ಇಂದಿನರಸನಿಗೇಕೆ ನಾಳನಾಳುವ ಚಿಂತೆ?
ಇಂದು ರಸವನು ಸವಿವುದವಗೆ ಸಾಜ.
ಇಂದು ಮುಳುಗದೆ, ನಾಳೆ ಹೊತ್ತು ಮಾಡುವದೇನು?
ಹೊತ್ತು ಮೂಡಲು, ಇಂದುಗಿಲ್ಲ ತೇಜ.
ನಾಳಮೊಗವನು ಮುಸುಕದಿರಲಿಂದು, ಆ ನಿನ್ನೆ
ಸತ್ತ ಹೊತ್ತಿನ ನೆರಳು ಇಂದು ಅಲ್ಲ.
ನಾಳಿನ ಭವಿಷ್ಯಕ್ಕೆ ಬಾಯಿ ಹಾಕುವ ಪ್ರಾಣಿ,
ಇಂದೀಗಳೀ ಹೊತ್ತು ಬಾಳ ಬೆಲ್ಲ.
ಉಸಿರಿನುಯ್ಯಾಲೆಯಲಿ ಜೀಕುತಿದೆ ಜೀವ
ಜೋಕೆಯಲಿ ಜೀವನವ; ಕಂಡಿಲ್ಲ ಸಾವ.
ಹಿಂದುಮುಂದಿನ ಮುತ್ತ ಪವಣಿಸುವ ಇಂದು
ಎಂದೆಂದಿಗೂ ನೆಲೆಯು; ಇರಲಂದಿಗಂದು!
*****