ಸ್ತ್ರೀವಾದದ ಹಿನ್ನೆಲೆಯಲ್ಲಿ ಮಹಿಳಾ ಚಳವಳಿ

ಸ್ತ್ರೀವಾದದ ಹಿನ್ನೆಲೆಯಲ್ಲಿ ಮಹಿಳಾ ಚಳವಳಿ

ಚಳವಳಿ ಎಂಬ ಪದವೇ ಚಲನಶೀಲತೆಯನ್ನು, ಬದಲಾವಣೆಯನ್ನು ಸಂಕೇತಿಸುತ್ತದೆ. ಈ ಜಗತ್ತಿನಲ್ಲಿ ಅನೇಕ ಚಳವಳಿಗಳು ಆಗಿಹೋಗಿವೆ. ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಗೋಕಾಕ ಚಳವಳಿಯವರೆಗೆ, ಚಲನಚಿತ್ರ ವಿತರಕರ ಪ್ರದರ್ಶನದಿಂದ ಹಿಡಿದು ಜಾಗತೀಕರಣವನ್ನು ವಿರೋಧಿಸುವವರೆಗೆ, ಬೆಲೆ ಏರಿಕೆಯನ್ನು ಪ್ರತಿಭಟಿಸುವುದರಿಂದ ಹಿಡಿದು ಅಮೆರಿಕದ ಯುದ್ಧ ದಾಹ ನೀತಿಯನ್ನು ಖಂಡಿಸುವವರೆಗೆ…. ಹೀಗೆ ವ್ಯಾಪಕವಾಗಿ ಹರಡಿಹೋಗಿರುವ ಚಳವಳಿಯ ಇತಿಹಾಸದಲ್ಲಿ ಮಹಿಳಾ ಚಳವಳಿಯೂ ಒಂದು. ಇದು, ಒಂದು ಅರ್ಥದಲ್ಲಿ ತೀರಾ ಇತ್ತೀಚಿನದೂ ಹೌದು. ಒಂದು ಅರ್ಥದಲ್ಲಿ ತುಂಬಾ ಪ್ರಾಚೀನವೂ ಹೌದು. ಅಕ್ಕ ಮಹಾದೇವಿಯೂ ಭಾಗವಹಿಸಿದ್ದ ಶರಣ ಚಳವಳಿಯಿಂದ ಇಂದಿನ ಮಹಿಳಾ ಮೀಸಲಾತಿ ಮಸೂದೆಯವರೆಗೆ ಹರಡಿರುವ ಮಹಿಳಾ ಚಳವಳಿಯನ್ನು ಸ್ತ್ರೀವಾದದ ಹಿನ್ನಲೆಯಲ್ಲಿ ಹಿಡಿದು ನೋಡುವ ಪ್ರಯತ್ನವಿದು. ಇದರಿಂದ ಮಹಿಳಾ ಚಳವಳಿಗೆ ಒಂದು ಗಟ್ಟಿ ತಳಪಾಯವನ್ನು ಹಾಕಿದಂತಾಗಬಹುದೇನೋ ಎಂಬ ಭ್ರಮೆಯೋ ಭರವಸೆಯೋ ನನ್ನನ್ನು ಈ ದಿಕ್ಕಿನಲ್ಲಿ ಯೋಚಿಸುವಂತೆ ಮಾಡುತ್ತಿದೆ.

ಮೊದಮೊದಲು ಪಾಶ್ಚಾತ್ಯ ದೇಶಗಳಿಂದ ಆಮದಾದುದೋ ಎಂಬಂತೆ ಭಾವಿಸಲಾಗುತ್ತಿದ್ದ ಸ್ತ್ರೀವಾದದ ಬೇರುಗಳನ್ನು ಭಾರತದ ನೆಲದಲ್ಲಿ ಕನ್ನಡದ ನೆಲದಲ್ಲಿ ಹುಡುಕುವ ಸಫಲ ಪ್ರಯತ್ನ ಈಗ ಸಾಗುತ್ತಿದೆ. ಈ ದಾರಿಯಲ್ಲಿ ಮೊದಲು ಕಾಣುವುದು ಜನಪದ ಸಾಹಿತ್ಯ, ನಮ್ಮ ಎರಡು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಿಗೂ ಜಾನಪದ ಕತೆಯೇ ಮೂಲವಾದುದರಿಂದ, ಜಾನಪದ ಪರಂಪರೆಯು ಮೂಲತಃ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆಯಾದುದರಿಂದ ಆಗಿನ ಕಾಲದ ಹೆಂಗಸರು ಯಾವ ಕಷ್ಟಕ್ಕೂ ಹೆದರುತ್ತಿರಲಿಲ್ಲ. ಹೆಣ್ಣು, ಮನೆಗೆಲಸವನ್ನೆಲ್ಲಾ ಮುಗಿಸಿ ಹೊಲಗದ್ದೆಗಳಲ್ಲೂ ದುಡಿಯುತ್ತಿದ್ದ ಕಾಲ ಅದು. ಹೀಗಾಗಿ ಮನೆಗೆ ಒಂದು ಹೆಣ್ಣು ಬರುವುದೆಂದರೆ ಒಳಗೂ ಹೊರಗೆ ದುಡಿಯುವ ಒಂದು ಆಳು ಬಂದಂತೆ. ಆ ಕಾರಣಕ್ಕಾಗಿಯೇ ಕನ್ಯಾಶುಲ್ಕ, ತೆರೆ ಕೊಟ್ಟು ಹೆಣ್ಣು ತರುವ ಪದ್ಧತಿಯಿತ್ತು. ಜಾನಪದ ಪರಂಪರೆಯಿಂದ ಶೃತಿ ಪರಂಪರೆಗೆ ಬದಲಾಗುವ ವೇಳೆಗೆ ಬಹುಶಃ ಆರ್ಯರು ಇಲ್ಲಿಯ ಮೂಲ ನಿವಾಸಿಗಳನ್ನು ಸೋಲಿಸಿ ತಮ್ಮ ಆಧಿಪತ್ಯ ಸ್ಥಾಪಿಸುವ ವೇಳೆಗೆ ಅವರ ಭಾಷೆಯಾದ ಸಂಸ್ಕೃತವೂ ಈ ದೇಶದಲ್ಲಿ ಆಧಿಪತ್ಯ ಸ್ಥಾಪಿಸಿತು. ಇಡೀ ಆರ್ಯಾವರ್ತದ ಭಾವೈಕ್ಯತೆಗೆ ಸಂಸ್ಕೃತ ಭಾಷೆ ದುಡಿಯಿತು. ಸಂಸ್ಕೃತ ಸಾಹಿತ್ಯದ ಅಥವಾ ಹಿಂದೂ ಧರ್ಮದ ಅಥವಾ ವೈದಿಕ ಸಂಸ್ಕೃತಿಯ ಪ್ರಾಚೀನ ಗ್ರಂಥಗಳೆಂದರೆ ವೇದಗಳೇ.

ವೇದ ಉಪನಿಷತ್ತುಗಳು ಮೇಲುನೋಟಕ್ಕೆ ಸ್ತ್ರೀಯರಿಗೆ ಸ್ವಚ್ಛಂದ ಸ್ವಾತಂತ್ರ್ಯ ನೀಡಿರುವಂತೆ ಭಾಸವಾಗುತ್ತದೆ. ಕೆಲವು ವೇದ ಮಂತ್ರಗಳನ್ನು ಸ್ತ್ರೀಯರೇ ರಚಿಸಿದರೆಂದೂ ಪ್ರತೀತಿ. ಅದಕ್ಕೆ ನಿರ್ಬಂಧಗಳೂ ಇದ್ದಿರಬಹುದೆಂಬುದಕ್ಕೆ ಗೌತಮರ ಪತ್ನಿ ಅಹಲ್ಯ ಮತ್ತು ಜಮದಗ್ನಿಗಳ ಪತ್ನಿ ರೇಣುಕೆ, ಅವರ ಗಂಡಂದಿರ ಶಾಪಕ್ಕೆ ಗುರಿಯಾದುದೇ ಸಾಕ್ಷಿ. ಆದರೂ ನಂತರದ ಕಾಲದಲ್ಲಿ ಒಂದು ಪಿಡುಗಾದ ಸತೀ ಪದ್ಧತಿಯು ವೇದಗಳಲ್ಲಿ ಐಚ್ಛಿಕವಾಗಿದ್ದುದಕ್ಕೆ – ಒಂದು ಉದಾಹರಣೆ ಕೊಡಬಹುದು – ಗಂಡನು ಸತ್ತು ಚಿತೆಯೇರುವಾಗ ಎತ್ತರವಾದ ವೇದಿಕೆಯ ಮೇಲೆ ಚಿತೆಯನ್ನು ನಿರ್ಮಿಸಿ ಅದರ ಪಕ್ಕದಲ್ಲಿ ಸಾಂಕೇತಿಕವಾಗಿ ಅವನ ಹೆಂಡತಿಯನ್ನು ಕೂರಿಸುತ್ತಿದ್ದರು. ಅವಳ ಬಂಧುಬಳಗವು ಅವಳನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿ ಅವಳನ್ನು ಕೆಳಗಿಳಿದು ಬರುವಂತೆ ಕರೆಯುತ್ತಿದ್ದರು. ಅವಳಿಗೆ ಇನ್ನೊಂದು ಮದುವೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಇದ್ದಿತು. ಹೀಗೆ ಸತೀ ಪದ್ಧತಿಯು ಕೇವಲ ಸಾಂಕೇತಿಕವಾಗಿದ್ದಿತು. ಅವಳಿಗೊಮ್ಮೆ ಗಂಡನ ಮೇಲೆ ಅತ್ಯಧಿಕ ಮೋಹವಿದ್ದು ಅವನಿಲ್ಲದೇ ಬದುಕಿರುವುದೇ ಅಸಾಧ್ಯವೆನ್ನಿಸಿದ ಪಕ್ಷದಲ್ಲಿ ಅವಳು ಕೆಳಗಿಳಿಯದೇ ಹಾಗೇ ಚಿತೆಯೇರಬಹುದಿತ್ತು.

ಹೀಗೆ ವೇದಗಳ ಕಾಲದಲ್ಲಿ ಸ್ತ್ರೀಯರಿಗೆ ಇದ್ದ ಸ್ವಾತಂತ್ರ್ಯವು ಸ್ಮೃತಿಗಳ ಕಾಲಕ್ಕೆ ಇಲ್ಲವಾಗಿ ಸ್ಮೃತಿ ವಾಕ್ಯಗಳು ಸಾರಾಸಗಟಾಗಿ ವೇದ, ಉಪನಿಷತ್ತು, ಪುರಾಣ, ರಾಮಾಯಣ, ಮಹಾಭಾರತಗಳನ್ನು ಪ್ರವೇಶಿಸಿ ಸ್ಮೃತಿ ಪ್ರಾಮಾಣ್ಯವು ವೇದ ಪ್ರಾಮಾಣ್ಯವಾಯಿತು. ಆಗ ಗಂಡನ ಚಿತೆಯಿಂದ ಸುಖವಾಗಿ ಕೆಳಗಿಳಿದು ಬಂದು ಬಿಡುತ್ತಿದ್ದ ಹೆಣ್ಣು ಸ್ಮೃತಿಕಾರರ ಕಣ್ಣಿಗೆ ಹುಣ್ಣಾದಳು. ಅವಳನ್ನು ಅಲ್ಲೇ ಸುಟ್ಟು, ಬಿಡುವುದೇ ಅವರಿಗೆ ನಿಯಮವಾಯಿತು. ಈ ಹಂತದಲ್ಲಿ ಮನು ಆಪಸ್ತಂಭ, ಅಶ್ವಲಾಯನ ಮೊದಲಾದವರು ವಿಧವೆಗೆ ಮರುಮದುವೆ ಬೇಡವೆಂದೂ ಅವಳು ಸೌಮಾಂಗಲ್ಯದ ಚಿಹ್ನೆಗಳನ್ನು ತೊರೆದು ಅರೆಹೊಟ್ಟೆ, ಉಂಡು ಇರಬೇಕೆಂದೂ ಸೂಚಿಸಿದರು.

ಹೀಗೆ ಸುಮಾರು ನಾಲ್ಕೈದು ಸಾವಿರ ವರ್ಷಗಳ ಪರಂಪರೆಯ ಭಾರದಲ್ಲಿ ಮತ್ತು ಸಂಸ್ಕೃತ ಭಾಷೆಯ ಪಾಲನೆ ಪೋಷಣೆಯೊಂದಿಗೆ ಶೋಷಣೆಯಲ್ಲೂ ಕಣ್ತೆರೆದ ಕನ್ನಡ ಸಾಹಿತ್ಯ ಚರಿತ್ರೆಗೆ ಬಂದರೆ ನಿಜವಾಗಿಯೂ ಸಂತೋಷವಾಗುತ್ತದೆ. ಸ್ತ್ರೀವಾದ ಎಂಬ ಪದವೊಂದಿಲ್ಲದೇ ಅದರ ಪರಿಕಲ್ಪನೆಯನ್ನು ನೀಡಿದ ಮೊಟ್ಟಮೊದಲ ಕವಿ ರನ್ನ, ತನ್ನ ‘ಅಜಿತ ಪುರಾಣ’ದಲ್ಲಿ ತನಗೆ ಆಶ್ರಯ ನೀಡಿದ ಅತ್ತಿಮಬ್ಬೆಯನ್ನು ಅರವತ್ತಾರು ಪದ್ಯಗಳಲ್ಲಿ ಮನತುಂಬಿ ಹೊಗಳಿದ್ದಾನೆ. ಮಲ್ಲಪನ ಮಗಳಾಗಿ ದಲ್ಲಪನ ಸೊಸೆಯಾಗಿ ನಾಗಿಮಯ್ಯನ ಹೆಂಡತಿಯಾಗಿ ಯುದ್ಧದಲ್ಲಿ ಎಲ್ಲರನ್ನೂ ಕಳೆದುಕೊಂಡು ತನ್ನ ಸಪತ್ನಿಯೂ, ತಂಗಿಯೂ ಆದ ಗುಂಡಮಬ್ಬೆಯ ಮಗ ಅಣ್ಣಿಗದೇವನನ್ನು ಸಾಕಿ ಸಲಹಿ ಕೊನೆಗೆ ಅವನೂ ಯುದ್ಧದಲ್ಲಿ ಸಾಯಲು ತನ್ನಲ್ಲಿದ್ದ ಸಂಪತ್ತನ್ನೆಲ್ಲಾ ಜೈನ ಧರ್ಮಕ್ಕಾಗಿ ವಿನಿಯೋಗಿಸಿದ. ಪೊನ್ನನ ಶಾಂತಿ ಪುರಾಣದ ಪ್ರತಿಗಳನ್ನು ಮಾಡಿಸಿ ಚಿನ್ನ ಮತ್ತು ರತ್ನಗಳ ಜಿನಬಿಂಬದೊಂದಿಗೆ ಹಂಚಿದ, ತನ್ನಿಂದ ಅಜಿತ ಪುರಾಣವನ್ನು ಬರೆಸಿದ, ಅತ್ತಿಮಬ್ಬೆಯನ್ನು ರನ್ನ ಮನದುಂಬಿ ಹೊಗಳುತ್ತಾನೆ. ಹನ್ನೆರಡನೇ ಶತಮಾನದ ವಚನ ಚಳವಳಿಯಲ್ಲಿ ಬಸವಣ್ಣ ಅಲ್ಲಮರಿಗೆ ಸಮಕಾಲೀನರಾಗಿ ಅಕ್ಕ ಮತ್ತು ಅನೇಕ ಶಿವಶರಣೆಯರು ವಚನಗಳನ್ನು ರಚಿಸಿದ್ದಾರೆ. ವೈಯಕ್ತಿಕ ಬದುಕಿನ ನೋವು-ನಲಿವುಗಳನ್ನು ಮೀರಿ ವಚನಗಳ ಮೂಲಕ ತಮ್ಮ ಅಭಿವ್ಯಕ್ತಿ ನೀಡುವಾಗ ಸಮಾಜವು ವಿಧಿಸಿದ್ದ ಸಾಂಪ್ರದಾಯಕ ನಿರ್ಬಂಧಗಳನ್ನು ಇವರು ಮೀರಿ ಬರೆದರು. ‘ನಡುವೆ ಸುಳಿವಾತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ’ ಎಂದು ಹೇಳಿ ಲಿಂಗ ಭೇದವನ್ನು ವಿರೋಧಿಸಿದರು. ಚೆನ್ನಮಲ್ಲಿಕಾರ್ಜುನನೇ ತನ್ನ ಗಂಡ ಎಂದು ಹೇಳಿ ಕುಟುಂಬ ವ್ಯವಸ್ಥೆಯನ್ನು ಧಿಕ್ಕರಿಸಿದ ಅಕ್ಕ ಆ ಕಾಲಕ್ಕೆ ತುಂಬಾ ಧೈರ್ಯದ ಹೆಜ್ಜೆಯಿಟ್ಟವಳು. ಮುಕ್ತಾಯಕ್ಕ, ನೀಲಮ್ಮ, ಗೊಗ್ಗವ್ವ ಮೊದಲಾದವರೂ ಸಾಕಷ್ಟು ದಿಟ್ಟರಾಗಿಯೇ ಮುಕ್ತ ಅಭಿಪ್ರಾಯ ನೀಡಿದ್ದಾರೆ. ಆದರೆ ವಚನ ಸಾಹಿತ್ಯವು ಸೃಷ್ಟಿಸಿದ ಈ ಬೆರಗುಗೊಳಿಸುವ ವೈಚಾರಿಕತೆ ಅಲ್ಲಿಗೇ ನಿಂತಂತೆ ತೋರುತ್ತದೆ. ಹದಿನೇಳನೇ ಶತಮಾನಕ್ಕೆ ಬಂದರೆ ಚಿಕ್ಕದೇವರಾಜ ಒಡೆಯರ ಆಶ್ರಯದಲ್ಲಿ ಕಾವ್ಯ ರಚಿಸಿದ ಸಂಚಿಹೊನ್ನಮ್ಮ, ಹೆಳವನಕಟ್ಟೆ ಗಿರಿಯಮ್ಮ, ಶೃಂಗಾರಮ್ಮ ಇವರೆಲ್ಲಾ ಸಂಪ್ರದಾಯದ ಭಾರದಡಿ ಕಾವ್ಯ ರಚಿಸಿದವರು. ಸಂಚಿಹೊನ್ನಮ್ಮ ಕೆಳವರ್ಗದವಳಾಗಿದ್ದು ಊಳಿಗದವಳಾಗಿದ್ದು ಹೆಣ್ಣಿನ ಹಿರಿಮೆಯನ್ನು ಅಷ್ಟರಮಟ್ಟಿಗೆ ಎತ್ತಿಹಿಡಿದದ್ದೇ ಆ ಕಾಲಕ್ಕೆ ಹೆಚ್ಚಿನದಾಗಿತ್ತು.

ಹದಿನೇಳನೇ ಶತಮಾನದಿಂದ ಹತ್ತೊಂಬತ್ತನೇ ಶತಮಾನಕ್ಕೆ ಬಂದರೆ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಮಹಿಳಾ ಯುಗವನ್ನು ನಾವು ಪ್ರವೇಶಿಸುತ್ತೇವೆ. ಪ್ರಾಚೀನ ಸಾಹಿತ್ಯದಲ್ಲಿ ಇಷ್ಟೊಂದು ವಿರಳವಾದ ಬೆರಳೆಣಿಕೆಯಂತಿರುವ ಈ ಲೇಖಕಿಯರ ಸಂಖ್ಯೆ ಆಧುನಿಕ ಕಾಲದಲ್ಲಿ ಅಪರಿಮಿತ ವೇಗದಲ್ಲಿ ವೃದ್ಧಿಯಾಗಲು ಮೊದಲ ಕಾರಣ, ಬ್ರಿಟಿಷ್ ಸರ್ಕಾರದ ನೆರವಿನಿಂದ ಭಾರತದಲ್ಲಿ ಜಾರಿಗೆ ಬಂದ ಮಹಿಳಾ ವಿದ್ಯಾಭ್ಯಾಸ ಅದರೊಂದಿಗೆ ಬ್ರಹ್ಮ ಸಮಾಜ, ಆರ್ಯ ಸಮಾಜಗಳ ಮೂಲಕ ರಾಜಾರಾಂ ಮೋಹನ್‌ರಾಯ, ದಯಾನಂದ ಸರಸ್ವತಿ ಅವರು ಸತಿಪದ್ಧತಿ ಮತ್ತು ಬಾಲ್ಯವಿವಾಹದಂತಹ ಅನಿಷ್ಠಗಳ ವಿರುದ್ಧ ಮಾಡಿದ ಹೋರಾಟ, ಇದೇ ಸಂದರ್ಭಕ್ಕೆ ಚಿಗುರೊಡೆದು ಭಾರತದಾದ್ಯಂತ ಹಬ್ಬಿದ ಅಹಿಂಸಾತ್ಮಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹಾತ್ಮಾಗಾಂಧಿ ಕೊಟ್ಟ ಕರೆ ಮತ್ತು ಮಹಿಳೆಯರು ಅದರಲ್ಲಿ ಭಾಗವಹಿಸಲು ದೊರತ ಮುಕ್ತ ಅವಕಾಶ ಈ ಮೂರು ಅಂಶಗಳು ಬಂಗಾಳಿ ಲೇಖಕರ ಸಾಮಾಜಿಕ ಕಾದಂಬರಿಗಳ ರಚನೆಗೆ ಪ್ರೇರಣೆ ನೀಡಿದವು. ಅವು ಕನ್ನಡಕ್ಕೆ ಅನುವಾದವಾಗಿ ಇಲ್ಲೊಂದು ಹೊಸ ಗಾಳಿ ಬೀಸಿತು. ಹೀಗೆ ಬಂದ ಹೊಸಗನ್ನಡದ ಮೊದಲ ತಲೆಮಾರಿನ ಲೇಖಕಿಯರಾದ ನಂಜನಗೂಡು ತಿರುಮಲಾಂಬಾ, ಆರ್. ಕಲ್ಯಾಣಮ್ಮ, ತಿರುಮಲೆ ರಾಜಮ್ಮ, ಹೆಚ್.ವಿ. ಸಾವಿತ್ರಮ್ಮ, ಸಿ.ಎನ್. ಜಯಲಕ್ಷ್ಮೀದೇವಿ, ಬೆಳಗೆರೆ ಜಾನಕಮ್ಮ, ಹೆಚ್. ಶ್ಯಾಮಲಾದೇವಿ, ಹೆಚ್‌.ಎಸ್. ಕಾತ್ಯಾಯನಿ, ಉಳ್ಳೂರು ಮುಕಾಂಬಿಕಮ್ಮ, ಸೀತಾದೇವಿ ಪಡುಕೋಣೆ ಮೊದಲಾದವರು ನವೋದಯದ ರಮ್ಯ ಪರಂಪರೆಯಲ್ಲಿ ಬರೆಯುತ್ತಿದ್ದ, ಕುವೆಂಪು ಬೇಂದ್ರೆಯವರಿಂದಾಗಲೀ ಪ್ರಗತಿಶೀಲರಾಗಿ ರೋಚಕವಾಗಿ ಬರೆಯುತ್ತಿದ್ದ ಅನಕೃ, ತರಾಸು, ನಿರಂಜನ ಅವರಿಂದಾಗಲೀ ಪ್ರಭಾವಿತರಾಗದೇ ತಮ್ಮ ಕಾಲದ ಸುಧಾರಣಾ ವಾದಿಗಳಾದ ವೆಂಕಟರಂಗೋ ಕಟ್ಟಿ, ಕರ್ಕಿ ವೆಂಕಟರಮಣ ಶಾಸ್ತ್ರಿ, ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯರು, ಕೆರೂರು ವಾಸುದೇವಾಚಾರ್ಯರು ಇವರನ್ನು ಅನುಸರಿಸಿದ್ದರಿಂದ ಮೌಲಿಕ ಸಾಹಿತ್ಯವನ್ನು ರಚಿಸುವಂತಾಯಿತು. ಇವರಲ್ಲಿ ಹಲವರು ಪತ್ರಕರ್ತೆಯರು. ನಂಜನ ಗೂಡು ತಿರುಮಲಾಂಬಾ, ‘ಸತೀ ಹಿತೈಷಿಣಿ’ಗ್ರಂಥಮಾಲೆಯನ್ನೂ, ‘ಸನ್ಮಾಗದರ್ಶಿನಿ’, ಪತ್ರಿಕೆಯನ್ನೂ ನಡೆಸುತ್ತಿದ್ದವರು, ಆರ್. ಕಲ್ಯಾಣಮ್ಮ `ಮಕ್ಕಳ ಕೂಟ’ ಸ್ಥಾಪಿಸಿ, ‘ಸರಸ್ವತೀ’ ಎಂಬ ಪತ್ರಿಕೆ ನಡೆಸುತ್ತಿದ್ದವರು, ಹೆಚ್. ಶ್ಯಾಮಲಾದೇವಿಯವರು ‘ಜಯ ಕರ್ನಾಟಕ’ ಪತ್ರಿಕೆಯ ಮಹಿಳಾ ವಿಭಾಗದ ಸಂಪಾದಕಿಯಾಗಿದ್ದವರು. ಹೀಗೆ ಸಕ್ರಿಯವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವೈಚಾರಿಕವಾಗಿ ಬರೆಯುವ ಶಕ್ತಿಸಾಮರ್ಥ್ಯಗಳಿದ್ದವರು. ಅನಂತರ ಬಂದ ತ್ರಿವೇಣಿಯವರಿಂದ ಪ್ರಾರಂಭವಾದ ಎರಡನೇ ತಲೆಮಾರಿನ ಲೇಖಕಿಯರಾರೂ ಈ ಅಕ್ಕಂದಿರ ಹಾದಿ ತುಳಿಯದೇ, ರಮ್ಯ ಪರಂಪರೆಯಲ್ಲಿ ಬರೆಯುತ್ತಾ ಬಂದ ಅನಕೃ, ತರಾಸು, ನಿರಂಜನ ಅವರನ್ನು ಅನುಸರಿಸಿದ್ದು, ಸಮೃದ್ಧತೆಗೆ ಗಮನಕೊಟ್ಟು ಮೌಲ್ಯಗಳನ್ನು ನಗಣ್ಯವಾಗಿಸಿದ್ದು, ಬದುಕಿನ ವಾಸ್ತವ ನಿಷ್ಟುರಗಳತ್ತ ಬೆನ್ನು ತಿರುಗಿಸಿದ್ದು, ಪುರುಷ ಮಾದರಿಗಳಲ್ಲೇ ಚಿಂತಿಸಿದ್ದು ಮತ್ತು ಬರೆದದ್ದು, ಓದುಗರನ್ನು ಹುಸಿಲೋಕದ ಭ್ರಮೆಯ ಪ್ರಪಂಚಕ್ಕೆ ಎಳೆದೊಯ್ದದ್ದು ಕನ್ನಡ ಸಾಹಿತ್ಯದ ದೃಷ್ಟಿಯಿಂದ ತುಂಬಾ ದುರದೃಷ್ಟಕರವಾದ ಹೆಜ್ಜೆಯಾಯಿತು. ಈ ಕಾರಣದಿಂದಲೇ ಇಂದಿಗೂ ಮಹಿಳಾ ಸಾಹಿತ್ಯವೆಂದರೆ ಮೂಗು ಮುರಿಯುವ ವಿಮರ್ಶಕರು ಮಹಿಳಾ ಸಾಹಿತ್ಯದಲ್ಲೇನಿದೆ ಮಹಾ ? ಅದೇ ಬಂಗಲೆ, ಕಾರು, ಒಡವೆ, ಸೀರೆ ಎನ್ನುವುದು, ಅಡಿಗೆಮನ ಸಾಹಿತ್ಯ ಎಂದು ಅಣಕಿಸುವುದು ನಡೆದೇ ಇದೆ. ಪ್ರತಿ ಗೋಷ್ಟಿಯಲ್ಲಿಯೂ ವೇದಿಕೆಯ ಮೇಲಿನಿಂದ ಒಬ್ಬ ಲೇಖಕಿಯ ಹೆಸರನ್ನೂ ಪ್ರಸ್ತಾಪಿಸದಿರುವುದು ಅಥವಾ ರಾಜಕೀಯದಲ್ಲಿ ಮೀಸಲಾತಿ ಕೊಟ್ಟಂತೆ ಪ್ರತ್ಯೇಕ ಮಹಿಳಾ ಗೋಷ್ಠಿಗಳನ್ನು ನಡೆಸುವುದೂ ನಡೆದೇ ಇದೆ.

ಬ್ರಿಟಿಷರು ಸಾರ್ವತ್ರಿಕ ವಿದ್ಯಾಭ್ಯಾಸವನ್ನು ಜಾರಿಗೆ ತಂದುದು ಮಹಿಳಾ ಲೋಕಕ್ಕೆ ಹೊಸ ಬಾಗಿಲನ್ನು ತೆರೆದಂತಾಯಿತು. ಅದಕ್ಕೂ ಮೊದಲಿನ ಈ ದೇಶದ ಶಿಕ್ಷಣ ವ್ಯವಸ್ಥೆ ಎಂದರೆ ಗುರುಕುಲ, ಅದರಲ್ಲಿ ಮುಪ್ಪಿನ ಋುಷಿಗಳಿಂದ ವೇದಪಾಠ, ಕೆಲವು ಬ್ರಾಹ್ಮಣ ವಟುಗಳು, ಬೆರಳಣಿಕೆಯ ಕೆಲ ಕ್ಷತ್ರಿಯ ಕುಮಾರರು, ಇವರಿಗಾಗಿ ಧನುರ್ವಿದ್ಯೆ, ಕತ್ತಿವರಸೆ ಇತ್ಯಾದಿ. ಇಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶವಿರಲಿಲ್ಲ. ಈ ಹಿನ್ನಲೆಯಲ್ಲಿ ವಿಲಿಯಂ ಬೆಂಟಿಂಕ್, ರಾಜಾರಾಂ ಮೋಹನ್‌ರಾಯ್‌, ಲಾರ್ಡ್ ಮೆಕಾಲೆ – ಎಲ್ಲರ ಪ್ರಯತ್ನದ ಫಲವಾಗಿ ಸಾರ್ವತ್ರಿಕ ವಿದ್ಯಾಭ್ಯಾಸವು ಲಿಂಗಬೇಧವಿಲ್ಲದೇ, ವರ್ಗಬೇಧವಿಲ್ಲದೇ ಸಿಗುವಂತಾದಾಗ ಹೊಸಲೋಕದ ಬಾಗಿಲು ತೆರೆಯಿತು. ಅದೇ ಸಂದರ್ಭದಲ್ಲಿಯೇ ಮಹಾತ್ಮ ಗಾಂಧಿಯವರ ಅಸಹಕಾರ ಸತ್ಯಾಗ್ರಹ ಚಳವಳಿಗೆ ಮಹಿಳೆಯರೂ ಸೇರುವಂತಾದುದು ಆ ಮೊದಲು ಈ ದೇಶದ ಇತಿಹಾಸವು ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ, ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮುಂತಾದವರನ್ನು ನೋಡಿದ್ದರೂ, ಅನಂತರದಲ್ಲಿ ಸರೋಜಿನಿ ಮಹಿಷಿ, ಇಂದಿರಾಗಾಂಧಿ, ಕಿರಣ್‌ ಬೇಡಿ ಅಂಥವರನ್ನು ಕಂಡರೂ ಅಂಥ ಮಹಿಳೆಯರು ಇಡೀ ಮಹಿಳಾ ವರ್ಗಕ್ಕೆ ಆದರ್ಶವಾಗದೇ ಅಪವಾದವಾದುದು ಒಂದು ದೊಡ್ಡ ದುರಂತ. ಅವರುಗಳ ಸಾಧನೆಯಲ್ಲಿ ಕೌಟುಂಬಿಕ ವರ್ಗದ ಸಹಕಾರ, ಪರಿಸ್ಥಿತಿಯ ಸಹಕಾರಗಳಿದ್ದು ಸಾರಾಸಗಟಾಗಿ ಎಲ್ಲಾ ಮಹಿಳೆಯರಿಗೂ ಅದು ಸಿಗುವಂತಿರಲಿಲ್ಲ. ಆ ಕಾಲಕ್ಕೆ ರಚಿತವಾದ ಬಂಗಾಳಿ ಕಾದಂಬರಿಗಳು ಮಹಿಳಾ ವಿದ್ಯಾಭ್ಯಾಸದಿಂದುಂಟಾದ ಸಾಮಾಜಿಕ ಘರ್ಷಣೆಯನ್ನು ಸೊಗಸಾಗಿ ಚಿತ್ರಿಸಿವೆ. ಅವು ಕನ್ನಡಕ್ಕೆ ಅನುವಾದವಾಗಿ ನಂಜನಗೂಡು ತಿರುಮಲಾಂಬಾ ಅಂಥವರ ಮೇಲೂ ಪ್ರಭಾವ ಬೀರಿದ್ದವೆಂಬುದಕ್ಕೆ ಅವರ ಕಾದಂಬರಿಯ ಪಾತ್ರಗಳು ಹೆಣ್ಣು ಶಾಲೆಗೆ ಹೋಗುವ ಬಗ್ಗೆ, ಮನೆಯಲ್ಲಿ ಕುಳಿತು ಹರಟಬಾರದೆಂಬುದಕ್ಕೆ, ಮರುಮದುವೆಯಾಗಬಹುದೇ ಎಂಬ ಬಗ್ಗೆ ಚರ್ಚಿಸುವುದನ್ನು ಕಾಣಬಹುದಾಗಿದೆ.

‘ಹಿಂದಣ ಹೆಜ್ಜೆಯನರಿತಲ್ಲದೇ ನಿಂದ ಹೆಜ್ಜೆಯನರಿಯಬಾರದು’ ಎಂದು ಅಲ್ಲಮಪ್ರಭು ಹೇಳುತ್ತಾನೆ. ನಿಂದ ಹೆಜ್ಜೆಯನ್ನು ಎಂದರೆ ವರ್ತಮಾನವನ್ನು ಅರಿಯಲು ಹಿಂದಣ ಹೆಜ್ಜೆ ಅಂದರೆ ಭೂತವನ್ನು ಅರಿಯಬೇಕು. ಪ್ರತಿಯೊಬ್ಬರಿಗೂ ಪ್ರತಿಯೊಂದಕ್ಕೂ ಒಂದು ಪರಂಪರೆಯಿದೆ ಕನ್ನಡ ಸಾಹಿತ್ಯ ಚರಿತ್ರೆಗೂ ಒಂದು ಪರಂಪರೆಯಿದೆ. ಇದು ಅಕ್ಕಮಹಾದೇವಿಯಿಂದ ಪ್ರಾರಂಭವಾಗಿ ಇಂದಿನ ಈ ಸ್ಥಿತಿಯನ್ನು ತಲುಪಿದ. ಈ ಮಹಿಳಾ ಸಾಹಿತ್ಯ ಚರಿತ್ರೆಯಲ್ಲಿ ತುಂಬಿರುವುದೆಲ್ಲಾ ಕಥೆ-ಕಾದಬರಿಗಳು ಮಾತ್ರವಲ್ಲ. ಪ್ರವಾಸ ಸಾಹಿತ್ಯ, ವೈದ್ಯಕೀಯ ಸಾಹಿತ್ಯ, ಶಿಶು ಸಾಹಿತ್ಯ, ವಿಮರ್ಶೆ, ಪ್ರಬಂಧ, ಕಾವ್ಯ ಮತ್ತು ವೈಚಾರಿಕ ಸಾಹಿತ್ಯದ ಕಡೆಗೆ ಲೇಖಕಿಯರ ಒಲವು ಹೆಚ್ಚುತ್ತಿರುವುದು ಒಂದು ಶುಭಸೂಚನೆಯೆಂದೇ ಹೇಳಬಹುದು.

ಸ್ವಾತಂತ್ರ್ಯ ಪೂರ್ವದ ಆದರ್ಶಗಳು ನವೋದಯ ಕಾಲದ ಸಾಹಿತ್ಯ ರಚನೆಗೆ ಸ್ಫೂರ್ತಿ ಕೊಟ್ಟಂತೆ, ಸ್ವಾತಂತ್ರ್ಯಾನಂತರದ ಭ್ರಮನಿರಸನ ಮತ್ತು ಸಿನಿಕತೆಗಳು ನವ್ಯದ ಕಾಲದ ರಚನೆಗೆ ಪ್ರೇರಣೆ ಕೊಟ್ಟವು. ಪ್ರಗತಿಶೀಲ ಮತ್ತು ದಲಿತ ಬಂಡಾಯದ ಕಾಲವು ಮುಗಿಯುತ್ತಿದ್ದಂತೆ ಸ್ತ್ರೀವಾದವು ತಲೆಯೆತ್ತಿತು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನವ್ಯೋತ್ತರ ಕಾವ್ಯ ಅಥವಾ ಬಂಡಾಯೋತ್ತರ ಸಾಹಿತ್ಯಕ್ಕೆ ಸಮಕಾಲೀನವಾಗಿ ಸ್ತ್ರೀವಾದದ ಅನಿವಾರ್ಯತೆಯನ್ನು ಗುರುತಿಸಲೇಬೇಕಾದ ಹಂತಕ್ಕೆ ನಾವಿಂದು ಬಂದಿದ್ದೇವೆ. ‘ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು’ ಎಂಬಂತೆ ಕೆಲವರು ಸ್ತ್ರೀವಾದವನ್ನು ಅಸ್ಪಷ್ಟವೆಂದೂ ಚರ್ವಿತಚರ್ವಣವೆಂದೂ ಕರೆದರೂ ಸಾಹಿತ್ಯ ಚರಿತ್ರೆಯಲ್ಲಿ ಅದು ದಾಖಲಾಗುವುದನ್ನು ತಪ್ಪಪಿಸುವುದಂತೂ ಸಾಧ್ಯವಿಲ್ಲ.

ಈ ಹಂತದ ಸ್ತ್ರೀವಾದವು ಸಿಮನ್-ದ-ಬುವಾ ಎಂಬ ಫ್ರೆಂಚ್ ಲೇಖಕಿಯ ‘ದಿ ಸೆಕೆಂಡ್ ಸೆಕ್ಸ್’ ಎಂಬ ಪುಸ್ತಕದಿಂದ ಪ್ರಾರಂಭವಾಗುತ್ತದೆ ಎಂದು ನಾವು ಸ್ತೂಲವಾಗಿ ಗುರುತಿಸುತ್ತೇವೆ. ಜರ್ಮನಿ, ಫ್ರಾನ್ಸ್ ಮೊದಲಾದ ದೇಶಗಳೂ ಸೇರಿದಂತೆ ಪ್ರಪಂಚದ ಎಲ್ಲೆಡೆ ಹೆಂಗಸನ್ನು ನೋಡುವುದು ಎರಡನೇ ದರ್ಜೆ ಪ್ರಜೆಯಾಗಿಯೇ, ಸೆಕೆಂಡ್ ಸೆಕ್ಸ್ ಎಂದರೆ ಎರಡನೇ ದರ್ಜೆ ಪ್ರಜೆ ಎಂದರ್ಥ. ಇವಳ ನಂತರ ಮೇರಿ ವೊಲಸ್ಟನ್ ಕ್ರಾಸ್, ಜಾರ್ಜ್ ಎಲಿಯಟ್, ವರ್ಜಿನಿಯಾ ವುಲ್ಫ್, ಮೆರಿ ಫರ್ಗುಸನ್, ಕೇಟ್‌ಮಿಲೆಟ್ ಇವರು ಪಾಶ್ಚಾತ್ಯ ಸ್ತ್ರೀವಾದದ ಹರಿಕಾರರೆಂದೇ ಗುರುತಿಸಲ್ಪಡುತ್ತಾರೆ. ಕನ್ನಡದಲ್ಲಿ ಪ್ರಾರಂಭಕ್ಕೆ ಬಂದ ಸ್ತ್ರೀವಾದಿ ಪ್ರವೇಶಿಕೆಗಳು, ಇವರ ವಿಚಾರ ಧಾರೆಯನ್ನೇ ಪ್ರತಿಪಾದಿಸಿದ್ದರಿಂದ ಅವು ಕಬ್ಬಿಣದ ಕಡಲೆಗಳಾಗಿ ಸಂವಹನದ ಸಾಧ್ಯತೆಯನ್ನೇ ಕಳೆದುಕೊಡಿದ್ದವು. ಆದರೆ ನಂತರದಲ್ಲಿ ಭಾರತದ ಮಣ್ಣಿಗೆ ಕನ್ನಡದ ನೆಲಕ್ಕೆ ಹತ್ತಿರವಾದ ಭಾರತೀಯ ಸ್ತ್ರೀವಾದವನ್ನು ಮಹಾತ್ಮಾಗಾಂಧಿಯವರ ಅಸಹಕಾರ ಚಳವಳಿಯಲ್ಲಿ, ವೇದ ಉಪನಿಷತ್ತುಗಳಲ್ಲಿ, ರಾಮಾಯಣ ಮಹಾಭಾರತಗಳಲ್ಲಿ ಕೊನೆಗೆ ಜಾನಪದದಲ್ಲಿ ಹುಡುಕುವ ಪ್ರಯತ್ನ ನಡೆದದ್ದು ಈಗ ಇತಿಹಾಸ.

ಭಾರತೀಯ ಸ್ತ್ರೀವಾದವು ವಿಶೇಷವಾಗಿ ಪಾತಿವ್ರತ್ಯದ ಬಗ್ಗೆ, ತಾಯ್ತನದ ಬಗ್ಗೆ, ಗರ್ಭಪಾತದ ಬಗ್ಗೆ, ದಲಿತ ಸ್ತ್ರೀ ಕಪ್ಪು ಸ್ತ್ರೀಯರು, ಮುಸ್ಲಿಂ ಸ್ತ್ರೀಯರ ಬಗ್ಗೆ, ಹೆಣ್ಣು ಮಕ್ಕಳಿಗೆ ಸಾರ್ವತ್ರಿಕ ಶಿಕ್ಷಣ ನೀಡುವ ಬಗ್ಗೆ, ಸಮಾನ ನಾಗರಿಕ ಸಂಹಿತೆಯ ಬಗ್ಗೆ, ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ, ಪ್ರಧಾನ ಸಂಸ್ಕೃತಿ, ಉಪಸಂಸ್ಕೃತಿ ಮತ್ತು ಸ್ತ್ರೀ ಸಂಸ್ಕೃತಿಯ ಬಗ್ಗೆ, ಸ್ತ್ರೀವಾದದ ಪ್ರಸ್ತುತತೆಯ ಬಗ್ಗೆ, ಸಮೂಹ ಮಾಧ್ಯಮಗಳ ಬಗ್ಗೆ – ಹೀಗೆ ಚರ್ಚಿಸುತ್ತಾ ಹೋಗುವುದರಿಂದ ಇದು ನೇರವಾಗಿ ಮಣ್ಣಿಗಿಳಿದು ನಮ್ಮಲ್ಲಿ ಬೆರೆಯುವುದರಿಂದ ಇದು ದಂತಗೋಪುರದಲ್ಲಿ ಕುಳಿತು ಮೆರೆಯುವ ಸ್ತ್ರೀವಾದವಾಗುವುದಿಲ್ಲ, ಪಾಶ್ಚಾತ್ಮ ಪರಿಕಲ್ಪನೆಯ ಅರ್ಥವಾಗದ ಗೋಜು ಗೊಂದಲವೂ ಆಗುವುದಿಲ್ಲ. ಭಾರತೀಯ ಸ್ತ್ರೀವಾದ ರೂಪುಗೊಳ್ಳುವುದು ಅಥವಾ ರೂಪುಗೊಳ್ಳಬೇಕಾಗಿರುವುದು, ಅದರ ಹೊಳವುಗಳು ಹೊಮ್ಮುವುದು ಇತಿಹಾಸದ ಬೆಳಕಿನಿಂದ ವರ್ತಮಾನದ ಸಮಗ್ರತೆಯನ್ನು ಗ್ರಹಿಸುವ, ಭವಿಷ್ಯತ್ತಿನ ಬೆಳಕಿನೆಳೆಗಳನ್ನು ಕಾಣಬಲ್ಲ ಸೂಕ್ಷ್ಮವೂ ವ್ಯಾಪಕವೂ ಆದ ಸೃಜನಶೀಲತೆಯಲ್ಲಿ ದಾರ್ಶನಿಕತೆಯಲ್ಲಿ. ಅದೊಂದು ಯುಗದ ಮಥನದ ನವನೀತ, ಹಲವು ಕ್ಷೇತ್ರಗಳ ಪರಿಣತಿ ಸಂವೇದನಾ ಶಕ್ತಿಗಳ ಫಲ.

ವೈಚಾರಿಕತೆಯು ಎಂದು ಮಾನವ ಜನಾಂಗದಲ್ಲಿ ನೆಲೆಯೂರಿತೋ ಅಂದೇ ಪ್ರಪಂಚದ ಆಗುಹೋಗುಗಳನ್ನು ನೋಡುವ ದೃಷ್ಟಿಯೂ ಬದಲಾಯಿತು. ದೇವರು ಧರ್ಮ ಮೊದಲಾದುವು ಪ್ರಾರಂಭದಲ್ಲಿ ಭೀತಿಯನ್ನು ಹುಟ್ಟಿಸಲು ಸೃಷ್ಟಿಯಾದುವು ಎಂದು ಕ್ರಿ.ಪೂ.ದಷ್ಟು ಹಿಂದೆಯೇ ಸಾಕ್ರೆಟಿಸ್‌ ಮನಗಂಡ ಮತ್ತು ಅದನ್ನು ಬಾಯಿಬಿಟ್ಟು ಹೇಳಿದೆ. ಅದಕ್ಕಾಗಿ ಅವನನ್ನು ಹೆಮ್‌ಲಾಕ್ ಎಂಬ ಸಸ್ಯದ ವಿಷ ಕುಡಿಸಿ ಕೊಲ್ಲಲಾಯಿತು. ಭೂಮಿಯು ಸ್ಥಿರವಾಗಿದ್ದು ಸೂರ್ಯನೇ ಭೂಮಿಯ ಸುತ್ತ ಸುತ್ತುತ್ತಾನೆ ಎಂಬ ಬೈಬಲಿನ ಮಾತನ್ನು ಅಲ್ಲಗಳೆದು ಭೂಮಿಯೇ ಸುತ್ತುತ್ತದೆ ಎಂದು ಹೇಳಿದ ಗೆಲಿಲಿಯೋ ಶಿಕ್ಷೆಗೆ ಗುರಿಯಾದ. ಅವನನ್ನು ಸುಟ್ಟು ಕೊಲ್ಲಲಾಯಿತು. ಆದರೂ ಸತ್ಯವೇ ಜಯಿಸಿತು. ಇಂದು ಪ್ರಾಥಮಿಕ ಶಾಲೆಯ ಮಕ್ಕಳಿಗೂ ಗೊತ್ತು ಸುತ್ತುವುದು ಭೂಮಿ, ಸೂರ್ಯನಲ್ಲ ಎಂದು. ಹೀಗೆ ಕಾಲ ಬದಲಾದಂತೆ ಜಗತ್ತನ್ನು ನೋಡುವ ದೃಷ್ಟಿಯೂ ಬದಲಾಯಿತು. ಈ ಹಂತದಲ್ಲಿ ಹಳದಿ ಕನ್ನಡಕ ಹಾಕಿ ನೋಡಿದರೆ ಜಗತ್ತು ಹಳದಿಯಾಗಿ ಕಾಣುವಂತೆ, ಕೆಂಪು ಕನ್ನಡಕ ಹಾಕಿ ನೋಡಿದರೆ ಕೆಂಪಾಗಿ ಕಾಣುವಂತೆ ಮಹಾನ್ ವಿಚಾರವಾದಿಗಳಾದ ರಾಮ ಮನೋಹರ ಲೋಹಿಯಾ, ಕಾರ್ಲ್‌ಮಾರ್ಕ್ಸ್, ಅಂಬೇಡ್ಕರ್, ಮಹಾತ್ಮಗಾಂಧಿ – ಇವರು ಪ್ರತಿಪಾದಿಸಿದ ತತ್ವಗಳು ಅವರ ಹೆಸರಿನಲ್ಲಿಯೇ ಲೋಹಿಯಾವಾದ, ಮಾರ್ಕ್ಸ್‌ವಾದ, ಅಂಬೇಡ್ಕರ್‌ವಾದ, ಗಾಂಧಿವಾದ ಎಂದು ಪ್ರಸಿದ್ಧವಾಗಿವೆ. ಸ್ತ್ರೀವಾದವಾದರೂ ಇದೇ ರೀತಿ ಜಗತ್ತನ್ನು ಹೊಸ ಕಣ್ಣುಗಳಿಂದ ನೋಡಿದುದಾಗಿದೆ. ಆದರೆ ಈ ಯಾವುದೇ ವಾದವು ಮಾನ್ಯವಾಗುವುದು, ಆಗಬೇಕಾದದ್ದು, ಪಠ್ಯಪುಸ್ತಕಗಳ ಓದಿನಲ್ಲಿ ಅಲ್ಲ, ವಿಚಾರವಾದಿಗಳ ಚರ್ಚೆಯಲ್ಲಿ ಅಲ್ಲ, ಅದಕ್ಕೆ ಬದಲಾಗಿ ಬದುಕಿಗೆ ಅವು ಸ್ಪಂದಿಸುತ್ತಿವೆಯೇ, ಪ್ರಸ್ತುತವಾಗಿವೆಯೇ ಎಂಬ ಅಂಶದಲ್ಲಿ, ಒಂದೊಂದು ಕಾಲಕ್ಕೆ ಒಂದೊಂದು ಅಂಶವು ಪ್ರಸ್ತುತವಾಗುತ್ತದೆ. ಒಂದು ಕಾಲಕ್ಕೆ ನಮ್ಮ ದೇಶದಲ್ಲಿ ಎತ್ತಿನಗಾಡಿ ಪ್ರಸ್ತುತವಾಗಿತ್ತು. ಅದಕ್ಕೂ ಮೊದಲು ರಾಜರಾಳುತ್ತಿದ್ದ ಕಾಲದಲ್ಲಿ ಪಲ್ಲಕ್ಕಿ, ರಥ ಪ್ರಸ್ತುತವಾಗಿದ್ದವು. ಈಗ ಸಿಟಿಬಸ್ ಪ್ರಸ್ತುತ, ಬಹುಶಃ ಮುಂದಿನ ದಿನಗಳು ನಮ್ಮೆಲ್ಲರ ಪಾಲಿಗೆ ಸಂಪದ್ಭರಿತವಾಗಿರುವ ಪಕ್ಷದಲ್ಲಿ ನಮ್ಮೆಲ್ಲರಿಗೂ ಕಾರು ಪ್ರಸ್ತುತವಾಗಬಹುದು. ಈಗಾಗಲೇ ಹಲವರಿಗೆ ಆಗಿಯೂ ಇದೆ. ಮುಂದೊಂದು ದಿನ ವಿಮಾನವೂ ಪ್ರಸ್ತುತವಾಗಬಹುದು. ಅಮೆರಿಕಾದಂತಹ ದೇಶಗಳಲ್ಲಿ ಆಗಿಯೂ ಇದೆ. ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ರಿಗೆ ನೋಬಲ್ ಪಾರಿತೋಷಕ ಕೊಡಬೇಕಾಗಿ ಬಂದಾಗ ಇಕ್ಕಟ್ಟು ಬಂದಿತಂತೆ. ಏಕೆಂದರೆ ಪುದುವಟ್ಟನ್ನಿಟ್ಟ ನೋಬೆಲ್ ಮಹಾಶಯನ ಇಂಗಿತದಂತೆ ಲೋಕಕ್ಕೆ ಉಪಕಾರವಾಗುವ ಸಂಶೋಧನೆಗೆ ಆ ಬಹುಮಾನ ಸಲ್ಲಬೇಕು. ಐನ್‌ಸ್ಟೈನ್‌ರ ಸಾಪೇಕ್ಷ ಸಿದ್ಧಾಂತವು ಎಷ್ಟೇ ಪ್ರಸಿದ್ಧವಾಗಿದ್ದರೂ ಲೋಕೋಪಕಾರವು ಅದರಿಂದ ಆಗುವಂತಿರಲಿಲ್ಲ. ಹೀಗಾಗಿ ಬಹು ಹಿಂದೆ ಅವರು ಕಂಡುಹಿಡಿದ ದ್ಯುತಿ ವಿದ್ಯುತ್‌ ಪರಿಣಾಮವೆ೦ಬ ಸಿದ್ಧಾಂತಕ್ಕೆ ನೋಬೆಲ್‌ ಬಹುಮಾನ ಕೊಡಬೇಕಾಗಿ ಬಂದಿತಂತೆ. ಯಾವುದೇ ವಾದವಾದರೂ ಜನಜೀವನಕ್ಕೆ ಹತ್ತಿರವಾಗದಿದ್ದರೆ ಹೀಗಾಗುವ ಸಂಭವವುಂಟು. ಸ್ತ್ರೀವಾದದ ಗತಿಯೂ ಹೀಗಾಗಬಾರದು ಎಂಬುದು ನಮ್ಮಂಥವರ ಕಳಕಳಿಯಾಗಿದೆ.

‘ಮಗು ಅಳದಿದ್ದರೆ ತಾಯಿಯೂ ಹಾಲು ಕುಡಿಸುವುದಿಲ್ಲ’ ಎಂಬ ಅರ್ಥಶಾಸ್ತ್ರದ ಪ್ರಸಿದ್ಧ ವ್ಯಾಖ್ಯೆಯಂತೆ, ಹೀಗೆ ಪ್ರಸ್ತುತವಾಗಬೇಕಾದರೆ ಸಂಘಗಳನ್ನು ಕಟ್ಟಿಕೊಳ್ಳುವುದು, ಚಳವಳಿ ನಡೆಸುವುದು ಅನಿವಾರ್ಯವಾಗುತ್ತದೆ. ಚಳವಳಿ ಏತಕ್ಕೆ ? ಯಾವುದರ ವಿರುದ್ಧ? ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವ ಮೊದಲು ಇನ್ನೊಂದು ಅಂಶ ಸ್ಪಷ್ಟವಾಗಬೇಕು. ಅದೆಂದರೆ, ಸ್ತ್ರೀವಾದವೆಂದರೆ ಪುರುಷದ್ವೇಷವಲ್ಲ. ಸ್ತ್ರೀವಾದವೆಂದರೆ ಸ್ವಚ್ಛಂದ ಸ್ವಾತಂತ್ರ್ಯವಲ್ಲ, ಸ್ತ್ರೀವಾದವೆಂದರೆ ಗಂಡ ಮಕ್ಕಳನ್ನು ತೊರೆದು ಬೀದಿಗಿಳಿಯುವುದಲ್ಲ, ಅದು ‘ಪರಸ್ಪರ ಪ್ರೀತಿ, ವಿಶ್ವಾಸವನ್ನು ಪುರುಷರಿಗೂ, ಸಮಾಜದ ಇತರರಿಗೂ ಕೊಟ್ಟು ಅವರಿಂದ ಅಂಥದೇ ಪ್ರೀತಿ ವಿಶ್ವಾಸವನ್ನು ಹಿಂದಕ್ಕೆ ಪಡೆಯುವುದಾಗಿದೆ’. ಏಕೆಂದರೆ ಹೆಣ್ಣಿಗೆ ಅನ್ಯಾಯ ಮಾಡಿರುವುದು ಪುರುಷ ಮಾತ್ರವಲ್ಲ, ಅವನೊಂದಿಗೇ ಸಮಾಜ ನಿಯಮ ಕೊನೆಗೆ ಪ್ರಕೃತಿಯೂ ಸೇರಿದೆ. ನಮ್ಮ ಸಮಾಜದಲ್ಲಿ ಗಂಡುಮಕ್ಕಳು ಉಂಡ ತಟ್ಟೆ ತೊಳೆಯದೇ ಮೇಲೇಳುವ ಹಕ್ಕು ಪಡೆದಿದ್ದಾರೆ. ಆದರೆ ಹೆಣ್ಣು ಮಕ್ಕಳು ಪಡೆದಿಲ್ಲ, ರಾತ್ರಿ ಹೊತ್ತು ಮೀರಿದ ನಂತರ, ಮನೆಗೆ ಬರುವ ಹಕ್ಕೂ ಅವನದೇ ಅವಳದಲ್ಲ. ಅಕಸ್ಮಾತ್ ಅಪ್ಪಿತಪ್ಪಿ ಅಚಾತುರ್ಯವಾದರೆ ಅದರ ಪರಿಣಾಮ ಕಾಣುವುದು ಹೆಣ್ಣಿನ ದೇಹದ ಮೇಲೆ, ಗಂಡಿನ ಮೇಲೆ ಅಲ್ಲ, ಶೀಲ ಕಳೆದುಕೊಳ್ಳುವವಳು ಹೆಣ್ಣು ಮಾತ್ರ, ಗಂಡು ಕಳೆದುಕೊಳ್ಳಬೇಕಾದುದು ಏನೂ ಇಲ್ಲ. ಒಂದು ವಯಸ್ಸು ದಾಟಿದ ನಂತರ ಹೆಣ್ಣು ಬೀದಿಯಲ್ಲಿ ಆಟವಾಡುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾಳೆ. ಅವಳು ನೆಗೆದು ಬಾಗಿಲು ತೆಗೆಯುವಂತಿಲ್ಲ, ಜೋರಾಗಿ ನಗುವಂತಿಲ್ಲ, ಅನ್ನಿಸಿದನ್ನೆಲ್ಲಾ ಆಡುವಂತಿಲ್ಲ. ಅವಳಿಗೆ ಮೌನ, ಸಹಿಷ್ಣುತೆ, ತಾಳ್ಮೆ, ಸಹನೆ – ಇವು ಮೌಲ್ಯವಾಗುತ್ತವೆ. ಅಂದರೆ ನಮ್ಮ ಹೆಣ್ಣು ಮಕ್ಕಳಿಗೆ ಸೀತೆಯೇ ಆದರ್ಶ, ದ್ರೌಪದಿಯಲ್ಲ. ಈ ಸ್ಥಿತಿಗೆ ಸಮಾಜದ ಎಲ್ಲರೂ, ಪುರುಷರೊಂದಿಗೆ ಸ್ತ್ರೀಯರೂ ಕೈಜೋಡಿಸಿರುವುದೂ ಒಂದು ದೊಡ್ಡ ದುರಂತ. ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಗಾದೆ ಮಾತು ಹುಟ್ಟಿರುವುದೂ ಅದಕ್ಕೇ.

ನಮ್ಮ ಸಮೂಹ ಮಾಧ್ಯಮಗಳು ಹೆಣ್ಣಿಗೆ ಮಾಡಿರುವ ಅನ್ಯಾಯವನ್ನು ಬಹುಶಃ ಬೇರೆ ಯಾರೂ ಮಾಡಿಲ್ಲವೆಂದೇ ಹೇಳಬಹುದು. ಎಷ್ಟೋ ಮಹಿಳಾ ಸಂಘಟನೆಗಳು ತೀವ್ರವಾದ ಪ್ರತಿಭಟನೆಯನ್ನೊಡ್ಡಿದ್ದರೂ ಇದು ನಿಲ್ಲುವುದಿಲ್ಲ. ನಿಲ್ಲುವಂತೆಯೂ ಕಾಣುವುದಿಲ್ಲ. ಅದು ಸಿಗರೇಟಿನ ಜಾಹೀರಾತಾದರೂ ಆಗಿರಲಿ, ಬನಿಯನ್ ಜಾಹೀರಾತಾದರೂ ಆಗಿರಲಿ ಅದಕ್ಕೆ ಹೆಣ್ಣು ಮಾಡೆಲ್ ಬೇಕು. ಅವಳು ತನ್ನ ಭುಜ, ತೋಳು, ಕಂಕುಳು ಮತ್ತು ಬೆನ್ನಿನ ಭಾಗವನ್ನು ನಗ್ನಗೊಳಿಸಿಯೇ ಇರಬೇಕು. ತೊಡೆಗಳು ಕಾಣುವಂತಿರಬೇಕು. ಅವಳ ಭಾವಭಂಗಿಗಳನ್ನು ಕಂಡರೆ ಅವಳೇನು ರೂಪದರ್ಶಿಯೋ, ವೇಶ್ಯೆಯೋ ಅನ್ನುವಂತಿರುತ್ತದೆ. ಅದರಿಂದಲೇ ಈಗ ಸೂಳೆ ಅಥವಾ ವೇಶ್ಯ ಎಂಬ ಪದವನ್ನು ಬಳಸಬಾರದು. ಸೆಕ್ಸ್ ವರ್ಕರ್ ಎಂಬ ಪದ ಬಳಸಿ ಅವರಿಗೂ ಸಂಬಳ ಸಾರಿಗೆ ಕೊಡುವುದು, ಸಲಿಂಗಕಾಮಿಗಳಿಗೆ ಮದುವೆ ಮಾಡಿಕೊಳ್ಳುವ ಅವಕಾಶ ನೀಡುವುದು ಅನಿವಾರ್ಯ ಬೆಳವಣಿಗೆಯಾಗತೊಡಗಿದೆ. ಹಿಂದೆಲ್ಲಾ ಚಲನಚಿತ್ರಗಳಲ್ಲಿ ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವವಳು ಸಾಮಾನ್ಯವಾಗಿ ಖಳನಾಯಕಿಯಾಗಿರುತ್ತಿದ್ದಳು. ನಾಯಕಿಯನ್ನು ಗರತಿ ಗಂಗಮ್ಮನಂತೆ ತೋರಿಸಲಾಗುತ್ತಿತ್ತು. ಆದರೆ ಇಂದು ನಾಯಕಿಯೇ ಖಳನಾಯಕಿಯನ್ನು ಮೀರಿಸಿ ಎಲ್ಲವನ್ನೂ ತೆರೆಯ ಮೇಲೆ ಮಾಡಿಬಿಡುತ್ತಾಳೆ. ಅತ್ಯಾಚಾರ, ಬಲಾತ್ಕಾರದ ದೃಶ್ಯಗಳನ್ನು ದೀರ್ಘಕಾಲ ತೆರೆಯ ಮೇಲೆ ತೋರಿಸಲಾಗುತ್ತದೆ. ಉಪಗ್ರಹ ಚಾನಲ್‌ಗಳ ಮೂಲಕ ಭಾರತದ ಪ್ರತೀ ಹಳ್ಳಿಯನ್ನು ದೂರದರ್ಶನ ಪ್ರವೇಶಿಸಿರುವಾಗ ಚಿಕ್ಕ ಚಿಕ್ಕ ಮಕ್ಕಳೆಲ್ಲಾ ಟಿ.ವಿ, ಮುಂದೆ ಕುಳಿತು ಇಂತಹ ದೃಶ್ಯವನ್ನು ನೋಡಲು ಅವಕಾಶವಿರುವಾಗ ಅವರ ಭವಿಷ್ಯವೇನು ? ಒಂದೆಡೆ ನಮ್ಮ ದೇಶದ ಹುಸಿ ಸಂಸ್ಕೃತಿ, ಇನ್ನೊಂದೆಡೆ ಇದು ಪ್ರತಿಬಿಂಬಿಸುವ ಬಿಸಿ ಸಂಸ್ಕೃತಿ. ಈ ದ್ವಂದ್ವದಲ್ಲಿ ಸಿಕ್ಕ ಮಕ್ಕಳ ಮಾನಸಿಕ ಸ್ಥಿತಿಯೇನು ? ತಂದೆ ತಾಯಿಗಳಿಗೆ ಇವರ ಮೇಲೆ ಯಾವ ಹಿಡಿತವಿದೆ ? ಇಂತಹ ದೃಶ್ಯಗಳನ್ನು ನೋಡುವ ಗಂಡಸರಿಗೆ ರಸ್ತೆಯಲ್ಲಿ ನಡೆದಾಡುವ ಎಲ್ಲಾ ಹೆಂಗಸರೂ, ವಯಸ್ಸಿನ ಬೇಧವಿಲ್ಲದೇ ಸಿನಿಮಾದ ಅರೆಬೆತ್ತಲೆ ತಾರೆಯರಂತೆ ಕಾಣುವುದರಲ್ಲಿ ಅಸಹಜವಾದುದೇನಿದೆ? ನಮ್ಮ ಸ್ತ್ರೀವಾದ ಇಂಥಲ್ಲಿ ಏನು ಮಾಡಬಲ್ಲದು? ಯೋಚಿಸಬೇಕು ನಾವು.

ಚಲನಚಿತ್ರ ಪ್ರಶಸ್ತಿ ಸಮಾರಂಭವೇ ಇರಲಿ, ದೂರದರ್ಶನ ಕಾರ್ಯಕ್ರಮ ನಿರ್ವಹಣೆಯೇ ಇರಲಿ, ಆ ನಿರ್ವಾಹಕಿ ತಲೆಗೂದಲನ್ನು ಬಿಟ್ಟಿರಬೇಕು, ಅರೆಬೆತ್ತಲೆ ಆಗಿರಬೇಕು, ಇಂಗ್ಲಿಷ್‌ನಲ್ಲೇ ಮಾತನಾಡಬೇಕು. ಇದು ನಿಯಮದಂತೆ ನಡೆಯುತ್ತದೆ. ಧಾರಾವಾಹಿಗಳಲ್ಲಿ, ಚಲನಚಿತ್ರಗಳಲ್ಲಿ ಮಹಿಳೆಯರನ್ನು ಇನ್ನೊಂದು ರೀತಿ ಟೈಪ್ ಮಾಡಲಾಗುತ್ತದೆ. ಇವರು ಒಂದೋ – ಘಟವಾಣಿ ಅತ್ತೆಯರು, ಇಲ್ಲವೇ ಅಳುಮುಂಜಿ ಸೊಸೆಯರು. ಇವರೆಡೂ ಅಲ್ಲದಿದ್ದರೂ ತಾಯಿಯೋ, ಹೆಂಡತಿಯೋ, ಮಗಳೋ, ತಂಗಿಯೋ, ಒಟ್ಟಿನಲ್ಲಿ ಅವಳು ಹೆಣ್ಣಾಗಿರುವುದರಿಂದ ಮನೆಯ ಗಂಡಸು ದುಡಿದು ಬರುವ ಸಮಯಕ್ಕೆ ಸರಿಯಾಗಿ ಅವಳು ಹೂಬುಟ್ಟಿ ಹಿಡಿದು ದೇವಸ್ಥಾನಕ್ಕೆ ಹೋಗುತ್ತಾಳೆ ಅಥವಾ ದೇವಸ್ಥಾನದಿಂದ ಬರುತ್ತಾಳೆ. ಅವಳು ಓದುವುದಿಲ್ಲ, ಬರೆಯುವುದಿಲ್ಲ, ಚಿಂತಿಸುವುದಿಲ್ಲ, ಚರ್ಚಿಸುವುದಿಲ್ಲ, ಅವಳ ವ್ಯಕ್ತಿತ್ವಕ್ಕೆ ಅಡಿಗೆ ಮಾಡುವುದು, ಮನೆಗೆಲಸ ಮಾಡುವುದು, ತೋಟಕ್ಕೆ ನೀರು ಹಾಕುವುದು, ದೇವಸ್ಥಾನಕ್ಕೆ ಹೋಗುವುದು ಬಿಟ್ಟರೆ ಬೇರೆ ಆಯಾಮವೇ ಇಲ್ಲ. ಗಂಡನೋ ತಂದೆಯೇ ಮಗನೋ ಸಮಸ್ಯೆಯಲ್ಲಿ ಸಿಕ್ಕಾಗ ಮಾತ್ರ ಎಲ್ಲಾ ತಿಳಿದವಳಂತೆ ಅತೀ ಆದರ್ಶದ ರೆಡಿಮೇಡ್ ಭಾಷಣ ಬಿಗಿಯುತ್ತಾಳೆ. ಹಾಗೆ ಭಾಷಣ ಮಾಡುವಾಗ ಸಾಮಾನ್ಯವಾಗಿ ಅವಳ ಕೈಲಿ ಮೊರವಿರುತ್ತದೆ. ಅದರಲ್ಲಿ ಅಕ್ಕಿ ಇರುತ್ತದೆ. ಅವಳು ಅದರ ಕಲ್ಲು, ಭತ್ತ ಆರಿಸುತ್ತಿರುತ್ತಾಳೆ. ಈಗ ಅಂಗಡಿಯಲ್ಲಿ ಕಲ್ಲು, ಭತ್ತ ತೆಗೆದು ಶುಚಿಗೊಳಿಸಿರುವ ಅಕ್ಕಿಯೇ ಸಿಗುತ್ತದೆಂಬುದು ಮಗುವಿಗೂ ಗೊತ್ತಿರುವಾಗ, ಎಷ್ಟೋ ಮಹಿಳೆಯರಿಗೆ ‘ಮೊರ’ ಎಂದರೇನೆಂದೇ ತಿಳಿಯದಿರುವಾಗ, ಸೌದೆ, ಒನಕೆಗಳೂ ಅಪ್ರಸ್ತುತವಾಗುತ್ತಿರುವಾಗ, ಇಂತಹ ದೃಶ್ಯಗಳ ಅಗತ್ಯವೇನು ? ಹಾಗೊಮ್ಮೆ ಅವಳು ಓದುತ್ತಿರುವ ಸೀನ್ ಇದ್ದರೆ ಅದು ಭೈರಪ್ಪನವರ ಕಾರಂತರ ಕಾದಂಬರಿಯಾಗಿ ಇರುವುದಿಲ್ಲ. ‘ಸುಧಾ’ ಅಥವಾ ‘ತರಂಗ’ ಆಗಿರುತ್ತದೆ. ಅದನ್ನೂ ಅವಳು ಮನಸ್ಸಿಟ್ಟು ಓದುತ್ತಿರುವುದಿಲ್ಲ. ಗಂಡ ಬರುವವರೆಗೆ ಹೊತ್ತು ಕಳೆಯಲೆಂದೇ ಹಿಡಿದಿರುತ್ತಾಳೆ. ಎಲ್ಲಾ ಮಹಿಳೆಯರೂ ಹೀಗಿದ್ದು ಬಿಟ್ಟಿದ್ದರೆ ನಾನು, ನನ್ನಂತಹ ಸಾವಿರಾರು ಲೇಖಕಿಯರು ಹೀಗೆಲ್ಲಾ ಬರೆಯುವುದು ಸಾಧ್ಯವಿತ್ತೆ?

ಇಂತಹ ಟೈಪ್ ಪಾತ್ರಗಳಿಂದ ಹೆಚ್ಚಿನ ಅಪಾಯ ಇನ್ನೊಂದಿದೆ. ಅಕಸ್ಮಾತ್ ಅತ್ಯಾಚಾರಕ್ಕೆ ಒಳಗಾದ ಹೆಣ್ಣನ್ನು ಹೇಗೋ ಮಾಡಿ ಅತ್ಯಾಚಾರ ಮಾಡಿದ ಗಂಡಿಗೆ ಕೊಟ್ಟು ಮದುವೆ ಮಾಡುವುದು! ಅಂದರೆ ಅಕಸ್ಮಾತ್ ನಡೆದ ಘಟನೆಯ ಪರಿಣಾವಾಗಿ ಅವಳು ತನ್ನ ಬದುಕಿನ ಆಯ್ಕೆಯನ್ನೇ ಕಳೆದುಕೊಂಡು ಕುಡುಕನೋ ಕೆಡುಕನೋ ಬದುಕಿನುದ್ದಕ್ಕೂ ಅವನ ಜೊತೆಯೇ ಏಗಬೇಕು. ಇನ್ನೂ ಒಂದು ವಿಚಿತ್ರವೆಂದರೆ, ಇಂದು ವಯಸ್ಸಾದ ಹೆಂಗಸರೇ ಗಂಡ ಸತ್ತ ಮೇಲೂ ಹಣೆಗೆ ಸಣ್ಣ ಬೊಟ್ಟು ಇಡುತ್ತಾರೆ. ಈ ಸಿನಿಮಾದವರು ಮಾತ್ರ ಗಂಡ ಸತ್ತ ದೃಶ್ಯದ ಮುಂದಿನ ದೃಶ್ಯಕ್ಕೆ ಅವಳಿಗೆ ಬಿಳಿಸೀರೆ ಉಡಿಸಿ ಬೋಳು ಹಣೆ, ಬೋಳು ಕೈ, ಬೋಳು ಕುತ್ತಿಗೆ ಮಾಡಿ ವೈಧವ್ಯದ ವೈಭವೀಕರಣ ನಡೆಸುತ್ತಾರೆ. ಆದರೆ ಅವಳ ದೇಹದ ಕಾಮೋತ್ತೇಜಕ ಭಾವಭಂಗಿಗಳು ಮಾತ್ರ ಹಾಗೇ ಇರುತ್ತವೆ! ತೆಳ್ಳಗಿನ ಬಿಳಿ ಸೀರೆಯಲ್ಲಿ ಇನ್ನಷ್ಟು ಹೊಳೆದು ತೋರುತ್ತವೆ. ಇದಕ್ಕಿಂತ ವಾಣಿಜೀಕರಣ ಬೇಕೆ? ಹೂ,ಕರಿಮಣಿ, ಕುಂಕುಮ, ಬಳೆಗಳನ್ನು ಸತ್ತುಹೋದ ಗಂಡನ ನೆನಪಿಗಾಗಿ ಉಳಿಸಿಕೊಳ್ಳಬೇಕು ಎಂಬ ಮಾತು ಕೇಳಿಬರುತ್ತಿರುವಾಗ ನಮ್ಮ ಸಿನಿಮಾಗಳ ಇಂಥ ಪ್ರತಿಗಾಮಿತನ!

ಈ ಹಿನ್ನೆಲೆಯಲ್ಲಿ ‘ಜನುಮದ ಜೋಡಿ’ಯಂತಹ ಸ್ವಲ್ಪ ಫ್ರೆಶ್ ಅನಿಸುವ ಚಿತ್ರ ನೋಡುವಾಗ ಪರವಾಗಿಲ್ಲ ಸ್ವಲ್ಪ ಹೊಸತನ, ಹೆಂಗಸರಿಗೆ ಕೊಂಚ ಚೇತರಿಕೆ ಅನ್ನಿಸಿದರೂ ಇದು ಇನ್ನೊಂದು ರೀತಿಯಲ್ಲಿ ಹೆಂಗಸರನ್ನು ಟೈಪ್ ಮಾಡುತ್ತದೆ. ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಸಾಧ್ಯವಾಗದೇ ಇನ್ನೊಬ್ಬನನ್ನು ಮದುವೆಯಾಗುವ ನಿಸ್ಸಹಾಯಕತೆಯಲ್ಲಿ ನಿಲ್ಲುವ ನಾಯಕಿ ಮತ್ತೆ ತಾನು ಪ್ರೀತಿಸಿದವನನ್ನು ಪಡೆಯಬೇಕೆಂದರೆ ಒಂದು, ಅವಳ ಗಂಡ ಪೆದ್ದನಾಗಿರಬೇಕು. ಎರಡು, ಅವಳು ತನ್ನ ಗಂಡನಿಂದಲೇ ತನ್ನ ಶೀಲವನ್ನು ಕಾಪಾಡಿಕೊಂಡಿರಬೇಕು. ಮೂರು, ಅವನು ಸಾಯಬೇಕು – ಇಷ್ಟಾದ ಮೇಲೇ ಅವಳಿಗೆ ಅವಳ ಪ್ರಿಯಕರ ದೊರೆಯುವುದು. ಇದಕ್ಕೆ ಬದಲಾಗಿ ಅವಳು ಗಂಡನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ನಂತರವೂ, ಅವನು ಬುದ್ದಿವಂತನಾಗಿದ್ದೂ, ಬದುಕಿದ್ದೂ, ಅವಳು ತನ್ನ ಪ್ರಿಯಕರನನ್ನು ಪಡೆಯುವಂತಾದರೆ ಆಗ, ಹಣ್ಣಿನ ಸಂಕೋಲೆಗಳು ಕಳಚುತ್ತಿವೆಯೆಂಬ ಭ್ರಮೆಯಲ್ಲಿ ಅವಳಿಗೆ ತೊಡಿಸಲಾಗಿರುವ ಹೊಸ ಸಂಕೋಲೆಗಳಿಂದ ಬಿಡಿಸಿಕೊಂಡು ಅವಳು ಸ್ವತಂತ್ರಳಾಗಬಹುದು.

ಬಹು ವಿವಾದಕ್ಕೆ ಗುರಿಯಾದ ‘ಫೈರ್’ ಚಿತ್ರದ ಬಗ್ಗೆ ಮಧ್ಯಮ ವರ್ಗದ ಪರಿಚಿತ ಸನ್ನಿವೇಶಗಳು ಮತ್ತು ಸ್ತ್ರೀ ಸಲಿಂಗಕಾಮ ಈ ಎರಡೂ ತೀರಾ ಅಪರಿಚಿತ ಅನ್ನಿಸಿದ್ದರಿಂದ ವಿವಾದಕ್ಕೆ ಒಳಗಾದ ಈ ಚಿತ್ರ ಉಳಿದಂತೆ ತೀರಾ ಮಾಮೂಲಿ ಚಿತ್ರವೇ. ದೀರ್ಘಕಾಲದ ಬ್ರಹ್ಮಚರ್ಯ ಪಾಲಿಸುವ ಇಲ್ಲಿಯ ಹಿರೀಮಗ ಮತ್ತು ಪ್ರೀತಿ ಕೊಡಲಾರೆ, ಲೈಂಗಿಕ ಸುಖ ಕೊಡಬಲ್ಲೆ ಎನ್ನುವ ಕಿರೀ ಮಗ ಕೇವಲ ಪ್ರತಿನಿಧಿಗಳು. ಇವರಂತಹ ಗಂಡಂದಿರನ್ನು ಹೊಂದಿರುವ, ಅಸಂಖ್ಯಾತ ನತದೃಷ್ಟ, ಸ್ತ್ರೀಯರು ಏನು ಮಾಡಬೇಕು ಎಂಬುದಕ್ಕೆ ಈ ಚಿತ್ರವು ಒಂದು ಉತ್ತರವನ್ನಂತೂ ನೀಡಿದೆ. ಆ ಉತ್ತರ ಸಮಂಜಸವಲ್ಲದಿರಬಹುದು, ಸರ್ವಗ್ರಾಹ್ಯವಲ್ಲದಿರಬಹುದು, ಆದರೆ ಅಂತಹುದು ನಡೆಯುತ್ತದೆ ಎಂದು ಹೇಳಿದ ನಿರ್ಮಾಪಕಿಯ ಧೈರ್ಯ ಮತ್ತು ಸಹಜ ಗ್ರಹಿಕೆಗೆ ಮೆಚ್ಚಬೇಕು.

ಬಾಲ್ಯ ವಿವಾಹದಂತಹ ಅನಿಷ್ಠಕ್ಕೆ ಗುರಿಯಾಗಿ, ಚಿಕ್ಕ ವಯಸ್ಸಿಗೇ ಗಂಡನನ್ನು ಕಳೆದುಕೊಂಡು, ಸುಧಾರಣೆಯ ಪರಿಣಾಮವಾಗಿ ಸತೀ ಹೋಗುವ ಪದ್ಧತಿಯಿಂದಲೂ ಮಂಚಿತಳಾಗಿ, ವಾರಣಾಸಿಯಲ್ಲಿ, ಉಡುಪಿಯ ಕೃಷ್ಣ ದೇವಾಲಯದಲ್ಲಿ ನಾಲ್ಕು ಗಂಟೆ ಹಾಡಿ ಎರಡು ಹಿಡಿ ಅಕ್ಕಿ ಪಡೆದು ಹೊಟ್ಟೆ ಹೊರೆಯುವ ಸಾಲು ಸಾಲು ವಿಧವೆಯರಿದ್ದಾರಂತೆ. ಅನೇಕ ಶ್ರೀಮಂತ ಕುಟುಂಬಗಳು ವಿಧವೆಯರ ಜವಾಬ್ದಾರಿ ಹೊರಲಾರದೇ ಇಲ್ಲಿಗೆ ದೂಡಿವೆಯಂತೆ. ಇನ್ನು ಬಡವರ ಗತಿ ಸರಿಯೇ ಸರಿ. ಇದರ ಮೇಲೆ ಪುರೋಹಿತರ ಪಂಡರ, ಧರ್ಮದರ್ಶಿಗಳ ಕಾಮುಕ ಕಣ್ಣೋಟ, ಲೈಂಗಿಕ ಶೋಷಣೆಯ ಕಾಟ ಬೇರೆ. ಇಂತಹ ವಿಧವೆಯರ ಕುರಿತು ಇದೇ ನಿರ್ಮಾಪಕಿ ಚಿತ್ರೀಕರಿಸುತ್ತಿದ್ದ ‘ವಾಟರ್’ ಚಿತ್ರದ ಚಿತ್ರೀಕರಣದ ಹಂತದಲ್ಲೇ ಸ್ಥಗಿತಗೊಂಡದ್ದು ಎಲ್ಲರಿಗೂ ತಿಳಿದ ವಿಷಯವೇ. (ಇದೀಗ ಚಿತ್ರೀಕರಣ ಮುಗಿದಿದೆಯಂತೆ)

ಈ ಎಲ್ಲವುಗಳ ಹಿನ್ನಲೆಯಲ್ಲಿ ತಾತ್ವಿಕವಾಗಿ ಏನಾದರೂ ಸಾಧಿಸಬೇಕಾದರೆ ಚಳವಳಿಗಳು, ಸಂಘಟನೆಗಳು ಅನಿವಾರ್ಯ. ಕರ್ನಾಟಕಕ್ಕೆ ಸಂಬಂಧಿಸಿ ಹೇಳುವುದಾದರೆ ಕೆಲವು ಪತ್ರಿಕೆಗಳು ಮತ್ತು ಕರ್ನಾಟಕ ಲೇಖಕಿಯರ ಸಂಘವು ಸ್ತ್ರೀವಾದವನ್ನು ಚಳವಳಿಯಾಗಿ ರೂಪಿಸುವ ನಿಟ್ಟಿನಲ್ಲಿ ತುಂಬಾ ದುಡಿದಿವೆ. ಪುರುಷಪ್ರಧಾನ ಸಾಹಿತ್ಯ ವೇದಿಕೆಗಳಲ್ಲಿ ಪ್ರತಿಭಾವಂತ ಮಹಿಳೆಯರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂಬ ಒಳತುಡಿತ ಇಟ್ಟುಕೊಂಡೇ, ಡಾ. ನಾಗಮಣಿ, ಹೇಮಲತಾ ಮಹಿಷಿ, ಲೀಲಾದೇವಿ ಆರ್. ಪ್ರಸಾದ್, ಕುಲಶೇಖರಿ ಮುಂತಾದವರು ಸಭೆ ಸೇರಿ ೧೯೭೯ರ ಜನವರಿಯಲ್ಲೇ ಟಿ. ಸುನಂದಮ್ಮನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಲೇಖಕಿಯರ ಸಂಘವನ್ನು ಹುಟ್ಟುಹಾಕಿದರು. ಗೀತಾ ದೇಸಾಯಿ ದತ್ತಿನಿಧಿ, ಹೆಚ್.ವಿ. ಸಾವಿತ್ರಮ್ಮ ದತ್ತಿನಿಧಿ, ಅನುಪಮಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ೮೦೦ಕ್ಕೂ ಹೆಚ್ಚು ಸದಸ್ಯರನ್ನು ಈಗ ಅದು ಹೊಂದಿದೆ. ಹೆಚ್‌.ಎಸ್. ಪಾರ್ವತಿಯವರ ಅಧ್ಯಕ್ಷತೆಯ ಅವಧಿಯಲ್ಲಿ ಮಹಿಳೆಯರನ್ನು ಸಂಘಟಿಸುವ ಕೆಲಸವನ್ನು ಗಂಭೀರವಾಗಿ ಆರಂಭಿಸಿದ್ದಲ್ಲದೇ ಮಹಿಳೆಯರ ದನಿಗೆ ಪ್ರತ್ಯೇಕ ವೇದಿಕೆಯನ್ನು ಒದಗಿಸಿಕೊಟ್ಟಿತು. ಅನಂತರದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತು, ಅಕಾಡೆಮಿ ಸೇರಿದಂತೆ ಇತರ ಸಂಘ-ಸಂಸ್ಥೆಗಳು, ಸ್ತ್ರೀವಾದಕ್ಕೆ ಸಂಬಂಧಿಸಿದ ಸಮ್ಮೇಳನ ನಡೆಸತೊಡಗಿದವು. ಇದರೊಂದಿಗೆ ಮೈಸೂರಿನ ‘ಸಮತಾ’ ಎಂಬ ಪ್ರಗತಿಪರ ಮಹಿಳಾ ವೇದಿಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಮತ್ತು ಇತರೆಡೆಗಳಲ್ಲಿ ಪ್ರಾರಂಭವಾಗಿರುವ ಮಹಿಳಾ ಅಧ್ಯಯನ ಕೇಂದ್ರ ಇವನ್ನು ಹೆಸರಿಸಬಹುದು. ಗಂಡು ಕಲೆ ಎಂದೆ ನಿಗದಿಯಾಗಿದ್ದ ವೀರಗಾಸೆ ಮತ್ತು ಯಕ್ಷಗಾನ ಕಲೆಗಳನ್ನು ಸ್ತ್ರೀಯರು ಕರಗತಗೊಳಿಸಿಕೊಂಡಿದ್ದಾರೆ. ವೀರಭದ್ರ ಕೆಂಡವಾಗುತ್ತಾನೆ. ಮನೆತನಕ್ಕೆ ಕೆಟ್ಟದ್ದಾಗುತ್ತದೆ ಎಂಬ ಬೆದರಿಕೆಗಳನ್ನೆಲ್ಲಾ ಎದುರಿಸಿ ಈ ಮೌಲ್ಯಗಳನ್ನೆಲ್ಲ ಹುಸಿಗೊಳಿಸಿದವರು ಸ್ನೇಹ ವೀರಗಾಸೆ ಮಹಿಳಾ ತಂಡದವರು. ಬಹುಬಾರಿ ಪ್ರಸ್ತಾಪಿತವಾಗಿರುವ ಮಹಿಳಾ ಸಾಹಿತ್ಯ ಚರಿತ್ರೆ ರಚನೆಯ ದಾರಿಯಲ್ಲಿ ಕೆಲವು ಪುಟ್ಟದಾದ ಆದರೆ ದಿಟ್ಟವಾದ ಹೆಜ್ಜೆಗಳನ್ನು ಕರ್ನಾಟಕ ಲೇಖಕಿಯರ ಸಂಘವು ಆಗಲೇ ಇಟ್ಟಿದೆ. ಒಬ್ಬ ಸಾಹಿತಿ ತನ್ನ ಆತ್ಮಕಥೆಯನ್ನು ಬರೆಯಬೇಕಾದರೆ ಒಂದು ಅವರಿಗೆ ಸಾಕಷ್ಟು ವಯಸ್ಸಾಗಿರಬೇಕು ಎರಡು, ಅಗಾಧವಾದ ಅನುಭವವಿರಬೇಕು. ಈ ಎರಡೂ ಇಲ್ಲದ ಮತ್ತು ಇರುವ ಕೆಲವು ಲೇಖಕಿಯರು ತಮ್ಮ ಆತ್ಮಕಥಾನಕವನ್ನು ತಾವೇ ಹೇಳಿಕೊಳ್ಳುವಂತೆ, ಬರೆದುಕೊಳ್ಳುವಂತೆ ಆದುದೇ “ಲೇಖ-ಲೋಕ”ದ ಐದು ಭಾಗಗಳ ಜನನ ಈ ಐದು ಭಾಗಗಳಲ್ಲಿ ಕೆಲವರು ತಮ್ಮ ಅನುಭವಗಳನ್ನು ಬದುಕಿನ ಸಂಘರ್ಷವನ್ನು ನಿರ್ಭೀತಿಯಿಂದ ಬರೆದಿದ್ದಾರೆ. ಕನ್ನಡದಲ್ಲಿ ಆತ್ಮಕಥೆ ಬರೆಯುವುದೆಂದರೆ ಕಡಿಮೆ ಸವಾಲೇನಲ್ಲ. ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎನ್ನುವ ಮನುವಿನಿಂದ ಹಿಡಿದು ‘ಗೃಹಣಿ ಗೃಹಂ ಉಚ್ಯತೇ’ ಎನ್ನುವ ಮುಳ್ಳಿನ ಕಿರೀಟ ಹೊತ್ತಲ್ಲಿಂದ ಪ್ರಾರಂಭಿಸಿ ಹೆಂಗಸರದೆಲ್ಲಾ ಅಡಿಗೆ ಮನೆ ಸಾಹಿತ್ಯ ಎಂಬ ಅದೇ ಅದೇ ಮಾತುಗಳನ್ನು ದಾಟಿ ಇಂದು ಎಲ್ಲ ರಂಗದಲ್ಲೂ ದಾಪುಗಾಲು ಹಾಕಿ ಗಂಡಸರನ್ನು ಮೀರಿಸುತ್ತಾ ವಿಶೇಷವಾಗಿ ಸಾಹಿತ್ಯರಂಗದಲ್ಲಿ – ಕ್ರೀಡೆ, ಸೈನ್ಯ, ಬಾಹ್ಯಾಕಾಶ, ಸಂಗೀತ, ನೃತ್ಯಗಳಲ್ಲಿ – ಇದುವರೆಗೆ ದೊಡ್ಡ ಸಾಧನೆಯನ್ನೇ ಮಾಡಲಾಗಿದೆ. ಕೆಲವು ಹೊಸ ಆಲೋಚನೆಗಳು ಉದಾಹರಣೆಗೆ ಪಾತಿವ್ರತ್ಯವು ಹೆಂಗಸಿನ ಜೀವನ ಮೌಲ್ಯವೇನಲ್ಲ ಅನ್ನಿಸಿದ್ದು, ಗರ್ಭನಿರೋಧಕಗಳು ಬಳಕೆಗೆ ಬಂದು ಹೆಂಗಸಿನ ಸ್ಥಾನಮಾನಗಳು ಬದಲಾದದ್ದು, ತಾಯ್ತನದ ಸುತ್ತ ಹೆಣೆಯಲಾಗಿರುವ ಪೌರಾಣಿಕ ಬಲೆಗಳು ಪ್ರಶ್ನೆಗೀಡಾದದ್ದು, ಸೋದರಿತ್ವದ ಅಗತ್ಯವನ್ನು ಗುರುತಿಸಿದ್ದು, ಪಾವಿತ್ರ್ಯದ ಒಮ್ಮುಖ ಹೇರಿಕೆಯನ್ನು ವಿರೋಧಿಸಿದ್ದು – ಇವು ದೊಡ್ಡ ಹಂತದ ಚಳವಳಿಯನ್ನು ನಡೆಸದಿರಬಹುದು, ಆದರೆ ಸ್ತ್ರೀವಾದವು ಬಿತ್ತಿದ ಹೊಸ ಆಲೋಚನೆಗಳು (ಶೇಕಡಾವಾರು ಕಡಿಮೆಯಾದರೂ ಪರವಾಗಿಲ್ಲ) ಬದುಕಿನಲ್ಲಿ ಮೊಳಕೆಯೊಡೆದಿದೆ ಎಂಬುದು ಸಂತಸದ ಸಂಗತಿ.
*****
ಕನ್ನಡ ವಿಶ್ವವಿದ್ಯಾಲಯ (ಹಂಪಿ)ದ “ಮಹಿಳಾ ಅಧ್ಯಯನ”ಕ್ಕೆ ಬರೆದದ್ದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಕ್ಸೆ
Next post ಸಂಕ್ರಾಂತಿ

ಸಣ್ಣ ಕತೆ

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys