ಪಾತ್ರವರ್ಗ
* ಶ್ವೇತಸುಂದರಿ
* ಭುವನ ಸುಂದರಿ (ರಾಣಿ)
* ತಾಮ್ರಾಕ್ಷ (ಕಟುಕ)
* ಧೂಮ್ರಾಕ್ಷ (ಕಟುಕ)
* ಹುಲಿ ಮತ್ತು ಕರಡಿ
* ಏಳು ಜನ ಕುಳ್ಳರು
* ರಾಜಕುಮಾರ
* ಹನ್ನೆರಡು ಮಕ್ಕಳು
ದೃಶ್ಯ -೧
(ಹಾಡಿನ ಲಯಕ್ಕನುಗುಣವಾಗಿ ಮಕ್ಕಳ ಪ್ರವೇಶ)
ಹಾಡು : ಈ ಜಗವೇ ನಾಟಕರಂಗ (೨)
ನಾನು ನೀನು ಅವಳು ಅವನು
ಎಲ್ಲರು ಪಾತ್ರಗಳು (೨)
ಅಳುವಿದೆ ನಗುವಿದೆ
ನಲಿವಿದೆ ನೋವಿದೆ
ಜೀವನ ನಾಟಕದಲ್ಲಿ
ಬಂದದ್ದೆಲ್ಲಾ ಬರಲಿ ಎಂದು
ಎದುರಿಸಿ ಜೀವನವನ್ನು || ಈ ಜಗವೇ||
ನಾಲ್ಕು ದಿನದ ಬಾಳುವೆಯಲ್ಲಿ
ಮತ್ಸರ ಹೊಟ್ಟೆಕಿಚ್ಚುಗಳು
ಸಿಂಡರಿಸಿದ ಈ ಎಲ್ಲಾ ಮುಖಗಳು
ಆಗಲಿ ನಗುವಿನ ಹೂವುಗಳು || ಈ ಜಗವೇ ||
ಸ್ನೇಹ : ಎಲ್ಲರಿಗೂ ಸ್ವಾಗತ. ಈಗ ನಾವು ಒಂದು ನಾಟಕವನ್ನು ತೋರಿಸುತ್ತೇವೆ.
ಮಾನಸ : ಅದಕ್ಕೊಂದು ಊರಿನಲ್ಲಿ ಒಬ್ಬ ರಾಜ ಇದ್ದ.
ಅರ್ಪಿತಾ : ಅವನಿಗೊಬ್ಬಳು ಚೆಂದದ ರಾಣಿ ಇದ್ದಳು.
ಸ್ವತಿ : ಪಾಪ, ಅವರಿಗೆ ಮಕ್ಕಳೇ ಇರಲಿಲ್ಲ.
ಸದೀದಾ : ಅರಮನೆಯಲ್ಲಿ ಮಗುವಿನ ಕೇಕೆ, ಅಳು ಇರಲಿಲ್ಲ.
ಆದುದರಿಂದ ಅವರಿಗೆ ಸಂತೋಷವೇ ಇರಲಿಲ್ಲ.
ಪೂಜಾ : ದೇವರ ದಯೆ. ಅವರಿಗೊಂದು ಚೆಂದದ ಪುಟಾಣಿ ಹೆಣ್ಣು ಮಗು ಹುಟ್ಟಿತು.
ಹರ್ಷಿತಾ : ಮಗು ಹುಟ್ಟಿದ ದಿವಸ, ಬೆಳ್ಳಗೆ ಹಿಮಪಾತವಾಗಿತ್ತು.
ಅದಕ್ಕೆ ಅವಳಿಗೆ ‘ಶ್ವೇತ ಸುಂದರಿ’ ಎಂದು ಹೆಸರಿಟ್ಟರು.
ಹಾಡು : (ಇಬ್ಬರು ತೊಟ್ಟಿಲು ತೂಗುವ ದೃಶ್ಯ ಜೋಗುಳದ ಹಾಡು)
ಜೋ ಜೋ ಜೋ ಶ್ವೇತ ಸುಂದರಿ
ಜೋ ಜೋ ಜೋ ಭುವನ ಮನೋಹರಿ(೨)
ಅಪ್ಪನ ಮುಖದಲ್ಲಿ ನಗುವನ್ನು ತಂದೆ
ಅಮ್ಮನ ಮುಖದಲ್ಲಿ ನಗುವನ್ನು ತಂದೆ
ಅರಮನೆಯೊಳಗೆಲ್ಲ ಕಿಲಕಿಲ ನಗುವಿಂದೆ
ಕತ್ತಲೆ ತೊಲಗಿಸಿ ಬೆಳಕನು ತಂದೆ ||ಜೋ ಜೋ…||
ತ್ರುಪ್ತಿ : ಸುಖದ ಹಿಂದೆ ದುಃಖ ಇರುತ್ತದೆ. ಒಂದು ದಿನ ಶ್ವೇತ ಸುಂದರಿಯ ಅಮ್ಮ ಸತ್ತು ಹೋದ್ಲು.
ಅನ್ವತಾ : ಹಾಲು ಕುಡಿಯೋ ಎಳೆ ಕೂಸು ಅನಾಥವಾಯ್ತು.
ತ್ರುಪ್ತಿ : ಪಾಪ, ಶ್ವೇತ ಸುಂದರಿ ?
ಪ್ರತೀಕ್ಷಾ : ಅವಳು ಬೇರೆ ಮಕ್ಕಳೊಟ್ಟಿಗೆ ಆಡಿ ಬೆಳೆದಳು.
ಎಲ್ಲರು : ಮುಂದೆನಾಯ್ತು?
(ಆರಂಭದ ಹಾಡು ಪುನರಾವರ್ತನೆ ನಿರ್ಗಮನ)
ದೃಶ್ಯ -೨
(ಮಾಯ ಕನ್ನಡಿ ಹಿಡಿದು ಭುವನ ಸುಂದರಿ ಸ್ವಲ್ಪ ಎತ್ತರದ ಆಸನದಲ್ಲಿ ಕೂತಿರುತ್ತಾಳೆ.
ಸುತ್ತಲೂ ಮಕ್ಕಳು ಹಾಡುತ್ತಾ ಕುಣಿಯುವರು)
ಹಾಡು
ಭುವನಸುಂದರಿ : ಮಾಯಾ ಕನ್ನಡಿಯೇ ಮಾಯಾ ಕನ್ನಡಿಯೇ
ಪ್ರಶ್ನೆಗೆ ಎಂದು ಉತ್ತರ ಹೇಳುವೆಯಾ?
ಮೂರು ಲೋಕದ ಚೆಲುವೆ ಯಾರು
ಎಂಬುದ ತಿಳಿಸಿ ಕೊಡುವೆಯಾ?
(ಒಳಗಿನಿಂದ: ನೀನೇ ಅತೀ ಸುಂದರಿ ಈ ಪ್ರಪಂಚದೊಳಗೆಲ್ಲಾ (೨)
(ಮಕ್ಕಳು ಸುತ್ತ ಕುಣಿಯುತ್ತಾ ಹಾಡುವರು)
ಹಾಡು : ಸುಂದರಿ…… ಸುಂದರಿ…….ಸುಂದರಿ….(೨)
ಮೂರು ಲೋಕದಲ್ಲೂ ನೀನೇ ಸುಂದರಿ
ನೀನೇ ಭುವನ ಸುಂದರಿ
ನೀನೇ ತ್ರಿಪುರ ಸುಂದರಿ
ಮೂರು ಲೋಕದಲ್ಲೂ ನೀನೇ ಸುಂದರಿ
ನಿನ್ನ ಮುಖವು ಚಂದ್ರನಂತೆ
ನಿನ್ನ ನಗುವು ಕಮಲದಂತೆ
ನಿನ್ನ ನಡಿಗೆ ನವಿಲಿನಂತೆ
ನಿನ್ನ ದನಿಯು ಕೋಗಿಲೆಯಂತೆ
ನೀನು ಪ್ರೀತಿಯಿಂದ ನಗಲು
ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ||ಸುಂದರಿ||
ವಿನಯ : ನೀನು ಮಹಾರಾಜನ ಅರಮನೆಯಲ್ಲಿರಬೇಕಿತ್ತು.
ಎಲ್ಲರೂ : ಹೌದು…ಹೌದು…, ನೀನು ಇಲ್ಲಿರಬೇಕಾದವಳಲ್ಲ.
ಅರಮನೆಯಲ್ಲಿರಬೇಕಾದವಳು.
ಭುವನಸುಂದರಿ : ನಮ್ಮ ರಾಜ, ರಾಣಿಯನ್ನು ಕಳೆಕೊಂಡಿದ್ದಾನೆ .ಅವನು ಪುನಃ
ಮದುವೆಯಾಗಲಿದ್ದಾನಂತೆ.
ಮಾನಸ : ಅವನಿಗೊಂದು ಚೆಂದದ ಹೆಂಡತಿ ಬೇಕಂತೆ. ನಿನ್ನನ್ನು
ನೋಡಿದರೆ ಒಪ್ಪಿಕೊಳ್ಳುತ್ತಾನೆ.
ಸಬೀದಾ : ಆಮೇಲೆ…… ನೀನು ರಾಣಿಯಾಗುತ್ತಿ.
ಎಲ್ಲರೂ : ಬರೇ ರಾಣಿಯಲ್ಲಾ….ಮಹಾರಾಣಿ!
ಭು ಸುಂದರಿ : ಖಂಡಿತವಾಗಿ ನಾನು ರಾಣಿಯಾದರೆ ಬಣ್ಣಬಣ್ಣದ
ಬಟ್ಟೆಗಳನ್ನು ಉಡಬಹುದು. ಚೆಂದದ ಆಭರಣಗಳನ್ನು
ತೊಡಬಹುದು. ಅರಮನೆಯಲ್ಲಿ ಅನೇಕ ಸೇವಕಿಯರ
ನಡುವೆ ಆರಾಮವಾಗಿ ಕಾಲಕಳೆಯಬಹುದು.
ಎಲ್ಲರೂ : ಓ ಭುವನ ಸುಂದರೀ, ಬಾ ನಮ್ಮೊಡನೆ, ನೀನು
ರಾಣಿಯಾದ ಬಳಿಕ…… ನಮ್ಮನ್ನು ಮರೆಯೋದಿಲ್ಲ, ತಾನೇ?
ಭು, ಸುಂದರಿ : ಇಲ್ಲ, ಇಲ್ಲ ನಿಮ್ಮನ್ನು ಯಾವತ್ತೂ ಮರೆಯಲಾರೆ.
(ಹಾಡು: ಮಾಯಾಕನ್ನಡಿ…….)
ದೃಶ್ಯ -೩
(ಮಕ್ಕಳ ಆಟವಾಡುತ್ತಿರುವುದು)
ಅನ್ವಿತಾ : ನಿಮ್ಗೊಂದು ವಿಷ್ಯ ಗೊತ್ತಾ? ನಮ್ಮ ರಾಜ ಭುವನಸುಂದರಿಯನ್ನು ಮದ್ವೆ ಆಗಿದ್ದಾನೆ.
ಅವಳ ಹೆಸರನ್ನು ‘ತ್ರಿಲೋಕ ಸುಂದರಿ” ಎಂದು ಬದಲಾಯಿಸಿದ್ದಾನೆ.
ಅನುಷಾ : ಮೊದಲೇ ಸೌಂದರ್ಯವತಿ. ಈಗ ತನ್ನ ಚೆಲುವಿನಿಂದ ರಾಜನನ್ನು ಕೈಗೊಂಬೆಯಂತೆ ಕುಣಿಸುತ್ತಿದ್ದಾಳೆ.
ಎಲ್ಲರೂ : ಕೈಗೊಂಬೆನಾ? ಅಲ್ಲ ಕೀಲು ಗೊಂಬೆನಾ?
ಪ್ರತೀಕ್ಷಾ : ಹೊಸರಾಣಿಗೆ ತನ್ನ ಸವತಿ ಮಗಳಾದ ಶ್ವೇತ ಸುಂದರಿಯನ್ನು ಕಂಡ್ರೆ ಅಷ್ಟಕಷ್ಟೆ.
ತೃಪ್ತಿ : ಈ ಮಲತಾಯಿ ಯಾವಾಗಲೂ ಒಂದಲ್ಲ ಒಂದು ಕಾರಣ ಹುಡುಕಿ ಶ್ವೇತ ಸುಂದರಿಯನ್ನು ಶಿಕ್ಷಿಸುತ್ತಿರುತ್ತಾಳೆ
ಎಲ್ಲರೂ : ಪಾಪ……….. ಶ್ವೇತಸುಂದರಿ!!
ಪೂಜಾ : (ಎಡಬದಿಗೆ ಕೈ ತೋರಿಸಿ) ಅಲ್ಲಿ ನೋಡಿ…….ಶ್ವೇತಸುಂದರಿ ಬರ್ತಿದಾಳೆ . ಅವಳ ಮುಖ ಬಾಡಿದೆ.
ಎಲ್ಲರೂ : ಶ್ವೇತಸುಂದರಿ ಬಂದ್ಲು ……..(೨)
ಅರ್ಪಿತಾ : ಅವಳು ಅಳ್ತಾ ಇದ್ದಾಳೆ.
ಸ್ವಾತಿ : ಅವಳ ಚಿಕ್ಕಮ್ಮ ಹೊಡೆದಿರಬೇಕು
ಪೂಜಾ : ತುಂಬಾ ಕ್ರೂರಿ… ಶ್ವೇತಸುಂದರಿಯನ್ನು ಕಂಡ್ರೆ ಹೊಟ್ಟೆಕಿಚ್ಚು.
ತ್ರಿನಿತಾ : ಅವಳಿಗೆ ತನಗಿಂತ ಚೆನ್ನಾಗಿರೋರನ್ನು ಕಂಡ್ರೆ ಆಗೋದೇ ಇಲ್ಲ.
(ಶ್ವೇತ ಸುಂದರಿ ಕಾಣಿಸುತ್ತಾಳೆ)
ಎಲ್ಲರೂ : ಬನ್ನಿ…. ನಾವೆಲ್ಲಾ ಅವಳನ್ನು ಮಾತಾಡಿಸೋಣ.(ಅವಳ ಬಳಿಗೆ ಹೋಗುವರು)
ಅಳ್ಬೇಡ ಶ್ವೇತ…. ಅಳ್ಬೇಡಾ. ನಾವೆಲ್ಲಾ ಇದ್ದೇವಲ್ಲಾ.
ಪ್ರತೀಕ್ಷಾ : ಯಾಕೆ ಅಳ್ತಿದ್ದಿಯಾ?
ಶ್ವೇತಸುಂದರಿ : ಇಲ್ಲಿ ನೋಡಿ( ತನ್ನ ಗಾಯಗಳನ್ನು ತೋರಿಸಿ).ಇದೆಲ್ಲಾ ನನ್ನ ಚಿಕ್ಕಮ್ಮ ಹೊಡೆದದ್ದು….
ತುಂಬಾ ನೋವಾಗ್ತಾ ಇದೆ.
ಅನುಷಾ : ಪಾಪ…. ಅಳ್ಬೇಡಾ ಶ್ವೇತಾ.
ತ್ರುಪ್ತಿ : ಆ ನಿನ್ನ ಚಿಕ್ಕಮ್ಮ ತುಂಬಾ ಕ್ರೂರಿ. ದುಷ್ಟ ಹೆಂಗಸು.
ಶ್ವೇ. ಸುಂದರಿ : ಹೌದು. ಅವಳಿಗೆ ನನ್ನನ್ನು ಕಂಡ್ರೆ ದ್ವೇಷ. ನಾನು ಅರಮನೆಗೆ ಹೋಗೋದೇ ಇಲ್ಲ. ನಂಗೆ ತುಂಬ ಭಯವಾಗ್ತದೆ.
ಎಲ್ಲರೂ : ನೀನು ಅರಮನೆಗೆ ಹೋಗೋದೇ ಬೇಡೆ. ನಮ್ಮ ಜೊತೆಗೆ ಇದ್ದು ಬಿಡು.
ಅರ್ಪಿತಾ : ಬನ್ನಿ ನಾವೆಲ್ಲಾ ಕಣ್ಣುಮುಚ್ಚಾಲೆ ಆಟ ಆದೋಣ. ನಾನು ಅಜ್ಜಿ ಆಗ್ತೇನೆ… ಆಟ ಶುರುಮಾಡೋಣ್ವಾ?
(ಎಲ್ಲರೂ ಹಾಡು ಹೇಳಿ ಆಟ ಆಡುವರು)
ಹಾಡು : ಕಣ್ಣಾಮುಚ್ಚೆ ಕಾಡೇ ಗೂಡೇ
ಉದ್ದಿನ ಮೂಟೆ ಉರುಳೆ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ
ನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ. ಕೊ……..
ದ್ರುಶ್ಯ- ೪
(ಅರಮನೆ ರಾಣಿ ಕನ್ನಡಿ ಹಿಡಿದು ಕೂತಿರುವಳು. ಸಖಿಯರು ಗಾಳಿ ಬೀಸುತ್ತಿರುವರು)
ಹಾಡು : ಮಾಯಾಕನ್ನಡಿ…(೨)
(ಒಳಗಿನಿಂದ: ನೀನು ತುಂಬಾ ಚೆಲುವೆ.
ಆದರೆ ಶ್ವೇತಸುಂದರಿ ಇನ್ನೂ ಚೆಲುವೆ.
ಅವಳಷ್ಟು ಚೆಲುವೆಯರು ಈ ಲೋಕದಲ್ಲಿ ಯಾರು ಇಲ್ಲ.)
ರಾಣಿ : (ಎದ್ದು ನಿಂತು)
ಏನು…? ಶ್ವೇತಸುಂದರಿ ನನಗಿಂತಲೂ ಚೆಲುವೆಯೇ…?
ಹಾಂ, ಇಲ್ಲ…ಇಲ್ಲ…ಇದು ಸಾಧ್ಯವಿಲ್ಲ. ನನ್ನಿಂದ ಇದನ್ನು ಸಹಿಸಲು ಸಾಧ್ಯವಿಲ್ಲ,
ನನಗಿಂತ ಚೆಲುವೆಯರು ಯಾರು ಇರಬಾರದು, ಹಾಂ…. ಇದಕ್ಕೊಂದು ಉಪಾಯವಿದೆ.
(ಸಖಿಯರನ್ನು ಹತ್ತಿರ ಕರೆದು) ಎಲ್ಲಿ?
ಆ ಕಟುಕರನ್ನು ಬರಹೇಳಿ. (ನಿರ್ಗಮನ)
ದೃಶ್ಯ – ೫
(ಹಾಡಿಗೆ ಸರಿಯಾಗಿ ಹೆಜ್ಜೆ ಹಾಕುತ್ತಾ ಎರಡು ಬದಿಗಳಿಂದ ಕಟುಕರ ಪ್ರವೇಶ)
ಹಾಡು : ಬಂದರೆ ಬಂಬ (೨) ಬಂಬ ಬಂಬ ಬಂ(೨)
ಬಂದರೆ ಬಂಬ ಬಂ(೨)
ತಾಮ್ರಾವರ್ಣ : ಓಹೋ… ಏನು ಧೂಮ್ರಾಕ್ಷ…..?
ಧೂಮ್ರಾಕ್ಷ : ಓಹೋ…. ತಾಮ್ರಾಕ್ಷ ನಮಸ್ಕಾರ…
ತಾಮ್ರಾವರ್ಣ : ಎತ್ತ ತಮ್ಮ ಸವಾರಿ…..?
ಧೂಮ್ರಾಕ್ಷ : ಮಹಾರಾಣಿ ಹೇಳಿ ಕಳಿಸಿದ್ದಾಳೆ.
ತಾಮ್ರಾಕ್ಷ : ಏನು… ನಿಂಗೆ ಹೇಳಿಕಳಿಸಿದ್ದಾಳಾ?… ನಂಗು ಕರೆ ಬಂದಿದೆಯಲ್ಲಾ?
ದೂಮ್ರವರ್ಣ : ಅವಳು ಬರಹೇಳಿದ್ದು ನನ್ನನ್ನು. ಅವಳು ನನ್ನನ್ನು ಮೆಚ್ಚಿಕೊಂಡಿದ್ದಾಳೆ.
ತಾಮ್ರಾಕ್ಷ : ನಿನ್ನ ಮೂತಿಗೆ ಅದೊಂದು ಕೇಡು, ಆ ಕೆಟ್ಟ ಮೂತಿಯನ್ನು ಕನ್ನಡಿಯಲ್ಲಿ ನೋಡಿದ್ದಿಯಾ?
ಧೂಮ್ರಾಕ್ಷ : ಈ ಮೂತಿಗಿಂತ ಚೆನ್ನಾಗಿದೆ.
ತಾಮ್ರಾಕ್ಷ : ನಾವು ಜಗಳ ಮಾಡೋದು ಬೇಡ. ರಾಣಿ ಯಾಕೆ ಬರಹೇಳಿದ್ದು ಅಂತ ವಿಚಾರಿಸೋಣ.
ಧೂಮ್ರಾಕ್ಷ : ಆಗಲಿ. ತೆರಳೋಣ್ವಾ?
ಹಾಡು: ಬಂಬರೆ ಬಂಬ (೨) ಬಂಬ ಬಂಬಬಂ… ( ನಿರ್ಗಮನ)
(ರಾಣಿ ತನ್ನ ಸಖಿಯರೊಂದಿಗೆ . ಕಟುಕರ ಪ್ರವೇಶ)
ರಾಣಿ : ತಾಮ್ರಾ….ಧೂಮ್ರಾ…. ನಿಮ್ಮಿಂದ ನನಗೋಂದು ಸಹಾಯ ಆಗಬೇಕಿದೆ.
ಕಟುಕರು : (ಮೊಣಕಾಲೂರಿ) ಹೇಳಿ ಮಹಾರಾಣಿ ನಮ್ಮಿಂದೇನಾಗಬೇಕಿತ್ತು?
ರಾಣಿ : ಇದು ತುಂಬ ಗುಟ್ಟಿನ ವಿಷಯ. ನೀವು ಯಾರಿಗೂ ಹೇಳಬಾರದು.
ಕಟುಕರು : ಮಹಾರಾಣಿಯವರೇ ನೀವು ಹೇಳಿದ ಕೆಲಸವನ್ನು ತಲೆಯಲ್ಲಿ ಹೊತ್ತು ಮಾಡ್ತೇವೆ .ಏನದು ಕೆಲ್ಸ ಹೇಳಿ.
(ಸಖಿಯರು ತಟ್ಟೆಯಲ್ಲಿ ಹಣದ ಗಂಟು ತರುವರು)
ರಾಣಿ : ಇಲ್ಲಿ ಬನ್ನಿ. (ಕಟುಕರ ಕಿವಿಯಲ್ಲಿ ಗುಟ್ಟಾಗಿ ಹೇಳುವಳು)
ಕೆಲ್ಸ ಮುಗಿದ ಬಳಿಕ ನಿಮಗೆ ಇನ್ನೂ ಹೆಚ್ಚು ಕೊಡುತ್ತೇನೆ.
ಕಟುಕರು : ಖಂಡಿತವಾಗಿ ಮಾಡ್ತೇವೆ (ನಮಸ್ಕರಿಸಿ ನಿರ್ಗಮನ).
ರಾಣಿ : ಹ್ಹ….. ಹ್ಹ…… ಹ್ಹ. ಇನ್ನು ಈ ಭೂಲೋಕದಲ್ಲಿ ನನ್ನಷ್ಟು ಚೆಲುವೆಯರು ಯಾರೂ ಇಲ್ಲ . ಹ್ಹ….ಹ್ಹ….
ದೃಶ್ಯ -೬
(ಕಟುಕರು ಶ್ವೇತಸುಂದರಿಯನ್ನು ಎಳೆದುಕೊಂಡು ಬರುವ ದೃಶ್ಯ)
ಶ್ವೇ.ಸುಂದರಿ : ಮಾಮ…ಮಾಮ, ನನ್ನನ್ನು ಎಳಕೊಂಡು ಹೋಗ್ಬೇಡಿ ನಂಗೆ ತುಂಬಾ ನೋವಾಗ್ತಾ ಇದೆ. ಯಾಕೆ ಹೀಗೆ ಮಾಡುತ್ತೀರಿ?
ನಿಮ್ಗೂ ನನ್ನಂತಹ ಮಕ್ಕಳಿದ್ದಾರಲ್ವಾ?
ಧೂಮ್ರಾ– : ನೋಡು ಈ ದಟ್ಟವಾದ ಕಾಡನ್ನು.
ಶ್ವೇ. ಸುಂದರಿ : ಹೌದು ಮಾಮ….. ನಂಗೆ ತುಂಬಾ ಭಯವಾಗ್ತಾ ಇದೆ. ಇನ್ನೂ ನನ್ನನ್ನು ಹೆದರಿಸ್ಬೇಡಿ.
ತಾಮ್ರಾ– : ಹೆದರಿಸ್ಬಾರ್ದಾ? ನೋಡಿಲ್ಲಿ (ಕತ್ತಿ ತೋರಿಸಿ) ಒಂದೇ ಏಟಿಗೆ……
ಧೂಮ್ರಾ- : ಹ್ಹ…ಹ್ಹ…ಹ್ಹ… ನಿನ್ನನ್ನು ಕಚಕ್ಕ್ ಅಂತ ಮುಗ್ಸಿ ಬಿಡ್ತೇನೆ.
ಶ್ವೇ. ಸುಂದರಿ : ನನ್ನನ್ನು ಯಾಕೆ ಕೊಲ್ತೀರಿ?
ಕಟುಕರು : ಮಹಾರಾಣಿ ಆಜ್ಞೆ ಮಾಡಿದ್ದಾಳೆ.
ಶ್ವೇ, ಸುಂದರಿ : ಕೊಂದ ನಂತ್ರ ಮತ್ತೇನು ಮಾಡ್ತೀರಿ?
ತಾಮ್ರಾ- : ನಿನ್ನ ರಕ್ತವನ್ನು ಮಹಾರಾಣಿಗೆ ಒಪ್ಪಿಸ್ತೇವೆ.
ಧುಮ್ರಾ- : ಅವಳು ನಮ್ಗೆ ಹಣ ಕೊಡ್ತಾಳೆ.
ಶ್ವೇ.ಸುಂದರಿ : ಆದ್ರೆ ಮಾಮ…. ಕೊಲ್ಲುವುದು ಮಹಾಪಾಪ.
ತಾಮ್ರಾ– : ಕೊಲ್ಲಲೂ ನಮ್ಗೂ ಮನಸ್ಸಿಲ್ಲ.ಆದರೆ… ನಿನ್ನ ರಕ್ತವನ್ನು ತೋರಿಸಬೇಕಲ್ಲಾ?
ಶ್ವೇ.ಸುಂದರಿ : ನೋಡಿ ಅಲ್ಲಿ ಕಾಡು ಕೋಳಿ. ಅದನ್ನು ಹಿಡಿದುಕೊಳ್ಳಿ.
ಅದರ ಮಾಂಸ ತಿನ್ನಿ. ರಕ್ತವನ್ನು ಮಹಾರಾಣಿಗೆ ಕೊಂಡುಹೋಗಿ ತೋರಿಸಿ.
ಕಟುಕರು : ಭಲಾರೇ ಹುಡ್ಗಿ, ನೀನು ತುಂಬಾ ಜಾಣೆ. ಆದ್ರೆ…ಒಂದು ಕಂಡೀಷನ್.
ಶ್ವೇ. ಸುಂದರಿ : ಏನು…. ಕಂಡಿಷನ್?
ಕಟುಕರು : ನೀನು ಅರಮನೆ ಕಡೆಗೆ ಬರ್ಬಾದು. ನಿನ್ನನ್ನು ಎಲ್ಲಾದ್ರೂ ಜೀವಂತವಾಗಿ ಮಹಾರಾಣಿ ನೋಡಿದ್ರೆ,
ಮತ್ತೆ ನಮ್ಮ ಕತೆ ಮುಗೀತು.
ಶ್ವೇ.ಸುಂದರಿ : ಇಲ್ಲ,ನಾನು ಬರೋದಿಲ್ಲ. ಇಲ್ಲೇ ಎಲ್ಲಾದರೂ ಬಚ್ಚಿಟ್ಟುಕೊಳ್ತೇನೆ..
ಕಟುಕರು : ಇಲ್ಲಿ ನಿನಗೇನೂ ತೊಂದರೆ ಬಾರದಿರಲಿ. ನಿನಗೆ ಒಳ್ಳೆಯದಾಗಲಿ.
ಶ್ವೇ.ಸುಂದರಿ : ನೀವು ತುಂಬಾ ಒಳ್ಳೆಯವರು.
ಕಟುಕರು : ನಾವಿನ್ನು ಬರ್ತೇವೆ ಪುಟ್ಟಾ, ಜಾಗ್ರತೆ.
(ಕಟುಕರ ನಿರ್ಗಮನ ಹುಲಿಯ ಗರ್ಜನೆ. ಶ್ವೇ.ಸುಂದರಿ ಮರದ ಹಿಂದೆ ಅಡಗಿಕೊಳ್ಳುವಳು.
ಒಂದು ಬದಿಯಿಂದ ಕರಡಿ, ಇನ್ನೂಂದು ಬದಿಯಿಂದ ಹುಲಿಯ ಪ್ರವೇಶ)
ಹುಲಿ : ನನ್ನ ಬಳಿಗೆ ಬಾ ಪ್ರಿಯೇ.
ಕರಡಿ : ನಿನ್ನ ಬಳಿಯಲ್ಲೇ ಇದ್ದೇನಲ್ಲಾ ಪ್ರಿಯ.
ಹಾಡು : ಕರಡಿ ಬೆಟ್ಟಕ್ಕೆ ಹೋಯಿತು (೨)
ಕರಡಿ ಬೆಟ್ಟಕ್ಕೆ ಹೋಯಿತು
ಹುಲಿಯ ನೋಡಲು
ಹುಲಿಯ ಕಂಡು ಕೈಯ ಹಿಡಿದು ಆಟ ಆಡಲು
(ಹಾಡಿಗೆ ತಕ್ಕಂತೆ ಕರಡಿ ಹುಲಿ ಕೈಕೈ ಹಿಡಿದು ಕುಣಿಯುವುದು. ಕುಣಿಯುತ್ತಾ
ಶ್ವೇ.ಸುಂದರಿ ಅಡಗಿರುವ ಮರದ ಬಳಿಗೆ ಬರುವವು)
ಶ್ವೇ,.ಸುಂದರಿ : ಕೊಲ್ಬೇಡಿ.ನನ್ನನ್ನು ಕೊಲ್ಲಬೇಡಿ (ಕುಣಿತ ನಿಲ್ಲುವುದು)
ಹುಲಿ : ಏನೋ ಕಿರುಚಿದ ಹಾಗೆ ಕೇಳಿಸಿತಲ್ಲಾ?
ಕರಡಿ : ಕಿರುಚಿದ್ದಾ ? ನಾನು ಕಿರುಚಲಿಲ್ಲಪ್ಪ
ಶ್ವೇ.ಸುಂದರಿ : ನೀನಲ್ಲ,ನಾನು ಕಿರುಚಿದ್ದು.
ಹುಲಿ,ಕರಡಿ : ಹಾಂ…ಯಾರಿವಳು…. ಈ ಚೆಲುವೆ?
ಕರಡಿ : ಎಷ್ಟು ಬೆಳ್ಳಗಿದ್ದಾಳೆ? ಆದರೆ ಇವಳ ಬಣ್ಣ ನನ್ನ ಬಣ್ಣದಷ್ಟು ಚೆಂದ ಇಲ್ಲ.
ಹುಲಿ : ಬಾ ಚೆಲುವೆ. ನಮ್ಮೊಂದಿಗೆ ನೀನು ಸೇರಿಕೋ.
ಶ್ವೇ.ಸುಂದರಿ : ಆದ್ರೆ…. ನೀವು ನನ್ನನ್ನು ತಿನ್ನಬಾರ್ದು.
ಹುಲಿ : ನಾವು ಒಳ್ಳೆಯ ಮಕ್ಕಳನ್ನು ತಿನ್ನೋದಿಲ್ಲಪ್ಪ.
ಶ್ವೇ.ಸುಂದರಿ : ಹಾಗಾ? ಹಾಗಾದ್ರೆ ನಾನೂ ನಿಮ್ಮ ಜೊತೆಗೆ ಕುಣೀತೇನೆ.
(ಹಿನ್ನಲೆಯಲ್ಲಿ ಹಾಡು ಹಾಡಿಗೆ ಕುಣಿಯುವರು)
ಕರಡಿ : ಮಗೂ,ಈ ಕಾಡಲ್ಲಿ ಬದುಕೋದು ತುಂಬಾ ಕಷ್ಟ.
ಹುಲಿ : ನೋಡು, ಅಲ್ಲಿ ಒಂದು ಬೆಟ್ಟವಿದೆ.
ಕರಡಿ : ಅಲ್ಲಿ ಕೆಲವ್ರು ಮನುಷ್ಯರು ವಾಸಮಾಡುತ್ತರೆ, ತುಂಬಾ ಒಳ್ಳೆಯವರು.
ಹುಲಿ : ನೀನು ಅಲ್ಲಿಗೆ ಹೋಗು. ಅವರೊಂದಿಗೆ ಅಲ್ಲೇ ಇರು.
ಶ್ವೇ.ಸುಂದರಿ : (ಹುಲಿ-ಕರಡಿಯನ್ನು ತಬ್ಬಿಕೊಂಡು) ನೀವು ತುಂಬಾ ಒಳ್ಳೆಯವರು.
ಹುಲಿ : ನಾವು ಒಳ್ಳೆಯವರಾದ್ರೆ ಲೋಕವು ಒಳ್ಳೆಯದಾಗಿರುತ್ತದೆ.
ಶ್ವೇ.ಸುಂದರಿ : ಆಯ್ತು.ನಾನು ಈಗಲೇ ಅಲ್ಲಿಗೆ ಹೋಗ್ತೇನೆ (ಹುಡುಗಿಯ ನಿರ್ಗಮನ .ಹುಲಿ ಕರಡಿ ಕುಣಿಯುತ್ತಾ ನಿರ್ಗಮನ)
ದೃಶ್ಯ -೭
(ಶ್ವೇತ ಸುಂದರಿ ಮಲಗಿಕೊಂಡಿರುವಳು. ಕಳ್ಳರ ಪ್ರವೇಶ. ಕೈಯಲ್ಲಿ ಕೊಡಲಿ, ಕತ್ರಿ, ಬುಟ್ಟಿ ಇತ್ಯಾದಿ ಇರುವುದು)
ಹಾಡು : ಬೆಟ್ಟದ ಮೇಲಿನ ಕುಳ್ಳರು ನಾವು (೨)
ಬೆಟ್ಟದ ಮೇಲಿನ ಕುಳ್ಳರು
ನನ್ನ ಹೆಸರು ಕಕಾ
ನನ್ನ ಹೆಸರು ಕಿಕೀ
ನನ್ನ ಹೆಸರು ಕುಕೂ
ಕಕಾ ಕಿಕೀ ಕುಕೂ ಕೆಕೇ ಕೈ
ನಾನು ಕೈ(ಎಲ್ಲರೂ ಕೈ ಎತ್ತಿ ಹಿಡಿಯುವರು)
ಇವನು ಕೊಕೋ
ಅವನೌ ಕೌ ಕಂ ಕಃ
ಬೆಟ್ಟಾದ ಮೇಲಿನ ಕುಳ್ಳರು ನಾವು (೨)
ಕುಳ್ಳ ೧ : ಅಲ್ಲಿ ನೋಡು ಗುಡಿಸಲಿನ ಬಾಗಿಲು ತೆರೆದಿದೆ.
ಕುಳ್ಳ ೨ : ಒಳಗೆ ಯಾರಿದ್ದಾರೆ?
ಕುಳ್ಳ ೩ : ಕಳ್ಳರಿರಬಹುದು.
ಕುಳ್ಳ ೪ : ಕುಳ್ಳರಲ್ಲಿಗೆ ಕಳ್ಳರು ಬರೋದಿಲ್ಲಪ್ಪ.(ಉಳಿದವರಿಗೆ)
ಬನ್ನಿ….ಬನ್ನಿ. ನೋಡಿ ಅಲ್ಲಿ ಯಾರೋ ಮಲಗಿದ್ದಾರೆ.
(ಶ್ವೇ.ಸುಂದರಿ ಮಲಗಿರುವಲ್ಲಿಗೆ ಬರುವರು)
ಎಲ್ಲರೂ : ತುಂಬಾ ಮುದ್ದಾಗಿದ್ದಾಳೆ. ಎಷ್ಟು ಬೆಳ್ಳಗಿದ್ದಾಳೆ?
ಕುಳ್ಳ ೧ : ಶೂ…!(ಬಾಯಿ ಮೇಲೆ ಬೆರಳಿಟ್ಟು ಗಲಾಟೆ ಮಾಡದಂತೆ
ಸೂಚಿಸುವನು) ಪಾಪ .ಈ ಬಿಳಿ ಹುಡುಗಿಗೆ ತುಂಬಾ
ಸುಸ್ತಾಗಿರಬೇಕು. ನಿದ್ದೆ ಮಾಡ್ಲಿ, ಬನ್ನಿ ಹೊಟ್ಟೆ ಹಸೀತಾ
ಇದೆ. ಮೊದಲು ಊಟ ಮಾಡೋಣ. (ತಟ್ಟೆ ಇಡುವ,
ಬಡಿಸುವ, ಊಟಮಾಡುವ, ತೇಗುವ ನಟನೆ)
ಕುಳ್ಳ ೧ : ಹಾಂ, ಎಲ್ಲರೂ ಸಾಲಾಗಿ ನಿಲ್ಲಿ. ಮಲಗುವ ಮೊದಲು
ನಿಮ್ಮನ್ನೆಲ್ಲಾ ಎಣಿಸಿನೋಡ್ತೇನೆ.(ಎಲ್ಲರೂ ಎತ್ತರ ಪ್ರಕಾರ
ಸಾಲಾಗಿ ನಿಲ್ಲುವರು ಕುಳ್ಳ ೧. ಲೆಕ್ಕ ಮಾಡುವನು
೧…..೨…..೩….೪…..೫…..೬……ಹೇಯ್……..
ನಾವು ಏಳು ಜನ ಎದ್ದೆವು.ಈಗ ಆರೇ ಜನ ಇದ್ದೇವೆ. ಹಾಗಾದ್ರೆ ಇನ್ನೊಬ್ಬ ಎಲ್ಲಿ ಹೋದ?
(ಹುಡುಕವನು) ಅವನಿಗೆ ಏನಾಯ್ತು
(ಇವರ ಗ್ಲಾಟೆಗೆ ಶ್ವೇ.ಸುಂದರಿಗೆ ಎಚ್ಚರವಾಗಿ ನಗುತ್ತಾ ಹತ್ತಿರ ಹೋಗುವಳು)
ಶ್ವೇ.ಸುಂದರಿ : ಅಣ್ಣಂದಿರೇ, ಏಳನೆಯವನನ್ನು ನಾನು ಹುಡುಕಿ ಕೊಡುತ್ತೇನೆ.
ನೀವೆಲ್ಲಾ, ಸಾಲಾಗಿ ನಿಲ್ಲಿ.
೧…೨…೩…೪…೫…೬…ಮತ್ತು ನೀನೇ ಏಳನೆಯವನು.
ಎಲ್ಲರೂ : ಹ…ಹ…ಹ್ಹ. ನೀನು ತುಂಬಾ ಜಾಣೆ, ಕಳೆದುಹೋದ ಒಬ್ಬನನ್ನು
ಹುಡುಕಿಕೊಟ್ಟಿದ್ದೀಯಾ. ನೀನು ಯಾರು? ಯಾಕೆ ಇಲ್ಲಿಗೆ ಬಂದಿರುವೆ?
ಶ್ವೇ.ಸುಂದರಿ : ಅದೊಂದು ದೊಡ್ಡ ಕತೆ. ನೀವೆಲ್ಲಾ ಇಲ್ಲಿ ಕೊತುಕೊಳ್ಳಿ
(ಕತೆಯನ್ನು ಅಭಿನಯಿಸಿ ಹೇಳುವಳು)
ಕುಳ್ಳ ೧ : ನಿನ್ನ ಚಿಕ್ಕಮ್ಮ ತುಂಬಾ ಕ್ರೂರಿ.
ಕುಳ್ಳ ೨ : ಅವಳು ಕೆಟ್ಟವಳು.
ಕುಳ್ಳ ೩ : ಅವಳು ದುಷ್ಟ ಹೆಂಗಸು
ಕುಳ್ಳ ೪ : ಅವಳಿಗೆ ಹೊಟ್ಟೆಕಿಚ್ಚು.
ಕುಳ್ಳ ೫ : ನೀನು ನಮ್ಮೊಂದಿಗೆ ಇರು . ಎಲ್ಲೊ ಹೋಗ್ಬೇಡ.
ಕುಳ್ಳ ೬ : ನಾವೆಲ್ಲಾ ನಿನ್ನನ್ನು ಚೆನ್ನಾಗಿ ನೋಡಿಕೊಳ್ತೇವೆ.
ಕುಳ್ಳ ೭ : ಈಗ ನಿದ್ದೆ ಮಾಡೋಣ…. ಎಲ್ಲರಿಗೂ ಶುಭರಾತ್ರಿ.
ದೃಶ್ಯ -೮
(ಭುವನ ಸುಂದರಿ ಕನ್ನಯೊಡನೆ ಮಾತಾಡುವುದು)
ಹಾಡು : ಮಾಯಾ ಕನ್ನಡಿ (೨) (ದೃಶ್ಯ ೨ ರ ಹಾಡು ಪುನರಾವರ್ತನೆ)
ರಾಣಿ : ಈಗ ಹೇಳು ಈ ಲೋಕದಲ್ಲಿ ಯಾರು ಸುಂದರಿ ?
ಮಾಯಕನ್ನಡಿ : ಭುವನ ಸುಂದರಿ (೨)
ನೀನೇ ಅತೀ ಸುಂದರಿ ಈ ಲೋಕದಲ್ಲಿ
ನಿನ್ನ ಮಗಳು ಶ್ವೇತಾ ಇನ್ನೂ ಸುಂದರಿ
ರಾಣಿ : ಶ್ವೇತ ಸುಂದರಿ! ಅವಳು ಬದುಕಿಲ್ಲ.
ಮಾಯಕನ್ನಡಿ : ಇಲ್ಲ ಅವಳು ಬದುಕಿದ್ದಾಳೆ.
ರಾಣಿ : ಅವಳನ್ನು ಕಟುಕರು ಕೊಂದಿದ್ದಾರೆ.
ಮಾ.ಕನ್ನಡಿ : ಇಲ್ಲ, ಅವಳನ್ನು ಕೊಂದಿಲ್ಲ.
ರಾಣಿ : ಅವರು ಅವಳ ರಕ್ತವನ್ನು ತಂದಿದ್ದಾರೆ.
ಮಾ.ಕನ್ನಡಿ : ಅಲ್ಲ ಅದು ಕಾಡುಕೋಳಿಯ ರಕ್ತ.
ರಾಣಿ : ಮುಚ್ಚುಬಾಯಿ ಹಾಗಾದ್ರೆ ಅವಳು ಎಲ್ಲಿದ್ದಾಳೆ.
ಮಾ.ಕನ್ನಡಿ : ಬೆಟ್ಟದ ಮೇಲೆ ಏಳುಜನ ಕುಳ್ಳರೊಂದಿಗಿದ್ದಾಳೆ.
ರಾಣಿ : ಸಾಕು ನಿಲ್ಲಿಸು (ಕನ್ನಡಿ ಬಿಸಾಡುವಳು). ನಾನು ಅಲ್ಲಿಗೆ ಹೋಗುತ್ತೆನೆ.
ಅವಳಿಗೆ ನನ್ನ ಗುರುತು ಸಿಗಬಾರದು. ವೇಷ ಬದಲಾಯಿಸಿ ಹೋಗುತ್ತೇನೆ.
ದೃಶ್ಯ -೯
(ಭುವನ ಸುಂದರಿ ಹಣ್ಣು ಮಾರುವವಳ ವೇಷದಲ್ಲಿ ಕಾಡಿಗೆ ಪ್ರವೇಶ)
ರಾಣಿ : ಆ ಕಟುಕರಿಂದ ಮೋಸ ಹೋದೆ. ಅವರಿಗೆ ಸರಿಯಾದ ಪಾಠ ಕಲಿಸ್ತೇನೆ.
ವಂಚಕರು! ಮೊದಲು ಈ ಕೆಲ್ಸ ಮುಗೀಲಿ.(ಆಚೀಚೆ ಹುಡುಕುವ ನಟನೆ) ಓಹೋ. ಅಲ್ಲಿದೆ ಗುಡಿಸಲು
(ಬಾಗಿಲು ಬಡಿಯುವಳು).
ಶ್ವೇ.ಸುಂದರಿ : ಯಾರು ನೀವು? ನಿಮಗೆ ಏನು ಬೇಕಿತ್ತು?
ರಾಣಿ : ಮಗಳೆ, ನೀನು ತುಂಬಾ ಮುದ್ದಾಗಿದ್ದೀಯಾ. ನಾನು ಹಣ್ಣು ಮಾರುವವಳು .
ತಗೋ ಈ ಹಣ್ಣು ತುಂಬಾ ರುಚಿಯಾಗಿದೆ.
ಶ್ವೇ.ಸುಂದರಿ : ಇಲ್ಲ……ನಂಗೆ ಬೇಡ.
ರಾಣೆ : ತಿನ್ನು ಮಗಳೇ…. ತುಂಬಾ ಹಸಿದಿರುವಂತೆ ಕಾಣುತ್ತಿ.
ಶ್ವೇ.ಸುಂದರಿ : (ತಿನ್ನುವಳು) ತುಂಬಾ ರುಚಿಯಾಗಿದೆ (ಪ್ರಜ್ಞೆ ತಪ್ಪಿ ಬೀಳುವಳು).
ರಾಣಿ : (ಆಚೆ ಈಚೆ ನೋಡಿ) ಬೇಗ ಜಾಗ ಖಾಲಿ ಮಾಡ್ಬೇಕು.
(ಕುಳ್ಳರ ಪ್ರವೇಶ ಹಾಡು: ಬೆಟ್ಟದ ಮೇಲಿನ ಕುಳ್ಳರು….)
ಕುಳ್ಳ ೧ : ಯಾಕೆ ಇವಳು ಬಿದ್ದಿದ್ದಾಳೆ? ಇವಳಿಗೆ ಏನಾಗಿದೆ? ನಾಡಿ ಬಡಿತ ಕೇಳುತ್ತಿದೆ….
(ಕುಳ್ಳರು ಹುಡುಗಿಯ ಸುತ್ತಲೂ ಕುಳಿತು, ಅವಳನ್ನು ಬೇರೆ ಬೇರೆ ರೀತಿಯಲ್ಲಿ ಪರಿಕ್ಷಿಸುವರು)
ಕುಳ್ಳ ೨ : ಹಾಗಾದರೆ ಯಾಕೆ ಬಿದ್ದಿದ್ದಾಳೆ?
ಕುಳ್ಳ ೩ : ಇಲ್ಲಿ ನೋಡಿ. (ಬಿದ್ದಿದ್ದ ಹಣ್ಣನ್ನು ಮೂಸಿನೋಡಿ)
ಅಯ್ಯೋ…. ವಾಸನೆ ಏನೋ, ವಿಷ ಹಾಕಿದ್ದಾರೆ, ಅಯ್ಯೋ ದೇವ್ರೇ ಹೇಗಾಯ್ತಲ್ಲಪ್ಪಾ.
ಕುಳ್ಳ ೧ : ಏನು ಮಾಡುವುದೀಗಾ?
(ಕುದುರೆಯ ಖುರಪುಟದ ಸದ್ದು. ರಾಜಕುಮಾರನ ಪ್ರವೇಶ)
ರಾಜಕುಮಾರ : ಗೆಳೆಯರೇ…. ತುಂಬಾ ಬಾಯಾರಿಕೆಯಾಗಿದೆ. ಸ್ವಲ್ಪ ನೀರು ಕೊಡುವಿರಾ?
(ಒಬ್ಬ ಕುಳ್ಳ ನೀರು ತಂದ ಕೊಡುವನು. ಉಳಿದವರು ಅಳುತ್ತಾ ಹುಡುಗಿಯ ಬಳಿಯಲ್ಲಿ
ಕುಳಿತುಕೊಳ್ಳುವರು)
ರಾಜಕುಮಾರ : ಯಾಕೆ ಅಳ್ತಾ ಇದ್ದೀರಾ? ಹುಡುಗಿಗೆ ಏನಾಗಿದೆ?
ಕುಳ್ಳ ೪ : ಏನಾಗಿದ್ಯೋ ಗೊತ್ತಿಲ್ಲ. ಈ ಹಣ್ಣು ಅವಳ ಬಳಿ ಬಿದ್ದಿತ್ತು.
ಬಹುಶಃ ಹಣ್ಣಲ್ಲಿ ವಿಷ ಬೆರೆಸಿರಬೇಕು.
ರಾಜಕುಮಾರ : (ಹುಡುಗಿಯ ನಾಡಿ ಬಡಿತ ನೋಡಿ) ಏನೂ ಗಾಬರಿಯಾಗಬೇಡಿ. ಇವಳನ್ನು ಏಳುವ ಹಾಗೆ
ಮಾಡಬಹುದು. (ಚೀಲದಿಂದ ಮುದ್ದು ತೆಗೆದು ನೀರಿಗೆ ಬೆರೆಸಿ ಕುಡಿಸುವನು ಸ್ವಲ್ಪ
ಹೊತ್ತಲ್ಲಿ ಶ್ವೇ.ಸುಂದರಿ ಎಚ್ಚರಗೊಳ್ಳುವಳು ).
ಶ್ವೇತಸುಂದರಿ : ನೀರು… ನೀರು ಬೇಕು .
ಕುಳ್ಳ ೧ : ಏನಾಯ್ತು ಮಗು? ಈ ಹಣ್ಣು ಕೊಟ್ಟವರ್ಯಾರು?
ಶ್ವೇ.ಸುಂದರಿ : ಯಾರೋ ಹಣ್ಣು ಮಾರುವ ಮುದುಕಿ ತಿನ್ನೋದಿಕ್ಕೆ
ಒತ್ತಾಯ ಮಾಡಿದ್ಲು . ಬೇಡ ಅಂದ್ರೂ ಕೇಳ್ಲಿಲ್ಲ.
ರಾಜಕುಮಾರ : ಆ ಮುದುಕಿ ಇಲ್ಲೇ ಎಲ್ಲಾದರು ಇರಬಹುದು.
ಕುಳ್ಳರು : ಹೌದು…ಎಲ್ಲಾ ಹುಡುಕೋಣ. (ಹುಡುಕುವ ನಟನೆ)
(ರಾಜಕುಮಾರ ಮುದುಕಿಯನ್ನು ಎಳೆದುಕೊಂಡು ಬರುವನು).
(ಕುಳ್ಳರು ಒಬ್ಬೊಬ್ಬರಾಗಿ ಮುದುಕಿಗೆ ಬ—- ಹೊಡೆಯುವರು)
ನೀನು ಅವಳನ್ನು ಕೊಲ್ಲೋದಿಕ್ಕೆ ನೋಡಿದ್ದೀಯಲ್ಲಾ…?
ನಿನ್ನ ಮನೆ ಹಾಳಾಗ.
ನಿನ್ನ ಹುಲಿ ಹಿಡಿಯ.
ನಿನ್ನ ಮನೆ ಎಕ್ಕುಟ್ಟಿ ಹೋಗ.
ನಿನ್ನ ಬಾಯಿಗೆ ಮಣ್ಣುಬೀಳಾ.
ನಿಂಗೆ ಬೇಗನೆ ಚಟ್ಟುಕಟ್ಟ.
ನಿನ್ನ ಕಾಟಕ್ಕೆ ಬೆಂಕಿ ಹಾಕಾ.
ನಿನ್ನ ಸುಡುಕ್ಕೊಳಿಗೆ ನೂಕಾ.
ರಾಣಿ : ಅಯ್ಯೋ… ದಮ್ಮಯ್ಯ. ನನ್ನನ್ನು ಕೊಲ್ಬೇಡಿ , ನನ್ನನ್ನು ಬಿಟ್ಟುಬಿಡಿ.
(ರಾಜಕುಮಾರ ಕುಳ್ಳರನ್ನು ತಡೆಯುವನು)
ರಾಜಕುಮಾರ : ಯಾರು ನೀನು? ಇಲ್ಲಿಗ್ಯಾಕೆ ಬಂದೆ?
ರಾಣಿ : ನಾನು ಯಾರೂಂತ ಹೇಳ್ತೇನೆ(ಆ ಕಡೆ ತಿರುಗಿ, ಮುಖದ ಕವಚ ತೆಗೆಯುವಳು).
ಶ್ವೇ.ಸುಂದರಿ : ಓ….ಇವಳು ನನ್ನ ಚಿಕ್ಕಮ್ಮ. ಇವಳೇ ನನ್ನನ್ನು ಕೊಲ್ಲೋದಿಕ್ಕೆ ಕಟುಕರಿಗೆ ಅಪ್ಪಣೆ ಕೊಟ್ಟವಳು.
(ಕುಳ್ಳರು ಪುನಃ ಹೊಡೆಯುವರು).
ರಾಣಿ : ಕೊಲ್ಬೇಡಿ…ದಯವಿಟ್ಟು ಕೊಲ್ಬೇಡಿ. ನನ್ನದು ತಪ್ಪಾಗಿದೆ. ನಿಮ್ಮ ದಮ್ಮಯ.
ಕುಳ್ಳರು : ಇವಳನ್ನು ನಿನ್ನ ಮಗಳಂತೆ ಮೋಡಿಕೊಳ್ತೀಯಾ?
ರಾಣಿ : ಖಂಡಿತವಾಗಿ ನೋಡಿಕೊಳ್ಳುತ್ತೇನೆ. ಬಾ ಮಗಳೇ
(ಶ್ವೇ.ಸುಂದರಿ ಕುಳ್ಳರ ಹಿಂದೆ ಅಡಗುವಳು)
ರಾಜಕುಮಾರ : ಒಳ್ಳೆಯದು. ಅವಳಿಗೆ ತನ್ನ ತಪ್ಪಿನ ಅರಿವಾಗಿದೆ. ಅವಳು.
ಪಶ್ಚಾತ್ತಾಪ ಪಡುತಿದ್ದಾಳೆ. ಗೆಳೆಯರೇ, ನಾವಿನ್ನು ಹೊರಡಬೇಕು.
ಕುಳ್ಳರು : ಇಲ್ಲ….ಇಲ್ಲ…. ನೀನು ಹೋಗುವಂತಿಲ್ಲ ನಿನಗೊಂದು ಬಹುಮಾಅನ
ನೀಡಲಿದ್ದೇವೆ.(ಕುಳ್ಳರಲ್ಬೊಬ್ಬ ಶ್ವೇ.ಸುಂದರಿ ಕೈಯನ್ನು ರಾಜಕುಮಾರನ ಕೈಯ ಮೇಲೆ ಇಡುವನು.
ಕುಳ್ಳರು ಹೊಹಾರ ತರುವರು) ಇವಳು ಚಿಕ್ಕಮ್ಮನಲ್ಲಿಗೆ ಹೋಗುವುದು ಬೇಡ. ನಿನ್ನ ರಾಜ್ಯಕ್ಕೆ
ಕರಕೊಂಡು ಹೋಗು. ಮಹಾರಾಣಿಯಾಗಿ ಬಾಳು ಮಗಳೇ.
(ಶ್ವೇ.ಸುಂದರಿ, ರಾಜಕುಮಾರ ಹಾರ ಬದಲಾಯಿಸುವರು)
ಹಾದು : ಈ ಜಗವೇ ನಾಟ್ಕ ರಂಗ…. (ಆರಂಭದ ಹಾಡು)
(ನಿರ್ಗಮನ)
*****************************