ದೀಪದ ಕಂಬ – ೪ (ಜೀವನ ಚಿತ್ರ)

ನಾಟಕ: ನಾನು ನೋಡಿದ ಮೊದಲ ನಾಟಕ ಸಾಹಿತ್ಯ ಸೇವಕ ಸಂಘದ “ಟಿಪ್ಪು ಸುಲ್ತಾನ”. ಅಗಸೆಯ ಅಯ್ಯು ಸಭಾಹಿತರ ಟೀಪು ಪಾತ್ರ ಸುಪ್ರಸಿದ್ಧ. ವಸಂತಸೇನೆಯ ಚಾರುದತ್ತನಾಗಿಯೂ ಅವರದು ಒಳ್ಳೆಯ ಹೆಸರು. ಚಾರುದತ್ತನಾಗಿ ಪಾತ್ರ ವಹಿಸಿದ ಸಂದರ್ಭ. ಅವನಿಗೆ ಗಲ್ಲು ಶಿಕ್ಷೆಯಾಗುವುದಷ್ಟೆ? ತಾನು ನಿರಪರಾಧಿ ಎಂದು ಹೇಳುತ್ತಾ ರಂಗಪ್ರವೇಶ ಮಾಡುವ ಸನ್ನಿವೇಶ: “ನಭೀತೋ ಮರಣಾದಸ್ಮಿ ಕೇವಲಂ ದೂಷಿತಂ ಯಶಃ” ಹೇಳುತ್ತಿದ್ದಂತೆ ಮುಂದಿನ ಸಾಲಿನಲ್ಲಿ ಕುಳಿತ ಭಡ್ತಿ ದೇವರ ಭಟ್ಟರು, ನಾರಾಯಣ ಶಾಸ್ತ್ರಿಗಳು , ಗಣಪಿ ಕೃಷ್ಣ ಭಟ್ಟರು ಎಲ್ಲಾ ಒಕ್ಕೊರಲಿನಲ್ಲಿ “ಪುನರುಚ್ಯತಾಂ” (ಒನ್ಸ್ ಮೋರ್). ಹಾಗೆ ಚಾರುದತ್ತ ಮೂರುನಾಲ್ಕು ಸಲ ಅಭಿನಯ ಪುನರಾವೃತ್ತಿಸಬೇಕಾಯಿತು! ಆಮೇಲೆ ಯಾರೋ ಹೇಳಿದರು: “ಪುನರುಚ್ಯತಾಂ ಎಂದಾಗ ಹಾಡುವುದು, ಬಿಡುವುದು ಹಾಡುಗಾರನ ಮರ್ಜಿ”. ಸದ್ಯ, ಸಭಾಹಿತಮಾವ ಬದುಕಿದ! ಇನ್ನೊಂದು ಹಾಡು ನೆನಪಿಗೆ ಬರುತ್ತಿಲ್ಲ…. ಶಕಾರನ ಪಾತ್ರ ಶ್ರೀ ಬೈಲಕೇರಿ ಪರಮೇಶ್ವರ ಭಟ್ಟರದು. ಬೈಲಕೇರಿ ಭಾವಯ್ಯ ಎಂದೇ ಊರಿನವರೆಲ್ಲ ಕರೆಯುತ್ತಿದ್ದುದು. “ಕಿಂ ಭೀಮಸೇನೋ ಜಮದಗ್ನಿ ಪುತ್ರ; ಕುಂತೀಸುತೋವಾ.. “ಅಭಿನಯ ಸಮೇತ-ಮುಖ ವಿಕಾರ ಮಾಡುತ್ತಾ-ಶಕಾರ ಹಾಡಿದನೆಂದರೆ ಪುನಃ ’ಪುನರುಚ್ಯತಾಂ’. ವೇಣಿ ಸಂಹಾರ ನಾಟಕದಲ್ಲಿ ಪಂಡಿತ ನಾಗಪ್ಪಣ್ಣನ “ಕಂ ಸಂದಿಃ ಲಾಕ್ಷಾಗೃಹಾನ್ನ…… “ರಾತ್ರಿಯ ನಿಶ್ಯಬ್ದತೆಯಲ್ಲಿ ಕೋಟಿತೀರ್ಥಕಟ್ಟೆ, ನಾಗಬೀದಿ, ರಥಬೀದಿಯಲ್ಲಿ ಕಂಠಶ್ರೀ ಮೊಳಗುತ್ತಿತ್ತು. ಈವರೆಗೆ ಹೆಣ್ಣು ವೇಷವನ್ನು ಗಂಡಸರೇ ಮಾಡುತ್ತಿದ್ದರು. ಹೊಸ ಮನ್ವಂತರದಲ್ಲಿ ಹೆಣ್ಣು ವೇಷವನ್ನು ಹೆಂಗಸರೇ ಮಾಡತೊಡಗಿದರು. ನಾಟಕ ನಡೆಯುವ ಸ್ಥಳ ದೇವಸ್ಥಾನದ ಉಪ್ಪರಿಗೆ. ಹೆಂಗಸು ಪಾತ್ರಧಾರಿಗಳಿಗೆ ಕೆಲ ಸಂದರ್ಭಗಳಲ್ಲಿ ದೇವರೆದುರು ಹೋಗಲಾಗದು. ಹೊಂಡದಕ್ಲ ಭಾವನಿಗೆ ಒಂದು ಉಪಾಯ ಹೊಳೆಯಿತು. ಮೆತ್ತಿಯ ಕಡಗಟ್ಟಿಗೆ ಬಾವಿಯ ಗಡಗಡೆ ಕಟ್ಟುವುದು. ಹಗ್ಗದ ತುದಿಗೆ ಬುಟ್ಟಿ ಕಟ್ಟುವುದು. ಬುಟ್ಟಿಯಲ್ಲಿ ಸ್ತ್ರೀ ಪಾತ್ರಧಾರಿಗಳು. ಮೆತ್ತಿ ಮೇಲಿಂದ ನಿಧಾನವಾಗಿ ನಾಲ್ವರು ಹಗ್ಗ ಜಗ್ಗುವುದು!

’ಆಗ್ರಹ’ ನಾಟಕದ ಅಶ್ವತ್ಥಾಮನ ಏಕಪಾತ್ರಾಭಿನಯ ಶ್ರೀನರಸಿಂಹ ಪಂಡಿತರದು. ಬಟ್ಟೆ ಶಂಕರ ಭಟ್ಟರ ಉಪಪಾಂಡವ. ಅಶ್ವತ್ಥಾಮನ ಮಾತು, ಅಭಿನಯ ಎಲ್ಲಾ ಮೆಚ್ಚಿಗೆಯಾದವು. ಉಪಪಾಂಡವರನ್ನು ಕೊಲ್ಲಬೇಕು. ಆವೇಶದಲ್ಲಿ ಬಟ್ಟೆಭಟ್ಟರ ಕುತ್ತಿಗೆಗೆ ಸ್ವಲ್ಪ ಹಿಂಸೆ ಆಯಿತು. “ನಿನ್ನದು ಕೊಲ್ಲುವ ಕೆಲಸ. ಕಿರೀಟ  ತೆಗೆದುಕೊಂಡು ಹೋಗಬೇಕು. ಅದು ಬಿಟ್ಟು ಕುತ್ತಿಗೆಗೇಕೆ ಕೈ ಹಾಕಿದ್ದು? ನಾನು ನಿನ್ನಿಂದ ಸಾಯುವವನಲ್ಲ” ಎಂದು ರಂಗಸ್ಥಳ ಬಿಟ್ಟು ಒಳ ನಡೆದರು ಶಂಕರಭಟ್ಟರು. “ನಿನ್ನನ್ನು ಬಿಡುವೆನೇ?” ಎಂದು ಅಶ್ವತ್ಥಾಮ ಕೂಡಾ ಓಡಿದ. ಹೀಗೆ ಮೂರು ನಾಲ್ಕು ಸುತ್ತು ಆಯಿತು! ಅಶ್ವತ್ಥಾಮನಿಗೆ ಕೈ ಸಾಗದಾಯಿತು. ಆಗ ಒಳಗಿದ್ದವರು ಭಟ್ಟರಿಗೆ ಸಮಾಧಾನ ಮಾಡಿ ಕಿರೀಟ ತಂದು ಅಶ್ವತ್ಥಾಮನಿಗೆ ಕೊಟ್ಟರು. ರಕ್ತಮಯ ಕಿರೀಟದೊಂದಿಗೆ ಆಗ್ರಹಕ್ಕೆ ಮಂಗಳ ಹಾಡಿದರು.

ರಕ್ತಾಕ್ಷಿ: ಕುವೆಂಪುರವರ ಪ್ರಸಿದ್ಧ ನಾಟಕ. ನಾಟಕದ ಪ್ರತಿ ಕರ್ನಾಟಕ ಸಂಘದಲ್ಲಿತ್ತು. ನನ್ನಣ್ಣ ಗಜಾನನ (ಗಜಣ್ಣ) ರಕ್ತಾಕ್ಷಿ. ನನ್ನದೂ ಒಂದು ಚಿಕ್ಕ ಪಾತ್ರ ಇತ್ತು. ನಮ್ಮ ಪಕ್ಕದ ಮನೆಯ ಅನಂತಜ್ಜ ಸೇವಕನ ಪಾತ್ರ ವಹಿಸಿದ್ದ. ಪಾತ್ರವಹಿಸಿದ ನಾನು ’ಸಿಪಾಯಿ’ ಎಂದು ಕರೆದಾಗ ಇವನು “ಮಾಚಾ, ಕರೆದೆಯಾ?” ಎನ್ನುತ್ತ ಬಂದ. ಎಲ್ಲರೂ ನಕ್ಕರು. “ಇದನ್ನು ರಕ್ತಾಕ್ಷಿಗೆ ಕೊಟ್ಟು ಬಾ” ಎಂದೊಡನೆ “ಗಜಣ್ಣನಿಗೋ?” ಎಂದು ಕೈಯಲ್ಲಿದ್ದ ಆಯುಧವನ್ನು ಕಸಿದುಕೊಂಡು ಹೋದ. “ಇದನ್ನು ಮಾಚ ನಿನಗೆ ಕೊಡಲು ಹೇಳಿದ್ದಾನೆ. ನೀನೇ ರಕ್ತಾಕ್ಷಿ ಅಲ್ಲವೆ?” ಎಂದು ಆಯುಧ ಕೊಟ್ಟು ಒಳಗೆ ಹೋಗಿ ಸಿಕ್ಕಾಪಟ್ಟೆ ಕೂಗಿದನಂತೆ. “ನನಗೆ ರಾಜಕುಮಾರನ ಪಾರ್ಟು ಹೇಳಿ ಸೇವಕನ ಪಾರ್ಟು ಕೊಟ್ಟರು. ಅದಕ್ಕೇ ಹೀಗೆ ಮಾಡಿದೆ” ಎಂದೂ ಕುಂಟುನೆವ ಹೇಳಿದನಂತೆ. ಅದೇನೇ ಇರಲಿ, ರಕ್ತಾಕ್ಷಿಯ ಅತ್ಯುತ್ತಮ ಅಭಿನಯದಿಂದ ನಾಟಕ ರಂಗೇರಿತ್ತು.

“ತ್ಯಾಗೇನೈಕೇ ಅಮೃತತ್ವ ಮಾನುಷು:” ಶ್ರೀ ಗೌರೀಶ ಮಾಸ್ತರರ ಗೀತ ನಾಟಕ. ಏಕ್ಟರ್ ಜೋಷಿ (ಸೀನಿಯರ್)- ಕರ್ಣ. ಗಂಗಾತೀರದಲ್ಲಿ ವಿಚಾರಮಗ್ನನಾಗಿ ನಿಂತ ಕರ್ಣನ ಭಂಗಿ ಇನ್ನೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ. ಸುಮಾರು ಮೂರು ನಿಮಿಷ ಒಂದೇ ಠೀವಿಯಲ್ಲಿ ನಿಂತಿದ್ದ! ಪ್ರೇಕ್ಷಕರೆಲ್ಲ ಹುಚ್ಚೆದ್ದು ಚಪ್ಪಾಳೆ ತಟ್ಟಿಯೇ ತಟ್ಟಿದರು. ಕರ್ಣನ ಅಭಿನಯಪೂರ್ವಕವಾದ ಪ್ರತಿಯೊಂದು ಮಾತೂ ಹೃದಯಸ್ಪರ್ಶಿಯಾಗಿತ್ತು. “ಕರ್ಣ ರಸಾಯನಮಲ್ತೆ ಭಾರತಂ’ ನೆನಪಿಗೆ ಬಂತು.

ರಾಮ ವನವಾಸಕ್ಕೆ ಹೋದಾಗ ದಶರಥ ಮಾಡಿದ ಪ್ರಲಾಪದ ಸಂದರ್ಭ ಹೇಳಬೇಕು. ದಶರಥನ ಪಾತ್ರ ಡಾ.ಕೆ.ಜಿ.ಶಾಸ್ತ್ರಿಯವರದು. ತಲೆಗೂದಲು ಬೆಳ್ಳಗಿರಬೇಕಲ್ಲವೆ? ವೇದೇಶ್ವರನಿಗೆ ಹೇಳಿ ತಲೆ ತುಂಬಾ ಪೌಡರ್ ಹೊಯ್ಯಿಸಿಕೊಂಡಿದ್ದರು. ಕಡೆಗೂ ಒಂದು ಸಂಶಯ ಅವರಿಗೆ. ತಾನೇ ದಶರಥ ಎಂದು ಕೈ ಸನ್ನೆ, ಕಣ್ಣುಸನ್ನೆಯಿಂದ ತನ್ನನ್ನು ಪರಿಚಯಿಸಿಕೊಂಡರು – ಮುಂದಿದ್ದ ಗಣ್ಯರಿಗೆ. ನಂತರ ರಾಮ, ಕೈಕೇಯಿಯರೊಡನೆ ಸಂಭಾಷಣೆ. ಶ್ರೀರಾಮ ವನವಾಸಕ್ಕೆ ಹೊರಟೇಬಿಟ್ಟ ’ಹಾ ರಾಮಾ ಹಾ ರಾಮಾ’ ಎಂದು ತಲೆ ಜಪ್ಪಿಕೊಳ್ಳುತ್ತಿದ್ದರು. ಆಗೆಲ್ಲ ಪೌಡರು ಬುಸ್ಸೆಂದು ಹಾರುತ್ತಿತ್ತು. “ಶಾಸ್ತ್ರಿಗಳೇ,  ಇನ್ನೂ ಜಪ್ಪಿದರೆ ಕರಿಕೂದಲು” ಎಂದು ವೇದೇಶ್ವರ ಎಚ್ಚರಿಸಿದ. ಶಾಸ್ತ್ರಿಗಳ ಪ್ರಲಾಪ ಮಾತ್ರ ಎಲ್ಲರ ಕಣ್ಣಲ್ಲಿ ನೀರು ತಂದಿತು. “ಸುವಾಸನಾಭರಿತ ಅಶ್ರು” ಎಂದು ಅಲ್ಲೇ ಇದ್ದ ವಿಶ್ವೇಶ್ವರ ಭಟ್ಟರು ಉದ್ಗಾರ ತೆಗೆದರು.

ಯಕ್ಷಗಾನ: ಶಿವರಾಮ ನಾವಡರು ಯಕ್ಷಗಾನ ಮೇಳ ಸ್ಥಾಪಿಸಿದರು. ಅವರ ಯಕ್ಷಗಾನದ ಅಭಿಮಾನ ದೊಡ್ಡದು. ಲಾಭವೋ, ಹಾನಿಯೋ – ತಿಳಿಯದು. ಮೇಳ ಕಟ್ಟಿಕೊಂಡು ಅಂಕೋಲೆಯಲ್ಲಿ ಐದಾರು ಆಟ ಆಡಿರಬೇಕು. ನಮ್ಮ ನಾವಡರ ಮೇಳದಲ್ಲಿ ಸ್ತ್ರೀ ವೇಷಧಾರಿಗಳಾಗಿ ಶ್ರೀ ಶಿವ ಹೆಗಡೆ, ಬಹು ಪ್ರಸಿದ್ಧ ಪುರುಷ ವೇಷಧಾರಿಗಳು ಶ್ರೀ ಗುರುಲಿಂಗ ಮಾರ್ಕಾಂಡೆ ಭಟ್ಟರು, ಹಾವಗೋಡಿ ಗಣೇಶ ಭಟ್ಟರು, ಯುವವೇಷಧಾರಿಗಳಾಗಿ ಅನಂತ ಬಾಳೆ ಹಿತ್ತಲ, ಗಣಪತಿ ನಾವಡ, ಶಿವರಾಮ ನಾವಡರು (ನಳ ಬಹಳ ಪ್ರಸಿದ್ಧ), ಮೇಳದ ಯಜಮಾನರು. ಅತಿಥಿ ಕಲಾವಿದರಾಗಿ ಬಾಡದ ವಲಲ ಭೀಮ ನಾರಾಯಣ ಹೆಗಡೆ, ಕಾಗಾಲ ಈಶ್ವರ ಭಟ್ಟರು, ಹೊನ್ನಕೋಟೆ ಪರಮಭಟ್ಟರು, ನೀರಳ್ಳಿ ಭಟ್ಟರು, ವೈತರಣಿ ಹೆಗಡೆಯವರು. ಬಣ್ಣದ ವೇಷಕ್ಕೆ ಊರಿನ ರಾಮದಾಸ ಪಂಡಿತರು, ಶಿವೋಡಿಯವರು, ಮೂಲೆ ಮಹದೇವಿ ಅಡಿಗಳು (ಹಾಸ್ಯ), ಊರ ಕಲಾಭಿಮಾನಿ ಧಾರೇಶ್ವರ ಅಡಿಗಳು, ಕಾಶಿವಾಸುದೇವ ಕೊಡ್ಲೆಕೆರೆ ಇವರ ಪ್ರೋತ್ಸಾಹ. ಧಾರೇಶ್ವರ ಅಡಿಗಳು ಕೊಟ್ಟ ಹತ್ತು ವರ ದಕ್ಕಿತೋ ದಕ್ಕಿತು ಎನ್ನುವಾಗ ಮಂಗಲ. “ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೋ, ಸುಖವ ಪಡೆಯಿರೋ, ಕಾಮಧೇನು ಬಂದಂತಾಯ್ತು, ವರವ ಕೇಳಿರೋ” ಎನ್ನುವುದು ಮಂಗಳ ಪದ್ಯ.

ನಾವಡರ ಮೇಳದ ವಿನಾ ಇನ್ನೊಂದು ಮೇಳ ಇತ್ತು. “ಭದ್ರಕಾಳಿ ಕೃಪಾಪೋಷಿತ” ಎಂದು ನೆನಪು. ಇದರಲ್ಲಿ ಪ್ರಸಿದ್ಧರು ಶ್ರೀ ಹೊನ್ನಿಕೃಷ್ಣ (ಹಾಸ್ಯ), ಶ್ರೀ ಗಣಯನ್ ಗಂಪಿ, ವಾಲಗದ ಶ್ರೀ ಶಿವು ಭಂಡಾರಿ, ಶ್ರೀ ಪೊಮ್ಮ ಪಡಿಯಾರ, ವೇ.ಗಂಪಿ ಉಪಾಧ್ಯರು (ಅತಿಥಿ ಕಲಾವಿದರು), ಬೀರು, ಮಂಕಾಳಿ ಮನೆ ಪರಮೇಶ್ವರ (ಸ್ತ್ರೀ ವೇಷಧಾರಿ), ಗಣಯನ್ ನೀಲಕಂಠ ಇವರೆಲ್ಲಾ ತುಂಬಾ ಪ್ರಸಿದ್ಧರು. ಗಿರಿಯನ್ ನೀಲಕಂಠ (ಸ್ತ್ರೀ ವೇಷ). ಈ ಮೇಳದ ವಿಶೇಷ ಎಂದರೆ ನವರಾತ್ರಿಯಲ್ಲಿ ಒಂಬತ್ತು ದಿವಸ ಮತ್ತು ವಿಜಯದಶಮಿ – ಈ ಹತ್ತೂ ದಿನ ಅಮ್ಮನವರ ದೇವಸ್ಥಾನದಲ್ಲಿ ಯಕ್ಷಗಾನ ಪ್ರಸಂಗ ಏರ್ಪಡಿಸುತ್ತಿದ್ದುದು. ನಾವಡರ ಮೇಳಕ್ಕೆ ಹಿಮ್ಮೇಳದಲ್ಲಿ ಶ್ರೀವಾಸುನಾವಡರು, ಶಂಕರ ಪಂಡಿತರು. ಭದ್ರಕಾಳಿ ಮೇಳಕ್ಕೆ ಬಸ್ತಿ ಸೀತಾರಾಮ. ಮೃದಂಗ ಎರಡೂ ಮೇಳಕ್ಕೆ ಗಿರಿಯನ್ ಗಂಪಿ, ಬಸ್ತಿ ಸುಬ್ರಾಯ.ಶ್ರೀ ಪಾಂಡುರಂಗ ಮಾಸ್ತರರು, ಬಂಡಿಕೇರಿ, ನಾರಾಯಣ ಭಂಡಾರಿ ಒಳ್ಳೆ ಅರ್ಥಧಾರಿಗಳು ಮತ್ತು ವೇಷಧಾರಿಗಳೂ ಹೌದು. ಮಾಸ್ತರರು ದಕ್ಷ, ಪ್ರಾಮಾಣಿಕ ಹೆಡ್ ಮಾಸ್ಟರ್ ಆಗಿಯೂ ಹೆಸರು ಪಡೆದವರು.

ಶಿವೋಡಿಗೆ ಒಮ್ಮೆ ನರಸಿಂಹನ ಪಾತ್ರವನ್ನು ಮಾಡಬೇಕೆಂಬ ಬಯಕೆ. ಆದರೆ ಹಿರಣ್ಯಕಶಿಪು ಬಾಡದ ನಾರಾಯಣ ಹೆಗಡೆಯವರೇ ಆಗಬೇಕು. ನಾರಾಯಣ ಹೆಗಡೆ ಒಪ್ಪಿದರು. ಕೊನೆಯ ದೃಶ್ಯ ಭಕ್ತ ಪ್ರಹ್ಲಾದ. ಕಂಬ ಒಡೆದು ನರಸಿಂಹ ಹೊರಗೆ ಬರುವುದೇ ಇಲ್ಲ. ಭಾಗವತರ ಪದ ಮುಗಿಯಿತು. ಒಳಗಿನಿಂದ ಶಿವೋಡಿಯನ್ನು ಹೊರದಬ್ಬಿದರು. ನರಸಿಂಹ ನಡುಗುತ್ತಾ ಹೊರಗೆ ಬಂದವನೇ ಹಿರಣ್ಯ ಕಶಿಪುವನ್ನು ಹುಡುಕಿದ ಶೈಲಿಗೆ ಜನರು ಚಪ್ಪಾಳೆ ತಟ್ಟಿದರು. ಹಿರಣ್ಯ ಕಶಿಪುವೇ ನರಸಿಂಹನ ತೊಡೆಯ ಮೇಲೆ ಹೋಗಿ ಮಲಗಿದ! ಈಗ ನರಸಿಂಹನಿಗೆ ಧೈರ್ಯ ಬಂತು. “ಏ ಕಶಿಪು, ನಿನ್ನ ಉದರವನ್ನು ಬಗೆದು, ರಕ್ತ ಕುಡಿದು ಮಾಂಸವನ್ನು ತಿನ್ನುತ್ತೇನೆ. ನನ್ನನ್ನು ಗದರಿಸುವೆಯಾ?” ಎಂದ. ಹಿರಣ್ಯ ಕಶಿಪುವಿನ ಹೊಟ್ಟೆಬಟ್ಟೆ ಬಿಚ್ಚಿದ: ಸಿಹಿಯಾಳದ ಚೂರು, ಕೆಂಪಗೆ ಉಪ್ಪಿನಕಾಯಿ ಬಡಿದಿದ್ದು, ತಿಂದೇ ತಿಂದ. ಜನರೆಲ್ಲಾ ಚಪ್ಪಾಳೆ ತಟ್ಟಿದರು. ಆಟಕ್ಕೆ ಮಂಗಲ.

ಮಾರನೇ ಬೆಳಿಗ್ಗೆ ನಾರಾಯಣ ಹೆಗಡೆ ಬಾಡಕ್ಕೆ ಹೋದ. ಶಿವೋಡಿ ಕೇಳಿದ “ಅಂವ ಹೋದ್ನಾ?”. “ಆಗಲೇ ಅಗಸೆ ತಲುಪಿಯಾಯಿತು ಬಿಡು” ಯಾರೋ ಹೇಳಿದರು. “ಹೋದ್ನಾ. ಹೋಗ್ಲಿ, ಹೋಗ್ಲಿ. ಅವಂಗೆ ಯಾರು ಹೆದರ್ತೋ? ಅಲ್ಲ ಹಿರಣ್ಯಕಶಿಪು ಪ್ರಹ್ಲಾದನಿಗೆ ಜೋರು ಮಾಡೊ, ಮಾಡ್ಲಿ. ನನಗೆ, ನರಸಿಂಹಂಗೆ ಯಾಕೆ ಹೆದರಿಸ್ತಾ? ’ಎಲ್ಲಿ ನರಸಿಂಹ?’ ಹೇಳ್ತಾ! ಅವನನ್ನು ಸೀಳುತ್ತೇನೆ ಹೇಳಿ ಮೀಸೆ ತಿರುವಿ, ಕಿರೀಟ ವಾರೆ ಮಾಡ್ಕಂಡು ಕಂಬ ಯಾಕೆ ನೋಡ್ತಾ? ಎಲ್ಲಿದ್ದು? ಯಾವ ಪ್ರಸಂಗದ ಪಟ್ಟೀಲಿದ್ದು? ನಾನು ಕೇಳ್ತೆ. ಅಪ್ಪಣ್ಣಿ ನಾವಡರನ್ನ. ಕಡೆಗೆ ಬಾಡಕ್ಕೆ ಹೋಗಿ ಅವನಿಗೆ ಜೋರು ಮಾಡ್ತೆ” ಇದು ನರಸಿಂಹನ ಅಬ್ಬರ!

ಹಿಂದಿ ಯಕ್ಷಗಾನ: ಇದೊಂದು ಹೊಸ ಪ್ರಯೋಗ. ಜಿ.ಎನ್.ಪಂಡಿತ, ಎನ್.ಡಿ.ಭಡ್ತಿ, ಜಿ.ಜಿ. ಶಾಸ್ತ್ರಿ, ನನ್ನ ಅಣ್ಣ ಗಜಾನನ ಕೊಡ್ಲೆಕೆರೆ ಎಲ್ಲರೂ ಸೇರಿ ಎರಡು ಘಂಟೆಯ “ಕಾಳ ಜಂಗವಧೆ” ಮಾಡಿದರು. ಶ್ರೀ ಪಂಡಿತರದು ವಿದ್ಯುನ್ಮತಿ, ಜಿ.ಜಿ.ಶಾಸ್ತ್ರಿ ಕಾಳಜಂಗ. ಎಸ್.ಆರ್.ಕೂರ್ಸೆ ಚಿತ್ರರಥ. ನಮ್ಮಣ್ಣನದು ಸೇವಕ. ಅವನಿಗೆ ಹಿಂದಿ ಅಷ್ಟೊಂದು ಬಾರದು. ಆದರೂ ಉಮೇದಿಯಿಂದ ಮಾಡಿದ. “ಮಾತಿನ ಮಧ್ಯೆ ಕನ್ನಡ ಬಂದರೆ ಏನು ಮಾಡ್ತೀ?” ಎಂದು ಕೇಳಿದಾಗ “ನಾನು ಸೇವಕನಾಗಿ ಕನ್ನಡರಾಜರಲ್ಲೂ ಇದ್ದೆ, ಆದ್ದರಿಂದ ಕನ್ನಡವೂ ಬರುತ್ತದೆ ಎಂದು ಹೇಳುತ್ತೇನೆ” ಎಂದ. ದೂರದಲ್ಲಿ ಬರುವ ಹಯ ಕಂಡೆನು ಇದಕ್ಕೆ ಹಿಂದಿಯಲ್ಲಿ “ದೂರ ಸೇ ದೇಖಾ ಏಕ್ ಘೋಡಾ…..” ನಾಲ್ಕೈದು ಸಲ ಬೇರೆ ಬೇರೆ ಭಂಗಿಯಲ್ಲಿ ಹಾಡಿದ. ಕಾಳಜಂಗನ ಪಾತ್ರದಲ್ಲಿ ಕೂಗಿ ಕೂಗಿ ಜಿ.ಜಿ. ಶಾಸ್ತ್ರಿ ಧ್ವನಿ ಬಿದ್ದಿತ್ತು. ಭಾಗವತರು ನುರಿತ ಶಂಕರ ಪಂಡಿತರು. ಹಿಂದಿ ಪದ್ಯಗಳನ್ನು ಅಭ್ಯಾಸ ಮಾಡಿಕೊಂಡು ಸುಶ್ರಾವ್ಯವಾಗಿ ಹಾಡಿದರು. ಶಿವೋಡಿಗೆ ಕುದುರೆ ಪಾರ್ಟ್ ಮಾಡು ಎಂದರೆ ಹೆದರಿದ. “ತನಗೆ ಕನ್ನಡದಲ್ಲಿ ಕುದುರೆ ಕೂಗಿದಂತೆ ಕೂಗಲು ಬರುತ್ತದೆ. ಹಿಂದಿಯಲ್ಲಿ ಬಾರದು” ಎಂದ! “ಇಲ್ಲ, ನಾವು ಅದನ್ನು ಹೇಳಿಕೊಡುತ್ತೇವೆ” ಎಂದು ಒಪ್ಪಿಸಿದರು.”ಹಾಗಾದರೆ ಇಂಗ್ಲಿಷ್‌ನಲ್ಲೂ ಮಾಡಿ” ಎಂದ.

ನಮ್ಮೂರ ಮಡಿ.

ಸಾತಕ್ಕನ ಮಡಿ:  ಮಡಿ ಶಬ್ದಕ್ಕೆ ಎರಡರ್ಥ. ನಮ್ಮಲ್ಲಿ ಎರಡೂ ಅರ್ಥ ಉಂಟು. ಬೇರೆ ಬೇರೆ ಅಲ್ಲ, ಒಂದೇ. ಆದರೆ ಸಾತಕ್ಕ ಮಡಿ ಮಾಡಿ ಮಾಡಿ ಮಡಿದಳು. ಎಂಥ ಮಡಿ?ಕೊಟ್ಟಿಗೆಯಲ್ಲಿ ದನ ಬಾಲ ನೆಗತ್ತು ಎಂದರೆ ಓಡಿದಳು. ದನಕ್ಕೆ ಸಗಣಿ ಬರುವಲ್ಲಿ ನೀರು ಹಾಕಿ ಶುದ್ಧ ಮಾಡಿದಳು. ನಂತರ ಗೋಮಯ ಮನೆ ಸಾರಿಸಲು ಉಪಯೋಗಿಸುವಳು. ಗೋಮೂತ್ರ ಶುದ್ಧಿಕ್ರಿಯೆಗೆ ಬಳಸುತ್ತಾರೆ. ಇವಳು ಗೋಮೂತ್ರ ಸಂಗ್ರಹಿಸುವ ಮೊದಲೇ ನೀರನ್ನು ಚೋಕಿ ನಂತರ ಗೋಮೂತ್ರ ಸಂಗ್ರಹಿಸುವಳು! ಒಂದು ಬಾಳಂತಿ ದನ ಇವಳ ನೀರಿನ ಹೊಡೆತಕ್ಕೆ ಮಲದ್ವಾರದಲ್ಲಿ ಹುಳ ಆಗಿ ಸತ್ತು ಹೋಯಿತು! ನಮ್ಮ ಮನೆಯಲ್ಲಿ ಉಪ್ಪು ತಂದರೆ ಅದರ ಮೇಲೆ ಕೆಂಡ ಇಟ್ಟು ಶುದ್ಧೀಕರಿಸಿ ಬಳಸುವೆವು. ಪಾತಕ್ಕ ಉಪ್ಪನ್ನ ಬೆತ್ತದ ಚೊಬ್ಬೆಯಲ್ಲಿ ಹಾಕಿ ಕೋಟಿತೀರ್ಥದ ನೀರಲ್ಲಿ ಅದ್ದುವಳು. ತಕ್ಷಣ ತೆಗೆದು, ಮನೆಗೆ ಬಂದು, ನೆಲಕ್ಕೆ ಹರಡಿ ಒಣಗಿಸಿ ತುಂಬಿಡುವಳು.

ಗೋದಕ್ಕನ ಮಡಿ: ಮಕ್ಕಳು ಶಾಲೆಯಿಂದ ಬಂದ ಕೂಡಲೇ ಅಂಗಿಚಡ್ಡಿ ಬೇರೆ ಇಟ್ಟು ಉಪಯೋಗಿಸಬೇಕು. ಗಂಡಸರು ಪೇಟೆಗೆ ಹೋಗಿ ಬಂದರೆ ಬಟ್ಟೆ ಗಿಳಿಗುಟ್ಟಕ್ಕೆ ಇಟ್ಟು ಬೇರೆ ಬಟ್ಟೆ ಉಪಯೋಗಿಸಬೇಕು. ಆಟಕ್ಕೆ (ಯಕ್ಷಗಾನಕ್ಕೆ) ಹೋಗಿಬಂದರೆ ಆ ರಾತ್ರಿ ಇದೇ ಗೋಳು.

ಎಂಕಕ್ಕನ ಮಡಿ: ಕಡು ಮಡಿ, ಇವಳಿಗೆ ಸ್ನಾನವಾದ ಮೇಲೆ ಚಿಕ್ಕ ಮಕ್ಕಳು ಹೇಸಿಗೆ ಮಾಡಿದರೆ ಮನೆ ಒಳಗೇ ಬಟ್ಟೆ ಹಾಕಿಕೊಳ್ಳದೇ ಮಾಡಬೇಕು. ಆಗ ಮಡಿಯಲ್ಲಿ ಯಂಕಕ್ಕ ಮಗುವಿನ ಕುಂಡೆ ತೊಳೆಸಿ ಮಲ ತೆಗೆಯುವಳು. ಒಮ್ಮೆ ಎರಡು ವರ್ಷದ ಗುಂಡನಿಗೆ ಯಂಕಕ್ಕನ ಸ್ನಾನವಾದ ಮೇಲೆ ಹೇಸಿಗೆ ಬಂತು. ಬಾಗಿಲ ಮೇಲೆ ಕುಳಿತು ಆರಾಮಾಗಿ ಹೇತ. ಯಂಕಕ್ಕ ಕುಂಡೆ ತೊಳೆಸಿದಳು. ಮಲ ನಂತರ ತೆಗೆದರಾಯಿತೆಂದು ಅಡುಗೆ ಮುಂದುವರಿಸಿದಳು. ಅಷ್ಟರಲ್ಲೇ ಒಬ್ಬ ಕೆಲಸದವ ಬಂದ ಅಡಿಗೆ ಮನೆ ಬಾಗಿಲು ಸರಿ ಮಾಡಲು. ಒಂದು ಕಾಲು ಮಲದ ಮೇಲೆ ಇಟ್ಟ. ಜಾರಲಿಲ್ಲ ಸದ್ಯ. ಮತ್ತೆ ಬೈದ: “ಎಂಕಬ್ಬೆ, ಮಡಿ ಮಡಿ ಅಂತ್ರಿ, ಮಗ ಇಲ್ಲೇ ಹೇತಾನೆ, ಥೋ” ಎಂದ. “ರಾಮ ರಾಮಾ, ಕಾಲಿಗೆ ಅದು ಬಡಿದರೆ ನೀರು ಕೊಡ್ತೆ ತೊಳಕೊ. ಆದರೆ ಈಗ ಮಲ ಮೈಲಿಗೆ ಆಯಿತು. ನಾನು ಮಡಿ. ನೀನೇ ಅದನ್ನೀಗ ತೆಗೆಯಬೇಕು. ತಗೋ ಹಾಳೆಕಡಿ, ಸಗಣಿ.” ಗ್ರಹಚಾರ! ಯಾರ ಮುಖ ನೋಡಿದ್ದನೋ, ಏನೋ! ಉಳಿಸುತ್ತಿಗೆ ಹಿಡಿದ ಕೈಯಲ್ಲಿ ಹಾಳೇಕಡಿ, ಸಗಣಿ! “ಕೊಡಿ ಹಾಳೇ ಕಡಿ, ಯಾರಿಗೂ ಹೇಳಿಕ್ಕಡಿ” ಎಂದು ಮಲ ಸ್ವಚ್ಛವಾಗಿ ತೆಗೆದು ತನ್ನ ಕೆಲಸ ಪೂರ್ತಿ ಮಾಡಿ ಕೈ ಮುಗಿದು ಹೊರಬಂದ; “ಶರಣೋ, ಶರಣು, ಮಡಿಯಬ್ಬೆಗೆ ಯಂಕಬ್ಬೆಗೆ ಶರಣು” ಎಂದ.

ದಾಕ್ಷಕ್ಕನ ಮಡಿ: ತುಂಬಾ ದೈವಭಕ್ತಿ. ಒಂದು ದಿನ ಬಿಡದೇ ಮೂರೂ ದೇವಸ್ಥಾನಕ್ಕೆ ಪೂಜೆಗೆ ಹೋಗುತ್ತಿದ್ದಳು. ದೇವಸ್ಥಾನದಲ್ಲಿ ಎಲ್ಲರೂ ಅಭಿಷೇಕ ಮಾಡಬಹುದು. ಕೆಲವು ದಿವಸ ಇವಳು ಆತ್ಮಲಿಂಗದಿಂದ ತೀರ್ಥ ತೆಗೆದ ಹೊತ್ತಿಗೆ ಬೇರೆಯವರು ನೀರು ಹಾಕಿದರೆ ತೀರ್ಥ ಮೈಲಿಗೆ. ದೇವರಿಗೆ ಅಡ್ಡಿ ಇಲ್ಲ. ಇವಳಿಗೆ ಆಗ! ನಾನು ಪೂಜೆಗೆ ಹೋದ ಹೊತ್ತಾದರೆ ನನ್ನ ಕೈಲಿ ನೀರು ಹಾಕಿಸಿ ತಕ್ಷಣ ತೀರ್ಥ ತೆಗೆಯುತ್ತಿದ್ದಳು. ಒಂದು ದಿನ ಯಾರೂ ಸಿಗಲಿಲ್ಲ. ಆತ್ಮಲಿಂಗದಲ್ಲಿ ಮೈಲಿಗೆ ನೀರು. ಇವಳೇ ಆತ್ಮಲಿಂಗದಲ್ಲಿಯ ನೀರನ್ನು ಮೇಲೆ ಹಾಕಿ ತಕ್ಷಣ ತಾನು ತಂದ ನೀರನ್ನು ಹಾಕುತ್ತಿದ್ದಳು. ತೀರ್ಥ, ಬಿಲ್ವಪತ್ರೆ ತೆಗೆದುಕೊಳ್ಳುತ್ತಿದ್ದಳಂತೆ.

ರಾಮತೀರ್ಥದಲ್ಲಿ ಲಂಕಾದಹನ: ಊರಿನವರಿಗೆ ನಾರಾಯಣಾಚಾರಿಯ ಹನುಮಂತನನ್ನು ನೋಡುವ ಆಸೆ. ಭಟ್ಕಳದಿಂದ ಇಬ್ಬರಿಗೆ ಬಂದು ಹೋಗುವ ಹಾದಿ ಖರ್ಚು, ಅವನ ಸಂಭಾವನೆ ಎಲ್ಲಾ ಸೇರಿ ನೂರೈವತ್ತು ರೂ. ಬೇಕು. ಇಟ್ಟಿಮಾಣಿ ಒಂದು ವಾರದಲ್ಲಿ ಒಟ್ಟು ಹಾಕಿದ. ಅವನೇ ಭಟ್ಕಳಕ್ಕೆ ಹೋಗಿ ನಾರಾಯಣಾಚಾರಿಗೆ ಮುಂಗಡಕೊಟ್ಟು ಭಾನುವಾರ ಬರುವುದಾಗಿ ಮಾತು ತೆಗೆದುಕೊಂಡು ಬಂದ. ಅಂದು ಹುಣ್ಣಿಮೆ. ಜನಕ್ಕೆ ಬಂದು ಹೋಗಲು ಅನುಕೂಲ. ಶನಿವಾರವೇ ಆಚಾರಿ ಬಂದ, ರಂಗಸ್ಥಳ ಎಲ್ಲಿ? ಊರಿನಲ್ಲಿ ಮೂರು ನಾಲ್ಕು ಸ್ಥಳ ಕಾಣಿಸಿದರು. “ಛೇ, ಸಾಧ್ಯವೇ ಇಲ್ಲ, ನನ್ನ ಕಾಲು ಕೈಚಳಕ ತೋರಿಸಲು ಸುತ್ತಲೂ ಮರಮಟ್ಟು ಇರಬೇಕು” ಎಂದ. ಕಡೆಗೆ ರಾಮತೀರ್ಥಗುಡ್ಡೆಯಲ್ಲಿ ಒಂದು ಜಾಗ ಪ್ರಶಸ್ತ ಎಂದ. ಅಲ್ಲಲ್ಲಿ ಮಾವಿನ ಮರ, ಗೇರುಗಿಡ, ತೆಂಗಿನಮರ. ಮಧ್ಯದಲ್ಲಿ ರಂಗಸ್ಥಳ ಕಟ್ಟಿದರಾಯಿತು ಎಂದ. ಭಾನುವಾರ ಸಂಜೆಗೆ ನಾರಾಯಣ, ಅವನ ಮಗ ವಾಸುದೇವ ಇಬ್ಬರೂ ಪತ್ತೆ ಇಲ್ಲ. ಬಂಕಿಕೊಡ್ಲದಲ್ಲಿ ಅವನ ಸಂಬಂಧಿಕರ ಮನೆ ಉಂಟು, ರಾಮಾಚಾರಿ ಮನೆ ಎಂದರು. ಸರಿ, ಹುಡುಗರು ಅಲ್ಲಿಗೇ ಹೋದರು. ಅಲ್ಲಿಲ್ಲ. ಬಳಲೆಯಲ್ಲಿ ಅವನ ತಂಗಿ ಮನೆ, ಅಲ್ಲಿಗೆ ಹೋಗಿರ್ವ ಎಂದರು. ಎಲ್ಲೂ ಇಲ್ಲ. ಇಟ್ಟಿಮಾಣಿ “ಆಟ ಶುರು ಆಗಲಿ” ಎಂದ. “ನಿನ್ನ ತಲೆ. ಆಚಾರಿಯೇ ಇಲ್ಲ” ಎಂದರು. “ಅಂವ ಬತ್ತ, ಮೇಕಪ್ ಮಾಡ್ಕಂಡೇ ಬತ್ತ” ಎಂದರು. ಹುಡುಗರು ಕೆಲವರು ಬ್ರಹ್ಮೇಶ್ವರಕ್ಕೆ ಹೋದರು. ಅಲ್ಲಿ ಯಾರೂ ಇಲ್ಲ. “ವಿಶ್ವಾಮಿತ್ರೇಶ್ವರದಲ್ಲಿ ದೀಪ ಕಾಣ್ತು” ಎಂದರು. ಅಲ್ಲಿಗೇ ಓಡಿದರು. ದೀಪ ಉಂಟು. ” ಓಹೋ, ಇಲ್ಲೇ ಮೇಕಪ್ ಮಾಡ್ಕಂಡು ಹೋಜ” ಎಂದರು. ಇವರೆಲ್ಲಾ ಬರುವ ಹೊತ್ತಿಗೆ ಕಾಚಾ ತರ ಕೆಂಪು ಮಡಿ ಉಟ್ಟು ಮೈಗೆಲ್ಲಾ ಬಣ್ಣ ಬಳಿದುಕೊಂಡು ತಲೆಗೆ ಲಕಲಕ ಹೊಳೆದ ಚಿನ್ನದ ಕಿರೀಟ ತೊಟ್ಟು, ಹನುಮಂತ ಕುಣಿತಾನೆ, ಹಾರತಾನೆ!”ಇತ್ತ ಹನುಮಂತ ಲಂಕೆಯಲ್ಲಿ” ಎನ್ನುವ ಹೊತ್ತಿಗೆ ಭಾಗವತರ ಮಂಚದಿಂದ ಚಂಗನೆ ರಂಗಸ್ಥಳಕ್ಕೆ ಹಾರಿದ್ದ. ಎಲ್ಲರಿಗೂ ಆಶ್ಚರ್ಯ. ” ಆ ಸತ್ತ ಇಟ್ಟಿಕುಟ್ಟಂಗೆ ಎಲ್ಲಾ ಗೊತ್ತಿತ್ತು, ಹೇಳಲಿಲ್ಲ” ಎಂದರು. ಇಲ್ಲಿ ಚಪ್ಪಾಳೆಯೋ ಚಪ್ಪಾಳೆ. ಸಮೀಪದ ಗೇರು ಮರಕ್ಕೆ ಹೋಗಿ ಚಂಗನೆ ಮರದ ಮೇಲಣ ಟೊಂಗೆಗೆ ಹಾರಿದ. ಅಲ್ಲಿಂದ ಸೀದಾ ಮಾವಿನ ಮರಕ್ಕೆ ಹಾರಿದ. ತಂದ ಮಾವಿನ ಹಣ್ಣನ್ನು ಮಂಗನಂತೆ ತಿಂದು ಗೊರಟೆಯನ್ನು ಜನರ ಮೇಲೆ ಬಿಸಾಕಿದ. ಜನ ಹುಚ್ಚೆದ್ದು ಕುಣಿದರು. ಹುಣ್ಣಿಮೆಯಾದ್ದರಿಂದ ಮರದ ಮೇಲೆ ಮಾರುತಿ ಚೇಷ್ಟೆ ಎಲ್ಲರಿಗೂ ಚೆನ್ನಾಗಿ ಕಂಡಿತು. ಮಾವಿನ ಮರದಿಂದ ತೆಂಗಿನ ಮರಕ್ಕೆ ಹಾರಬೇಕು, ಹಾರಿದ. ಕೈಜಾರಿ ಕೆಳಕ್ಕೆ ಬಿದ್ದ. ಹೋಹೋ ಎಂದು ಜನ ಬೊಬ್ಬೆ ಹೊಡೆದರು. ’ಹನುಮಂತ ಫೈಸಲ್’ ಎಂದ ಒಬ್ಬ ಚೇಷ್ಟೆಗೆ. ಅಲ್ಲೇ ಸಮೀಪದಲ್ಲಿದ್ದ ವೀರಭದ್ರ “ಏನು ಹೇಳ್ತೆ? ಹನುಮಂತ ಚಿರಂಜೀವಿ” ಎಂದು ಅವನ ಎರಡೂ ಕಪಾಳಕ್ಕೆ ಬಾರಿಸಿದ. ಅಲ್ಲಿದ್ದ ರಾಕ್ಷಸ ವೇಷಧಾರಿಗಳು ಬಿದ್ದ ಹನುಮಂತನನ್ನು ಹಗ್ಗದಿಂದ ಕಟ್ಟಿ ರಾವಣನ ಹತ್ತಿರ ಒಯ್ಯಬೇಕು ಎನ್ನುವಷ್ಟರಲ್ಲಿ ಹನುಮಂತ ಹಗ್ಗವನ್ನು ಪಟಪಟನೆ ಹರಿದು (ಹರಿದ ಹಗ್ಗವೇ ಇರಬೇಕು!) ರಾಕ್ಷಸರಿಗೆಲ್ಲಾ ಎರಡೆರಡು ಗುದ್ದು ಹೇರಿ ಓಡಿಹೋದ. ಹನುಮಂತ ಪತ್ತೆಯೇ ಇಲ್ಲ. ಅವನಿಗೆ ತಂದ ಶಾಲು ಹೊದಿಸಬೇಕೆಂದರೆ ಅವನೇ ಇಲ್ಲ. ಅದನ್ನು ಇಟ್ಟಿಮಾಣಿ ಕೈಲಿಕೊಟ್ಟು ’ಭಟ್ಕಳಕ್ಕೆ ನೀನು ಹೋದಾಗ ಕೊಡು’ ಎಂದರು. ನಾರಾಯಣಾಚಾರಿ, ಮಗ ಇಬ್ಬರೂ ತಾವು ಗೊತ್ತು ಮಾಡಿಕೊಂಡ ಜಾಗಕ್ಕೆ ಹೋಗಿ ವೇಷ ಕಳಚಿ ಸಿಂಗಲ್ ಚಹಾ ಕುಡಿದು ೦೫೩೦ಕ್ಕೆ ಹೊರಡುವ ಭಟ್ಕಳ ಬಸ್ಸಿನಲ್ಲಿ ಹೊರಟಿದ್ದರು. ಆಟ ಸುಖಾಂತವಾಯಿತು.

******

ನನ್ನ  ಮದುವೆ ವಿಷಯ ಅರ್ಧಕ್ಕೆ ನಿಲ್ಲಿಸಿದ್ದೆ.ನೆನಪಿಸುವೆ:ಶ್ರಾವಣದಲ್ಲಿ ಹಂದೆಮಾವನೊಟ್ಟಿಗೆ ಹೋಗಿ ಹೆಣ್ಣು ನೋಡಿ ಒಪ್ಪಿಬಂದೆನಷ್ಟೆ? ನಾನು ಒಪ್ಪಿದ್ದೇನೆಂದು ತಂದೆಯವರಿಗೂ ತಿಳಿಸಿಯಾಗಿದೆ. ಮಾರ್ಗಶೀರ್ಷ ಶುದ್ಧ ಪಂಚಮಿಯಂದು ಮದುವೆ ಎಂದು ನಿರ್ಣಯಿಸಿದರು. ಮೂರೂರು, ಸಿರ್ಸಿ, ಹುಬ್ಬಳ್ಳಿ ಎಲ್ಲಾ ಕಡೆ ಮದುವೆ ಕರೆಯ ಹೋಯಿತು. ಕರ್ಮಾಂಗಗಳು ತದಿಗೆಯಿಂದಲೇ ಪ್ರಾರಂಭ. ಮಧ್ಯಾಹ್ನ ನೆಂಟರಿಗೆಲ್ಲಾ ಊಟ. ಮಧ್ಯಾಹ್ನ ೦೨೩೦ಕ್ಕೆ ದಿಬ್ಬಣವು ಓಲಗಸಮೇತ ತದಡಿಗೆ ಸ್ಪೆಶಲ್ ಬಸ್ಸಿನಲ್ಲಿ ಹೊರಟಿತು. ಸ್ಪೆಶಲ್ ದೋಣಿಯಲ್ಲಿ ಅಘನಾಶಿನಿಗೆ ಪ್ರಯಾಣ. ದೋಣಿಯಲ್ಲಿ ಹುಲಿಯ ಗರ್ನಾಲು ಹೊಡೆಯುತ್ತಿದ್ದ. ಬೆಂಕಿ ಹಚ್ಚಿ ಗರ್ನಾಲು ಎಸೆಯುತ್ತಿದ್ದ. ಬೀಡಿ ಬಾಯಿಗೆ ಇಡುತ್ತಿದ್ದ. ಹೊಸಮನೆ ದೊಡ್ಡಮಾಣಿ” ಏ ಹುಲಿಯಾ, ಗರ್ನಾಲು ಹಚ್ಚಿ ಬಾಯಿಗಿಟ್ಟುಕೊಂಡು ಬೀಡಿ ಹೊಳೆಗೆ ಎಸೆವೆ.” ಎಲ್ಲಾ ನಗು. ದೊಡ್ಡದೊಂದು ತೆರೆ ಬಂದು ದೋಣಿಗೆ ಅಪ್ಪಳಿಸಿದಾಗ ನಿಂತಿದ್ದ ಜಯರಾಮ ಭಾವ, ಶಂಕರಣ್ಣ ಕೆಳಗೆ (ದೋಣಿ ಒಳಗೆ) ಬಿದ್ದರು. ಕುಳಿತಿದ್ದವರೆಲ್ಲಾ ಎದ್ದು ನಿಲ್ಲಲು ಶುರು. ವೆಂಕಟರಾಮ ಅಂಬಿಗರು ಹುಟ್ಟಿನಲ್ಲಿ ತಲೆ ಬಡಿದು ಕುಳಿತವರೆಲ್ಲಾ ನಿಂತರೆ ದೋಣಿ ಮುಳುಗುತ್ತದೆ ಎಂದರು. ಗಂಗೆ ಜಯರಾಮ ಭಾವ ಆಯತಪ್ಪಿ ಬಿದ್ದನಾದರೂ, ’ತಾನು ಅದಕ್ಕೇ ಕೂತಿದ್ದು’ ಎಂದ. ಅಂತೂ ಈಚೆ ದಡ ಬಂತು. ಕಾಲು ಫರ್ಲಾಂಗ್ ನೀರಿನಲ್ಲಿ ನಡೆದು ಹೋಗಬೇಕು. ದೋಣಿಯಲ್ಲಿ ನಾನೊಬ್ಬನೇ. ನನ್ನನ್ನ ರಾಮ ಹೊತ್ತು (ಮದುಮಗನಷ್ಟೆ?) ನೀರು ತಾಗದಂತೆ ಈಚೆ ದಡಕ್ಕೆ ತಂದು ಇಳಿಸಿದ. ಅಲ್ಲಿಂದ ಎಲ್ಲರೂ ಓಲಗದ ಮೇಲೆ ಊರ ಗಣಪತಿ ದೇವಸ್ಥಾನಕ್ಕೆ ಬಂದೆವು.  ಉಳಿದವರೆಲ್ಲಾ ಗಣಪತಿಗೆ ನಮಸ್ಕರಿಸಿ ನೆಂಟರ ಮನೆಗೆ ಚಹಾ ತಿಂಡಿಗೆ ಹೋದರು. ಗಣಪತಿ ದೇವಸ್ಥಾನದಲ್ಲಿ ನಾನು, ಹೆಣ್ಣಿನ ಪೈಕಿ ಒಬ್ಬಿಬ್ಬರು ಉಳಿದೆವು.

ಸ್ವಲ್ಪ ಹೊತ್ತಿನಲ್ಲಿ ನನ್ನ ಸೋದರಮಾವ ಒಂದು ಹರಿವಾಣದಲ್ಲಿ ಒಂದು ಸಹಿ, ಎರಡು ಖಾರ, ಬಾಳೆಹಣ್ಣು ತಂದ ಅಳಿಯನಿಗೆ ಮತ್ತು ಮೂರೂರು ಭಾವನಿಗೆ. ಬಹುತೇಕ ರಾತ್ರಿ ೦೧:೨೦ರ ಮದುವೆ. ಆದುದರಿಂದ ಗಣಪತಿ ದೇವಸ್ಥಾನಕ್ಕೆ ಪುನಃ ಬಾಸಿಂಗ ಕಟ್ಟಿ ನಮಸ್ಕರಿಸಿ ದಿಬ್ಬಣ ಹೊರಟಿತು. ದಾರಿ ಉದ್ದಕ್ಕೂ ಗರ್ನಾಲು ಹೊಡೆದದ್ದು, ಓಲಗ ಬಾರಿಸಿದ್ದು, ಸಭಾಹಿತರ ಮನೆ ದಣಪೆ ಹತ್ತಿರ ನೆಂಟರು ನೆಂಟರನ್ನು ಎದುರುಗೊಳ್ಳಲು ಬಂದಿದ್ದಾರೆ. ಹೆಂಗಸರಂತೂ ಎರಡೂ ಕಡೆಯವರು ಪಟ್ಟೆ ಚಿನ್ನಾಭರಣಗಳಿಂದ ಶೃಂಗರಿಸಿಕೊಂಡಿದ್ದಾರೆ. ನೆಂಟರು ನಮಗೆ ಲಾಜ(ಹೊದ್ದಲು) ಎಸೆಯುತ್ತಿದ್ದಾರೆ. ಆ ಮನೆಯ ಮಗಳು ಮಂಕಾಳತ್ತೆ, ಅವಳ ಪತಿ ಗಪ್ಪಭಾವ ಎಲೆ ಅಡಿಕೆ ಕೊಟ್ಟು ಕೈ ಹಿಡಿದು ಒಳಗೆ ಕರೆದುಕೊಂಡು ಹೋದರು. ದೇವರ ಎದುರಿನ ಹೆಬ್ಬಾಗಿಲಿನಲ್ಲಿ ನನ್ನ ಅತ್ತೆ, ಮಾವ. ಜರಿಸೀರೆ, ಮುಗುಟಗಳೊಂದಿಗೆ ಪುರೋಹಿತರ ಸಮೇತ ಎದುರು ನಿಂತಿದ್ದರು. ಕಾಲಿಗೆ ನೀರು ಹಾಕಿ ಶಾಸ್ತ್ರೋಕ್ತವಾಗಿ ಸ್ವಾಗತಿಸಿದರು. ಒಳಗೆ ಹೋಗಿ ಮಂಟಪದಲ್ಲಿ ಕೂರಿಸಿದರು. ನನ್ನ ಸಣ್ಣತ್ತೆ ಆಗುವವಳು ಒಂದು ಬೆಳ್ಳಿ ಲೋಟದಲ್ಲಿ, ಹಾಲು ಸಕ್ಕರೆ ಕೊಟ್ಟಳು. ಅದರಲ್ಲಿ ಸ್ವಲ್ಪ ಕುಡಿದೆ. ಮಾವನ ಮನೆಯಲ್ಲಿ ದಾಕ್ಷಿಣ್ಯ ಮಾಡಿಕೊಳ್ಳಬೇಕು! ನಮ್ಮ ತಂದೆ, ತಾಯಿಯರು ಹೂವು, ಹಣ್ಣು, ಚಿನ್ನಗಳೊಂದಿಗೆ ಮದುವೆ ಹೆಣ್ಣು  ನಿಶ್ಚಯಕ್ಕೆ (ಆಗೆಲ್ಲಾ ನಿಶ್ಚಿತಾರ್ಥ,ಲಗ್ನಕ್ಕೆ ಸ್ವಲ್ಪ ಹೊತ್ತು ಮೊದಲು) ಹೆಣ್ಣಿನ ಮನೆಯೊಳಗೆ ದೇವರ ಒಳಕ್ಕೆ ಹೋಗಿರಬೇಕು.

ಲಗ್ನ ಮುಹೂರ್ತಕ್ಕೆ ಸರಿಯಾಗಿ ಮಂಟಪಕ್ಕೆ ಹೆಣ್ಣನ್ನು ಅವಳ ಸೋದರಮಾವ ಹೊತ್ತು ಕರೆತಂದ. ಈ ಹೊತ್ತಿಗೆ ಸರಿಯಾಗಿ ನನ್ನ ಸ್ನೇಹಿತ, ಸಹೋದ್ಯೋಗಿ ಶ್ರೀ ಜಿ.ಜಿ. ಹಳದಿಪುರ ತಮ್ಮ ಕಲಾಪ್ರತಿಭೆಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿದರು. ಒಂದು ಫೂಟ್ ಉದ್ದದ ಬಾಳೆದಿಂಡಿಗೆ ಅಚ್ಚುಕಟ್ಟಾಗಿ ಅತ್ತರದ ಹೂವಿನ ಕಡ್ಡಿಗಳನ್ನು ಚುಚ್ಚಿ ಹತ್ತಿಯ ಚೂರಿಗೆ ಅತ್ತರ ಬಡಿದು ಎಲ್ಲರಿಗೂ ಒಂದೊಂದು ಕೊಟ್ಟರು. ಎಂಥ ಪರಿಮಳ! ಎಲ್ಲರೂ ಭೇಷ್ ಎಂದರು. ಮದುವೆಗೆ ಡಾ.ಹಳಕಾರ ಬಂದಿದ್ದರು. ಇನ್ನೆರಡು ಹೂವುಗಳನ್ನು ಕೇಳಿ ತೆಗೆದುಕೊಂಡರು. ಮೊಳಗುತ್ತಿರುವ ಓಲಗ, ಸುವಾಸಿನಿಯರ ಮಂಗಲ ಹಾಡು, ಪುರೋಹಿತರ ಮಂತ್ರಘೋಷಗಳ ನಡುವೆ ಮಾಲೆಗಳ ವಿನಿಮಯವಾಯಿತು. ಸಭಾಪೂಜೆಯ ಮಂತ್ರಗಳು ಆಕರ್ಷಣೀಯವಾಗಿದ್ದವು. “ವಂದೇ ಸಭಾಮಂಟಪಂ”.

ರಾತ್ರಿಯೇ ಮದುವೆ ಊಟ. ಊಟವಾದವರೇ ರಾತ್ರಿಯೇ ಸ್ಪೆಶಲ್ ದೋಣಿ ಮಾಡಿಕೊಂಡು ಗೋಕರ್ಣದ ಕೆಲ ಗಂಡಸರು ಹೊರಟರು. ಕುಮಟಾ ಕಡೆಯವರೂ, ಹೊಲನಗದ್ದೆವರೆಗಿನವರೂ ಹೊರಟರು. ಮಾರನೇ ದಿನ ಊರಿನವರಿಗೆ ಊಟ. ಮನೋಹರ, ಬೋಂಡಾ ಭಕ್ಷ್ಯ. ಪಾಯಸ – ಮದುವೆ ಪಾಯಸ ಉಂಟೇ ಉಂಟು. ಅದಕ್ಕೂ ಮಾರನೇ ದಿನ ಬಹುತೇಕ ಸೋಮವಾರ ಬೆಳಗಿನ ೧೦.೩೫ಕ್ಕೆ ಗೃಹಪ್ರವೇಶ. ಅಘನಾಶಿನಿಯಿಂದ ದಿಬ್ಬಣ ಬೆಳಗಿನ ಆರಕ್ಕೇ ಹೊರಟಿತು. ಏಕೆಂದರೆ ಬಸ್ಸು ಏಳಕ್ಕೆ. ಸರಿ, ಗೋಕರ್ಣಕ್ಕೆ ನಾವು ವಧೂವರರು, ನೆಂಟರು ತಲುಪಿದೆವು. ಉಳಿದವರೆಲ್ಲ ನಮ್ಮ ಮನೆಗೇ ಹೋದರು. ನಾವಿಬ್ಬರು ಮಾತ್ರ ಪಕ್ಕದ ಅನಂತಜ್ಜನ ಮನೆಯಲ್ಲಿ ಉಳಿದೆವು.ಊರನ್ನು ಆಮಂತ್ರಿಸಲು ಓಲಗದ ಮೇಲೆ ಗಂಡಿನ ಕಡೆ ಏಳೆಂಟು ಜನ, ಹೆಣ್ಣಿನ ಕಡೆಯಿಂದ ಐದಾರು ಜನ ಹೊರಟರು. “ಕೊಡ್ಲೆಕೆರೆ ಅನಂತಭಟ್ಟರ ಮನೆಲಿ ನೂತನ ವಧೂವರರ ಗೃಹಪ್ರವೇಶ. ಎಲ್ಲರೂ ಬರೋ”. ಎಲ್ಲರಿಗೂ ಆಮಂತ್ರಣ ಕೊಟ್ಟರು. ಅದೊಂದು ರಿವಾಜು. ಸರಿ, ಗೃಹಪ್ರವೇಶ ಆಗುವಾಗ ಬಿತ್ತಕ್ಕಿ ಅಕ್ಕ, ಒಳಗೆ ಹೋಗಲು ಬಿಡುವುದಿಲ್ಲ. ಅಡ್ಡಕಟ್ಟುತ್ತಾಳೆ: “ಹೆಣ್ಣು-ಹೊನ್ನು, ಇವುಗಳಲ್ಲಿ ನೀವು ಏನನ್ನು ಕೊಡುವಿರಿ?” ಸೋದರ ಹೆಣ್ಣು ಮಾಡಿಸಿಕೊಳ್ಳಲು ಬಿತ್ತಕ್ಕಿ ಅಕ್ಕನಿಗೆ ಆತುರ. ನಾವು “ಹೆಣ್ಣು ಕೊಡುತ್ತೇವೆ” ಎಂದೆವು. ಸಾಮಾನ್ಯವಾಗಿ ಅದೇ ವಾಡಿಕೆ.

ನಂತರ ಒಂದು ಹೃದಯಸ್ಪರ್ಶಿ ಕಾರ್ಯಕ್ರಮ. ಅತ್ತೆ, ಮಾವ ನನ್ನ ತಂದೆ, ತಾಯಿಯರಿಗೆ ಮಾಡುವ ಕಳಕಳಿಯ ಪ್ರಾರ್ಥನೆ. ಹೆಣ್ಣನ್ನು ಕೈಯೆತ್ತಿ ಬೀಗರಿಗೆ ಒಪ್ಪಿಸುವುದು. ವಿ.ಸೀಯವರ “ನಮ್ಮ ಮನೆಯಂಗಳದಿ” ಹಾಡನ್ನು ಅಳುತ್ತಾ ಹೇಳುತ್ತಾರೆ. ವೇದಮಂತ್ರದಲ್ಲಿ ಇದೇ ಅರ್ಥದ ಶ್ಲೋಕಗಳನ್ನು ಪುರೋಹಿತರು ಹೇಳುತ್ತಾರೆ. ಅದಕ್ಕೆ ನಮ್ಮ ತಂದೆಯವರ ಪ್ರತ್ಯುತ್ತರ ಅಭೂತ!!” ನೋಡಿ, ನಿಜವಾಗಿ ಎಂದರೆ ನನ್ನ ಮಗನನ್ನು ನಿಮ್ಮ ಮಗಳ ಕೈಯಲ್ಲೂ ಇಟ್ಟಿದ್ದೇವೆ. ಪರಸ್ಪರರು ಒಬ್ಬರನ್ನು ಇನ್ನೊಬ್ಬರು ಅರಿತು ಜೀವನದುದ್ದಕ್ಕೂ ಸ್ನೇಹಿತರಂತೆ ವರ್ತಿಸುತ್ತಿರಲಿ. ಗುರು ಹಿರಿಯರಿಗೆ ವಿಧೇಯರಾಗಿ ವರ್ತಿಸುತ್ತಿರಲಿ. ಎರಡೂ ಕುಟುಂಬಗಳಿಗೆ ಒಳ್ಳೆ ಹೆಸರನ್ನು ತರಲಿ”. ನಂತರ ನೂತನ ವಧೂವರರಿಂದ ಸತ್ಯನಾರಾಯಣ, ಸತ್ಯಗಣಪತಿ ವ್ರತ. ಊರಿನ ನೆಂಟರಿಷ್ಟರಿಗೆ ಸಿಹಿಭೋಜನ. ಗಂಗೆ ಜಯರಾಮಭಾವನು ಹಾಲು ತರುವಾಗ ಅವನ ಹೆಂಡತಿ (ಕಾವೇರತ್ತೆ) ಎಚ್ಚರಿಸಿದ್ದಾಳೆ: “ನಾವಡರ ಮನೆ ಹತ್ತಿರ ಜಾರ್ತದೆ.ಹುಷಾರಿ”. ಇಂವ ಜಾರುವ ಜಾಗ ಎಲ್ಲಿ ಎಲ್ಲಿ ಎಂದು ಕಾಲಿಂದ ಪರೀಕ್ಷಿಸಿ ಕಡೆಗೂ ಜಾರಿ ಬಿದ್ದು ಹಾಲು ಚೆಲ್ಲಿದ.
******

ಮತ್ತೊಮ್ಮೆ ನೆನಪುಗಳು ಹಿಂದಕ್ಕೆ……..ತೀರ್ಥಹಳ್ಳಿಗೆ…….

ತೀರ್ಥಹಳ್ಳಿಗೆ ಬಂದ ಮೇಲೆ ನಾವು ಒಂಬತ್ತು ಗಂಡು ಮಕ್ಕಳಾದೆವು. ನನಗೆ ವೈಯಕ್ತಿಕ ಲಾಭ ಇನ್ನೂ ಮೂರು ಸಹೋದರರ ಬೆಂಬಲ. ಗೋಕರ್ಣದಲ್ಲಿದ್ದಾಗ ನಾನು ಆರರಲ್ಲಿ ಒಬ್ಬನಾಗಿದ್ದೆ. ಈಗ ಒಂಬತ್ತರಲ್ಲಿ ಮೂರನೇ ರ‍್ಯಾಂಕ್. ಆದ್ದರಿಂದ ನನಗೆ ಈ ಮೂವರ ಮೇಲೆ ಪ್ರೀತಿ ಹೆಚ್ಚು. ರಾಜಾರಾಮ ಏಳನೆಯವ, ವಿಶ್ವನಾಥ ಎಂಟನೆಯವ, ವಸಂತ ಒಂಬತ್ತನೆಯವ. ರಾಜಾರಾಮ, ವಿಶ್ವನಾಥರ ನಡುವೆ ಅಂತರ ಕಡಿಮೆ. ಅದರಿಂದ ಹುಬ್ಬಳ್ಳಿ ಗೌರಕ್ಕ ರಾಜಾರಾಮನನ್ನು ತಾನೇ ಒಯ್ದು ಬೆಳೆಸಿದಳು. ಅವನಿಗೆ ನಾವೆಲ್ಲಾ ಹುಬ್ಬಳ್ಳಿ ಎಂದೇ ಕರೆಯುತ್ತಿದ್ದೆವು. ತಂದೆಯವರು ಶ್ರೀರಾಮಚಂದ್ರ ಭಾರತೀ ಸ್ವಾಮಿಗಳೊಡನೆ ಕಾಶಿಯಾತ್ರೆ ಮಾಡಿದ ಕಾಲದಲ್ಲಿ ಹುಟ್ಟಿದವನು ವಿಶ್ವನಾಥ. ಎಂಟು ಮಕ್ಕಳ ನಂದನವನವನ್ನು ನವನಂದನವನವನಾಗಿ ಪರಿವರ್ತಿಸಿದವನು, ಎಲ್ಲ ಗಿಡಗಳು ಚಿಗುರುವಂತೆ ಮಾಡಿ ವಸಂತವನ್ನು ತಂದವನೇ ವಸಂತರಾಜ. ಕೆಂಪು ಬೆಳ್ಳಗೆ ಇದ್ದು, ಸುಂದರವಾಗಿ ಕಾಣುತ್ತಿದ್ದ. ಅಮ್ಮನಿಗೆ ಹೆಣ್ಣುಮಕ್ಕಳಿಲ್ಲ ಎನ್ನುವ ಕೊರಗನ್ನು ತನ್ನ ರೂಪದ ಮೂಲಕ ತೊಡೆದು ಹಾಕಿದ. ಇವನಿಗೇ ಹೆಣ್ಣು ಡ್ರೆಸ್ ಮಾಡಿಸಿ ಕಾಲಿಗೆ ಗೆಜ್ಜೆ, ಕೈಗೆ ಬಳೆ ಹಾಕಿ ಲಂಗ ಹಾಕಿ ತೆಗೆದ ಫೋಟೋ ಈಗಲೂ ಇರಬೇಕು. ಅದನ್ನು ಅವನು ತೋರಿಸುತ್ತಿಲ್ಲ. “ಜ್ವಾಲೆ” ನಾಟಕದ ಗಂಗೆ ಪಾರ್ಟು ಎಲ್ಲರೂ ಮೆಚ್ಚಿದರು. ಕೂರ್ಸೆ ಗಣಪತಿಯ ಜ್ವಾಲೆ, ದಿಗ್ದರ್ಶನ ನನ್ನದೇ. ನಮ್ಮ ಸ್ಕೂಲ್ ಗೇದರಿಂಗ್‌ನಲ್ಲಿ. ವಿಶ್ವನಾಥ ಚಿಕ್ಕವನಿದ್ದಾಗ ಒಮ್ಮೆ ನಮ್ಮ ಮಠದ ಒಂದು ಕೋಣೆಯಲ್ಲಿ ಅವನನ್ನು ಆಡಿಸುತ್ತಿದ್ದೆ. ಆಗೆ ಗೋಡೆಗುಂಟ ಒಂದು ನಾಗರಹಾವು ಹರಿದಾಡುತ್ತಾ ಇದ್ದುದನ್ನು ಮೊದಲು ನೋಡಿದ ಇವನು “ಮಾಚಣ್ಣ” ಎಂದು ಹಾವನ್ನು ಅಭಿನಯದ ಮೂಲಕ ತೋರಿಸಿದ. “ಬದುಕಿದೆಯಾ ಬಡಜೀವ” ಎಂದು ಅವನನ್ನು ಎತ್ತಿಕೊಂಡು ಹೊರಗೆ ಬಂದೆ. ಇವನಿಗೆ ಈಶ ಎಂದು ಈಗಲೂ ಕರೆಯುತ್ತೇವೆ. ಒಂದು ದಿನ ನನ್ನ ಹತ್ತಿರ ಎರಡು ಬೆರಳು ಕಾಣಿಸುತ್ತಾ “ಆನೆಗೆ ಇದು, ಇದು ಬಾಲ ಯಾಕೆ?”.ಆಗ ನಾನು ನಗೆ ಆಡಲಿಲ್ಲ. “ಮುಂದಿನದು ಅದರ ಕೈ. ತಿನ್ನುವುದಕ್ಕೆ ಹಣ್ಣು, ಕಾಯಿ ತೆಗೆದುಕೊಳ್ಳಲು ಅದನ್ನು ಉಪಯೋಗಿಸುತ್ತದೆ. ಹಿಂದಿನದು ನೀನು ಎಂದಂತೆ ಬಾಲ” ಎಂದೆ. “ಗೊತ್ತಾಯಿತಾ ಕೇಳಿದ್ದಕ್ಕೆ “ಹೌದು” ಎಂದ. ವಸಂತಸೇನಾ ಸಂಸ್ಕೃತ ನಾಟಕದಲ್ಲಿ ಮೈತ್ರೇಯಿ ಪಾತ್ರವನ್ನು ಮಾಡಿ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದುಂಟು. ಸ್ವಲ್ಪ ಹಠದ ಸ್ವಭಾವದವ. ಅವನು ಹೇಳಿದಂತೆ ಆಗಬೇಕು. ಒಮ್ಮೆ ಕಬ್ಬಿಣದ ಮೊಳೆಯನ್ನು ಬಾಯಲ್ಲಿ ಹಾಕಿಕೊಂಡು ತೆಗೆ ಎಂದರೆ ತೆಗೆಯುತ್ತಿಲ್ಲ. ಏನೇ ಹೇಳಿದರೂ, ಎಷ್ಟೇ ಹೇಳಿದರೂ ತೆಗೆಯಲಿಲ್ಲ. ನನಗೆ ಸಿಟ್ಟು ಬಂತು. ಚಕ್ರತೀರ್ಥದಲ್ಲಿ ನಿನ್ನನ್ನು ಮುಳುಗಿಸುತ್ತೇನೆ ಎಂದರೂ ಜಗ್ಗಲಿಲ್ಲ. ಹೊಳೆಗೆ ಕರೆದುಕೊಂಡು ಹೋಗಿ ಕಾಲನ್ನು ನೀರಿನಲ್ಲಿ ಇಟ್ಟರೂ ತೆಗೆಯಲಿಲ್ಲ. ಕಡೆಗೆ ನಾನೇ “ಹಾಗಾದರೆ ಇನ್ನು ಹಾಗೆ ಮಾಡಬೇಡ, ತೆಗೆ” ಎಂದೆ. ಏನು ಕಂಡಿತೋ, ತೆಗೆದ! ಹೊಳೆ ಹತ್ತಿರ ಇದ್ದ ರಾಮಾಚಾರ್ಯರು “ಏನು ಮಹಾಬಲಭಟ್ಟರೇ, ಇದೆಲ್ಲಾ” ಎಂದರು. ಕಾಲೋಚಿತವಾಗಿ ಏನೋ ಹೇಳಿ ತಪ್ಪಿಸಿಕೊಂಡೆ. ರಾಜಾರಾಮ (ಬಾಲಕೃಷ್ಣ) ಗಂಭೀರ, ಹಾಸ್ಯ ಕಡಿಮೆ. ಆದರೆ ಹಾಸ್ಯ ಅರ್ಥಮಾಡಿಕೊಳ್ಳುವ, ಅನುಭವಿಸುವ ವ್ಯಕ್ತಿ. ದಸರಾ ರಜೆಗೆ ಗೌರವಕ್ಕನ ಜೊತೆ ತೀರ್ಥಹಳ್ಳಿಗೆ ಬರುವವನು. ಇಲ್ಲಿ ನಮ್ಮಮ್ಮ ಕೇಳಿದಳು: “ಅಲ್ದೊ ರಾಜಾ, ಹುಬ್ಬಳ್ಳಿಯಲ್ಲಿ ಹುಲಿವೇಷ ಕಂಡರೆ ಹೆದರಿಕೆ ಇಲ್ಲೆ. ಇಲ್ಲಿ ಯಾಕೆ ಹೆದರ್ತೆ?” ಅದಕ್ಕೆ ಅವನ ಉತ್ತರ ಚೆನ್ನಾಗಿತ್ತು: “ಸುಬಕಾ, ಅವರು ಮನ್ಸಾರ್ ಅಂತ ಗೊತ್ತದ. ಬಣ್ಣ ಹಚ್ಚಿದ್ ನೋಡೀನಿ”.
******

ಶಿಕ್ಷಕರ ದಿನಾಚರಣೆ: ಇಂದು ಸೆಪ್ಟೆಂಬರ್ ೫, “ಅಪ್ಪ, ಶಿಕ್ಷಕರ ದಿನಾಚರಣೆ ನಾವೆಲ್ಲರೂ ಆಚರಿಸಬೇಕು. ನೀವು ಶಿಕ್ಷಕರು. ನೀವು ಯಾಕೆ ಆಚರಿಸಬೇಕು?” ಕೇಳಿದಳು ಜಯಲಕ್ಷ್ಮಿ. “ಜಯಕ್ಕ, ನೀನು ಕೇಳುವುದು ಕೇಳಬೇಕಾದದ್ದೇ, ಆದರೆ ಕೇಳುವುದಿಲ್ಲ. ಅವರಿಗೆ ಹೆದರಿಕೆ. ನಿನಗೆ ನಿನ್ನಪ್ಪನೇ ಶಿಕ್ಷಕ ಇರಲಿ.ನಾನು ನಿನಗೆ ಶಿಕ್ಷಕ. ನನಗೂ ಒಬ್ಬ ಶಿಕ್ಷಕ ಇರಬೇಕಲ್ಲವೇ? ಗುರು,ಗುರುವಿನ ಗುರು, ಅವನ ಗುರು ಪರಮೇಷ್ಠಿಗಳು, ಅವನ ಗುರು, ಪರಾತ್ಪರಾ ಗುರು…. ಪರಾತ್ಪರಾಗುರು ತವಚರಣಂ. ನಮಾಮಿ ಶಂಕರ, ಭವಾನಿ ಶಂಕರ, ಉಮಾಮಹೇಶ್ವರ ತವಚರಣಂ. ಈ ಉಮಾ ಮಹೇಶ್ವರನೇ “ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ, ಚಕ್ಷುರುನ್ಮೀಲನಂ ಯಸ್ಯ, ತಸ್ಮೈ ಶ್ರೀಗುರುವೇ ನಮಃ”.ಜನರಲ್ಲಿ ಅಜ್ಞಾನ ಎನ್ನುವ ಕತ್ತಲೆ ಆವರಿಸಿರುತ್ತದೆ. ಅದರ ನಿವಾರಣೆಗೆ ಬೆಳಕಿನ ಅವಶ್ಯಕತೆ ಇದೆ. ಇಲ್ಲಿ ಗುರುವಿನಿಂದ ಬೆಳಕು, ಜ್ಞಾನಾಂಜನ. ಈ ಬೆಳಕು ಎಲ್ಲ ಕಡೆ ತಲುಪಿದೆಯೇ ಇಲ್ಲವೇ ಎಂದು ನೋಡಲು ಗುರು ಬಿಟ್ಟ ಕಣ್ಣನ್ನು ಮುಚ್ಚುವುದಿಲ್ಲ. ಇವೆಲ್ಲಾ ನಿಮಗೆ ಪಾಠ ಓದುವಾಗ ಎಚ್ಚರವಾಗಿರಬೇಕು. ಇದೇ ಶಿಕ್ಷಕರ ದಿನಾಚರಣೆಯ ಸಂದೇಶ.

ಸೆಪ್ಟೆಂಬರ ಐದರ ಮಹತ್ವವೇನು? ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಪೌರಾತ್ಯ, ಪಾಶ್ಚಿಮಾತ್ಯ ತತ್ತ್ವಶಾಸ್ತ್ರಗಳೆರಡನ್ನೂ ಆಮೂಲಾಗ್ರವಾಗಿ ಅಭ್ಯಸಿಸಿದವರು. ಅವರನ್ನು ಹಿಂದೂ ವೇದಾಂತದ ವಿಷಯದಲ್ಲಿ “ಎರಡನೆಯ ಶಂಕರ” ಎನ್ನುತ್ತಿದ್ದರು. ವಿದೇಶಗಳಲ್ಲಿ ಹಿಂದೂ ತತ್ತ್ವದ ಮೇಲೆ ಉಪನ್ಯಾಸ ಮಾಡುತ್ತಿದ್ದರು. ಒಮ್ಮೆ ಇಂಗ್ಲೆಂಡಿನಲ್ಲಿ ಇವರ ಭಾಷಣ ಏರ್ಪಾಡಾಗಿತ್ತು. ಮೊದಲ ಎರಡು ದಿನ ಬೆರಳೆಣಿಕೆಯಲ್ಲಿ ಎಣಿಸುವಷ್ಟು ಜನ. ಆದರೆ ಇವರ ಭಾಷಣ ಕೇಳಿದ ಜನ ನದೀ ದಡದಿಂದ ಭಾಷಣದ ಹಾಲಿಗೆ ಬಂದರಂತೆ. ಮೂರನೇ ದಿನ ನದಿ ದಂಡೆಯಲ್ಲಿ ಬೆರಳಣಿಕೆಯಷ್ಟು ಜನ ಮಾತ್ರ! ಇವರು ಎರಡು ಅವಧಿ ನಮ್ಮ ರಾಷ್ಟ್ರಪತಿ ಆಗಿದ್ದರು. ಈ ಮೇಧಾವಿಯ ಜನ್ಮದಿನ ಸೆಪ್ಟೆಂಬರ್ ೫. ನೆಹರೂ ಅವರ ಜನ್ಮದಿನಾಚರಣೆಯನ್ನು ಬಾಲಕರ ದಿನಾಚರಣೆ, ಗಾಂಧಿಯವರ ದಿನಾಚರಣೆಯನ್ನು ಸರ್ವೋದಯ ದಿನ ಎಂದು ಆಚರಿಸುತ್ತಾರೆ. “ನಿಮ್ಮ ದಿನವನ್ನು ಏನೆಂದು ಆಚರಿಸಬೇಕು?’ ಎಂದು ಕೇಳಿದಾಗ ಡಾ.ರಾಧಾಕೃಷ್ಣನ್ “ನಾನು ನನ್ನ ಜೀವಿತದಲ್ಲಿ ಶಿಕ್ಷಕನಾಗಿದ್ದುದೇ ಹೆಚ್ಚು ಕಾಲ. ದೇಶ, ವಿದೇಶಗಳಲ್ಲಿ ಸಂಚಾರೀ ಶಿಕ್ಷಕನಾಗಿದ್ದೆ. ನೀವು ನನ್ನ ಜನ್ಮದಿನ ಆಚರಿಸುವುದಾದರೆ ಶಿಕ್ಷಕ ದಿನಾಚರಣೆಯಾಗಿ ಆಚರಿಸಿರಿ” ಎಂದರು. ನಾನು ಓದಿದ ಸೆಂಟ್ರಲ್ ಕಾಲೆಜಿನಲ್ಲಿ ಅವರು ಕೆಲಕಾಲ ಶಿಕ್ಷಕರಾಗಿದ್ದರಂತೆ. ಇದು ಸಹಜವಾಗಿಯೇ ನನಗೆ ಹೆಮ್ಮೆಯ ವಿಷಯ.

ಶಿಕ್ಷಕರ ದಿನಾಚರಣೆ ಶಿಕ್ಷಕರ ಕರ್ತವ್ಯಗಳ ಬಗೆಗೆ, ಶಿಕ್ಷಕರ ಕುರಿತು ಸಮಾಜದ ಕರ್ತವ್ಯಗಳ ಬಗೆಗೆ ಆಲೋಚಿಸಲು ಒಂದು ಸಂದರ್ಭ. ಇತ್ತೀಚೆಗೆ ಆದರ್ಶಶಿಕ್ಷಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇವು ವೈಯಕ್ತಿಕ ಮಟ್ಟದಲ್ಲಿ ಸಲ್ಲುವ ಗೌರವಗಳು. ಸಾಮೂಹಿಕ ಹಿತವನ್ನೂ ಯೋಚಿಸಬೇಕು. ಶಿಕ್ಷಕ ಸಮೂಹಕ್ಕೆ ಸಮಾಧಾನಕೊಡುವ ಯೋಜನೆಗಳು ಬರಲಿ. ಡಾ.ರಾಧಾಕೃಷ್ಣನ್‌ರ ಒಂದು ಸೂಕ್ತಿ ಇದೆ: “ಯಾವ ಶಿಕ್ಷಣ ವಿಧಾನವೂ ಶಿಕ್ಷಕನಿಗಿಂತ ಉತ್ತಮವಾದುದಲ್ಲ” ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಎಷ್ಟೇ ನೂತನವಾದುದಾದರೂ ಶಿಕ್ಷಕನೇ ಉತ್ತಮ ಸುಧಾರಕ.

ಧನುರ್‌ಮಡ್ಡಿ

ಧನುರ್ಮಾಸದ ಒಂದು ತಿಂಗಳು ಸೂರ್ಯೋದಯಕ್ಕೆ ದೇವರ ಪೂಜೆ, ನೈವೇದ್ಯ ಆಗಬೇಕು. ದೇವಸ್ಥಾನಗಳಲ್ಲಿ ಇಡೀ ಮಾಸದ ಆಚರಣೆ. ಮನೆಗಳಲ್ಲಿ ಸಾಂಕೇತಿಕವಾಗಿ ಒಂದು ದಿನ ಆಚರಣೆ. ಸಂಬಂಧಿಕರನ್ನು ಊಟಕ್ಕೆ ಕರೆಯುತ್ತಾರೆ. ಅಂದು ಕಿಚಡಿ – ಅನ್ನದಿಂದ ಮಾಡುವ ವಿಶೇಷ ಅಡುಗೆ. ಅರಿಸಿನ, ಹೆಸರುಬೇಳೆ, ಹಸಿಶುಂಠಿ, ಹಸಿಮೆಣಸು ಬೇರೆ ಬೇರೆ ಪ್ರಮಾಣದಲ್ಲಿ ಕೊಚ್ಚಿ ಹಾಕುತ್ತಾರೆ. ಉದ್ದಿನ ದೋಸೆ, ಕಡಲೆಹಿಟ್ಟಿನ ಜುಣಕ (ಜುಳಕ) – ಈ ವ್ಯಂಜನ ಮಹಾರಾಷ್ಟ್ರ ಮೂಲದ್ದು. ದೋಸೆ ಜೊತೆ ವಿಶೇಷ ರುಚಿಯಾಗಿರುತ್ತದೆ. ಪಾಯಸ ಕೂಡ ಜೊತೆಗೆ. ಪಕ್ಕದ ಮನೆ ಫಣಿಯಕ್ಕನ ಮನೆ, ಅಲ್ಲಿ ಧನರ್ಮಾಸದ ಊಟಕ್ಕೆ ನವದಂಪತಿಗಳನ್ನು ಕರೆದಿದ್ದಾರೆ. ಅಂದೇ ಜೋಗಾಪ್ರವಾಸ. ಈ ಎರಡಕ್ಕೂ ನಾನಿರಬೇಕು. ನನ್ನ ಸಂದರ್ಭ ಅರಿತು ಶ್ರೀ ಜಿ.ಜಿ. ಹಳದಿಪುರ ಸೈಕಲ್ ತಂದು ಕಾಯುತ್ತಿದ್ದರು. ಊಟವಾದ ಮೇಲೆ “ಫಣಿಯಕ್ಕ, ಬತ್ನೇ” ಅಂದವನೇ ಹಳದಿಪುರರ ಡಬಲ್ ರೈಡ್‌ನಲ್ಲಿ ಬಸ್ ಸ್ಟ್ಯಾಂಡಿಗೆ. ಬಸ್ ಹೊರಡುವ ಸಮಯ ಆಗಿಬಿಟ್ಟಿತ್ತು. ಬಸ್ ಏಜೆಂಟ್ ಶ್ರೀ ವೆಂಕಟ್ರಮಣ ಶೆಟ್ಟರು ನಮಗಾಗಿ ಎರಡು ನಿಮಿಷ ತಡೆದು ಸಹಕರಿಸಿದರು.

ಹಂಪೆ ಪ್ರವಾಸಕ್ಕೆ ನಾನು ಸಪತ್ನೀಕನಾಗಿ ಮಗುವಿನೊಂದಿಗೆ ಹೊರಟವ. ನನ್ನದು ಸ್ವಾಮಿ ಕಾರ್ಯ, ಸ್ವಕಾರ್ಯ – ಎರಡೂ. ನನ್ನ ಹೆಂಡತಿ, ಮಗುವನ್ನು ಗದಗಿನ ನನ್ನ ತಮ್ಮನ ಬಿಡಾರದಲ್ಲಿ ಬಿಟ್ಟು ಅಲ್ಲಿಂದ ನನ್ನ ಅಣ್ಣನ ಹೆಂಡತಿಯನ್ನು ಗೋಕರ್ಣಕ್ಕೆ ಕರೆ ತರುವುದು.ಪ್ರವಾಸಕ್ಕೆ ಎರಡು ಸ್ಪೆಶಲ್ ಬಸ್. ಹೆ.ಮಾ.ಸಹಿತ ನಾವು ಐದಾರು ಮಾಸ್ತರರು, ಮಹಿಳಾ ಶಿಕ್ಷಕಿ ಎಲ್ಲಾ ಇದ್ದೆವು. ಬಸ್ಸಿನಲ್ಲಿ ಉದ್ದಕ್ಕೂ ವಿದ್ಯಾರ್ಥಿಗಳಿಂದ ಹಾಡು, ವಿವಿಧ ವಿನೋದಾವಳಿ. ಪ್ರವಾಸದ ದಣಿವು ಅನಿಸಲಿಲ್ಲ. ನಾನು ಗದಗದಲ್ಲಿ ಅವರಿಂದ ಬೇರ್ಪಟ್ಟು ನನ್ನ ಸ್ವಂತ ಕೆಲಸಕ್ಕೆ ಹೋದೆ. ಗದಗದಲ್ಲಿ ವೀರನಾರಾಯಣ ಸ್ವಾಮಿ ದೇವಾಲಯ (ದರ್ಶನ ಮಾಡಿ) ನೋಡಿ ಬಂದೆವು.ಮರುದಿವಸ ಗೋಕರ್ಣಕ್ಕೆ ಬಂದು ಮುಟ್ಟಿದೆವು. ಹೆಬ್ಬೈಲ ಘಟ್ಟದಲ್ಲಿ ಅತ್ತಿಗೆಗೆ ಹೊಟ್ಟೆ ಉಬ್ಬರ ತೋರಿತು. ಲಿಂಬು ಹುಳಿಯೊಂದಿಗೆ ಶಮನ ಆಯಿತು.

ಹೊಸೂರು ಬ್ರಿಜ್:  ಗೋಕರ್ಣ ಹುಬ್ಬಳ್ಳಿ ನಡುವೆ ತಾರಿ ಜಂಗಲ ದಾಟದೇ ಬಸ್ಸೇ ಹೋಗುವಂತೆ ಬ್ರಿಜ್ ಕಟ್ಟುತ್ತಿದ್ದರು. ಅದನ್ನು ನೋಡಲು ಹುಡುಗರನ್ನು ಕರೆದುಕೊಂಡು ಹೊರಟೆವು. ಗೋಕರ್ಣದ ಡಾ.ಹೊಸಮನೆಯವರು ಎಲ್ಲ ಏರ್ಪಾಡೂ ಮಾಡಿದ್ದರು. ರೈಸ್ ಮಿಲ್‌ನ ಮೈದಾನದಲ್ಲಿ ಸಾಮೂಹಿಕ ಊಟ. ಬ್ರಿಜ್ ಕೆಲಸ ನಡೆಯುವಲ್ಲಿ ಪುನಃ ಇನ್ನೊಂದು ದೋಣಿಯಲ್ಲಿ ಹೋಗಬೇಕು. ಸೇತುವೆ ಕಂಬಗಳು ೩’- ೪’ ಎತ್ತರ ಬಂದಿದ್ದವು. ಸಿಮೆಂಟ್ ಕಬ್ಬಿಣದ ಕೆಲಸಗಳು ಸಾಗಿದ್ದವು. ನಂತರ ನಾಲ್ಕು ಗಂಟೆಗೆ ಮಾದನಗೇರಿಗೆ ಬಂದೆವು. ಅಲ್ಲಿ ಚಹಾಪಾನ. ಶೇವು ಅವಲಕ್ಕಿಯೊಂದಿಗೆ ಬಂಕಿಕೊಡ್ಲ ಬಸ್ಸಿನಲ್ಲಿ ಗೋಕರ್ಣಕ್ಕೆ ವಾಪಸು.

ನನ್ನ ಹಿರೇಮಗಳು ಸುಬ್ಬಲಕ್ಷ್ಮಿ.ಹೆಸರಿಡುವ ನಮ್ಮ ಮುಂದೆ ಹೆಸರುಗಳ ಶತನಾಮಾವಳಿ ಇತ್ತು. ಎಲ್ಲರೂ ಒಂದೊಂದು ಹೆಸರು ಸೂಚಿಸಿದರು. ನನಗೆ ನನ್ನ ಅಬ್ಬೆ ಹೆಸರನ್ನು ಇಡಬೇಕೆಂಬ ಆಸೆ. ಆದರೆ ನನ್ನ ಶ್ರೀಮತಿಗೆ ತನ್ನ ತಾಯಿಯ ಹೆಸರಿಡಲಿ ಎಂದೂ ಆಸೆಯಿರಬಹುದೇನೋ. ತಕ್ಷಣ ನನಗೆ ಹೊಳೆದದ್ದು ಸುಬ್ಬಲಕ್ಷ್ಮಿ. ನನ್ನ ಅಬ್ಬೆಯ ಹೆಸರು ಸುಬ್ಬಿ. ಅವಳ ತಾಯಿಯ ಹೆಸರು ಲಕ್ಷ್ಮಿ. ಹೀಗಾಗಿ ಇವಳು ಸುಬ್ಬಲಕ್ಷ್ಮಿಯಾದಳು. ಹೊಸ ಹೆಸರಿಗೆ ಎಲ್ಲರದೂ ಒಪ್ಪಿಗೆ ಸಿಕ್ಕಿತು. ನಾನು ಬಿ.ಎಡ್.ಗೆ ಹೋಗುವಾಗ ಅವಳು ಹುಟ್ಟಿ ಆಗಿತ್ತು. ನಾನು ಬಿ.ಎಡ್.ಗೆ ಹೋದ ಅವಧಿಯಲ್ಲಿ ತಾಯಿ, ಮಗಳು ತೀರ್ಥಹಳ್ಳಿಯಲ್ಲಿದ್ದರು. ನಾನು ಬಿ.ಎಡ್ ಮುಗಿಸಿ ಬಂದ ಒಂದು ವರ್ಷದಲ್ಲೇ ನನ್ನ ದ್ವಿತೀಯ ಪುತ್ರಿ ಜಯಲಕ್ಷ್ಮಿಯ ಜನನ. ಹೆಸರಿಡಲು ತ್ರಾಸಾಗಲಿಲ್ಲ. ಬಿ.ಎಡ್.ನಲ್ಲಿ ಜಯಶೀಲನಾಗಿದ್ದೆ, ’ಲಕ್ಷ್ಮಿ’ ಅಕ್ಕನ ಹೆಸರಿನ ಜೊತೆಗೆ ಇವಳೂ ಇರಲಿ ಎಂದು ’ಜಯಲಕ್ಷ್ಮಿ’.ಸುಬ್ಬಲಕ್ಷ್ಮಿ ತೀರ್ಥಹಳ್ಳಿಯಲ್ಲಿ ಅಮ್ಮನ ಮುದ್ದಿನ ಮೊಮ್ಮಗಳಾಗಿ ಬೆಳೆದಳು. ಮನೆ ಎದುರಿನ ಅಂಗಳದಲ್ಲಿ ಮಲ್ಲಿಗೆ ಬಳ್ಳಿ, ಹೂಗಿಡಗಳನ್ನು ಅಬ್ಬೆ ನೆಟ್ಟು ಬೆಳೆಸಿದ್ದಳು. ಅದಕ್ಕೆ ’ಸುಬ್ಬಲಕ್ಷ್ಮಿ ಪಾರ್ಕ್’ ಎಂದು ಹೆಸರಿಟ್ಟು ಅಮ್ಮ ನಲಿದಳು. ಮೊಮ್ಮಗಳು ಕುಣಿದಾಡಿದಳು. ಅಪ್ಪಯ್ಯ ಗುರುಗಳ ಜೊತೆಯಲ್ಲಿ ಇರುವುದೇ ಹೆಚ್ಚು. ಇದ್ದಾಗಲೆಲ್ಲಾ ಮೊಮ್ಮಗಳನ್ನು ಮಠಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಜ್ಜ ನಮಸ್ಕಾರ ಮಾಡುವ ದೇವರಿಗೆ, ಗುರುಗಳಿಗೆ ತಾನೂ ನಮಸ್ಕರಿಸುತ್ತಿದ್ದಳು. ಎಲ್ಲರ ಮುದ್ದಿನ ಸುಬ್ಬಲಕ್ಷ್ಮಿಯಾಗಿ ಬೆಳೆಯುತ್ತಿದ್ದಳು. ಮುಂದೆ ಅಮ್ಮನಿಂದ ನೃತ್ಯವನ್ನೂ ಕಲಿತಳು. “ಕಾಫಿ ತೋಟದ ರೈತರು ನಾವು, ಆಗೇ ಸುಂದರಿ ಮದುವೆ”. ಅಮ್ಮನಿಗೆ ದಿನವೂ ಎರಡು-ಮೂರು ಸಲವಾದರೂ ಮೊಮ್ಮಗಳ ನೃತ್ಯ ಮಾಡಿಸದಿದ್ದರೆ ಸಮಾಧಾನವಿಲ್ಲ. ಎಲ್ಲರ ಮುಂದೂ ನೃತ್ಯ ಪ್ರದರ್ಶನ. ಕೊನೆಗೊಂದು ದಿನ ಗುರುಗಳ ಮುಂದೂ ಮಾಡಿದಳಂತೆ. ಅನಂತಭಟ್ಟರ ಮೊಮ್ಮಗಳು ಎಲ್ಲರಿಗೂ ಮೆಚ್ಚು. ಪಂಡಿತ ಸುಬ್ಬಮ್ಮ ದೃಷ್ಟಿ ತೆಗೆಯುತ್ತಿದ್ದಳು.

ಚಿಂತಾಮಣಿಯೂ ಅಘನಾಶಿನಿಯಲ್ಲೇ ಹುಟ್ಟಿದವ. ಸೌ.ರಾಧೆಗೆ ಸ್ವಪ್ನದಲ್ಲಿ ಆನೆ ಕಂಡಿತಂತೆ. ಹಾಗಾಗಿ ಇವನಿಗೆ ಗಣಪತಿ ಹೆಸರನ್ನು ಇಡಬೇಕು ಎಂದು ನಿರ್ಣಯ. ಅಘನಾಶಿನಿಯ ಪ್ರಧಾನ ದೇವರಲ್ಲೊಬ್ಬನಾದ ಗಣಪತಿಯೂ ಚಿಂತಾಮಣಿ.ಆದುದರಿಂದ ಚಿಂತಾಮಣಿ ಎಂಬ ನಾಮಕರಣ ಮಾಡಿದೆವು. ಜನವರಿಯಲ್ಲಿ ಜನನ.ಏಪ್ರಿಲ್‌ದಲ್ಲಿ ಗೋಕರ್ಣಕ್ಕೆ ತಾಯಿ, ಮಕ್ಕಳು ಬಂದರು.ರಾಮು ಹಿರೇಗುತ್ತಿಗೆ ಬಂದ ಮೇಲೆ ಹುಟ್ಟಿದವ.ಇವನು ಗರ್ಭದಲ್ಲಿದ್ದಾಗ ಸೌ.ರಾಧೆ ಹೊಟ್ಟೆಗೆ ಹಾವು ಸುತ್ತಿದಂತೆ ಕನಸಿನಲ್ಲಿ ಕಂಡಳು.ನನ್ನ ತಾಯಿಯ ಅಜ್ಜಿಮನೆ,ವಿಷ್ಣುಮಾವನ ಅಜ್ಜಿಮನೆ-ಎರಡೂ ಒಂದೇ:ಕೋಟಿತೀರ್ಥದ ಸಮೀಪ ಇರುವ ಮಾರಿಗೋಳಿ ಮನೆ.ಅಲ್ಲಿಯ ದೇವರು ಸುಬ್ರಹ್ಮಣ್ಯ(ಕುಮಾರ).ಇವನ ಜನ್ಮನಕ್ಷತ್ರ-ರಾಮನ ನಕ್ಷತ್ರ, ಪುಷ್ಯ.ಹೀಗೆ ಇವನು ರಾಮಕುಮಾರನಾದ.

ಪಂಡಿತ ಸುಬ್ಬಮ್ಮ ಎಂದೆ. ಇವಳೂ ಗೋಕಣದವಳೇ. ತನ್ನ ಹನ್ನೆರಡನೆ ವಯಸಿನಲ್ಲೆ ಬಾಲವಿಧವೆ. ನಂತರ ತವರುಮನೆ,  ಮನೆ ಎನ್ನುತ್ತಾ ಐದಾರು ವರ್ಷ ಕಳೆದಳು. ಅನಾಥೆ ಕಸ್ತೂರಬಾ ಆಶ್ರಮಕ್ಕೆ ಸೇರಿಕೊಂಡಳು. ಕೆಲವು ಕಾಲ ಕರ್ಕಿ ರಾಮ ಭಾಗವತರ ಮನೆಯಲ್ಲಿ ಮಕ್ಕಳ ಜೊತೆ ಇದ್ದಳಂತೆ. ಡಾ.ಹೊಸಮನೆಯವರ ಹಿರೇಗುತ್ತಿಯ ಬಿಡಾರದಲ್ಲಿ ಇದ್ದಳಂತೆ. ಕೊನೆಗೆ ೧೯೫೦ರ ಸುಮಾರಿಗೆ ತೀರ್ಥಹಳ್ಳಿಯ ನಮ್ಮ ಬಿಡಾರಕ್ಕೆ ಬಂದಳು. ಕೊನೆಯವರೆಗೂ ಗೋಕರ್ಣದಲ್ಲಿ ನಮ್ಮ ಮನೆಯಲ್ಲೇ ಇದ್ದಳು. ತೀರ್ಥಹಳ್ಳಿಯಲ್ಲಿ ಹುಟ್ಟಿದ ಮೂವರಲ್ಲಿ ರಾಜಾರಾಮ ಮಾತ್ರ ಹುಬ್ಬಳ್ಳಿಯಲ್ಲಿದ್ದ. ಈಶ, ವಸಂತ ಇವರನ್ನು ಮಕ್ಕಳಂತೆ ನೋಡಿಕೊಂದು ಬಳೆಯಿಸಿದಳು. ಈಶ ಎಂದರೆ ರಾಶಿ ಪ್ರೀತಿ.ನಾವೆಲ್ಲಾ ಈಶ ಸುಬ್ಬಮ್ಮನ ದತ್ತುಮಗ ಎನ್ನುತ್ತಿದ್ದೆವು. ದಿನಾ ಸುಬ್ಬಮ್ಮ ನಮ್ಮ ಅಬ್ಬೆಯ ಮಂಡೆ ಬಾಚುತ್ತಿದ್ದಳು. ಪಂಡಿತ ಸುಬ್ಬಮ್ಮ ವಿಕೇಶಿ. ಈಶನ ಮಾತು ಸಹಜವಾಗಿಯೇ ಇತ್ತು, “ಈ ಸುಬ್ಬಮ್ಮ ತನ್ನ ಮಂಡೆ ಬಾಚಿಕೊಂಡಿದ್ದಕ್ಕಿಂತ ಅಬ್ಬೆಯ ಮಂಡೆಯನ್ನೆ ಹೆಚ್ಚು ವರ್ಷ ಬಾಚುತ್ತಿದ್ದಾಳೆ”. ಆ ಮಾತಿನಲ್ಲಿ ನೋವು ಇತ್ತು, ನಗುವಿನ ಮೇಲು ಹೊದಿಕೆಯಲ್ಲಿ.

೧೯೬೨ರ ಜುಲೈದಲ್ಲಿ ನಮ್ಮ ಹೈಸ್ಕೂಲ್‌ನಲ್ಲಿ ಕೆಲ ಬದಲಾವಣಿಗಳಾದವು. ಗುಡಿ ಮೂರೂರಿಗೆ, ನಾನು ಅರ್ಚಕ (ಭಟ್ಟ) ಹಿರೇಗುತ್ತಿಗೆ, ಮೂರ್ತಿ ಭದ್ರಕಾಳಿ ಹೈಸ್ಕೂಲಿನಲ್ಲಿ ಹೆಡ್ ಮಾಸ್ಟರ್ ಆಗಿ ಅಧಿಕಾರ ವಹಿಸಿಕೊಂಡೆವು. “ಬಲೀಯಸಿ ಕೇವಲ ಮೀಶ್ವರೇಚ್ಛಾ”. ಜುಲೈ ಒಂದರಿಂದ ದಿನವೂ ಗೋಕರ್ಣಕ್ಕೆ ಬಂದು ಹೋಗಿ ಮಾಡುತ್ತಿದ್ದೆ. ಹತ್ತು ಹನ್ನೆರಡು ದಿನಗಳಲ್ಲಿ ಸೊನಗಾರಕೊಪ್ಪದಲ್ಲಿ  ಒಂದು ಮನೆ, ಹಿತ್ತಲನ್ನು ಶ್ರೀ ಹೊಸಬಣ್ಣ ನಾಯಕರ ಸಹಾಯದಿಂದ ಬಾಡಿಗೆಗೆ ದೊರಕಿಸಿಕೊಂಡೆನು. ಮಗಳು ಸುಬ್ಬಲಕ್ಷ್ಮಿಯನ್ನು ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿದೆನು.

ಅಮ್ಮನ ಪಾಶ: ನಮ್ಮ ಅಬ್ಬೆಗೆ ಮೊಮ್ಮಗನನ್ನು ಬಿಟ್ಟು ಆಗಲೇ ಒಂದು ತಿಂಗಳಾಯಿತು. ಬೇಸರ ಬಂತು. ತೊರ್ಕೆಯಲ್ಲಿದ್ದ ನಮ್ಮ ಅಣ್ಣನನ್ನು ಕರೆದುಕೊಂಡು ಅನಿರೀಕ್ಷಿತವಾಗಿ ಹಿರೇಗುತ್ತಿಗೆ ಬಂದೇಬಿಟ್ಟಳು. ಅವರ ಮೊಮ್ಮಗ (ಚಿಂತಾಮಣಿ) ಒಬ್ಬನೇ ಜಗುಲಿಯಲ್ಲಿ ಕುಳಿತಿದ್ದನಂತೆ. ಅವನ ತಾಯಿ ಸ್ನಾನ ಮಾಡಿ ಬರಲು ಬಚ್ಚಲಿಗೆ ಹೋಗಿದ್ದಾಳೆ. ಅಮ್ಮ ಅಂಗಳದಲ್ಲಿ ಕಾಲಿಟ್ಟಳೋ ಇಲ್ಲವೋ “ಅಮ್ಮಾ, ಅಮ್ಮಾ” ಎಂದು ಕೂಗಿದನಂತೆ. ಅಮ್ಮನಿಗೆ ಮೊಮ್ಮಗ ತನ್ನನ್ನು ಕರೆದದ್ದು ಕೇಳಿ ದುಃಖ ಉಮ್ಮಳಿಸಿ ಬಂತು. ತುಂಬಿದ ಮನೆಯಲ್ಲಿ ಇರಬೇಕಾದ ತನ್ನ ಮೊಮ್ಮಗ ಒಬ್ಬಂಟಿಯಾಗಿ ಯಾರದೋ ಮನೆಯ ಜಗಲಿಯಲ್ಲಿ ಇದ್ದಾನಲ್ಲಾ ಎಂದು. ತಕ್ಷಣ ಎತ್ತಿಕೊಳ್ಳುವಂತಿಲ್ಲ. ಆ ಶಿರವಳ್ತದ ಒಳಕ್ಕೆ ಒಂದು ಬಾಗಿಲು, ಒಳಗೆ ಚಿಲಕ ಹಾಕಿದ್ದಾರೆ. ಅಮ್ಮ ’ರಾಧೆ’ ಎಂದು ಕೂಗಿದಳು. ಇವಳು ಅತ್ತೆಯ ದನಿ ಕೇಳಿ ಬಂದು ಬಾಗಿಲು ತೆಗೆದಳು. ಅಮ್ಮ ಮೊಮ್ಮಗನನ್ನು ಎತ್ತಿ ಮುದ್ದಾಡಿ ಎಷ್ಟು ಅತ್ತಳೋ ಗೊತ್ತಿಲ್ಲ. ಮೊಮ್ಮಗ ಅಮ್ಮನ ಮುಖವನ್ನು ಒರೆಸುತ್ತಿದ್ದನು. ಅವನ ದೊಡ್ಡಪ್ಪ ಬಿಸ್ಕೀಟ್ ಪೊಟ್ಟಣ ಕೊಡಲು ತೆಗೆದುಕೊಂಡು ’ಅಮ್ಮಾ’ ಎಂದನಂತೆ. ’ತಿನ್ನು’ ಎಂದಳು. ಇಷ್ಟು ಹೊತ್ತಿಗೆ ಚಹಾ ಬಂತು. ಅಷ್ಟು ಹೊತ್ತಿಗೆ ಸುಬ್ಬಲಕ್ಷ್ಮಿ ಶಾಲೆಯಿಂದ ಬಂದಳು. ಸುಬ್ಬಿ ಎಂದು ಸುಬ್ಬಮ್ಮ ಮೊಮ್ಮಗಳನ್ನು ಮುದ್ದಿಟ್ಟಳು. ಅವಳಿಗೂ ಒಂದು ಬಿಸ್ಕೀಟ್ ಪೊಟ್ಟಣ ತಂದಿದ್ದಳು. ಅವಳ ಗೆಳತಿ ಸಾವಿತ್ರಿ, ವಾಸುದೇವ ಶೆಟ್ಟರ ಮಗಳು. ಇವಳು ಅವಳ ಜೊತೆ ಬಿಸ್ಕೀಟ್ ತಿಂದಳು. ದೊಡ್ಡಪ್ಪ ಪೇಟೆ ಕಡೆ ಹೊರಟ. ಅಮ್ಮ, ಮೊಮ್ಮಗ ಚಾಪೆ ಮೇಲೆ ಊಟದವರೆಗೆ ಮಲಗಿದರು. ಅಮ್ಮ ಸೊಸೆಯ ಹತ್ತಿರ ಮಾತನಾಡುತ್ತಾ ಇದ್ದಳು. ಮಾಣಿ ಅಮ್ಮನ ಬೆಚ್ಚನೆಯ ಮಡಿಲಲ್ಲಿ ನಿದ್ದೆ ಹೋದ. “ಅಲ್ದೇ ರಾಧೆ, ಜ್ವರ ಬಂದರೆ ಔಷಧಕ್ಕೆ ಡಾಕ್ಟರಿದ್ದಾರಾ?”. “ಎರಡು ದಿನ ಬರ್ತಾರೆ”. ಅದಕ್ಕೆ ತಕ್ಷಣ ಅಮ್ಮನ ಪ್ರತಿಕ್ರಿಯೆ: “ಅಲ್ದೆ, ಹಂಗಾರೆ ಆ ಎರಡು ದಿನವೇ ಜ್ವರ ಬೀಳಬೇಕು!” ಸಂಜೆವರೆಗಿದ್ದು ಅಮ್ಮ ಗೋಕರ್ಣಕ್ಕೆ ಹೊರಟಳು. ಮಾಣಿ ರಗಳೆ “ಹೋಗಡ ಉಳ್ಕೊ”. “ಇಲ್ಲೆ, ಅಜ್ಜಂಗೆ ಔಷಧ ಕೊಡೊ. ಇನ್ನೊಂದು ಸಲ ಅಜ್ಜನ ಕರಕಂಡು ಬತ್ತೆ” ಎಂದಳು. ಮೊಮ್ಮಗ ಬಸ್ ಸ್ಟ್ಯಾಂಡಿಗೆ ಹೋಗಿ ಅಮ್ಮನಿಗೆ ಟಾ ಟಾ ಮಾಡಿ ಬಂದ. ನಿಜ, ಆದರೂ “ಅಮ್ಮ ಬೇಕಾಗಿತ್ತು” ಎಂದು  ಪುನಃ ತೀಡಲು ಶುರುಮಾಡ್ದ. “ನಾಳೆ ನಾ ಕರೆದುಕೊಂಡು ಹೋಗ್ತೆ, ಗೋಕರ್ಣಕ್ಕೆ” ಎಂದೆ. ಸುಮ್ಮನಾದ.

ಡಿಸೆಂಬರ್‌ದಲ್ಲಿ ಅಪ್ಪಯ್ಯಂಗೆ ಕಣ್ಣಿನ ಆಪರೇಶನ್ ಬಗ್ಗೆ ಮುಂಬೈಗೆ ಹೋಗುವುದೆಂತಲೂ, ಜೊತೆಯಲ್ಲಿ ಅಬ್ಬೆ, ನಾನು ಹೋಗುವುದೆಂತಲೂ ತೀರ್ಮಾನವಾಯಿತು. ಅಲ್ಲಿ ಮೂರ್ತಿ ಎಲ್ಲಾ ಏರ್ಪಾಡು ಮಾಡಿದ್ದ. ಅವನ ಸ್ನೇಹಿತ ದೊಡ್ಡಮನೆ ಹೆಗಡೆ ಬಿಡಾರ ಖಾಲಿ ಇತ್ತು. ಅದು ನಮಗೆ ಅನುಕೂಲವಾಯಿತು. ಈ ಪ್ರಯಾಣದಲ್ಲಿ ನನಗೂ ಒಂದು ಕೆಲಸ ಆಗುವುದಿತ್ತು. ಹೈಡ್ರಾಸಿಲ್ ಆಪರೇಶನ್ ಆಗುವುದಿತ್ತು. ಮೂರ್ತಿಯ ಕೇವಲ ದೋಸ್ತ, ತೀರ್ಥಹಳ್ಳಿಯ ಡಾ.ಪ್ರಭಾಕರ ನನ್ನ ಆಪರೇಶನ್ ಮಾಡಿದ. ಐದಾರು ದಿನ ಆಸ್ಪತ್ರೆಯಲ್ಲಿದ್ದು ರೂಮಿಗೆ ಬಂದೆನು. ಅಪ್ಪಯ್ಯನ ಕಣ್ಣುಗಳ ತಪಾಸಣೆ ಮಾಡಿದವರು ಡಾ. ತೇಲಂಗ. ಅವರು ಏಶಿಯಾದಲ್ಲೇ ಪ್ರಸಿದ್ಧರಾದ ನೇತ್ರತಜ್ಞರು. “ಇದು ಕ್ಯಾಟಯಾಕ್ಟ್ ಅಲ್ಲ.ರೆಟಿನಾ ಡಿಟ್ಯಾಚ್‌ಮೆಂಟ್. ಈ ವಯಸಿಗೆ ಅದನ್ನು ಅಟ್ಯಾಚ್ ಮಾಡುವುದು ಬೇಡ.” ಇದು ಡಾ.ತೇಲಂಗರ ಅಭಿಪ್ರಾಯ ಇನ್ನೂ ಅಲ್ಪ ಸ್ವಲ್ಪ ಕಾಲ ದೃಷ್ಟಿ ಕೆಡದಂತೆ ಕೆಲವು ಔಷಧ ಬರೆದುಕೊಟ್ಟರು. ನಾವು ಜನವರಿಯಲ್ಲಿ ತಿರುಗಿ ಊರಿಗೆ ಬಂದೆವು. ಬರುವಾಗ ಪೂನಾದಲ್ಲಿ ಹಂದೆಮಾವನ ಸೋದರ ಅಳಿಯ (ಮುಂದೆ ಅಳಿಯನೂ ಆದ) ಶ್ರೀಪಾದನಲ್ಲಿ ಉಳಿದೆವು. ಮುಂಬೈಯಲ್ಲಿ ರಾಧೆಯ ಅತ್ತೆ ಸೀತತ್ತೆ, ರಾಮಮಾವ ಕಮಟೆ ಇವರ ಮನೆಗೂ ಒಂದು ದಿನ ಹೋಗಿದ್ದೆವು. ಅವರಿಗೆ ತುಂಬಾ ಸಂತೋಷವಾಯಿತು. ಸೀತತ್ತೆ ಒಬ್ಬಳೇ ಐದಾರು ರೀತಿಯ ಪದಾರ್ಥ, ಎರಡು.ಮೂರು ಸಿಹಿ ಖಾರ ಮಾಡಿದ್ದಳು. ಅವರ ಹಿರಿಯ ಮಗಳು ರಾಜೇಶ್ವರಿ ಒಂದು ನೇಯ್ದ ಪ್ಲಾಸ್ಟಿಕ್ ಬ್ಯಾಗನ್ನು ರಾಧಕ್ಕನಿಗೆ ಎಂದು ನನ್ನ ಹತ್ತಿರ ಕೊಟ್ಟಿದ್ದಳು. ಅದು ಏನಿಲ್ಲವೆಂದರೂ ಇಪ್ಪತ್ತು ವರ್ಷ ತಾಳಿಕೆ ಬಂದಿತ್ತು. ನಂತರ ರಾಧೆ ಅದನ್ನು ತನ್ನ ತಾಯಿಗೆ ಕೊಟ್ಟಳಂತೆ. ನನ್ನ ತಮ್ಮ ಲಕ್ಷ್ಮೀನಾರಾಯಣನಿಗೆ ಬೈಂದೂರ ಹೆಣ್ಣು. ಹೆಸರು ಗಿರಿಜಾ. ಈ ಮದುವೆಯ ವಿಶೇಷವೆಂದರೆ ವಧೂವರರು ಒಬ್ಬರನ್ನೊಬ್ಬರು ನೋಡಿದ್ದು ಮದುವೆ ಮಂಟಪದಲ್ಲೇ. ಅವನಿಗೆ ಪುಸ್ತಕ ಎಂದರಾಯಿತು. ಅಚ್ಚುಕಟ್ಟಾಗಿ ತಮಾಷೆ ಮಾಡಬಲ್ಲ. ಇಬ್ಬರು ಗಂಡುಮಕ್ಕಳು. ರಾಮಪ್ರಸಾದ, ಶ್ಯಾಮಪ್ರಕಾಶ. ಆರ್.ಎಸ್.ಎಸ್.ನ ಕಟ್ಟಾ ಅಭಿಮಾನಿ. ತನ್ನ ಹೈಸ್ಕೂಲ ಜೀವನದಲ್ಲಿ ಒಂದು ದಿನವೂ ಸಂಘಪ್ರಾರ್ಥನೆ ತಪ್ಪಿಸಿದವನಲ್ಲ. ಬೆಂಗಳೂರಿನಲ್ಲಿ ನಡೆದ ಅಧಿವೇಶನಕ್ಕೆ ತೀರ್ಥಹಳ್ಳಿಯಿಂದ ಬಂದಿದ್ದ. ತನ್ನ ಶಿಸ್ತಿನ, ಧ್ಯೇಯದ ನಡತೆಯಿಂದ ಎಲ್ಲರ ಮನ ಗೆದ್ದಿದ್ದ. ಇದಾದ ಹತ್ತು ಹದಿನೈದು ವರ್ಷಗಳ ನಂತರ ಜಸ್ಟೀಸ್ ರಾಮಾಜೋಯಿಸರು ನನಗೆ ಸಿಕ್ಕಾಗ ಕೇಳಿದ ಪ್ರಶ್ನೆ: “ಲಕ್ಷ್ಮೀನಾರಾಯಣ ಭಟ್ಟರು ಎಲ್ಲಿದ್ದಾರೆ? ಏನು ಮಾಡ್ತಾರೆ?”.”ಬಿಷಪ್ಸ್ ಕ್ಯಾಂಡಲ್‌ಸ್ಟಿಕ್ಸ್”ನಲ್ಲಿ ಫಾದರ್ ಪಾತ್ರ ವಹಿಸಿ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡವ.

ಇವನ ತಮ್ಮ ಜಯರಾಮ. ತುಂಬಾ ಸೊಗಸುಗಾರ. ವಾರದ ಹಿಂದಿನ ತುಪ್ಪ ಇವನಿಗೆ ವಾಸನೆ ಎಂದು ನಾವು ತಮಾಷೆ ಮಾಡುತ್ತಿದ್ದೆವು. “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎನ್ನುವುದನ್ನು “ಉದಯಗಾವಲಿ ಮನ್ನ ಚೆಲುವ ಕನ್ನಡನಾಡು” ಎಂದು ಹಾಡುತ್ತಿದ್ದ. ನಾವು ಇವನನ್ನು ದೊಡ್ಡ ಒಳದಲ್ಲಿ ಕೂರಿಸಿ, ಬಾಗಿಲು ಹಾಕಿ, ಈಗ ಜಯರಾಮ ಭಟ್ಟರಿಂದ “ಉದಯವಾಗಲಿ” ರಾಜ್ಯ ಗೀತ, ರೇಡಿಯೋ ಕೊಡ್ಲೆಕೆರೆ ಗೋಕರ್ಣ ಎನ್ನುತ್ತಿದ್ದೆವು. ಇವನು ’ಉದಯಗಾವಲಿ’ ಸಾಕು ಎಂದರೂ ಹಾಡುತ್ತಿದ್ದ. ನಾವು ಬಾಗಿಲು ತೆರೆದರೆ ನಿಲ್ಲಿಸುತ್ತಿದ್ದ. ಓದುವುದರಲ್ಲಿ ಹಠವಾದಿ. ತನಗೆ ಬರದೇ ಇದ್ದುದನ್ನು ಬಲ್ಲವರಿಂದ ತಿಳಿದುಕೊಳ್ಳುತ್ತಿದ್ದ. ನನಗೆ, ಇವನಿಗೆ ತುಂಬ ಹೊಂದಿಕೆ ಇತ್ತು. ’ಸಣ್ಣ ಸಣ್ಣ ವಾಕ್ಯಗಳಲ್ಲಿ ಹೇಳು” ಎನ್ನುತ್ತಿದ್ದ, ಬರೆದುಕೊಳ್ಳುತ್ತಿದ್ದ. ಹಿಂದಿ ಎಂ.ಏ.ಪಾಸುಮಾಡಿದ. ನಮ್ಮ ಮನೆಯಲ್ಲಿ ಮೊದಲ ಎಂ.ಏ. ಇವನು. (ನಾನೂ ಹೌದು – ’ಎಂ.ಏ!’ ಭಟ್ಟ – ಹುಟ್ಟಿನಿಂದಲೇ! ಆದರೆ ನನ್ನದು ಮೊದಲ  ಬಿ.ಎಸ್.ಸಿಯ ದಾಖಲೆ). ಜಯರಾಮ ಹಿಂದಿಯಲ್ಲಿ ಪತ್ರ ಪದ್ಯ ರೂಪದಲ್ಲಿ ಬರೆಯುತ್ತಿದ್ದ, ಇವನು ಅಣ್ಣನಿಗೆ ಬರೆದ ಪತ್ರ ಓದಿ ಸ್ಫೂರ್ತಿಗೊಂಡು ನಾನು ಹಿಂದಿಯಲ್ಲಿ ಬರೆದ ಪದ್ಯ ಪತ್ರ:

ಜಯರಾಮ ಭಯ್ಯಾ ಪ್ಯಾರೇ ಮೇರೇ
ಜಗಹ ಜಗಹಪರ ಯಾದ ಹೈ ತೇರೇ!
ತೊರ್ಕೆ ಗ್ರಾಮ ಮೇ ಖತ್ ತೋ ಪಾಯಾ
ಪಾಕರ ಸುಖಕೇ ಜಲಧಿ ಮೇ ಸೋಯಾ!!

ಹೈಸ್ಕೂಲ್ ಅಸಿ.ಮಾ. ಆಗಿ ಸೇರಿ ಕಾಲೇಜು ಲೆಕ್ಚರರ್ ಆಗಿದ್ದು ಇವನ ಸಾಹಸ. ಜೋಗಾದಲ್ಲಿ ಹದಿನೈದಿಪ್ಪತ್ತು ವರ್ಷ ಸಹಶಿಕ್ಷಕ. ನಂತರ ಪ್ರಮೋಶನ್ ಪಡೆದು ಮೇಗರವಳ್ಳಿಗೆ ಹೋದ. ಸಣ್ಣ ತೊಂದರೆ ಬಂದರೂ ಅಧೀರನಾಗುತ್ತಿದ್ದ. ಅಪ್ಪಯ್ಯ, ಅಬ್ಬೆ ಸಲಹೆ ಕೇಳುವ. ತಂದೆ, ತಾಯಿಯರ ಸೇವೆ ಮಾಡುವುದರಲ್ಲಿ ಹಿಂದೆ ಬಿದ್ದವನಲ್ಲ. ಶ್ರೀ ಗುರುಗಳ ಪ್ರೀತಿಪಾತ್ರನಾದ ಶಿಷ್ಯ, ಸ್ನೇಹಪ್ರಿಯ.

ಜಯರಾಮನ ಕೆಳಗೆ ಮೂರ್ತಿ, ನರಸಿಂಹಮೂರ್ತಿ ಪೂರ್ತಿ ಹೆಸರು. ಪಠ್ಯ, ಪಠ್ಯೇತರ ಪುಸ್ತಕಗಳನ್ನು ಮೀರಿ ಇತರ ಪ್ರೌಢಪುಸ್ತಕಗಳನ್ನು ಹಿಂದಿ, ಸಂಸ್ಕೃತ, ಕನ್ನಡಗಳಲ್ಲಿ ಹೆಚ್ಚು ಓದಿದ ಮೂವರಲ್ಲಿ ಇವನೂ ಒಬ್ಬ (ಇನ್ನಿಬ್ಬರು ದೊಡ್ಡಣ್ಣ ಶಿವರಾಮ ಮತ್ತು ಲಕ್ಷ್ಮೀನಾರಾಯಣ). ಈ ಮೂವರಲ್ಲಿ ಯಾರನ್ನು ಕೇಳಿದರೂ ಸಾಹಿತ್ಯ ವಿಷಯದಲ್ಲಿ ಸಂಶಯಕ್ಕೆ ಪರಿಹಾರ ಸಿಗುತ್ತದೆ. ಲಕ್ಷ್ಮೀನಾರಾಯಣನಿಗೆ ನಿವೃತ್ತಿ ಆದ ಮೇಲೆ ಪುಸ್ತಕಗಳ ಮಧ್ಯದಲ್ಲೇ ವಾಸ. ಅಣ್ಣನಿಗೆ ’ಉಮರನ ಒಸಗೆ’ ಮೆಚ್ಚಿನದು. “ನಾಂ ಮಸೀದಿಗೆ ಬಂದುದೇಕೆಂದು ನಿಜವ ಪೇಳ್ವೊಡೆ ಪಿಂತೆ ನಾಂ ಕದ್ದ ಮಡಿಗದ್ದುಗೆ ಹಳತಾಗಿಹುದು”. ಮಸೀದಿಯಲ್ಲಿ ನಡೆಯುವ ವಾದನಿವಾದ ವಾಗ್ ಝರಿ, ಭಾರವಾದ ಶಬ್ದಗಳನ್ನು ಕೇಳಿ “ನಾಂ ಪೋದ ಬಾಗಿಲೊಳೆ ಪಿಂತಿರುಗಿ ಬಂದೆನ್. “.ದೊಡ್ಡ ಭಾಷಣಗಳನ್ನು ಕೇಳಿ ಬಂದ ಮೇಲೆ “ಅಣ್ಣಾ, ಹೇಗಿತ್ತು?” ಎಂದರೆ “ಪೋದ ಬಾಗಿಲೊಳೆ ಪಿಂತಿರುಗಿ ಬಂದೆನ್” ಎನ್ನುತ್ತಿದ್ದ.

ಮೂರ್ತಿ ಆರರಲ್ಲಿ ಚಿಕ್ಕವನು. ಪನ್ನಿತಾತಿ ತಲೆಗೆ ಕಂಚಿ ಟೊಪ್ಪಿ ಎಂದವ ಇವನೇ! “ಅಚ್ಚುಮ” ಎಂದರೆ ಅಳುತ್ತಿದ್ದನ ಮೂರ್ತಿ. ಅದು ಅವನಿಗೆ ಪ್ರೀತಿಯಿಂದ ಕರೆಯುತ್ತಿದ್ದ ಸಂಕ್ಷಿಪ್ತನಾವು! (ಶಾರ್ಟ್ ಫಾರ್ಮ್). ಅಬ್ಬೆಯೇ ಕೆಲಸಲ ಅವನನ್ನು ತೀಡಿಸಲು “ಅಚ್ಚು ಮೂರ್ತಿಗೆ ಹಸಿ ಫಟಿಂಗಗೆ” ಸ್ವಯಂಕೃತ ಪದ್ಯ ಹೇಳುತ್ತಿದ್ದಳು. ಇವನು ಎರಡು ಸಲ ಅಳುತ್ತಿದ್ದ. ಎರಡು ಸಲ ಏಕೆ ಎಂದರೆ ಅಚ್ಚ ಹೇಳಿದ್ದಕ್ಕೆ ಮತ್ತು ಹಸಿಫಟಿಂಗ ಎಂದುದಕ್ಕೆ – ಅನ್ನುತ್ತಿದ್ದ.

ರಾಜಾರಾಮ,ಮೂರ್ತಿಗೆ ಏಳು ವರ್ಷಗಳಾದಾಗ ಜನಿಸಿದವ. ಇನ್ನೊಬ್ಬರ  ತಂಟೆಗೆ ಎಂದೂ ಹೋದವನಲ್ಲ. ಎತ್ತರದ ಅಚ್ಚುಕಟ್ಟಾದ ವ್ಯಕ್ತಿತ್ವ. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಹೊರಗಿನಿಂದ ಓದಿ ಸ್ನಾತಕೋತ್ತರ ಪದವಿಯನ್ನು ಪಡೆದ ಪರಿಶ್ರಮಿ. ಮನೆಯಲ್ಲಿ ನಾವೆಲ್ಲ ಸೇರಿದಾಗ ಯಕ್ಷಗಾನದ ವಿಭಿನ್ನ ಪಾತ್ರಗಳನ್ನು ಅಭಿನಯಿಸಿ ತೋರಿಸುತ್ತಿದ್ದ. ರಾಜಾರಾಮ ಮಾಸ್ತರು ಎಂದು ಎಲ್ಲರೂ ಕರೆಯುವುದು ಇವನನ್ನು. ಎಲ್ಲರೊಡನೆ ಅಷ್ಟಾಗಿ ಬೆರೆಯುವವನಲ್ಲ. ಬೆರೆತವರನ್ನು ಮರೆತವನಲ್ಲ. ಹಂದೆ ಮಾವನ ಅಳಿಯ ಶ್ರೀಪಾದ ಇವನ ಗಳಸ್ಯ ಕಂಠಸ್ಯ ಸ್ನೇಹಿತ. ಶ್ರೀಪಾದ ನಮಗೂ ದೂರದವನಲ್ಲ. ನನಗೆ ನೆಚ್ಚಿನ ವಿದ್ಯಾರ್ಥಿಯೂ ಹೌದು. ಒಳ್ಳೇ ಚಿತ್ರಕಾರ. ಒಂದು  ಋಷಿ ಪಂಚಮಿ ಹಬ್ಬಕ್ಕೆ ನಮ್ಮ ಮನೆಯ ಗೋಡೆಯ ಮೇಲಿದ್ದ ಕರಿಹಲಗೆಯ ಮೇಲೆ ನಾಕೈದು ಋಷಿಗಳ ಚಿತ್ರ ಬರೆದಿದ್ದ. ನಮ್ಮ ರಾಜಾರಾಮ ಚಿತ್ರ ಬರೆದವನಲ್ಲ. ಆದರೆ ಅದನ್ನು ಮೆಚ್ಚುವ, ನಾಲ್ಕು ಜನರಿಗೆ ತೋರಿಸಿ ಸಂತೋಷಪಡುವ ಗುಣವಂತ. ನಾವೆಲ್ಲ ರಾಜಾರಾಮನನ್ನು ಕರೆಯುವುದು ’ರಾಜ’ ಎಂದು. ದೊಡ್ಡಣ್ಣನಿಗೆ ರಾಜ ಎಂದರೆ ಎಲ್ಲಿಲ್ಲದ ಅಕ್ಕರೆ. ಗೌರಕ್ಕನ ’ಹುಬ್ಬಳ್ಳಿ ರಾಜ’.

ನಾವು ಒಂಬತ್ತು ಮಕ್ಕಳಲ್ಲಿ ಕೊನೆಯವ ವಸಂತ.ಸಹಜವಾಗಿಯೇ ಎಲ್ಲರ ಪ್ರೀತಿಪಾತ್ರ.ಸೇವಾ ಮನೋಭಾವ ಇವನ ವ್ಯಕ್ತಿತ್ವದ ವಿಶೇಷ ಅಂಶ.ಇವನಿಗೂ ಕಗ್ಗ,ಒಸಗೆಯ ಪದ್ಯಗಳು ಬಾಯಲ್ಲಿ.ಗೋಕರ್ಣದ ಅರ್ಬನ್ ಬ್ಯಾಂಕಲ್ಲಿ ಸೇವೆ ಸಲ್ಲಿಸಿ ನಿವೄತ್ತ.ಮಾತು ಮಿತ,ಹಿತ.ಏನನ್ನೇ ಆಗಲಿ,ಮಾಡಿ ತೋರಿಸುವವ ಹೊರತೂ ಮಾತಾಡಿ ಸಮಯ ಕಳೆಯಬಾರದು ಎಂಬ ನಡತೆಯವನು.ಇವನ ಅಚ್ಚುಕಟ್ಟು ಎಲ್ಲರಿಗೂ ಅಚ್ಚುಮೆಚ್ಚು.

ದೊಡ್ಡಣ್ಣನಿಗೆ ಮೂರು ಹೆಣ್ಣು ಮಕ್ಕಳುಃ ಪುಷ್ಪ, ನಾಗರತ್ನ ಮತ್ತು ಸೀತಾಲಕ್ಷ್ಮಿ. ಗಜಣ್ಣನಿಗೆ ಮೂವರು ಗಂಡು ಮಕ್ಕಳು. ಹಿರಿಯವನು ಅನಂತರಾಜ ಗುಣಾಢ್ಯನಾಗಿದ್ದ. ಊರಿನವರಿಗೆಲ್ಲ ರಾಜಣ್ಣನಾಗಿ, ಯಕ್ಷಗಾನ ನಟನಾಗಿ ಖ್ಯಾತಿ ಪಡೆದವ.ಒಬ್ಬ ಸ್ವಯಂ ಸೇವಕ. ಊರಿನವರು ಯಾರೇ ಕಾಯಿಲೆ ಬೀಳಲಿ, ಇವನ ಸಹಾಯ ಕೇಳಿದರೆ ಖಂಡಿತ ಮಾಡುತ್ತಿದ್ದ. ಹೊನ್ನಾವರದ ಡಾ.ಭಾಸ್ಕರ, ಮಣಿಪಾಲದ ಡಾಕ್ಟರುಗಳು- ಎಲ್ಲೆಡೆಗೂ ರಾಜಣ್ಣ ಎಂದೇ ಪರಿಚಿತನಾಗಿದ್ದ. ಬಡಬಗ್ಗರ ಸಹಾಯಕ್ಕೆ ಎಂದೂ ಹಿಂದೆ ಬೀಳುತ್ತಿರಲಿಲ್ಲ. ಊರಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರಾರಂಭದಿಂದ ವಿಸರ್ಜನೆವರೆಗೂ ರಾಜಣ್ಣ ಬೇಕು. ಲಯನ್ಸ್ ಕ್ಲಬ್ಬಿನ, ಯುವಕ ಸಂಘದ, ವೈದ್ಯಕೀಯತಪಾಸಣಾ ಕೇಂದ್ರದಲ್ಲಿ ರಾಜಣ್ಣನದು ಸಿದ್ಢ ಹಸ್ತ. ಎಲ್ಲರ ಪ್ರೀತಿಗೆ ಪಾತ್ರನಾದ ರಾಜಣ್ಣ, ಕಾಯಿಲೆ ಬಿದ್ದ.ಎಲ್ಲರನ್ನೂ ಮಣಿಪಾಲಕ್ಕೆ ಕರೆದೊಯ್ಯುತ್ತಿದ್ದ ರಾಜಣ್ಣ, ಅವರು ಆರೋಗ್ಯವಂತರಾದ ಮೇಲೆ ಊರಿಗೆ ಕರೆದುಕೊಂಡು ಬಂದು ಮುಟ್ಟಿಸುತ್ತಿದ್ದ ರಾಜಣ್ಣ – ಆದರೆ ಅವನನ್ನು ಮಣಿಪಾಲದವರೆಗೆ ಕರೆದೊಯ್ಯಲಾಗಲಿಲ್ಲ. ದುರ್ದೈವ, ನಡುಹಾದಿಯಲ್ಲೇ ಅಸುನೀಗಿದ.

ಶ್ರಾವಣದಲ್ಲಿ ಹಂದೆಮಾವನೊಟ್ಟಿಗೆ ಹೋಗಿ ಹೆಣ್ಣು ನೋಡಿ ಒಪ್ಪಿಬಂದೆನಷ್ಟೆ? ನಾನು ಒಪ್ಪಿದ್ದೇನೆಂದು ತಂದೆಯವರಿಗೂ ತಿಳಿಸಿಯಾಗಿದೆ. ಮಾರ್ಗಶೀರ್ಷ ಶುದ್ಧ ಪಂಚಮಿಯಂದು ಮದುವೆ ಎಂದು ನಿರ್ಣಯಿಸಿದರು. ಮೂರೂರು, ಸಿರ್ಸಿ, ಹುಬ್ಬಳ್ಳಿ ಎಲ್ಲಾ ಕಡೆ ಮದುವೆ ಕರೆಯ ಹೋಯಿತು. ಕರ್ಮಾಂಗಗಳು ತದಿಗೆಯಿಂದಲೇ ಪ್ರಾರಂಭ. ಮಧ್ಯಾಹ್ನ ನೆಂಟರಿಗೆಲ್ಲಾ ಊಟ. ಮಧ್ಯಾಹ್ನ ೦೨೩೦ಕ್ಕೆ ದಿಬ್ಬಣವು ಓಲಗಸಮೇತ ತದಡಿಗೆ ಸ್ಪೆಶಲ್ ಬಸ್ಸಿನಲ್ಲಿ ಹೊರಟಿತು. ಸ್ಪೆಶಲ್ ದೋಣಿಯಲ್ಲಿ ಅಘನಾಶಿನಿಗೆ ಪ್ರಯಾಣ. ದೋಣಿಯಲ್ಲಿ ಹುಲಿಯ ಗರ್ನಾಲು ಹೊಡೆಯುತ್ತಿದ್ದ. ಬೆಂಕಿ ಹಚ್ಚಿ ಗರ್ನಾಲು ಎಸೆಯುತ್ತಿದ್ದ. ಬೀಡಿ ಬಾಯಿಗೆ ಇಡುತ್ತಿದ್ದ. ಹೊಸಮನೆ ದೊಡ್ಡಮಾಣಿ” ಏ ಹುಲಿಯಾ, ಗರ್ನಾಲು ಹಚ್ಚಿ ಬಾಯಿಗಿಟ್ಟುಕೊಂಡು ಬೀಡಿ ಹೊಳೆಗೆ ಎಸೆವೆ.” ಎಲ್ಲಾ ನಗು. ದೊಡ್ಡದೊಂದು ತೆರೆ ಬಂದು ದೋಣಿಗೆ ಅಪ್ಪಳಿಸಿದಾಗ ನಿಂತಿದ್ದ ಜಯರಾಮ ಭಾವ, ಶಂಕರಣ್ಣ ಕೆಳಗೆ (ದೋಣಿ ಒಳಗೆ)ತಂದೆ, ತಾಯಿ, ಬಂಧುಬಳಗವನ್ನು ದುಃಖದ ಮಡುವಿನಲ್ಲಿ ಬಿಟ್ಟು ಹೋದ. ಆದರೂ ತಮ್ಮ ಮಗ ಊರಿನ ಎಲ್ಲರ ಪ್ರೀತಿಗೆ ಪಾತ್ರನಾಗಿ ಸಾರ್ಥಕ ಜೀವನ ಸಾಗಿಸಿದ ಎಂಬ ಸಮಾಧಾನ ಕೊಟ್ಟು ಹೋದ. ನಮ್ಮೆಲ್ಲರನ್ನು – ಅಂದರೆ ನಾವು ದೊಡ್ಡಪ್ಪ ಚಿಕ್ಕಪ್ಪಂದಿರನ್ನು, ಅವನ ತಮ್ಮಂದಿರನ್ನು, ಅಪಾರ ಬಂಧುಮಿತ್ರರನ್ನು ಅಗಲಿ ಅಕಾಲದಲ್ಲೇ ಅವನು ನಡೆದ ದೂರ ದೂರ……

ನನಗೆ ನಾಲ್ಕು ಮಕ್ಕಳು: ಎರಡು ಗಂಡು, ಎರಡು ಹೆಣ್ಣು. ಲಕ್ಷ್ಮೀನಾರಾಯಣನಿಗೆ ಎರಡು ಗಂಡು ಮಕ್ಕಳು. ಜಯರಾಮ, ನರಸಿಂಹಮೂರ್ತಿ ಇವರಿಗೂ ಎರಡು ಗಂಡು ಮಕ್ಕಳು. ರಾಜಾರಾಮನಿಗೆ ಒಬ್ಬಳು ಮಗಳು. ವಿಶ್ವನಾಥನಿಗೆ ಎರಡು ಗಂಡು ಮಕ್ಕಳು. ಕಿರಿಯ ವಸಂತನಿಗೆ ಒಂದು ಗಂಡು, ಒಂದು ಹೆಣ್ಣು ಮಗಳು. ಇದು ಕೊಡ್ಲೆಕೆರೆ ಅನಂತಭಟ್ಟರ ವಂಶವೃಕ್ಷದ ಕಿರುಪರಿಚಯ. ಇನ್ನು ಅವರ ಸೊಸೆಯರ ಹೆಸರು: ಮಹಾಲಕ್ಷ್ಮಿ, ಭೂಮಿದೇವಿ, ರಾಧೆ, ಗಿರಿಜಾ, ಜಯಲಕ್ಷ್ಮಿ, ಇಂದಿರಾ, ಲಲಿತಾ, ಸಾವಿತ್ರಿ ಮತ್ತು ಸುಮನಾ. ನಿಲ್ಲಿ, ಒಂಬತ್ತು ಆಯಿತೋ, ಇಲ್ಲವೋ, ನೋಡುತ್ತೇನೆ. ಎಣಿಕೆ ಸರಿಯಾಗಿದೆ. ಅನಂತ ಪರಿವಾರ ಅನಂತಮಕ್ಕೆ.

ನಮ್ಮ ತಂದೆ ಅನಂತ ಭಟ್ಟರು,ಅವರ ತಂದೆ,ಅಂದರೆ ನಮ್ಮ ಅಜ್ಜ ಶಿವರಾಮ.ಶಿವರಾಮಜ್ಜನಿಗೆ ಅಣ್ಣ ದತ್ತಾತ್ರಯ,ತಮ್ಮ ಹರಿಹರ.ಇವರು ಅನ್ಯೋನ್ಯವಾಗಿದ್ದರು.ಮುಂದೆ ಪಾಲಾಗುವಾಗ ನಡೆದದ್ದು: ಮನೆಯಲ್ಲಿ ಮೂರು ಕುಟ್ಟುಕಲ್ಲುಗಳಿದ್ದವಂತೆ. (ಕವಳ ಕುಟ್ಟುವುದು). ಅವನ್ನು ತಲಾ ಒಬ್ಬರಂತೆ ಮೊದಲಿಗೆ ಹಂಚಿಕೊಂಡರಂತೆ. ಅದು ಅವರ ತಮಾಷೆಯ ಜೀವನ! ಬಳಿಕ ಹಬ್ಬಗಳನ್ನು ಹಂಚಿಕೊಂಡರು. ಗಣಪತಿ ಹಬ್ಬ ದತ್ತಜ್ಜನ ಪಾಲಿಗೆ, ನವರಾತ್ರಿ ನನ್ನಜ್ಜ ಶಿವರಾಮನದು, ಅನಂತವ್ರತ ಹರಿಹರಜ್ಜನದು ಹೀಗೆ.

ಇವರಲ್ಲೆಲ್ಲಾ ನಮ್ಮಜ್ಜ ಶಿವರಾಮಜ್ಜ ಒಳ್ಳೆ ವ್ಯವಹಾರಸ್ಥನಂತೆ. ನಮ್ಮ ಮಠದ ಆಗಿನ ಗುರುಗಳು ತೀರ್ಥಹಳ್ಳಿಯಲ್ಲಿ ನಡೆಯುತ್ತಿದ್ದ ಒಂದು ವ್ಯಾಜ್ಯಕ್ಕೆ ಶಿವರಾಮನೇ ಸರಿ ಎಂದು ಹೇಳಿ ಕಳಿಸಿ ಕರೆಸಿಕೊಂಡರಂತೆ. ಕೊಟ್ಟಿದ್ದು ಬರೀ ಕಾಗದ, ಪೆನ್ಸಿಲ್. ಇಷ್ಟರಿಂದಲೇ ಈಗಿನ ಮಹತ್ತರವಾದ ಕಾಗದ ಪತ್ರಗಳನ್ನು ಸಂಗ್ರಹಿಸಿದ ಚಾಣಾಕ್ಷ ನಮ್ಮಜ್ಜ. ತಮ್ಮ ಕೈತಪ್ಪಿದ್ದ ತೀರ್ಥಹಳ್ಳಿ ಮಠಕ್ಕೆ ಪುನಃ ಪ್ರವೇಶ ಪಡೆದದ್ದು ಶ್ರೀ ಶಿವರಾಮಭಟ್ಟರ ಬುದ್ಧಿವಂತಿಕೆ, ನಿಸ್ಸೀಮ ನಿಶಿತಮತಿ ಎಂದು ಹೇಳುತ್ತಿದ್ದರಂತೆ. ಅಲ್ಲಿಯ ಉತ್ಪನ್ನ ಸೀಮಿತವಾದದ್ದು. ಒಂದು ಪತ್ರದ ಪ್ರಕಾರ ಶಿವರಾಮ ಭಟ್ಟರು ನಾಲ್ಕು ಕೆಲಸದವರನ್ನು ಇಟ್ಟುಕೊಂಡಿದ್ದರಂತೆ. “ಯಾಕೆ ಹಾಗೆ?” ಎಂದರೆ ಪ್ರಸಂಗವಶಾತ್ ತಾನು ಕಾಲವಶನಾದರೆ ಆ ನಾಲ್ಕು ಜನರಾದರೂ ತನ್ನ ಉತ್ತರಕ್ರಿಯೆಗೆ ಇರಲಿ ಎಂದು ಈ ವ್ಯವಸ್ಥೆ ಎಂದಿದ್ದರಂತೆ. ಅಂದರೆ ಅಷ್ಟು ಜನವಿರೋಧ ಆ ಸಮಯದಲ್ಲಿ ಎದುರಿಸಬೇಕಾಗಿ ಬಂದಿತ್ತು! ಮುಂದೆ ಅವರು ತೀರ್ಥಹಳ್ಳಿಯಲ್ಲೇ ಕಾಲವಶರಾದರು.

ಶ್ರೀ ಶ್ರೀಗಳವರು ನಮ್ಮ ತಂದೆಯವರನ್ನು ಕರೆದು ಅವರ ಕೆಲಸವನ್ನು ಮುಂದುವರಿಸಲು ಹೇಳಿದಾಗ ಮೊದಲು ಅಳುಕಿದರೂ ನಮ್ಮಪ್ಪ – ವ್ಯವಹಾರದ ಜವಾಬ್ದಾರಿ ತೆಗೆದುಕೊಂಡರು. ಅಲ್ಲಿ ಮಠ ಮತ್ತು ಮಠದಲ್ಲಿ ಲಕ್ಷ್ಮೀನರಸಿಂಹ ದೇವಸ್ಥಾನ. ಮಠದ ಕಟ್ಟಡ ಚಂದ್ರಶಾಲೆ ಸರ್ಕಾರದ್ದು. ಲಕ್ಷ್ಮೀನರಸಿಂಹ ದೇವಸ್ಥಾನ ಮತ್ತು ದೇವಸ್ಥಾನದ ಹೆಸರಿನಲ್ಲಿರುವ ಎಪ್ಪತ್ತೈದು ಎಕರೆ ಜಮೀನು ಶ್ರೀಗಳದು. ಮುಜರಾಯಿ ಇಲಾಖೆಯದು ಎಂಬ ವಿವಾದ. ಸರಿ, ಕೋರ್ಟ್ ವ್ಯಾಜ್ಯ. ಮೂರನೇಯತ್ತೆ ಪಾಸಾದ ನಮ್ಮ ತಂದೆ ಈ ಕೋರ್ಟ್ ವ್ಯವಹಾರ ನಡೆಸಬೇಕು. ಧೈರ್ಯದಿಂದ ನಡೆಸಿದರು. ಬೆಂಗಳೂರಿನಲ್ಲಿ ಶ್ರೀಗಳವರ ಚಾತುರ್ಮಾಸ್ಯವ್ರತ ಏರ್ಪಡಿಸಿದರು. ಅಧಿಕಾರಿಗಳ ಪರಿಚಯ ಮಾಡಿಕೊಂಡರು. ಈ ವಿಷಯದಲ್ಲಿ ಅವರಿಗೆ ನೆರವಾದವರು ಸಾಗರದ ಶ್ರೀ ಶ್ರೀಕಂಠಯ್ಯ ಎನ್ನುವ ಕಾಯಿದೆ ತಜ್ಞರು, ವ್ಯವಹಾರಸ್ಥರು. ಅಂತೂ ಪ್ರಕರಣ ಮಠದಂತೆ ಆಯಿತು. ಶ್ರೀ ಶ್ರೀಕಂಠಯ್ಯನವರಿಗೆ ಗುರುಭಕ್ತತಿಲಕ ಎನ್ನುವ ಬಿರುದನ್ನು ಕೊಡಲಾಯಿತು-  ಶ್ರೀ ರಾಘವೇಂದ್ರ ಭಾರತಿಗಳವರನ್ನು ಶಿಷ್ಯರನ್ನಾಗಿ ಪಡೆದ ಸಮಾರಂಭದಲ್ಲಿ. ಅವರಿಗೆ ಆ ಬಿರುದು ಕೊಡುವಾಗ ಸಣ್ಣ ಅಪಸ್ವರ: ಅವರು ಹವ್ಯಕ ಬ್ರಾಹ್ಮಣರಲ್ಲ ಎಂದು. ಆಗ ಇನ್ನೂ ಕೆಲವರು ವಾದಿಸಿದರು, ಅವರು ಹವ್ಯಕರೇ ಆದರೆ ಈ ಬಿರುದು ಕೊಡುವುದು ತಪ್ಪು. ಎಲ್ಲ ಹವ್ಯಕರೂ ಗುರುಭಕ್ತರೇ. ಆದರೆ ಶ್ರೀಕಂಠಯ್ಯನವರು ಹವ್ಯಕರಲ್ಲ. ಆದುದರಿಂದ ಇದು ಮಾನ್ಯ. ಈ ವಾದ ಒಪ್ಪಿತವಾಯಿತು. ಹೀಗೆ ತೀರ್ಥಹಳ್ಳಿ ಮಠ ನಮ್ಮದಾಯಿತು. ಶ್ರೀರಾಘವೇಂದ್ರಭಾರತಿಗಳ ಕಾಲದಲ್ಲಿ ಮುಖ್ಯಮಠ ಎಂಬ ಮಾನ್ಯತೆಯನ್ನೂ ಪಡೆಯಿತು.

ಕೋಟಿರಾಜ ನಾಗರಾಜರ ಕಥೆ

ಮೊಮ್ಮಕ್ಕಳೆಲ್ಲಾ ತಾತಮ್ಮನಿಗೆ ದಿನಾ ಗಂಟು ಬೀಳುವರು, “ತಾತಮ್ಮಾ ಕಥೆ ಹೇಳೆ, ಕಥೆ ಹೇಳೆ”. ತಾತಮ್ಮನದು ಒಂದೇ ಉತ್ತರ: “ಕತೆ ಕತೆ ಕಾರಣ ಬೆಕ್ಕಿನ ತೋರಣ. ಮಕ್ಕಳಿಗೆಲ್ಲಾ ಬೆಕ್ಕಿನ ಪಳದ್ಯ”. ಈ ಪದ್ಯದ ರೂಪಾಂತರವೂ ಒಂದಿತ್ತು. “ಕತೆ ಕತೆ ಕಾರಣ, ಮಾವಿನ ತೋರಣ, ಮಕ್ಕಳಿಗೆಲ್ಲಾ ಹೋಳಿಗೆ ಹೂರಣ”. ಅಂತೂ ಕಥೆ ಶುರುವಾಗುತ್ತಿತ್ತು. ಕೋಟಿರಾಜ ಮತ್ತು ಐವರು ಸಹೋದರರು ತುಂಬಾ ವಿದ್ಯಾವಂತರು. ಶೃಂಗೇರಿ ಜಗದ್ಗುರುಗಳ ಸಹಪಾಠಿ ಮಹಾಬಲೇಶ್ವರ ಶಾಸ್ತ್ರಿಗಳು ಇವರ ಧರ್ಮಪತ್ನಿ ಸರಸ್ವತಿಬಾಯಿ. ಸರಸ್ವತಿಬಾಯಿ ಗರ್ಭಿಣಿ ಇರುವಾಗಲೇ ಮಹಾಬಲ ಶಾಸ್ತ್ರಿಗಳು ಸ್ವರ್ಗಸ್ಥರಾದರು. ಮರಣಾನಂತರ ಕನ್ಯಾರತ್ನ ಜನನ. “ತಾತಮ್ಮ, ಅವಳ ಹೆಸರೇನು?” ಕೇಳಿದವ ಅಕ್ಕಿಮಾಣಿ. “ಸುಮ್ಮಂಗಿರು, ಏನು ಗಡಬಡೆ ನಿಂದು, ಏಳು ತಿಂಗಳಿಗೆ ಹುಟ್ಟಿದವರ ಹಾಗೆ ಗಡಬಡೆ ಮಾಡಡ”. ಅಕ್ಕಿ ಮಾಣಿ ಸುಮ್ಮನುಳಿದ.

ಇತ್ತ ನಾಗಪುರಿಯಲ್ಲಿ ನಾಗರಾಜನಿಗೆ ಮೂರು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳು. ಹಿರಿಯವಳನ್ನು ದೇವ ರಾಜ್ಯಕ್ಕೂ, ಎರಡನೆಯವಳನ್ನು ನೂತನ ರಾಜ್ಯಕ್ಕೂ, ಮೂರನೆಯವಳನ್ನು  ಮಾರ್ಕಂಡೇಯನಿಗೂ ಕೊಟ್ಟು ಮದುವೆ ಮಾಡಿದರು. ಎರಡನೇ ಶಿವರಾಜನಿಗೆ ಪರ್ವತನಗರದ ಪಾಷಾಣಗಿರಿಯ ಹೆಣ್ಣು. ಈ ಸೀತಾಮಾತೆ ಗಂಡು ಮಗುವನ್ನು ಪ್ರಸವಿಸಿ ಐದಾರು ತಿಂಗಳಲ್ಲಿ ಸ್ವರ್ಗಸ್ಥಳಾದಳು. ಶಿವರಾಜ ಎರಡನೇ ಮದುವೆ ಒಲ್ಲೆ ಎಂದ. “ತಾತಮ್ಮ, ಇವನ ಹೆಸರು ಏನು?” ಮಕ್ಕಳಲ್ಲಿ ಒಬ್ಬರ ಪ್ರಶ್ನೆ. “ಮಧ್ಯೆ ಬಾಯಿ ಹಾಕಡ, ಇವತ್ತಿಗೆ ಇಷ್ಟು ಸಾಕು” ಎಂದು ಎಲ್ಲವನ್ನೂ ಮಲಗಿಸಿದಳು. ತಾತಮ್ಮ ತಂಗಿ ಮನೆ ಅಗಸೆಗೆ ನಾಲ್ಕೈದು ದಿನ ಪಾರು! ಮತ್ತಾವತ್ತೋ ಕಥೆ ಮುಂದುವರಿಯುವುದು…

ಗೋಕರ್ಣದಲ್ಲಿ ಅಜ್ಜೀಬಳ ಹೆಗಡೆಯವರ ಕಡೆಯ ಸಂತರ್ಪಣೆ. ಊಟ ದೇವಸ್ಥಾನದ ಚಂದ್ರಶಾಲೆಯಲ್ಲಿ. ಊಟಕ್ಕೆ ಬಾಳೆ  ಹಾಕಿದ್ದಾರೆ. ಕೋಟಿರಾಜನ ಮನೆ ಕನ್ಯೆ ಊಟಕ್ಕೆ ಬಂದಿದ್ದಾಳೆ, ಗೆಳತಿಯರೊಂದಿಗೆ. ಊರ ಯುವಕರೆಲ್ಲಾ ಬಡಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಊಟ ನಡೆದಿತ್ತು. ಶಿವರಾಜನ ಮಗ ಪಾಯಸ ಬಡಿಸಲು ಉಗ್ಗ ಹಿಡಿದು ನಡೆದ. ಎಲ್ಲರಿಗೂ ಪಾಯಸ ಬಡಿಸಿದ. ಅಕಸ್ಮಾತ್ತೋ, ಬೇಕೆಂತಲೋ – ಗೊತ್ತಿಲ್ಲ – ಕೋಟಿ ರಾಜನ ಮಗಳಿಗೆ ಒಂದೇ ಸಲ ಎರಡು ಹುಟ್ಟು ಬಡಿಸಿದ. ಇದನ್ನು ಗೆಳತಿಯರು ನೋಡಿದರು. ಸರಿ, ಊರೆಲ್ಲಾ ಗುಲ್ಲು. ಕೋಟಿರಾಜನ ಮಗಳಿಗೂ, ಶಿವರಾಜನ ಮಗನಿಗೂ ಪ್ರೀತಿಯಿದೆ ಎಂದು. ಹಾಗಾದರೆ ಪ್ರೇಮವಿವಾಹ ಎಂದ ಗಜಣ್ಣ. ” ಆದದ್ದೊ, ಅಪ್ಪುದೋ?” ಎಂದೆ ನಾನು. “ನಿಂಗ್ಳು ಹೀಂಗೆಲ್ಲಾ ಅಡ್ಡಾತಿಡ್ಡಾ ಮಾತನಾಡಿದರೆ ಕಥೆ ಖೈದ್” ಎಂದಳು ಹುಸಿಕೋಪದಿಂದ ತಾತಮ್ಮ. “ತಪ್ಪಾಯಿತು, ತಾತಮ್ಮಾ, ದಯಮಾಡಿ ಕಥೆ ಮುಂದುವರಿಸು” ಎಂದ ಮೇಲೆ ಮತ್ತೆ ಹೇಳತೊಡಗಿದಳು. “ಸರಿ, ಹಿರಿಯರು ಮಾತನಾಡಿ ಲಗ್ನ ನಿಶ್ಚಯಿಸಿದರು. ಮಂಟಪದಲ್ಲಿ “ಗಣೇಶರಾಜಸ್ಯ ಪೌತ್ರಂ ಶಿವರಾಜಸ್ಯ ಪುತ್ರಾಣಾಂ ಅನಂತ ನಾಮ್ನಾವರಾಯ…… ಪೌತ್ರಿ ಮಹಾಬಲ ರಾಜಸ್ಯ ಪುತ್ರೀ ಸುಬ್ಬಿನಾಮ್ನಾನಂ ಕನ್ಯಾಯಾಂ” ಎಂದು ಮಂತ್ರ ಪಠಿಸಿದರು ಎಂದ ಕೂಡಲೇ ನಾವೆಲ್ಲರೂ “ಓ,ಓ, ಅಪ್ಪಯ್ಯ ಅಬ್ಬೆ ಮದುವೆ” ಎಂದು ಕುಣಿದಾಡಿದೆವು. ಒಳಗೆ ಮಲಗಿದ್ದ ಅಪ್ಪಯ್ಯ ಅಬ್ಬೆ ಹೊರಬಂದು ನೋಡಿದರೆ ಮಕ್ಕಳ ಕುಣಿತ “ಅಪ್ಪಯ್ಯ, ಅಬ್ಬೆ ಮದುವೆ, ಕೋಟಿರಾಜನ ಮಗಳು, ನಾಗರಾಜನ ಮಗನಿಗೂ ಮದುವೆ. ಕೋಟಿರಾಜನ ಮಗಳಿಂದ ಸಂತಾನಕೋಟಿಯಾಗಲಿ. ನಾಗಸಂತಾನ ಅನಂತವಾಗಲಿ ಎಂದ ದೊಡ್ಡಣ್ಣ. ‘ನಾಗರಾಜ ಸಂತತಿದಾಯಕ’ ಎಂದೂ ಸೇರಿಸಿದ.

ಮುಂದುವರೆಯುವುದು….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಯಾಕನ್ನಡಿ ಮತ್ತು ಬಿಳಿಯ ಹುಡುಗಿ
Next post ಹಾವು ತುಳಿದೆನೇ ಮಾನಿನಿ

ಸಣ್ಣ ಕತೆ

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…