(ಮೊದಲು ಮಾತು)
ಈ ದೃಶ್ಯಾತ್ಮಕ ಕವನದ ಉಗಮವು ಹೀಗೆ: ಒಂದು ದಿನ ನಾನು ಧ್ಯೇಯದ ವಿಶಾಲತೆಗೂ ಜೀವನದ ಸಂಕೋಚಕ್ಕೂ ಇರುವ ಅಂತರವನ್ನು ಮನಸಿನಲ್ಲಿ ಅಳೆಯುತ್ತ ಕುಳಿತಿದ್ದೆ. ಒಮ್ಮೊಮ್ಮೆ ಬಾಳುವೆಯ ಸ್ವರೂಪವು ಧ್ಯೇಯವನ್ನು ಬಹುಮಟ್ಟಿಗೆ ಹೋಲುವಂತೆ ತೋರಿದರೂ ಅದರಲ್ಲಿ ಧ್ಯೇಯದ ಒಳತಿರುಳೇ ಇರುವದಿಲ್ಲ. ಈ ಕಲ್ಪನೆಯಿಂದ ‘ತೀರದ ದಾರಿ’ಗೆ ಪುಟ ಸಿಕ್ಕಿತು. ಸುಕುಮಾರನಿಗೆ ಒಂದು ಕನಸು ಕಾಣಿಸಿಕೊಳ್ಳುತ್ತಿರುತ್ತದೆ. ಈ ಕನಸೇ ಅವನ ಧ್ಯೇಯದ ಪ್ರತೀಕ. ಧ್ಯೇಯವಾದಿಯಾದ ಅವನು ಆ ಕನಸನ್ನು ಪಡೆಯಲು ಹವಣಿಸುತ್ತಾನೆ. ಅವನಿಗೆ ದೊರೆಯುವದು ಅದರ ಬಹಿರಂಗ ಸಾಮ್ಯವು ಮಾತ್ರ. ಅವನಿಗೆ ಬೇಕಾದುದು ರತ್ನ ಪಕ್ಷಿಯಂತೆ ರೂಪಗೊಂಡ ಆ ನೀಲವರ್ಣದ ಪಕ್ಷಿ. ಅವನಿಗೆ ದೊರೆಯುವ ದೊಂದೇ–ಆ ರತ್ನ ಪಕ್ಷಿಯ ದೇಹಪಂಜರ! ಪಕ್ಷಿಯ ಕರೆಯನ್ನು ಕೇಳಿದಾಗ ಧ್ಯೇಯದ ದಾರಿಯು ‘ತೀರದ ದಾರಿ’ ಯೆಂಬುದು ಸುಕುಮಾರನಿಗೆ ಗೋಚರವಾಗುವದು.
ಮೂಲ ಕಲ್ಪನೆಯು ದೃಶ್ಯರೂಪವಾಗಿ ವ್ಯಕ್ತವಾಗಿದ್ದ ಕಾರಣ ಇನ್ನೊಂದು ಪಾತ್ರವನ್ನು ರಚಿಸುವದು ಅವಶ್ಯವಾಯಿತು. ಕುಮಾರನು ಸುಕುಮಾರನ ಗೆಳೆಯ. ಶುದ್ಧ ಸ್ನೇಹಭಾವದಿಂದ- ಸುಕುಮಾರನೊಡನೆ ಸಹಕರಿಸಲೆಂದು ಮಾತ್ರ-ಅವನೂ ಕನಸನ್ನು ಪಡೆಯಲು ಸಾಹಸಬಡುತ್ತಾನೆ. ಧ್ಯೇಯದ ಬಹಿರಂಗಸಾಮ್ಯದಿಂದ ಸಹ ಅವನಿಗೆ ಸಂತೋಷವೆನಿಸುವದು. ಅದನ್ನು ಬಿಟ್ಟು ‘ತೀರದ ದಾರಿ’ ಯನ್ನು ನಡೆಯಲು ಅವನಿಗೆ ತುಂಬಾ ಅಸಮಾಧಾನ. ಆದರೆ ಸುಕುಮಾರನ ಜೊತೆಯಲ್ಲಿದ್ದ ಅವನಿಗೂ ಆ ಧ್ಯೇಯವು-ಪಕ್ಷಿಯು-ಕಾಣಿಸಿಕೊಂಡಾಗ – ಅವನ ಅಸಮಾಧಾನವು ತೊಲಗಿ ಹೋಗುವದು.
ರತ್ನ ಪಕ್ಷಿಯ ಬಳಿಗೆ ಸಂಜೀವಿನೀ ಕಡ್ಡಿಯಿರುವದೆಂದು ಒಂದು ವದಂತಿಯಿದೆ. ಈ ದಂತಕಥೆಯನ್ನೇ ಅವಲಂಬಿಸಿ ಒಂದು ಕಾವ್ಯವನ್ನು ಬರೆಯಬಹುದಾಗಿ ಗೆಳೆಯರು ಮಾತನಾಡುವದನ್ನು ನಾನು ಕೇಳಿದ್ದೆನು. ಅದನ್ನಿಲ್ಲಿ ಬಳಸಿಕೊಳ್ಳಲು ನನಗೆ ಅವಕಾಶವಿರಲಿಲ್ಲ;-ಧ್ಯೇಯ ಮತ್ತು ಜೀವನಗಳ ನಡುವಿನ ಮಹದಂತರವೇ ಇಲ್ಲಿಯ ಮುಖ್ಯ ವಸ್ತುವಾಗಿದ್ದರಿಂದ. ಆದರೆ ಆ ಕಥೆಯಲ್ಲಿ `ರತ್ನ ಪಕ್ಷಿ’ಗೆ ಇರಬಹುದಾದ ದಿವ್ಯತೆ-ಮನೋಹರತೆಗಳನ್ನು ನಾನಿಲ್ಲಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ‘ರತ್ನ ಪಕ್ಷಿ’ಯು ಕಲ್ಪನಾರಾಜ್ಯದಲ್ಲಿ ಹಾರಾಡುವ ಪಕ್ಷಿ. ‘ಸಂಬಾರಕಾಗೆ’ಯು ಪ್ರಪಂಚದಲ್ಲಿ ಅದರ ಸಾಮ್ಯವೋ ಏನೊ!
ಈ ದೃಶ್ಯವನ್ನು ಬರೆದ ಮೇಲೆ ನಾನು ಮೇಟರಲಿಂಕ್ ಅವರ The Blue Bird (ನೀಲಪಕ್ಷಿ) ಎಂಬ ದೃಶ್ಯಕಾವ್ಯವನ್ನು ಓದಿ ನೋಡಿದೆ. ಅಲ್ಲಿಯವರೆಗೆ ಅದರ ಹೆಸರನ್ನು ಕೇಳಿ ಗೊತ್ತಿತ್ತು. ಇರಬಹುದಾದ ಹೋಲಿಕೆ – ವ್ಯತ್ಯಯಗಳನ್ನು ತಿಳಿದುಕೊಳ್ಳಲೆಂದೇ ಓದಿದೆನು. ಅಲ್ಲಿಯ ಕಥೆಯ ಪಡಿಯಚ್ಚೇ ಬೇರೆಯಾಗಿದೆ. ‘ತೀರದ ದಾರಿ’ಯು ಓರ್ವ ತರುಣ
ಕವಿಯು ಬರೆದ ಒಂದು ಚಿಕ್ಕ ರೂಪಕವಾಗಿದೆ; The Blue Bird ಎಂಬುದು ಆಧುನಿಕ ಋಷಿವರ್ಯರಲ್ಲೊಬ್ಬರು ಬರೆದ-ಅವರ ತತ್ವಸಾರದಂತಿದ್ದ-ಒಂದು ಭವ್ಯದಿವ್ಯವಾದ ನಾಟಕ!
“ಉಳಿದ ಭಾಗವು ಅಷ್ಟಕ್ಕಷ್ಟೆ; ರತ್ನ ಪಕ್ಷಿಯ ಹಾಡು ಮಾತ್ರ ಕಾವ್ಯಮಯವಾಗಿದೆ’ಯೆಂದು ಒಬ್ಬ ಗೆಳೆಯನು ಹೇಳಿದ್ದನು. ಇದು ವಿಚಾರಣೀಯವಾದ ಮಾತು.
ಪುಣೆ
೧೦-೧೧-೩೪ | ವಿನಾಯಕ
ತೀರದ ದಾರಿ
(ಒಂದು ದೃಶ್ಯಾತ್ಮಕ ಕವನ)
[ಒಂದು ನಿಬಿಡಾರಣ್ಯದ ಬದಿಯಲ್ಲಿಯ ದಾರಿ. ಅಲ್ಲಿ ಕುಮಾರ, ಸುಕುಮಾರರೆಂಬ ಇರ್ವರು ಬಾಲಕರು ಮಾತನಾಡುತ್ತ ಸಾಗಿದ್ದಾರೆ. ದೂರ ಕ್ಷತಿಜದಲ್ಲಿ ಒಂದು ಅರೆಮನೆಯ ಹೊಂಗಳಸಗಳು ಹೊಳೆದು ಕಾಣಿಸುತ್ತಿವೆ.]
ಸುಕುಮಾರ:
ಅಲ್ಲಿ ನೋಡದೊ ಗೆಳೆಯ!
ನನ್ನ ಕನಸಿನ ಗುರಿಯು ಮಸಗಿ ಕಾಣುತಲಿಹುದು.
ನೂರಸಲ ಮುಗಿಲಿನಲಿ ರೆಕ್ಕೆಗಳ ಮೇಲೀಸಿ
ಕಂಡ ತುಂಗೋತ್ತು೦ಗ ಪರ್ವತದ ಸೀಮೆಯಲಿ
ಒಂದು ಬನವಿದ್ದುದನು ನಿನಗೆ ಹೇಳುತಲಿದ್ದೆ.
ನನ್ನ ಮುಂದಿನ ಕಾಣ್ಕೆ ಬನದ ಮೇರೆಯ ಮೀರಿ
ಅದರೆದೆಯ ನಾಡಿನೊಳಗೊಂದು ಪ್ರಾಸಾದವನು
ಕಂಡು ನಿಂದಂತಿತ್ತು. ಅದರೊಳಕೆ ಬಲಗೊಂಡೆ
ನನ್ನ ಮನವನು ಸೋಲಿಸಿದ ರತ್ನ ಪಕ್ಷಿಯನು!
ಅದರ ಬಹುವಿಧದ ಮೋಹದ ಕರೆಯನಾಲಿಸುತ
ಮನದಿ ಜನಿಸಿತು ಅದನು ಪಡೆಯಬೇಕೆಂಬಾಸೆ.
ಕನಸಿನಲಿ ತಣಿಸಿರುವ ಕರೆಯು:–ದಿಗ್ವಲಯದಲಿ
ಒಂದು ಶುಭನಿಲಯದಿಂದೈತಂದುದೆಂದೆನಿಸಿ
ಅರಸಲನುರಾಗವಿರೆ,-ಒಡನಾಡಿ ನೀ ಬಂದೆ!
ಎದುರು ನೋಟವ ನೋಡು! ಅರಮನೆಯ ಹೊಂಗಳಸ
ಹೊಂಗೇದಿಗೆಯ ತೆರದಿ ಹಸನಾಗಿ ಹೊಳೆಯುತಿದೆ!
ಕಲ್ಲುಮುಳ್ಳಿನದಾರಿ ಇಲ್ಲದಾಯಿತು ಇಂದು!
ಲಭಿಸಿದವು ನಾವ್ ಬಯಸಿ ನೊಂದಿರುವ ತೇಜಗಳು!
ಕುಮಾರ:
ಅಚ್ಚರಿಯು! ನಿನ್ನ ಬಣ್ಣನೆಯ ಕನಸನು ಮೀರಿ
ಮೆರೆಯುತಿದೆ ಸತ್ಯವಿದು. ಇದುವೆ ಯಾತನೆಯ ಕೊನೆ.
ನಿನ್ನ ಮೇಲಿನ ಮೋಹವೆನ್ನನೆಸೆದಿತು ಇಲ್ಲಿ.
ಇರಲಿಲ್ಲವೆನಗೆ ಈ ರತ್ನ ಪಕ್ಷಿಯ ಬಯಕೆ;
ಆದರಾ ನಿನ್ನ ಬಗೆಗೊಳುವ ಸ್ವಪ್ನಗಳನ್ನು
ಕೇಳಿ ಹಾತೊರೆದಿದ್ದೆ ಆ ಪಕ್ಷಿ ಬೇಕೆಂದು.
ನೀನೆ ಸಾಹಸಭೀಮ, ಕುಂದದಿಹ ಎದೆಗಾರ.
ನಿನ್ನ ಬೆಂಗಾವಲಿಗ,-ನಾನೇನ ಗೆಯ್ಯುವೆನು!
ನಿನ್ನ ಕೆಯ್ಮೆಯ ಮೈಮೆಯನ್ನುು ಪಾಲಾಗಿಸಲು
ಜೀವಿಸಿರುವೆನು ಮಾತ್ರ! ಆದರೂ ಈ ದಾರಿ,-
ಕೇಡುಗಾಲದ ಕೂಸಿಗಾದರೂ ಬೇಡವಿದು!-
ಹಿಂತುಳಿದು ಮುಂತುಳಿದು ಬೇಸರಾಯಿತು ಜೀವ.
ಸುಕುಮಾರ:
ಇಂತು ನುಡಿವುದೆ ಗೆಳೆಯ! ಅರಮನೆಯ ನೋಟವನು
ಕಾಣಲೆಳಸಿದ ಕಂಗಳೆಂದೊ ಕುರುಡಾಗಿಹವು
ನೋವ ಸೆಣಸಾಟಕ್ಕೆ. ಉಳಿದುದೆಲ್ಲವು ಬಯಲು.
ಅದರ ಚೆಲುವಿಕೆಯೊಂದು ನನ್ನ ಕಣ್ತುಂಬಿಹುದು.
ಅಂದು ಕಂಡಿಹ ಕನಸನಿಂದಿಲ್ಲಿ ಕಾಣ್ವನಕ
ಎಚ್ಚರಿಲ್ಲದೆ ಬಂದೆ-ದೂರೊಂದು ಜ್ಯೋತಿಯನು
ಕಂಡಿರುವ ಹುಳದಂತೆ. ನಡೆದುದರ ನೆನಪಿಲ್ಲ.
ಇಂದು ಕಾಣುವೆ ನೆಚ್ಚು ಮೆಚ್ಚಿನ ವಿಹಂಗಮವ!
ಕುಮಾರ:
ನನ್ನಿಗನೆ! ಪಕ್ಷಿಯನು ಹಿಡಿದುಕೊಂಡಾ ಮೇಲೆ
ನೆನಪಿಹುದು ನೀನೊರೆದ ಮಾತು. ಸಂಪದವೆಲ್ಲ
ಪದತಲದಿ ಪವಡಿಸುವದೆಂದೆ. ಕಲ್ಪದ್ರುಮವ
ನಮ್ಮಾಣತಿಯ ತಾಣದಲ್ಲಿ ಎಸೆಯುವದೆಂದೆ.
ಕಾಮಧೇನುವು ಕ್ಷೀರವನ್ನು ಸುರಿಸುವದೆಂದೆ.
ಇದು ನಿಜವೆ? ಅರಸುಗಳಿಗರಸು ನಾವಾಗುತ್ತ
ಸೂರೆಗೊಂಡಿಳೆಯೊಳಿಹ ಸಕಲ ಸುಖಸಾಧನೆಯ;-
ಇಂದ್ರನಮರಾವತಿಯನೇಳೆಸುವ ನಗರದಲಿ
ಮೆರೆಯಬಹುದೆಲೆ ಗೆಳೆಯ?
ಸುಕುಮಾರ:
ಕುರಿವಾನಿಸರೆ ನಾವು?
ಇವುಗಳೋಜೆಯು ನಾಚುವಂಥ ಬಾಳೊಂದಿಹುದು;
ರತ್ನಪಕ್ಷಿಯ ನೋಡಿ ಕಣ್ಣೆದುರು ಕಟ್ಟಿಹುದು
ಆ ಬಾಳ ಪಡಿನೆಳಲು ಅದರ ದರ್ಶನ ಹೊಂದಿ,
ಕಾಲಾಂತರದ ಸ್ಮೃತಿಯು ತಾ ಚಿಗಿತು ಸುಮವಾಗೆ,
ನಿನ್ನೆದೆಯ ಪೊದೆಯಲ್ಲಿ ಕರಕರೆಯ ಪಡುತಿರುವ
ಕಾಡು ಬಾನಾಡಿಗದರವಿುತ ಬಂಧುವ ತೋರಿ
ಪುಣ್ಯವನು ಗಳಿಸಯ್ಯ. ಉದಯವಾಗಲಿ ಹಾಡು
ಅದರಕ್ಷುಧೆ ಶಾಂತವಾಗುತ ಬಂದು. ಇಂತಿರಲು
ಲೋಕದೊಡೆತನದಲ್ಲಿ ಇನ್ನಾವ ಬಿನ್ನಾಣ?
ರತ್ನಪಕ್ಷಿಯು ಸುಡಿದ ಮಾತು ಸೋಬಿಗವಹುದು.
“ಪರಿಸಗಲ್ಲಿಗೆ ತಗಲಿ ಕಾರ್ಬೊನ್ನು ಪೊನ್ನಾಯ್ತು,
ನಿನ್ನ ಜೀವದ ಹಸುಳೆಹಕ್ಕಿ ನನ್ನನು ಸೋಂಕಿ
ರತ್ನಮಯವಾಗುವದು. ಆಗ ನೋಡುವೆಯಂತೆ!
ಬಹುರತ್ನ ಭೂಷಿತೆ ವಸುಂಧರೆಯು ಎಲ್ಲೆಡೆಗೆ
ರತ್ನ ಪಕ್ಷಿಗಳನ್ನು ತೋರುವಳು. ಕೋಕಿಲವು
ನಿನ್ನ ಜೊತೆಯಾಗುವದು. ನವಿಲು ನೆರಳಾಗುವದು.
ಅರಸಿಯರ ಹೃದಯಸರಸಿಯಲಿ ವೇದನೆಪಡುವ
ರಾಜಹಂಸವು ಈಜಿ ನಿನ್ನೆಡೆಗೆ ಮರಳುವದು.
ಭೂಮಿಯಲಿ ಎರಡು ವಿಧ,-ರತ್ನ ಇಲ್ಲವೆ ಮಳಲು.
ನೀ ರತ್ನ ಮಯವಾಗಿ ದಾರಿಮಳಲನು ಕೂಡ
ರತ್ನವಾಗಿಸು ಕಂದ!” ಎಂದು ಕರೆದಿತು ಪಕ್ಷಿ
ಕುಮಾರ:
ದಾರಿಹೋಕರು ತಿಳಿಯರೀ ನುಡಿಯ ಭಾವವನು.
ಆ ಪಕ್ಷಿಯೊಂದೆಮಗೆ ದೊರೆತು ಸಂಪ್ರೀತಿಯನು
ಇತ್ತುದಾದರೆ ಮುಂದೆ ನಮಗೆ ಬೇಕಿಹುದೇನು?
ಪಕ್ಷಿಗೆಂದೆಮ್ಮ ವೃಕ್ಷವು ಬೆಳೆಯಲನುವಾಯ್ತು.
ಪಕ್ಷಿಯೊಂದೆಯೆ ಸಾಕು; ಪಕ್ಷಿಸಂಕುಲವೇಕೆ?
ಸುಕುಮಾರ:
ವಿಹಗದಾ ಕರೆಯಲೆಯ ಮೇಲಿಂತು ನಡೆಯುತ್ತ
ಬಂದಿಹೆನು; ನನ್ನ ಬಾಳಿನ ಮುಡುಪ ಸಲ್ಲಿಸುತ
ಪ್ರತಿಯಾಗಿ ರತ್ನ ಭಾಂಡಾರವನು ಕೈಗೊಂಡು
ನನ್ನೆದೆಯ ಪೀಠದಲಿ ಪಕ್ಷಿಯನು ಕುಳ್ಳಿರಿಸಿ
ಅದರ ನುಡಿಯಂತೆನ್ನ ಜೀವನವ ಮಾರ್ಪಡಿಸಿ
ಸೂರೆಗೊಳಿಸುವೆನಿಳೆಯೊಳಾ ರತ್ನರಾಶಿಯನು!
(ಮುಂದೆ ಸಾಗುತ್ತ ಬಂದ ಅವರು ಅರಮನೆಯನ್ನು ಸಮೀಪಿಸುವರು.)
ಕುಮಾರ:
ಇರಲಿ ನಡೆ. ಮೊದಲು ಪಕ್ಚಿಯನು ಕಾಣುವೆವಂತೆ.
ಕಾನನದಿ ಚಿಂತಿಸುತ ಕುಳಿತ ತವಸಿಯ ತೆರದಿ
ತಲ್ಲೀನವಾಗಿಹುದು ಕಾಂತಾರದರಮನೆಯು.
ಸ್ಫೂರ್ತಿಗೆಂದಾ ಋಷಿಯು ತನ್ನಂತರಂಗವನು
ತೆರೆದಂತೆ ಅದರ ದ್ವಾರಗಳೆರಡು ತೆರೆದಿಹವು.
ಸುಕುಮಾರ:
(ಉತ್ಸಾಹದಿಂದ)
ಕನಸಿಗೆಂದಾರತಿಯ ಬೆಳಗಿ ನಿಂತಿಹ ನಾನು
ಸತ್ಯವನು ಪೂಜಿಸಿದೆ! ಮನದಂತರಿಕ್ಷದಲಿ
ಮೆರೆದ ನೋಟವು ತುಂಬಿತೀ ಚರ್ಮಚಕ್ಷುಗಳ.
ನೂರುಸಲ ಗಾನಸಿರಿಯಿಂದೆನ್ನ ರಮಿಸಿರುವ
ರತ್ನ ಪಕ್ಷಿಯ ನೆಲೆಯು ಕೊನೆಗೆ ಅವಗತವಾಯ್ತು.
ಇನ್ನು ವಿಶ್ವದ, ನನ್ನ, ಬಾಳುವೆಗಳೊಂದಿಹವು.
ಕುಮಾರ:
(ಆನಂದಾತಿರೇಕದಿಂದ)
ಗೆಳೆಯ! ನೋಡೀ ಪವಡಿಸಿರುವ ಸೌಂದರ್ಯವನು!
ಸುಕುಮಾರ:
[ಮಹಾದ್ವಾರವನ್ನು ಸಮೀಪಿಸಿ]
ಇವನಿವನೆ ಅರಮನೆಯ ದ್ವಾರಪಾಲಕನಿವನು!
ಓ! ಎನ್ನ ಕನಸಿನೊಳಗೊಲಿದು ನುಡಿದಿಹ ಬಂಧು
ಇವನಿವನೆ! ಪಕ್ಕಗಳನೊಯ್ಯನೆತ್ತಿಹ ರೀತಿ
ಇವನದಿದು! ಕೈಯಲಿಹ ದಂಡ! ಕಾಲುಗಳನ್ನು
ತೊಡಕಿ ನಿಂತಿರುವೆಸಕ! ಅನಿವಿುಷರ ಕಳೆಯಿಹುದು.
ಬೆಸನವೇನೆಂದೆನ್ನ ನಗುತ ಕೈವಿಡಿದೊಯ್ದು
ದ್ವಿಜರತ್ನದೆದುರೆನ್ನ ನೂರುಸಲ ನಿಲ್ಲಿಸಿದ
ಅನಿಮಿತ್ತ ಬಾಂಧವನೆ! ನಾನಾಗಿ ಬಂದಿಹೆನು.
ದೇಹವನು ತಳೆದು ಸಮಭಾಗಿಯಾಗುತ ನಿನ್ನ
ಕಂಡಿರುವದಿದೆ ಮೊದಲು! ನಿನ್ನ ಕೃಪೆಯಿರಲೆನಗೆ.
[ಮಹಾದ್ವಾರದಲ್ಲಿ ದ್ವಾರಪಾಲಕನಂತಿರುವ ಶಿಲಾಮೂರ್ತಿಗೆ ಅಭಿನಂದಿಸುವನು. ಯಥೋ ಚಿತವಾಗಿ ಮೂರ್ತಿಯು ಸುಮ್ಮನಿರುವದು.]
ಕುಮಾರ:
[ಶಿಲಾಮೂರ್ತಿಗೆ]
ನಾನಿವನ ಸಂಗಡಿಗ. ಇವನೊಡನೆ ಸಂಚರಿಸಿ
ಕಾಣಬಯಸುವೆನಿಂದು ಆ ರತ್ನ ಪಕ್ರಿಯನು.
ಸುಕುಮಾರ:
[ಶಿಲಾಮೂರ್ಶಿಗೆ]
ನಿನ್ನ ವಾಕ್ಸುಧೆಯಿಂದು ನನ್ನೆದೆಯ ತೋಯಿಸಲಿ.
ಇಂದೆನಗೆ ನಿಜವಾದ ಜೀವನವು. ನುಡಿಯಯ್ಯ!
ಇನ್ನು ಪ್ರೀತಿಯ ರತ್ನ ಪಕ್ಷಿಯೆಡೆ ತೆರುಳುವೆನು
ಕುಮಾರ:
[ಶಿಲಾಮೂರ್ತಿಗೆ]
ಅಹುದಹುದು. ಪಕ್ಷಿಯನು ಕಾಣುವೆವು. ತ್ವರೆಮಾಡು.
ಸುಕುಮಾರ:
(ಶಿಲಾಮೂರ್ತಿಯನ್ನು ದಿಟ್ಟಿಸಿ ಪರೀಕ್ಷಿಸಿ ನೋಡುತ್ತ ದುಃಖದಿಂದ)
ಅರರೆ! ಎಳನಗೆಯು ತಾ ಮಿನುಗುತಿರುವಲ್ಲಿಲ್ಲ
ಜೀವದಾಭಾವವದು. ಉಸಿರಿಗಾಸರೆಯೆಲ್ಲಿ
ಈ ಮೂರ್ತಿಯಂತರಾಳದಲಿನ್ನು? ಅಕಟಕಟ
ಮೂರ್ತಿಯಿದು! ಬರಿ ಮೂರ್ತಿ! ಪ್ರಾಣದೇವನು ತೊರೆದ
ದೇಹದೊಳಗುಡಿಯಹುದು. ಅಯ್ಯೊ! ವಂಚಿತನಾದೆ
ಬಾಳ್ಮೆಯೆಂದದರ ಪಡಿನೆಳಲನ್ನು ತಳ್ಕಿಸುತ!
ಆದರಚ್ಚಳಿಯದಿದೆ. ಆ ರೂಪು, ಆ ರೇಷೆ-
ಯೊಡಮೂಡಿದಂತಿಹುದು. ಆದರಿದರೊಳಗಿಲ್ಲ
ಅನಿಮಿಷನ ಕೋಮಲತೆ, ಚಿರಜೀವಿಗಿಹ ಬೆಳಕು.
ಪ್ರತಿಬಿ೦ಬವನು ಮಾತ್ರ ನನ್ನೆದುರು ನೋಡುವೆನು.
ಇಲ್ಲಿಹುದು ಜೀವನದ ಮಾಯೆ. ಕವಿಪುಂಗವರು
ಬಾಳ ದಿವ್ಯತೆಗಳನು ನೆನೆದು ಬಣ್ಣಿಸಲೆಸಗಿ
ನುಡಿಯ ಜಾಲವನೊಂದು ಹೆಣೆಯುವರು. ಶಿಲ್ಪಿಗಳು
ಸಂಜೆಮುಂಜಾವುಗಳನೆಲ್ಲ ಮೂಡಿಸಲೆಳಿಸಿ
ಬಣ್ಣದನುಕ್ರಮವನ್ನ್ಹು ಬರೆಯುವರು. ದೈವಿಕತೆ-
ನಿರ್ಮಾಣಕಾರ್ಯದಲಿ ದೇವನಿತ್ತಿಹ ಬೆಳಕು-
ಅದು ಮಾಯವಾಗುವದು. ಅಕಟಕಟ! ಇದರಂತೆ
ನನ್ನ ಜೀವವನುಂಡ ಕನಸುಗಳು ಜೀವನದಿ
ಮೂಡಿ ಬರಬೇಕೆಂದು ನಾನೆಳಸುತಿರುವಾಗ
ಮಣ್ಣಿನಲಿ ತಲೆಯೆತ್ತಿ ಮಲಿನತೆಯ ಹೊಂದಿಹವು.
ಅಲ್ಲ, ನನ್ನಯ ಪಯಣ ಮುಗಿವ ಕಾಲವಿದಲ್ಲ.
ಕನಸುಗಳು ನನ್ನ ಕೊಂಡೊಯ್ವನಕ ಬಳಲಿಕೆಯು!
ಇಲ್ಲದಿರೆ ಅವನೆಲ್ಲ ಪಡೆವನಕ ಇರುವಿಕೆಯು!
ಕುಮಾರ:
ಆಲಾಪವೇನಯ್ಯ? ಮಾತನಾಡಿದ ಬೊಂಬೆ
ಮಾತನಾಡಿಸದಿರಲು ಕೊರತೆಯೇನಿಹುದಿಲ್ಲಿ?
ಸಾಗಿ ಬಾ ಬಯಲು ಚಿಂತೆಯ ತೊರೆದು. ಪಕ್ಷಿಯದು
ಹಾರಿ ಹೋಗಲು ಬಹುದು. ಆಗ ನಡೆದಿಹ ದಾರಿ
ಫಲವಿಲ್ಲದಾಗುವದು.
ಸುಕುಮಾರ:
[ಗಂಭೀರನಾಗಿ]
ಅಹುದು ತೀರದ ದಾರಿ!
(ತೆರೆಯು ಸರಿದು ಅರಮನೆಯ ಪಟಾಂಗಣವೂ ಒಳಭಾಗವೂ ಕಾಣಿಸಿಕೊಳ್ಳುವವು. ಇರ್ವರೂ ಅವುಗಳನ್ನು ಸಮೀಪಿಸುವರು.)
ಸುಕುಮಾರ:
ಅಯ್ಯೊ! ಮತ್ತಿಲ್ಲಿಹುದು ಒಡೆದ ಕನ್ನಡಿಯಂತೆ
ವಿದ್ರೂಪವಿಹ ಕನಸು. ಚಿಮ್ಮುತಿಹ ಕಾರಂಜಿ
ನೀರಿನಾಟವನಾಡಿ ದಣಿಯುತಿದೆ. ಮೊದಲದುವೆ
ಮನದೆದುರು ತಿಳಿಬೆಳಕ ಬೀರಿ ಕುಣಿಯುತಲಿತ್ತು.
ಭೂಮಿತಾಯಿಯೆ! ನಿನ್ನ ಸ್ಪರ್ಶವದು ಪಾವನವು.
ಆದರೀ ನಿನ್ನಣುಗರಾಟನೋಟಗಳಲ್ಲಿ
ಬಯಕೆಬೆರಕೆಗಳಲ್ಲಿ ಚಲಿಸದಲೆ ನೆಲೆಸಿಹುದು
ಬೆಳಕನೆಲ್ಲವನಿಲ್ಲದಾಗಿಸುವ ಕಾರಿರುಳು.
ಕುಮಾರ:
ಇತ್ತ ನೋಡಲೆ ಗೆಳೆಯ! ರಂಗಮಹಲಿನ ಚೆಲುವ.
ಮಾಣಿಕದ ಮೂರ್ತಿಗಳು ಸಾಲುಸಾಲಾಗಿಹವು
ಸ್ವರ್ಣಸ್ತಂಭಗಳಲ್ಲಿ. ಬಹು ಬೆಲೆಯ ಪೀಠಗಳು
ಕೂಡಲಿಕೆ ಕರೆಯುವವು. ಮುತ್ತುಗಳ ಪರದೆಗಳು
ಮುದ್ದು ಮುದ್ದಾಗಿಹವು. ಯಾವ ರಜನಿಯಲೇನೊ
ಇದರ ರಾಣಿಯು ಹೊತ್ತಿಸಿರುವ ದೀಪಾವಳಿಯು
ಕಳೆಗುಂದದುರಿಯುತಿದೆ. ನಿನ್ನ ಕಾಣ್ಕೆಯು ದಿಟವು.
ಕನಸಿನಲಿ ಕಂಡಿಲ್ಲವೀ ತೆರದ ಐಸಿರಿಯ!
ನಡೆ ಬೇಗ! ರತ್ನ ಪಕ್ಷಿಯ ಕಂಡು ಮರೆವೊಕ್ಕು
ಇದನೆಲ್ಲ ದೊರಕಿಸುವ!
[ಕುಮಾರನು ಆತುರನಾಗಿ ಅರಮನೆಯ ಒಳಕ್ಕೆ ಪ್ರವೇಶಿಸುವನು, ಸುಕುಮಾರನು ದಿಙ್ಮೂಢನಾಗಿ ಅಲ್ಲಿಯೇ ನಿಂತಿರುವನು.]
ಸುಕುಮಾರ:
(ಶೋಕಿಸುತ್ತ)
ಓ ಮರುಳು ಕಲ್ಪನೆಯೆ!
ನೀನು ಕಂಡಿರುವದಕೆ ಇಲ್ಲಿ ನಾ ಕಾಣ್ವುದಕೆ
ಅಂತರವದೆನಿತೆನಿತೊ! ಮುಗಿಲಿನಿಂದಿಳಿದಂತೆ,
ಇಳಿದಿಳೆಯ ಮೇಲ್ನಿಂತ ದಿವ್ಯವೈಭವದಂತೆ
ಕಂಗೊಳಿಸುತಿರುವ ಪ್ರಾಸಾದವಿಂದಿಳೆಯಾಣ್ಮ-
ರೆಲ್ಲ ತಮ್ಮೈಸಿರಿಯ ಬಣ್ಣಿಸಲು ನಿರ್ಮಿಸಿದ
ಹರ್ಮ್ಯದಂತಿರುತಿಹುದು. ಮಿಳಿರ್ವ ರೆಕ್ಕೆಗಳಿಂದ
ಸಂಚರಿಪ ಸುರನಿಕಾಯವು ಶಿಲ್ಪಸಮುದಾಯ
ವಾಗಿಹುದು. ಇದಕಲ್ಲ ನಾನಿಲ್ಲಿ ಬಂದಿಹುದು.
ಅಕ್ಕರೆಯ ರತ್ನ ಪಕ್ಷಿಯನು ಕಾಣಲು ಬಂದೆ.
ಅದರ ಸಂಪದವೆಲ್ಲವೀ ರೂಪುವೆತ್ತಿರಲು
ನನ್ನ ಪಕ್ಷಿಯನಾವ ಮೋಡಿಯಲಿ ಕಾಣುವೆನೊ!
ದೇವದೇವನೆ ಗತಿಯು! ಮುಡುಪನ್ನು ಸಲ್ಲಿಸಲು,
ಆಣತಿಯನಿತ್ತಿಲ್ಲ! ಸೌಂದರ್ಯದಿಂಚರದ-
ರಾಜತೇಜಕೆ ಸಾಜಮಾಗಿ ಸಿರಿವನೆಯಾದ-
ವಿಹಗವನು ಗಮನಿಸಲು ಏಳು ಕಡಲನು ದಾಟಿ
ಮಲ್ಲಿಗೆಯ ಮುಡಿದಂದು ಅಮೃತದಿನವಿದೆಯೆಂದೊ?
ಕುಮಾರ:
(ಒಳಗೆ ನಿಂತಲ್ಲಿಯೇ ರಭಸದಿಂದ ಕೂಗುವನು.)
ಸುಕುಮಾರ! ಇಲ್ಲಿಬಾ! ನಿನ್ನ ಕನಸಿನ ಪಕ್ಷಿ!
ಮೌನವಾಗಿರುತಿಹುದು. ಮಾತನಾಡಿಸಲೇಳು!
ಸುಕುಮಾರ:
(ಆತುರನಾಗಿ)
ಎಲ್ಲಿ? ಪಕ್ಷಿಯದೆಲ್ಲಿ? ಅರ್ಣವವ ಕಾಣದಲೆ
ಭೂವಿುಯಲಿ ತೊಳಲುತ್ತ ಕಡೆಗೊಮ್ಮೆ ಕಂಡಿರುವ
ತೊರೆಯಂತೆ ಬೆರೆಯುವೆನು. ರತ್ನ ಪಕ್ಷಿಯದೆಲ್ಲಿ?
(ಸುಕುಮಾರನು ತೀವ್ರವಾಗಿ ಒಳಕ್ಕೆ ಪ್ರವೇಶಿಸುವನು. ತೆರೆಯು ಸರಿದು ಅಂತಃಪುರದಲ್ಲಿಯ ಒಂದು ಮಂದಿರವು ಕಂಡುಬರುವದು. ಅಲ್ಲಿರುವ ರತ್ನಪಕ್ಷಿಯ ಪಂಜರದ ಬಳಿ ನಿಂತಿದ್ದ ಕುಮಾರನನ್ನು ನೋಡುತ್ತ ಸುಕುಮಾರನು ಪ್ರವೇಶಿಸುವನು.)
ಕುಮಾರ:
(ಆನಂದಾಭಿಮಾನಗಳಿಂದ)
ಇಲ್ಲಿ! ಅರಸಿದೆನದನು ಕಡುಜಾಣ್ಮೆಯನು ತೋರಿ.
ರಂಗಮಹಲನು ತೊರೆದು ಅರಸಿಯಂತಃಪುರದ
ಇರ್ಕಡೆಯ ದ್ವಾರಗಳ ತೆರೆದಲ್ಲಿ ಕಾಣದಲೆ
ಒಳನುಸುಗಿ, ಸ್ಪರ್ಣಸಿಂಹಾಸನದಿ ಕುಳ್ಳಿರ್ದು
ಅರಸ ತನ್ನರಸಿಯೊಡನಿನಿವೇಟವಾಡಿರ್ದ
ಪ್ರಣಯದಾಗರದಲ್ಲಿ ಎಸೆದಿರುವ ಹೂವುಗಳ
ಜಸವೆಲ್ಲ ಕಳೆಗುಂದಿ ಅದರ ವಾಸನೆಯೊಂದು
ಮನವನ್ನು ರಮಿಸುತಿರೆ, ಅಲ್ಲಿ ನಿಲ್ಲದೆ ಜಾರಿ
ಸಕಲ ಪಾವನತೆಗೆಂದೆಂದವರು ಕಾಯ್ದಿರಿಸಿ
ದಾಲಯದಿ ಕಾಲಿಟ್ಟೆ. ಒಡನೆ ತಡೆಯಿತು ಬೆಳಕು.
ನವರತ್ನಗಳ ಕೆಚ್ಚಿ ಹೆಚ್ಚಿಸಿದ ಪ್ರಭೆಯಿಂದ
ಸೂಸುತಿಹ ಗದ್ದಿಗೆಯ ಮೇಲೆ ಸೂರ್ಯಾರುಣರು
ಕರಗಿ ಜರುಗಿದ ಬೆಳ್ಳಿಯೊಂದು ಮಾಮರವಾದ
ಶೋಭೆಯಿರೆ ರೆಂಬೆಗಳು ಸೌದಾಮಿನಿಯ ತೆರದಿ
ನುಣ್ಪುವೆತ್ತವು, ಎಲೆಗೆ ಪಚ್ಚೆವರಣವು ಬಂತು.
ನೀಲವರ್ಣದ ಪಕ್ಷಿ ಮರದ ತುದಿಯಲಿ ಕುಳಿತು
ಮನದಿ ಧೇನಿಸುತ್ತಿತ್ತು. ನಾನು ಬಳಿಸಾರುತಿರೆ
ರೆಕ್ಕೆಗಳ ಕದಲಿಸುತ ನಿಮಿಷಮಾತ್ರದಿ ರತ್ನ-
ಮಯವಾಗಿ ಬಣ್ಣವನು ಬದಲಿಸಿತು. ಕನಸಿಗನು
ನೀನದನು ಕಾಣಬೇಕೆಂದೆಣಸಿ ಕರೆತಂದೆ,
ನೋಡದನು; ಇಂದೆಮ್ಮ ಬಯಕೆ ಕೈಗೂಡುವದು!
ಸುಕುಮಾರ:
(ಅತೀವ ವೇದನೆಯಿಂದ)
ಅಯ್ಯೊ! ನಾ ತಿಳಿದಂತೆ ಇಲ್ಲಿ ಬೆಳೆ ಬಂದಿಹುದು.
ರತ್ನ ಪಕ್ಷಿಯು ಮಾಯವಾಗಿ ನೀಲಾಂಬರದಿ
ಇಲ್ಲೆಲ್ಲ ಕನಸು ವಿದ್ರೂಪವನು ತಳೆದಂತೆ
ಪಾರ್ಶ್ವದೃಷ್ಟಿಯ ಮಾತ್ರ ಪ್ರೇರಿಸುವ ನೋಟವಿದು-
ಹಕ್ಕಿಗಿಹ ದೇಹಪಂಜರವೊಂದು-ನಿಂತಿಹುದು.
`ರತ್ನ ಪಕ್ಷಿಯೆ’ ಎಂದು ಅದನು ಕರೆದುದು ನಿಜವು.
ಆದರೆನ್ನಯ ಬಗೆಯ ಸವಿಯನುಂಡಿಹ ಪಕ್ಷಿ
ನೀಲವರ್ಣದ ಪಕ್ಷಿ! ಗಗನಕಿಹ ನೀಲಿಮತೆ
ಅದರ ತಾಯ್ನಾಡಹುದು. ಅದರನಂತತೆಯಲ್ಲಿ
ಮುಳುಗುತೇಳುತ ಸಾಗಿ ಕಾಲಪಥವನು ಮೀರಿ
ಹಕ್ಕಿ ಲೀಲೆಯಲಿಹುದು. ಅದನು ಕಾಂಬುದು ಗೆಳೆಯ!
ಇಲ್ಲಿಹುದು ರತ್ನ ಪಕ್ಷಿಯ ನಾಮರೂಪವದು.
(ವಿಷಣ್ಣ ವದನನಾದ ಸುಕುಮಾರನು ಹಿಂತಿರುಗಿ ಬಂದು ಮಹಾದ್ವಾರದ ಎದುರಿನ ಬಯಲಿನಲ್ಲಿ ನಿಲ್ಲುವನು. ಕುಮಾರನು ಅವನನ್ನು ಸಂದೇಹಮಾನಸನಾಗಿ ಹಿಂಬಾಲಿಸುವನು.)
ಕುಮಾರ:
(ಉದಾಸೀಸನನಾಗಿ)
ಇಲ್ಲಿ ನಮ್ಮಯದಾರಿ ಕೊನೆವುಗುವುದೆಂದಿದ್ದೆ.
ಸಹಿಸೆನೀ ವೇದನೆಯ. ಅಲೆಯುವದು ಸಾಕಿನ್ನು!
ಮಾಯವಾಗಿಹ ಪಕ್ಷಿ ತನ್ನ ಬೀಡಾರವನು
ಬಿಟ್ಟಿಹುದು. ಬಲ್ಲ ವೈಭವವನ್ನು ಭೋಗಿಸುತ
ನಲಿಯುತಿರುವೆನು ಕುರುಹಿಗೆಂದಿಲ್ಲಿ ನೆಲೆಸಿರುವ
ರೂಪವನು ಪೂಜಿಸುತ; ನೀನು ಮುಂದಕೆ ಸಾಗು!
ಕಣ್ಣೆರೆದು ನಾನೊಮ್ಮೆ ಕಂಡಿರುವ ಪಕ್ಷಿಯನು
ನೋಳ್ಪುದಾದರೆ ನೀನು ಈ ಕಾಡು ಜೀವವನು
ಮರೆಯಬೇಡೆಲೆ ಗೆಳೆಯ!
ಸುಕುಮಾರ:
(ಗಂಭೀರನಾಗಿ)
ಅಹುದು; ತೀರದ ದಾರಿ.
ನಿನ್ನುಳಿದು ನಾ ನಡೆವುದೆಂತು? ಇರ್ವರು ಕೂಡಿ
ಇಲ್ಲಿಗೈತಂದಿಹೆವು. ಲಭಿಸೆ ಮೋಕ್ಷವದೊಂದು
ಇರ್ವರಿಗೆ-ಇಲ್ಲದಿರೆ ದಾರಿ ಬಳಲಿಕೆಯೆಮಗೆ.
ನಿನಗೆ ಬೇಸರವೆನಿಸೆ ಕುಳ್ಳಿರ್ದು ಭುಜದಲ್ಲಿ
ಪಯಣವನು ಬೆಳೆಸಯ್ಯ, ಕಾಣುವೆವು ಪಕ್ಷಿಯನು.
(ರತ್ನಪಕ್ಷಿಯು ದೂರ ಆಕಾಶದಲ್ಲಿ ಕಾಣಿಸಿಕೊಳ್ಳುವದು. ಸುಕುಮಾರನು ಅದರ ರೂಪವನ್ನು ನೋಡಿ ಸ್ವರವನ್ನು ಆಲಿಸುವನು.)
ಹಾ ಕಾಣುತಿದೆ ನೋಡು! ಮುಗಿಲೆಡೆಗೆ ಸಂಚರಿಸಿ!
(ಕೈಯಿತ್ತಿ)
ಬಳಲಿರುವ ದಾರಿಗರು ನಾವು, ರಕ್ಷಿಸು ಪಕ್ಷಿ!
ರತ್ನಮಯವಾಗಿನೀ ಕಾಡುಜೀವಗಳನ್ನು!
ಕುಮಾರ:
(ಆತುರತೆಯಿಂದ ಮುಖವನ್ನು ಮೇಲೆತ್ತಿ)
ಎಲ್ಲಿಹುದು? ಎಲ್ಲಿಹುದು? ಹಕ್ಕಿಯಂದದಿ ಹಾರಿ
ಅದರ ಸಾನಿಧ್ಯವನು ಪಡೆಯುವೆನು. ಇಹುದೆಲ್ಲಿ?
ರತ್ನಪಕ್ಷಿ:
[ದೂರ ಮುಗಿಲೊಳಗಿಂದ ಹಾಡುವದು]
“ಪರ್ವಶಶ್ರೇಣಿಗಳ ಶೃಂಗಗಳನೇರಿ
ಸೊಂಪುವಡೆದಿಹ ಬನದ ಮೇರೆಗಳ ಮೀರಿ
ತಾರೆಗಳ ಕಿರುನಗೆಯನಲ್ಲೆಡೆಗೆ ಬೀರಿ
ರತ್ನ ಪಕ್ಷಿಯ ಪಡೆಯ-
ಲೆಂದು ಮನಸಿರಲು
ಕಾಂತಿಮಯವಾಗಿಸಲು
ಒಂದು ಕನಸಿರಲು:
ಹಿಂತಿರುಗುವರೆ ಕಂದ! ನೋಡುವರೆ ಹಿಂದೆ!
ಬಾ ಮುಂದೆ! ಬಾ ಮುಂದೆ! ಬಾ ಮುಂದೆ ಮುಂದೆ!
ಬಾಳಿನಲಿ ಬೀಳಾದ ಭಾವಗಳನುಳಿದು
ಉಜ್ಜ್ವಲೋಜ್ಜ್ವಲಿತವಹ ಜ್ವಾಲೆಗಳ ತಳೆದು
ಅವುಗಳಿಂದಂತ್ಯವಿಲ್ಲದ ಪ್ರಭೆಯ ಬೆಳೆದು
ರತ್ನ ಪಕ್ಷಿಯ ಪಡೆಯ-
ಲೆಂದು ಮನಸಿರಲು,
ಕಾಂತಿಮಯವಾಗಿಸಲು
ಒಂದು ಕನಸಿರಲು:
ಹಿಂತಿರುಗುವರೆ ಕಂದ? ನೋಡುವರೆ ಹಿಂದೆ?
ಬಾ ಮುಂದೆ! ಬಾ ಮುಂದೆ! ಬಾ ಮುಂದೆ ಮುಂದೆ!!
ವಿಶ್ವಜೀವನದೊಳಗೆ ಜೀವವನು ಬೆರಸಿ
ಕ್ಷಣಿಕ ವೈಭವದಾಸೆಗಳನೆಲ್ಲ ಮರಸಿ
ಮುಂದೆ ಬಹ ಚೆಂದದಲಿ ಜೀವಿತವನಿರಿಸಿ
ರತ್ನ ಪಕ್ಷಿಯ ಪಡೆಯ-
ಲೆಂದು ಮನಸಿರಲು
ಕಾಂತಿಮಯವಾಗಿಸಲು
ಒ೦ದು ಕನಸಿರಲು;
ಹಿಂತಿರುಗುವರೆ ಕಂದ? ನೋಡುವರೆ ಹಿಂದೆ?
ಬಾ ಮುಂದೆ! ಬಾ ಮುಂದೆ! ಬಾ ಮುಂದೆ, ಮುಂದೆ!!
[ಪಕ್ಷಿಯು ಮಾಯವಾಗುವದು.]
ಕುಮಾರ:
[ಶಾಂತನಾಗಿ]
ಕೇಳಿದೆಯ ಆ ದಿವ್ಯವಾಣಿಯನು? ನಡೆಯಿನ್ನು.
ದಾರಿ ಕೊನೆವುಗುವನಕ ಜೀವಕಾಸರೆಯೆಲ್ಲಿ?
ಸುಕುಮಾರ:
[ಧೀರೋದಾತ್ತನಾಗಿ]
ಅಹುದು. ತೀರದ ದಾರಿ. ಆದರದರಿನಿದನಿಯು
ಕರೆಯುತಿರೆ ಮು೦ಬರಿಯದಿರುವ ಮಾನವನಿಹನೆ!
ನಡೆ ಮುಂದೆ. ಬಾಳ್ಮೆಯಿದೆ ಮುಂದೆ-ಬಹುಮುಂದೆ!
(ಇರ್ವರೂ ತೀರದ ದಾರಿಯಲ್ಲಿ ಸಾಗುತ್ತ ಮತ್ತೆ ಪಯಣ ಬೆಳೆಸುವರು. ಸಂಧ್ಯಾಕಾಲದ ಕಾಂತಿಯಿಂದ ಉಜ್ವಲವಾಗಿದ್ದ ಗಿರಿಕಂದರಗಳೂ ಅನಂತ ವಿಶ್ವವೂ ಅವರೆದುರು ಕಾಣಿಸಿಕೊಳ್ಳುವವು)
*****
ಡಿಸೆಂಬರ ೧೯೩೧
















