Home / ಕವನ / ಅನುವಾದ / ಲೀಡಾ ಮತ್ತು ಹಂಸ

ಲೀಡಾ ಮತ್ತು ಹಂಸ

ಹಠಾತ್ತನೆರಗಿತು ಹಕ್ಕಿ; ಬಲಿಷ್ಠ ರೆಕ್ಕೆಯ ಬಿಚ್ಚಿ
ಬಡಿವ ಪಟಪಟಸದ್ದು. ಬೆಚ್ಚಿದ ಹುಡುಗಿಯನ್ನ
ಕೊಕ್ಕಿಂದ ಹಿಡಿದೆತ್ತಿ, ಮುದ್ದಿಸಿತು ಅಸಹಾಯ ಎದೆಗೆ ಎದೆಯನೊತ್ತಿ
ಸವರುತ್ತ ಅವಳ ತೊಡೆಬೆತ್ತಲೆಯ ಕಪ್ಪಾದ ಜಾಲಪಾದ.

ಗರಿತೆರೆದ ಇಂಥ ಅದ್ಭುತವ ಸಡಲುತ್ತಿರುವ
ತೊಡೆಯಿಂದ ಹೊರಗೆ ತಳ್ಳುವುದು ಹೇಗೆ ?
ಹಂಸತೂಲದ ತೆಕ್ಕೆಯೊಳಗೆ ಸಿಕ್ಕಿರುವ ಮೈ
ಮಿಡಿಯದಿರುವುದು ಹೇಗೆ ಬೆರಗುಕವಿಸಿದ ಎದೆಯ ಬಡಿತಗಳಿಗೆ ?

ತೊಡೆ ಕಂಪಿಸಿದ ಗಳಿಗೆ ಸೃಷ್ಟಿಯಾಯಿತೊ ಹೇಗೆ
ಬಿರಿಬಿಟ್ಟ ಗೋಡೆ, ಉರಿಬಿದ್ದ ಛಾವಣಿ, ಕೋಟೆ,
ಬಲಿಹೋದ ರಾಜ ಅಗಮೆಮ್ನನ್?
ಕಾವು ತೀರಿದ ಹಕ್ಕಿಕೊಕ್ಕು ಕಳಚುವ ಮುಂಚೆ,
ದಿವದ ಪಶುಬಿಗಿತಕ್ಕೆ ಒಳಪಟ್ಟ ಕ್ಷಣದಲ್ಲೆ,
ದತ್ತವಾಯಿತೊ ಹೇಗೆ ಶಕ್ತಿ ಜೊತೆ ಜ್ಞಾನವೂ ಶುಕ್ತಿಯೊಳಗೆ?
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಸ್ಯೂಸ್ (ಗ್ರೀಕ್ ಪುರಾಣದ ಪ್ರಕಾರ) ದೇವತೆಗಳ ರಾಜ. ಅವನು ಹಂಸದ ರೂಪದಲ್ಲಿ ಬಂದು ಮರ್‍ತ್ಯಕನ್ನಿಕೆಯಾದ ಲೀಡಾಳ ಮೇಲೆ ಎರಗಿ ಅವಳನ್ನು ಬಲಾತ್ಕಾರವಾಗಿ ಭೋಗಿಸುತ್ತಾನೆ. ಈ ಕೂಟದಿಂದ, ಹುಟ್ಟಿದ ಇಬ್ಬರು ಹೆಣ್ಣುಮಕ್ಕಳು ಹೆಲೆನ್ ಮತ್ತು ಕ್ಲೈಟಮ್ನೆಸ್ಟ್ರಾ. ಹೆಲೆನ್ ಗಂಡನನ್ನು ಬಿಟ್ಟು ಪ್ಯಾರಿಸ್ ಜೊತೆ ಟ್ರಾಯ್‌ಗೆ ಓಡಿಹೋಗುತ್ತಾಳೆ. ಅವಳ ಸಲುವಾಗಿ ಗ್ರೀಕ್ ಮತ್ತು ಟ್ರೋಜನ್ನರ ನಡುವೆ ಘೋರಯುದ್ಧ ನಡೆದು ಟ್ರಾಯ್‌ನಗರ ಉರಿದುಹೋಗುತ್ತದೆ. ಕ್ಲೈಟಮ್ನೆಸ್ಟ್ರಾ ಗಂಡನಾದ ಅಗ್‌ಮಮ್ನನ್ ಯುದ್ಧಕ್ಕೆ ಹೋದಾಗ ಬೇರೆ ಸಂಬಂಧ ಬೆಳೆಸಿ, ಗಂಡ ಹಿಂತಿರುಗಿ ಬಂದಾಗ ಮೋಸದಿಂದ ಕೊಲ್ಲಿಸುತ್ತಾಳೆ. ದೇವಮೂಲದ್ದೇ ಆದರೂ ಸ್ಯೂಸನ ಕಾಮ ಪರಾಪೇಕ್ಷೆಯನ್ನು ಲೆಕ್ಕಿಸದ್ದು; ಹಿಂಸಾತ್ಮಕವಾದದ್ದು; ಕೇವಲ ಸ್ವಾರ್ಥನಿಷ್ಠವಾದದ್ದು. ಧರ್‍ಮವಿರುದ್ಧವಾದ ಇಂಥ ಕಾಮದಿಂದ ಜನಿಸಿದ ಸಂತಾನ ಲೋಕಮಾರಕವಾದ ಹೊಸ ಅನಾಹುತಗಳಿಗೆ ದಾರಿಮಾಡಿದ್ದನ್ನು ಕವನ ಸೂಚಿಸುವಂತಿದೆ. ಏಟ್ಸನ ಚಿತ್ರಕಶಕ್ತಿಗೆ ಸೊಗಸಾದ ನಿದರ್‍ಶನ ಈ ಪದ್ಯ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...