ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ
ಈ ಲೋಕ ಎಷ್ಟು ವಿಚಿತ್ರ-ಆದರೆ ನಿಜವಾಗುತ್ತದೆ!
ಮೊದಲು ಏರುತಗ್ಗುಗಳು ಗೋಚರಿಸುತ್ತವೆ.  ಮತ್ತೆ
ದಿಗಂತಗಳು ಬಳುಕುತ್ತವೆ, ಆಯತಗಳು
ತ್ರಿಕೋಣಗಳಾಗುತ್ತವೆ, ವೃತ್ತಗಳಾಗುತ್ತವೆ.  ಯಾರೂ
ಇದು ತನಕ ಕಲ್ಪಿಸದ ವಿನ್ಯಾಸಗಳು ಕಾಣಿಸುತ್ತವೆ.

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ
ಯಾಕೆ ವಾಮನ ಮಾಸ್ತರರು ತಮ್ಮಷ್ಟಕ್ಕೇ ಮಾತಾಡುತ್ತಾರೆ
ಎಂಬುದಕ್ಕೆ ಕಾರಣ ಸಿಗುತ್ತದೆ.  ನಳನಿಯ ನಾಚಿಕೆ
ಹೇಗೆ ಒಮ್ಮೆಲೆ ನಷ್ಟವಾಯಿತು ಎಂಬುದು ಗೊತ್ತಾಗುತ್ತದೆ.
ಮುಖ್ಯ, ತಾಲೂಕಾಪೀಸು ಯಾಕೆ ತಲೂಕಾಪೀಸಾಗಿದೆ
ಎಂಬುದು ಅರ್ಥವಾಗುತ್ತದೆ.

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ
ಮನುಷ್ಯರು ಯಾಕೆ ಕಾರಣವಿಲ್ಲದೆ ಭಯಪಡುತ್ತಾರೆ
ಎಂಬುದು ತಿಳಿಯುತ್ತದೆ.  ಯಾವಾಗಲೂ ಕಾಲಮೇಲೇ
ನಡೆಯುವವರು ಕೆಳಗಿನಿಂದ ಮೇಲೆ ನೋಡಲಾರರು.
ಯಾವಾಗಲೂ ಮುಂದೆ ನೋಡುವವರು ಹಿಂದೆ ಕಾಣಲಾರರು.  ಹೀಗಿದ್ದೂ
ಒಪ್ಪಿಕೊಳ್ಳದವರನ್ನು ಇಲ್ಲಿ ತಂದು ನಿಲ್ಲಿಸಿ!

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡುವುದೆಂದರೆ
ನಾವು ನಮ್ಮನ್ನು ನಿಜವಾದ ಸಂದರ್ಭದಲ್ಲಿ ನಿಲ್ಲಿಸಿದಂತೆ,
ತಕ್ಷಣ ಗುರುತಿಸಿದಂತೆ.  ಒಂದು ಬೂದುಗುಂಬಳಕಾಯಿಯ ಮೇಲೆ
ನಿಲ್ಲದಿದ್ದರು ಕೂಡ ನಿಮಗೆ ಹಾಗೆನಿಸುತ್ತಿದ್ದರೆ
ಕಾರಣ ಇಷ್ಟೆ:  ಈ ಭೂಮಿಯ ಕೆಳಗೆ ನಿಜಕ್ಕೂ
ಒಂದು ದೊಡ್ಡ ಬೂದುಗುಂಬಳಕಾಯಿ ಇದೆ.
*****