ಎದೆಗುಂಡಿಗೆ ಬಣ್ಣ ಬಣ್ಣ ತುಂಬಿ
ಮೌನ ಮಾತನಾಡಿಯೇ ಬಿಡುವ
ನವಿಲುಗರಿಯೂ ಚಿತ್ತಾರಕೆ ಚಿಗುರಿ
ಮುದುಕರೂ ಹರಯರಾಗುವ ಬೆಂಗಳೂರಿನ
ಬ್ರಿಗೇಡ್ ರಸ್ತೆಗೆ ಮುಪ್ಪಿಲ್ಲ-

ಹದಗೊಳ್ಳುವ ಮನಸುಗಳ ತು೦ಬೆಲ್ಲ
ಕನಸಿನ ಸಾಮ್ರಾಜ್ಯದ ಲಗ್ಗೆ
ದಶದಿಕ್ಕು ದಶಾವತಾರದ ಚಿತ್ತ
ಮಿಂಚು ಸಂಚಾಗುವ ಸಮಯಕೆ
ರಸಿಕ ಕಣ್ಣುಗಳಿಗೊಮ್ಮೊಮ್ಮೆ ಮೋಸ
ಆದರೂ, ಬ್ರಿಗೇಡ್ ರಸ್ತೆಯ ಕೆನ್ನೆಯ ಕೆಂಪು ಮಾಸುವುದಿಲ್ಲ-

ದಿನದಿನವೂ ಅವಿಶ್ರಾಂತ ಕುಣಿತ
ಕೇಳಿಸುವದಿಲ್ಲ ಅಳುವಿನ ಹಸಿವಿನ ಶಬ್ದ
ಸಿರಿವ೦ತರ ಸಿರಿಪಿತ್ತು ಕಂಡೇ
ಕಳ್ಳ ಕದೀಮರಿಗೆ ಜಾತ್ರೆಯ ತೇರು
ಎಳೆದಷ್ಟೂ ಎಳೆದಷ್ಟೂ ಬ್ರಿಗೇಡ್‌ರಸ್ತೆ ಸವೆಯುವುದಿಲ್ಲ.

ಕೋಲ್ಡ್‌ಡ್ರಿಂಕ್ಸ್‌ಗಳಲಿ ಬೆಚ್ಚಗಾಗಿ
ಹಾಟ್ಟ್‌ಪಿಝಾ(Pizza)ಗಳಲಿ ತಣ್ಣಗಾಗುವ ನಗು
ಬೆಚ್ಚನೆಯ ವಿದೇಶಿಮಾಲುಗಳಲಿ
ಮರುಳಾಗುವ ಮೋಜುಗಳು ಜೂಜುಗಳು
ಚಳಿ ಮಳೆ ಬಿಸಿಲಲ್ಲೂ ಖುಷಿಕೊಡುವ
ಬ್ರಿಗೇಡ್ ರಸ್ತೆ ಮುದುರುವದೇ ಇಲ್ಲ.
*****