ದಿಟ್ಟತನದಿ ನಾನು ಬೇಡುವೆ ದೇವ
ಭವಿಯ ಬಾಳಿನಿಂದ ಎನ್ನ ಬೇರ್ಪಡಿಸು
ನಿತ್ಯವೂ ಮನಸ್ಸು ಶುದ್ಧವಿರುವ ವೆಂದದಿ
ಆಲೋಚನೆಗಳಿಗೆ ಭವ್ಯತೆ ಏರ್ಪಡಿಸು
ಹೃದಯಾಂಗಣದಲಿ ಅರಳಲಿ ಸುಮ
ಅದುವೆ ಪರಮಾತ್ಮನ ಶುಭ ನಾಮ
ಆ ಹೂವಿಗೆ ಕಿಂಚಿತ್ತು ದಕ್ಕೆಯಾಗದಿರಲಿ
ಎಲ್ಲೆಲ್ಲೂ ಕಾಣಲಿ ಎನಗೆ ದೇವಧಾಮ
ಲೋಕದ ಜಂಜಡದಲಿ ನಾ ಸಿಲುಕದಿರಲಿ
ವಿಷಯ ಸುಖಗಳಿಂದ ಮನವು ಕಲುಕದಿರಲಿ
ಭೋಗ ಭಾಗ್ಯಗಳಿಗಾಗಿ ತನು ಅಳುಕದಿರಲಿ
ಸ್ವಾರ್ಥ ಅಮಿಷೆಗಳಿಗಾಗಿ ನಾ ಮರುಕದಿರಲಿ
ಎನ್ನ ಕಂಗಳೆದುರಿಗೆ ಇರಲಿ ನಿನ್ನದೇ ರೂಪ
ಮತ್ತೊಂದು ಬೇಡದಂತೆ ದೊರಕಲಿ ಶಾಪ
ಸೂಜಿ ಮೊನೆಯಷ್ಟು ಮಾಡದಿರಲಿ ಪಾಪ
ಮನಾಂತರಂಗದಲಿ ಬೇಡ ದೇವನ ಲೋಪ
ಭಕುತಿಯೇ ಎದೆಯಲ್ಲಿ ಉಕ್ಕಿಬರಲಿ
ನರನಾಡಿಗಳಲಿ ಹರಿಯಲಿ ರುದಿರವಾಗಿ
ನಶಿಸಿ ಹೋಗುವುದಕ್ಕೆ ನಾ ಹಪಿ ಹಪಿಸದಿರಲಿ
ಮಾಣಿಕ್ಯ ವಿಠಲನಾಗಿ ಇಂದ್ರಿಯಗಳ ಮೆಟ್ಟಲಿ
*****
















