಸ್ಸ್‌’ ಎಂದು ನನ್ನ ಹೊಗಳಿಕೆಯನ್ನು ಸ್ವೀಕರಿಸಿದ !

ಮ್ಯಾಗಿಯ ಮನೆಯಲ್ಲಿ ಭಾರತ

ಮರುದಿನ, ಅಂದರೆ ಎಪ್ರಿಲ್‌ ಮೂರರಂದು, ಸಂಜೆ ನಾವು ರೋಟರಿ ಕುಟುಂಬಗಳ ಅತಿಥಿಗಳಾಗಿ ಹಂಚಿ ಹೋದೆವು. ಸಸ್ಯಾಹಾರಿಗಳು ಎಂಬ ಕಾರಣಕ್ಕೆ ನನ್ನನ್ನು ಮತ್ತು ಹೆಬ್ಬಾರರನ್ನು ಒಂದೇ ಕುಟುಂಬಕ್ಕೆ ಹಂಚಿಕೊಡಲಾಗಿತ್ತು. ಆ ಕುಟುಂಬದ ಯಜಮಾನನ ಹೆಸರು ಜಾರ್ಜ್. ಆತ ಡೊಳ್ಳು ಹೊಟ್ಟೆಯ, ಬಕ್ಕ ತಲೆಯ, ಅರುವತ್ತು ದಾಟಿದ ಕುಳ್ಳ. ಜಾರ್ಜ್ ತನ್ನ ಕಾರಲ್ಲಿ ನಮ್ಮಮಿಬ್ಬರನ್ನು ಅವನ ಮನೆಗೆ ಕರೆದೊಯ್ದ. ಗೇಟನ್ನು ರಿಮೋಟ್ ಕಂಟ್ರೋಲರ್‌ ಮೂಲಕ ತೆರೆದ ಮತ್ತು ಕಾರು ಒಳ ಬಂದ ಬಳಿಕ ಹಾಗೆಯೇ ಮುಚ್ಚಿದ! ಪೂರ್ತಿಯಾಗಿ ಅವನಿಗೇ ಸೇರಿದ ನಾಲ್ಕಂತಸ್ತಿನ ಬೃಹತ್‌ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಅವನ ವಾಸ. ಕಳ್ಳಕಾಕರಿಗೆ ಪ್ರವೇಶಿಸಲು ಸಾಧ್ಯವಾಗದಂತಹ ಭದ್ರತಾ ವ್ಯವಸ್ಥೆಯಲ್ಲಿ ಅಲ್ಲಿ ಜಾರ್ಜ್ ತನ್ನ ಹೆಂಡತಿ ಮ್ಯಾಗಿಯೊಡನೆ ವಾಸಿಸುತ್ತಾನೆ.

ಮ್ಯಾಗಿ ಚೆಲುವಾದ ದೇಹ ಪ್ರಕೃತಿಯವಳು. ಅವಳು ನಮ್ಮನ್ನು ಕಾಣುತ್ತಲೇ ಕೈ ಕುಲುಕ್ಷಿ ‘ಫ್ರಾನ್ಸಲ್ಲಿ ಹೆಂಗಸರು ಗಂಡಸರನ್ನು ಮತ್ತು ಗಂಡಸರು ಹೆಂಗಸರನ್ನು ಕ್ಷಿಸ್ಸ್‌ ಮಾಡ್ತಾರೆ. ಅದು ಇಲ್ಲಿಯ ಸಂಪ್ರದಾಯ. ನಾನು ನಿನಗೆ ಕ್ಷಿಸ್ಸ್‌ ಕೊಡಲಾ? ಎಂದು ಕೇಳಿದಳು.

ತನ್ನ ವಯಸ್ಸನ್ನು ಅವಳು ಮರೆಮಾಚಲು ಎಷ್ಟೇ ಯತ್ನಿಸಿದರೂ ಐವರು ಮೊಮ್ಮಕ್ಕಳಿರುವ ಆಕೆಗೆ ಖಂಡಿತಾ ಐವತ್ತೈದು ದಾಟಿರಬಹುದು ಎಂದುಕೊಂಡು ‘ಕ್ಷಿಸ್‌ ಮಿ ಮದರ್‌’ ಅಂದುಬಿಟ್ಟೆ. ಅದೇ ಆದದ್ದು ಮೋಸ. ಸ್ವಲ್ಪ ಇಂಗ್ಲೀಷ್‌ ಬಲ್ಲ ಮ್ಯಾಗಿಗೆ ಸಿಟ್ಟು ಬಂತು. ‘ನಾನು ಅಷ್ಟು ವಯಸ್ಸಿನವಳ ಹಾಗೆ ಕಾಣುತ್ತೀನಾ?’ ಎಂದು ಕೇಳಿಯೇ ಬಿಟ್ಟಳು. ನನಗೆ ಪರಿಸ್ಥತಿಯ ಅರ್ಥವಾಯಿತು. ‘ಫ್ರೆಂಚರಲ್ಲಿ ಕ್ಷಿಸ್ಸಿಂಗ್‌ ಒಂದು ಸಂಪ್ರದಾಯ ಅಂದೆ ನೀನು. ಹಾಗೆ ಭಾರತದಲ್ಲೂ ಒಂದು ಸಂಪ್ರದಾಯವಿದೆ. ನಾವು ಹೆಂಗಸರನ್ನು ಸಾಮಾನ್ಯವಾಗಿ ಅಮ್ಮ ಎಂದೇ ಕರೆಯುತ್ತೇವೆ. ಹೆಚ್ಚೇಕೆ? ನನಗೆ ಆರುವರ್ಷದ ಮಗಳಿದ್ದಾಳೆ. ಅವಳನ್ನು ನಾನು “ತಾಯೀ” ಎಂದೇ ಕರೆಯುವುದು. ಅದೊಂದು ಗೌರವದ ಅಥವಾ ಪ್ರೀತಿಯ ಕರೆ. ವಯಸ್ಸಿಗೂ ಈ ಕರೆಗೂ ಸಂಬಂಧವಿಲ್ಲ!’ ಎಂದು ಅವಳನ್ನು ಸಮಜಾಯಿಸಿದೆ. ಈಗವಳಿಗೆ ಖುಷಿಯಾಗಿ ನನಗೆ ಕ್ಷಿಸ್ಸು ಕೊಟ್ಟೇ ಬಿಟ್ಟಳು. ಅದು ಫ್ರೆಂಚ್‌ ಕ್ಷಿಸ್ಸು. ಕೆನ್ನೆಗೆ ಕೆನ್ನೆ ತಾಗಿಸಿ ಬಾಯಲ್ಲಿ ‘ಪುಚ್’ ಎಂದು ಶಬ್ದ ಹೊರಡಿಸುವುದಷ್ಟೆ!

ಜಾರ್ಜನಿಗೆ ಇಂಗ್ಲೀಷ್‌ ಬರುತ್ತಿರಲಿಲ್ಲ,. ಮಾತಾಡಿದಾಗ ಅರ್ಥವಾಗುತ್ತಿತ್ತಷ್ಟೆ. ಅವನ ಮನೆಯ ಒಪ್ಪ ಓರಣ, ಅಲ್ಲಿರುವ ಕಲಾತ್ಮಕ ಕನ್ನಡಿ, ಬೀರು, ಮಂಚ ಮತ್ತು ಪೀಠೋಪಕರಣಗಳು, ಅವನ ಮನೆಯಲ್ಲಿರುವ ಪುಸ್ತಕಗಳು, ಜಾರ್ಜ ಮತ್ತು ಮ್ಯಾಗಿಯರ ಸದಭಿರುಚಿಗೆ ಸಾಕ್ಷಿ ನುಡಿಯುತ್ತಿದ್ದವು. ಭಾರತದ ಇತಿಹಾಸ, ಸಂಸ್ಕೃತಿ, ಭೌಗೋಳಿಕ ಪರಿಸ್ಥತಿ ಮತ್ತು ಅಡುಗೆಗಳ ಬಗ್ಗೆ ಅವರಲ್ಲಿ ದೊಡ್ಡದಾದ ನಾಲ್ಕು ಕೃತಿಗಳಿದ್ದವು. ಅವರ ಗ್ರಂಥ ಭಂಡಾರದಲ್ಲಿ ಐದು ಬಗೆಯ ವಿಶ್ವಕೋಶಗಳ ಹದಿನೈದು ಬೃಹತ್‌ ಸಂಪುಟ ಗಳಿದ್ದವು. ಮ್ಯಾಗಿ ಡೈನಿಂಗ್‌ ಟೇಬಲ್‌ ಮೇಲೆ ಬೃಹತ್‌ ಫ್ರೆಂಚ್‌ಇಂಗ್ಲೀಷ್‌ ಪದಕೋಶ ವೊಂದನ್ನು ಇರಿಸಿಕೊಂಡಿದ್ದರೆ, ಜಾರ್ಜನ ಜೇಬಲ್ಲಿ ಸದಾಕಾಲ ಪುಟಾಣಿ ಪದಕೋಶವೊಂದು ಭದ್ರವಾಗಿ ಕೂತಿರುತ್ತಿತ್ತು. ನಮ್ಮ ನಡುವೆ ಸುಲಭ ಸಂವಹನಕ್ಕಾಗಿ ಇವೆಲ್ಲಾ ವ್ಯವಸ್ಥೆ. ಭಾರತದ ಮ್ಯಾಪಿನಲ್ಲಿ ಕುಂದಾಪುರ, ಮಂಗಳೂರುಗಳನ್ನು ಅವರಿಗೆ ತೋರಿಸಲು ಸಾಧ್ಯ ವಾಯಿತು. ‘ಇದರಲ್ಲಿ ನಿನ್ನ ಸುಳ್ಯ ಎಲ್ಲಿದೆ ಮಾರಾಯ?’ ಎಂದು ಮ್ಯಾಗಿ ಕೇಳಿದಾಗ ನಾನು ಪುತ್ತೂರು ಮತ್ತು ಮಡಿಕೇರಿಗಳ ಮಧ್ಯದ ಸ್ಥಳವೊಂದನ್ನು ತೋರಿಸಿ ಅದೊಂದು ‘ಪೆತಿತ್‌ ವಿಲ್ಲೇ’ ‘ಸಣ್ಣ ಪ್ರದೇಶ’ ಎಂದೆ. ‘ಸಣ್ಣದು ಎಂದು ಯಾಕೆ ಹೇಳುತ್ತಿ? ನಿನ್ನಿಂದಾಗಿ ಫ್ರೆಂಚರಿಗೂ ಸುಳ್ಯದ ಬಗ್ಗೆ ಗೊತ್ತಾಯಿತೋ ಇಲ್ಲವೊ?’ ಎಂದು ಮ್ಯಾಗಿ ನನ್ನನ್ನೇ ಪ್ರಶ್ನಿಸಿದಳು.

ಮಾತಿನ ಮಧ್ಯೆ ಮ್ಯಾಗಿ ನನ್ನ ಮತ್ತು ಹೆಬ್ಬಾರರ ವಯಸ್ಸುಗಳನ್ನು ಕೇಳಿ ತಿಳಿದುಕೊಂಡಳು. ಜಾರ್ಜನಿಗೆ ತನ್ನ ವಯಸ್ಸನ್ನು ಹೇಳಿಕೊಳ್ಳಲು ಸಂಕೋಚವೇನಿರಲಿಲ್ಲ. ಮ್ಯಾಗಿ ಮಾತ್ರ ಅವಳ ವಯಸ್ಸನ್ನು ಹೇಳಲೇ ಇಲ್ಲ.’ಫ್ರಾನ್ಸಿನಲ್ಲಿ ಹೆಂಗಸರ ವಯಸ್ಸೆಷ್ಟು ಎಂದು ಕೇಳಬಾರದು’ ಎಂದು ತಾಕ್ಷೀತು ಬೇರೆ ಮಾಡಿದಳು. ‘ನೀನು ನಮ್ಮ ವಯಸ್ಸು ಕೇಳಿದ್ದೀಯಲ್ಲಾ?’ ಎಂದು ನಾನು ಆಕೇಪಿಸಿದಾಗ ಅವಳು ‘ನೀನು ಹೇಳಿದ್ದು ಯಾಕೆ?’ ಎಂದು ನನ್ನನ್ನೇ ಮಂಗ ಮಾಡಿದಳು!

ಫ್ಲ್ಯಾಟಿನ ಹಿಂಬದಿಯಲ್ಲಿರುವ ಹತ್ತೆಕರೆ ಜಾಗ ಜಾರ್ಜನಿಗೆ ಸೇರಿದ್ದು. ಅಲ್ಲದೆ ಆತ ಒಂದು ಸ್ವಂತ ಡಿಸ್ಟಿಲ್ಲರಿ ಕೂಡಾ ಹೊಂದಿದ್ದಾನೆ. ಅವನ ಮನೆಯ ಒಂದು ಕಪಾಟಿನಲ್ಲಿ ಆತನ ಡಿಸ್ಟಿಲ್ಲರಿಯಲ್ಲಿ ಉತ್ಪಾದನೆಯಾಗುವ ವಿವಿಧ ಬಗೆಯ ಮದ್ಯಗಳ ಮಾದರಿಗಳಿವೆ. ಅವುಗಳಿಗಾಗಿ ತಯಾರಾದ ಕಲಾತ್ಮಕವಾದ ಬಾಟಲುಗಳು. ಆ ಕಪಾಟಿನ ಬಾಗಿಲು ತೆರೆದು ಜಾರ್ಜ್ ‘ನಿಮಗೆ ಬೇಕಾದ್ದನ್ನು ತೆಗೆದು ಕುಡಿಯಬಹುದು’ ಎಂದ. ದೊಡ್ಡ ಗುಂಡು ಮಾಸ್ತರ್‌ ಜಾರ್ಜ್‌ಗೆ ನಾವು ಮದ್ಯಪಾನಿಗಳಲ್ಲ ಎನ್ನುವುದು ತಿಳಿದ ಮೇಲೆ ನಿರಾಶೆ ಯಾಯಿತು. ಮ್ಯಾಗಿ ಗೆಲುವಿನ ಕೇಕೆ ಹಾಕ್ಷಿದಳು. ‘ಅಬ್ಬಾ ಬಚಾವಾದೆ’ ನೀವೂ ಕುಡುಕರಾಗಿರುತ್ತಿದ್ದರೆ ರಾತ್ರೆ ಮಲಗುವಾಗ ಅದೆಷ್ಟು ಹೊತ್ತಾಗುತ್ತಿತ್ತೊ? ಕುಡಿದೂ, ತಿಂದೂ ಇವನ ಡುಬ್ಬ ಮುಂದಕ್ಕೆ ಬಂದಿದೆ’ ಎಂದು ಗಂಡನ ಗುಡಾಣ ಹೊಟ್ಟೆಯನ್ನು ತಿವಿದಳು. ಜತೆಗೇ ‘ಫ್ರಾನ್ಸಿನ ರೆಡ್‌ವೈನ್‌ ವಿಶ್ವದಲ್ಲೇ ಪ್ರಖ್ಯಾತವಾದುದು. ಅದು ಆರೋಗ್ಯಕ್ಷ್ಕೂ ಒಳ್ಳೆಯದು. ಅದರ ರುಚಿ ನೋಡದಿರಬೇಡಿ’ ಎಂದು ತಾನಾಗಿಯೇ ಬಾಟಲುಗಳನ್ನು ತಂದು ನಮ್ಮ ಮುಂದಿರಿಸಿದಳು. ಸ್ವಲ್ಪ ಒಗರಾಗಿದ್ದರೂ ಅವಳ ಪ್ರೀತ್ಯರ್ಥ ನಾವದನ್ನು ತೆಗೆದುಕೊಂಡೆವು. ಮುಂದೆ ಫ್ರಾನ್ಸಿನಲ್ಲಿದ್ದಷ್ಟು ಕಾಲ ಊಟದ ಜತೆಗೆ ಸ್ವಲ್ಪ ರೆಡ್‌ವೈನ್‌ ತೆಗೆದುಕೊಳ್ಳುವ ಸಂಪ್ರದಾಯವನ್ನು ಕಾಪಾಡಿಕೊಂಡು ಬಂದೆವು.

ಮ್ಯಾಗಿಯ ಮನೆಯಲ್ಲಿ ಮೊದಲ ರಾತ್ರಿಯೂಟ ಸಮಸ್ಯೆ ಇಲ್ಲದೆ ಕಳೆಯಿತು. ಆದರೆ ಅದೇ ರಾತ್ರಿ ಮ್ಯಾಗಿ ‘ನಿಮಗೆ ನಾಳೆ ಏನು ಮಾಡಿ ಬಡಿಸಲಿ?’ ಎಂದು

ಪೇಚಾಡಿಕೊಂಡಳು. ಫ್ರಾನ್ಸಿನಲ್ಲಿ ಪಪ್ಪನಿಗೆ ತೊಂದರೆಯಾಗದಿರಲಿ ಎಂದು ಹೆಬ್ಬಾರರ ಸೂಟುಕೇಸಲ್ಲಿ ಸ್ವಾತಿ ಒಂದಷ್ಟು ಇಡ್ಲಿ ರವೆ ಮತ್ತು ಸಾಂಬಾರು ಹುಡಿಯ ಪೊಟ್ಟಣ ತುಂಬಿದ್ದಳು. ‘ಬೆಳಗ್ಗಿನ ತಿಂಡಿ ಭಾರತದ ಇಡ್ಲಿ. ನೀನು ಚಿಂತಿಸಬೇಡ. ನಾವೇ ತಿಂಡಿ ಮಾಡಿ ನಿನಗೆ ಕೊಡುತ್ತೇವೆ’ ಎಂದು ಹೆಬ್ಬಾರರು ಆಕೆಯನ್ನು ಸಮಾಧಾನಪಡಿಸಿದರು. ಮ್ಯಾಗಿಯ ಮನೆಯಲ್ಲಿ ಯೋಗರ್ತ್‌ಗೆ ‘ಹುಳಿ ಇಲ್ಲದ ಮೊಸರು’ ಬರವಿರಲಿಲ್ಲ. ಎರಡು ಯೋಗರ್ತ್ ಪ್ಯಾಕುಗಳ ಮುಚ್ಚಳ ತೆಗೆದಿರಿಸಿ ಅದಕ್ಕೆ ಹುಳಿ ಬರಿಸಿದೆವು. ಬೆಳಿಗ್ಗೆ ರವೆಯನ್ನು ಅದಕ್ಕೆ ಮಿಕ್ಸ್‌ ಮಾಡಿದೆವು. ಆದರೆ ಇಡ್ಲಿ ಮಾಡಲಿಕ್ಕೆ ಬೇಕಾದಂತಹ ಪಾತ್ರೆಗಳು ಅಲ್ಲಿ ಎಲ್ಲಿ ಸಿಗಬೇಕು? ಸಿಕ್ಕ್ಷಿದ ಪಾತ್ರೆಯಲ್ಲಿ ಬೇಯಿಸಿ ಅದನ್ನೇ ‘ಇಡ್ಲಿ’ ಎಂದು ಕರೆದು ಡೈನಿಂಗ್‌ ಟೇಬಲ್‌ ಮೇಲೆ ಇರಿಸಿದೆವು. ಮ್ಯಾಗಿ ಸಕ್ಕರೆ, ಜೇನು ತುಪ್ಪ ತಂದಿರಿಸಿದಳು. ಸಕ್ಕರೆಯಲ್ಲಿ ಎರಡು ವಿಧ. ಒಂದು ಅಪ್ಪಟ ಬಿಳಿ. ಕಬ್ಬಿನಿಂದ ಉತ್ಪಾದಿಸಿದ್ದು. ಇನ್ನೊಂದು ಕಂದು ಬಣ್ಣದ್ದು. ಬೀಟ್ರೂಟಿನಿಂದ ಮಾಡಿದ ಸಕ್ಕರೆ! ನಾನು ಮತ್ತು ಹೆಬ್ಬಾರರು ಉಪ್ಪಿಟ್ಟಿನಂತಿರುವ ‘ಇಡ್ಲಿ’ಯನ್ನು ಸಕತ್ತಾಗಿ ತಿಂದು ತೇಗಿದೆವು. ಮ್ಯಾಗಿ ಸ್ವಲ್ಪ ತಿಂದು ‘ಪರವಾಗಿಲ್ಲ ತಿನ್ನಬಹುದು’ ಎಂದಳು. ಜಾರ್ಜನಿಗೆ ಮಾತ್ರ ಅದು ಹಿಡಿಸಲೇ ಇಲ್ಲ. ಅವನು ಬ್ರೆಡ್‌ ತಿಂದು ತೃಪ್ತಿಪಟ್ಟ.

ಅಂದು ಜಾರ್ಜ್ ಮತ್ತು ಮ್ಯಾಗಿ ನಮ್ಮನ್ನು ತುಲೋಸಿನ ಏಶಿಯಾ ಸೆಂಟರಿಗೆ ಕರೆದೊಯ್ದರು. ಅಲ್ಲಿ ಮ್ಯಾಗಿ ಬಸುಮತಿ ಅಕ್ಕ್ಷಿ, ಉದ್ದಿನ ಪಪ್ಪಡ, ಮಾವಿನ ಕಾಯಿಯ ಉಪ್ಪಿನಕಾಯಿ ಮತ್ತು ಆಫ್ರಿಕಾದ ರಸಪೂರಿ ಮಾವಿನಹಣ್ಣುಗಳನ್ನು ನಮಗಾಗಿ ಕೊಂಡಳು. ಅಂದು ಮಧ್ಯಾಹ್ನ ನಮಗೆ ದಕ್ಷಿಣ ತುಲೋಸಿನ ರೋಟರಿ ಕ್ಲಬ್ಬಿನ ಲೆಕ್ಕದಲ್ಲಿ ಕಂಫರ್ಟ್‌ ಇನ್ನ್‌ನಲ್ಲಿ ಭರ್ಜರಿ ಭೋಜನ ಕೂಟವಿತ್ತು. ಅಲ್ಲಿ ನಮ್ಮ ಪರಿಚಯವನ್ನು ಫ್ರೆಂಚಲ್ಲಿ ನಾವೇ ಮಾಡಿಕೊಳ್ಳಲಿಕ್ಕ್ಷಿತ್ತು. ನಾನು ನನ್ನ ಹೆಸರು ಪ್ರವರ ಎಲ್ಲಾ ಹೇಳಿ ಕೊನೆಗೆ ನನಗೆ ಇಬ್ಬರು ಮಕ್ಕಳು ಎನ್ನುವುದನ್ನು ವೇಗವಾಗಿ ‘ದಜಫಾಂ’ ಅಂತ ಒಟ್ಟಾಗಿ ಹೇಳಿಬಿಟ್ಟೆ. ಆಗ ಕ್ಲಬ್ಬಿಡೀ ನಗುವೋ ನಗು. ಇವರೆಲ್ಲಾ ನಗುವಂತಹ ವಿನೋದ ಇಲ್ಲೇನು ನಡೆಯಿತಪ್ಪಾ ಎಂದು ನಾನು ಬುಯೋನ ಮುಖ ನೋಡಿದೆ. ಆತ ಆ ಶಬ್ದವನ್ನು ಬಿಡಿಸಿ ಬಿಡಿಸಿ ಹೇಳಲು ಸೂಚಿಸಿದ. ನಾನು ಬಿಡಿ ಬಿಡಿಯಾಗಿ ‘ದ ಜ ಫಾಂ’ ಎಂದೆ. ಈಗ ಮತ್ತೊಮ್ಮೆ ಎಲ್ಲರೂ ನಕ್ಕರು. ಭೋಜನ ಕೂಟದ ಬಳಿಕ ಬುಯೋ ನನ್ನಲ್ಲಂದ. ‘ಮಾರಾಯ…. ಸ್ವಲ್ಪ ನಿಧಾನವಾಗಿ ಮಾತಾಡುವುದನ್ನು ಕಲಿ. ನೀನು ಆ ಶಬ್ದವನ್ನು ಬಿಡಿಸಿ ಹೇಳಿದರೆ ನಿನಗೆ ಇಬ್ಬರು ಮಕ್ಕಳು ಎಂದಾಗುತ್ತದೆ. ಒಟ್ಟಿಗೇ ಹೇಳಿಬಿಟ್ಟರೆ ಹನ್ನೆರಡು ಮಕ್ಕಳು ಎಂದರ್ಥ!’

ಅಂದು ರಾತ್ರೆ ಊಟಕ್ಕೆ ಮ್ಯಾಗಿ ಬಸುಮತಿ ಅನ್ನ ಮಾಡಿ, ಹಪ್ಪಳ ಸುಟ್ಟು, ಉಪ್ಪಿನಕಾಯಿ, ಯೋಗರ್ತ್ ಮತ್ತು ಹಂದಿ ಮಾಂಸದ ಸಾರು ಸಿದ್ಧಪಡಿಸಿದಳು. ರಾತ್ರಿಯೂಟಕ್ಕೆ ಅವಳ ಸ್ನೇಹಿತೆಯೊಬ್ಬಳನ್ನು ಆಹ್ವಾನಿಸಿದ್ದಳು. ಆಕೆ ಸುಮಾರು ನಲ್ವತ್ತೈದು ದಾಟಿದ ಅವಿವಾಹಿತೆ. ಇಂಗ್ಲೀಷ್‌ ಪ್ರೊಫೆಸರ್‌ ಆಗಿರುವ ಆಕೆಗೆ ಭಾರತದ ಬಗ್ಗೆ ಅಗಾಧ ಕುತೂಹಲವಿತ್ತು. ಆಕೆ ಅನ್ನ, ಹಪ್ಪಳ, ಉಪ್ಪಿನಕಾಯಿ ತಿಂದು ‘ಚೆನ್ನಾಗಿದೆ’ ಎಂದಳು. ಅವಳ ಮಾತನ್ನು ನಂಬಿ ಮ್ಯಾಗಿ ಉಪ್ಪಿನಕಾಯಿ ರಸವನ್ನು ಬಾಯಿಗೆ ಹಾಕ್ಷಿ ‘ಓಲಲಾ’ ಎಂದು ಉದ್ಗಾರ ತೆಗೆದು ಎರಡು ಲೋಟ ಜ್ಯೂಸ್‌ ಗಟಗಟನೆ ಕುಡಿದಳು. ಊಟದ ಕೊನೆಯಲ್ಲಿ ಮ್ಯಾಗಿ ಮಾವಿನಹಣ್ಣು ತುಂಡು ಮಾಡಿ ತಿನ್ನಲು ತಂದಿಟ್ಟಾಗ ಹೆಬ್ಬಾರರು ‘ಹೀಗೆ ಬೇಡ. ಇದರ ಜ್ಯೂಸ್‌ ಮಾಡು’ ಎಂದರು. ಮ್ಯಾಗಿ ಆಶ್ಚರ್ಯದಿಂದ ಕಣ್ಣರಳಿಸಿ ‘ಮಾವಿನಹಣ್ಣಿನ ಜ್ಯೂಸಾ?’ ಎಂದು ಕೇಳಿ ಆ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕ್ಷಿ ಜ್ಯೂಸ್‌ ಸಿದ್ಧಪಡಿಸಿ ತಂದಳು.’ಮಾವಿನಹಣ್ಣಿನ ಜ್ಯೂಸನ್ನು ನಾವು ಕುಡಿಯುತ್ತಿರುವುದು ಇದೇ ಮೊದಲು’ ಎಂದು ಈ ಐಡಿಯಾ ನೀಡಿದ ಹೆಬ್ಬಾರರನ್ನು ಮ್ಯಾಗಿ ಮತ್ತು ಇಂಗ್ಲೀಷ್‌ ಪ್ರಾಧ್ಯಾಪಿಕೆ ಬಹುವಾಗಿ ಮೆಚ್ಚಿಕೊಂಡರು. ಆ ಇಂಗ್ಲೀಷ್‌ ಪ್ರಾಧ್ಯಾಪಿಕೆಯಲ್ಲಿ ಮ್ಯಾಗಿ ನಾವು ಇಡ್ಲಿ ಮಾಡಿದ್ದು, ನಾವೇ ಪಾತ್ರೆ ತೊಳೆದಿಟ್ಟದ್ದು, ಅಡುಗೆ ಮಾಡಲು ಸಹಾಯ ಮಾಡಿದ್ದು ಇತ್ಯಾದಿಯಾಗಿ ಎಲ್ಲವನ್ನು ಹೇಳಿ ‘ಇವರು ತುಂಬಾ ಒಳ್ಳೆಯವರು. ಅತಿಥಿಗಳ ಹಾಗೆ ನಡೆದುಕೊಳ್ಳದೆ ಮನೆಯವರಂತೆ ವರ್ತಿಸಿದರು’ ಎಂದು ನಮ್ಮನ್ನು ಹೊಗಳಿದಳು. ಅಷ್ಟರವರೆಗೆ ನಾವು ಮಾವಿನ ಹಣ್ಣಿನ ರಸ ಹೀರುತ್ತಿದ್ದುದನ್ನೇ ಗಮನಿಸುತ್ತಿದ್ದ ಜಾರ್ಜ್ ಈಗ ಲೋಟಾವೊಂದರಲ್ಲಿ ಸ್ವಲ್ಪ ಜ್ಯೂಸ್‌ ಹಾಕ್ಷಿ ಕುಡಿಯತೊಡಗಿದ. ಅವನಿಗದು ಇಷ್ಟವಾಗದೆ ಹಾಗೆ ಉಳಿಸಿಬಿಟ್ಟ. ‘ಇವನಿಗೆ ಇಷ್ಟವಾಗೋದು ಆಲ್ಕೋಹಾಲು ಮಾತ್ರ’ ಎಂದು ಮ್ಯಾಗಿ ಅವನನ್ನು ಚುಚ್ಚದೆ ಬಿಡಲಿಲ್ಲ.

ಕುಣಿಯೋಣು ಬಾರಾ

ತುಲೋಸಿನಲ್ಲಿ ರೋಟರಿ ಜಿಲ್ಲಾ ಕಾನೇರೆನ್ಸ್‌ ನಡೆಯಲಿಕ್ಕ್ಷಿದ್ದುದು ಎಪ್ರಿಲ್‌ ಐದರಂದು. ಅದರ ಅಂಗವಾಗಿ ಹಿಂದಿನ ಸಂಜೆ ವಾದ್ಯಗೋಷ್ಠಿಯೊಂದನ್ನು ಏರ್ಪಡಿಸಲಾಗಿತ್ತು. ನಮ್ಮ ತಂಡಕ್ಕೆ ವಿದೇಶೀ ವಾದ್ಯಗೋಷ್ಠಿಯೊಂದನ್ನು ಕಾಣುವ ಮತ್ತು ಕೇಳುವ ಅವಕಾಶ. ಹನ್ನೆರಡು ಮಂದಿ ಕಲಾವಿದರು ಪಿಟೀಲಿನಂತಹ ಸಾಧನವೊಂದನ್ನು ಸಾಮೂಹಿಕವಾಗಿ ನುಡಿಸುವ ಕಾರ್ಯಕ್ಷ್ರಮವದು. ಅದರಲ್ಲಿ ಬೇರೆ ಪಕ್ಕವಾದ್ಯಗಳಿಗೆ ಆಸ್ಪದವಿರಲಿಲ್ಲ. ಆಂಗ್ಲ ವರ್ಣಮಾಲಿಕೆಯ ಯು ಅಕರದಾಕಾರದಲ್ಲಿ ಕೂತು ಪಿಟೀಲು ನುಡಿಸುತ್ತಿದ್ದ ಈ ತಂಡದ ನಾಯಕ್ಷ ಒಬ್ಬ ಬಕ್ಕ ತಲೆಯಾತ. ಆತ ಮಾತ್ರ ನಿಂತುಕೊಂಡೇ ಪಿಟೀಲು ನುಡಿಸುತ್ತಿದ್ದ. ತಂಡದ ಹಿಂದೆ ಒಬ್ಬ ವೀಣೆಯಂತಹದ್ದೊಂದನ್ನು ನುಡಿಸುತ್ತಿದ್ದ. ಅದು ಶ್ರುತಿ. ಹಾಡೊಂದು ಮುಗಿದಾಗ ಸಭಾಸದರು ಸುದೀರ್ಘ ಕರತಾಡನದ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ಷಪಡಿಸುತ್ತಿದ್ದರು. ಆಗ ತಂಡದ ನಾಯಕ್ಷ ಎಲ್ಲರಿಗೂ ವಂದಿಸಿ ನೇಪಥ್ಯಕ್ಷ್ಕೆ ಹೋಗಿ ಬಿಡುತ್ತಿದ್ದ. ಅವನು ಮತ್ತೆ ಬರಬೇಕಾದರೆ ಇನ್ನೊಂದು ಬಾರಿ ದೀರ್ಘ ಕರತಾಡನವಾಗಬೇಕು. ಆಗ ಆತ ಬಂದು ಇನ್ನೊಂದು ಹಾಡನ್ನು ನುಡಿಸುತ್ತಿದ್ದ. ಅವನು ಹಾಡಿದ್ದು ಫ್ರೆಂಚ್‌ ಮತ್ತು ಸ್ಪಾನಿಷ್‌ ಜಾನಪದಕ್ಕೆ ಸಂಬಂಧಿಸಿದ ಹಾಡುಗಳು. ನಮಗದು ಅರ್ಥವಾಗದಿದ್ದರೂ ಸಭಾಂಗಣದಲ್ಲಿದ್ದ ಒಂದು ಸಾವಿರಕ್ಕೂ ಅಧಿಕ ಮಂದಿ ಎರಡೂವರೆ ಗಂಟೆಗಳ ಕಾಲ ನಡೆದ ಆ ವಾದ್ಯಗೋಷ್ಠಿಯನ್ನು ಚೆನ್ನಾಗಿ ಆಸ್ವಾದಿಸಿದರು. ಮಧ್ಯದಲ್ಲಿ ಒಂದು ಸಿಳ್ಳೆಯಿಲ್ಲ, ಒಂದು ಸ್ವರವಿಲ್ಲ. ಅತ್ಯಾಧುನಿಕರು ಎಂದು ನಾವು ಭಾವಿಸಿದ್ದ ಫ್ರೆಂಚರು ಜಾನಪದಕ್ಕೆ ನೀಡುವ ಮಹತ್ವ ನೋಡಿ ನಿಜಕ್ಕೂ ದಂಗಾದೆವು.

ಮನೆಗೆ ವಾಪಾಸಾಗುವಾಗ ಮ್ಯಾಗಿಯಲ್ಲಿ ಇದನ್ನೇ ನಾವು ಪ್ರಸ್ತಾಪಿಸಿದೆವು. ಅವಳು ಅದಕ್ಕೆ ‘ಈ ತರದ ಗೋಷ್ಠಿಗಳೆಂದರೆ ಫ್ರೆಂಚರಿಗೆ ಇಷ್ಟ. ನಮಗೆ ಆಧುನಿಕತೆಯ ಅರಿವಿದೆ. ಅದರೊಂದಿಗೆ ಈ ನೆಲದ್ದನ್ನು ಉಳಿಸಿಕೊಳ್ಳಬೇಕಾದ ಅಗತ್ಯದ ಬಗ್ಗೆಯೂ ಅರಿ ವಿದೆ. ಭಾರತದ ಸಿತಾರ್‌ ರವಿಶಂಕರ್‌ ಅಂದರೆ ಫ್ರೆಂಚರಿಗೆ ತುಂಬಾ ಇಷ್ಟ. ಹಾಗೆಯೇ ನಿಮ್ಮ ಸಿನಿಮಾಗಳ ಪೈಕ್ಷಿ ನಾವು ನಾವು ನೆನಪಿಟ್ಟುಕೊಳ್ಳುವುದು ಸತ್ಯಜಿತ್‌ ರೇಯ ಕೃತಿಗಳನ್ನು ಮಾತ್ರ’ ಎಂದಳು. ಅವಳು ಹೇಳಿದ್ದು ಸುಳ್ಳೇನಾಗಿರಲಿಲ್ಲ. ನಮ್ಮ ತಂಡದ ಸದಸ್ಯೆ ಅನಿತಾಳ ಗಂಡನ ಹೆಸರು ರವಿಶಂಕರ್‌. ಆಕೆಯ ಹೆಸರು, ಕಾರ್ಯಕ್ಷ್ರಮ ಪಟ್ಟಿಯಲ್ಲಿ ಅನಿತಾ ರವಿಶಂಕರ್‌ ಎಂದೇ ದಾಖಲಾಗಿತ್ತು. ನಮ್ಮ ಫ್ರಾನ್ಸ್‌ ಪ್ರವಾಸದುದ್ದಕ್ಕೂ ಅನೇಕರು ಅವಳಲ್ಲಿ ‘ಸಿತಾರ್‌ ರವಿಶಂಕರ್‌ ನಿನಗೇನಾಗಬೇಕು ?’ ಎಂದು ಕೇಳಿದ್ದುಂಟು. ಇನ್ನು ಕೆಲವರು ‘ನಿನ್ನನ್ನು ನಾವು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ನಮಗೆ ಅತ್ಯಂತ ಇಷ್ಟದ ಇಬ್ಬರು ಭಾರತೀಯರೆಂದರೆ ರವಿಶಂಕರ್‌ ಮತ್ತು ಸತ್ಯಜಿತ್‌ ರೇ’ ಎಂದು ಹೇಳಿದ್ದೂ ಉಂಟು.

ಮರುದಿನ, ಅಂದರೆ ಎಪ್ರಿಲ್‌ ಐದರಂದು ರೋಟರಿ ಜಿಲ್ಲಾ 1700 ಕನ್ಫೆರೆನ್ಸು. ದಕ್ಷಿಣ ಫ್ರಾನ್ಸಿನ ಮಿಡಿ ಪಿರನೀಸ್‌ ಮತ್ತು ಲ್ಯಾಂಗ್‌ಡಕ್‌  ರೌಸಿಲನ್‌ ಎಂಬೆರಡು ವಿಶಾಲ ಪ್ರಾಂತ್ಯಗಳ ಎಲ್ಲಾ ರೋಟರಿ ಕ್ಲಬ್ಬುಗಳು ರೋಟರಿ ಜಿಲ್ಲೆ 1700ರ ವ್ಯಾಪ್ತಿಗೆ ಬರುತ್ತವೆ. ಈ ಕಾನೇರೆನ್ಸ್‌ನಲ್ಲಿ ಭಾರತದ ರೋಟರಿ ಜಿಲ್ಲೆ 3180ಕ್ಕೆ ಹೋಗಿ ಬಂದಿದ್ದ ಫ್ರಾನ್ಸಿನ ತಂಡದ ಅನುಭವ ನಿವೇದನೆಗೆ ಮತ್ತು ನಮ್ಮ ತಂಡದ ಪರಿಚಯ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಾವು ನೃತ್ಯ ಪ್ರದರ್ಶನಕ್ಕೆಂದು ಒಂದೈದು ನಿಮಿಷ ಹೆಚ್ಚುವರಿ ಕಾಲಾವಕಾಶ ಕೇಳಿದ್ದೆವು. ಮಧ್ಯಾಹ್ನ ಒಂದೂವರೆಗೆ ನಮಗೆ ಅವಕಾಶವೆಂದು ಹಂಬರ್ಗ್‌ ಹೇಳಿದ್ದನ್ನು ನಂಬಿ ಅತ್ತ ಇತ್ತ ಅಡ್ಡಾಡಿ ಕಾಲಕಳೆದೆವು.

ಏಕೆಂದರೆ ಕಾನ್ಫೆರೆನ್ಸ್‌ನಲ್ಲಿ ನಡಾವಳಿಗಳೆಲ್ಲವೂ ಶುದ್ಧ ಫ್ರೆಂಚ್‌ ಭಾಷೆಯಲ್ಲಿದ್ದವು. ನಮಗೆ ಅದು ಏನೆಂದೇ ಅರ್ಥವಾಗುತ್ತಿರಲಿಲ್ಲ. ಕಾನ್ಫೆರೆನ್ಸಿನ ಉದ್ಛಾಟನೆಯನ್ನು ಮಾಡಿದ ಪೋಲಂಡಿನ ರಾಯಭಾರಿಯಾದರೂ ಇಂಗ್ಲೀಷಲ್ಲಿ ಮಾತನಾಡಿಯಾನೆಂದು ನಾವು ಕಾದರೆ, ಆತ ಅಸ್ಖಲಿತವಾಗಿ ಫ್ರೆಂಚಲ್ಲಿ ಮಾತಾಡಿ ಪ್ರಚಂಡ ಕೈ ಚಪ್ಪಾಳೆ ಗಿಟ್ಟಿಸಿಕೊಂಡ. ಆತ ಭಾಷಣ ಮುಗಿಸಿ ಹೊರಟಾಗ ಆತನನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕ್ಷಿ, ನಮ್ಮ ತಂಡದ ಭೇಟಿಯ ಉದ್ದೇಶ ಆತನಿಗೆ ತಿಳಿಸಿ ಪರಿಚಯ ಪತ್ರವನ್ನು ಕೈಗಿತ್ತೆ. ಈಗಾತ ಕೈ ಕುಲುಕ್ಷಿ ಇಂಗ್ಲೀಷಲ್ಲಿ ನಮ್ಮ ಯೋಗಕ್ಷೇಮ ವಿಚಾರಿಸಿದ. ‘ನಿನ್ನ ಭಾಷಣ ಅದ್ಭುತವಾಗಿತ್ತು’ ಎಂದು ನಾನೆಂದಾಗ ಆತನಿಗೆ ಆಶ್ಚರ್ಯವಾಗಿ ‘ನಿನಗೆ ಫ್ರೆಂಚು ಬರುತ್ತಾ?’ ಎಂದು ಕೇಳಿದ. ‘ಇಲ್ಲ. ಅದಕ್ಕೇ ಅದ್ಭುತವಾಗಿದೆ ಎಂದೆ’ ಎಂದುತ್ತರಿಸಿದಾಗ ಅವನಿಗೆ ನಗು ಬಂತು. ಆಗ ಹೇಳಿದೆ. ‘ನಾನು ತಮಾಷೆಗೆ ಹೇಳಿದ್ದಲ್ಲ. ಪೋಲೆಂಡಿನವನಾದ ನೀನು ಓತಪ್ರೋತವಾಗಿ ಫ್ರೆಂಚಲ್ಲಿ ಮಾತಾಡಿ ಅಷ್ಟೊಂದು ಕೈ ಚಪ್ಪಾಳೆ ಗಿಟ್ಟಿಸಿದ್ದನ್ನು ನೋಡಿ ಹಾಗಂದದ್ದು’ ಎಂದೆ. ಈಗವನಿಗೆ ನಿಜಕ್ಕೂ ಖುಷಿಯಾಯಿತು.

ಕೊಟ್ಟ ಮಾತಿಗೆ ತಪ್ಪಿದ ಹಂಬರ್ಗ್‌ ನಮಗೆ ಸಂಜೆ ಐದರ ಹೊತ್ತಿಗೆ ರಂಗಪ್ರವೇಶಕ್ಕೆ ಅವಕಾಶ ನೀಡಿದ. ಹೆಬ್ಬಾರರ ಸೂಚನೆಯಂತೆ ಕ್ರಿಸ್ಟೋಫರ್‌ ರಂಗದ ಮಧ್ಯದಲ್ಲಿ ಸ್ಟೂಲೊಂದರ ಮೇಲೆ ಭಾರತದ ಕಾಲುದೀಪವೊಂದನ್ನು ಇರಿಸಿ ಬಂದ. ಹೆಬ್ಬಾರರು ಪಠಾನರಂತೆ, ನಾನು ಪಂಜಾಬಿಯಂತೆ, ಗುರು ತಮಿಳರಂತೆ ‘ಪಂಚೆಬಿಳಿಶರಟು’ ಎಲೈನ್‌ ಅಪ್ಪಟ ಭಾರತೀಯ ನಾರಿಯಂತೆ ಸೀರೆ ಮತ್ತು ಅನಿತಾ ಚೂಡಿದಾರದಲ್ಲಿ ಉರಿಯುವ ಕ್ಯಾಂಡಲ್‌ ಹಿಡಿದುಕೊಂಡು ಗಂಭೀರವಾಗಿ ‘ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯಾ, ಮೃತ್ಯೋರ್ಮಾ ಅಮೃತಂಗಮಯಾ’ ಎಂದು ಹೇಳುತ್ತಾ ಐದು ಕಡೆಗಳಿಂದ ರಂಗ ಪ್ರವೇಶಿಸಿದೆವು. ನಮ್ಮ ಸೂಚನೆಯಂತೆ ರಂಗದ ಮತ್ತು ಸಭಾಂಗಣದ ದೀಪಗಳನ್ನು ಮೊದಲೇ ಆರಿಸಲಾಗಿತ್ತು. ಐದು ಕಡೆಗಳಿಂದ ಬಂದ ನಾವು ಒಟ್ಟಾಗಿ ವೇದಿಕೆಯ ಮಧ್ಯದ ಕಾಲ್ದೀಪವನ್ನು ಬೆಳಗಿ ‘ಓಂ ಶಾಂತಿಃ ಶಾಂತಿಃ ಶಾಂತಿಃ’ ಎಂದಾಗ ಸಭಾಂಗಣ ಚಪ್ಪಾಳೆಗಳಿಂದ ತುಂಬಿ ಹೋಯಿತು.

ಈಗ ಎಲ್ಲಾ ಲೈಟುಗಳು ಬೆಳಗಿದವು. ನಾವು ಫ್ರೆಂಚ್‌ ಭಾಷೆಯಲ್ಲೇ ನಮ್ಮ ಪರಿಚಯ ಹೇಳಿಕೊಂಡೆವು. ಆ ಬಳಿಕ ಗವರ್ನರ್‌ ಹಂಬರ್ಗನನ್ನು ವೇದಿಕೆಯ ಮಧ್ಯಕ್ಷ್ಕೆ ಕರೆತಂದು ಅವನ ತಲೆಗೆ ಬಾಸಿಂಗ ಬಿಗಿದ ಹೆಬ್ಬಾರರು, ಬಾಸಿಂಗದ ಮಹತ್ವವನ್ನು ವಿವರಿಸಿದಾಗ ಸಭೆಯಲ್ಲಿ ನಗುವೋ ನಗು. ಕಾನ್ಫೆರೆನ್ಸಿಗೆ ಬಂದಿದ್ದ ವಿಶ್ವ ರೋಟರಿಯ ಪ್ರತಿನಿಧಿಗೆ ಶಾಲು ಹಾಕಿ, ಜಾಕ್‌ಗಿಬೇ ಮತ್ತು ಜುವಾನ್‌ ಬುಯೋರಿಗೆ ಗಂಧದ ಹಾರ ತೊಡಿಸಿ ಗೌರವಿಸಿದೆವು. ಕಾರ್ಯಕ್ಷ್ರಮ ಮುಗಿದ ಮೇಲೂ ಅವರದನ್ನು ಧರಿಸಿಕೊಂಡು ಹೆಮ್ಮೆಯಿಂದ ತಿರುಗಾಡುತ್ತಿದ್ದರು !

ಬಳಿಕ ಪ್ರಾರಂಭವಾಯಿತು ನಮ್ಮ ಬಾಂಗ್ಡಾ ನೃತ್ಯ. ‘ಬೋಲೋ ತರರಾ’ ಕ್ಯಾಸೆಟ್ಟು ಹಾಕಿ ನಾವು ಅದ್ಭುತವಾಗಿ ನರ್ತಿಸಿದೆವು. ನಾನು ಯಕ್ಷಗಾನ ಕಲಿತವನು. ಅನಿತಾ ಭರತನಾಟ್ಯ ಬಲ್ಲವಳು. ಹಾಗಾಗಿ ನಮಗಿಬ್ಬರಿಗೆ ಯಾವುದೇ ಹಾಡಿಗೆ ಹೆಜ್ಜೆ ಹಾಕಿ ನರ್ತಿಸಲು ಏನೇನೂ ಕಷ್ಟವಾಗುತ್ತಿರಲಿಲ್ಲ. ಹೆಬ್ಬಾರರು ಹಾಡಿನ ಲಯ ಹಿಡಿದು ಅದಕ್ಕೆ ತಕ್ಕಂತೆ ನರ್ತಿಸಬಲ್ಲವರು. ಆದರೆ ಎಲೈನ್‌ ಮತ್ತು ಗುರು ತಾಳ ತಪ್ಪದಂತೆ ನರ್ತಿಸಲು ಬಹಳ ಕಷ್ಟ ಪಡುತ್ತಿದ್ದರು. ನಾವು ಅವರನ್ನು ಆದಷ್ಟು ಹಿಂಬದಿಯಲ್ಲೇ ಇರಗೊಡುತ್ತಿದ್ದೆವು. ನಾನಂತೂ ಮೈಮರೆತು ಕುಣಿದೆ. ಅದು ಬಾಂಗ್ಡಾವೋ, ಯಕ್ಷಗಾನವೋ ಅಥವಾ ಅವೆರಡರ ಮಿಶ್ರಣವೋ ಎಂದು ಖಚಿತವಾಗಿ ಹೇಳಲಾರೆ. ನರ್ತನದ ಕೊನೆಯಲ್ಲಿ ಎಲ್ಲರನ್ನೂ ನಿಲ್ಲಿಸಿ ಜನಗಣಮನ ಹೇಳಿದೆವು. ಹೆಬ್ಬಾರರು ರಾಷ್ಟ್ರಗೀತೆಯ ಅರ್ಥವನ್ನು ಇಂಗ್ಲೀಷಿನಲ್ಲಿ ಹೇಳಿದ್ದನ್ನು ಬುಯೋ ಫ್ರೆಂಚಿಗೆ ತರ್ಜುಮೆ ಮಾಡಿದ. ಮತ್ತೊಮ್ಮೆ ಸಭೆ ಪ್ರಚಂಡ ಕರತಾಡನದ ಮೂಲಕ ನಮ್ಮ ಒಟ್ಟು ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿತು.

ಕುಣಿತ ಮುಗಿಸಿ ಹೊರಬರುವಾಗ ರೋಟರ್ಯಾಕ್ಟ್‌ ಸದಸ್ಯನೊಬ್ಬ ಸಿಕ್ಕ್ಷಿದ. ‘ನಿಮ್ಮ ಬಾಂಗ್ಡಾ ನನಗೆ ತುಂಬಾ ಇಷ್ಟವಾಯಿತು. ನೀವು ಅದೆಷ್ಟು ಚೆನ್ನಾಗಿ ಕುಣಿದಿರಿ? ನಿಮ್ಮ ಮುಂಡಾಸು ಮಾರ್ವೆಲಸ್‌. ಫ್ರಾನ್ಸಿನ ಟಿಪಿಕಲ್‌ ಡ್ಯಾನ್ಸ್‌ ಒಂದನ್ನು ತೋರಿಸಿ ಎಂದು ಯಾರಾದರೂ ಹೇಳಿದರೆ ನಮ್ಮಿಂದ ಅದು ಸಾಧ್ಯವಿಲ್ಲ’ ಎಂದ. ಅವನು ಮಾತಾಡುತ್ತಿದ್ದಂತೆ ರೋಟರಿ ಜಿಲ್ಲೆ 1700 ಕ್ಕೆ ಸೇರಿದ ಕ್ಲಬ್ಬುಗಳ ಅಧ್ಯಕ್ಷರುಗಳು ನಮ್ಮ ಸುತ್ತುವರೆದು ಅವನ ಮಾತನ್ನು ಅನುಮೋದಿಸಿದರು. ಇಪ್ಪತ್ತೊಂದು ಅಡಿ ಉದ್ದದ ಬಹುವರ್ಣದ ನನ್ನ ರಾಜಸ್ಥಾನಿ ರುಮಾಲು ಅವರೆಲ್ಲರ ಚರ್ಚೆಯ ವಸ್ತುವಾಯಿತು. ಅಂತಹ ರುಮಾಲಿನ ತುದಿಗೆ ಕಲ್ಲುಕಟ್ಟಿ ಇಳಿಬಿಟ್ಟು ಅದರ ತುದಿ ಒದ್ದೆ ಮಾಡಿ, ಮರುಭೂಮಿ ಯಾತ್ರಿಕರು ಹೇಗೆ ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಾರೆ ಎನ್ನುವುದನ್ನು ಕೂಡಾ ಅವರಿಗೆ ವಿವರಿಸಿದೆ. ‘ನೀನು ಭಾರೀ ಚೆನ್ನಾಗಿ ಕುಣಿದೆ’ ಎಂದು ಹಂಬರ್ಗ್, ಬುಯೋ, ಗಿಬೇ ಮತ್ತು ಜಾರ್ಜ್‌ ಹೇಳಿದಾಗ ನಾನು ತಲೆಯಾಡಿಸಿದೆ. ನಾನು ಕುಣಿದದ್ದು ಯಕ್ಷಗಾನವೆಂದು ಆ ಫ್ರೆಂಚ್‌ರಿಗೆ ಹೇಗೆ ಗೊತ್ತಾಗಬೇಕು?

ಕಾನ್‌ಫೆರೆನ್ಸಿನ ಅಂಗವಾಗಿ ಅಂದು ರಾತ್ರಿಯ ಭೋಜನ ಕೂಟಕ್ಕೆ ಮೊದಲು ಹೋಟೆಲ್‌ ಪೋಡಿಯನ್‌ನಲ್ಲಿ ಇಂಗ್ಲೀಷ್‌ ಗಾಯನಗೋಷ್ಠಿಯೊಂದನ್ನು ಇರಿಸಿಕೊಳ್ಳಲಾಗಿತ್ತು. ಗಾಯನ ತಂಡದ ಐವರಲ್ಲಿ ಮೂವರು ಗಂಡುಗಳು ಮತ್ತು ಇಬ್ಬರು ಹೆಣ್ಣುಗಳು. ಅವರಲ್ಲಿ ಒಬ್ಬಾಕೆ ಬಿಳಿಯಳು. ಉಳಿದ ನಾಲ್ವರು ಕರಿಯರು. ಅವಳು ಕಾಳಿಂಗ ಸರ್ಪ ಸಮೂಹದಲ್ಲೊಂದು ನಾಗರ ಹಾವಿನಂತೆ ಮಿಂಚುತ್ತಿದ್ದಳು. ತಂಡದ ನಾಯಕ್ಷನೊಬ್ಬ ಬಲಿಷ್ಠ ಕರಿಯ. ಆತ ಕಾಶ್ಮೀರಿ ಟೊಪ್ಪಿಯನ್ನು ಧರಿಸಿದ್ದ. ತಂಡ ಬಳಸಿದ ಏಕೈಕ ವಾದ್ಯವಾದ ಗಿಟಾರನ್ನು ಆತ ನುಡಿಸುತ್ತಿದ್ದ. ಆತನೇ ಪ್ರಧಾನ ಹಾಡುಗಾರನೂ ಕೂಡಾ. ಇಂಗ್ಲೀಷ್‌ ಹಾಡುಗಳಿಗೆ ಅಷ್ಟೊಂದು ಅರ್ಥಬರುವಂತೆ ಹಾಡಲು ಸಾಧ್ಯವೇ ಎಂಬ ವಿಸ್ಮಯವನ್ನು ಆತ ನಮ್ಮಲ್ಲಿ ಮೂಡಿಸಿಬಿಟ್ಟ. ಕೆಲವು ಹಾಡುಗಳನ್ನು ಆತ ಎಷ್ಟೊಂದು ಏರುಶೃತಿಗೆ ಒಯ್ಯುತ್ತಿದ್ದನೆಂದರೆ, ನಮಗೆ ಅವನ್ನು ಅನುಕರಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಕೊನೆಯ ಹಾಡಿನಲ್ಲಿ ಆತ ಸಮಸ್ತ ಸಭಾಸದರನ್ನು ಎಬ್ಬಿಸಿ ಅವನ ಹಾಡಿಗೆ ದನಿಗೂಡಿಸುವಂತೆ ಮಾಡಿದ. ಹೆಚ್ಚೇಕೆ? ಕೆಲವರು ಮೈಮರೆತು ಕುಣಿದೇಬಿಟ್ಟರು.

ಗಾಯನಗೋಷ್ಠಿ ಮುಗಿದ ಬಳಿಕ ನಾನು ಅವನತ್ತ ಧಾವಿಸಿ ಅವನನ್ನು ಅಪ್ಪಿಕೊಂಡು ‘ನೀನೊಬ್ಬ ಅದ್ಭುತ ಹಾಡುಗಾರು ಎಂದು ಶ್ಲಾಘಿಸಿದೆ. ಈಗ ಆ ಬಲಾಢ್ಯ ಕರಿಯ ನನ್ನ ಎಲುಬು ಪುಡಿಯಾಗುವಂತೆ ಅಪ್ಪಿ ಹಿಡಿದು ‘ಥ್ಯಾಂಕ್ಯೂ ಬ್ರದರ್‌’ ಅಂದ. ತನ್ನ ಅದ್ಭುತ ಹಾಡಿನಿಂದ ನಮ್ಮೆಲ್ಲರನ್ನೂ ಸಮ್ಮೋಹನಕ್ಕೆ ಒಳಪಡಿಸಿದ್ದ ಆ ಪ್ರತಿಭಾವಂತನ ಮೈಯಿಂದ ಧಾರಾಕಾರವಾಗಿ ಬೆವರು ಸುರಿಯುತ್ತಿದ್ದರೂ ಆ ಕಣಕ್ಕೆ ನನಗದು ಅಸಹ್ಯ ಎನಿಸಲಿಲ್ಲ. ಏಕೆಂದರೆ ಅವನು ಬ್ರದರ್‌ ಅಂದದ್ದು ಕೇವಲ ತೋರಿಕೆಗಲ್ಲ ಅನ್ನುವುದನ್ನು ಅವನ ಗಾಢವಾದ ಅಪ್ಪುಗೆ ವ್ಯಕ್ಷ್ತಪಡಿಸಿತ್ತು!

ಊಟದ ಹೊತ್ತಿಗೆ ಮ್ಯಾಗಿ ನಮ್ಮನ್ನು ಸೇರಿಕೊಂಡಳು. ಫ್ರಾನ್ಸಿನಲ್ಲಿ ಹೆಂಗಸರನ್ನು ರೋಟರಿ ಕ್ಲಬ್ಬಿಗೆ ಸೇರಿಸುವುದಿಲ್ಲ. ಅವರಿದ್ದರೆ ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ ಎಂದು ಪುರುಷರು ಭಾವಿಸುವುದೇ ಅದಕ್ಕೆ ಕಾರಣವಂತೆ. ಗಂಡಸರ ಸ್ವಾರ್ಥಕ್ಕೆ ಪ್ರತಿಯಾಗಿ ಹೆಂಗಸರು ತಮ್ಮದೇ ಕ್ಲಬ್ಬುಗಳನ್ನು ರಚಿಸಿಕೊಳ್ಳುತ್ತಾರೆ. ಊಟದ ಬಳಿಕ ಮ್ಯಾಗಿ ನಮ್ಮನ್ನು ಹೆಂಗಸರ ಕ್ಲಬ್ಬಿಗೆ ಕರೆದೊಯ್ದಳು. ಅಲ್ಲೊಂದು ವಾದ್ಯಗೋಷ್ಠಿಯಿತ್ತು. ಅದಕ್ಕೆ ತಕ್ಕಂತೆ ಹೆಂಗಸರು ಹೆಜ್ಜೆ ಹಾಕುತ್ತಿದ್ದರು. ಊಟ ಮುಗಿಸಿದ ರೊಟೇರಿಯನನರು ಒಬ್ಬೊಬ್ಬರಾಗಿ ಈ ಕ್ಲಬ್ಬಿನತ್ತ ಹೆಜ್ಜೆ ಹಾಕತೊಡಗಿದರು. ಮೆಲ್ಲನೆ ಹೆಂಗಸರ ಸೊಂಟ ಬಳಸಿ ಕುಣಿಯಲಿಕ್ಕೂ ಆರಂಭಿಸಿದರು. ಆಗ ಮ್ಯಾಗಿ ‘ರೋಟರಿ ಕ್ಲಬ್ಬಿಗಾಗುವಾಗ ಇವರಿಗೆ ನಾವು ಬೇಡ. ಉಳಿದಂತೆ ಎಲ್ಲದಕ್ಕೂ ನಾವೇ ಬೇಕು’ ಎಂದು ಗಟ್ಟಿಯಾಗಿ ಹೇಳಿದಳು. ಮ್ಯಾಗಿಯ ಗಂಡ ಜಾರ್ಜ್‌ನೊಡನೆ ನಾನು ಕುಣಿದೆ. ಕೊನೆಗೆ ನನ್ನ ನೃತ್ಯ ಅವರಲ್ಲಿ ನಗು ಬರಿಸಿರಬಹುದೆಂದು ಸಂಕೋಚಪಟ್ಟು ನೃತ್ಯ ನಿಲ್ಲಿಸಿದೆ. ಈಗ ಕಳೆದ ರಾತ್ರಿ ಮ್ಯಾಗಿಯ ಮನೆಗೆ ಭೋಜನಕ್ಕೆ ಬಂದಿದ್ದ ಇಂಗ್ಲೀಷ್‌ ಪ್ರಾಧ್ಯಾಪಿಕೆಯ ಕೈ ಹಿಡಿದು ಜಾರ್ಜ್‌ ನರ್ತನಕ್ಕೆ ತೊಡಗಿದ. ಒಂದು ಬದಿಯಲ್ಲಿ ನಿಂತು ಈ ವಿಚಿತ್ರಗಳನ್ನು ನೋಡುತ್ತಿದ್ದ ಹೆಬ್ಬಾರರ ಕೈ ಹಿಡಿದು ಮ್ಯಾಗಿ ಎಳೆದಳು. ಹೆಬ್ಬಾರರು ಕುಣಿಯತೊಡಗಿದರು. ಕುಣಿತ ಹನ್ನೆರಡು ಗಂಟೆ ಕಳೆದರೂ ನಿಲ್ಲುವ ಲಕ್ಷಣ ಕಾಣಲಿಲ್ಲ. ಕೊನೆಗೆ ಮ್ಯಾಗಿ ‘ಪ್ರಭಾ ಪೆಟಿಗೇ’ ‘ಆಯಾಸವಾಯಿತೆ?’ ಎಂದು ಕೇಳಿ ಕುಣಿತ ನಿಲ್ಲಿಸಿದಳು. ಮನೆಗೆ ಬರುವಾಗ ಹಾದಿಯಲ್ಲಿ ‘ನನ್ನ ಹುಡುಗ ಜಾರ್ಜ್‌ ಚೆನ್ನಾಗಿ ಕುಣಿಯುತ್ತಾನೆ. ಇವತ್ತು ಅವ ಗುಂಡು ಜಾಸ್ತಿ ಹಾಕ್ಷಿ ಹೆಚ್ಚು ಕುಣಿಯಲಿಲ್ಲ. ನೀವಿಬ್ಬರು ಚೆನ್ನಾಗಿ ಕುಣಿಯುತ್ತೀರಿ’ ಎಂದು ನಮ್ಮನ್ನು ಶ್ಲಾಘಿಸಿದಳು. ಆಕೆ ಹೇಳಿದ್ದು ಸುಳ್ಳೆಂದು ನನ್ನ ಮನಸ್ಸು ಹೇಳುತ್ತಿತ್ತು.

ಕತೆ ಹೇಳುವೇ

ರೋಟರಿ ಕಾನ್ಫೆರೆನ್ಸಿನ ಮುನ್ನಾದಿನ, ಒಂದು ತಿಂಗಳ ನಮ್ಮ ಸಮೂಹ ಅಧ್ಯಯನ ವಿನಿಮಯ ಕಾರ್ಯಕ್ಷ್ರಮದ ವಿವರ ಪಟ್ಟಿಯನ್ನು ಜಾಕ್‌ ಗಿಬೇ ನಮಗೆ ನೀಡಿದ್ದ. ಕಾರ್ಯಕ್ರಮದನ್ವಯ ಎಪ್ರಿಲ್‌ ಎರಡರಿಂದ ಆರರವರೆಗೆ ನಮ್ಮದು ತುಲೋಸಿನಲ್ಲೇ ಮೊಕ್ಕಾಂ. ಅದಾಗಿ ಇಪ್ಪತ್ತೆರಡು ದಿನ ರೋಟರಿ ಜಿಲ್ಲೆ 1700ರಲ್ಲಿ ನಮ್ಮ ತಿರುಗಾಟ. ಕೊನೆಯಲ್ಲಿ ಮತ್ತೆ ನಾಲ್ಕು ದಿನ ತುಲೋಸಿನಲ್ಲಿ ವಾಸ. ಎಪ್ರಿಲ್‌ ಮೂವತ್ತರಂದು ನಮಗೆ ಬೀಳ್ಕೂಡುಗೆ. ಇದು ನಿಗದಿತ ಕಾರ್ಯಕ್ಷ್ರಮ.

ತುಲೋಸು ಸೇರಿದಂತೆ ನಾವು ಸಂಚರಿಸಲಿಕ್ಕ್ಷಿದ್ದ ಪ್ರದೇಶಗಳು ಮಿಡಿ ಪಿರನೀಸ್‌ ಮತ್ತು ಲ್ಯಾಂಗ್‌ಡಕ್ಕ್‌  ರೌಸಿಲನ್‌ ಪ್ರಾಂತ್ಯಕ್ಷ್ಕೆ ಸೇರಿದವುಗಳು. ಈ ಎಲ್ಲಾ ಸ್ಥಳಗಳಿಗೆ ಅವುಗಳದೇ ಆದ ಇತಿಹಾಸವಿದೆ. ಇತಿಹಾಸದ ಪುಟಗಳಲ್ಲಿ ಅದೆಲ್ಲೋ ಹುದುಗಿ ಹೋಗಿರುವ ಕಥಾರರ ಕತೆಯನ್ನು ತಿಳಿಯದೆ ಈ ಪ್ರದೇಶಗಳ ಸಾಂಸ್ಕೃತಿಕ ಹಿನ್ನೆಲೆಯನ್ನು ವಿಶ್ಲೇಷಿಸಲು ಸಾಧ್ಯವಾಗುವುದಿಲ್ಲ.

ಹನ್ನೆರಡಜೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವ ಪಂಥ ಪ್ರಖ್ಯಾತ ವಾದಂತೆ, ದಕ್ಷಿಣ ಫ್ರಾನ್ಸಿನಲ್ಲಿ, ಮುಖ್ಯವಾಗಿ ಲ್ಯಾಂಗ್‌ಡಕ್ಕ್‌ ಪ್ರಾಂತ್ಯದಲ್ಲಿ, ಕಥಾರ್‌ ಪಂಥ ಪ್ರಖ್ಯಾತವಾಯಿತು. ಅದರ ಅನುಯಾಯಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚತೊಡಗಿತು. ವಾಸ್ತವವಾಗಿ ಅದು ಕ್ರೈಸ್ತ ಮತದ ಒಂದು ಶಾಖೆ. ಆದರೆ ಅದಕ್ಕೆ ಹಳೆ ಒಡಂಬಡಿಕೆಯಲ್ಲಿ ನಂಬಿಕೆಯಿರಲಿಲ್ಲ. ಹೊಸ ಒಡಂಬಡಿಕೆಯನ್ನು (New Testment) ಮಾತ್ರ ಅದು ಪವಿತ್ರ ಗ್ರಂಥವೆಂದು ಗೌರವಿಸುತ್ತಿತ್ತು. ಅದು ಪೋಪ್‌ನ ಧಾರ್ಮಿಕ ಸರ್ವಾಧಿಕಾರವನ್ನು ಒಪ್ಪುತ್ತಿರಲಿಲ್ಲ. ದೇವರು ಸರ್ವನಿಯಾಮಕ. ಜನರೆಲ್ಲರೂ ಸಮಾನರು ಎಂದು ಅದು ಸಾರುತ್ತಿತ್ತು.

ಕಥಾರರ ಪ್ರಕಾರ ಒಳಿತುಗಳಿಗೆ ಮಾತ್ರ ಅವಕಾಶವಿರುವ ಜ್ಞಾನ ಸಾಮ್ಯಾಜ್ಯ (Kingdom Of Light) ಮತ್ತು ಕೆಟ್ಟದಕ್ಕೆ ಪ್ರಾಶಸ್ತ್ಯವಿರುವ ಭೌತಿಕ ಜಗತ್ತು ಏಕದೇವನ ಸೃಷ್ಟಿಯಾಗಿರಲು ಸಾಧ್ಯವಿಲ್ಲ. ದೇವರ ದಯೆ ಮತ್ತು ಪ್ರೇಮ ಅನಂತವಾದುದು. ಅಂತಹ ದೇವರು ಕೆಡುಕುಗಳನ್ನು ಸೃಷ್ಟಿಸಲು ಸಾಧ್ಯವೇ? ಹಾಗಾದರೆ ಈ ವಿಶ್ವದ ಕೆಡುಕು ಯಾರ ಸೃಷ್ಟಿ? ಅದು ಲ್ಯೂಸಿಫರ್‌ನ ಸೃಷ್ಟಿ. ಆತ ಕತ್ತಲ ಅರಸುಗುವರ. ಅವನು ಕೆಡುಕುಗಳ ಪ್ರತಿನಿಧಿ. ಅವನ ಹಿಡಿತದಿಂದ ಅಥವಾ ಪಾಪಗಳಿಂದ ಜನರನ್ನು ಪಾರು ಮಾಡಲು ದೇವರು ಏಸುವನ್ನು ಭೂಮಿಗೆ ಕಳುಹಿಸಿದ್ದಾನೆ. ಕ್ಯಾಥಲಿಕ್ಕರು ನಂಬುವಂತೆ ಆತ ಪಾಪ ಮತ್ತು ನರಕ ವಿಮೋಚಕನಲ್ಲ. ಆತ ಅಪೌರುಷೇಯವಾಗಿ ಮನುಷ್ಯನಿಗೆ ವ್ಯಕ್ತವಾಗುವ ಜ್ಞಾನವಾಗಿದ್ದಾನೆ. ಅಂದರೆ ಆತ ಪಾಪದಲ್ಲಿ ಮುಳುಗಿದವರನ್ನು ಮೇಲೆತ್ತುವ ಸರ್ವಶಕ್ತನಲ್ಲ. ಬದಲಾಗಿ ಆತ ಪಾಪ ಮಾಡದಂತೆ ತಡೆಯುವ ಅಂತಜ್ಞಾನವಾಗಿದ್ದಾನೆ. ಈ ಅಂತಜ್ಞಾನದಿಂದ ಮಾತ್ರ ಮಾನವನಿಗೆ ಮುಕ್ತಿಯೇ ಹೊರತು ಪಾಪನಿವೇದನೆಯಿಂದಲ್ಲ.

ಕಥಾರರ ಈ ನಂಬಿಕೆಯು ಕ್ಯಾಥಲಿಕ್ಕರ ಒಟ್ಟು ವ್ಯವಹಾರಕ್ಕೆ ಅಡಚಣೆ ಉಂಟು ಮಾಡಿತು. ಜನರು ಪೋಪನ ಧಾರ್ಮಿಕ ಸಾರ್ವಭೌಮತ್ವವನ್ನು ಪ್ರಶ್ನಿಸತೊಡಗಿದರು. ಆಗ ಕ್ಯಾಥಲಿಕ್ಕ್‌ ಪುರೋಹಿತರುಗಳು ರಾಜರುಗಳ ಮತ್ತು ಶ್ರೀಮಂತರ ಪರವಾಗಿದ್ದು, ಅವರಂತೆ ವೈಭೋಗದ ವಿಲಾಸ ವಿಭ್ರಮಗಳಲ್ಲಿ ಮುಳುಗಿ ಧರ್ಮವನ್ನು ಶೋಷಣೆಯ ಸಲಕರಣೆಯಾಗಿ ಮಾಡಿಕೊಂಡದ್ದರಿಂದ, ಜನಪರವಾದ ಕಥಾರ್‌ ಪಂಥವು ಜನರಿಗೆ ಪ್ರಿಯವಾಗತೊಡಗಿತು. ತಮ್ಮ ಬೋಧನೆಗೆ ತಕ್ಕಂತೆ ನಡೆಯುತ್ತಿದ್ದ ಕಥಾರ್‌ ಪುರೋಹಿತರು ಸಸ್ಯಾಹಾರಿಗಳಾಗಿದ್ದು, ಪರಿಶುದ್ಧ ಜೀವನವನ್ನು ನಡೆಸುತ್ತಿದ್ದುದರಿಂದ ಜನರ ಗೌರವಾದರಗಳಿಗೆ ಪಾತ್ರರಾಗತೊಡಗಿದರು. ಜ್ಞಾನದ ಮೂಲಕ ಪಾಪ ವಿಮುಕ್ತಿ. ಪವಿತ್ರ ಸಾನನ (Baptism)ದಿಂದ ಮುಕ್ತಿ ದೊರೆಯುತ್ತದೆ. ಆದರೆ ಪವಿತ್ರ ಸ್ನಾನಕ್ಕೆ ನೀರನ್ನು ಬಳಸುವುದು ತಪ್ಪು. ಏಸುವು ಅಪೋಸ್ತಲರನ್ನು ಅಗ್ನಿಯಿಂದ ಪವಿತ್ರಗೊಳಿಸಿದ್ದ. ಆದುದರಿಂದ ಅಗ್ನಿಯಿಂದ ಪವಿತ್ರಗೊಂಡರೆ ಮುಕ್ತಿ ದೊರೆಯುತ್ತದೆ ಎನ್ನುವ ಕಥಾರ್‌ ಪುರೋಹಿತರುಗಳ ಬೋಧನೆ ಜನರಲ್ಲಿ ಅಪಾರ ಕುತೂಹಲವನ್ನು ಮೂಡಿಸಿತು. ಪರಿಣಾಮವಾಗಿ ಕಥಾರ್‌ ಪಂಥೀಯರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಲ್ಯಾಂಗ್‌ಡಕ್ಕ್‌ ಪ್ರದೇಶದಲ್ಲಿ ಈ ಪಂಥ ಅಪಾರ ಜನಮನ್ನಣೆಯನ್ನು ಗಳಿಸಿತು. ಇವರು ತಮ್ಮದೇ ಚರ್ಚನ್ನು ಆರಂಭಿಸುವ ಮೂಲಕ ಪೋಪನ ಸಂಪರ್ಕವನ್ನೇ ಕಡಿದುಕೊಂಡರು. ಕಥಾರರಿಗೆ, ಪತಾರಿನ್ಸ್‌, ಬಗ್ಗರ್ಸ್‌ ಎಂಬಿತ್ಯಾದಿ ಹೆಸರುಗಳಿವೆ. ಕಥಾರ್‌ ಶಬ್ದದ ಮೂಲ ಕ್ಯಾಥರೋಸ್‌ ಎಂಬ ಗ್ರೀಕ್‌ ಪದ. ಕ್ಯಾಥರೋಸ್‌ ಎಂದರೆ ‘ಪರಿಶುದ್ಧ’ ಎಂದರ್ಥ. ಹೆಸರಿಗೆ ತಕ್ಕಂತೆ ಅವರದು ಪರಿಶುದ್ಧ ಜೀವನವೇ ಆಗಿತ್ತು. ಅವರನ್ನು ತುಲೋಸಿಯನ್ನರು ಮತ್ತು ಅಲ್‌ಬಿಜಿನ್‌ಸಿಯನ್ನರು ಎಂದು ಕೂಡಾ ಕರೆಯಲಾಗುತ್ತಿತ್ತು. ದಕ್ಷಿಣ ಫ್ರಾನ್ಸಿನ ಕಥಾರರು ಇತಿಹಾಸದ ಪುಟಗಳಲ್ಲಿ ಅಲ್‌ಬಿಜಿನ್‌ಸಿಯನ್ನರೆಂದೇ ಖ್ಯಾತರಾಗಿದ್ದಾರೆ.

ಲ್ಯಾಂಗ್‌ಡಕ್ಕ್‌ ಪ್ರಾಂತ್ಯದಲ್ಲಿ ಕಥಾರ ಪಂಥವು ಭದ್ರವಾಗಿ ನೆಲೆಯೂರಿ ಪೋಪನ ಸಾರ್ವಭೌಮತೆಗೆ ಸೊಪ್ಪು ಹಾಕದೆ ಇರುವುದನ್ನು ಕಂಡು ಆತ ಅಧೀರನಾದ. ಅವನ ಪ್ರೇರಣೆಯಿಂದ ಬರ್ನಾಡ್‌ ಮತ್ತು ಡೊಮಿನಿಕ್‌ ಎಂಬಿಬ್ಬರು ಪುರೋಹಿತರುಗಳು ಲ್ಯಾಂಗ್‌ಢಕ್ಕ್ಷಿಗೆ ಬಂದು ಕಥಾರರನ್ನು ಕ್ಯಾಥಲಿಕ್ಕರನ್ನಾಗಿ ಮತಾಂತರಿಸಲು ಯತ್ನಿಸಿದರು. ಅವರ ಯತನಕ್ಕೆ ಕ್ಷಿಂಚಿತ್ತೂ ಫಲ ದೊರಕಲಿಲ್ಲ. ಬದಲಾಗಿ ಕಥಾರ್‌ ಪಂಥವು ಮತ್ತಷ್ಟು ಪ್ರಾಬಲ್ಯಗಳಿಸಿ ತನ್ನ ಎಲ್ಲೆಯನ್ನು ದಾಟಿ ಮಿಡಿ ಪಿರನೀಸ್‌ ಪ್ರಾಂತ್ಯಕ್ಷ್ಕೂ ವಿಸ್ತರಿಸಿತು. ಕ್ರಿ.ಶ. 1198ರಲ್ಲಿ ತೃತೀಯ ಇನೋಸೆಂಟ್‌ ಪೋಪ್‌ ಆಗಿ ಆಯ್ಕೆಯಾದ. ರೋಮನ್‌ ಚರ್ಚಿಗೆ ಮತ್ತು ಪೋಪ್‌ ಪೀಠದ ಅಸ್ತಿತ್ವಕ್ಕೆ ಪ್ರಬಲ ಸವಾಲಾಗತೊಡಗಿದ ಕಥಾರ್‌ ಪಂಥವನ್ನು ಆಮೂಲಾಗ್ರ ನಾಶಪಡಿಸಲು ಇನೋಸೆಂಟ್‌ ನಿರ್ಧರಿಸಿದ. ಅದಕ್ಕೊಂದು ತಕಣದ ಕಾರಣಕ್ಕಾಗಿ ಆತ ಕಾಯಬೇಕಾಯಿತು. 1208ರ ಜನವರಿ 14ರಂದು ಲ್ಯಾಂಗ್‌ಡಕ್ಕ್‌ ಪ್ರಾಂತ್ಯದಲ್ಲಿ, ಪೋಪನ ಪ್ರತಿನಿಧಿಯಾಗಿದ್ದ ಪಿಯರೆ ಡಿ ಕ್ಯಾಸ್ತಲ್‌ನಾವ್‌ನ ಕೊಲೆಯಾಯಿತು. ಕಥಾರ್‌ ಪಂಥೀಯನಾಗಿದ್ದ ತುಲೋಸಿನ ಆರನೇ ಕೌಂಟ್‌ ರೇಮೊಂಡ್‌ನೇ ಕೊಲೆಪಾತಕಿ ಇರಬೇಕೆಂದು ಪೋಪ್‌ ತರ್ಕಿಸಿದ. ಈ ಘಟನೆ ಕಥಾರರ ವಿರುದ್ಧ ಧರ್ಮಯುದ್ಧವನ್ನು ಸಾರಲು ಪೋಪನಿಗೆ ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿತು.

ಆಗ ಫ್ರಾನ್ಸಿನ ರಾಜನಾಗಿದ್ದವನು ಫಿಲಿಪ್ಸ್‌ ಆಗಸ್ಟ್‌ ಎಂಬಾತ. ದಕ್ಷಿಣ ಫ್ರಾನ್ಸಿನ ಮಿಡಿಪಿರನೀಸ್‌ ಮತ್ತು ಲ್ಯಾಂಗ್‌ಡಕ್‌  ರೌಸಿಲನ್‌ ಪ್ರಾಂತ್ಯಗಳು ಇನ್ನೂ ಆತನ ಸಾರ್ವಭೌಮತ್ವವನ್ನು ಒಪ್ಪದಿದ್ದ ಕಾಲ ಅದು. ಆಗ ಪೋಪ್‌ ಇನೋಸೆಂಟನು ರಾಜಕಾರಣ ವನ್ನು ಧರ್ಮದೊಂದಿಗೆ ಬೆರೆಸುವ ಮೂಲಕ ಕಥಾರ್‌ ಪಂಥವನ್ನು ನಿರ್ಮೂಲನಗೈಯುವ ಕುಟಿಲೋಪಾಯವನ್ನು ಹೂಡಿದ. ಕಥಾರರ ವಿರುದ್ಧ ಫ್ರಾನ್ಸಿನ ರಾಜನು ಧರ್ಮಯುದ್ಧ ಸಾರಿ ಅವರನ್ನು ಪೋಪ್‌ ನಿಷ್ಠರನ್ನಾಗಿಸಬೇಕೆಂದು ಫಿಲಿಪ್ಪನಿಗೆ ಆಜ್ಞಾಪಿಸಿದ. ಆದರೆ ಫಿಲಿಪ್ಪ್‌ ಇಂಗ್ಲೆಂಡಿನೊಡನೆ ಹಲವು ಸಮಸ್ಯೆಗಳಲ್ಲಿ ಸಿಕ್ಕ್ಷಿಬಿದ್ದಿದ್ದ. ಅಲ್ಲದೆ ಫ್ರಾನ್ಸಿನ ರಾಜಕೀಯದಲ್ಲಿ ರೋಮಿನ ಪೋಪ್‌ ಮೂಗು ತೂರಿಸುವುದು ಅವನಿಗೆ ಇಷ್ಟವಿರಲಿಲ್ಲ. ಹಾಗಾಗಿ ಆತ ಕಥಾರರ ವಿರುದ್ಧ ಧರ್ಮಯುದ್ಧಕ್ಕೆ ಒಡಂಬಡಲಿಲ್ಲ. ಆದರೆ ಪೋಪ್‌ ಬಿಡಲಿಲ್ಲ. ಸಾಮ, ದಾನ, ಭೇದೋಪಾಯಗಳನ್ನು ಬಳಸಿ ಫಿಲಿಪ್ಪನ ಮನಸ್ಸನ್ನು ಮಿದುಗೊಳಿಸಿದ. ಕಥಾರರು ಪ್ರಬಲರಾದರೆ ಪೋಪ್‌ ಪೀಠಕ್ಕೆ ಮಾತ್ರವಲ್ಲದೆ ಪ್ಯಾರಿಸ್ಸಿನ ಸಿಂಹಾಸನಕ್ಕೂ ಸಂಚಕಾರ ಬಂದೀತೆಂದು ಫಿಲಿಪ್ಪನ ಮನಸ್ಸಿನಲ್ಲಿ ಭೀತಿ ಮೂಡಿಸಿದ. ಕೊನೆಗೆ ರಾಜನು ತನ್ನ ಬ್ಯಾರನ್‌ಗಳಿಗೆ (ರಾಜಮಾನ್ಯರಿಗೆ} ಧರ್ಮಯುದ್ದಕ್ಕೆ ಸೈನ್ಯ ಸಂಗ್ರಹಿಸಲು ಅನುಮತಿ ನೀಡಿದ. ಆದರೆ ಅದಕ್ಕೆ ಸಂಬಂಧಿಸಿದ ಯಾವುದೇ ರಾಜಾಜ್ಞೆಯನ್ನು ಹೊರಡಿಸಲು ನಿರಾಕರಿಸಿದ. ರಾಜ ನೀಡಿದ ಅವಕಾಶದ ಪರಿಣಾಮವಾಗಿ ಫ್ರಾನ್ಸಿನ ಈಶಾನ್ಯದ ಬರ್ಗುಂಡಿಯಲ್ಲಿ ದೊಡ್ಡದೊಂದು ಸೇನೆ ಸಿದ್ಧಗೊಂಡಿತು. ಅರ್ನಾಡ್‌ ಆ್ಯಮುರಿ ಮತ್ತು ಆತನ ತಂದೆ ಸೈಮನ್‌ ಡಿ ಮೋಂಟ್‌ ಫರ್ಟ್ ಎಂಬ ರಕ್ತಪಿಪಾಸುಗಳು ಅದರ ನಾಯಕರಾಗಿ ನಿಯುಕ್ತಿಗೊಂಡರು. ಕ್ರಿ.ಶ.1209ರಲ್ಲಿ ಈ ದಂಡು ಲಿಯೋನನ್ನು ದಾಟಿ, ರ್ಹೋನ್‌ ಕಣಿವೆಯ ಮೂಲಕ ದಕ್ಷಿಣಕ್ಕೆ ಧಾವಿಸಿತು. ‘ಕಥಾರ್‌ ಚರ್ಚುಗಳನ್ನು ಉರುಳಿಸಿದ ಕಥಾರರನ್ನು ಕ್ಷಿಚ್ಚಿಟ್ಟು ಕೊಲ್ಲಿದ ಅವರ ಸಂಪತ್ತನ್ನು ದೋಚಿದ ‘ದೋಚಿದ್ದೆಲ್ಲವೂ ದೋಚಿದವರಿಗೇ’ ಎಂದು ಆ್ಯಮುರಿ ಹಾದಿಯುದ್ದಕ್ಕೂ ಘೋಷಿಸುತ್ತಾ ಬಂದ. ರಾಜರುಗಳ ಮತ್ತು ಕ್ಯಾಥಲಿಕ್‌ ಪುರೋಹಿತರುಗಳ ವಿಲಾಸೀ ಜೀವನಕ್ಕಾಗಿ ತಮ್ಮ ದುಡಿಮೆಯ ಬಹುಪಾಲನ್ನು ಕೊಟ್ಟೂ ಕೊಟ್ಟೂ ದೈನೇಸಿ ಸ್ಥತಿಗಿಳಿದಿದ್ದ ಅನೇಕ ಬಡಪಾಯಿಗಳಿಗೆ ರಾಜ ಮತ್ತು ಸಾಕ್ಷಾತ್‌ ಪೋಪ್‌ ಸುಲಿಗೆಗೆ ಅವಕಾಶ ಕಲ್ಪಿಸಿಕೊಟ್ಟದ್ದು ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಯ್ತು. ಮತವೋ, ದೇವರೋ, ದೇಗುಲವೋ? ದೋಚಿದ್ದೆಲ್ಲವೂ ತಮಗೇ ಸಿಗುತ್ತದೆಂದಾದರೆ ಏನಾದರೇನು?

ಧರ್ಮಯುದ್ಧದ ಪಡೆ ಕೊಲೆ, ಸುಲಿಗೆಗಳನ್ನೇ ಉದ್ದೇಶವಾಗಿರಿಸಿಕೊಂಡು ದಕ್ಷಿಣಕ್ಕೆ ಧಾವಿಸುತ್ತಿದ್ದಂತೆ ಲ್ಯಾಂಗ್‌ಡಕ್ಕ್‌ ಪ್ರಾಂತ್ಯ ತಳಮಳಗೊಂಡಿತು. ಸ್ವಭಾವತಃ ಶಾಂತಿ ಪ್ರಿಯರಾಗಿದ್ದ ಜನ, ಪೋಪನ ಶೋಷಣೆಯಿಂದ ವಿಮುಕ್ತಿ ಹೊಂದಿದ ಸಂತೋಷದಲ್ಲಿ ಯಾವುದೋ ಒಂದು ನಂಬಿಕೆಗೆ ಬದ್ಧರಾಗಿ, ಯಾರಿಗೂ ತೊಂದರೆ ಕೊಡದೆ ತಮ್ಮ ಪಾಡಿಗೆ ತಾವು ಬದುಕುತ್ತಿದ್ದರು. ಅವರು ಈ ತೆರನಾದ ಅನಾಹುತವನ್ನು ನಿರೀಕ್ಷಿಸಿರಲಿಲ್ಲ. ಆದುದರಿಂದ ಪ್ರತಿರೋಧವೇ ಇಲ್ಲದೆ ಕಥಾರ್‌ ಚರ್ಚುಗಳು ಉರುಳಿಬಿದ್ದವು. ನಿರ್ದಯವಾಗಿ ಕಥಾರರ ನರಮೇಧ ನಡೆಯಿತು. ಕ್ರಿ.ಶ.1209 ಜುಲೈಯಲ್ಲಿ ಬೆಜಿರ್ಸ್‌‌ ಪಟ್ಟಣವನ್ನು ವಶಕ್ಕೆ ತೆಗೆದುಕೊಂಡ ಧರ್ಮಯುದ್ಧ ಪಡೆ ಅಲ್ಲಿನ ಇಪ್ಪತ್ತೈದು ಸಾವಿರಕ್ಕೂ ಮಿಕ್ಕ ನಿವಾಸಿಗಳ ಕಗ್ಗೊಲೆಗೈದಿತು. ಅದೇ ಅಗೋಸ್ತಿನಲ್ಲಿ ಕರ್ಕಸೋನ್‌ ಕೋಟೆಯ ಪತನವಾಯಿತು. ಕೋಟೆಯೊಳಗೆ ಬೃಹತ್‌ ಚಿತೆಯನ್ನು ನಿರ್ಮಿಸಿ ಇಪ್ಪತ್ತು ಸಾವಿರ ಕಥಾರರನ್ನು ಹೆಡೆಮುರಿಕಟ್ಟಿ ಬೆಂಕಿಗೆಸೆದು ಸಜೀವವಾಗಿ ಸುಡಲಾಯಿತು. ಕಥಾರರ ಪ್ರಮುಖ ನೆಲೆಯಾದ ಅಲ್ಲಿಗೆ ಧರ್ಮಯುದ್ಧ ಪಡೆ ಬರುವುದಕ್ಕೆ ಮುನ್ನವೇ ಅಲ್ಲಿನ ಜನರು ಸಾಮೂಹಿಕ ಶರಣಾಗತಿಗೆ ಒಪ್ಪಿದುದರಿಂದ ಅಲ್ಲಿ ವಿನಾಶದಿಂದ ಪಾರಾಯಿತು. ಆದರೆ ಕ್ಯಾಸ್ತ್ರ, ಮಿನೆರ್ವ, ಕ್ಯಾಸ್ತಲ್‌ನೂದರಿಗಳ ಜನತೆ ಕ್ಯಾಥಲಿಕ್ಕ್‌ ಮತಕ್ಕೆ ಪರಿವರ್ತಿತರಾಗಲು ಒಪ್ಪದ್ದರಿಂದ ಅಲ್ಲೆಲ್ಲಾ ಸಾಮೂಹಿಕ ನರಮೇಧ, ದರೋಡೆ, ಅತ್ಯಾಚಾರ, ಸುಲಿಗೆಗಳು ಸಂಭವಿಸಿದವು. ಆ ಬಳಿಕ ಧರ್ಮಯುದ್ಧ ಪಡೆ ತುಲೋಸಿನತ್ತ ತನ್ನ ಅಭಿಯಾನವನ್ನು ಮುಂದುವರಿಸಿತು. 1213ರಲ್ಲಿ ಮ್ಯುರೆತ್‌ನಲ್ಲಿ ಧರ್ಮಯುದ್ಧ ಪಡೆಗೂ, ಅರೆಗಾನ್‌ನ ರಾಜ ದ್ವಿತೀಯ ಪೀಟರನ ಪಡೆಗೂ ಭೀಕರ ಹಣಾಹಣಿಯಾಯಿತು. ಅರೆಗಾನ್‌ ರಾಜನ ಸಹಾಯಕ್ಕೆ ಫೋಯಿಕ್ಸ್‌, ಕೊಮ್ಮಮಿಂಗೆಸ್‌ ಮತ್ತು ತುಲೋಸಿನ ಪಡೆಗಳು ಕೂಡಾ ಬಂದಿದ್ದವು. ಧರ್ಮಯುದ್ಧ ಪಡೆಗಿಂತ ಅಧಿಕ ಸೇನಾಬಲವಿದ್ದರೂ ಅರೆಗಾನ್‌ ರಾಜನ ಪಡೆಯ ನಿರ್ವಹಣೆ ಸರಿ ಇರಲಿಲ್ಲ. ಸ್ವತಾಃ ರಾಜನೇ ಮರಣಾಂತಿಕ ಪೆಟ್ಟು ತಿಂದು ಯುದ್ಧರಂಗದಲ್ಲಿ ಕುಸಿದ. ಆತನ ಪಡೆಯ ಅದೃಷ್ಟಶಾಲಿಗಳು ಗರೋನ್‌ ನದಿ ಮೂಲಕ ತಪ್ಪಿಸಿಕೊಂಡರು. ದುರಾದೃಷ್ಟಶಾಲಿಗಳು ಧರ್ಮಯುದ್ಧ ಪಡೆಯಿಂದ ಕೊಚ್ಚಿಕೊಚ್ಚಿ ಕೊಲ್ಲಲ್ಪಟ್ಟರು.

ಕ್ರಿ.ಶ.1215ರ ನವೆಂಬರ್‌ 30ರಂದು ತುಲೋಸಿನ ಕೌಂಟ್‌ ಆರನೇ ರೇಮೊಂಡ್‌ನನ್ನು ಪದಚ್ಯುತಿಗೊಳಿಸಿ ಧರ್ಮಯುದ್ಧ ಪಡೆಯ ಮುಖಂಡ ಸೈಮನ್‌ ಡಿ ಮೋಂಟ್‌ಫೋರ್ಟನನ್ನು ತುಲೋಸಿನ ಕೌಂಟನೆಂದು ಘೋಷಿಸಲಾಯಿತು. 1216ರ ಶಿಶಿರ ಋತುವಿನಲ್ಲಿ ಮೋಂಟ್‌ ಫೋರ್ಟ್ ತುಲೋಸನ್ನು ಪ್ರವೇಶಿಸಿದ. ಆ ಬಳಿಕ ಆತ ಪ್ಯಾರಿಸ್ಸಿಗೆ ಹೋಗಿ ಫಿಲಿಪ್ಪ್‌ ರಾಜನಿಗೆ ತುಲೋಸಿನ ಪರವಾಗಿ ಕಪ್ಪ ಕಾಣಿಕೆಗಳನ್ನು ಅರ್ಪಿಸಿದ. ಪರಿಣಾಮವಾಗಿ ಫಿಲಿಪ್ಪನ ಸಾಮ್ಯಾಜ್ಯ ಮೆಡಿಟರೇನಿಯನ್‌ವರೆಗೆ ವಿಸ್ತರಿಸಲ್ಪಟ್ಟಿತು.

ಆದರೆ 1216ರ ಎಪ್ರಿಲಲ್ಲಿ ಆರನೇ ರೇಮೊಂಡ್‌ ಮತ್ತು ಅವನ ಮಗ ಏಳನೇ ರೇಮೊಂಡ್‌ ಮಾರ್ಸೆಲಿಗೆ ಹೋದರು. ಅಲ್ಲಿ ಅವರಿಗೆ ವಿರೋಚಿತ ಸ್ವಾಗತ ದೊರೆಯಿತು. ಅವರು ತಮ್ಮ ಪಡೆಯನ್ನು ಬ್ಯೂಕೇರ್‌ಗೆ ಸಾಗಿಸಿ ಅಲ್ಲಿನ ಕೋಟೆಯ ರಕಣಾಪಡೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈ ಸುದ್ದಿ ತಿಳಿದ ಮೋಂಟ್‌ಫೋರ್ಟ್ ಪ್ಯಾರಿಸ್ಸಿನಿಂದ ತುಲೋಸಿಗೆ ಧಾವಿಸಿ ಬಂದು ತುಲೋಸಿನ ಪಡೆಯನ್ನು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ. ತುಲೋಸಿಗರು ಅವನನ್ನು ತೀವ್ರವಾಗಿ ವಿರೋಧಿಸಿದರು. ಆಗ ಮೋಂಟ್‌ಫೋರ್ಟ್ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು. ಆದರೆ ಆತ ತುಲೋಸಿಗರ ಮೇಲೆ ವಿಪರೀತ ದಂಡ ವಿಧಿಸಿದ. ತುಲೋಸಿಗರು ಅನ್ಯದಾರಿಯಿಲ್ಲದೆ ರೇಮೊಂಡನ ಬರುವಿಕೆಗಾಗಿ ಕಾದರು.

1217ರ ಸೆಪ್ಟೆಂಬರ್‌ 13ರಂದು ಏಳನೆ ರೇಮೊಂಡ್‌ ತನ್ನ ಬೆಂಬಲಿಗ ರೊಡನೆ ತುಲೋಸನ್ನು ಪ್ರವೇಶಿಸಿದ. ಅವನ ಪಡೆಗೂ ಧರ್ಮಯುದ್ಧ ಪಡೆಗೂ ಸಣ್ಣಪುಟ್ಟ ಕದನಗಳಾಗತೊಡಗಿದವು. ಕದನ ತೀವ್ರತೆ ಪಡೆಯತೊಡಗಿದ್ದು ಮರುವರ್ಷ. 1218ರ ಜೂನ್‌ 25ರಂದು ತೀವ್ರತರ ಕದನ ನಡೆಯುತ್ತಿದ್ದಾಗ ತುಲೋಸಿನ ಹೆಂಗಸೊಬ್ಬಳು ದೊಡ್ಡ ಕಲ್ಲೊಂದನ್ನು ಕವಣೆ ಮೂಲಕ ನೇರವಾಗಿ ಮೌಂಟ್‌ಫೋರ್ಟನ ತಲೆಗೆ ಗುರಿಯಿಟ್ಟು ಎಸೆದಳು. ಗುರಿ ತಪ್ಪಲಿಲ್ಲ. ಮೋಂಟ್‌ಫೋರ್ಟ್ ಯುದ್ಧರಂಗದಲ್ಲಿ ಬಿದ್ದ. ಅವನ ಮಗ ಅ್ಯಮುರಿ ಅಪ್ಪನ ಸ್ಥಾನವನ್ನು ವಹಿಸಿಕೊಂಡು ಯುದ್ಧ ಮುಂದುವರಿಸಿದ. ಆದರೆ ಆತನಿಗೆ ಯುದ್ಧವನ್ನು ಗೆಲ್ಲಲಾಗಲಿಲ್ಲ.

ಈಗ ಪೋಪ್‌ ಫಿಲಿಪ್ಪ್‌ ರಾಜನ ಸಹಾಯವನ್ನು ಕೋರಿದ. ಫಿಲಿಪ್ಪ್‌ ತನ್ನ ಮಗ ಎಂಟನೇ ಲೂಯಿಯನ್ನು ದೊಡ್ಡ ಪಡೆಯೊಡನೆ ದಕ್ಷಿಣಕ್ಕೆ ಕಳುಹಿಸಿದ. ಪರಿಣಾಮವಾಗಿ ಆ್ಯಮುರಿಯ ಮಹತ್ವ ಕಡಿಮೆಯಾಗಿ ಆತ ನೇಪಥ್ಯಕ್ಷ್ಕೆ ಸರಿಯಬೇಕಾಯಿತು. ಲೂಯಿಯ ಸೇನೆ ಬರುತ್ತಿರುವ ಸುದ್ದಿ ತಿಳಿದು ದಕ್ಷಿಣ ಫ್ರಾನ್ಸು ತತ್ತರಿಸಿಹೋಯಿತು. ಕಾಯಬೇಕಾದ ರಾಜನೇ ಪೋಪನ ಮಾತು ಕೇಳಿ ಕೊಲ್ಲಲು ಬರುತ್ತಿದ್ದಾನೆ. ಹರ ಕೊಲ್ಲಲ್‌ ಪೆರಂ ಕಾಯ್ವನೆ?

ಆದರೆ ಎಂಟನೆ ಲೂಯಿಯ ಲೆಕ್ಕಾಚಾರದಂತೆ ಎಲ್ಲವೂ ನಡೆಯಲಿಲ್ಲ. ಮೊದಲಿಗೆ ಆವಿನ್ಯಾನ್‌ನ ಸೇನೆ ರಾಜನ ಸೇನೆಗೆ ಪ್ರಬಲ ಪ್ರತಿರೋಧ ತೋರಿಸಿತು. ಆ ಪಟ್ಟಣವನ್ನು ಕೈವಶ ಮಾಡಿಕೊಳ್ಳಲು ಎಂಟನೆಯ ಲೂಯಿಗೆ ಮೂರು ತಿಂಗಳುಗಳು ಬೇಕಾದವು. ಫೋಯಿಕ್ಸ್‌ನ ಹಾದಿಯಲ್ಲಿ ಲೂಯಿ ಕಾಯಿಲೆ ಬಿದ್ದ. ಆದುದರಿಂದ ಆತ ಪ್ಯಾರಿಸ್ಸಿಗೆ ಹಿಂತಿರುಗುವುದು ಅನಿವಾರ್ಯವಾಯಿತು. 1226ರ ಡಿಸೆಂಬರ ಎಂಟರಂದು ಆತ ಸತ್ತುಹೋದ. ಅವನ ಮಲಸಹೋದರ ಹ್ಯೂಂಬರ್ಟ್ ಡಿ ಬ್ಯೂಜೆ ಸೇನೆಯ ಮುಖಂಡತ್ವ ವಹಿಸಿಕೊಂಡ. ಒಂದು ವರ್ಷಕ್ಕೂ ಹೆಚ್ಚು ಕಾಲ ಆತ ಲ್ಯಾಂಗ್‌ಡಕ್ಕ್‌ ಪ್ರಾಂತ್ಯದುದ್ದಕ್ಕೂ ಸಂಚರಿಸಿ ಪರಿಸ್ಥತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದ. ಆದರೆ ಆತನಿಗೆ ಯಶಸ್ಸು ಎಂಬುದು ಕೇವಲ ಕನಸಿನಗಂಟಾಯಿತು. 1228ರಲ್ಲಿ ಆತ ಲ್ಯಾಂಗ್‌ಡಕ್ಕನ್ನು ಮಣಿಸಲು ಹಣ್ಣಿನ ಮರಗಿಡಗಳನ್ನು ಕಡಿದುಹಾಕುವ ಮತ್ತು ಬೆಳೆಗಳಿಗೆ ಬೆಂಕಿ ಇಟ್ಟು ಸುಡುವ ನೀಚ ತಂತ್ರಗಳನ್ನು ಬಳಸಿ, ಜನರನ್ನು ಹಸಿವಿನಿಂದ ತತ್ತರಿಸುವಂತೆ ಮಾಡಿ ಏಳನೇ ರೇಮೊಂಡ್‌ ಮಾತುಕತೆಗೆ ಬರಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ.

1229ರಲ್ಲಿ ಏಳನೇ ರೇಮೊಂಡ್‌ ಪ್ಯಾರಿಸ್ಸಿಗೆ ಮಾತುಕತೆಗಾಗಿ ಬಂದ. ಎಪ್ರಿಲ್‌ 12ರಂದು ಪ್ಯಾರಿಸ್ಸಿನ ನಾತ್ರೆದಾಂನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಸಾರ್ವಜನಿಕವಾಗಿ ಆತನಿಗೆ ಚಾಟಿಯೇಟಿನ ಶಿಕ್ಷೆ ನೀಡಿ ಅಪಮಾನಿಸಲಾಯಿತು. ತನ್ನ ಸಾಮ್ಯಾಜ್ಯದ ಅರ್ಧಾಂಶವನ್ನು ರಾಜನಿಗೆ ಬಿಟ್ಟುಕೊಡುವುದು, ತನ್ನ ಮಗಳು ಜೀನಳನ್ನು ಒಂಬತ್ತನೇ ಲೂಯಿಯ ಸಹೋದರನಿಗೆ ಮದುವೆ ಮಾಡಿಕೊಡುವುದು, ತುಲೋಸಿನ ಸುತ್ತಣ ರಕಣಾಗೋಡೆಗಳನ್ನು ಕೆಡಹುವುದು, ಕಥಾರ್‌ ಪಂಥವನ್ನು ಎಂದೆಂದಿಗೂ ಬೆಳೆಯಗೊಡದಿರುವುದು, ತುಲೋಸಿಲ್ಲೊಂದು ಕ್ಯಾಥಲಿಕ್ಕ್‌ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು, ಬೃಹತ್‌ ಮೊತ್ತದ ಪರಿಹಾರಧನವನ್ನು ರಾಜನಿಗೆ ಮತ್ತು ಪೋಪನಿಗೆ ಸಮರ್ಪಿಸುವುದು  ಒಪ್ಪಂದದ ಪ್ರಮುಖ ಅಂಶಗಳಾಗಿದ್ದವು.

ಮಗಳು ರಜೀನ್‌ ಪ್ಯಾರಿಸ್ಸನ್ನು ತಲುಪುವವರೆಗೂ ರೇಮೊಂಡನನ್ನು ಪ್ಯಾರಿಸ್ಸಿ ನಲ್ಲೇ ಉಳಿಸಿಕೊಳ್ಳಲಾಯಿತು. ಜೀನ್‌ಳಿಗೆ ಮಕ್ಕಳಾಗದಿದ್ದರೆ ತುಲೋಸ್‌ ಮತ್ತು ಇಡೀ ಲ್ಯಾಂಗ್‌ಡಕ್ಕ್‌ ಪ್ರಾಂತ್ಯವು ಫ್ರೆಂಚ್‌ ಅರಸೊತ್ತಿಗೆಗೆ ಒಳಗೊಳ್ಳಬೇಕು ಎಂಬ ಶರತ್ತನ್ನು ಕೂಡಾ ಒಪ್ಪಂದದಲ್ಲಿ ಸೇರಿಸಲಾಯಿತು. ಕೊನೆಗೂ ಜೀನ್‌ಳ ವಿವಾಹ ಒಂಬತ್ತನೆ ಲೂಯಿಯ ಸಹೋದರನಾದ ಅಲ್‌ಫೋನ್ಸ್‌ ಡಿ ಪೈಟೀಸನೊಡನೆ ಜರಗಿತು. ತುಲೋಸಿಗೆ ವಾಪಾಸಾದ ರೇಮೊಂಡ್‌ ಮರುಮದುವೆಯಾಗಿ ಗಂಡು ಸಂತಾನವೊಂದನ್ನು ಪಡೆಯಲು ಯತ್ನಿಸಿದ.

ಹಾಗಾಗಿಬಿಟ್ಟರೆ ಸಂಪ್ರದಾಯವನ್ನು ಮುಂದೆ ಮಾಡಿ ತುಲೋಸಿನ ಹಕ್ಕು ತನ್ನ ಮಗನಿಗೆ ಬರುವ ಹಾಗೆ ಮಾಡಬಹುದು ಎನ್ನುವುದು ಅವನ ಆಶಯವಾಗಿತ್ತು. ಆದರೆ ತುಲೋಸಿನ ದುರಾದೃಷ್ಟಕ್ಕೆ ಅವನಿಗೆ ಗಂಡು ಸಂತಾನವಾಗಲೇ ಇಲ್ಲ. ಅತ್ತ ಅವನ ಮಗಳು ಜೀನಳಿಗೂ ಮಕ್ಕಳಾಗಲಿಲ್ಲ. ರೇಮೋಂಡ್‌ ಸತ್ತ ಬಳಿಕ ತುಲೋಸನಿಗೆ ಜೀನಳೇ ಉತ್ತರಾಧಿಕಾರಿಣಿಯಾದಳು. ಅವಳ ಗಂಡ ಅಲ್‌ಫೋನ್ಸ್‌ ಅವಳ ಪರವಾಗಿ ತುಲೋಸನ್ನು ಆಳಿದ. 1271ರಲ್ಲಿ ಆತ ಸತ್ತ ಬಳಿಕ ಒಪ್ಪಂದದಂತೆ ಶ್ರೀಮಂತವಾದ ತುಲೋಸ್‌ ಸಾಮ್ಯಾಜ್ಯ ಫ್ರೆಂಚ್‌ ಅರಸನ ನೇರ ಆಳ್ವಿಕೆಗೆ ಒಳಪಟ್ಟಿತು.

ಇಷ್ಟೆಲ್ಲಾ ಆದರೂ ಕಥಾರ್‌ ಪಂಥೀಯರನ್ನು ಆಮೂಲಾಗ್ರವಾಗಿ ನಿರ್ನಾಮ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಸಾವು ನೋವುಗಳಿಂದ ಪಾರಾಗಲು ಕಠೋರ ಕಥಾರ ಪಂಥೀಯರು ಉತ್ತರ ಇಟೆಲಿಗೆ ಪಲಾಯನ ಮಾಡಿದರು. ಕಾಲಕ್ರಮೇಣ ಬಾಲ್ಕನ್‌ ಪ್ರಾಂತ್ಯದಲ್ಲಿ ಕಥಾರರು ಪ್ರಬಲರಾಗತೊಡಗಿದರು. ಆದರೆ ದುರಾದೃಷ್ಟ ಅವರನ್ನು ಅಲ್ಲೂ ನಿಶ್ಚಿಂತೆಯಿಂದ ಬಾಳಗೊಡಲಿಲ್ಲ. ತುರ್ಕರು ಬಾಲ್ಕನನ್ನು ಆಕ್ರಮಿಸಿದಾಗ ಅಲ್ಲಿನ ರಾಜ ವ್ಯಾಟಿಕನ್ನಿನ ಸಹಾಯ ಯಾಚಿಸಬೇಕಾಗಿ ಬಂತು. ಕಥಾರ್‌ ಪಂಥವನ್ನು ನಿರ್ಮೂಲನ ಮಾಡುವ ಶರತ್ತಿನಲ್ಲಿ ವ್ಯಾಟಿಕನಿನ್ನ ಪೋಪ್‌ ಬಾಲ್ಕನ್‌ ಅರಸನಿಗೆ ಸಹಾಯ ಮಾಡಿದ. ಮತ್ತೊಮ್ಮೆ ಕಥಾರರು ವಿಧಿಯ ಕ್ರೂರ ಅಣಕಕ್ಕೆ ಬಲಿಯಾಗಬೇಕಾಯಿತು. ಆದರೂ ಕಥಾರ್‌ ಪಂಥ ಬೇರು ಸಹಿತ ನಾಶವಾಗಲಿಲ್ಲ. ರೋಮನ್‌ ಕ್ಯಾಥಲಿಕ್‌ ಪಂಥದ ವಿರುದ್ಧ ಎದ್ದ ಭಿನ್ನಮತದಲ್ಲಿ ಅದರದೂ ಪಾಲಿತ್ತು. ಕ್ಯಾಥಲಿಕ್ಕ್‌ ಪಂಥ ಒಡೆದು ಪ್ರಾಟಸ್ಟೆಂಟ್‌ ಪಂಥದ ಹುಟ್ಟಿಗೆ ಕಾರಣವಾದ ಧರ್ಮಸುಧಾರಣಾ ಚಳುವಳಿಗೆ ಕಥಾರರ ಕಾಣಿಕೆ ಸಾಕಷ್ಟು ಸಂದಿತು.

ತುಲೋಸೆಂಬ ಉದ್ಯಾನನಗರಿ

ತುಲೋಸ್‌ ಫ್ರಾನ್ಸಿನ ನಾಲ್ಕನೆಯ ಮಹಾನಗರ. ದಕ್ಷಿಣ ಫ್ರಾನ್ಸಿನ ಸಾಂಸ್ಕೃತಿಕ ರಾಜಧಾನಿ ಎಂದು ಅದನ್ನು ಪರಿಗಣಿಸಲಾಗುತ್ತದೆ. ಪ್ಯಾರಿಸ್ಸಿಗೆ ಹೋಲಿಸಿದರೆ ತುಲೋಸ್‌ ಬೆಚ್ಚನೆಯ ಪ್ರದೇಶ. ಇದು ಹೆಚ್ಚು ಕಡಿಮೆ ನಮ್ಮ ಬೆಂಗಳೂರಿನಂತಿರುವ ನಗರ. ಅಂದರೆ ಇದು ಕೈಗಾರಿಕಾ ಪ್ರಧಾನ ನಗರ. ಆದರೆ ಊರಿಡೀ ಉದ್ಯಾನವನಗಳು. ಸಾರ್ವಜನಿಕ ಉದ್ಯಾನವನಗಳು ಅವೆಷ್ಟೋ. ಅವುಗಳು ಮಾತ್ರವಲ್ಲದೆ ತಮ್ಮ ಮನೆಯ ಹಿಂದೆಯೋ, ಮುಂದೆಯೋ ಪುಟ್ಟ ಉದ್ಯಾನಗಳನ್ನು ತುಲೋಸಿಗರು ನಿರ್ಮಿಸಿಕೊಂಡಿದ್ದಾರೆ. ಹಾಗಾಗಿ ಇದು ಉದ್ಯಾನನಗರಿ. ಹತ್ತರಿಂದ ಆರಂಭವಾಗಿ ಹತ್ತೊಂಬತ್ತನೆಯ ಶತಮಾನದವರೆಗಿನ ವಾಸ್ತುಶಿಲ್ಪ ವೈವಿಧ್ಯಗಳು ತುಲೋಸಿನಲ್ಲಿ ಕಾಣಸಿಗುತ್ತವೆ. ನಗರದ ಕಟ್ಟಡಗಳು ಕೆಂಪು ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿವೆ. ಈ ಕಾರಣಕ್ಕಾಗಿ ತುಲೋಸಿಗರು ತಮ್ಮ ಪಟ್ಟಣವನ್ನು ಗುಲಾಬಿ ನಗರ ಎಂದೂ ಕರೆಯುತ್ತಾರೆ. ಅನೇಕ ಯುದ್ಧ ಸ್ಮಾರಕಗಳನ್ನು ಇಲ್ಲಿ ಕಾಣಬಹುದು. ಆದರೆ ತುಲೋಸು ಯುದ್ಧದಿಂದ ಪಾಳುಬೀಳಲಿಲ್ಲ. ಕಥಾರರ ಮಾರಣಹೋಮದ ಸಂದರ್ಭದಲ್ಲೂ ತುಲೋಸಿಗರು ಅಸೀಮ ಸಾಹಸದಿಂದ ತಮ್ಮ ಕೋಟೆ ಕೊತ್ತಲಗಳನ್ನು ಹಾಗೆಯೇ ಉಳಿಸಿ ಕೊಂಡರು. ಈಗಲೂ ಹಾಗೆಯೇ ಉಳಿಸಿಕೊಳ್ಳಲು ಸರ್ವಪ್ರಯತನಗಳನ್ನೂ ಮಾಡುತ್ತಿದ್ದಾರೆ.

ಕ್ರಿ.ಶ. 418 ರಿಂದ 507ರ ವರೆಗೆ ಇದು ವಿಸಿಗೋತ್‌ ಸಾಮ್ಯಾಜ್ಯದ ರಾಜಧಾನಿಯಾಗಿ, ಮಹಾನ್‌ ಚಕ್ರವರ್ತಿ ರಿನೋ ಡಿ ತೊಲೋಸಾನ ವಾಸಸ್ಥಳವಾಗಿತ್ತೆಂದು ಇತಿಹಾಸಕಾರ ರೋಕ್‌ ಬೇ ಉಲ್ಲೇಖಿಸಿದ್ದಾನೆ. ತೊಲೋಸ ಚಕ್ರವರ್ತಿ ಸ್ಪಾನಿಷ್‌ ರಾಜವಂಶಸ್ಥನಾಗಿದ್ದ. ಹಾಗೆ ನೋಡಿದರೆ ಮಿಡಿಪಿರನೀಸ್‌ ಮತ್ತು ಲ್ಯಾಂಗ್‌ಡಕ್ಕ್‌  ರೌಸಿಲನ್‌ ಪ್ರಾಂತ್ಯಗಳು ಈಗಲೂ ಸ್ಪಾನಿಷ್‌ ಸಂಸ್ಕೃತಿಗೆ ಒಗ್ಗಿಕೊಂಡಿವೆ. ಇವೆರಡು ಪ್ಯಾಂತ್ಯಗಳ ನಿವಾಸಿಗಳಿಗೆ ಫ್ರೆಂಚ್‌ ಮತ್ತು ಸ್ಪಾನಿಷ್‌ ನಿರರ್ಗಳವಾಗಿ ಬರುತ್ತದೆ. ಹಾಗಾಗಿ ಇವರನ್ನು ಫ್ರೆಂಚ್‌ ಮೂಲದವರೋ, ಸ್ಪಾನಿಷ್‌ ಮೂಲದವರೋ ಎಂದು ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಎಲ್ಲಾ ದೇಶಗಳಲ್ಲೂ ಜನಾಂಗ ಮಿಶ್ರಣವು ಒಂದು ಸತ್ಯವಾಗಿರುವುದರಿಂದ ನಾನದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಬದಲಾಗಿ ಋಷೀಮೂಲ, ನದೀ ಮೂಲ, ಸ್ತ್ರೀಮೂಲ ಶೋಧಿಸಬಾರದು ಎಂಬ ಮಾತಿಗೆ, ‘ಯಾವನೇ ವ್ಯಕ್ತಿಯ ಮೂಲವನ್ನು ಶೋಧಿಸಬಾರದು’ ಎಂದೂ ಸೇರಿಸಿಕೊಂಡೆ.

ತೊಲೋಸಾನ ಬಳಿಕ ಈ ಪಟ್ಟಣ ರೋಂ ಅಧಿಪತ್ಯಕ್ಷ್ಕೆ ಒಳಪಟ್ಟಿದ್ದನ್ನು ಹಳೆಯ ಅವಶೇಷಗಳು ತಿಳಿಸುತ್ತವೆ. ಹನ್ನೊಂದನೇ ಶತಮಾನದವರೆಗೆ ಪುಟ್ಟ ಪಟ್ಟಣವಾಗಿದ್ದ ತುಲೋಸ್‌ ಆ ಬಳಿಕ ಕೌಂಟ್‌ ರೇಮೊಂಡ್‌ನ ಕಾಲದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ಆಗ ಸಂಭವಿಸಿತು ಮಹಾ ದಾರುಣವಾದ ಕಥಾರರ ನರಮೇಧ. ಪರಿಣಾಮವಾಗಿ ಕ್ರಿ.ಶ.1271 ರಲ್ಲಿ ಇದು ಫ್ರಾನ್ಸಿನ ರಾಜನ ನೇರ ಆಡಳಿತಕ್ಕೆ ಒಳಪಟ್ಟಿತು. ಆ ಬಳಿಕದ ಮೂರು ಶತಮಾನಗಳದ್ದು ಯುದ್ಧಗಳ, ಬರಗಾಲಗಳ ಮತ್ತು ಪ್ಲೇಗ್‌ ಮಾರಿಯ ದೌರ್ಜನ್ಯಗಳ ಕಣ್ಣೀರ ಕತೆ. ಹದಿನೈದನೆಯ ಶತಮಾನದ ಮಧ್ಯಭಾಗದಿಂದ ತುಲೋಸು ಒಂದು ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುವುದರೊಂದಿಗೆ ಅದರ ಹಣೆಬರಹವೇ ಬದಲಾಯಿತು. ಹೊಸ ಕಟ್ಟಡಗಳು ರಚನೆಯಾಗಿ ಅದು ವ್ಯಾಪಾರ ಚಟುವಟಿಕೆಗಳಿಂದ ಗಿಜಿಗುಟ್ಟತೊಡಗಿತು. ಮಿದಿಕಾಲುವೆಯ ನಿರ್ಮಾಣವು ತುಲೋಸು ಸುತ್ತಮುತ್ತಣ ರೈತರ ಅದೃಷ್ಟವನ್ನು ಖುಲಾಯಿಸುವಂತೆ ಮಾಡಿತು. ರೈತರು ಬೆಳೆದ ದವಸಧಾನ್ಯ, ಹಣ್ಣು ಹಂಪಲುಗಳು ಕಾಲುವೆ ಮೂಲಕ ಬೇರೆ ಊರುಗಳಿಗೆ ನಿರ್ಯಾತವಾಗತೊಡಗಿದವು. ಇಂದು ತುಲೋಸು ಹಳೆಯ ಛಾಯೆಯಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ಒಂದು ವಾಣಿಜ್ಯ ಮಹಾನಗರಿಯಾಗಿ ಬೆಳೆದಿದೆ. ವಿಮಾನದ ಬಿಡಿಭಾಗ, ಬಾಹ್ಯಾಕಾಶ ಸಂಶೋಧನಾ ರಾಕೆಟ್ಟಿನ ಬಿಡಿಭಾಗ ಮತ್ತು ಯಂತ್ರೋಪಕರಣಗಳನ್ನು ಉತ್ಪಾದಿಸುವುದರಿಂದ ಅದು ವಿಶ್ವಖ್ಯಾತಿಯನ್ನು ಪಡೆದಿದೆ. ಬ್ಯಾರನ್‌ ಹಾಸ್‌ಮನ್‌ ಎಂಬ ವಾಸ್ತುಶಿಲ್ಪಿಯ ಪ್ರೇರಣೆಯಿಂದಾಗಿ ನಿರ್ಮಾಣಗೊಂಡ ವಿಶಾಲವಾದ ಸುಯೋಜಿತ ರಸ್ತೆಗಳು, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿವೆ. ಉತ್ತರ ಯುರೋಪಿನಲ್ಲಿ ಅಸಹ್ಯ ಚಳಿಯಿರುವಾಗ ತುಲನಾತ್ಮಕವಾಗಿ ಬೆಚ್ಚಗಿರುವ ತುಲೋಸಿಗೆ ಉತ್ತರದಿಂದ ಪ್ರವಾಸಿಗರು ಬರುತ್ತಾರೆ. ಗರೋನ್‌ ನದಿ ಮತ್ತು ಮಿದಿ ಕಾಲುವೆಗಳು ಪ್ರವಾಸಿಗರನ್ನು ಸದಾ ಕಾಲ ತುಲೋಸಿಗೆ ಆಕರ್ಷಿಸುತ್ತಲೇ ಇರುತ್ತವೆ.

ತುಲೋಸ್‌ ಮಹಾನಗರವು ಪೂರ್ವದ ಮೆಡಿಟರೇನಿಯನ್‌ ಮತ್ತು ಪಶ್ಚಿಮದ ಅಟ್ಲಾಂಟಿಕ್‌ ಸಾಗರಕ್ಕೆ ಸಮಾನ ದೂರದಲ್ಲಿದೆ. ಗರೋನ್‌ ನದಿಯು ತುಲೋಸನ್ನು ಅಟ್ಲಾಂಟಿಕ್‌ನೊಡನೆ ಸಂಪರ್ಕಿಸಿದರೆ, ಮಿದಿಕಾಲುವೆಯು ಮೆಡಿಟರೇನಿಯನಿನ್ನೊಡನೆ ಸಂಪರ್ಕಿಸುತ್ತದೆ. ಹಾಗಾಗಿ ತುಲೋಸ್‌ ಪೂರ್ವ ಮತ್ತು ಪಶ್ಚಿಮಗಳ ಸಂಧಿಸ್ಥಳವಾಗಿದೆ. ಹಾಗೆ ನೋಡಿದರೆ ಯುರೋಪಿನ ಪ್ರವಾಸಿಗರಿಗೆ ತುಲೋಸಿನಲ್ಲಿರುವ ಪ್ರಧಾನ ಆಕರ್ಷಣೆ ಎಂದರೆ ಕನಾಲ್‌ ದ್ಯುಮಿದಿ. ಈ ಕಾಲುವೆಯ ಇತಿಹಾಸ ಕ್ರಿ.ಶ.1663ರಲ್ಲಿ ಆರಂಭವಾಗುತ್ತದೆ. ಆ ವರ್ಷ ಬೋನ್‌ ರೆಪೋಸ್‌ನ ಬ್ಯಾರನ್‌, ಪಿಯರೆ ಪೌಲ್‌ ರಿಕೇ ಫ್ರಾನ್ಸಿನ ಮಹಾಮಂತ್ರಿ ಕಾಲಪರ್ಟನೆದುರು ಒಂದು ಕನಸನ್ನು ತೆರೆದಿರಿಸಿದ. ಮೆಡಿಟರೇನಿಯನ್‌ ಮತ್ತು ಅಟ್ಲಾಂಟಿಕ್‌ಗಳನ್ನು ತಾಂತ್ರಿಕವಾಗಿ ಜೋಡಿಸುವುದು! ಆರಂಭದಲ್ಲಿ ಕಾಲಪರ್ಟ್ ಅದು ಒಂದು ಅಸಾಧ್ಯವಾದ ಯೋಜನೆ ಎಂದೇ ಭಾವಿಸಿದ್ದ. ನಿರಾಶನಾಗದ ಪೌಲ್‌ ರಿಕೇ ಫ್ರಾನ್ಸಿನ ರಾಜನಾದ ಹದಿನಾಲ್ಕನೆಯ ಲೂಯಿಯನ್ನು ಭೇಟಿಯಾಗಿ ತನ್ನ ಯೋಜನೆಯನ್ನು ಮಂಡಿಸಿದ. ಗರೋನ್‌ ನದಿ ತುಲೋಸನ್ನು ಬಳಸಿ ಅಟ್ಲಾಂಟಿಕ್ಕನ್ನು ಸೇರುತ್ತದೆ. ಆದುದರಿಂದ ತುಲೋಸನ್ನು ಅಟ್ಲಾಂಟಿಕ್‌ನೊಡನೆ ಸಂಪರ್ಕಿಸುವುದು ಏನೇನೂ ಕಷ್ಟವಲ್ಲದ ಕೆಲಸ. ಆದರೆ ತುಲೋಸನ್ನು ಪೂರ್ವದ ಮೆಡಿಟರೇನಿಯನ್ನಿಗೆ ಜೋಡಿಸುವುದು ಹೇಗೆ? ಅದಕ್ಕೊಂದು ಕಾಲುವೆ ಸಿದ್ಧವಾಗಬೇಕು. ಕ್ಯಾಸ್ಟ್ರ ಸಮೀಪದ ಕರಿಪರ್ವತದಲ್ಲಿ ವಿಶಾಲವಾದ ಎರಡು ಸರೋವರಗಳಿವೆ. ಕರಿಪರ್ವತದ ಸುತ್ತಮುತ್ತ ಅಸಂಖ್ಯಾತ ತೊರೆಗಳಿವೆ. ಅವುಗಳ ನೀರಿನಿಂದ ಒಂದು ಸರ್ವಋತು ಕಾಲುವೆ ನಿರ್ಮಿಸಲು ಸಾಧ್ಯ. ಪೌಲ್‌ ರಿಕೇಯ ಈ ತಾಂತ್ರಿಕ ಯೋಜನೆ ರಾಜನಿಗೆ ಇಷ್ಟವಾಯಿತು. ಹಾಗೆ ಆರಂಭವಾಯಿತು ಮಿದಿ ಕಾಲುವೆಯ ನಿರ್ಮಾಣ ಕಾರ್ಯ.

ಮಿದಿ ಕಾಲುವೆಯ ಉದ್ದ 240 ಕ್ಷಿಲೋಮೀಟರುಗಳು. ಹದಿನೈದು ಸಾವಿರ ಕಾರ್ಮಿಕರು ಹದಿನಾಲ್ಕು ವರ್ಷ ಬೆವರುಸುರಿಸಿ ಆ ಕಾಲುವೆಯನ್ನು ನಿರ್ಮಿಸಿದರು. ಪೌಲ್‌ ರಿಕೇ ತನ್ನ ಹಣ ಮತ್ತು ಆಯುಸ್ಸನ್ನು ಕಾಲುವೆ ನಿರ್ಮಾಣಕ್ಕಾಗಿ ಧಾರೆಯೆರೆದ. ಇಂದು ಮಿದಿಕಾಲುವೆಯನ್ನು ಒಂದು ಅದ್ಭುತ ವಾಸ್ತುಶಿಲ್ಪಸಾಧನೆ ಎಂದು ಪರಿಗಣಿಸಲಾಗಿದೆ.

ಫೀಡರ್‌ ಕಾಲುವೆಗಳ ಮತ್ತು ಜಲಾಶಯಗಳ ಒಂದು ಸಂಕ್ಷೀರ್ಣ ವ್ಯವಸ್ಥೆಯು ಕಾಲುವೆಯನ್ನು ಸದಾಕಾಲ ಜಲಭರಿತವಾಗಿರುವಂತೆ, ಆ ಮೂಲಕ ಸಂಚಾರಕ್ಕೆ ಯೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಈ ಕಾಲುವೆಯ ಮೇಲಿನಿಂದ ರಚಿತವಾಗಿರುವ ಸೇತುವೆಗಳು, ಲಾಕ್‌ಗಳು, ನೀರ ನಾಳಗಳು ಮತ್ತು ಹೆಚ್ಚುವರಿ ನೀರನ್ನು ಹೊರಹಾಕುವ ವ್ಯವಸ್ಥೆಗಳು ಇದನ್ನು ಒಂದು ಹೈಡ್ರಾಲಿಕ್‌ ವಿಸ್ಮಯವನ್ನಾಗಿ ಪರಿವರ್ತಿಸಿವೆ. ಕಾಲುವೆಯಲ್ಲಿ ತುಲೋಸಿನಿಂದ ಸೆತ್ತ್‌ನವರೆಗಿನ 240ಕಿ.ಮೀ. ಸಂಚರಿಸಿದರೆ ಲ್ಯಾಂಗ್‌ಡೆಕ್ಕ್ಷಿನ ವೈಶಿಷ್ಟ್ಯಗಳನೆನಲ್ಲಾ ಪರಿಚಯಿಸಿಕೊಳ್ಳಬಹುದು. ವೈವಿಧ್ಯಮಯವಾದ ಬೋಟುಗಳು ಮತ್ತು ದೋಣಿಗಳು ಇಲ್ಲಿ ಪ್ರವಾಸಿಗರ ಸೇವೆಗಾಗಿ ಸದಾ ಲಭ್ಯ. ಬೆಡ್‌ ರೂಮು, ಕಿಚನ್‌, ಬಾತ್‌ ರೂಮು, ಟಾಯ್ಲಯೆಟ್‌, ಲೈಬ್ರರಿ ಮತ್ತು ಟೀವಿ ರೂಮುಗಳಿರುವ ಸುಸಜ್ಜಿತ ಸ್ವಯಂ ಚಾಲಿತ ಬೋಟುಗಳಲ್ಲಿ ಮಿದಿ ಕಾಲುವೆಯಲ್ಲಿ ಸಂಚರಿಸುವುದು ಫ್ರೆಂಚರ ಹವ್ಯಾಸಗಳಲ್ಲಿ ಒಂದು. ಫ್ರೆಂಚರು ಎಂದೇನು? ಯುರೋಪು ಮತ್ತು ಅಮೇರಿಕಾಗಳ ಜನರು ಮಿದಿಕಾಲುವೆ ಸಂಚಾರ ಸುಖವುಣ್ಣುವುದಕ್ಕಾಗಿ ಬೇಸಿಗೆಯಲ್ಲಿ ತುಲೋಸಿನತ್ತ ದೌಡಾಯಿಸುತ್ತಾರೆ.

ತುಲೋಸಿನ ಹೃದಯಭಾಗದಲ್ಲಿ ಕ್ಯಾಪಿಟೋಲ್‌ ಭವನವಿದೆ. ತುಲೋಸಿನ ಆಡಳಿತ ಕೇಂದ್ರವಿದು. ಹತ್ತೊಂಬತ್ತನೆಯ ಶತಮಾನದಲ್ಲಿ ರಚನೆಯಾದ ಈ ಭವನ ತನ್ನ ಭವ್ಯಾಕೃತಿಯಿಂದ ಮತ್ತು ಶಿಲ್ಪ ಸೌಂದರ್ಯದಿಂದ ನಮ್ಮ ಗಮನ ಸೆಳೆಯುತ್ತದೆ. ಭವನದ ಗೋಡೆಗಳಲ್ಲಿ ಮನಸೆಳೆಯುವ ಸ್ಪಾನಿಷ್‌ ಮತ್ತು ಫ್ರೆಂಚ್‌ ಪೈಂಟಿಂಗ್‌ಗಳಿವೆ. ಕ್ಯಾಪಿಟೋಲ್‌ನ ಒಳಗಡೆ ವಿಶಾಲವಾದ ಸಭಾಂಗಣವಿದ್ದು, ಅದನ್ನು ಸಿಟಿಹಾಲ್‌ ಎಂದು ತುಲೋಸಿಗರು ಕರೆಯುತ್ತಾರೆ. ಸಿಟಿ ಹಾಲಿನ ಕಂಬಗಳು ಮತ್ತು ಬೋದಿಗೆಗಳು ಕಲಾತ್ಮಕವಾಗಿವೆ. ಹಾಲಿನುದ್ದಕ್ಕೂ ಅಲ್ಲಲ್ಲಿ ಸ್ಪಾನಿಷ್‌ ಶಿಲ್ಪಗಳನ್ನು ಇರಿಸಲಾಗಿದೆ. ಗೋಡೆಗಳಲ್ಲಿ ಸ್ಪಾನಿಷ್‌ ವರ್ಣಚಿತ್ರಗಳಿವೆ. ಇವನ್ನು ನೋಡುವಾಗ ಜುವಾನ್‌ಬುಯೋ ಮೆಲ್ಲನೆ ಹೇಳಿದ.’ತುಲೋಸಿಗರಿಗೆ ಫ್ರಾನ್ಸಿನ ಪ್ಯಾರಿಸ್ಸಿಗಿಂತ ಸ್ಪೈನಿನ ಬಾರ್ಸಿಲೋನಾ ಹೆಚ್ಚು ಇಷ್ಟ!’

ಕ್ಯಾಪಿಟೋಲ್‌ನ ಮುಂಭಾಗದಲ್ಲಿ ವಿಶಾಲವಾದ ಖಾಲಿ ಜಾಗವಿದೆ. ಇಲ್ಲಿ ಆಗಾಗ ಸಂತೆ ನೆರೆಯುತ್ತದೆ. ಅದು ತರಕಾರಿ ಮಾರಾಟದ ಸಂತೆಯೇ ಆಗಬೇಕೆಂದೇನೂ ಇಲ್ಲ. ಇಂದು ಬಟ್ಟೆ ಬರೆಗಳದ್ದಾದರೆ, ನಾಳೆ ಕರಕುಶಲ ವಸ್ತುಗಳದ್ದು, ನಾಡಿದ್ದು ವರ್ಣಚಿತ್ರಗಳದ್ದು ಇರಬಹುದು. ನಾವು ಕ್ಯಾಪಿಟೋಲ್‌ ಸಂದರ್ಶಿಸಿದ ದಿನ ಅಲ್ಲಿ ಬಟ್ಟೆ ಬರೆ ಮತ್ತು ಕರಕುಶಲ ವಸ್ತುಗಳ ಸಂತೆ ಇತ್ತು. ಅಂದು ಸಂತೆಯನ್ನು ನೋಡಲು ಸಮಯವಿರಲಿಲ್ಲ. ಮರುದಿನ ಸಂತೆ ನೋಡಲೆಂದೇ ಬಂದರೆ ಅಲ್ಲೇನಿದೆಲ ಖಾಲಿಜಾಗದಲ್ಲಿ ಪುಟಾಣಿ ಮಕ್ಕಳು ಸ್ಕೇಟ್‌ ಮಾಡುತ್ತಿದ್ದರು!

ತುಲೋಸಿನಲ್ಲಿ ಹದಿನಾರನೆಯ ಶತಮಾನದಲ್ಲಿ ನಿರ್ಮಾಣಗೊಂಡ ಕಟ್ಟಡಗಳು ಮತ್ತು ಹೋಟೆಲುಗಳು ಇಂದು ಸ್ಮಾರಕಗಳಾಗಿ ಉಳಿದುಕೊಂಡಿವೆ. ಅವುಗಳಲ್ಲಿ ಪಿಯರೆ ಡಿ ಅಸ್ಸೆಜಾ ಎಂಬ ರಾಜಕುವರನಿಗಾಗಿ ನಿಕೋಲಸ್‌ ಬ್ಯಾಚೆಲರ್‌ ಎಂಬ ಶಿಲ್ಪಿ ನಿರ್ಮಿಸಿದ ಹೋಟೆಲ್‌ ಡಿ ಅಸ್ಸೆಜಾ ಮತ್ತು ಲೂಯಿ ಪ್ರಿವಾ ಎಂಬಾತನಿಂದ ನಿರ್ಮಾಣವಾದ ಹೋಟೆಲ್‌ ಡಿ ಬೆನ್ಯು  ಹೆಸರುವಾಸಿಯಾದವುಗಳು. ಕೆಂಪು ಇಟ್ಟಿಗೆಗಳಿಂದ ನಿರ್ಮಾಣವಾದ ಈ ಕಟ್ಟಡಗಳಿಗೆ ನಾಲ್ಕುನೂರೈವತ್ತು ವರ್ಷಗಳಾಗಿವೆಯಾದರೂ ಅವು ಇನ್ನೂ ಶಿಥಿಲವಾಗಿಲ್ಲ! ಸರಿ ಸುಮಾರು ಅದೇ ಕಾಲದಲ್ಲಿ ನಿರ್ಮಾಣಗೊಂಡ ಹೋಟೆಲ್‌ ಡಿ ಕ್ಲಾರಿ ಮತ್ತು ಹೋಟೆಲ್‌ ಡಿ ಉಲ್‌ಮೋಯಿ ಈಗಲೂ ತಮ್ಮ ಚೆಲುವಿನಿಂದ ನಮ್ಮ ಮನಸೂರೆಗೊಳ್ಳುತ್ತವೆ. ಕ್ಲಾರಿ ಹೋಟೆಲಿನ ಮೇಲ್ಭಾಗಕ್ಕೆ ಅಮೃತಶಿಲೆಯನ್ನು ಹೊದಿಸಲಾಗಿದೆ. ಅದರ ಕಮಾನುಗಳಂತೂ ಅತ್ಯಾಕರ್ಷಕವಾಗಿವೆ.

ಹಳೆಯ ಚರ್ಚುಗಳು ಮತ್ತು ಕಾನ್ವೆಂಟುಗಳು ಈ ಮಹಾನಗರಿಯನ್ನು ಧರ್ಮಬೀರುಗಳಿಗೂ ಆಕರ್ಷಣೆಯ ಕೇಂದ್ರವನ್ನಾಗಿಸಿವೆ. ಅವುಗಳಲ್ಲಿ ಹದಿಮೂರರಿಂದ ಹದಿನೇಳನೆಯ ಶತಮಾನದ ಅವಧಿಯಲ್ಲಿ ಕಟ್ಟಲಾದ ಸೇಂಟ್‌ ಇಟೇನ್‌ ಕ್ಯಾಥೆಡ್ರಲ್‌, ಹದಿನಾಲ್ಕನೆಯ ಶತಮಾನದ ಜಾಕೋಬಿನ್‌ ಕಾನ್ವೆಂಟು, ಹತ್ತೊಂಬತ್ತನೆಯ ಶತಮಾನದ ವೈಟ್‌ ಚರ್ಚು, ರೋಮನ್‌ ಶೈಲಿಯ ಸೇಂಟ್‌ ಸೆರ್ನಿನ್‌ ಕ್ಯಾಥೆಡ್ರಲ್‌ ಪ್ರಮುಖವಾದವುಗಳು. ಭಾನುವಾರ ಬೆಳಿಗ್ಗೆ ನಮ್ಮನ್ನು ಜಾರ್ಜ್‌ ಚರ್ಚೊಂದಕ್ಕೆ ಕರೆದುಕೊಂಡು ಹೋದ. ಅತ್ಯಂತ ಭವ್ಯವಾದ ಹದಿನೇಳನೇ ಶತಮಾನದ ಚರ್ಚದು. ಆದರೆ ಭಾನುವಾರದ ಪೂಜೆಗೆ ಇದ್ದವರ ಸಂಖ್ಯೆ ಹೆಚ್ಚೆಂದರೆ ಐವತ್ತು. ಅದರಲ್ಲಿ ಮುಕ್ಕಾಲು ಪಾಲು ಮುದುಕರಾದರೆ ಉಳಿದವರು ಆ ಮುದುಕರ ಮೊಮ್ಮಕ್ಕಳು. ಪೂಜೆ ಮುಗಿದ ಬಳಿಕ ಪಾದ್ರಿಯಿಂದ ಪ್ರಸಾದ ಸ್ವೀಕರಿಸಲು ಜಾರ್ಜ್‌ ಹೋದ. ಹೆಬ್ಬಾರರು ಅವನನ್ನು ಹಿಂಬಾಲಿಸಿದರು. ನಾನು ಹೆಬ್ಬಾರರನ್ನು ಅನುಸರಿಸಿದೆ. ಪಾದ್ರಿಕೊಟ್ಟ ಚಿಪ್ಪಿನಾಕಾರದ ಬಿಳಿಯ ಬಿಲ್ಲೆಯನ್ನು ನಾನು ಜೇಬಿಗೆ ಇಳಿಸುತ್ತಿದ್ದುದನ್ನು ಕಂಡು ವೃದ್ಧಿಯೊಬ್ಬಳು ನನ್ನನ್ನು ಕೈಯಿಂದ ತಿವಿದು ಅದನ್ನು ಬಾಯಿಗೆ ಹಾಕುವಂತೆ ಸಂಜ್ಞೆ ಮಾಡಿದಳು. ಮನೆಗೆ ಬಂದು ಮ್ಯಾಗಿಯೊಡನೆ ವಿಷಯ ತಿಳಿಸಿದಾಗ ಅವಳು ನಕ್ಕಳು. ‘ಜಾರ್ಜ್‌ ಆಗಲೀ, ನಾನಾಗಲೀ ಚರ್ಚಿಗೆ ಹೋಗುವುದು ಅಪರೂಪ. ಇಂದು ನಿಮಗಾಗಿ ಅವ ಚರ್ಚಿಗೆ ಹೋದದ್ದು’ ಎಂದಳು. ‘ಅದ್ಯಾಕೆ ಭಾನುವಾರವೂ ಕೂಡಾ ಚರ್ಚು ಬಿಕೋ ಅನ್ನುತ್ತಿದೆ?’ ಎಂದು ಕೇಳಿದ್ದಕ್ಕೆ ‘ಜನರಿಗೆ ಚರ್ಚಿನಲ್ಲಿ ವಿಶ್ವಾಸವೇ ಉಳಿದಿಲ್ಲ. ಆಧುನಿಕತೆಯ ಪ್ರಭಾವವಿರಬೇಕು ‘ ಎಂದಳು.

ತುಲೋಸಿನಲ್ಲಿ ಅನೇಕ ಮ್ಯೂಸಿಯಮ್ಮುಗಳಿವೆ. ಆಗಸ್ಟಿನ್‌, ಪೌಡ್‌ ಡ್ಯುಪೇ ಮತ್ತು ಸೇಂಟ್‌ ರೇಮಂಡ್‌ ಮ್ಯೂಸಿಯಮ್ಮುಗಳು ಅವುಗಳಲ್ಲಿ ತುಂಬಾ ಪ್ರಖ್ಯಾತವಾದವುಗಳು. ಈ ಮೂರು ಮ್ಯೂಸಿಯಮ್ಮುಗಳಲ್ಲಿರುವ ಮಣ್ಣಿನ ಪಾತ್ರೆಗಳು ಮತ್ತು ಮೂರ್ತಿಗಳು ತುಲೋಸಿನ ಕುಶಲಕರ್ಮಿಗಳ ನೈಪುಣ್ಯಕ್ಕೆ ಸಾಕ್ಷಿಯಾಗಿವೆ. ಜಾರ್ಜೆಸ್‌ ಲ್ಯಾಬಿಟ್‌ ಮ್ಯೂಸಿಯಂ ಪುರಾತನ ಚಿತ್ರಕಲೆಯ ಬಹುದೊಡ್ಡ ಕಣಜವಾಗಿದೆ. ಹತ್ತೊಂಬತ್ತನೆ ಶತಮಾನದ ನೀರಿನ ಗೋಪುರ ಈಗ ಪೋಟೋಗ್ರಫಿ ಮ್ಯೂಸಿಯಮ್ಯಾಗಿ ಪರಿವರ್ತನೆಗೊಂಡಿದೆ. ತುಲೋಸಿನ ಎಲ್ಲಾ ಮ್ಯೂಸಿಯಮ್ಮುಗಳಿಗೆ ಕಳಶ ಪ್ರಾಯವಾದುದು ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ. ಇದು 25000ಕ್ಕೂ ಮಿಕ್ಕ ಪಕ್ಷಿ ಸಂಕುಲಗಳ ಇತಿಹಾಸವನ್ನು ನಮ್ಮ ಮುಂದೆ ಬಿಡಿಸಿಡುತ್ತದೆ.

ನಿಸರ್ಗಪ್ರಿಯರಾದ ತುಲೋಸಿಗರು ಅಲ್ಲಲ್ಲಿ ಉದ್ಯಾನಗಳನ್ನು ಮತ್ತು ನೀರಿನ ಕಾರಂಜಿಗಳನ್ನು ನಿರ್ಮಿಸಿಕೊಂಡು ತಮ್ಮ ನಗರದ ಚೆಲುವನ್ನು ಹೆಚ್ಚಿಸಿದ್ದಾರೆ. ಅವುಗಳಲ್ಲಿ ಗ್ರ್ಯಾಂಡ್‌ ರೋಡಿನ ಉದ್ಯಾನಗಳು, ಗರೋನ್‌ ಮತ್ತು ಆ್ಯರಿಜೆ ನದಿದಂಡೆಗಳ ಮೇಲಣ ಉದ್ಯಾನಗಳು ಮನಮೋಹಕವಾಗಿವೆ. ಇಲ್ಲಿ ಕೊಳ ಇರುವಲ್ಲೆಲ್ಲ ಕಾರಂಜಿಗಳಿವೆ. ತುಲೋಸಿನ ವಿಲ್ಸನ್‌ ಅರಮನೆಯೆದುರು ಸುಂದರವಾದ ಒಂದು ಉದ್ಯಾನವಿದೆ. ಉದ್ಯಾನದ ಮಧ್ಯದಲ್ಲೊಂದು ಕಾರಂಜಿ. ಕಾರಂಜಿಯ ಮಧ್ಯದಲ್ಲೊಂದು ಪ್ರತಿಮೆ. ಅದು ಯಾವನೋ ರಾಜವಂಶಸ್ಥನದ್ದು ಇರಬಹುದೆಂಬ ನನೆನಣಿಕೆ ತಪ್ಪಾಗಿತ್ತು. ಅದು ಕ್ರಿ.ಶ.1580ರಿಂದ 1649ರ ವರೆಗೆ ಬದುಕಿದ್ದ ಲ್ಯಾಂಗ್‌ ಡಕ್ಕ್ಷಿನ ಪ್ರಸಿದ್ಧ ಕವಿ ಗೋಡೋಲಿನ್‌ನ ಮೂರ್ತಿ. ಆರಾಮ ಭಂಗಿಯಲ್ಲಿ ಕೂತು ಕೈಯಲ್ಲಿರುವ ಕವನ ಸಂಕಲನವನ್ನು ನೋಡುತ್ತಿರುವ ಕವಿಯ ಕಾಲ ಬುಡದಲ್ಲಿ ಪೂರ್ಣ ನಗ್ನಳಾಗಿ ಮಲಗಿ ಕವಿಯನ್ನು ಉತ್ಕಟ ಪ್ರೇಮದಿಂದ ನೋಡುವ ಸುಂದರ ಸ್ತ್ರೀಯೊಬ್ಬಳ ಮೂರ್ತಿಯಿದೆ. ಕನ್ನಡದ ಯಾವ ಕವಿಗೆ ಇಂತಹ ಭಾಗ್ಯ ಒದಗಿದೆ?

ಇಂತಹ ವೈಶಿಷ್ಟ್ಯಗಳ ತುಲೋಸನ್ನು ಬಿಟ್ಟು ನಾವು ಎಪ್ರಿಲ್‌ ಏಳರಂದು ಅಲಿಪಯತ್ತ ಹೊರಟೆವು. ಜಾರ್ಜನೇ ಸ್ವಯಂ ನನ್ನನ್ನು ಮತ್ತು ಹೆಬ್ಬಾರರನ್ನು ಅಲಿಪಗೆ ತಂದುಬಿಟ್ಟ. ಉಳಿದ ಮೂವರು ಜುವಾನ್‌ ಬುಯೋನ ಕಾರಲ್ಲಿ ಬಂದರು. ತುಲೋಸು ಬಿಡುವಾಗ ಮ್ಯಾಗಿ ತುಲೋಸಿನ ಬಗ್ಗೆ ಸಂಕ್ಷಿಪ್ತ ವಿವರಣೆಯ ಸಚಿತ್ರ ಪುಸ್ತಕವನ್ನು ನನಗೆ ಮತ್ತು ಹೆಬ್ಬಾರರಿಗೆ ಕೊಡುಗೆಯಾಗಿ ನೀಡಿದಳು. ಅವಳಿಗೆ ಯಕ್ಷಗಾನದ ಮುಖವಾಡ ನೀಡಿ, ಕೈಗೆ ರಾಖಿ ಕಟ್ಟಿ, ಹಣೆಗೆ ಬಿಂದಿ ಇಟ್ಟಾಗ ಅವಳು ‘ನಿಮ್ಮನ್ನು ನಾವಿಬ್ಬರೂ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ನಿಮ್ಮ ಸ್ವಭಾವ ತುಂಬಾ ಸರಳವಾದುದು’ ಎಂದಳು. ಅದು ನಿಜವಾದ ಅನಿನಸಿಕೆ ಎನ್ನುವುದಕ್ಕೆ ಈಗಲೂ ಅವಳಿಂದ ಬರುವ ಪತ್ರಗಳು ಸಾಕ್ಷಿಯಾಗಿವೆ.
****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಂತ್ರ ವೈದ್ಯರು ಬರಲಿದ್ದಾರೆ!
Next post ಹಬ್ಬಗಳು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys