ದೀಪಾವಳಿಯ ದಿನ
ಊರೆಲ್ಲಾ ಬೆಳಕಿನ ತೋರಣ
ದೀಪಗಳೇ ತುಂಬಿರುವಲ್ಲಿ
ಕತ್ತಲೆಗೆಲ್ಲಿಯ ಸ್ಥಾನ?
ಬಾನಂಗಳಕ್ಕೆ ಹಾರಿದ ರಾಕೆಟ್
ಉರಿದ ಸುರುಸುರುಬತ್ತಿ
ನೆಲದಲ್ಲಿ ತಿರುಗಿದ ಚಕ್ರ
ನಡುವೆ ಮಕ್ಕಳ ಕಿಲಕಿಲ ನಗು
ಪಟಾಕಿ ಸಿಡಿಸಿದ್ದಾಯಿತು
ಬೆಳಕು ಬೆಳಗಿದ್ದಾಯಿತು
ಕತ್ತಲನ್ನು ಅಳಿಸಿದ್ದಾಯಿತು
ಸಿಹಿಯ ವಿತರಣೆ ಶುರು
ಅಲ್ಲೇ ಮೂಲೆಯಲಿ ನಿಂತಿದ್ದನೊಬ್ಬ
ಬೊಗಸೆ ಕಂಗಳ ಕೂಲಿಯ ಹುಡುಗ
ಆತನ ಸಂಭ್ರಮ, ನೋಡಿ ಸುಖಿಸುವುದಕ್ಕೆ
ಮಾತ್ರ ಸೀಮಿತ
ಹೊಟ್ಟೆ ಹಸಿದಿದೆ,
ದೇಹ ಕುಸಿದಿದೆ,
ಮನಸ್ಸು ಬೇಡಿದೆ,
ಭಯದಿಂದ ನಾಲಿಗೆ ತಡೆದಿದೆ
ಸಿಹಿ ಹಂಚುತ್ತಿದ್ದವ ಇವನ
ಕೈಗೂ ಸಿಹಿಯಿತ್ತ
ಕೂಲಿಯ ಹುಡುಗನ ಕಣ್ಣಲ್ಲೀಗ
ದೀಪಾವಳಿಯ ಬೆಳಕು
*****


















