ದಲಿತಾವತಾರ

ದಲಿತಾವತಾರ

ಆಸ್ಪತ್ರೆ ಸವಾಗಾರ್‍ದಾಗೆ ನಿಂಗಿ ಮಲಗವ್ಳೆ. ಅವಳ್ನ ಕುಯ್ದು ಅದೇನೋ ಪರೀಕ್ಷೆ ಮಾಡಿ ಮತ್ತೆ ಹೊಲಿಗೆ ಹಾಕಿ ಕೊಡ್ತಾರಂತಪ್ಪ. ಅಲ್ಲಿಗಂಟ ಮಣ್ಣು ಮಾಡಂಗಿಲ್ಲ. ಇದನ್ನೆಲ್ಲಾ ಯೋಳಾಕೆ ಹೊಂಟಿರೋದು ನಿನ್ಗೆನಪ್ಪ ನಿನ್ಗೆ. ಮಟಮಟ ಮಧ್ಯಾನದಾಗೆ ಪೊಲೀಸಿನೋರು ಹಳ್ಳಿಲಿಂದ ಸ್ರವಾನ ದಬ್ಬೋ ಗಾಡಿಲಿ ತಂದು ಇಲ್ಲಿ ಹಾಕವರೆ. ಹೆಣ ಕುಯ್ಯೋ ಡಾಕ್ಟರಪ್ಪನೇ ಇಲ್ಲ. ‘ಕರಿಸ್ತೀವಿ ಇರಯ್ಯ’ ಅಮ್ತ ಅತ್ತಾಕಡೆ ಹೋದ ಬಿಳಿ ಬಟ್ಟೆನೊಬ್ಬ ಇಲ್ಲಿಗಂಟ ಪತ್ತಿಲ್ಲ. ಸಂಜೆಯಾಗ್ತಾ ಬತ್ತಾ ಅದೆ. ಕತ್ತಲಾದ ಮ್ಯಾಲೆ ಹೆಣಾವ ಕುಯ್ಯಾಕಿಲ್ವಂತೆ, ಏನಿದ್ರೂ ನಾಳಿಗೆ ಅಮ್ತಾನೆ ಹೆಣದ ಮನೆ ಕಾವಲೋನು. ಹಂಗಾರೆ ನಾನು, ಈ ಮಕ್ಳು ರಾತ್ರೆಲ್ಲಾ ಇರೋದೆಲ್ಲಪ್ಪಾ? ನಿಂಗಿ ಸ್ರವ ಇಲ್ಲೆ ಬುಟ್ಟುಬುಟ್ಟು ನಾವಾರ ಎಲ್ಲೋ ಹೆಂಗೆ ಇರೋದು? ಮಣ್ಣು ಮಾಡಿಬಿಟ್ರೆ ಎದಮ್ಯಾಲೆ ಚಪ್ಪಡಿ ಎಳ್ಕಂಡು ದುಕ್ಕತಡ್ಕೊಬೋದು. ಅಂತಾದ್ರಾಗೆ ಹೆಣಾನ ನಾಳಿಕೆಯಾ ಕುಯ್ಯಾದು ಅಂದ ಮ್ಯಾಲೆ ನಿಂಗಿ ಬುಟ್ಟುಬುಟ್ಟು ರಾತ್ರಿ ಕಳೆಯೋದರಾ ಆದೀತಾ, ಶ್ರವ ಪಕ್ಕದಾಗೆ ಇದ್ದರೆ ಜೀವಕ್ಕೂ ಒಂತರಾ ಇದಲ್ವೆ ನೀನೇ ಯೋಳು. ಆಸ್ಪತ್ರೆನಾಗೆ ಇರೋರ್‍ದ ಯಾರು ಯಾರ್‍ದೋ ಕೈಕಾಲು ಹಿಡ್ದು ಬೇಡ್ಕಂಡೆ. ‘ಒಂದೈನೂರು’ ಇದ್ದರೆ ತೆಗಿ, ಎಲ್ಲಾ ಸೆಟಪ್ಪು ಮಾಡ್ತೀವಿ, ಡಾಕಟ್ರು ಬತ್ತಾನೆ. ಅವನಪ್ಪನೂ ಬತ್ತಾನೆ. ಕಣ್ಣು ಮಿಟುಕಿಸ್ದ ಕಾವಲೋನು. ಐನೂರು ರೂಪಾಯಿ!? ಅದು ಬೇಕಾದಾಗ ಸಿಗಂಗಿದ್ದಿದ್ದರೆ ನಿಂಗಿಗಾರ
ಯಾಕಿಂತ ಗತಿ ಬತ್ತಾ ಇತ್ತು ತಂದೆ?

ನಮ್ಮ ನಿಂಗಿ ಹೆಂಗೆ ಸತ್ಲು ಅಂಬೋದ್ರೂ ನಿನ್ಗೆ ಯೋಳ್ತೀನಿ. ನಿಂತಾವಲ್ದೆ ಇನ್ನು ಯಾರ್‍ತಾವ ಯೋಳಿಕ್ಯಂಬ್ಲಿ. ಆಕೆಗೆ ಯಾವ ಜಡ್ಡೂ ಆಗಿರ್‍ನಿಲ್ಲಪ್ಪ, ವಯಸ್ಸಾದಾಕಿನೂ ಅಲ್ಲ. ಮೂರು ಮಕ್ಕಳ ತಾಯಿಯಾದ್ರೂವೆ ದಿವನಾಗಿದ್ಲು. ಆಸೆ ಪಡಂಗಿದ್ಲು, ಅರೆಹೊಟ್ಟೆ, ಹರ್‍ಕು ಬಟ್ಟೆನಾಗೂ ನಿಂಗಿ ಕಳೆನೇ ಕಳೆ. ಅವಳ್ನ ನೋಡೇ ನಾನು ದುಡಿಯೋ ಕಸವು ದೇಹದಾಗೆ ತುಂಬ್ಕೊಂಡೋನು. ನಾನು ತರೋ ಪಗಾರ ಸಾಲ್ದು ಅಮ್ತ ಸೇರ್ಮನ್ರ ಮನೆಯಾಗೆ ಕಸೆ ಮುಸುರೆಗೋಗಾಳು. ಅದೆಲ್ಲಾ ಬ್ಯಾಡ ಕಣಮ್ಮಿ ಇದ್ದುದ್ರಾಗೇ ಗಂಜಿ ಕುಡ್ದುರಾತು ಅಂತಂದು ಏಟು ಯೋಳಿದ್ರೂ ಕೇಳವಲ್ಲು. ಯಪ್ಪಾ ತಂದೆ ನೀನು ಸುಳ್ಳು ಯೋಳಿದ್ರೂ ಕೇಳ್ತೀಯ ದಿಟ ಯೋಳಿದ್ರೂ ಕೇಳ್ತಿಯಾ, ಆಕಿಗೆ ಹೆಂಗಾರ ದುಡ್ಡು ಹೊಂಚಾಕಿ ಮಕ್ಕಳ್ನ ದೊಡ್ಡದಾಗಿ ಓದಿಸಬೇಕಂಬೋ ಆಸಿ ಬಲಿತ್ತು. ಹೆಣ್ಣ ಮಗೀನೂ ಸಾಲೆಗೆ ಕಳಿಸೋಳು.

ಸೇರ್ಮನ್ರ ಮನೆ ಚಾಕರಿ ಮಾಡಿ ಬಂದ ಮ್ಯಾಲೆ ದನಕರಗಳ ಹಿಂದಾಗಡೆನೇ ಸ್ಮಸಾನದ ತಂಕ ಹೋಗಿ ಸೆಗಣಿ ಎತಂಬಂದು ಬೆರಣಿ ತಟ್ಟೋಳು. ಗುಡ್ಡಕ್ಕೆ ಹೋಗಿ ಹೊರೆ ಸೌದೆ ತರೋಳು. ಹಳ್ಳಿನಾಗೆ ಹಿಟ್ಟಿನ ಮೀಸಿನು ಬಂದ್ರೂ ಬೀಸೋ ಕಲ್ಲಿನಾಗೆ ರಾಗಿ ಬೀಸೋಳು. ಬಿಡಿಗಾಸು ಬಿಟ್ಟೋಳಲ್ಲ. ತಿಂಗಳಿಗೊಂದಪ ಬಾಡುನಾರ ತಂದು ಮನೆಮಂದ್ಯಲ್ಲಾ ಉಂಬಾಸೆ ಕಣಮ್ಮಿ. ಜೀವಂದಾಗೆ ಅದು ಬುಟ್ರೆ ಬ್ಯಾರೆ ಸುಖ ಏನೈತೆ ನಮ್ಗೆ ಅಮ್ತ ಏಟು ಯೋಳಿದ್ರೂ ಒಪ್ತಿರ್‍ನಿಲ್ಲ. ಮಾರಿಹಬ್ಬ ಬರಬೇಕು ಇಲ್ಲೆ ಉಗಾದಿ ಸಂದ್ರ ಮೂಡಬೇಕು. ಬಾಡಿನ ಮಕ ನೋಡ್ಬೇಕು. ಅಪಾಟಿ ವೈನಾಗಿ ಸಂಸಾರ ಮಾಡೋ ಹೆಂಗ್ಸು. ಸೇರ್ಮನ್ರ ಹೆಂಡ್ರು ನಾಗವ್ವ ಕೊಡೋ ಹಳೆ ಸೀರೆ, ರವಿಕೆ ತೊಟ್ಕೊಂಡೇ ಜೀವನ ಪೂರಾ ಕಳ್ದು ಬಿಟ್ಳು ಕಣಯ್ಯ ಪಾಪಿ. ತಂದೇನಾರ ಆಗ್ಲಿ ಸಾಲೆಗೋಗೋ ಮಕ್ಳಿಗೆ ಮಾತ್ರ ಹರಕು ಇಜಾರ ಲಂಗ ಹಾಕಿ ಕಳಿಸ್ದೊಳಲ್ಲ. ನಾನಾಗಿ ಕೊಡಿಸಿದ್ರೆ ಸೀರೆ ಬಟ್ಟೆ, ಒಂದಿನಾನಾರ ಇಂತಾದು ಬೇಕು ಅಮ್ತ ಮಕಮೂತಿ ಸೊಟ್ಟ ಮಾಡ್ಕ್ಯಂಡ ಜೀವಲ್ಲದು. ಎಲ್ಲಾ ಸರಿನೆಯಾ. ಆಕಿ ಸೇರ್ಮನ್ರ ಮನಿಗೋಗಾದೆ ನನ್ಗ ಸರಿ ಬೀಳವಲ್ದು.

ಆವಯ್ಯ ಸೇರ್ಮನ್ನು ನಮ್ಮಂತೋರತಾವ ಎಂದು ನಗ್ತಾ ಮಾತಾಡಿದೋನೇ ಅಲ್ಲ…… ಬೆಂಕಿ ನವಾಬ. ಅಂಥೋನು ಹಾದಿಯಾಗ ನಾನು ಸಿಕ್ಕರೆ ನಗೆಮಾರೆ ಮಾಡ್ಕೊಂಡು ಮಾತಾಡೋನು. ಏನಾರ ತೊಂದರಿದ್ರೆ ಸಾಲ ಕೇಳಲೆ, ಕೊಡೋಮಾ ಅನ್ನೋನು. ನಿನ್ನ ಹೆಂಡ್ರು ದುಡಿದ್ರೆ ನಿಂದು ಒಂದು ಬಾಳು ಕಣ್ಲೆ. ನಿನ್ನ ಜವಾನ ನೋಕರಿನಾಗೆ ಹೆಂಡ್ರು ಮಕ್ಳನ ನೀನು ಸಾಕದಂಗೆ ಐತೆ ಅಂಬೋನು. ನಿಂಗಿ ಅಂದ್ರೆ ನಿಗಿನಿಗಿ ಕೆಂಡಿದ್ದಂಗೆ. ನೀನೇನೆ ಅನ್ನು, ಅವಳಿಗೆ ಲಾಯಕ್ಕಾದ ಗಂಡಲ್ಲ ಬುಡು ನೀನು ಅಮ್ತ ನನ್ನ ಪೀಚು ದೇಹ ನೋಡಿ ಮೀಸೆ ತಿರುವೋನು. ಹಿಂಗೆಯಾ ಸಿಕ್ಕಾಗೆಲ್ಲಾ ನಿಂಗಿ ಸುತ್ತಾನೆ ಮಾತಾಡ್ತಾ ನನ್ನ ಅವಳಿಂದ ದೂರದಾಗಿಟ್ಟೇ ನೋಡೋ ಅವನ ಚಾಳಿ ಬಗ್ಗೆ ಮೈ ಪಾದರಸ ಆಗೋದು. ನಿಂಗಿ ಮಾಡೋ ಒಗೆತನವ ನೋಡಿ ಹಟ್ಟಿ ಅಂಬೋ ಹಟ್ಟಿನೇ ಕೊಂಡಾಡೋವಾಗ ಮನೆಯಾಗೆ ದುಡಿಸ್ಕಂಬೋ ಈವಯ್ಯ ಕೊಂಡಾಡೋದ್ರಾಗೆ ಪೆಷಲ್ ಏನೈತೆ ಅನ್ಕಂಡು ಸುಮ್ನಿರೋವೆ. ಅಲ್ಗೂ ಒಂದೆಲ್ಡು ದಪ ನಿಂಗಿ ಮುಂದೆ ಅವಯ್ಯನ ತಾರೀಪು ಯೋಳ್ದೆ. ‘ಥೂ ಅದರ ದೃಷ್ಟಿನೇ ನೆಟ್ಟಗಿಲ್ಲ. ಕೆಲಸ ಮಾಡತಾವೇ ಅಡ್ಡಾಡ್ತಾ ಇರ್‍ತೇತೆ. ನಮ್ಮನ್ನ ಮುಟ್ಟಿಸ್ಕಂಡ್ರೆ ಮೈ ತೊಳ್ಕಂಬೋ ಜನವಾಗಿ ನನ್ಗೆ ಮೈಕೈ ತಾಗಸ್ಕ್ಯಂಡೇ ಓಡಾಡ್ತೇತೆ. ಹಡಬೆ ನಾಯಿದ್ದಂಗೆ ಅವು. ನಿಂಗಿನೇ ಹಿಂಗ್ ಅಂಬೋವಾಗ ನನ್ಗೆ ಖುಸಿಗಿಂತ ಭಯವೇ ಹೆಚ್ಚಾಗೋದು ಕಣಪ್ಪ. ಏನಂದ್ರೂ ದೊಡ್ಡೋರ ಸವಾಸ. ಬೆಂಕಿತಾವ ಹುಡುಗಾಟ ಸರಿಯಲ್ ಕಣಮ್ಮಿ, ಅವರ ಮನೆಗೆಲ್ಸ ಬುಟ್ಟುಬುಡು ಅಮ್ತ ಇನ್ನಿಲ್ಲದಂಗೆ ಯೋಳಿದ್ರೂ ಕೇಳವಲ್ಲು. ನಾನೇನು ಹುಡ್ಗಿನಾ? ಮೂರು ಮಕ್ಳ ತಾಯಿ. ನನ್ ತಗಂಡೇನ್ ಮಾಡ್ಯಾನೋ? ಐಲೆ ಸುಮ್ಗಿರು ಅನ್ನೋಳು. ಅವನ ಹೆಂಡ್ರು ಬೆಳ್ಳಗೆ ಸುಣ್ಣದ ಗೋಡೆ ಇದ್ದಂಗವ್ಳೆ. ಹಂಗೆ ಆಕಿ ಗುಣ ಚಲೋದು, ಕೈ ದೊಡ್ಡದು. ಕೆಲಸ ಮಾಡಿಸ್ಕ್ಯಂಡು ಒಂದಿನಾನಾರ ಬರಿ ಕೈನಾಗೆ ಕಳಿಸ್ದೋಳಲ್ಲ ನನ್ಗೆ. ಹಿಂಗೆಲ್ಲಾ ಸಮಾಧಾನ ಹೇಳೋಳು ಕಣಪ್ಪ. ಈಗಿನ ಕಾಲ್ದಾಗೆ ಇಬ್ಬರು ದುಡಿದ್ರೆ ಸಂಸಾರವಂತೆ, ಕೇಳಿಲ್ವ ನೀನು. ದೊಡ್ಡ ದೊಡ್ಡ ನೋಕರಿದಾರ್ರೆ ಹೆಂಡ್ರನ್ನ ದುಡಿಯಾಕೆ ಬಿಡ್ತಾರೆ. ನೀನೋ ಈಸ್ಕೂಲು ಜವಾನ. ನೀನ್ ತರೋ ದುಗ್ಗಾಣ್ಯಾಗೆ ಐದು ಜನ ಹೊಟ್ಟೆ ತುಂಬೀತಾ? ಮಕ್ಳು ಓದಿಗೆ ಕಾಸು ಬ್ಯಾಡ್ವಾ? ನಿಂಗಿ ನನ್ಗೇ ಕೊಚ್ಚನ್ ಮಾಡೋಳು. ಸೇರ್ಮನ್ರ ಮನೆಯಾಗೆ ಹಬ್ಬ ಹುಣ್ಮೆ ಆತೋ, ಭಾಳ ಕೆಲ್ಸ ಅಮ್ತ ಗಂಗಿನೂ ಜತೆಯಾಗೆ ಕರ್‍ಕೊಂಡೋಗೋಳು. ಹದಿನಾಕು ವರ್ಷದ ಗಂಗಿ ಮೈಕೈನಾಗೆ ರಸ ತುಂಬ್ಕೊಂಡು ದೊಡ್ಡ ಹೆಂಗಸಿನಂಗೆ ಕಾಂಬೋಳಪ್ಪ. ಎಲ್ಲ ಥೇಟ್ ಅವಳವ್ವನಂಗೆಯಾ ತಿದ್ದಿದ ಗೊಂಬಿ. ಹೈಸ್ಕೂಲ್ನಾಗೆ ಓದು ಮಗ್ಳು ‘ನಿಮ್ಮ ಹುಡ್ಗಿ ಭಾರಿ ಹುಸಾರಿ ಕಣೋ ಅಸ್ರ….. ಎಸೇಜಲ್ಸಿ ಒಂದೇಟ್ಗೆ ಪ್ಯಾಸ್ ಮಾಡ್ತಾಳೆ ನೋಡು’ ಅಂಬೋರು ಮೇಷ್ಟ್ರು ಸಾಂಬಸಿವಯ್ಯ. ಒಟ್ನಾಗೆ ಹಿಟ್ಟೋ ಸೊಪ್ಪೋ ತಿನ್ಕಂಡು ಚಿಂತಿಲ್ಲದಂಗೆ ಇದ್ವಿ. ಇಧಿ ದ್ಯಾವತೆ ಬಿಡಬೇಕಲ್ಲಪ್ಪ.
* * *

ಸೇರ್ಮೆನ್ರ ಮಗ ಈರಭದ್ರ ನಮ್ಮ ಗಂಗಿ ಹಿಂದೆ ಬಿದ್ದವ್ನೆ ಅಂತಂದು ಒಂದಿನ ಗಂಗಿನೇ ಅತ್ಕಂತ ಬಂದು ಯೋಳಿದ್ಳು. ಅವನು ಅವಳೆ ಸ್ಕೂಲ್ನಾಗೆ ಓದು ಹುಡ್ಗ, ಮೋಪಾಗಿದ್ದ. ದುಡ್ಡಿನ ಮದ ಬ್ಯಾರೆ. ಹಳ್ಳಿನಾಗೆ ಮೊದ್ಲು ಬೈಕು ತಗಂಬಂದು ಓಡಿಸ್ದೋನು ಅವನೆಯಾ. ಮನೆಯಾಗೆ ಒಂದು ಹಳೆ ಮೋಟಾರು ಇತ್ತು. ಗಂಗಿ ಅವನ ವಿಸ್ಯ ಯೋಳ್ದಾಗ ಏನು ಮಾಡ್ಬೇಕಂತ್ಲೆ ತೋಚ್ನಿಲ್ಲ. ‘ನಿನ್ ಬುದ್ಧಿ ನೆಟ್‌ಗಿದ್ರೆ ಯಾವನೇನು ಮಾಡ್ತಾನ್ಲೆ ಸುಮ್ಗಿರು’ ನಿಂಗಿ ರಾಂಗ್ ಮಾಡಿದ್ಲು. ಆದ್ರೆ ಆ ಹುಡ್ಗಿ ನಾನು ಓದಾಕಿಲ್ಲ, ಸಾಕು, ಸ್ಯಾಲೆ ಸವಾಸ್ವೆ ಬ್ಯಾಡ ಅಮ್ತ ಹಠಕ್ಕೆ ಇಳೀತು ಕಣಪ್ಪ. ಎಲ್ಡು ದಿನ ಹೋಗ್ನೇ ಇಲ್ಲ. ನಾವೆಲ್ಲಾ ಬಂದು ನಿಮ್ಮ ಮಾಸ್ತರ್‍ಗೆ ಯೋಳ್ತೀನಿ ಕಣ್ಲೆ ಅಂತಂದು ಕ್ವಾಪ ಮಾಡ್ಕ್ಯಂಡ ಮ್ಯಾಲೆ ಅರೆಮನಸ್ಸಿನಿಂದ್ಲೆ ಸ್ಕೂಲು ಕಡೆ ಹೊಂಡ್ತು. ಮೊದಲೆಲ್ಲ ತಲೆಪಲೆ ಬಾಚ್ಕೊಂಡು, ಟೇಪು ಹಾಕ್ಕಂಡು, ಒಳ್ಳೆ ಲಂಗ ತೊಟ್ಕೊಂಡು, ಟೇಪು ಹಾಕ್ಕಂಡು, ಚಿಗರೆ ಮರಿಯಂಗೆ ಹೋಗೋದಪ್ಪ; ಇತ್ತಿತ್ಲಾಗೆ ಹೆಂಗಂದ್ರೆ ಹಂಗೆ ಹೊಂಟು ಹೋಗೋಳು.

ಆವತ್ತು ಮಧ್ಯಾನ್ವೆ ಮೇಷ್ಟ್ರು ಸಾಂಬಸಿವಯ್ಯನ್ನ ಕಂಡೆ, ಹಿಂಗಿಂಗೆ ಈ ತರಕ್ಕೆ, ಈ ತರಾ, ನೀವೇ ಕಾಪಡಬೇಕ್ರಾ ಅಮ್ತ ಅಡ್‌ಬಿದ್ದೆ. ಅವರು ಭಾಳ ಹೊತ್ತು ಸುಮ್ಗೆ ಮಾತಾಡ್ದಂಗೆ ಕುಂತಿದ್ದರು. “ಇಲ್ಲಿ ಬುಡಯ್ಯ ಹುಡ್ರು ನೋಡು, ವಯಸ್ಸಿನಾಗ ಇದೆಲ್ಲಾ ಇದ್ದುದ್ದೆ. ನಾನು ಒಂದು ಕಣ್ ಮಡಗಿದ್ದೀನಿ ಹೋಗು” ಅಂತಂದು ಧೈರ್ಯ ತುಂಬಿದರು. ಮನ್ಸಿಗೂ ನಿರಾಳಾತು. ಆದ್ರೇ ನಾತಪಾ ಗಂಗಿ ಮೊದ್ಲಿನಂಗೆ ಸೂಟಿ ಆಗ್ಲಿಲ್ಲ. ಓದೋದರ ಕಡೆಗೂ ನಿಗಾ ಇಡ್ಲಿಲ್ಲ. ಆ ಹುಡ್ಗ ಈರಭದ್ರ ಅವಳಿಗೆ ಅದೇನು ಅಂಬೋನೋ ಅದೇನು ಆಡೋನೋ ನನಗಂತೂ ತಿಳೀವಲ್ದು. ‘ಈಗೇನು ಅವನು ನಿನ್ನ ತಂಟೆ ಬರಾಕಿಲ್ಲ ಅಲ್ವೇನ್ಲೆಲೆ?’ ಕೇಳಿದ್ದೆ. ‘ಇಲ್ಲ’ ಅನ್ನೋ ತರ್‍ದಾಗೆ ತಲೆ ಆಡ್ಸೋಳು. ಮಾರಿ ಹಬ್ಬ ಬಂದು ಹೋಗತಂಕ ಅಂತಾದೇನು ನಡೀಲಿಲ್ಲ. ಮಾರಿ ಹಬ್ಬ ಆಗಿ ಎಲ್ಡು ದಿನ ಆಗಿತ್ತು. ಸ್ಯಾಲೆ ಬಿಟ್ಟು, ಏಟು ಹೊತ್ತಾದ್ರೂ ಗಂಗಿ ಮನಿಗೆ ಬರ್‍ಲಿಲ್ಲ. ನಿಂಗಿ ಬಂಡ್ಕೊಂಡ್ಲು. ಎದ್ದು ಸ್ಕಾಲೆತಾವ್ಕೆ ಹೋದೆ. ಸ್ಯಾಲೆ ಕಾಣದೋಟು ಕತ್ತಲಾಗ್ತಾ ಬಂದಿತ್ತು. ಎದೆ ಜಲ್ ಅಂತು. ಅಲ್ಲಿ ಯಾರವರೆ ಕೇಳಾಕೆ? ಮನಿ ಕಡೆ ಬರೋವಾಗ ಅವಳ ಗೆಣಕಾತಿ ರತ್ನಿ ಮನೆತಾವ ಹೋಗಿ ಈಚಾರಿಸ್ದೆ. ಈಸ್ಕೂಲು ಬಿಟ್ ತತ್‌ಕ್ಷಣ ಹೋದ್ಲಣ್ಣ. ಇನ್ನೂ ಬಂದಿಲ್ವೆ? ಆ ಹುಡ್ಗಿ ನನ್ನೇ ಕೇಳ್ತು. ಯಾಕೋ ಬಾಯೆಲ್ಲಾ ವಿಸವಿಸ ಆತು.

ಉಂಬೋ ವತ್ತಾದ್ರೂವೆ ಗಂಗಿ ಬರ್‍ನಿಲ್ಲ, ರಾತ್ರಿ ಆದಂಗೆಲ್ಲಾ ತಾಯಿ ಜೀವ ಹೊಯ್ದಾಡಕೆ ಹತ್ತಿತು. ‘ಸೇರ್ಮೆನ್ರ ಮಗ್ನೆ ಏನಾರ ಮಾಡಿದ್ನೋ ಏನ ಕತಿಯೋ. ಅವರ ಮಂತಾವಾರ ಹೋಗಿ ಕೇಳಾನ ನಡಿ’ ಅಂತಂದು ಅತ್ಲು ನಿಂಗಿ. ಕಟುಕರತಾವ ಬಸವಪುರಾಣ
ಯೋಳ್ದಂಗಾಯ್ತದೆ, ಬೇಡ ಕಣಮ್ಮಿ ಅಂದೆ. ಕೇಳ್ನಿಲ್ಲ. ಹುಡುಗ ಮನೆನಾಗಾರ ಅವ್ನೋ ಇಲ್ಲೋ ತಿಳಿದಂಗಾಯ್ತದೆ, ಬಾರ್‍ಲಾಮೂಳ ಅಮ್ತ ಒಂದೇ ವರಾತ ಮಾಡಿದ್ಲು. ಸೇರ್ಮನ್ರ ಮನೆ ತಾವೇ ಕರ್‍ಕೋಂಡು ಹೊಂಟೆ. ಅಲ್ಲ ಕಣಮ್ಮಿ, ಈ ವಿಸ್ಯ ಸೇರ್ಮನ್ರ ಮನೆ ಆಳುಕಾಳುಗುಳ್ಗೆ ಗೊತ್ತಾದ್ರೆ ನಾಳೆ ವತಾರ್‍ಗೆಲ್ಲಾ ಊರು ತುಂಬಾ ಸುದ್ದಿ ಟಾಂ ಟಾಂ ಆಯ್ತದೆ ಅಂದೆ. ನನ್ನ ಮಾತು ಕೇಳದೋಳಂಗೆ ದುಡುದುಡು ಹೊಂಟ್ಳು ಕಣಪ್ಪ.

ಬಾಗಿಲು ತೆಗೆದೋನೆ ಈರಭದ್ರ! ಏನು ಬಂದ್ರಿ ಅಂದ, ಅಪ್ಪಯ್ಯನ ಕರಿಲಾ ಅಂದ. ‘ಅಪ್ಪಯ್ಯ’ ಅಮ್ತ ಕೂಗ್ತಾ ಒಳಗೊಂಟೋದ. ನನಗೋ ಗಂಟಲ್ದಾಗೆ ನೆಗ್ಗಿಲು ಮುಳ್ಳು ನೆಟ್ಕಂಡಂಗಾತು. ಹಿಂದಾಗಡನೆ ಸೇರ್ಮನ್ರೂ ಬಂದರು. ‘ಏನಯ್ಯ ಬಂದಿ ಹೆಂಡ್ತಿ ಹಿಂದಿಟ್ಕೊಂಡು?’ ತಮಾಸೆ ಮಾಡಿ ನಕ್ಕು ಸಿಗರೇಟು ಹೊಗೆ ಬುಟ್ಟ. ‘ಒಂದು ಐನೂರು ರೂಪಾಯಿ ಬೇಕಿತ್ತು ಕಣ್ರಾ?’ ತಟ್ಟಂತೆ ಕೇಳಿಬಿಟ್ಟೆ ಕಣಪ್ಪ. ‘ಅಯ್ಯೋ ಮಂಗ ನನ್ಮಗ್ನೆ, ನಿಂಗಿನೇ ಕಳಿಸಿದ್ರೆ ಇಲ್ಲ ಅಂತಿದ್ನೆ. ಅದ್ಕೆ ಈಟು ಹೊತ್ನಾಗೆ ಇಬ್ಬರೂ ಬರೋದಾ’ ಹುಳ್ಳಗೆ ಮೀಸೆನಾಗೆ ನಕ್ಕ ಬೆಕ್ಕಿನಂಗೆ. ‘ಬೆಳಿಗ್ಗೆ ನಿಂಗಿ ಬತ್ತಾಳಲ್ಲ ಆವಾಗ ಕೊಡ್ತಿನೇಳು, ಈಗ ಹೋಗಿ’ ಅಂದು ಒಳಗೊಂಟೋದ. ಒಳಬಾಗಿಲ್ದಾಗೆ ನಾಗವ್ವ ನಿಂತಿದ್ದು ಕಾಣ್ತು ಕಾಲು ಎಳ್ಕೊಂಡು ಮನಿಗೆ ಬಂದ್ವು. ಚಳಿನಾಗೂ ಮೈನಾಗೆಲ್ಲಾ ಬೆವರು ಕಿತ್ಕೊಂಡಿತ್ತು. ಹಂಗಾರೆ ಗಂಗಿ ಎಲ್ಲಿಗೋದ್ಲು ? ನಿಂಗಿ ಒಬ್ಬಳೇ ಮಾತಾಡ್ಕ್ಯಂಡು ಅತ್ತಿದ್ದು ಅತ್ತಿದ್ದೆ. ರಂಡೆ ಕೈಗೆ ಸಿಗ್ಲಿಸೀಳಿ ಬಿಡ್ತಿವ್ನಿ. ಮನದಾಗೆ ಕೂತಕೊತ ಕುದ್ದು ಹೋದೆ. ದಾರಿನಾಗೇನೆ ಸಾಂಬಸಿವಯ್ಯ ಮೇಷ್ಟ್ರು ಮನೆ. ಬಾಗಿಲು ತಟ್ದೆ. ಅವರ್‍ಗೆ ವಿಸ್ಯ ಕಿವಿಗಾಕ್ದೆ. ಅದುವರ್‍ಗೆ ಎಲ್ಲಿತ್ತೋ ಅಳು ಹಂಗೆ ಕಟ್ಟೆ ಹೊಡ್ಕೊಂಡು ಬಂತು. ಗೊಳೋ ಅಂತ ಅತ್ತು ಬುಟ್ಟೆ. ಆತಂಗೂ ದಿಗಿಲಾಗಿತ್ತು. ‘ಈಗಿನ ಕಾಲ್ದ ಹುಡುಗರು ಹಿಂಗೆ ಅಂತ ಯೋಳಾಕೆ ಬರಂಗಿಲ್ಲ ಕಣ್ ಅಸ್ರ. ಎಲ್ಲಿಗಾನ ಓಡೋದ್ರಾ?’ ಅಂದ ಆವಯ್ಯ, ‘ಈರಭದ್ರ ಮನೆಯಾಗೇ ಅವ್ನೆ ಕಣ್ ಅಯ್ನೋರಾ’ ಮುಸುಮುಸು ಅತ್ಲು ನಿಂಗಿ. ‘ಈಸ್ಕೂಲ್ನಾಗೆ ಏನಾರ ಗಲಾಟೆ ಆತೇನ್ರಪಾ?’ ತಡಿಲಾರ್ದೆ ಕೇಳ್ದೆ. ‘ಹಂಗೇನು ನಡಿಲಿಲ್ವೆ….. ದೇವರವ್ನೆ, ಹೋಗಿ’ ಅಂತಂದು ಆವಯ್ಯ ಬಾಗಿಲು ಹಾಕ್ಕಂತು. ದೇವ್ರೆ, ನೀನೇ ನನ್ನ ಮಗೀನ ಕಾಪಾಡು ಅಮ್ತ ಆಳ್ತಾ ಕರಿತಾ ರಾತ್ರಿ ಕಳೆದ್ವು. ಬೆಳಗಾತು ಸ್ಯಾಲೆ ಟೇಮಾತು ನಿಂಗಿ ಬರ್‍ನಿಲ್ಲ. ಆಗ್ಲೆ ಹಳ್ಳಿ ತುಂಬಾ ಗುಸಗುಸ ಎದ್ದಿತ್ತಪ್ಪ, ಒಂದಿಬ್ಬರು. ‘ಎಲ್ಲಯ್ಯ ಗಂಗಿ ರಾತ್ರೆಲ್ಲಾ ಮನೀಗೆ ಬಂದಿಲ್ವಂತೆ?’ ಕೇಳಿದರು. ನಾನೇನ್ ಯೋಳ್ಳಿ, ದುಕ್ಕ ತಡೀದೆ ಅತ್ತೆ. ಆವಾಗ್ಲೆ ಗಿಡ್ಡ ತಿಮ್ಮಯ್ಯನ ಮಗ ಸಣ್ಣೀರ ಬಂದು ಯೋಳಿದ ಮಾತು ಕೇಳಿದ ಮ್ಯಾಲಂತೂ ಕರೆಂಟ್ ಹೊಡ್ದಾಂಗಾತಪ್ಪ – ‘ಗಂಗಿನಾ ಸಂಜೆ ದುಗ್ಗಿ ಕೆರೆತಾವ ನೋಡ್ದೆ ಕಣ್ರಿ. ಆಕಿ ಜತೆನಾಗೆ ಈರಭದ್ರ, ಅವನ ಫ್ರೆಂಡ್ಸು ಇದ್ದರು. ನನ್ನ ನೋಡಿ ಗದರಿಕ್ಯಂಡ್ರು. ಪೋಲಿ ನನ್ಮಕ್ಳನಾ ರುತಾ ಯಾಕೆ ಎದುರು ಹಾಕ್ಕಂಬೋದು ಅಂತ ಸುಮ್ಗೆ ಬಂದುಬಿಟ್ಟೆ ಅಸ್ರಣ್ಣ’ ಅಂದ. ‘ಸುಳ್ಳು ಬೊಗಳ ಬ್ಯಾಡ್ಲೆ….. ದೊಡ್ಡೋರ ಮಕ್ಳ ವಿಸ್ಯ ಐತೆ’ ಗಿಡ್ಡ ತಿಮ್ಮಯ್ಯ ಗದರಿಕ್ಯಂಡ ಮಗನ ಮ್ಯಾಲೆ. ‘ಪಟ್ಟಣಕ್ಕೆ ಹೋಗಿ ಪೋಲಿಸ್ಗಾರ ಕಂಪ್ಲೇಂಟ್ ಕೊಡಮಾ ನಡಿಯೋ’ ಅಂದ ಗಿಡ್ಡತಿಮ್ಮ. ಏನಂತ ಕೊಡೋದು? ತಲಿ ಕೆಡಿಸ್ಕ್ಯಂಡು ಬಸ್ಸು ಹಿಡಿಯಾಕೆ ಹೊಂಟಾಗ್ಲೆ ಅಗಸರ ರುದ್ರವ್ವ ಬಂದು ಯೋಳಿದ ವಿಸ್ಯ ಕೇಳತ್ಲು ಎದೆ ಒಡ್ದೋತು. ಎದ್ವೋ ಬಿದ್ವೋ ಅಮ್ತ ಹಟ್ಟಿ ಜನ ಒಂದಾಗಿ ದುಗ್ಗಿ ಕೆರೆತಾವ್ಕೆ ಓಡಿದ್ವಿ.

ಅದೇ ಹಸುರು ಲಂಗ, ಚುಕ್ಕೆ ಚುಕ್ಕೆ ಕುಬಸ ಅವಳೆಯಾ ಅವ್ಳೆ…… ಅನುಮಾನ್ವೆ ಇಲ್ಲ ಕಣಪ್ಪ. ನಿಂಗಿ ಎದೆ ಎದೆ ಬಡ್ಕೊಂಡ್ಳು. ‘ಯಕ್ಕಾ ಯಕ್ಕಾ’ ಅಂತ ಮಕ್ಳು ಶುರು ಹಚ್ಚಂಡ್ವು. ‘ನಂ ತಾಯಿ ಸತ್ಯವಾಗ್ಲೂ ಈರಭದ್ರ ಅವನ ಫ್ರೆಂಡ್ಸಿದೇ ಈ ಕೆಲ್ಸ’ ಸಣ್ಣೀರ ರಾಂಗ್ ಆದ. ಹಲ್ಲು ಹಲ್ಲು ಕಡ್ದ. ನಾನೂ ನೀರಿಗೆ ಹಾರೋಕೆ ಹೋದೆ. ಮಂದಿ ಬಿಡ್ನಿಲ್ಲ. ಜನಕ್ಕೆ ಜನ ಸೇರ್‍ತು ಪೊಲೀಸಿನೋರು ಬರೋಗಂಟ ಹಣ ತೆಗಿಯಾಂಗಿಲ್ಲ ಅಮ್ತ ಅವರವರೆ ಮಾತಾಡಿದರು. ನಮ್ಮ ದುಕ್ಕ ಸಂಗ್ಟ ಕೇಳೋರೇ ಇರ್‍ನಿಲ್ಲ. ಗಂಗಿ ಗೆಣಕಾತಿ ಮಾಲಿಂಗಿ ಈಗ ಬಾಯಿ ಬಿಟ್ಲು ಕಣಪ್ಪ. ‘ಸಂಜೆ ಸ್ಯಾಲೆ ಬಿಟ್ಟೇಟ್ಗೆ ನಾನು, ಗಂಗವ್ವ ಬತ್ತಾ ಇದ್ವಿ ಕಣ್ ಚಿಗಪ್ಪ, ಕೆರೆ ಏರಿಮ್ಯಾಲೆ ಬರೋವಾಗ ಈರಭದ್ರ, ಅವನ ಗೆಳೇರು ಅಡ್ಡಗಟ್ಟಿ ಗಂಗೀನ ನಿಲ್ಲಿಸಿಕ್ಯಂಡ್ರು. ನೀನು ಹೊಂಟೋಗೆಲೆ ಅಮ್ತ ಹೆದರಿಸಿದ್ರು, ಓಡಿ ಬಂದೆ’ ಮಾಲಿಂಗಿ ಬುಳುಬುಳು ಅತ್ಲು. ಅವಳ ಮಾತಿಗೆ ಒಬ್ಬರೂ ದನಿ ಎತ್ತಲಿಲ್ಲ. ಯಾರೂ ಕೇಳಿಸ್ಕ್ಯಂಡೇ ಇಲ್ಲವೇನೋ ಅಂಬಂಗೆ ಸುಮ್ಗಿದ್ದು ಬಿಟ್ಟರು.

ಸುದ್ದಿ ತಿಳಿದ ಸೇರ್ಮನ್ನು ಮೋಟಾರ್‍ನಾಗೆ ಬಂದು ಇಳ್ದ. ‘ಸಿವ್ನೆ! ಯಾಕಿಂಗೆ ಮಾಡ್ದೋ ಸಂಭುಲಿಂಗ?’ ಅಮ್ತ ಆಕಾಶ ನೋಡ್ದ. ಆಮ್ಯಾಲೆ ನನ್ನ ಕಡೀಕೆ ತಿರುಗ್ದ. ‘ಅಳಬ್ಯಾಡ, ಸುಮ್ಗಿರ್‍ಲೆ ಅಸ್ರ. ಅತ್ತರೆ ಸತ್ತೋದೋಳು ಎದ್ ಬತ್ತಾಳೇನು?’ ಜೋರಾಗಿ ಗದರಿಕ್ಯಂಡ. ‘ಬುದ್ದಿಯೋರಾ, ತಮ್ಮ ಹುಡ್ಗ ನಮ್ಮ ಮಗೀನಾ…..’ ಹೇಳೋಕೆ ಹೊಂಟ ನಿಂಗಿಗೂ
ಗಕ್ಕನೆ ಜಬರಿಸ್ದ. ಸುಟ್ಟು ಬಿಡೋನಂಗೆ ದುರುಗುಟ್ಕಂಡು ನೋಡ್ದ. ಈಗ ಶ್ಯಾನುಭೋಗ ಕಿಟ್ಟಪ್ಪ, ಸೇರ್ಮನ್ನು ಮಕಮಕ ನೋಡಿಕ್ಯಂಡು ಮುಸಿಮುಸಿ ನಕ್ಕರು. ‘ಸ್ವಾಮಿ ವಯಸ್ಸಿಗೆ ಬಂದ ಹುಡ್ಗೇರು ಯಾಕೆ ಸಾಯ್ತಾರೇಳಿ?’ ಕೇಳ್ದ ಶ್ಯಾನುಭೋಗ. ‘ಯಾವನ್ನಾ ಪ್ರೀತ್ಸಿ ಅವನು ಕೈಕೊಟ್ರೆ ಕೆರೆಗೆ ಹಾರ್‍ಕಂತಾರೆ ಇಲ್ಲ, ಕದ್ದು ಬಸರಾಗಿರ್‍ತಾರೆ’ ಉತ್ತರಾನೂ ಅವನೇ ಹೇಳ್ದ. ಎಲ್ಲರು ನಗಾಡೋರೆಯಾ. ಬಾದ್ಮಾಸ್ ನನ್ಮಕ್ಳ ನಾಲ್ಗೆಯಾ ಸೀಳಿ ಬಿಡೋವೋಟು ಸಿಟ್ಟು ನೆತ್ತಿಗೇರ್‍ತು. ನಮ್ಮ ಹಟ್ಟಿ ಜನ ಯಾರೂ ಮುಂದಕ್ಕೆ ಬರವಲ್ಲರು ಸೇರ್ಮನ್ರು ಬಂದ ಮ್ಯಾಗೆ ಕೆರೆ ಏರಿಯಿಂದ ಆಚೆ ಕಡಿಗೆ ಹೋಗಿ ನಿಂತ್ಕಂಡ್ರು. ‘ಅಸ್ರ, ಆದ್ದಾತು, ಯೋಚ್ನೆ ಮಾಡಬ್ಯಾಡ ಕಣ್ಲ. ನಿಮ್ಮ ಕುಲದಾಗೆ ಇದೆಲ್ಲಾ ಕಾಮನ್ನು. ಮುಂದೆ ಆಗೋ ಕೆಲ್ಸ ಭಾಳ ಐತೆ. ಅದರ ಭಾರ ನನಗಿರ್‍ಲಿ ಏನಾರ ಚೀಟಿಗೀಟಿ ಬರೆದಿಟ್ಟು ಸತ್ತಾಳೇನೋ ನೋಡ್ಲಾ’ ಅಂದ ಸೇರ್ಮನ್ನು. ತಲೆ ಅಲ್ಲಾಡಿಸ್ದೆ. ‘ನನ್ನ ಮಗಳು ಅಂತಾಕೆಲ್ಲ ದೇವ್ರು. ಇದರ ಹಿಂದಾಗಡೆ ಏನೋ ಮಸಲತ್ ಐತೆ!’ ಅಂದೆ. ‘ಏನಿರ್ತತಲೆ ಬೋಸುಡ್ಕೆ, ಬಾಯಿಮುಚ್ಕಂಡು ಬಿದ್ದಿರು. ಪೊಲೀಸು ಕೇಸು ಅಮ್ತ ಹೋದ್ಯೊ ಎಕ್ಕುಟ್ಟಿ ಹೋಯ್ತಿ ಮಗ್ನೆ’ ಅಮ್ತ ಅಂಗಾರಾದ. ನನ್ನ ತೊಳ್ಳೆ ನಡಗ್ತು. ಏಟೇ ಆದ್ರೂ ಸಣ್ಣೀರ ಪೇಟೆನಾಗೆ ಓದಿ ಬಂದೋನಲ್ವ, ಎಲ್ಲರಿಗಿಂತ ಮುಂದೆ ಬಂದು ನಿತ್ಕಂಡ. ‘ಹೆಣ ಕುಯ್ದು ಪರೀಕ್ಷೆ ಮಾಡಿದ್ರೆ ಎಲ್ಲಾ ಗೊತ್ತಾಗ್ತತೆ ಸಾ’ ಅಂದ. ಅವನಾಡಿದ ಮಾತಿಗೆ ಸೇರ್ಮನ್ರು ಮಾತಾಡ್ನಿಲ್ಲ. ಅವರ ಉರಿಗಣ್ಣೆ ಮಾತಾಡಿದವು. ‘ಬರ್‍ಲೇಳ್ಳಾ ಪೊಲೀಸು’ ನಕ್ಕ ಶ್ಯಾನುಭೋಗಪ್ಪ.

ಪೊಲೀಸು ಬಂತು. ಮಹಜರ್ರೂ ಆತು. ಸೇರ್ಮನ್ರ ಮೋಟಾರ ಡಿಕ್ಕಿನಾಗೆ ಹಾಕ್ಕಂಡೋತು. ಎಂದೂ ಕುಂದರ್‍ದ ನಾನು ನನ್ನ ಹೆಂಡ್ತಿ ಮಕ್ಳಿಗೀಗ ಮೋಟಾರಿನಾಗೆ ಹೋಗಾ ಯೋಗ ಬಂತು ನೋಡಪ್ಪ. ಆಮೇಲೆ ಆಸ್ಪತ್ರೆ ನೋರು ಹೆಣ ಕುಯ್ದು ಬಟ್ಟೆನಾಗೆ ಮುದುರಿ ಕೊಟ್ಟರು. ಹಳ್ಳಿನಾಗೆ ತರಂಗಿಲ್ಲ ಅಂದರು ಮಂದಿ. ಹಳ್ಳಿಯಿಂದಾಚ್ಗೆ ಇರೋ ಸ್ಮಸಾನದಾಗೆ ಸುಟ್ಟು ಬಿಡ್ರಲೆ ಅಂತ ಆಲ್ಡರ್ ಮಾಡ್ದ ಅದೇ ಸೇರ್ಮನ್ನು. ‘ಸುಡೋದು ಬ್ಯಾಡ ಕಣ್ಲಾ. ಹೂಳಾಕೋದು ನಮ್ಮ ರಿವಾಜು’ ಗಟ್ನಿ ಹಾಕ್ದ ಸಣ್ಣೀರ. ‘ಚೋದಿ ಮಕ್ಳಾ, ಗಬ್ ನಾರ್ತಾ ಐತೆ, ಹೂತರೇನು ಸುಟ್ಟರೇನ್ರಲೆ….. ಸುಟ್ಟಾಕಿ ಅತ್ತ. ಮಗಿನ ಪಿಂಡ ಒಳಗಿರೋಳನ್ನ ಹೂತ್ರೆ ಮಳೆಬೆಳೆ ಆಗಾಕಿಲ್ಲ. ಮಕಾಡೇ ಹಾಕಿ ಮಣ್ಣು ಮಾಡಿ’ ಸೇರ್ಮನ್ನಂದು ಒಂದೇ ವರಾತ. ಹಂಗೆ ಮಾಡಿದ್ವಿ ಕಣಪ್ಪ. ಆಮೇಲೆ ಏನೂ ನಡ್ಲೇ ಇಲ್ಲ ಅಂಬಗಿದ್ದಬಿಟ್ಟರು ಎಲ್ಲಾ. ಆದರೆ ಸಣ್ಣೀರ ಸುಮ್ಗಿರ್‍ನಿಲ್ಲ. ಆಸ್ಪತ್ರೆ, ಟೇಸನ್ನು ಅಂತ ಅಲ್ದು ಸುದ್ದಿ ತಂದ. ಸ್ರವ ಕುಯ್ದು ಪರೀಕ್ಸೆ ಮಾಡಿದ ಮ್ಯಾಲೆ ‘ಎಲ್ಡು – ಮೂರು ಜನ ಬಲಾತ್ಕಾರ ಮಾಡವರೆ ಕಣ್ ಅಸ್ರಣ್ಣ. ಜೀವ ಹೋದ ಮ್ಯಾಗೇ ಕೆರೆಗೆ ಎಸೆದವರೆ. ನೀರ್‍ನಾಗೆ ಬಿದ್ದು ಜೀವ ಕಳ್ಳಂಡಿಲ್ಲ ಆಕಿ. ರಿಪೋಲ್ಟ್‌ನಾಗೆ ಬರ್‍ದೇತೆ’ ಅಂತ ಹಲ್ಲು ಮಸೆದ. ಇದೆಲ್ಲಾ ಈರಭದ್ರ, ಅವನ ಫ್ರೆಂಡಸ್ದೇ ಕೆಲಸ. ನಡೀ ಟೇಸನ್ಗೆ ಹೋಗೋಣಾ ಅಮ್ತ ಒಂದೇ ಸಮ ಜೀವ ತಿಂದ. ಟೇಸನ್ ಕಟ್ಟೇನೂ ಹತ್ತದೆ ಕಣಪ್ಪ. ‘ರೇಪ್ ಆಗೇತೆ ಅಂತಾರೆ ಆಸ್ಪತ್ರೆನೋರು….. ಸರಿ ಕಣಯ್ಯ, ಸೇರ್ಮನ್ರ ಮಗ್ನೆ – ಅವನ ಕಡೆಯೋರೆ ಅಂತ ಹೆಂಗೇಳ್ತಿ? ನೀರ್‍ನಾಗೆ ದಿನವೆಲ್ಲಾ ಹೆಣ ತೇಲೇತೆ ಅಂದ ಮ್ಯಾಲೆ ಎವಿಡನ್ಸೂಗೆ ಬಲಾಬರಾಕಿಲ್ಲ. ಕೇಸೂ ಬಿದ್ದೋಯ್ತದೆ. ಆದ್ದಾತಯ್ಯ, ದೊಡೋರ ಯಾಕೆ ಕೆಣಕ್ತಿ ಇನ್ನು ಮ್ಯಾಗರ ಹುಸಾರಾಗಿರು’ ನನ್ಗೇ ಬುದ್ದಿವಾದ ಯೋಳ್ದ ಹೆಡ್ ಪೊಲೀಸು. ನಮಗೆ ಯಾರ ಸಪೋರ್ಟು ಐತೆ ನೀನೇ ಯೋಳಪ್ಪಾ? ಸರಕಾರವೇ ನಿಮ್ದು ಕಣ್ರಲೆ ಅಮ್ತ ನಗಾಡ್ತಾವೆ ದೊಡ್ಡ ಮಂದಿ. ಇಲ್ಲಿವರೆ ಯಾವನಾರ ನಮ್ಮೊನು ಮುಖ್ಯಮಂತ್ರಿ ಆಗವನಾ? ನಮ್ಮನ್ನ ಕೆಡಿಸಿದೋರ್‍ಗೆ, ಬೆಂಕಿ ಇಟ್ಟೋರ್‍ಗೆ, ಕೊಲೆ ಮಾಡಿ ಮಾನ ಹರಾಜ್ ಹಾಕ್ದೋರ್‍ಗೆ, ಯಾರ್‍ಗೆ ಸಿಕ್ಸೆ ಆಗೆತಪ್ಪಾ? ಪೇಪರ್‍ನಾಗೆ ಸುದ್ದಿಯಾಗಿ ಆಮ್ಯಾಲೆ ಸತ್ತು ಹೋಗಿ ಬಿಡ್ತದೆ. ಯಾವನಾರ ಸ್ವಾಮೀಜಿ ಹಂಗ್ ಬಂದು ಹಿಂಗ್ ಪಾದಯಾತ್ರೆ ಮಾಡಿ ಪೋಟೋ ಹೊಡಿಸ್ಕಂಡು ಹೊಂಟೋಯ್ತಾನೆ. ಅವನ ಜಾತಿ ಜನವೆ ನಮ್ಮನ್ನು ಅಟ್ಟಾಡಿಸ್ಕ್ಯಂಡು ಹೊಡ್ದು ಕೊಂದವರೆ ಅಂಬೋದು ಗೊತ್ತಿದ್ದೂ ಒಂದೇ ತಾಯಿ ಮಕ್ಕಳಂಗೆ ಬಾಳಿ ಅಂತಾನ್ಯೆ ಹೊರ್ತು ಆಮಠದಯ್ಯ ಕೊಲೆಗೆಡುಕುರ್‍ಗೆ ಸಿಕ್ಸೆ ಕೊಡೋಕೆ ಕೈ ಎತ್ತೋನಲ್ಲ. ಆಸೀರ್ವಾದ ಮಾಡಿ ಕಾಸು ಎತ್ತೋ ಕೈ ಕಣಪ್ಪ ಅದು, ಕಾಪಾಡೋ ಕೈಯಲ್ಲ.
* * *

ನಾನೇನೋ ದಿನಸಾದ್ನೆ ಮ್ಯಾಲೆ ಗಂಗಿನ ನೆನಸ್ಕಂಡು ಅಳಾದ್ನ ರವಷ್ಟು ಕಡಿಮೆ ಮಾಡ್ದೆ. ಆದ್ರೆ ನಿಂಗಿ ದುಕ್ಕ ಹಿಂಗವಲ್ದು. ಆಕಿ ಸೇರ್ಮನ್ನರ ಮನೆ ಕೆಲ್ಸ ಬೊಗ್ಸೆ ಮಾಡೋಕೆ ಹೋಗದಂಗಾಗಿದ್ಲು. ನಾಗವ್ವ ಎಲ್ಡು – ಮೂರು ದಪ ಆಳಿಂತಾವ ಯೋಳಿ ಕಳಿಸುದ್ರೂವೆ ಈಕಿ ಸುತ್ರಾಂ ಹೋಗ್ನಿಲ್ಲ. ಸೇರ್ಮನ್ರ ಮನೆ ಮಾತು ತೆಗೆದ್ರೆ ಇರಿಯೋ ದನದಂಗಾಡೋಳು.

ಆಮ್ಯಾಲೆ ನಡೆದದ್ದೇ ಬೇರೆ ಕಣಪ್ಪ. ಕೆರೆಗೆ ಬಟ್ಟೆ ತೊಳೆಯಾಕೆ ಅಮ್ತ ಒಂದಿನ ಹೋಗಿದ್ಲು. ಅಲ್ಲಿ ನಾಕಾರು ಹೆಂಗಸರು ಬಟ್ಟೆ ತೊಳೀತಿದ್ರಂತೆ. ಅಲ್ಲಿಗೆ ಈರಭದ್ರ – ಅವನ ಗೆಳೇರು ಬಂದು ಬಟ್ಟೆ ಜಾಲಾಡ್ತಿದ್ದ ನಾಯಕರ ಮನೆ ಹುಡ್ಗಿನ ಚುಟಾಯಿಸ್ತಾ ಕುಂತರಂತೆ. ಆ ಹುಡ್ಗಿ ಒಂದು ಹಂತಕ್ಕೆ ಸಿಟ್ಟಿಗೆದ್ದು ಬೋದವಳೆ. ಈರಭದ್ರ ಅನಾಮತ್ತು ಅವಳ ಹಿಡ್ಕೊಂಡು ಕೆಳಾಗೆ ಕೆಡವಿಕ್ಯಂಡು ಬಿಟ್ನಂತೆ. ನನ್ನ ಮಾನ ಉಳಿಸಿರವ್ವ ಅಮ್ತ ಆ ಹುಡ್ಗಿ ಚೀರಾಡೇತೆ. ಇದ್ದೋರೆಲ್ಲಾ ಹೆಂಗಸರೆಯಾ ಏನು ಮಾಡ್ಯಾರು? ಆದರೆ ನಮ್ಮ ನಿಂಗಿಗೆ ಯಾಕೆ ಬೇಕಿತ್ತಾ ಊರ ಉಸಾಬರಿ…. ಸುಮಿರಕಾಗ್ದೆ ಒಂದೇ ಏಟ್ಗೆ ಅವನ ಮ್ಯಾಗೆ ಹಾರಿ ಎಳೆದು ಹಾಕಿ ಜಾಡಿಸಿ ಒದ್ದವಳೆ. ಅವನ ಕಾಲಿನ ಕೆರ ತಕ್ಕಂಡು ಅವನಿಗೇ ಬಾರಿಸಿಬಿಟ್ಟವಳೆ. ಈರಭದ್ರ ಅವನ ಗೆಳೇರು ಓಡಿಹೋದ್ರಂತೆ. ಸಂಜೆಯೋಟೊತ್ಗೆ ಹಳ್ಳಿನಾಗೆಲ್ಲಾ ಇದೇ ಸುದ್ದಿ. ನನಗಂತು ಹಾಲ್ಟ್ ಪೇಲಾದಂಗಾತು. ಸ್ಯಾಲೆ ಗಂಟೆ ಹೊಡ್ದೊನೆಯಾ ಮನೀಗ್ ಓಡಿಬಂದೆ. ನನ್ನ ಕೈಕಾಲು ಹಂಗೆ ನಡಗೋವು ಕಣಪ್ಪ. ನಿಂಗಿ ಧೈರ್ಯವಾಗೇ ಇದ್ಲು. ಭಾಳ ದಿನದ ಮ್ಯಾಗೆ ನಗನಗ್ತಾ ಹಿಟ್ಟು ಬೇಯಿಸೋದ್ನ ಕಂಡೆ. ಯಾಕಿಂಗೆ ಮಾಡ್ದೆಲೆರಂಡೆ. ಅಲ್ಲಿರೋರೆಲ್ಲಾ ಸುಮ್ಗಿರೋವಾಗ ನಿಂಗೇನ್ ಹರ್‍ಕತ್‌ ಬಂದಿತ್ತೆ ಮೂಳಿ ಅಮ್ತ ಮನಸ ಇಚ್ಛೆ ಬೋದೆ. ಅವಳು ಈರಭದ್ರನಿಗೆ ಕೆರದಾಗೆ ಹೊಡೆದದ್ದು ನನ್ಗೂ ಒಳ್ಳೇ ಖುಸಿ ಆಗಿತ್ತು. ಏನಂದ್ರೂವೆ ಬೆಂಕಿ ತಾವ ಚಿನ್ನಾಟ ಅಡ್ಡಂಗಾತಲ್ಲ ಅಮ್ತ ಕಣ್ಣೀರು ಕಪಾಳಕ್ಕೆ ಬಂತು. ‘ಏನಾದಾತೋ ಆಗ್ಲೇಳು. ಈಟರಮ್ಯಾಲೆ ನಂಜೀವ ಹೋದ್ರೆ ಹೋಗ್ಲೇಳು’ ಅಂತೇಳಿ ತಾಯಿ ಕೋಳಿ ಮರಿಕೋಳಿಗುಳ್ನ ಅವುಚ್ಕಂಡು ಕುಂತಂಗೆ ಕುಂತ್ಕಂಡ್ಳು ನಿಂಗಿ ಗರಬಡಿದೋಳಂಗೆ.

ಕತ್ತಲಾತಪ್ಪ, ಸೇರ್ಮನ್ರು ಜನಕ್ಕೆ ಜನ ಜತೆಯಾಗೆ ಇಟ್ಕಂಡು ಬಂದರು. ಮನೆಯಾಗೆ ನುಗ್ಗಿ ನಿಂಗಿನಾ ಹೊರಗಡಿ ಎಳ್ಕಂಡರು. ಕಾಲ್ ಕಾಲಿಲೆ ಒದ್ದರು. ‘ನನ್ನ ಮಗನ ಮ್ಯಾಲೆ ಕೈ ಮಾಡೋವೋಟು ದಮ್ಮೇನ್ಲೆ ಬೋಸುಡಿ’ ಅಮ್ತ ಎಲ್ಲಿಗಂದ್ರಲ್ಗೆ ಒದ್ದರು. ‘ಬುದ್ದಿ, ಏನೋ ತಪ್ಪಾಗೋಗೇತೆ, ಹೊಟ್ಟೆನಾಗೆ ಹಾಕ್ಕಂಡು ಮಾಫಿ ಮಾಡಿ ಸಿವ’ ಕಾಲು ಹಿಡ್ಕೊಂಡು ಬೇಡ್ದೆ. ಮಕಮಾರೆ ನೋಡ್ದೆ ನನ್ಗೂ ಇಕ್ಕಿದರು. ರಕ್ತ ಕಿತ್ಕಂತು ಮೂಗು ಬಾಯ್ನಾಗೆ. ‘ಎಂಥ ಹೇಲುತಿನ್ನೋ ಕೆಲ್ಸ ಮಾಡಿದ್ಲಲ್ಲೋ ನಿನ್ನ ಹೆಂಡ್ತಿ…… ಲೌಡಿ……. ಊರಿನಾಗಳ ಐಕ್ಯಮತ್ಯಾವ್ನೆ ಕೆಡಿಸಿಬಿಟ್ಲು’ ಶಾನುಭೋಗ್ನೂ ಅರಚಾಡ್ಡ. ‘ಹೇಲು ತಿನ್ನೋ ಕೆಲ್ಸ ಮಾಡೋರು ನೀವು ಕಣ್ರಲೆ ದೊಡ್ಡ ಮನುಸುರಾ’ ಅಂತ ನೋವಿನಾಗೂ ಚಿರ್‍ಕೊಂಡ್ಳು ನೆಲದಾಗೆ ಬಿದ್ದಿದ್ದ ನಿಂಗಿ.

‘ಹೇಲು ನಾವ್ ತಿನ್ನೋರಲ್ಲಲೆ ಚಿನಾಲಿ….. ತಿನ್ಸೋರು’ ಸೇರ್ಮನ್ನ ಜಾಡಿಸಿ ಒದ್ದ. ಇವಳು ಅವನ ಮಕದ ಮ್ಯಾಗೆ ಉಗುದ್ಲು. ಸಗ್ತಿ ಅದೆಲ್ಲಿತ್ತೋ ಕಣಪ್ಪ, ಮಾರಿ ಹಂಗೆ
ನಿಂತ್ಕಂಡ್ಲು. ಸೇರ್ಮನ್ರ ಮನೆ ಆಳುಗಳೀಗ ನಿಂಗಿ ಮ್ಯಾಲೆ ಕೈ ಮಾಡಾಕೆ ಹತ್ತಿದರು. ಅವು ಬೇರೆ ಯಾರು ಅಲ್ಲ ನಮ್ಮ ಹಳ್ಳಿ ಹುಡುಗ್ರೆಯಾ! ತುಂಡು ಮುದ್ದಗೆ ಮನೆ ಕಾಯೋ ನಾಯಿಗಳು, ತಿಂದ ರುಣಕ್ಕೆ ನಿಯತ್ತು ತೋರೋವು. ನೀನು ನಂಬ್ತಿಯೋ ಇಲ್ಲಪ್ಪ ನಾ ಬೇರೆ ಕಾಣೆ. ಹೇಲು ತಿನ್ನೋರು ನಾವಲ್ಲವೆ ಅಂತ ಚೀರಾಡಿದ ಸೇರ್ಮನ್ನು ಬೀದಿ ಬದಿನಾಗೆ ಹೇಲಾಕೆ ಕುಂತಿದ್ದ ಹೈಕ್ಳ ಓಡಿಸ್ದ. ಅದನ್ನೇ ಎತ್ಕೊಂಬಂದು ನಿಂಗಿ ಬಾಯ್ನಾಗಿ ತುರುಕರಲೆ ಅಮ್ತ ಅಲ್ಡರ್ ಮಾಡ್ಡ. ಬಿಡಿಸಾಕೆ ಹೊಯ್ದಾಡ್ದೆ, ನಿಂಗಿ ಬಾಯ್ನಾಗೆ ಹೇಲು ತುರುಕೇ ಬಿಟ್ಟರು. ನನ್ನೂ ಬಿಡ್ನಿಲ್ಲ. ಸೇರ್ಮನ್ನರ ಹೆಣ್ತಿ ತಮ್ಮ ಬಸವಣ್ಣೆಪ್ಪ ತಾನೆ ತಂದು ನನ್ನ ಬಾಯ್ನಾಗೂ ಬಲವಂತವಾಗಿ ಇಕ್ದ. ಪಂಚೆ ಎತ್ತಿ ನಿಂಗಿ ಬಾಯ್ನಾಗಿ ಉಚ್ಚೆ ಉಯ್ದೇ ಬುಟ್ಟ ಆ ಸೇರ್ಮನ್ನು. ಬಗಬಗ ಅಮ್ತ ಇಬ್ಬರು ವಾಂತಿ ಮಾಡ್ಕಂಡು ಹೊಳ್ಳಾಡಿದ್ವು. ನಾನು ಕೆಳ್ಳಿಕ್ಯಂಡು ಹೊಡೆದಾಟಕ್ಕೆ ಹೋದೆ. ‘ಜೀವ ಕಳ್ಕತೀರಲೆ ಬ್ಯಾಡ ಕಣೋ ಅಸ್ರ’ ಅಮ್ತ ಗಿಡ್ಡತಿಮ್ಮನೇ ಅಡ್ಡ ಬಂದು ಬಿಡಿಸ್ಕ್ಯಂಡ. ನೋಡುನೋಡ್ತಿದ್ದಂಗೆ ಮಂದಿ ಎದುರು ಸೇರ್ಮನ್ನರ ಹೆಣ್ತಿ ತಮ್ಮ ಬಸವಣ್ಣೆಪ್ಪ ನಿಂಗಿ ಸೀರೆನಾ ಕ್ಷಣ ಮಾತ್ರದಾಗೆ ಎಳ್ದಾಕಿ ಕುಬುಸ ಕಿತ್ತು ಬಿಸಾಡಿ ಬೆತ್ಲೆ ಮಾಡ್ದ. ದಿನಾ ಆಸೆಯಿಂದ ನೋಡೋ ದೇಹಾನ ಈಗ ನೋಡಕಾಗ್ದೆ ಕಣ್ಣು ಮುಚ್ಕಂಬಿಟ್ಟೆ ಕಣಪ್ಪ. ಅವಳಂತೂ ಭೂಮಿತಾಯಿಯ ತಬ್ಕಂಡಿದ್ಲು. ‘ಮಂದಿ ಮಾನ ಕಾಪಾಡೋಕೆ ಹೋಯ್ತಿನ್ಲೆ ಬೇವಾರ್ಸಿ…… ಈಗ ಯಾರ್‍ಲೆ ನಿನ್ನ ಮಾನ ಕಾಪಾಡೋ ಗಂಡ್ಸು?’ ಕೇಕೆ ಹೊಡ್ದ ಬಸವಣ್ಣೆಪ್ಪ. ‘ನಿನ್ನೆ ಇಲ್ಲೆ ಹಾಕ್ಕಂಡು ಮಲಿಕ್ಕಂಡರು ನನ್ನ ಕೇಳೋ ಚೋದಿಮಗ ಯಾರೆ ಈ ಭೂಮಿಮ್ಯಾಗವ್ನೆ’ ನಿಂಗಿ ಕುದ್ಲು ಹಿಡ್ದು ಎತ್ತಿ ಉಲ್ಡಡಿಸಿದ. ಸೇರ್ಮನ್ನು, ನಾಯಕರೋನು, ಗೌಡ, ಲಿಂಗಾಯಿತ, ರೆಡ್ಡಿ, ಉಪ್ಪಾರ, ಮುಸಲ್ಮಾನರೋನು ಎಲ್ಲಾ ಗಂಡಸರು ಇದ್ದರು. ನಿಂತ್ಕಂಡು ನೋಡಿದರು, ಬಾಯಿ ಬಿಡ್ನಿಲ್ಲ. ಹೆಂಗಸರು ಒಳಹೋಗಿ ಬಾಗಿಲು ಹಾಕ್ಕಂಡ್ವು. ‘ಬುಟ್ಟು ಬಿಡಿ ಆಕಿನಾ’ ಅಮ್ತ ಕೇಳಾಕೂ ಉಸಿರೇ ಇರ್‍ನಿಲ್ಲ, ಹಂಗೆ ಬಿದ್ಕಂಡಿದ್ದೆ. ಹೊಟ್ಟೆಗೆಲ್ಲಾ ಎಂಥದೋ ನೋವು. ಕಡೀಗೆ ಅವರಾಗೇ ಬಿಟ್ಟು ಹೊಂಟೋದರು.

ನಿಧಾನವಾಗಿ ಸಾವರಿಸ್ಕ್ಯಂಡು ಮ್ಯಾಕೆದ್ದು ನಿಂಗಿನ ಏಳ್ಸಿ ಮನೆಯಾಗೆ ಕರ್‍ಕೊಂಡು ಬಂದೆ. ಬ್ಯಾರೆ ಸೀರೆ ಕೊಟ್ಟೆ. ಉಟ್ಕಂಬಲಿಲ್ಲ. ಬಲವಂತ ಮಾಡ್ದೆ. ಹುಚ್ಚಿಯಂಗಾಡಿ ನನ್ನ ಮ್ಯಾಲೆ ಕೈ ಮಾಡಿದ್ಲು. ಹೆದ್ರಿಕ್ಯಾತು. ಇಬ್ಬರ ಮೈಯೂರಾಣಾರಕ್ತ. ಪೊಲೀಸ್ ಜೀಪು ಬಂದಂಗಾತು. ಶಬ್ದ ಮಾಡ್ತ ಹೊರಾಕೆದ್ ಬಂದೆ. ‘ಏನೇನು ನಡಿತೋ ಹೇಳ್‌ಬನ್ನಿ’ ಅಂತಂದು ಸಣ್ಣೀರ ಒಂದೇ ವರಾತ ಮಾಡ್ದ. ‘ಏನ್ ಯೋಳೋದಪ್ಪಾ ಎಂಜಲು ತಿನ್ನೋ ಪೊಲೀಸ್‌ನೋರ್‍ಗೆ?’ ಪಿಳಿಪಿಳಿ ಮಾಡ್ಡೆ. ‘ಏನ್ ನೆಡಿತ್ಲೆ ಅಸ್ರ ಅಂಬೋ ಸೂಳಿಮಗ್ನೆ?’ ಹೆಡ್ಡು ಪೊಲೀಸು ಲಟ್ಟ ಕುಟ್ಟೋವಾಗ ಎದಿಮ್ಯಾಲೇ ಕುಟ್ದಂಗಾತು. ಇನ್ನ ಇವರ ಕೈನಾಗೂ ಏಟು ತಿಂದ್ರೆ ಸತ್ತೇ ಹೋದೆವು ಅಮ್ತ ನಡುಕ ಬಂತು. ‘ಏನೂ ನಡಿಲೇ ಇಲ್ಲ ಬುದ್ದಿಯೋರ…. ಹಳ್ಳಿ ಅಂದ ಮ್ಯಾಲೆ ಏನಾರ ಹರಕತ್ ಇದ್ದೇ ಇರ್ತದೆ. ಸೇರ್ಮನ್ನು ಊರಿಗೆ ದೊಡ್ಡೋರು, ತಂದಿ ಸಮಾನ……. ಹೊಡ್ದು ಬುದ್ಧಿವಾದ ಯೋಳಿದ್ರು ಅಷ್ಟೇಯಾ’ ತೊದಲಿದೆ.

“ಸುಳ್ಳು ಕಣ್ರಿ ಇನ್ಸ್‌ಪೆಕ್ಟ್ರೆ. ಅಸ್ರಣ್ಣ, ಅವನ ಹೆಣ್ತಿಗೆ ಹೇಲು ತಿನ್ನಿಸವ್ರೆ. ಬೆತ್ಲೆ ಮಾಡಿ ಒದ್ದವರೆ. ಹರಿಜನರ ಮ್ಯಾಲೆ ದೌರ್ಜನ್ಯ ಮಾಡಿದೋರೆ ಸರಿಯಾದ ಸಿಕ್ಸೆ ಆಗ್ಲೇಬೇಕ್ಸಾ” ಸಣ್ಣೀರ ಎಗರಾಡ್ಡ. ‘ಅವನು ನೋಡಿದ್ರೆ ಏನು ನಡೀಲಿಲ್ಲ ಅಂತಾನೆ. ಊರಿಗೆ ದೊಡ್ಡೋರು, ತಂದೆ ಸಮಾನ ಅಂತಾನೆ. ಹಳ್ಳಿನಾಗೆ ಒಡಕು ತಂದಿಟ್ಟು ತಮಾಷೆ ನೋಡೋನ ಅಂತದಿಯೇನ್ಲೆ ನಾನ್‌ಸೆನ್ಸು? ಪೊಲೀಸ್ ಕೂಗಾಡ್ದ………..’ ‘ಇವನು ಹೆದರ್‍ಕಂಡು ಸತ್ಯ ಹೇಳ್ತಿಲ್ಲ ಇನ್ಸ್‌ಪೆಕ್ಟ್ರೇ. ನನ್ನ ಮಾತು ನಂಬಿ’ ಸಣ್ಣೀರ ಬೇಡ್ಕೊಂಡ. ‘ನೋಡಯ್ಯ, ನಿನ್ನೆ ಪೇಟೆಯಾಗ್ಳ ಓದು ಕೆಲಸಕ್ಕೆ ಬರಾಕಿಲ್ಲ. ಕಂಪ್ಲೇಂಟ್ ಕೊಟ್ಟರೆ ಮಾತ್ರ ನಾವು ಆಕ್ಸನ್ ತಗಂಬೋರು. ಇನ್ನೊಂದ್ಸಲ ಹಿಂಗೇನಾರ ತರ್‍ಲೆ ತಕ್ಕಂಡು ಟೇಸನ್ತಾವ ಬಂದ್ಯೋ ನಿನ್ನೆ ಬೋಟಿ ತೆಗ್ದು ಬಿಡ್ತೀನ್ಲೆ ಸುವ್ವರ್’ ಸಣ್ಣೀರಂಗೆ ಉಗ್ದ ಪೊಲೀಸ್ ಜೀಪ್ ತಗಂಡು ಸೀದಾ ಸೇರ್ಮನ್ರ ಮನೆ ತಾವ್ಕೆ ಹೋದರು. ‘ನೀನ್ ಸತ್ಯ ಯೋಳಬೇಕಿತ್ತು ಅಸ್ರಣ್ಣ’ ಸಣ್ಣೀರ ಬೋದ. ಅಲ್ಲಿ ಸೇರ್ಮನ್ರಿಗೂ ಹೆದರ್‍ಸಿ ಒಂದಿಷ್ಟು ರೊಕ್ಕ ಕಿತ್ಕೊಂಡು ಹೋಗ್ಲಿ ಅಮ್ತ ನಾನು ಈ ಕಾಕಿ ಸೂಳೆಮಕ್ಳನ್ನ ಕರ್‍ಕೊಂಡು ಬಂದಂಗಾತು!’ ಸಣ್ಣೀರ ನನ್ನ ಮ್ಯಾಲೆ ಸಿಟ್ಟು ಸಿಟ್ಟಾಗಿ ಮನಿಗೋದ. ಒಳಾಕೆ ಬಂದೆ. ಮಕ್ಳು ಹಸ್ಕೊಂಡು ನಿದ್ದೆ ಹೋಗಿದ್ವು. ನನ್ಗೋ ಹಸಿವೆಂಬೋದೇ ನೆಪ್ಗೆ ಬಂದಿರ್‍ನಿಲ್ಲ. ನಿಂಗಿ ಸೀರೇನೂ ಉಟ್ಕಳ್ದೆ ನಾಯಿ ತರಾ ಮುದುರ್‍ಕೊಂಡು ಮಕ್ಕಂಡಿದ್ಳು. ಮಾತಾಡಿಸೋ ಎದೆಗಾರ್‍ಕೆ ಎದೆನಾಗೆ ಬತ್ತೋಗಿತ್ತು. ಅವಳಿಗೆ ಕಂಬಿ ಹೊಚ್ಚಿ ನಾನೂ ಹಂಗೆ ಚಾಪೆ ಎಳ್ಕೊಂಡೆ. ಮೈಕೈಯೆಲ್ಲಾ ನೋಮು, ಹಸಿವು, ಹಂಗೆ ನಿದ್ದೆ ಜೊಂಪು ಹತ್ತು.

ಬೆಳಗಾನೆ ಹೊಡ್ದು ಎಚ್ಚರಿಸಿದಂಗಾತು. ಯಾರು ಸತ್ರೇನು, ಯಾರು ಕೆಟ್ಟರೇನು ಹಸುವು ನಿದ್ದೆಗೆ ನಾಸ್ಗಿಲ್ಲ, ಹೇಸ್ಗಿಲ್ಲ. ಪಕ್ಕಕ್ಕೆ ಹೊಳ್ಳಿ ನೋಡ್ದೆ ನಿಂಗಿನೇ ಇಲ್ಲ! ನೀರ ಕಡೀಕೆ ಹೋಗಿರ್‍ಬೋದು ಅಮ್ತ ಬೀಡಿ ಹಚ್ಕೊಂಡೆ. ಹೊಟ್ಟೆನಾಗೆಲ್ಲ ಸಂಕ್ಟ. ಸಂಕ್ಟ ಒಂದು ಪಾಕೇಟ್ ಹಾಕ್ಯಂಡ್ರಾದ್ರು ಈ ಸಂಕ್ಟ ನೋಮು ಹೋದಾತು ಅನ್ಕಂಡೆ. ಮಕ್ಳು ಒಂದಕ್ಕೊಂದು ಕೈಕಾಲು ಹಾಕ್ಕಂಡು ಮಕ್ಕಂಡಿದ್ದು. ಎದುರು ಗುಡ್ಲಾಗಿರೋ ಕೆಂಪಜ್ಜಿ ಕೂಕ್ಕಂತು. ಹೊರಾಗೆದ್ದು ಬಂದೆ. ‘ಎಂತ ಕೆಲ್ಸ ಮಾಡಕ್ಕಂಬಿಟ್ಟಲ್ಲೋ ನಿಂಗಿ’ ಲಬಲಬ ಬಾಯ್‌ಬಾಯಿ ಬಡ್ಕೊಂತು ‘ಮಕ್ಳು ಮರಿಬಿಟ್ಟು ಸಾಯಾಕೆ ಮನ್ಸಾರ ಹೆಂಗೆ ಬಂತೋ ಮುಂಡಿಗೆ’ ಮಾಳಿಗೆ ಮನೆ ದುಗ್ಗಜ್ಜನೂ ಸಾಪಳಿಸ್ದ. ಯೋಳ್ದೆ ಕೇಳ್ದೆ ಮರಾಮಾಸ್ತಿಲೆ ಹಿಂಗೆ ನೇಣು ಹಾಕಂತಾಳೆ ಅಮ್ತ ನನಗಾರ ಏನ್ ಗೊತ್ತಪ್ಪ. ಇಲ್ಲದಿದ್ದರೆ ನಿದ್ದೆ ಮಾಡ್ದಂಗೆ ಕಾಯ್ಕೆಂಡು ಕುಂತಿರ್‍ತಿದ್ದೆ ಕಣಜ್ಜ ಅಮ್ತ ಬಿದ್ದು ಬಿದ್ದು ಗೊಳೋ ಅಮ್ತ ಅತ್ತೆ.

ಆಮೇಲೇ ಮತ್ತದೇ ಪೊಲೀಸ್ ಜೀಪು ಬಂತು. ಮಹಜರಾತು. ಹಳ್ಳಿನಾಗಿರೋ ಯಾರೂ ಎತ್ತಿನ ಬಂಡಿ ಕಟ್ಟಲಿಲ್ಲ. ನಮ್ಮ ಕರಿಯನೇ ತನ್ ದಬ್ಬೋಗಾಡಿ ಕೊಟ್ಟ. ಅದರಾಗೆ ನಿಂಗಿನಾ ಹಾಕ್ಕಂಡು ಪೊಲೀಸಿನೋರು, ಅವರ ಹಿಂದಾಗಡೆ ನಾನು – ನನ್ನ ಮಕ್ಳು ಮೆರವಣಿಗೆ ಹೊಂಟ್ವಿ. ನಾಕಾರು ಮೈಲಿಲೇ ತಾಲೂಕು. ಹೆತ್ತೋರು ಬೋದ್ರೂ ಕೇಳ್ದೆ ನಮ್ಮ ಸಂಗಡ ಬಂದೋನು ಸಣ್ಣೀರ ಒಬ್ಬನೆಯಾ. ಆವಾಗ್ನಿಂದ ಕುಂತೇ ಆದೀವಿ ಕಣಪ್ಪ.
* * *

ಆಸ್ಪತ್ರೆ ಮುಚ್ಕಂತು. ಕತ್ತಲೂ ಕವಕಂತು. ಸ್ರವ ಒಳ್ಗೆ, ನಾವು ಹೊರಾಗಾಗೋದ್ವಿ. ‘ದುಡ್ಡು ಕೊಡ್ದೆ ಆಸ್ಪತ್ರೆ ಹಲ್ಕಾಗುಳು ಸ್ರವ ಕುಯಾಕ್ಕಿಲ್ಲ ಕಣಣ್ಣ. ನಿಂತಾವ್ನೂ ಕಾಸಿಲ್ಲ. ನಂತಾವೂ ಒಂದು ದಮ್ದಿಲ್ಲ. ಇದಕ್ಕೆ ಪರಿಹಾರ ಒಂದೆಯಾ, ನಮ್ಮ ಸಂಘದೋರು ಅವರೆ…… ಈ ಊರ್‍ನಾಗೆ. ಅವರು ಬಂದು ನಿತ್ಗಂಡ್ರೆ ಯಾವಾನು ದುಡ್ಡು ಕೇಳಾಕಿಲ್ಲ. ಅವರು ಬಂದ್ರೆ ಬೆಳಿಗ್ಗೆನಾರ ಸ್ವರಸಿಗ್ತದೆ’ ಅಂದ ಸಣ್ಣೀರ್‍ನೂ ಎತ್ಲಾಗೋ ಹೊಂಟೋದ. ಸ್ರವದ ಮನೆ ಮುಂದಾಗಡೆ ನಾನು – ನನ್ನ ಮಕ್ಳು ಸಳಿಗೆ ಗಡಗಡ ನಡಗ್ತಾ ಒಂದೇ ತಾವ ಕವ್ಕಂಡು ಕುಂತೇ ಅದೀವಿ. ಒಬ್ಬರ ಮಕ ಒಬ್ಬರಿಗೆ ಕಾಣ್ದೋಟು ಕತ್ಲು. ಸ್ರವದ ಮನೀಗೆ ದೀಪಾನೇ ಇಲ್ಲ. ಅದಾರ ಯಾಕೆ ಬೇಕೇಳು? ಒಳಗಡೀಕೆ ನಿಂಗಿನೇನೋ ಬೆಚ್ಗೆ ಮಕ್ಕಂಡವ್ಳೆ. ಅದ್ಕೆ ಏನೋ ಹೋದೋರೆ ಈಗಿನ ಕಾಲ್ದಾಗೆ ಪುಣ್ಯವಂತರು ಅಂಬೋದು! ಇಷ್ಟೆಲ್ಲಾ ನಾ ನಿನ್ಗೆ ಯೋಳ್ದೆ, ನೀನು ಕೇಳಿಸ್ಕ್ಯಂಡೇ ಅಂತೆ ನಂಬ್ಕೋತೀನಿ ಕಣ್ ಸಾಮಿ. ನೀನು ಆದಿಯಾ ಅಂಬೋ ನಂಬ್ಕೆಮ್ಯಾಲೆ ಏಟೊಂದು ಗುಡಿ ಕಟ್ಟಿ ಕೂರಿಸವ್ರೆ ನೋಡ್ ನಿನ್ನ. ಮನುಷ್ಯ ಮಾತ್ರದೋರು ನಮ್ಮನ್ನ ಮನಸ್ಯರಂಗೆ ಕಾಂಬಲ್ಲ ಕಾಣಪ್ಪ. ನೀನು ಕನಿಕರ್‍ದೋನು, ದಿಕ್ಕಿಲ್ಲದೊರ್‍ಗೆ ದೇವರೇ ಗತಿ ಅಂಬ್ತಾರಲ್ವೆ. ಅದ್ಕೆ ಕೇಳ್ತಾ ಅವ್ನಿ ಕಣ್ ಸಾಮಿ. ಸಾವಿರಾರು ವರ್ಸದಿಂದ ಹಿಂಗೆ ನಮ್ಮನ್ನ ಹರ್‍ಕಂಡು ಮುಕ್ತಾ ಇದ್ರೂವೆ ನೀ ಯಾಕ್ ನಮ್ಮನ್ನ ಕಾಪಾಡೋಕೆ ಒಂದಪನಾರ ಗುಡಿಯಾಗಿಂದ ಎದ್ದು ಬರವಲ್ಲೆ? ದ್ರೋಪೌತಿ ಅಂಬೋಳು ಮಾತ್ರವೆ ನಿನ್ ತಂಗೇನು? ನಿಂಗಿ ನಿಂಗೇನು ಅಲ್ಲೇ ಅಲ್ವಾ……! ಎಲ್ಲಿದ್ದಿಯಪ್ಪಾ ಸಾಮಿ ನೀನು. ಈ ಜಗತ್ತಿನಾಗೆ ನಮ್ಮ ಮನೆ ಹೆಂಗಸರ್‍ನ ಬುಟ್‌ಬಿಟ್ರೆ ಈಟೊಂದು ಸಸೂರಾಗಿ ಇನ್ನಾವ ಜಾತಿ ಹೆಂಗಸರ ಬೆತ್ಲೆ ಮಾಡಾಕಾದೀತೇಳು. ನಮ್ಮ ಬಾಯ್ನಾಗೆ ಹೇಲು, ಉಚ್ಚೆ ಉಯ್ದಂಗೆ ಯಾವ ಮನುಷ್ಯ ಮಾತ್ರದೋರ್‍ಗೆ ಹಿಂಗೆ ಹೇಸಿಗೆ ತಿನ್ನಿಸೋಕೆ ಸಾಧ್ಯವಾದೀತೇಳು ನನ್ ಸಾಮಿ….. ಯೋಳು ದೇವ್ರೆ.

ಗಾಂಧೀಮಾತ್ಮ ಒಬ್ಬ ನಮಗಾಗಿ ಬಡಿದಾಡ್ದ ಅಂತಾರೆ. ಅಂಬೇಡ್ಕರ್ರು ಅಂಬೋನು ನಮ್ಮಂಗೆ ನೋವಿನಾಗೆ ಬಿದ್ದು ಒದ್ದಾಡಿದೋನೆಯಾ, ಓದಿ ದೊಡ್ಡೋನಾದ. ಆದ್ರೆ ನಮ್ಮ ಹೈಕ್ಳು ದೊಡ್ಡೋರ ಮನೆ ಹಟ್ಟಿ ಗುಡಿಸ್ದೆ ಸಾಲೆಗೋದ್ರೆ ಇವರ್‍ಗೆಲ್ಲಾ ಹೊಟ್ಟೆಯಾಗೆ ಉರಿ ಕಣ್ ತಂದೆ. ಬೆಕ್ಕು, ನಾಯಿ, ಕುರಿ, ಮ್ಯಾಕೆನೆಲ್ಲಾ ಮನೆಯಾಗೆ ಬಿಟ್ಕಂತಾರೆ, ನಾವಂದ್ರೆ ತಾಚ್ಚಾರ. ನೀನೂ ಅಷ್ಟೇ ಬುಡು ಮೀನು, ಆಮೆ, ಹಂದಿ, ಸಿಮ್ಮ ಎಲ್ಲಾ ಅವತಾರಾನೂ ಹಾಕ್ಕಂಡು ಬಂದೆ. ಭೂಮಿ ಮ್ಯಾಗಳ ರಾಕ್ಸಸರ್‍ನ ಕೊಂದೆ. ಹತ್ತು ಅವತಾರ ಎತ್ತಿ ಬಂದೆಲ್ಲ ತಂದೆ ನೀನು ಒಂದಪನಾರ ದಲಿತನಾಗಿ ಹುಟ್ಟಿ ಬಂದ್ಯಾ? ಯಾಕೆ ನಿನ್ನ ಕಣ್ಣಾಗೂ ನಾವು ಕೀಳಾ. ಯಾಕಪ್ಪಾ ಮೀನು, ಮಸಣಿ, ಹಂದಿಗಿಂತ ಕಡಿಯಾ ಯೋಳ್ ಸಾಮಿ ಯೋಳು? ನಾನೇಟು ಬಿಡಿಸಿ ಯೋಳಿದ್ರೂವೆ ನಮಗಾಗೋ ಅಪ್ಮಾನ, ಹೋಗೋ ಹೆಂಗಸರ ಮಾನ, ನಾವು ಪಡೋ ಹಿಂಸೆ, ಸಹಿಸೋ ದಬ್ಬಾಳಿಕೆ, ನಮ್ಮ ಹಸಿವು ಬಡ್ತನ ನಿನ್ನಾಣೆಗೂ ನಿನ್ಗೆ ಅರ್ಥವಾಗಕಿಲ್ಲ ದೊರೆ. ಯಾಕಂದ್ರೆ ನೀನು ಬರೀ ರಾಜ ಮರಾಜನಾಗೆ ಅವತಾರ ಎತ್ತಿ ಬಂದೋನು. ಹಸಿವು ಏನಂತ ಗೊತ್ತಿಲ್ಲಪ್ಪ ನಿನ್ಗೆ. ಹಿಂಸೆ ಏನಂತ ಅನುಬೋಗಿಲ್ಲ. ಅದ್ಕೆನಪ್ಪಾ ನಾ ಎಲ್ಡು ಕೈ ಜೋಡ್ಸಿ ಅರಿಕೆ ಮಾಡ್ಕೋತಾ ಆವ್ನಿ. ಈಗ ಮತ್ತೆ ಭೂಲೋಕ್ದಾಗೆ ರಾಕ್ಸಸರ ಅಬ್ಬರ ಹೆಚ್ಚು ಆಗ್ತಾ ಐತೆ. ಸರಕಾರ, ರಾಜಕಾರಣಿ, ಪೊಲೀಸು ಯಾರ್‍ಯಾರೂ ನಂಬಂಗಿಲ್ಲ. ಎಲ್ಲರೂ ರಕ್ತ ಹೀರೋ ರಾಕ್ಸಸರ್‍ನ ಸಿಕ್ಸಿಸೋಕಾದ್ರೂ ಮತ್ತೊಂದು ದಪ ಅವತಾರ ಎತ್ತಿ ಬಾರಯ್ಯ.

ದಲಿತನಾಗಿ ಹುಟ್ಟಿ ಬಂದ್ರೆ ಮಾತ್ರ ಕಣಪ್ಪ ನಮ್ಮ ದುಕ್ಕ, ದರಿದ್ರ ಸಾವುನೋವು ತಿಳಿದಾತು ನಿನ್ಗೆ. ಆಲೆ ಜಾವದ ಕೋಳಿ ಕೂಗ್ತಾ ಐತೆ ಕಣ್ ಸಾಮಿ ಬತ್ತಿಯಾ ತಂದೆ? ಮೂಡಲೆಲ್ಲಾ ಕೆಂಪಗಾಯ್ತಾ ಅದೆ. ಜಗತ್ತಿಗೆ ದಿನಾ ಬೆಳಗಾಗ್ತೇತೆ ಬುಡು……. ಆದರೆ ನಮ್ಗೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೀರೋ ಹೋಂಡಾ
Next post ಪುಸ್ತಕದ ಕವಿತೆಗಿಂತ

ಸಣ್ಣ ಕತೆ

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…