ಕಾಡುತಾವ ನೆನಪುಗಳು – ೮

ಕಾಡುತಾವ ನೆನಪುಗಳು – ೮

ಫಸ್ಟ್ ಶೋ ಸಿನಿಮಾ ನೋಡಿಕೊಂಡು ಹಾಸ್ಟೆಲಿಗೆ ಬಂದಿತ್ತು ನನ್ನ ಗುಂಪು. ಇದೇ ಮೊದಲನೇ ಸಲ ತಡವಾಗಿ ಬಂದಿದ್ದುದರಿಂದ ‘ಪರವಾಗಿಲ್ಲ’ ಎಂದುಕೊಂಡಿದ್ದು ತಪ್ಪಾಗಿತ್ತು. ಎಷ್ಟು ಕೇಳಿಕೊಂಡರೂ ಮುಖ್ಯ ದ್ವಾರದ ಗೇಟಿನ ಬಳಿಯಿದ್ದ ಗೂರ್ಖಾ ನಮ್ಮನ್ನು ಒಳಗೇ ಬಿಡಲಿಲ್ಲ. ಒಂದೆರಡು ವಾದಗಳಾದ ನಂತರ ಗೂರ್ಖಾ ಹಾಸ್ಟೆಲಿನ ಗೇಟು ತೆರೆದು ಒಳಗೆ ಹೋಗಿದ್ದ. ಒಮ್ಮೆ ಕಾಂಪೌಂಡಿನೊಳಗೆ ಹೋದರೆ ಸಾಕು ಹೇಗೋ ಹಾಸ್ಟೆಲಿನೊಳಗೆ ನುಸುಳಬಹುದೆಂದು ತೀರ್ಮಾನಿಸಿ, ಒಬ್ಬೊಬ್ಬರಾಗಿ ಗೇಟನ್ನು ಹತ್ತಿ ಕಾಂಪೌಂಡಿನೊಳಗೆ ಹೋಗಲು ನಿರ್ಧರಿಸಿದೆವು. ಎಲ್ಲರೂ ಹತ್ತಿ ಒಳಗಡೆ ಹಾರಿ, ಸೇರಿಕೊಂಡರು.

ಆದರೆ ನನ್ನಿಂದಾಗಿರಲಿಲ್ಲ. ಮೇಲೆ ಹತ್ತಿ ಕುಳಿತಿದ್ದ ನನಗೆ ಇಳಿಯಲು ಭಯವಾಗತೊಡಗಿತ್ತು. ಒಳಗೆ ಹೋದವರು ಎಷ್ಟು ಕರೆದರೂ, ಪ್ರಯತ್ನಿಸಿದರೂ ಮಂಗನ ಹಾಗೆ ಗೇಟಿನ ಮೇಲೆ ಹೆದರಿ ಕುಳಿತಿದ್ದೆ. ಅಷ್ಟರಲ್ಲಿ ಒಳಗೆ ಹೋಗಿದ್ದ ಗೂರ್ಖಾ ಅಲ್ಲಿಗೆ ಬಂದ. ಸಿಟ್ಟಿನಿಂದ ಹಿಂದಿಯಲ್ಲಿ ಬೈದುಕೊಳ್ಳುತ್ತಾ ತನ್ನ ರೂಮಿನಿಂದ ಸ್ಟೂಲೊಂದನ್ನು ತಂದಿಟ್ಟು ನನ್ನನ್ನು ಗೇಟಿನ ಮೇಲಿಂದ ಕೆಳಗಿಳಿಸಿದ. ಕೆಳಗಿಳಿದ ನಂತರ ಜೋರಾದ ನಿಟ್ಟುಸಿರುಬಿಟ್ಟಿದ್ದೆ.

ವಾರ್ಡನ್ ಹತ್ತಿರ ಕರ್ಕೊಂಡ್ ಹೋಗ್ತಿನೀಂತ ಗಲಾಟೆ ಮಾಡಿದ್ದ.

“ನಾವು ಲೇಟ್ ಎಂಟ್ರಿ ಬುಕ್‌ನಲ್ಲಿ ಸೈನ್ ಮಾಡ್ತೀನಿ. ಹೇಗಿದ್ರೂ ಕರೆದೇ ಕರೆಯುತ್ತಾರೆ. ಈ ಹೊತ್ತಿನಲ್ಲಿ ಅವರಿಗೆ ತೊಂದರೆ ಕೊಡ್ಬೇಡಾ…” ಎಂದು ಹೇಳಿ, ರಿಜಿಸ್ಟರ್ ಪುಸ್ತಕದಲ್ಲಿ ಸಹಿ ಮಾಡಿ ಒಳಕ್ಕೆ ಹೋದೆವು.

ಇನ್ನೆಂದೂ ಈ ಗೇಟು ಹಾರುವ ಸಾಹಸ ಮಾಡಬಾರದೆಂದು ಶಪಥ ಮಾಡಿಕೊಂಡೆವು.

ಇಷ್ಟರ ಮಧ್ಯೆ ನಾನು ಮನೆಯನ್ನು, ಅವ್ವನನ್ನು ಮರೆತು ಬಿಟ್ಟಿದ್ದೇನೇಂತ ಅಂಡ್ಕೊಂಡಿದ್ದೀಯೋ ಚಿನ್ನು?

ಹಬ್ಬದ ದಿನಗಳ ಎರಡು ದಿನ ರಜಗಳು ಬಂದರೆ ನಾನು ದಾವಣಗೆರೆಗೆ ಹೋಗಿಬಿಡುತ್ತಿದ್ದೆ. ಇದುವರೆಗೂ ಮೈಸೂರಿನ ದಸರಾವನ್ನೇ ನೋಡಿಲ್ಲಾಂದ್ರೆ ನಂಬ್ತೀಯಾ? ಊರಿಗೆ ಹೋಗಿಬಿಡುತ್ತಿದ್ದೆ. ನನ್ನಲ್ಲಾದ ಪರಿವರ್ತನೆ, ಅಂದರೆ, ಹಠ, ಸಿಟ್ಟು ಬಿಟ್ಟು ಹೋಗಿದ್ದು, ಜವಾಬ್ದಾರಿಯುತ ಹಿರಿಯ ಮಗಳಂತೆ ವರ್ತಿಸತೊಡಗಿದ್ದೆ. ಊರಿಗೆ ಹೋಗುವಾಗ ಮೈಸೂರಿನಲ್ಲಿ ಖ್ಯಾತವಾಗಿದ್ದ ಮೈಸೂರು ಪಾಕನ್ನು ಮರೆಯದೇ ತೆಗೆದುಕೊಂಡು ಹೋಗುತ್ತಿದ್ದೆ. ಹಾಗೆಯೇ ಅವ್ವನಿಗೆ, ತಂಗಿಗೆ ಬಟ್ಟೆ ಸೀರೆಗಳನ್ನು ಕೊಂಡೊಯ್ಯುತ್ತಿದ್ದೆ.

ಸಣ್ಣವ್ವಾ ಹಳೆಯ ಮನೆಯಲ್ಲಿಯೇ ಉಳಿದುಕೊಂಡು ಬಿಟ್ಟಿದ್ದಳು. ಅವಳ ಜೊತೆ ಒಬ್ಬ ಮಗ, ಮತ್ತವಳ ಗಂಡ ಅಂದರೆ ನನ್ನ ಸಣ್ಣಪ್ಪ ಇದ್ದ. ಉಳಿದವರು ಅವ್ವನ ಪ್ರೀತಿಯಲ್ಲಿ ಬೆಳೆಯತೊಡಗಿದ್ದರು. ಅವರಿಗೂ ಏನಾದರೊಂದು ವಸ್ತು ಬಟ್ಟೆ ಮುಂತಾದವುಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ. ಕಾಲೇಜಿನ ಹಾಸ್ಟೆಲಿನ ವಿಷಯಗಳನ್ನು ಬಣ್ಣ ಕಟ್ಟಿ ಹೇಳುತ್ತಿದ್ದೆ. ಎಲ್ಲರೂ ಆಸಕ್ತಿಯಿಂದ ಬಾಯಿ ತೆರೆದು ನೋಡುತ್ತಿದ್ದರೆ, ಅವ್ವ ಮಾತ್ರ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದು,

“ಹೇಗೆ ಓದ್ತಾ ಇದ್ದೀಯಾ?” ಎಂದು ಕೇಳುತ್ತಿದ್ದಳು.

“ಒಳ್ಳೆಯ ಸ್ನೇಹಿತರ ಜೊತೆ ಇದ್ದೀಯಾ ತಾನೆ?”

“ಹೂಂ… ತುಂಬಾ ಒಳ್ಳೆಯವರು…” ಎಂದು ಹೇಳುತ್ತಿದ್ದವಳು ಶೋಭಾಳ ಬಗ್ಗೆ ಬಾಯಿ ತುಂಬಾ ಹೇಳುತ್ತಿದ್ದೆ.

ಒಮ್ಮೊಮ್ಮೆ ಅವ್ವ ಕೂಡಾ ಮನೆಯವರೊಂದಿಗೆ ಮೈಸೂರಿಗೆ ಬರುತ್ತಿದ್ದಳು. ಆಗೆಲ್ಲಾ ಅವರನ್ನು ಬೃಂದಾವನ ಗಾರ್ಡನ್ಸ್, ಚಾಮುಂಡಿ ಬೆಟ್ಟಕ್ಕೆ, ಮತ್ತವರ ಹತ್ತಿರದ ಶ್ರೀರಂಗಪಟ್ಟಣ, ಮೈಸೂರಿನ ಅರಮನೆ ಎಲ್ಲವನ್ನು ನೋಡಿಕೊಂಡು ಹೋಗುತ್ತಿದ್ದರು. ನಾನು ಬದಲಾದ ಹಾಗೆ ಮನೆಯವರು ಬದಲಾಗತೊಡಗಿದ್ದರು. ಮನೆಯ ಸ್ಥಿತಿಯೂ ಬದಲಾಗಿತ್ತು. ಅಪ್ಪನ ಕಡೆಯಿಂದ ಆಸ್ತಿಯ ಬಗ್ಗೆ ಮಾತುಕತೆ, ಬಂದಾಗ, ತೆಗೆದುಕೊಳ್ಳದೇ ನಿರಾಕರಿಸಿಬಿಟ್ಟಿದ್ದಳು. ಮನೆಯ ಜವಾಬ್ದಾರಿ, ಅಂದರೆ ಅಡಿಗೆ ಮಾಡಿಟ್ಟು ಕಾಲೇಜಿಗೆ ನನ್ನ ತಂಗಿ ಹೋಗುತ್ತಿದ್ದಳು. ಅವಳ ಮಾತು ಕಡಿಮೆ. ನನ್ನ ಹಾಗೆ ಭಂಡ ಧೈರ್ಯ, ದಿಟ್ಟತನ ತೋರಿಸಿದವಳಾಗಿರಲಿಲ್ಲ. ಮನೆಯಲ್ಲಿ ಅವ್ವನ ಪ್ರೀತಿಯ ಮಗಳು, ಪ್ರೀತಿಯ ಅಕ್ಕಳಾಗಿ ಎಲ್ಲವನ್ನೂ ಸಂಭಾಳಿಸುತ್ತಿದ್ದಳು. ಒಮ್ಮೆಲೇ ಬದುಕು ಬದಲಾಗತೊಡಗಿದ್ದಂತೆ ಕಾಣತೊಡಗಿತ್ತು. “ಅಕ್ಕ ಡಾಕ್ಟರಾಗಿ ಬರ್ತಾಳೆ. ನಮಗೆ ಯಾವ ಕೊರತೆಯೂ ಇರಲ್ಲ” ಎಂದವರು ಕನಸು ಕಾಣತೊಡಗಿದ್ದರು.

ಆದರೆ ಅವ್ವ ಮಾತ್ರ.

“ಎಲ್ರೂ ಚೆನ್ನಾಗಿ ಓದಿ ಅವರವರ ಅನ್ನಕ್ಕೆ ದಾರಿ ಮಾಡಿಕೊಂಡರಷ್ಟೇ ಸಾಕು. ನನ್ನಷ್ಟು ಕಷ್ಟ ಯಾರೂ ಪಡಬಾರದು…” ಎನ್ನುತ್ತಿದ್ದಳು.

ಶಿಕ್ಷಣದ ಅಗತ್ಯ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಅದೆಷ್ಟು ಅಗತ್ಯ ಎಂಬುದನ್ನು ಅವ್ವ ಕಂಡುಕೊಂಡಿದ್ದಳು. ಅನುಭವಿಸಿದ್ದಳು ಕೂಡಾ.

ಈಗಿನ ತರಹ ನಮಗೆ ಆಗ ಪರೀಕ್ಷೆಗಳು Semister ಪದ್ಧತಿಯಂತಿರಲಿಲ್ಲ. ವರ್ಷಕ್ಕೊಮ್ಮೆ ಪರೀಕ್ಷೆ ಬರೆಯಬೇಕಿತ್ತು. ಪರೀಕ್ಷೆಯ ದಿನಗಳು ಹತ್ತಿರ ಬಂದಂತೆ ಬಾಲ ಮುದುರಿಕೊಂಡು, ಓದುತ್ತಿದ್ದೆವು. ಲೈಬ್ರರಿಗೆ ಹೋಗಿ Reference ಗಳನ್ನು ನೋಡುತ್ತಿದ್ದೆವು. ಬರೆದಿಟ್ಟುಕೊಳ್ಳುತ್ತಿದ್ದೆವು.

ಇಡೀ ದಿನ, ಬೆಳಿಗ್ಗೆ Clinical ಅಂದರೆ ಆಸ್ಪತ್ರೆಯ ವಾರ್ಡುಗಳಲ್ಲಿ ರೋಗಿಗಳೊಂದಿಗಿರುತ್ತಿದ್ದೆವು. ರೋಗ ಲಕ್ಷಣಗಳು ಚಿಕಿತ್ಸೆಯ ವಿವರ ಪ್ರೊಫೆಸರ್‌ಗಳು ತಿಳಿಸಿ ಹೇಳುತ್ತಿದ್ದರು. ನಂತರ Theory Classes. ಅಂದಿನ ಪಾಠಗಳನ್ನು ಅಂದೇ ಓದಿ Combined Study ಮಾಡಿ ಚರ್ಚಿಸುತ್ತಿದ್ದೆವು.

ಈ ಮಧ್ಯೆ ಏಕತಾನೆಯಿಂದ ಹೊರಬರಲು ಕಾದಂಬರಿಗಳು Bertrand Russell, ಈyom Road, Arbindo Maharshi, Ramana Maharshi ಗಳ ಪುಸ್ತಕಗಳನ್ನು ಓದುತ್ತಿದ್ದೆ. ಮಾನಸ ಗಂಗೋತ್ರಿಯ Library ಯಲ್ಲಿದ್ದ ಸ್ನೇಹಿತೆಯ ಸಹಾಯದಿಂದ ಪುಸ್ತಕಗಳನ್ನು ತರುತ್ತಿದ್ದೆ. ಆಗಲೇ ನಾನು, ಬುದ್ಧನ ಬಗ್ಗೆ, ಅರೇಬಿಯನ್ಸ್ ಗ್ರೀಕ್ ಕತೆಗಳನ್ನು ಓದಿ ಮುಗಿಸಿದ್ದೆ. ಇದರಿಂದ ನನಗೆ ನನ್ನ ಪಠ್ಯ ಪುಸ್ತಕಗಳ ಮೇಲೆ ಹೆಚ್ಚು ಆಸಕ್ತಿ ಮೂಡುತ್ತಿತ್ತು. ಬದಲಾವಣೆ ಸಿಗುತ್ತಿತ್ತು. ಆಸಕ್ತಿಯಿಂದ ಓದುತ್ತಿದ್ದೆ. ಆಧ್ಯಾತ್ಮದ ಅರಿವು ನಮ್ಮ ವೈದ್ಯಕೀಯ ವ್ಯಕ್ತಿಯಲ್ಲಿ ಅತ್ಯಗತ್ಯವಾಗಿತ್ತು ಎಂಬುದು ನನಗೆ ನಂತರದಲ್ಲಿ ಮನವರಿಕೆಯಾಗಿತ್ತು. ಪ್ರತಿ ದಿನಾ ಆಗು-ಹೋಗುಗಳು, ಭಾವನೆಗಳನ್ನು ನನ್ನದೇ ಆದ ಶೈಲಿಯಲ್ಲಿ ದಿನಚರಿಯಲ್ಲಿ ಬರೆಯುತ್ತಿದ್ದೆ. ಇದರಿಂದ ನನಗೊಬ್ಬ ಆಪ್ತ ಗೆಳತಿ ಸಿಕ್ಕಂತಾಗಿತ್ತು!

ಈ ಸಮಯದಲ್ಲಿಯೇ ನಾನು ‘ಸುಧಾ’ ವಾರಪತ್ರಿಕೆಗೊಂದು ಕತೆ ಬರೆದು ಕಳುಹಿಸಿದ್ದೆ. ಅದು ಪ್ರಕಟವಾಗಿ ಬಿಟ್ಟಿತ್ತು ಕಣೆ! ಹಾಡುಗಾರ್ತಿಯ ಜೊತೆಗೆ ಕತೆಗಾರ್ತಿಯ ಹೆಸರೂ ಸಿಕ್ಕಿತ್ತು. ನನ್ನನ್ನು ಎಲ್ಲರೂ ನೋಡುವ ರೀತಿಯೇ ಬದಲಾಗಿತ್ತು. ಆಗ ಸುಧಾ ವಾರಪತ್ರಿಕೆ ಒಳ್ಳೆಯ ಪ್ರೋತ್ಸಾಹ ನೀಡುತ್ತಿದ್ದರು. ಹೀಗಾಗಿ ‘ಸುಧಾ’ ಪತ್ರಿಕೆಯ ಒಳಗಡಗಿದ್ದವು. ಆಗೆಲ್ಲಾ ಹೆಚ್ಚು ಹುಚ್ಚು ಸಂತೋಷವಾಗುತ್ತಿತ್ತು. ಮತ್ತೆ ಮತ್ತೆ ಬರೆಯುವಂತೆ ಮಾಡುತ್ತಿತ್ತು. ಇದರ ಮಧ್ಯೆ ಪರೀಕ್ಷೆಗಳು! ಎಲ್ಲವನ್ನು ಭಂಡ ಧೈರ್ಯದಿಂದ ನಿಭಾಯಿಸುತ್ತಿದ್ದೆ.

ಚಿನ್ನು, ನಾನು ಅಂತಿಮ ವರ್ಷದಲ್ಲಿ ಫೆಲ್ ಆಗಿದ್ದೆ. ಅದೂ Practical ನಲ್ಲಿ ಕೇವಲ ಐದು ಅಂಕಗಳಿಂದ ಇದು ನನ್ನ ಬದುಕಿನ ಅಧ್ಯಾಯವನ್ನು ಬೇರೆ ದಾರಿಯಲ್ಲಿ ತೆಗೆದುಕೊಂಡು ಹೋಗಿತ್ತು. ಆ ಐದು ಅಂಕಗಳು ಬಂದು ಪಾಸಾಗಿ ಡಿಗ್ರಿ ಮುಗಿಸಿ ಬಂದಿದ್ದರೆ, ಬೇರೆ ರೀತಿಯೇ ಆಗುತ್ತಿತ್ತು. ಆ ಒಂದು ವರ್ಷದ ಅವಧಿ ಆ ಸ್ನೇಹಿತರು, ಆ ಸಮಯ, ಎಲ್ಲವನ್ನೂ ನುಂಗಿ ಹಾಕಿ ಹೊಸ ಗುಂಪಿಗೆ ಹೊಂದಿಕೊಳ್ಳುವಂತೆ ಮಾಡಿತ್ತು. ನಾನು ನಿಧಾನವಾಗಿ ಹೊಂದಿಕೊಳ್ಳತೊಡಗಿದ್ದೆ. ಹುಡುಗಾಟ, ಸಂಗೀತ, ಸಿನಿಮಾ, ಎಲ್ಲವೂ ಬಿಟ್ಟು ಹೋಗಿತ್ತು. ಒಂದು ವಿಧದಲ್ಲಿ ಒಂಟಿಯಾಗತೊಡಗಿದ್ದೆ, ಅಂತರ್ಮುಖಿಯಾಗ ತೊಡಗಿದ್ದೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಮಲಿಂಗ ದೇವಾಲಯ
Next post ಲೀಡಾ ಮತ್ತು ಹಂಸ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…