Home / ಕಥೆ / ಸಣ್ಣ ಕಥೆ / ಹೈದರನೂ ಕರಾಚೂರಿ ನಂಜರಾಜಯ್ಯನೂ

ಹೈದರನೂ ಕರಾಚೂರಿ ನಂಜರಾಜಯ್ಯನೂ

ದಳವಾಯಿ ದೇವರಾಜಯ್ಯನು ಸತ್ಯಮಂಗಲಕ್ಕೆ ಹೊರಟು ಹೋದಮೇಲೆ ರಾಜಧಾನಿಯಲ್ಲಿ ಸರ್ವಶಕ್ತನಾಗಿದ್ದ ಕರಾಚೂರಿ ಯಾತನಿಗೆ ನಿಶ್ಚಿಂತೆಯಾಗಿರಲಿಲ್ಲ. ಅದೇ ಸಮಯಕ್ಕೆ ಮರಾಟೆ ಯವರು ರಾಜಧಾನಿಯ ಬಳಿ ಪ್ರತ್ಯಕ್ಷರಾಗಿ ಹಣಕ್ಕೆ ತೊಂದರೆ ಪಡಿಸಿದರು; ಹಣವಿಲ್ಲವೆಂದು ನಂಜರಾಜಯ್ಯನು ಹೇಳಿದರೂ ಮರಾಟೆಯವರು ಹಟ ಹಿಡಿದು ರಾಜಧಾನಿಗೆ ಮುತ್ತಿಗೆಯನ್ನೇ ಹಾಕಿದರು. ಯುದ್ಧ ಮಾಡುವುದಾಗಿ ನಿಶ್ಚಯ ಮಾಡಿಕೊಂಡು ನಂಜರಾಜಯ್ಯನು ಸಾಹಸದಿಂದ ಹೋರಾಡಿದನು; ಆದರೆ ಬಲಶಾಲಿಗಳಾದ ಮರಾಟೆಯವರೇ ಗೆದ್ದರು; ನಂಜರಾಜಯ್ಯನು ಸೋಲನ್ನೊಪ್ಪಿಕೊಂಡು ೩೨ ಲಕ್ಷ ರೂಪಾಯಿಗಳನ್ನು ಕೊಡಲೊಪ್ಪಿಕೊಳ್ಳಬೇಕಾಯಿತು. ಬೊಕ್ಕಸದಲ್ಲಿದ್ದ ಹಣವೂ ಆಭರಣಗಳ ಬೆಲೆಯೂ ಸೇರಿ ೫ ಲಕ್ಷಗಳೇ ಆದವು; ಉಳಿದ ಹಣಕ್ಕೆ ನಂಜರಾಜಯ್ಯನು ವಿಸ್ತಾರವಾದ ಕ್ಷೇತ್ರಗಳನ್ನು ಅಡಮಾನವಿಡಬೇಕಾಯಿತು.

ಹೀಗೆ ನಂಜರಾಜಯ್ಯನು ಹೆಣಗಾಡುತ್ತಿರಲು ಅಲ್ಲಿಗೆ ದಿಂಡುಗಲ್ಲು ಪ್ರಾಂತ್ಯದಿಂದ ಹೈದರನು ಬಂದು ಸಿದ್ಧನಾದನು. ಹೈದರನ ಮಿತ್ರನಾಗಿದ್ದ ಖಂಡೇರಾಯನು ದೇವರಾಜಯ್ಯನು ಸತ್ಯಮಂಗಲಕ್ಕೆ ಹೊರಟಕೂಡಲೆ “ನಿನ್ನ ಜಹಗೀರಿಗಳು ನಿನ್ನ ಕೈತಪ್ಪಿ ದೇವರಾಜಯ್ಯಂದಿರ ಕೈಸೇರುವಂತಿದೆ. ಆದಷ್ಟು ಬೇಗನೆ ನೀನು ಬರುವುದು ಅವಶ್ಯ” ಎಂದು ಹೈದರನಿಗೆ ಹೇಳಿ ಕಳುಹಿಸಿದ್ದನು. ಅದರಂತೆ ಹೈದರನು ಹಿಂತಿರುಗಿ ಬಂದು ದುರವಸ್ಥೆಯಲ್ಲಿ ಸಿಲುಕಿದ್ದ ನಂಜರಾಜಯ್ಯನೊಂದಿಗೆ “ಇಂತಹ ಸಮಯ ಬಂದಾಗ ನನಗೆ ಹೇಳಿ ಕಳುಹಿಸಿದ್ದರೆ ನಾನು ನನ್ನ ದಂಡಿನೊಡನೆ ಬಂದು ಈ ನಷ್ಟವನ್ನು ತಡೆಯುತ್ತಿದ್ದೆ. ಈಗಲಾದರೂ ಮರಾಟೆಯವರಿಗೆ ಉಳಿದ ಹಣ ಕೊಡುವ ಯೋಚನೆ ಮಾಡಬೇಡಿ” ಎಂದು ಹೇಳಿ ನಂಬಿಕೆ ಹುಟ್ಟಿಸಿದ. ತರುವಾಯ ದೇವರಾಜಯ್ಯನನ್ನು ಕಾಣಲು ತನಗೆ ಸಲಿಗೆಯಿಲ್ಲದುದರಿಂದ ಖಂಡೇರಾಯನನ್ನು ಸಂಗಡ ಕರೆದುಕೊಂಡು ಸತ್ಯಮಂಗಲಕ್ಕೆ ಹೊರಟನು. ಅಲ್ಲಿ ಖಂಡೇರಾಯನ ಜಾಣತನದಿಂದ ಹೈದರನ ಜಹಗೀರುಗಳು ಉಳಿಯುವಂತಾಯಿತು. ಈ ಕೆಲಸವು ಮುಗಿದ ಕೂಡಲೆ ಹೈದರನು ದಿಂಡುಗಲ್ಲಿಗೆ ಹೊರಟು ತನ್ನ ಸೈನ್ಯವನ್ನು ಸೇರಿಕೊಂಡನು.

ಈ ರೀತಿಯಲ್ಲಿ ಹೈದರನು ಹೊರಟುಹೋದ ತರುವಾಯ ರಾಜಧಾನಿಯಲ್ಲಿ ಕರಾಚೂರಿ ನಂಜರಾಜಯ್ಯನು ಸ್ವಲ್ಪ ಕಾಲದಲ್ಲಿಯೇ ಇರುಕಿನಲ್ಲಿ ಸಿಕ್ಕಿಕೊಂಡನು, ಸೈನಿಕರ ಸಂಬಳಿಸಾರಿಗೆಗಳು ಬಹು ಕಾಲದಿಂದಲೂ ಸಂದಿರಲಿಲ್ಲ; ಅವುಗಳನ್ನು ಪಡೆಯಲು ಬೇರೆ ಗತಿಗಾಣದೆ ನಂರಾಜಯ್ಯನ ಮನೆ ಮುಂದೆ ಸಾಲುಸಾಲಾಗಿ ಧಾರಣಾವ್ರತ ಹಿಡಿದು ಅವರು ಕುಳಿತುಬಿಟ್ಟರು; ಮನೆಯೊಳಕ್ಕೆ ಆಹಾರದ ದಿನಸಾಗಲಿ ನೀರಾಗಲಿ ಸಾಗುವುದಕ್ಕೇ ಅವಕಾಶವಿಲ್ಲಾಯಿತು. ನಂಜರಾಜಯ್ಯನು ಗತ್ಯಂತರವಿಲ್ಲದೆ ಉಗ್ರಾಣಗಳ ಧಾನ್ಯ, ದವಸವನ್ನು ಮಾರಿದನು; ಆದರೂ ಸೈನಿಕರ ಸಾಲವು ತೀರದಾಯಿತು. ತತ್ಕಾಲಕ್ಕೆ ಮಾತ್ರ ಅವರ ಮನಸ್ಸಿನ ಕೋಪವಿಳಿಯಿತು.

ಈ ಸಮಾಚಾರವನ್ನು ಕೇಳಿದೊಡನೆಯೇ ಹೈದರನು ಖಂಡೇರಾಯನಿಗೆ ತನ್ನನ್ನು ಸತ್ಯಮಂಗಲದ ಬಳಿ ಕಾಣುವಂತೆ ಹೇಳಿ ಕಳುಹಿಸಿ ತನ್ನ ಸೈನ್ಯದೊಡನೆ ಪ್ರಯಾಣ ಮಾಡಿ ಅಲ್ಲಿಗೆ ಬಂದನು. ಸತ್ಯಮಂಗಲದಲ್ಲಿಯೇ ದೇವರಾಜಯ್ಯನಿದ್ದುದು; ಹೈದರನು ಅಲ್ಲಿ ತಲಪಿದ ಕೂಡಲೆ ತಾನೊಬ್ಬೊಂಟಿಗನಾಗಿಯೇ ಆತನಲ್ಲಿಗೆ ಹೊರಟು “ರಾಜ್ಯದ ಆಡಳಿತವು ಕೆಡುತ್ತಲಿದೆ. ತಾವು ದೊಡ್ಡವರು; ತಮ್ಮಂತಹವರು ಆಗ್ರಹಗೊಂಡು ದೂರವಾಗಿದ್ದರೆ ರಾಜ್ಯವು ಕೆಡುವುದು. ತಾವು ಸಮಾಧಾನದಿಂದ ರಾಜಧಾನಿಗೆ ಚಿತ್ತೈಸಿದರೆ ಪುನಃ ಎಲ್ಲರಲ್ಲಿಯೂ ಸಮಾಧಾನವು ಹುಟ್ಟೀತು. ತಾವು ದಯೆಯಿಟ್ಟು ಆ ರೀತಿಗೆಯ್ಯಬೇಕು” ಎಂದು ವಿನಯದಿಂದ ಹೇಳಿ ಖಂಡೇರಾಯನಿಂದಲೂ ಆದೇ ಮಾತುಗಳನ್ನೇ ಹೇಳಿಸಿದನು. ದೇವರಾಜಯ್ಯನು ದೊಡ್ಡಮನಸ್ಸು ಮಾಡಿ ಒಪ್ಪಿದನು. ಆಗ ಮೂವರೂ ಒಟ್ಟುಗೂಡಿ ಗಜಲ ಹಟ್ಟಿಯ ಮಾರ್ಗವಾಗಿ ಸಂಚರಿಸಿ ಹರದನಹಳ್ಳಿಯೆಂಬಲ್ಲಿಗೆ ಬಂದು, ಅಲ್ಲಿ ಹದಿನೈದು ದಿನಗಳಿದ್ದು, ಆ ಮೇಲೆ ಮೈಸೂರಿಗೆ ಹೊರಟರು. ಮೈಸೂರನ್ನು ತಲಪಿದಕೂಡಲೆ ದೇವರಾಜಯ್ಯನು “ನಾವಿಲ್ಲಿಯೇ ಇರುತ್ತೇನೆ. ನನ್ನ ತಮ್ಮಂದಿರು ನಂಜರಾಜಯ್ಯನವರು ಅಂದು ದೊರೆಗಳನ್ನು ಅವಮಾನಪಡಿಸಿ ನಮ್ಮ ಮನೆಗೆ ತಂದಿಟ್ಟಿರುವ ಕಳಂಕವನ್ನು ತೊಡೆದುಹಾಕುವವರೆಗೂ ಅವರನ್ನು ನೋಡಲಾರೆವು. ಈ ಮಾತನ್ನು ನೀವು ತಿಳುಹಿಸಿ” ಎಂದು ಹೈದರಲ್ಲಿ ಮತ್ತು ಖಂಡೇರಾಯರನ್ನು ಶ್ರೀರಂಗಪಟ್ಟಣಕ್ಕೆ ಕಳುಹಿಸಿದನು. ಅವರು ಹೇಳಿದ ಮಾತುಗಳಿಗೆ ನಂಜರಾಜಯ್ಯನೊಪ್ಪಿಕೊಂಡು ರಾಜರ ಬಳಿ ಹೋಗಿ ಹಿಂದೆ ತಾನು ಮಾಡಿದ ಮಹಾಪರಾಧವನ್ನು ಮನ್ನಿಸಬೇಕೆಂದು ಕೇಳಿಕೊಂಡು, ಅಣ್ಣನನ್ನು ಕಾಣಲು ಸಿದ್ಧನಾದನು. ಹೈದರಲ್ಲಿ ಮತ್ತು ಖಂಡೇರಾಯರು ನಂಜರಾಜಯ್ಯನನ್ನೂ ಮುಖ್ಯಾಧಿಕಾರಿಗಳನ್ನೂ ಇತರ ಪುರಪ್ರಧಾನರನ್ನೂ ಶ್ರೀರಂಗಪಟ್ಟಣದಿಂದ ಮೈಸೂರಿಗೆ ಮೆರವಣಿಗೆ ಮಾಡಿಸಿದಂತೆ ಪ್ರಯಾಣ ಮಾಡಿಸಿದರು. ಮೈಸೂರನ್ನು ಸೇರಿದಕೂಡಲೆ ನಂಜರಾಜಯ್ಯನು ದೇವರಾಜಯ್ಯನಿಗೆ ಪ್ರಣಾಮ ಮಾಡಿ ಹಿಂದೆ ತಾನು ಗೈದಿದ್ದ ಅಪರಾಧಗಳನ್ನು ಮನ್ನಿಸಬೇಕೆಂದು ನಮ್ರತೆಯಿಂದ ಕೇಳಿಕೊಂಡನು. ದೇವರಾಜಯ್ಯನೂ ಸಂತುಷ್ಟನಾಗಿ ವಂಶಕ್ಕೆ ಅಂಟಿದ್ದ ಕೆಟ್ಟ ಹೆಸರು ಹೋದೀತೆಂದು ನೆನಸಿ ತಮ್ಮನನ್ನು ಆಲಿಂಗನ ಮಾಡಿಕೊಂಡು ರಾಜಧಾನಿಗೆ ಎಲ್ಲರೊಡನೆ ಹೊರಟನು. ಆದರೆ ಬಂದು ಸೇರಿದ ೬ ದಿನಗಳಲ್ಲಿಯೇ ವ್ಯಾಧಿಪೀಡಿತನಾಗಿ ದೇವರಾಜಯ್ಯನು ಕಾಲವಾದನು. ಪುನಃ ನಂಜರಾಜಯ್ಯನ ಆಡಳಿತವೇ ಉಳಿಯಿತು. ಹೈದರಲ್ಲಿ ಖಂಡೇರಾಯರ ಪಯತ್ನವು ಈ ರೀತಿ ದುರ್ದೈವದಿಂದ ನೆರವೇರದಾಯಿತು. ದೇವರಾಜಯ್ಯನು ಸತ್ತಕೂಡಲೆ ಸೈನಿಕರಲ್ಲಿ ಸ್ವಲ್ಪಕಾಲ ಮಾತ್ರ ಅಡಗಿದ್ದ ಅಸಮಾಧಾನವು ಪುನಃ ಪ್ರಬಲವಾಯಿತು. ತಮ್ಮ ಸಂಬಳಗಳು ಸಲ್ಲುವುವೋ ಇಲ್ಲವೋ ಎಂಬ ಶಂಕೆಯು ಅವರಲ್ಲಿ ಪ್ರಬಲವಾಯಿತು. ಅವರಲ್ಲಿ ಎಲ್ಲರೂ ನಂಜರಾಜನನ್ನು ಬಯ್ಯಲು ಮೊದಲಿಟ್ಟರು; ನಂಜರಾಜಯ್ಯನು ಹೊರಗೆ ಕಾಣಿಸಿ ಕೊಳ್ಳುವುದೇ ಕಷ್ಟವಾಯಿತು. ಇಂತಹ ಸಂದರ್ಭದಲ್ಲಿ ನಂಜರಾಜಯ್ಯನು ಅಣ್ಣನ ಮರಣದಿಂದ ಮತ್ತೂ ಖಿನ್ನನಾಗಿ ಹೈದರಲ್ಲಿ ಖಂಡೇರಾಯರನ್ನು ಕರೆಸಿಕೊಂಡು “ನಾಯಕರೇ! ಏನಾದರೂ ಮಾಡಿ ಈ ಸೈನಿಕರ ಗದ್ದಲವನ್ನು ನಿಲ್ಲಿಸಿ, ನಮಗೆ ಈಗ ಶೋಕಸಮಯವಾಗಿದೆ” ಎಂದು ಹೈದರನಿಗೆ ಈ ಕೆಲಸವನ್ನು ಒಪ್ಪಿಸಿದನು. ಆಗ ದೊರೆಗಳೂ ಕೂಡ ಹೈದರನಿಗೆ “ಈಗ ನಯಭಯಗಳಿಂದ ಫೌಜಿನ ದಂಗೆಯನ್ನು ನಿವಾರಿಸು” ಎಂದು ಹೇಳಿದರು. ಹೈದರನ ಸಹಾಯದಿಂದ ಕಳಲೆಯವರ ಹಾವಳಿಯು ನಿಂತೀತೆಂದು ದೊರೆಗಳು ಆಸೆಪಟ್ಟರು; ನಂಜರಾಜಯ್ಯನು ತನ್ನ ಕಷ್ಟಗಳಿಂದ ಪಾರಾಗಲು ಹೈದರನ ಸಹಾಯದಿಂದ ಸಾಧ್ಯವೆಂದು ಹೈದರನನ್ನು ನಂಬಿದ್ದನು. ಸೈನಿಕರು ಹೈದರಲ್ಲಿಯ ಪ್ರಯತ್ನ ಪಟ್ಟರೆ ತಮ್ಮ ಸಂಬಳಗಳು ದೊರಕುವುವೆಂದಿದ್ದರು. ಇತರ ಜನರು ಸೋದರರಿಬ್ಬರಿಗೂ ಸಮಾಧಾನವನ್ನು ಮಾಡಿಸಿದ ಹೈದರಲ್ಲಿಯೇ ಮು೦ದಕ್ಕೆ ಪ್ರಬಲನಾಗುವನೆಂದು ತಿಳಿದಿದ್ದರು. ಹೀಗೆ ಎಲ್ಲರಿಗೂ ಹೈದರನು ಬೇಕಾದವನಾದನು. ಸೈನ್ಯದಲ್ಲಿ ಗುಮಾಸ್ತೆಗಳ ಶಾನಭಾಗ ಲೆಕ್ಕಗಳನ್ನಿಡುವುದರಲ್ಲಿ ಮೋಸ ಮಾಡಿ ಸುಳ್ಳು ಲೆಕ್ಕಗಳನ್ನಿಡುವ ಪದ್ಧತಿಯು ಹೈದರನಿಗೆ ತಿಳಿದಿತ್ತು. ಆದ್ದರಿಂದ ಹೈದರನು ಅವರೆಲ್ಲರನ್ನೂ ಕರೆಸಿ ಕೆಲವರನ್ನು ಗದರಿಸಿ ಕೆಲವರನ್ನು ಹಿಂಸೆಗೆ ಗುರಿಮಾಡಿ ನಿಜ ಸ್ಥಿತಿಗಳನ್ನು ತಿಳಿದನು. ರಾಜಧಾನಿಯಲ್ಲಿದ್ದ ಆನೆ ಕುದುರೆಗಳನ್ನು ಮೊದಲುಗೊಂಡು ಎಲ್ಲ ವಸ್ತುಗಳನ್ನೂ ತರಿಸಿದನು. ಈ ಬಟವಾಡೆಯ ಗಲಭೆಯೂ ಹೆಚ್ಚಾಗಿಯೇ ಇತ್ತು; ಎಲ್ಲಿಯೂ ಅಕ್ರಮ ನಡೆಯದಂತೆ ಹೈದರನು ರಾಜಧಾನಿಯಲ್ಲಿ ತನ್ನ ಸ್ವಂತ ಸೈನ್ಯದವರನ್ನೇ ಕಾವಲಿಗಾಗಿ ನಿಯಮಿಸಿದನು. ತರುವಾಯ ಮುಖ್ಯಾಧಿಕಾರಿಗಳನ್ನೂ ನೆಮ್ಮದಿವಂತರಾದ ಪ್ರಜೆಗಳನ್ನೂ ಕಳುಹಿಸಿ ನಯ ಭಯಗಳಿಂದ ಅವರಿಂದ ನಜರಾಣೆಯನ್ನು ತೆಗೆದುಕೊ೦ಡು ಹಣವನ್ನು ಕೂಡಿಸಿದನು. ಸೈನಿಕರೆಲ್ಲರಿಗೂ ಬಾಕಿಯಿದ್ದ ಸಂಬಳಗಳನ್ನು ಕೊಡವುದಾಗಿ ಸಾರಿದನು; ಆದರೆ ಅದೇ ಸಮಯದಲ್ಲಿಯೇ ತನ್ನ ಸ್ವಂತ ಸೇನೆಯಲ್ಲಿ ಆಪ್ತರಾಗಿದ್ದ ನಾಯಕರನ್ನು ಕರೆಸಿ “ಈ ಸೈನಿಕರು ಇಲ್ಲಿ ಸಂಬಳಗಳನ್ನು ಪಡೆದ ಹಣದ ಚೀಲಗಳನ್ನು ಹೊತ್ತುಕೊಂಡು ಕೋಟೆಯನ್ನು ಬಿಟ್ಟು ತಮ್ಮ ಊರುಗಳಿಗೆ ಹೊರಡುತ್ತಾರೆ. ನೀವು ವೇಷವನ್ನು ಬದಲಾಯಿಸಿಕೊಂಡು ಅವರ ಮಾರ್ಗದಲ್ಲಿ ಕಾದಿದ್ದು ಅವರು ಕಾಣಿಸಿದ ಕೂಡಲೆ ಅವರಿಂದ ಅವರ ಗಂಟನ್ನು ಕಸುಕೊಂಡು ನನಗೆ ಒಪ್ಪಿಸತಕ್ಕದ್ದು” ಎಂದು ರಹಸ್ಯವಾಗಿ ಆಜ್ಞೆ ಕೊಟ್ಟನು. ನಡೆದುದೂ ಹಾಗೆಯೇ ಆಯಿತು. ಸಂಬಳಗಳನ್ನು ತೆಗೆದು ಗಂಟು ಕಟ್ಟಿ ಕೊಂಡು ಸೈನಿಕರಾಗಿದ್ದವರು ಕೋಟೆಯಿಂದ ಹೊರಟು ತಮ್ಮ ಊರುಗಳ ದಾರಿಗಳನ್ನು ಹಿಡಿದದ್ದೆ ತಡ, ಅಲ್ಲಿ ಕಾದಿದ್ದ ಹೈದರನ ಸೈನಿಕರು ಕಳ್ಳರಂತೆ ಅವರಮೇಲೆ ಬಿದ್ದು ಗಂಟನ್ನು ಕಸಿದುಕೊಂಡು ಬಿಟ್ಟರು. ಅತ್ತ ಬಟವಾಡೆಯಾದ ಹಣವೆಲ್ಲವೂ ಮರುದಿನ ಈ ಉಪಾಯದಿಂದ ಹೈದರನ ಬೊಕ್ಕಸಕ್ಕೆ ಬಂದು ಸೇರಿತು. ಮೊದಲು ಹೈದರನು ನಾಲ್ಕು ಸಾವಿರ ಕುದುರೆಯವರನ್ನು ಈ ರೀತಿ ತೊಲಗಿಸಿ ಅವರ ಸೈನ್ಯವನ್ನು ಬರತರಫ್ ಮಾಡಿಸಿದನು. ದಂಗೆಯೇಳಲು ಸಿದ್ದರಾಗಿದ್ದವರ ತೊಂದರೆಯನ್ನು ತಪ್ಪಿಸಿಕೊಂಡಮೇಲೆ ಹೈದರನು ಉಳಿದವರಿಗೆ ಸ್ವಲ್ಪ ಭಾಗವನ್ನು ಸಲ್ಲಿಸಿ, ಉಳಿದ ಭಾಗವು ಮುಂದಕ್ಕೆ ಸಲ್ಲುವಂತೆ ತನ್ನ ವಾಗ್ದಾನವನ್ನು ಕೊಟ್ಟನು. ಸೈನಿಕರಿಗೆ ಹೈದರನಲ್ಲಿ ನಂಬಿಕೆಯಿತ್ತು; ಆದ್ದರಿಂದ ಅವನ ಮಾತನ್ನು ನಂಬಿದರು.

ಇದೇ ವೇಳೆಯಲ್ಲಿ ಮರಾಟೆಯವರು ದಂಡೆತ್ತಿ ಬಂದರು. ಎಲ್ಲರೂ ಹೈದರಲ್ಲಿಯ ಸೈನ್ಯದ ಮೇಲೆಯೇ ಭಾರವನ್ನು ಹಾಕಿದರು. ಹೈದರನೂ ದಂಡೆತ್ತಿ ಹೊರಟು ಚನ್ನಪಟ್ಟಣದ ಬಳಿ ಮರಾಟೆಯವರೊಡನೆ ಚಾತುರ್ಯದಿಂದ ಯುದ್ಧವನ್ನು ನಡೆಸಿದನು. ಮರಾಟೆಯವರಿಗೆ ಬೇಸರವಾದುದಲ್ಲದೆ ಪ್ರಬಲವಾದ ಕಾರಣಗಳು ಇತರೆಡೆಗಳಲ್ಲಿ ಹುಟ್ಟಿಕೊಂಡು ಹಿಂತಿರುಗುವ ಅವಶ್ಯಕತೆಯು ಹುಟ್ಟಿತು; ಅವರು ತಮ್ಮ ಹಣ ಸಲ್ಲುವುದಕ್ಕೆ ಆತುರದ ಏರ್ಪಾಡುಗಳನ್ನು ಹೈದರನೊಡನೆ ನಡೆಸಿಕೊಂಡು ಪುಣೆಗೆ ಹೊರಟರು. ಹೈದರನ ಕೀರ್ತಿಯು ಮೈಸೂರು ರಾಜ್ಯದಲ್ಲೆಲ್ಲ ಹರಡಿತು. ರಾಜಧಾನಿಗೆ ಹೈದರನು ಹಿಂತಿರುಗಿದಾಗ ಎಲ್ಲರೂ ಅವನನ್ನು ಗೌರವಿಸಿದರು. ದೊರೆಗಳು ಆಸ್ಥಾನದಲ್ಲಿ ಕುಳಿತು ಹೈದರನನ್ನು ಮರ್ಯಾದೆಯಿಂದ ಬರಮಾಡಿಕೊಂಡು ಫತ್ತೇ ಹೈದ‌ರ್‌ಬಹಾದುರ್ ಎಂಬ ಬಿರುದನ್ನು ಕೊಟ್ಟರು. ಆಸ್ಥಾನದಲ್ಲಿದ್ದ ಕರಾಚೂರಿ ನಂಜರಾಜಯ್ಯನು ಹೈದರನು ಸಮೀಪಿಸಿದ ಕೂಡಲೆ ಮರ್ಯಾದೆತೋರಲು ಎದ್ದು ನಿಂತು ಅವನನ್ನು ತಬ್ಬಿಕೊಂಡನು.

ಹೈದರನು ಪ್ರಬಲನಾಗಿದ್ದ ಕಾಲದಿಂದ ದೊರೆಗಳ ಮನಸ್ಸಿನಲ್ಲಿ ತಮ್ಮ ದುರ್ದಿನಗಳು ಶೀಘ್ರದಲ್ಲಿಯೇ ಕಳೆದುಬಿಡಬಹುದೆಂದು ತೋರಿತ್ತು; ದೇವರಾಜಯ್ಯನ ಮರಣಾನಂತರ ಆ ಆಸೆಯು ಇನ್ನೂ ಬಳೆಯಿತು. ಮರಾಟೆಯವರೊಡನೆ ಚನ್ನಪಟ್ಟಣದಲ್ಲಿ ಹೈದರನು ಹೆಣಗಾಡುತ್ತಿದ್ದ ಕಾಲದಲ್ಲಿ ಖಂಡೇರಾಯನು ಅರಮನೆಗೆ ಆಗಾಗ್ಗೆ ಹೋಗಿ ಬರುತ್ತ, ರಾಜರಿಗೂ ರಾಣೀವಾಸದವರಿಗೂ ಆಪ್ತನೆನಿಸಿದನು. ಜಯಶಾಲಿಯಾಗಿ ಹೈದರನು ಹಿಂತಿರುಗಿ ಬಂದಮೇಲೆ ಖಂಡೇರಾಯನು ನಂಜರಾಜಯ್ಯನ ಅಧಿಕಾರವನ್ನು ಕೊನೆಗಾಣಿಸುವ ಸಂಧಾನವನ್ನು ದೊರೆಗಳೊಡನೆಯೂ ಹೈದರನೊಡನೆಯೂ ಆಲೋಚಿಸಿ ಹೂಡಿದನು. ಸೈನ್ಯದಲ್ಲಿ ಕೆಲವರು ಅಧಿಕಾರಗಳನ್ನು ಖಂಡೇರಾಯನು ಗೋಪ್ಯವಾಗಿ ಕರೆಯಿಸಿಕೊಂಡು ಅವರು ಮಾಡ ಬೇಕಾಗಿದ್ದುದನ್ನು ಹೇಳಿಕೊಟ್ಟು ಕಳುಹಿಸಿದನು.

ಮೊದಲು ಸೈನ್ಯಾಧಿಕಾರಿಗಳು ಹೈದರನ ಬಿಡದಿಗೆ ಹೊರಟು ತಮ್ಮ ಸಂಬಳಗಳು ಬಹಳ ಕಾಲದಿಂದಲೂ ಸಂದಾಯವಾಗದಿವೆಯೆಂದೂ ಎಷ್ಟು ಕಾಲವನ್ನು ತಾವು ತಳ್ಳಬಹುದೆಂದೂ ವಿನಯದಿಂದ ಹೇಳಿಕೊಂಡು ತಮ್ಮ ಸಂಬಳಗಳು ದೊರಕುವಂತೆ ಪ್ರಯತ್ನ ಪಡಬೇಕೆಂದು ಆತನನ್ನು ಕೇಳಿಕೊಂಡರು. ಹೈದರನು ಅದಕ್ಕುತ್ತರವಾಗಿ “ನನ್ನ ಸೈನ್ಯದ ಬಟವಾಡೆಗೆ ಗೊತ್ತಾದ ಆದಾಯವು ನನ್ನ ಕೈಯಲ್ಲಿಯೇ ಇದೆ. ಆದ್ದರಿಂದ ನನ್ನ ಸೈನಿಕರಿಗೆ ಕ್ರಮವಾಗಿ ಸಂಬಳಗಳನ್ನು ಸಲ್ಲಿಸಲು ನಾನು ಶಕ್ತನಾಗಿದ್ದೇನೆ. ನಿಮಗಾಗಿ ಗೊತ್ತಾಗಿರುವ ಆದಾಯವು ನನ್ನ ಸ್ವಾಧೀನಕ್ಕೆ ಬರುವುದಿಲ್ಲ; ನಾನು ಹೇಗೆ ನಿಮಗೆ ಕೊಡಿಸಲಿ?” ಎಂದನು. ಅದಕ್ಕವರು “ಆ ಆದಾಯವು ನಂಜರಾಜಯ್ಯಂದಿರ ಸ್ವಾಧೀನವಾಗಿರುತ್ತದೆ. ಅವರಿಗೆ ಹೇಳಿ ಪ್ರಯತ್ನ ಪಟ್ಟರೆ ಆಗುವದು” ಎಂದರು. ದಿನೇ ದಿನೇ ಸೈನಿಕರು ಹೈದರನ ಬಿಡಾರಕ್ಕೆ ಬಂದು ಅವನನ್ನು ಬಲವಂತ ಪಡಿಸಿದರು; ಕಡೆಗೊಂದು ದಿನ ತಮ್ಮೆಲ್ಲರನ್ನೂ ಹೈದರನೇ ಮುಂದಾಳಾಗಿ ಕರೆದುಕೊಂಡ ನಂಜರಾಜಯ್ಯನ ಮನೆಯ ಮುಂದೆ ಧಾರಣಾವ್ರತ ಹಿಡಿದು ಮುಷ್ಕರಮಾಡಬೇಕೆಂದು ನಿರ್ಬಂಧಪಡಿಸಿದರು ಹೈದರನು ಬಲವಂತಕ್ಕೊಪ್ಪಿದಂತೆ ಒಪ್ಪಿಕೊಂಡನು. ಇದರ ವಿವರವು ಸ್ವಲ್ಪ ಸ್ವಲ್ಪವಾಗಿ ನಂಜರಾಜಯ್ಯನ ಕಿವಿಗೆ ಆಗಲೇ ಬಿದ್ದಿತ್ತು. ಹೈದರನೂ ಇದರಲ್ಲಿ ಸೇರಿದ್ದುದರಿಂದ ಪಿತೂರಿಯು ಬಲವಾದುದೆಂದು ನಂಜರಾಜಯ್ಯನು ಮನಸ್ಸಿನಲ್ಲಿ ಗ್ರಹಿಸಿದನು; ಹಿಂದೆ ನಡೆದ ಸೈನಿಕರ ಮುಷ್ಕರವಿನ್ನೂ ನೆನಪಿನಲ್ಲಿತ್ತು.. ಆದ್ದರಿಂದ ಆತನು ಬೇಗಲೇ ನಿಶ್ಚಯಮಾಡಿಕೊಂಡನು. ಹೈದರನನ್ನು ಮನೆಯೊಳಕ್ಕೆ ಕರೆಸಿಕೊಂಡು ಅಧಿಕಾರದಿಂದ ನಿವೃತ್ತನಾಗಲು ತಾನು ಒಪ್ಪಿರುವುದಾಗಿಯೂ ತನ್ನ ವಿಶ್ರಾಂತಿಗಾಗಿ ಸಾಕಾದಷ್ಟು ಉತ್ಪತ್ತಿಯನ್ನು ಕೊಡಿಸಿದರೆ ತಾನು ರಾಜಧಾನಿಯನ್ನು ಬಿಟ್ಟು ಬೇರೆಡೆಯಲ್ಲಿರುವುದಾಗಿಯೂ ತಿಳಿಸಿದನು. ತರುವಾಯ ತನ್ನ ಮನೆ ಬಾಗಲಿಗೆ ಬಂದು “ಸೈನಿಕ ಜನರೇ! ಈಗ ನಾವು ನಿವೃತ್ತರಾಗಲು ನಿಶ್ಚಯಿಸಿದ್ದೇವೆ. ದೊರೆಗಳೂ ನಮಗೆ ವಿಶ್ರಾಂತಿಯನ್ನು ಕೊಡಲು ಮನಮಾಡಿ ತಾವೇ ಆಡಳಿತವನ್ನು ಕೈಕೊಳ್ಳಲು ಇಷ್ಟಪಟ್ಟಿರುತ್ತಾರೆ. ನಾನು ಅಧಿಕಾರವನ್ನು ಬಿಟ್ಟು ಹೊರಡಲು ಸಿದ್ಧನಾಗಿದ್ದೇನೆ. ಆದ್ದರಿಂದ ನನ್ನನ್ನು ತೊಂದರೆಪಡಿಸುವುದು ಧರ್ಮವಲ್ಲ” ಎಂದೆಲ್ಲರಿಗೂ ಹೇಳಿದನು. ಇದನ್ನೂ ಪಿತೂರಿಗಾರರು ನಿರೀಕ್ಷೆಸಿಯೇ ಇದ್ದರು; ಬಾಗಲಿನ ಬಳಿಯಿದ್ದ ಕೆಲವರು ಸೈನಿಕರು “ಇದು ನ್ಯಾಯವೇ ಸರಿ. ಇನ್ನು ಮುಂದೆ ಇಲ್ಲಿ ಮುಷ್ಕರವಿಲ್ಲ” ಎಂದು ಬಾಗಿಲ ಕಾಯುವುದನ್ನು ಬಿಟ್ಟರು. ತರುವಾಯ ಸೈನಿಕರು ಹೈದರನನ್ನು ಮುಂದಿಟ್ಟುಕೊಂಡು ಅರಮನೆಗೆ ಹೊರಟರು.

ಅರಮನೆಯ ಮುಂದೆ ಬಂದಕೂಡಲೆ ರಾಜರನ್ನು ಕಾಣಲು ಖಂಡೇರಾಯನು ಒಳಕ್ಕೆ ಬರಬಹುದೆಂದು ಸಮುಖದ ದೂತನೊಬ್ಬನು ಬಂದು ಹೇಳಿದನು. ಅದರಂತೆಯೇ ಖಂಡೇರಾಯನು ಅರಮನೆಯೊಳಕ್ಕೆ ಹೋಗಿ ರಾಜರೊಡನೆ ಮಾತನಾಡಿ ಬಂದು “ರಾಜರು ನಂಜರಾಜಯ್ಯಂದಿರು ನಿವೃತ್ತರಾಗುವಂತೆ ತಕ್ಕ ಏರ್ಪಾಡುಗಳನ್ನು ಮಾಡುತ್ತಾರೆ. ಹೈದರಲ್ಲಿಯು ಎಲ್ಲರ ಎದುರಿನಲ್ಲಿಯೂ `ಇನ್ನು ಮುಂದೆ ನಂಜರಾಜಯ್ಯನ ಮೈತ್ರಿಗೆ ಆಸೆಪಡುವುದಿಲ್ಲ, ರಾಜಾಜ್ಞೆಯನ್ನೇ ಶಿರಸಾವಹಿಸುತ್ತೇನೆ’ ಎಂದು ಪ್ರಮಾಣ ಮಾಡಿದರೆ ಸೈನಿಕರ ಹೇಳಿಕೆಯನ್ನು ರಾಜರು ಲಾಲಿಸುತ್ತಾರೆ” ಎಂದು ಹೇಳಿದನು. ಹೈದರನು ಬಲವಂತಕ್ಕೆ ಸಿಕ್ಕಿದವನಂತೆ ತೋರ್ಪಡಿಸುತ್ತ ಅದೇ ರೀತಿಯಲ್ಲಿ ಪ್ರಮಾಣ ಮಾಡಿದನು. ಕೂಡಲೆ ಅರಮನೆಯ ಒಳಕ್ಕೆ ಹೋಗಿ ರಾಜರನ್ನು ಕಂಡುಬಂದು ಸೈನಿಕರಿಗೆ “ನಿಮ್ಮ ಸಂಬಳಗಳ ಬಟವಾಡೆಗೆ ತಕ್ಕ ಏರ್ಪಾಡುಗಳು ನಡೆಯುತ್ತಲಿವೆ. ಅವುಗಳೆಲ್ಲವೂ ಕ್ರಮಪಡುವುದಕ್ಕೆ ನಾಲ್ಕೈದು ದಿನಗಳಾದೀತು. ನೀವು ಸ್ವಲ್ಪ ನಿದಾನಿಸಬೇಕು. ನಾನೇ ನಿಮ್ಮ ಸಂಬಳಗಳಿಗೆ ಜವಾಬ್ದಾರನಾಗಿರುತ್ತೇನೆ” ಎಂದು ಹೇಳಿದನು. ಸೈನಿಕರು ಆ ಮಾತುಗಳನ್ನು ನಂಬಿ ಸಮಾಧಾನದಿಂದ ಅಲ್ಲಿಂದ ಹೊರಟರು. ಈ ನಾಟಕವು ಇಲ್ಲಿಗೆ ಮುಗಿದಂತಾಯಿತು.

ಅನಂತರ ಖಂಡೇರಾಯನಿಗೆ ದಿವಾನ ಪದವಿಯೂ ಹೈದರನಿಗೆ ದಳವಾಯಿತನವೂ ಗೊತ್ತಾದವು. ನಂಜರಾಜಯ್ಯನಿಗೆ ಸರ್ವಾಧಿಕಾರಿಯೆಂಬ ಹೆಸರು ಮಾತ್ರ ಉಳಿಯಿತು. ರಾಜ್ಯದ ಉಪಯೋಗಕ್ಕಾಗಿ ೧,೦೦೦ ಕುದುರೆಗಳನ್ನೂ ೩೦,೦೦೦ ಪದಾತಿಗಳನ್ನೂ ಆತನು ಇಟ್ಟುಕೊಂಡಿರಬೇಕೆಂದೂ ಅದಕ್ಕಾಗಿ ೩ ಲಕ್ಷ ವರಹಗಳ ಉತ್ಪತ್ತಿಯುಳ್ಳ ಜಹಗೀರು ಆತನಿಗಿರಬೇಕೆಂದೂ ನಿರ್ಧರವಾಯಿತು. ಅದರಂತೆ ನಂಜರಾಜಯ್ಯನು ರಾಜಧಾನಿಯನ್ನು ಬಿಟ್ಟು ಹೊರಟು ನಂಜನಗೂಡಿನಲ್ಲಿ ಶ್ರೀಕಂಠೇಶ್ವರದೇವರ ದರ್ಶನಮಾಡಿಕೊಂಡು ಹೊರಡುವ ನೆಪದಿಂದ ಮೈಸೂರು ಮಾರ್ಗವನ್ನು ಹಿಡಿದು ಮೈಸೂರನ್ನು ಸೇರಿದಕೂಡಲೆ ಅಲ್ಲಿಯೇ ನಿಂತುಬಿಟ್ಟನು. ಕೆಲವು ತಿಂಗಳುಗಳು ಹೀಗೆ ಕಳೆದವು; ಪೂರ್ವ ರಾಜಧಾನಿಯಾದ ಮೈಸೂರಿನಲ್ಲಿಯೇ ಈತನಿದ್ದುದು ತೃಪ್ತಿಕರವಾಗಿರಲಿಲ್ಲ. ಇದಲ್ಲದೆ ನಂಜರಾಜಯ್ಯನು ಮೈಸೂರ ಕೋಟೆಯನ್ನು ಭದ್ರಪಡಿಸುತ್ತಿದ್ದನು. ಆಗ ಆತನಿಗಾಗಿ ಗೊತ್ತಾಗಿದ್ದ ಜಹಗೀರುಗಳನ್ನು ಪುನಃ ಅರಮನೆಯ ಸ್ವಾಧೀನಕ್ಕೆ ತೆಗೆದುಕೊಂಡು ರಾಜರು “ನೀವು ಮೈಸೂರನ್ನು ಬಿಟ್ಟು ಮತ್ತೆಲ್ಲಿಯಾದರೂ ವಾಸಮಾಡಬೇಕು” ಎಂದು ಹೇಳಿಕಳುಹಿಸಿದರು. ಆಗ ನಂಜರಾಜಯ್ಯನು ಯಾವ ಮಾರ್ಗವನ್ನೂ ಕಾಣದೆ ಮನಸ್ಸಿನಲ್ಲಿ ಹೈದರನು ದ್ರೋಹಮಾಡಿದನೆಂದು ತಿಳಿದು ಹೈದರನಿಗೆ “ನೀನು ನನ್ನ ಉಪ್ಪುತಿಂದು ಬೆಳೆದಿದ್ದೀಯೆ. ಈಗಿನ ಅಧಿಕಾರವೆಲ್ಲವೂ ನನ್ನಿಂದಲೇ ಅಲ್ಲವೇ ನಿನಗೆಬಂದುದು. ಆದರೂ ದ್ರೋಹಿಯಾಗಿ ನಡೆಯುತ್ತ, ಈಗ ನನ್ನ ತಲೆಯನ್ನುಳಿಸಿಕೊಳ್ಳಲು ಮಾರ್ಗವಿಲ್ಲದೆ ಮಾಡಿರುತ್ತೀಯೆ! ನಿನ್ನ ಇಷ್ಟವಿದ್ದಂತೆಮಾಡು; ನಿನ್ನ ಕೈಲಾದುದನ್ನು ಮಾಡು. ನಾನೇನೋ ಮೈಸೂರನ್ನು ಬಿಟ್ಟು ಕದಲುವುದಿಲ್ಲ” ಎಂದು ಹೇಳಿ ಕಳುಹಿಸಿದನು. ಈ ಸಂಗತಿಯನ್ನು ತಿಳಿದಕೂಡಲೆ ದೊರೆಗಳು ಹೈದರಿನಿಗೆ ಸೈನ್ಯದೊಡನೆ ಹೊರಟು ಮೈಸೂರು ಕೋಟೆಯನ್ನು ಮುತ್ತಿ ಹಿಡಿದು, ಹಿಂದಿನ ರಾಜಾಜ್ಞೆಯನ್ನು ನಂಜರಾಜಯ್ಯನ ವಿಷಯದಲ್ಲಿ ನಡೆಸತಕ್ಕದ್ದೆಂದು ಆಜ್ಞೆ ಮಾಡಿದರು. ಅದರಂತೆಯೇ ಹೈದರನು ಹೊರಟು ಮೈಸೂರನ್ನು ಮುತ್ತಿದನು. ಮೂರುತಿಂಗಳಕಾಲ ಮುತ್ತಿಗೆಯು ನಡೆಯಿತು. ಕಡೆಗೆ ನಂಜರಾಜಯ್ಯನು ಸೋಲನ್ನೊಪ್ಪಿಕೊಂಡು ಮೈಸೂರಿನಿಂದ ೨೫ ಮೈಲಿ ದೂರದಲ್ಲಿರುವ ಕೊಣನೂರಿನಲ್ಲಿರುತ್ತೇನೆಂದೊಪ್ಪಿಕೊಂಡು ಮೈಸೂರನ್ನು ಬಿಟ್ಟು ತೆರಳಿದನು.

ನಂಜರಾಜಯ್ಯನ ಗತಿಯು ಈರೀತಿಯಾಯಿತು. ಆದರೆ ಇದೇ ಕಡೆಯಾಗಲಿಲ್ಲ. ಪುನಃ ಹೈದರನ ಸಂಧಾನದಿಂದಲೇ ಶ್ರೀರಂಗಪಟ್ಟಣಕ್ಕೆ ಬಂದು ಕಡೆಗೆ ಅವಮಾನಪಟ್ಟು ಪ್ರಾಣಬಿಡುವ ಕಾಲವನ್ನೂ ಅನುಭವಿಸಬೇಕಾಯಿತು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...