ಮೂಲ: ಸುತಪಾ ಸೇನ್‌ಗುಪ್ತ
ಆಮೇಲೆ ನನ್ನ ನಾದಿನಿ ಮನೆಗೆ ಹೋದೆ,
ಅತ್ತೆ ಮಾವಂದಿರನ್ನು ಒಲಿಸಿ ಮೆಚ್ಚಿಸಿದೆ.
ತೃಪ್ತಿಗೊಂಡ ಹಿರಿಯರು ಸರ್ಪಬಂಧನ ಬಿಚ್ಚಿ
ಮುಕ್ತಳಾಗಿಸಿದರು.
ಆದರೂ ಪೂರ್ತಿ ವಿಷ ಆರಿಲ್ಲ ಈಗಲೂ;
ನನಗೀಗ ಏನನ್ನೂ ಮಾಡಲಾಗುತ್ತಿಲ್ಲ,
ಲೇಖನಿ ಓಡುತ್ತಿಲ್ಲ,
ನಾಲಿಗೆ ಚಾಚಿದೆ ಸರ್ಪ ಲೇಖನಿ ತುದಿಯಲ್ಲೂ
ನೂರು ಸುಖಗಳ ಮಧ್ಯೆ ಮುಳುಗಿರುವ ಹೊತ್ತಲ್ಲೂ
ಮುತ್ತಿ ಕಾಡುತ್ತವೆ ಪಟ್ಟಪಾಡಿನ ನೆನಪು.
ಹಾಗೆಂದೆ ನಾನೀಗ ಎಲ್ಲ ನೋವುಗಳಿಂದ ಪೂರ ಮುಕ್ತಿ.
ಪಟ್ಟ ದುಃಖದ ಬಗ್ಗೆ ಹೆಮ್ಮೆಯಿಂದಿದ್ದೇನೆ,
ಕಟ್ಟಿಕೊಂಡಿರುವೆ ಮತ್ತೆ ನಿಧಾನವಾಗಿ
ನೆಲದ ಸ್ನೇಹಗಳನ್ನ;
ನನ್ನವರ ನಡುವೆಯೇ ಇದ್ದೂ ನಾ ಏಕಾಂಗಿ
ಸ್ವಭಾವದೋಷಗಳಿಂದ,
ಇಷ್ಟಪಟ್ಟಿದ್ದೆಲ್ಲ ದೂರ ಸುರಿಯುತ್ತಿವೆ ದುರದೃಷ್ಟದಿಂದ.
ನೂರು ತಿಂಗಳ ನೋವಿನಾಲೆಯಲ್ಲಿ ನುರಿದು
ಗಾಢ ಕತ್ತಲೆಯ ಮೈದಾಳಿದಂತಿರುವೆ
ನನ್ನ ಇಡಿ ಬಾಳಲ್ಲೆ ಈ ನೋವಿನವಧಿ
ತೀರ, ತೀರ ಅಮೂಲ್ಯ.
*****
















