ಹೊಸದಿನದ ಹೊಸತುತ್ತೂರಿಯ ದನಿ-
ಯು ಹೃದಯವನು ಸೇರೆ, ಕುದಿರಕ್ತ
ತಳಮಳಿಸಲಾ ನವಜವ್ವನೋತ್ಸಾ-
ಹದಲಿ ಪಂಜರದೊಳಿಹ ಗಿಳಿಯ ಹೊ-
ರಗೆಳೆದು ತೂರಿ ತೇಲಲು ಬಿಟ್ಟು,
“ಸೌಖ್ಯದಾಕಾಶದಲಿ ಮುಗಿಲು-
ಹಣ್ಣುಗಳ ಸವಿದು ಶಾಂತಿಸರಕಿ-
ಳಿದು ತಿಳಿನೀರನೀಂಟಿ ಸತಿ ಸುತರ
ಕೂಡಿ ಮಾತುಕತೆಯಾಡಿ ಮರೆ”
ಯೆಂದ ಸಂದೇಶವನು ತಾಯೆ ನಿನ-
ರುಹಲೆಂದು ಧಾವಿಸಿ ಬಂದೆ.
ನಿನ್ನ ಉಪವನದಿ ಪಚ್ಚಗರುಕೆಯ
ಶಾಂತಿ ಶಯ್ಯೆಯಲಿ ಮಲಗಿಹೆ
ನಾದೊಡೇನೆಲೆತಾಯೆ, ನಿನ್ನ
ಮುದ್ದು ಕಂದನನೊಮ್ಮೆಯೆ ಒಮ್ಮೆ
ಮೈದಡವಿ ಮುದ್ದಿಟ್ಟು ಬಿಡು
ಒಡನೆ ಪ್ರಾಣವ ಬಿಡುವೆ ಸಂತಸದಿ.
*****