ಒಂದು ಸೇವಾಶ್ರಮದಲ್ಲಿ ಅನೇಕ ಅಂಗವಿಕಲರು, ಕುಂಟರು, ಕುರುಡರು, ಹೆಳವರು, ಮೂಕರು, ಬುದ್ಧಿ ಮಾಂದ್ಯರು, ನಿಶ್ಯಕ್ತರು, ಹೀಗೆ ಹಲವು ಹತ್ತು ಜನರಿದ್ದರು. ಅವರು ಜಗತ್ತನ್ನು ನೋಡುತ್ತಿದ್ದರು. ಜನಗಳು ಹಣೆಯಲ್ಲಿ, ತಿಲಕ, ವಿಭೂತಿ, ಪಟ್ಟೆ, ಮುದ್ರೆ, ನಾಮ, ಅಂಗಾರ ಅಕ್ಷತೆ ಹಚ್ಚಿಕೊಂಡು ದೇವಾಲಯಗಳಿಗೆ ಹೋಗುವುದನ್ನು, ತಮ್ಮ ಧರ್ಮದ ಬಗ್ಗೆ ಬಾಯಿ ತುಂಬಾ ಮಾತಾಡಿ ಗುರುಗಳ ಉಪದೇಶ ಕೇಳಿ ಧರ್ಮ ದೈವದ ಬಗ್ಗೆ ಚರ್ಚೆ ಮಾಡುವುದನ್ನು ನೋಡಿದ್ದರು. ಅಂಗವಿಕಲರು ಒಮ್ಮೆ ಸಭೆ ಸೇರಿ ಚರ್ಚೆಗೆ ತೊಡಗಿದರು.
“ಕುರುಡನ ಕಣ್ಣಿಗೆ ದೈವದ ದರ್ಶನ ಒಳಗಿನ ಕಣ್ಣೆಅಲ್ಲವೇ?” ಎಂದ ಒಬ್ಬ ಹುಟ್ಟು ಕುರುಡ.
ಕೈಯಿಲ್ಲದ ಹೆಳವನಾದ ನನಗೆ “ಹಣೆಯಲ್ಲಿ ಯಾವ ತಿಲಕ ನಾಮ ಇಟ್ಟುಕೊಳ್ಳಲು ನನಗೆ ಕೈ ಇಲ್ಲ. ನನಗೆ ದಯಯೇ ದೈವ, ಧರ್ಮ” ಎಂದ.
ಕುಂಟನೋರ್ವ ಹೇಳಿದ “ನಾನು ನಡೆದು ಹೋಗಲಾರೆ. ನನಗೆ ದೇಹವೇ ದೇವಾಲಯ. ನನ್ನ ಆಂತರ್ಯದಲ್ಲೇ ನನ್ನ ಆರಾಧ್ಯ ದೈವ” ಎಂದ.
“ಹೀಗೆ ಅಂಗವಿಕಲಾರಾದರೂ ನಾವು ನಾಮ, ಮುದ್ರೆ ಮಂದಿರ, ಜಾತಿ ಪಂಗಡಗಳಿಲ್ಲದೆ ದೇವರನ್ನು ದಯೆಯಲ್ಲಿ ಧರ್ಮದಲ್ಲಿ ಕಂಡುಕೊಂಡಿದ್ದೇವೆ. ಎಲ್ಲಾ ನೆಟ್ಟಗಿರುವ ಜನರೇಕೆ ದಯೆಯೇ ಧರ್ಮವೆಂಬುದು ಬಿಟ್ಟು ವಕ್ರಗತಿಯಲ್ಲಿ ಸಾಗಿದ್ದಾರೆ?” ಎಂದ ಮತ್ತೋರ್ವ ಅಂಗವಿಕಲ.
ಇವರೆಲ್ಲರ ಹೃದಯದಲ್ಲಿ ಅಧ್ಯಕ್ಷತೆವಹಿಸಿದ ದೈವ, ದಯೆಯ ಮಹಾಪೂರ ಹರಿಸಿದ.
*****