ಒಂದು ಕಣ್ಣೀರ ಹನಿ, ಒಂದು ಇಬ್ಬನಿ, ಒಂದು ಮಳೆಹನಿ ಮೂವರು ಗೆಳೆಯರಾದರು. ಕಣ್ಣೀರ ಹನಿ ಹೇಳಿತು- “ನಾನು ಕಣ್ಣು ತುಂಬಿ ಬಂದೆ” ಎಂದು. ಇಬ್ಬನಿ ಹೇಳಿತು- “ನಾನು ಹೂ ಹೃದಯ ತುಂಬಿದೆ” ಎಂದು. ಮಳೆ ಹನಿ ಹೇಳಿತು- “ನಾನು ಭೂತಾಯಿಯ ಎದೆ ತುಂಬಿದೆ” ಎಂದು. ಕಣ್ಣೀರ ಹನಿ, ಇಬ್ಬನಿ ಎರಡೂ ಮಳೆಹನಿಯ ಕೈಕುಲಿಕಿ ತಬ್ಬಿಕೊಂಡು ‘ಶಭಾಸ್!’ ಎಂದವು. ಮಳೆಹನಿ ಸ್ನಿಗ್ಧವಾಗಿ ನಾಚಿ ಒದ್ದೆಮುದ್ದೆಯಾಯಿತು.
*****