ನಿಯಂತ್ರಿಸು ಮನಸ್ಸನ್ನು
ನಿಯಂತ್ರಿಸಿದಷ್ಟೂ ಅದರ ಶಕ್ತಿ ವರ್ಧಿಸೋದು
ಇದೊಂದು ತತ್ವ
ಜಗ್ಗಿದ ಕುದುರೆ ಜಿಗಿಯುವ ಹಾಗೆ
ಮುಂದು ಮುಂದಕ್ಕೆ
ಆದರೂ
ಓಡುವುದು ಕುದುರೆ
ನೀನು ಓಡುವುದಿಲ್ಲ
ಓಡುವ ಅನುಭವ ಮಾತ್ರ ನಿನಗೆ
ಬಯಲು ಬೆಟ್ಟ ಇಳಿಜಾರು ಕಣಿವೆ
ಎಲ್ಲ ಹಾಯಿತು ಕುದುರೆ
ದಟ್ಟಡವಿ ಅಗಾಧ ಕಣಿವೆ
ಒಂದೊಂದೆ ದೃಶ್ಯಗಳು ತೆರೆದುಕೊಂಡಂತೆ
ಅಷ್ಟೇ ಬೇಗ ಹಿಂದಕ್ಕೆ ಸರಿದುವು
ಓಟದ ಮೊದಲಿನ ಕುದುರೆಯೇ ಈ
ಓಡುವ ಕುದುರೆ?
ಸಂದೇಹ ಬೇಡ
ಕಾಡಿನಂಚಿಗೆ ಬಂದು ನಿಂತಿದೆ
ಅದಕ್ಕೆ ಉಸಿರಾಡಲು ಬಿಡು
ಯಾಕೆ ಎಲ್ಲಿಗೆ ಎನ್ನುವುದ ಮರೆತಿದೆ
ಮರೆಯಲು ಬಿಡು
ಅಲ್ಲೊಬ್ಬ ಕಲಾವಿದ ಇದನ್ನೆಲ್ಲ ತನ್ನ ಚಿತ್ತದಲಿ
ಹಿಡಿದಿರುವ
ಅವನ ಚಿತ್ತವೆಂಥದು ಎನ್ನುವುದು ಅನೂಹ್ಯ
*****


















