ಜೀವನ

ಜೀವನ

ಚಿತ್ರ: ಎಂ ಜೆ ಜಿನ್
ಚಿತ್ರ: ಎಂ ಜೆ ಜಿನ್

ಮಾರ್ಕೆಟ್ ಬದಿಯ ಪರಿಚಯದ ಸೆಲೂನ್ ಅಂಗಡಿ ಪಕ್ಕ ಬೈಕ್ ನಿಲ್ಲಿಸಿ ಮಧು ಹೆಂಡತಿ ಕೊಟ್ಟ ಚೀಟಿಯನ್ನು ಕಿಸೆಯಿಂದ ಹೊರ ತೆಗೆದ. ಹಾಲು, ಸ್ವೀಟ್ಸ್, ಬಾಳೆಹಣ್ಣು, ಮೂರು ಬಗೆಯ ತರಕಾರಿ, ಟೊಮೆಟೋ, ಬ್ರೆಡ್ ಹಾಗೂ ಕೊನೆಯ ಐಟಂ ಎರಡು ಕೆ.ಜಿ. ಕೋಳಿ ಮಾಂಸ. ಕಡಿಮೆ ಪಕ್ಷ ಮೂರು ಅಂಗಡಿಗೆ ಬೇಟಿ ಕೊಡಬೇಕು. ೧೦ ಗಂಟೆಗೆ ಇಂಡಿಯಾ-ಅಸ್ಟ್ರೇಲಿಯಾ ಒನ್‌ಡೇ ಮ್ಯಾಚ್ ಇದೆ. ಅದರೊಳಗೆ ಮನೆ ಸೇರಬೇಕು. ಮಧು ಮತ್ತೊಮ್ಮೆ ಘಂಟೆ ನೋಡಿಕೊಂಡ. ೯.೩೦ ಗಂಟೆ. ಎಷ್ಟೇ ಅವಸರಪಟ್ಟರೂ ಒಂದು ಗಂಟೆಯಾದರೂ ಬೇಕು. ತೊಂದರೆಯಿಲ್ಲ. ಇವತ್ತು ಭಾನುವಾರ ತಾನೇ? ಆರಾಮವಾಗಿ ಮ್ಯಾಚ್ ನೋಡುತ್ತಾ ಮನೆಯಲ್ಲಿಯೇ ಬಿದ್ದುಕೊಂಡರಾಯಿತು. ಅಂಗಡಿಗಳಿಗೆ ಬೇಟಿ ನೀಡಿ ಪ್ರತೀ ಐಟಂ ಖರೀದಿಸಿದಂತೆ ಪಟ್ಟಿಯಲ್ಲಿ ಮಾರ್ಕ್‌ ಮಾಡಿಕೊಂಡ. ಯಾವುದೇ ಐಟಂ ಮರೆತು ಹೋಗದಂತೆ ಜಾಗ್ರತೆ ವಹಿಸಿದ. ಹೊರಡುವಾಗ ಹಲವು ಬಾರಿ ಹೆಂಡತಿಯಿಂದ ಎಚ್ಚರಿಕೆಯ ಸಿಗ್ನಲ್ ಪಡೆದುಕೊಂಡಿದ್ದ. ಪದೇ ಪದೇ ಅವಳ ಎದುರು ನಗೆಪಾಟಲಾಗುವುದು ಅವನಿಗೆ ಇಷ್ಟವಿರಲಿಲ್ಲ. ಮದುವೆಯಾಗಿ ಒಂದೂವರೆ ವರ್ಷ ಪೂರ್ತಿಯಾಗಿದೆ. ಆದರೆ ತನ್ನ ಮರೆವಿನ ಬಗ್ಗೆ ಅವಳಿಗೆ ಈಗಾಗಲೇ ಹಲವು ಬಾರಿ ಅನುಭವ ಆಗಿದೆ. ಇನ್ನೆಂದೂ ಹಾಗಾಗಬಾರದು ಎಂದು ಅವನು ಬಹಳ ಎಚ್ಚರಿಕೆ ವಹಿಸುತ್ತಿದ್ದ. ಖರೀದಿಸಿದ ಎಲ್ಲಾ ಐಟಂಗಳನ್ನು ಬೈಕಿನ ಹ್ಯಾಂಡಲ್‌ಗೆ ಸಿಕ್ಕಿಸಿದ. ಪ್ಲಾಸ್ಚಿಕ್ ಚೀಲದ ಕೈ ಹರಿದು ಹೋಗದಂತೆ ಎರಡೆರಡು ಚೀಲವನ್ನು ಕೇಳಿ ಪಡೆದುಕೊಂಡಿದ್ದ. ಎಲ್ಲಾ ಕೆಲಸವನ್ನು ಬಹಳ ತುರ್ತಾಗಿ ಮುಗಿಸಿ, ಬೈಕಿನ ಸ್ಟಾಂಡನ್ನು ತೆಗೆದು ಕುಳಿತುಕೊಂಡು ತನ್ನ ವಾಚನ್ನು ನೋಡಿಕೊಂಡ. ಆಗಲೇ ಗಂಟೆ ೧೦.೩೦ ದಾಟಿತ್ತು. ಇನ್ನು ಅರ್ಧ ಗಂಟೆಯ ಪ್ರಯಾಣವಿದೆ. ಪರವಾಗಿಲ್ಲ. ೮-೧೦ ಓವರ್ ಮುಗಿದಿರಬಹುದು. ಅಷ್ಟೇ ತಾನೇ? ಅವನು ಬೈಕ್ ಸ್ಟಾರ್ಟ್‌ ಮಾಡಿ ಮನೆಯ ಕಡೆ ಸಾಗಿದ.

ಮಧುವಿಗೆ ಈ ಮರೆವು ಹೊಸತೇನಲ್ಲ. ಬಾಲ್ಯದಿಂದಲೂ ಇತ್ತು. ಅಗ ಬೆಂಗಾವಲಾಗಿ ತಾಯಿ ಇದ್ದಳು. ಆದರೆ ಆಗ ಅವನಿಗೆ ಅದೇನೂ ದೊಡ್ಡ ವಿಷಯವಾಗಿ ಕಂಡು ಬರಲಿಲ್ಲ. ಆದರೆ ಮದುವೆಯಾದ ಮೇಲೆ ಹೆಂಡತಿ ಎದುರು ಈ ರೀತಿ ತನ್ನ ಮರೆವು ಬಹಿರಂಗವಾದಾಗಲೆಲ್ಲಾ ಅವನಿಗೆ ಮುಜುಗರವಾಗುತ್ತಿತ್ತು. ಅವಳು ಮೊದ ಮೊದಲು ನಕ್ಕು ತಮಾಷೆ ಮಾಡುತ್ತಿದ್ದಳು. ಕ್ರಮೇಣ ಮುಖ ಗಂಟಿಕ್ಕಿಕೊಂಡು, ಏರಿದ ಸ್ವರದಲ್ಲಿ ಜೋರು ಮಾಡಲು ತೊಡಗಿದಾಗ ಅವನ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿತ್ತು.
ಮೊದಲ ಪ್ರಸಂಗ ನಡೆದದ್ದು ಸಿನಿಮಾ ಹಾಲ್‌ನಲ್ಲಿ. ಇಂಟರ್‌ವೆಲ್‌ನಲ್ಲಿ ಟಾಯ್ಲೆಟ್‌ಗೆ ಹೋದವನು ಅಲ್ಲಿಂದ ಸೀದಾ ಸ್ಟಾಲಿಗೆ ಬಂದು ಕಾಫಿ ಕುಡಿದು ಹೊರ ಬಂದು ಬೈಕ್ ಸ್ಟಾರ್ಟ್‌ ಮಾಡಿದಾಗಲೇ ಹೆಂಡತಿಯ ನೆನಪಾದುದು. ಮತ್ತೆ ಹಿಂದೆ ಬಂದು ಕತ್ತಲಲ್ಲಿ ತಡಕಾಡಿ, ಹೆಂಡತಿಯ ಪಕ್ಕದ ಸೀಟು ಹಿಡಿಯಬೇಕಾದರೆ ಸುಸ್ತೋ ಸುಸ್ತು. ಮೊದಮೊದಲು ರಶ್ಮಿಗೆ ಇದೊಂದು ತಮಾಷೆಯಾಗಿ ಕಂಡರೂ ಬರುಬರುತ್ತಾ ಇದೊಂದು ಗುಣವಾಗದ ಕಾಯಿಲೆಯಾಗಿ ಕಂಡು ಬಂತು. ಅವಳ ತಾಳ್ಮೆಯ ಕಟ್ಟೆ ಒಡೆಯತೊಡಗಿತು. ಅವಳು ಗಂಡನನ್ನು ಆಗಾಗ್ಗೆ ತರಾಟೆಗೆ ತೆಗೆಯ ತೊಡಗಿದಳು. ಇನ್ನೊಂದು ಪ್ರಸಂಗ ಒಂದು ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು. ಮದುವೆಯಾಗಿ ಒಂದು ವರ್ಷವಾಯಿತು. ಮದುವೆಯ ಆನಿವರ್ಸರಿ. ಮಧು ಮದುವೆಯ ಅನಿವರ್ಸರಿಯ ಗುಂಗಿನಲ್ಲಿ ಇಲ್ಲದ್ದು ರಶ್ಮಿಗೆ ಗೊತ್ತಾಯಿತು. ತನ್ನ ಗಂಡ ಮದುವೆಯಾದ ತಾರೀಕನ್ನೇ ಮರೆತಿದ್ದಾನೆಂದು ಅವಳಿಗೆ ಸ್ಪಷ್ಟವಾಯಿತು. ಅವಳು ತನ್ನ ಗಂಡನಿಗೆ ಬುದ್ದಿ ಕಲಿಸಲು ಆಲೋಚಿಸಿದಳು. ಗುಟ್ಟಾಗಿ ತನ್ನ ಮನೆಯವರನ್ನು ಮದುವೆಯ ಅನಿವರ್ಸರಿಗೆ ಮನೆಗೆ ಕರೆದಳು. ಮಧುವಿಗೆ ತನ್ನ ಮನೆಗೆ ಏಕಾ‌ಏಕಿ ಹೆಂಡತಿ ಮನೆಯವರು ಬಂದದ್ದು ಆಶ್ಚರ್ಯವಾಯಿತು. ಮನೆಯಲ್ಲೂ ವಿಶೇಷ ಅಡುಗೆ ತಯಾರಾಗುತ್ತಿತ್ತು . ಏನೋ ವಿಶೇಷ ಇದೆಯೆಂದು ಗೊತ್ತಾದರೂ, ಯಾವುದಕ್ಕೆ ಈ ಸಂಭ್ರಮ ಎಂದು ಮಾತ್ರ ತಿಳಿಯಲಿಲ್ಲ. ನಂತರ ವಿಷಯ ತಿಳಿಯಬೇಕಾದರೆ, ಹೆಂಡತಿಯನ್ನು ಕಾಡಿ – ಬೇಡಿ ತಿಳಿದುಕೊಳ್ಳಬೇಕಾಯಿತು. ರಶ್ಮಿಯು ತನ್ನ ಗಂಡನ ಮಾನ ಉಳಿಸಲು ಕೊನೆಯ ಕ್ಷಣದಲ್ಲಿ ಹೇಳಬೇಕಾಯಿತು. ಇಂತಹ ಹಲವು ಮರವು ಪ್ರಕರಣದಿಂದ ಮನೆಯ ನೆಮ್ಮದಿ ಹಾಳಾಗಿ, ಮನೆಯಲ್ಲಿ ಯಾವಾಗಲೂ ಒಂದು ರೀತಿಯ ಬಿಗು ವಾತಾವರಣವೇ ಇರುತ್ತಿತ್ತು.

ಮನೆಗೆ ತಲುಪಿದ ಮಧು ಬೈಕಿನಲ್ಲಿದ್ದ ಎಲ್ಲಾ ಸಾಮಾನುಗಳನ್ನು ವರಾಂಡದಲ್ಲಿಟ್ಬು, ಟಿ.ವಿ. ಕಡೆಗೆ ಓಡಿದ. ಆದರೆ ಕರೆಂಟು ಕೈ ಕೊಟ್ಟಿತ್ತು. ಅವನಿಗೆ ನಿರಾಶೆಯಾಗಿ ಸೋಫಾದಲ್ಲಿ ಕುಳಿತು ಬಿಟ್ಟ. ಹೆಂಡತಿ ಬಂದೊಡನೆ, ತನ್ನ ಚೀಟಿಯನ್ನು ಅವಳ ಕೈಗಿತ್ತ. ಚೀಟಿಯಂತೆ ಒಂದೊಂದೇ ಸಾಮಾಗ್ರಿಗಳನ್ನು ರಶ್ಮಿ ಪರಿಶೀಲಿಸಿದಳು. ಅವರ ಕೊನೆಯ ಐಟಂ “ಕೋಳಿ ಮಾಂಸ” ಮಾಯವಾಗಿತ್ತು.

“ಎಲ್ರೀ ಕೋಳಿ ಮಾಂಸ”

ರಶ್ಮಿಯ ಪ್ರಶ್ನೆಗೆ ಅವನು ಉತ್ತರಿಸಲಿಲ್ಲ. ಸ್ವಲ್ಪ ಮೌನ. ಪುನಃ ಕರ್ಕಶ ಸ್ವರದಲ್ಲಿ ರಶ್ಮಿ ಕೇಳಿದಳು.

“ಎಲ್ರೀ ಕೋಳಿ?”

“ಸರಿಯಾಗಿ ಹುಡುಕೇ. ೧.೮೫ಂ ಕಿಲೋ ಇದೆ. ಸರಿಯಾಗಿ ತೂಕ ಮಾಡಿಸಿದ್ದೀನಿ ಗೊತ್ತಾ ? ಅವಳ ಉತ್ತರಕ್ಕೂ ಕಾಯದ ಅವನು ಫ್ರಿಜ್ ಕಡೆ ಹೋದ. ಬಾಯಾರಿಕೆ ನೀಗಿಸಲು. ಅದರೆ ಚೀಲದಲ್ಲಿ ಕೋಳಿ ಮಾಂಸದ ಕಟ್ಟೇ ಇರಲಿಲ್ಲ. ರಶ್ಮಿ ಉಗ್ರಕಾಳಿಯಾದಳು. ಈಗ ಮಧು ನಿಜ ಸ್ಥಿತಿಗೆ ಬರಬೇಕಾಯಿತು. ಅವನು ಎಲ್ಲಾ ಪ್ಲಾಸ್ಟಿಕ್ ಕಟ್ಟುಗಳನ್ನು ನೋಡತೊಡಗಿದ. ಆದರೆ ಕೋಳಿ ಮಾಂಸದ ಚೀಲ ಇರಲಿಲ್ಲ.

“ನೀವು ಇಲ್ಲಿಂದ ಹೋದ ಮೇಲೆ ಎಲ್ಲೆಲ್ಲಿ ಹೋದಿರಿ ಎಂದು ನೆನಪಿಸಿಕೊಳ್ಳಿ”

“ನಾನು ಸರಿಯಾಗಿ ಹಣ ಪಾವತಿಸಿ ಕಟ್ಟು ತೆಗೆದು ಕೊಂಡಿದ್ದೀನಿ”

“ಇನ್ನೊಮ್ಮೆ ಜ್ಞಾಪಿಸಿ”

ಮಧು ತುಂಬಾ ನಿಧಾನವಾಗಿ ಬೆಳಿಗ್ಗೆ ನಡೆದ ಘಟನೆಯನ್ನು ಮರು ಜ್ಞಾಪಿಸ ತೊಡಗಿದ. ಅವನು ಮೊದಲು ಹೋದದ್ದು ಕೋಳಿ ಅಂಗಡಿಗೆ. ಅಲ್ಲಿಂದ ತರಕಾರಿ ಅಂಗಡಿಗೆ. ಕೊನೇಯದಾಗಿ ಕಾಮತರ ಬೇಕರಿಗೆ. ಹೌದು. ತರಕಾರಿ ಅಂಗಡಿಯಲ್ಲಿ ಕೋಳಿ ಮಾಂಸದ ಚೀಲ ಕೆಳಿಗಿಟ್ಟು ತರಕಾರಿ ತುಂಬಿಸಿ ಸೀದಾ ಬೇಕರಿಗೆ ಬಂದದ್ದು ನೆನಪಾಯಿತು. ಹಾಗಾದರೆ ಕೋಳಿ ಮಾಂಸದ ಚೀಲ ತರಕಾರಿ ಅಂಗಡಿಯಲ್ಲಿಯೇ ಉಳಿಯಿತು. ಮಧು ಅಪರಾಧಿಯಂತೆ ತಲೆ ತಗ್ಗಿಸಿದ. ತಲೆಯೆತ್ತಿ ಹೆಂಡತಿಯ ಮುಖ ನೋಡಲು ಧೈರ್ಯ ಸಾಲಲಿಲ್ಲ. ಕರೆಂಟ್ ಬಂತಾದರೂ, ಟಿ. ವಿ. ಆನ್‌ಮಾಡಿ ಮ್ಯಾಚ್ ನೋಡಲು ಮನಸ್ಥೈರ್ಯ ಇರಲಿಲ್ಲ. ರಶ್ಮಿಯ ಮುಖದಲ್ಲಿ ಬೆಂಕಿಯಾಡುತ್ತಿತ್ತು.

“ಇನ್ನೇನು! ನನ್ನ ಕರ್ಮ. ಹೋಗಿ ತೆಗೆದುಕೊಂಡು ಬನ್ನಿ. ಇನ್ನು ಲೇಟಾದರೆ ಅಲ್ಲಿ ಉಳಿಯುವುದು ಕಷ್ಟ. ಹೋಗಿ ಹೋಗಿ ನಿಮ್ಮನ್ನು ಕಟ್ಟಿಕೊಂಡೆನಲ್ಲಾ ನನ್ನ ಪ್ರಾರಬ್ದ”

ರವಿವಾರದ “ಜೋಶ್” ಈಗಾಗಲೇ ಖಾಲಿಯಾಯಿತು. ಮಧು ಚಕಾರವೆತ್ತದೆ, ಬೈಕ್ ಸ್ಟಾರ್ಟ್ ಮಾಡಿ ಹೊರಟು ಬಿಟ್ಟ. ಹಿಂದೆ ಮನೆಗೆ ಬಂದಾಗ ಮಧ್ಯಾಹ್ನವಾಗಿತ್ತು .

ಇಂತಹ ಹಲವು ಪ್ರಕರಣಗಳು ವಾರಕ್ಕೆ ಒಂದಾದರೂ ನಡೆಯುತ್ತಲೇ ಇತ್ತು. ಮಧು ಎಷ್ಟೇ ಪ್ರಯತ್ನಪಟ್ವರೂ, ಜಾಗ್ರತೆ ವಹಿಸಿದರೂ, ಈ ಮರೆವಿನ ಗುಂಗಿನಿಂದ ಅವನಿಗೆ ಹೊರಬರಲಾಗಲಿಲ್ಲ. ಮಂಗಳೂರಿನಲ್ಲಿ ಅಗಾಗ್ಗೆ ನಡೆಯುವ “ಸ್ಮರಣ ಶಕ್ತಿ ಸೆಮಿನಾರ್” ಗೂ ಹೋಗಿಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಮೊನ್ನೆ ನಡೆದ ಇನ್ನೊಂದು ಸಣ್ಣ ಮರೆವಿನ ಹಗರಣವೂ ಇಷ್ಟೊಂದು ದೊಡ್ಡ ರಾದ್ಧಾಂತ ಆಗುತ್ತದೆ ಎಂದು ಅವನು ಭಾವಿಸಲಿಲ್ಲ.

ಎಂದಿನಂತೆ ಮಧು ಈ ಭಾನುವಾರವೂ ಮನೆಯಿಂದ ಲಿಸ್ಟ ಪಡೆದುಕೊಂಡು ಮಾರ್ಕೆಟ್‌ಗೆ ಹೋದ. ರಶ್ಮಿ ತನ್ನ ಚಪ್ಪಲಿಯನ್ನು ರಿಪೇರಿಗೊಸ್ಕರ ಪ್ಯಾಕ್ ಮಾಡಿ ಚೀಲದಲ್ಲಿಟ್ಟು “ಸ್ಪೆಶಲ್” ಆಗಿ ನೆನಪಿಸಿ ಕಳುಹಿಸಿದ್ದಳು. ಮಧು ಮೋಚಿ ಹತ್ತಿರ ಚಪ್ಪಲಿಯನ್ನು ಹೊಲಿಯಲು ಕೊಟ್ಟು, ಮಾರ್ಕೆಟ್‌ಗೆ ಹೋಗಿ ಎಲ್ಲಾ ಸಾಮಾಗ್ರಿಗಳನ್ನು ಖರೀದಿಸಿ, ಮನೆಗೆ ಬಂದ. ಲಿಸ್ಟ್ ಪರಿಶೀಲನೆಯಾಗಿ ಎಲ್ಲವೂ ಸರಿಯಿದೆ ಎಂದು ತಿಳಿದು ಹೆಂಡತಿಯ ಮುಖ ನೋಡಿ ಹೆಮ್ಮೆ ಪಟ್ಟುಕೊಂಡ. ಆದರೆ ರಶ್ಮಿ ಅತನನ್ನು ದುರುಗುಟ್ಟಿ ನೋಡುತ್ತಿದ್ದಾಗ ಏನೋ ಎಡವಟ್ಟಾಗಿದೆ ಎಂದು ತಿಳಿಯಿತು. ಆದರೆ ಏನು ತಪ್ಪಾಗಿದೆ ಎಂದು ಅವನ ಜ್ಞಾಪಕಕ್ಕೆ ಬರಲೇ ಇಲ್ಲ. ಎಷ್ಟೇ ತಲೆಕೆರೆದುಕೊಂಡರೂ ನೆನಪಾಗದು. ಪುನಃ ರಶ್ಮಿಯ ಮುಖ ನೋಡಲು ಧೈರ್ಯ ಸಾಲದೆ ಅವನು ಅಂಗಳದತ್ತ ನಡೆದ. ಅವನ ಹಿಂದೆಯೇ ದೌಡಾಯಿಸುತ್ತಾ ರಶ್ಮಿ ಬಂದಳು.

“ಎಲ್ರೀ ನನ್ನ ಚಪ್ಪಲಿ ಎಲ್ಲಿ?”

ಮೋಚಿ ಹತ್ತಿರ ಹೊಲಿಯಲು ಕೊಟ್ಟು ಬಂದವನು ಮತ್ತೆ ತಿರುಗಿ ಅಲ್ಲಿಗೆ ಹೋಗಲಿಲ್ಲ. ತಪ್ಪಿನ ಅರಿವಾದರೂ, ರಣರಂಗವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಅದು ಮದುವೆಗೆ ಹಾಕುವ ಚಪ್ಪಲಿಯಾಗಿದ್ದು, ನಾಳೆಯ ಮದುವೆಗೆ ಬೇರೆ ಒಳ್ಳೆಯ ಚಪ್ಪಲಿ ಇರಲಿಲ್ಲ. ಮಧು ಪುನಃ ಪೇಟೆಗೆ ಹೋಗಿ ಚಪ್ಪಲಿ ತಂದನಾದರೂ ರಶ್ಮಿಯ ಕೋಪ ಇಳಿಯಲಿಲ್ಲ. ರಾತ್ರಿ ಮಲಗುವಾಗಲಾದರೂ ಶಾಂತವಾಗಬಹುದೆಂದು ಮಧು ನಿರೀಕ್ಷಿಸಿದ್ದ. ಆದರೆ ಈ ಬಾರಿ, ರಾತ್ರಿ ಬೆಳಗಾದರೂ ಕೋಪ ತಣಿಯಲಿಲ್ಲ. ಮರುದಿನ ಮದುವೆಗೆ ಒಬ್ಬಳೇ ಹೋದ ರಶ್ಮಿ ಅಲ್ಲಿಂದ ತನ್ನ ತಾಯಿ ಮನೆಗೆ ಹೋದವಳು ತಿರುಗಿ ಬರಲಿಲ್ಲ. ಮಧುವಿಗೆ ಆತಂಕವಾಯಿತು. ರಶ್ಮಿಗೆ ಪೋನು ಮಾಡಿದ. ತನ್ನ ಮರೆವಿಗಾಗಿ ಕ್ಷಮೆ ಯಾಚಿಸಿದ. ಇನ್ನೊಮ್ಮೆ ಇಂತಹ ತಪ್ಪು ಮಾಡುವುದಿಲ್ಲ ಎಂದು ಭರವಸೆ ನೀಡಿದ. ಯಾವುದಕ್ಕೂ ರಶ್ಮಿ ಜಗ್ಗಲಿಲ್ಲ. ಪ್ರಕರಣಕ್ಕೆ ಸುಖಾಂತ್ಯ ನೀಡಲು ಅವಳ ತಂದೆ ತಾಯಿ ಪ್ರಯತ್ನಿಸಿದರು. ಅದೂ ಫಲಕಾರಿಯಾಗಲಿಲ್ಲ. ಪ್ರತೀ ದಿನ ಕಛೇರಿಯಿಂದ ಬಂದ ಮಧು ಹೆಂಡತಿಗೆ ಪೋನು ಮಾಡುತ್ತಿದ್ದ. ತನ್ನ ಏಕಾಂಗಿತನದ ಕಷ್ಟವನ್ನು ವಿಷದ ಪಡಿಸುತ್ತಿದ್ದ. ಯಾವುದಕ್ಕೂ ರಶ್ಮಿ ಕರಗಲಿಲ್ಲ. ನಿನ್ನೆ ಈ ಮರೆವಿನಿಂದಾಗಿ ನನಗೆ ಕೂಡಿ ಬಾಳಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಸಾರಿದಳು. ಅದರೂ ಮಧು ಗೋಗರೆಯುವುದು ನಿಲ್ಲಿಸಲಿಲ್ಲ. ಕೊನೆಗೊಂದು ಸವಾಲನ್ನು ರಶ್ಮಿ ಎಸೆದಳು. ಇದರಲ್ಲಿ ನೀನು ಗೆದ್ದೆಯಾದರೆ, ನಾನು ಯಾವುದೇ ಶರ್ತವಿಲ್ಲದೆ ಮನೆಗೆ ಹಿಂತಿರುಗುತ್ತೇನೆ ಎಂದಳು.

“ಏನದು ನಿನ್ನ ಶರತ್ತು?” ಮಧುವಿನ ಸ್ವರದಲ್ಲಿ ಉದ್ವೇಗ ಇತ್ತು.

“ಬರೇ ಸಿಂಪಲ್, ನಾನು ಹುಟ್ಟಿದ ದಿನಾಂಕ ಮತ್ತು ತಿಂಗಳು ಹೇಳಬೇಕು. ಅದೂ ಒಂದು ವಾರದೊಳಗೆ” ರಶ್ಮಿ ಗಂಭೀರವಾಗಿ ಹೇಳಿದಳು. “ಅಷ್ಟೇ ತಾನೇ ಬಿಡು, ಒಂದು ವಾರದೊಳಗೆ ಹೇಳುತ್ತೇನೆ.”

ಮಧು ಆತ್ಮ ಗೌರವಕ್ಕೆ ಬೇಕಾಗಿ ಉತ್ತರಿಸಿದನೇ ಹೊರತು ಅವನಲ್ಲಿ ಅಳುಕಿತ್ತು. ನಿಜವಾಗಿಯೂ ಅವನಿಗೆ ಅವಳ ಹುಟ್ಟದ ದಿನಾಂಕ ಹಾಗೂ ತಿಂಗಳು ಮರೆತು ಹೋಗಿತ್ತು. ಮದುವೆಯಾಗಿ “ಒಂದೂವರೆ ವರ್ಷ ಹತ್ತಿರವಾಗುತ್ತಿದ್ದು ಈ ಮಧ್ಯೆ ಒಮ್ಮೆ ಅವಳ ಬರ್ತ್‌ಡೇ ಅಚರಿಸಲಾಗಿತ್ತು. ಅದು ಸುಮಾರು ಕೆಲವು ತಿಂಗಳ ಹಿಂದೆ. ಆದರೆ ಯಾವ ತಿಂಗಳಲ್ಲಿ ಆಚರಿಸಲಾಗಿದೆ ಎಂದು ಎಷ್ಟು ತಲೆಕೆಡಿಸಿಕೊಂಡರೂ ಅವನಿಗೆ ನೆನಪಿಗೆ ಬರಲಿಲ್ಲ. ಕಛೇರಿಯಿಂದ ಮನೆಗೆ ಬಂದವನೇ ರಶ್ಮಿಯ ರೂಮಿನಲ್ಲೆಲ್ಲಾ ತಡಕಾಡಿದ. ಅವಳ ಡೈರಿ ಏನಾದರೂ ಸಿಗಬಹುದೇ ಎಂದು. ಆದರೆ ಅವನ ಗೃಹಚಾರಕ್ಕೆ ಯಾವುದೇ ಪುರಾವೆಗಳು ಮನೆಯಲ್ಲಿ ಸಿಗಲಿಲ್ಲ. ಕೊನೆಗೆ ಮಧುವಿಗೆ ನೆನಪಾದುದು ಪಟ್ಟಣದ ಪ್ರಖ್ಯಾತ ಜ್ಯೋತಿಷಿ ರಂಗಾಚಾರ್ಯ. ಅತಿ ಹುರುಪಿನಿಂದ ಮಧು ಜ್ಯೋತಿಷಿ ರಂಗಾಚಾರ್ಯರ ಬಳಿಗೆ ಹೋದನು. ಮಧುವಿನಿಂದ ಅವನ ಹೆಂಡತಿಯ ನಡತೆ, ಗುಣ, ರೂಪ, ಇಷ್ಪಪಡುವ ಬಣ್ಣ ಹವ್ಯಾಸ, ಅಸಕ್ತಿ, ವಿದ್ಯಾಭ್ಯಾಸ ಇತ್ಯಾದಿ ಮಾಹಿತಿ ಪಡೆದು, ಕೂಡಿಸು – ಕಳೆ – ಗುಣಿಸು ಲೆಕ್ಕ ಮಾಡಿ, ಪಂಚಾಂಗಗಳನ್ನೆಲ್ಲಾ ತಿರುವಿ ಹಾಕಿ ರಂಗಚಾರ್ಯರು ಗಂಭೀರವಾಗಿ ಹೇಳಿದರು.

“ನೋಡಪ್ಪ, ಹುಟ್ಟಿದ ದಿನಾಂಕ ಹಾಗೂ ತಿಂಗಳನ್ನು ನಿಖರವಾಗಿ ಹೇಳಲು ಆಗುವುದಿಲ್ಲ. ಆದರೆ ನಿಮ್ಮ ಹೆಂಡತಿಯ ರೂಪ, ಗುಣ, ಹವ್ಯಾಸ, ಸ್ವಭಾವ, ಆಸಕ್ತಿಗಳ ಆಧಾರದ ಮೇಲೆ ಮಕರ ರಾಶಿಯಲ್ಲಿ ಹುಟ್ಟಿರಬಹುದೆಂದು ಹೇಳಬಹುದು. ಆದರೆ ಇದಕ್ಕೂ ಗ್ಯಾರಂಟಿಯನ್ನು ಕೊಡಲಾಗುವುದಿಲ್ಲ”. ಮಧು ರಂಗಾಚಾರ್ಯರ ಶ್ರಮದ ಫಲಕ್ಕೆ ಪ್ರತಿಫಲ ನೀಡಿ, ಜೋಲು ಮೋರೆ ಹಾಕಿಕೊಂಡು ಮನೆಗೆ ಹಿಂತಿರುಗಿದ. ಈಗ ಅವನಿಗೆ ನೆನಪಿಗೆ ಬಂದದ್ದು ಗೆಳೆಯ ತುಕರಾಮ. ತುಕರಾಮ ತುಂಬಾ ಬುದ್ಧಿವಂತ. ಅವನ ಬಾಲ್ಯದ ಗೆಳೆಯ ಹಾಗೂ ಸಹಪಾಠಿ. ಓದುವುದರಲ್ಲಿ ಜಾಣ. ಈಗ ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್‌ವೇರ್ ಕಂಪನಿಯಲ್ಲಿ ಸೀನಿಯರ್ ಇಂಜಿನಿಯರ್. ಆದರೆ ಅವನು ಮಾತನಾಡಲು ಸಿಗುವುದು ರಾತ್ರಿ ಒಂದು ಗಂಟೆಯ ಮೇಲೆಯೇ. ಯಾಕೆಂದರೆ ಅವನಿಗೆ ಕಂಪನಿಯಲ್ಲಿ ಶಿಫ್ಟ್‌ನಲ್ಲಿ ಕೆಲಸ. ರಾತ್ರಿ ೧ಂ ಗಂಟೆಗೆ ಮಲಗುವ ಮಧು ಆದಿನ ೧ ಗಂಟೆ ರಾತ್ರಿವರೆಗೂ ಮಲಗಲಿಲ್ಲ. ಟಿ. ವಿ. ನೋಡುತ್ತಾ ಕುಳಿತು ಬಿಟ್ಟ. ಅವನ ಮನಸೆಲ್ಲಾ ರಾತ್ರಿ ಒಂದು ಗಂಟೆಯಾಗುವುದನ್ನೇ ಕಾಯುತಿತ್ತು. ರಾತ್ರಿ ೧ ಕ್ಕೆ ಸರಿಯಾಗಿ ತುಕರಾಮನಿಗೆ ಪೋನು ಮಾಡಿದ. ತುಕರಾಮ ಮಾತನಾಡಲು ಸಿಕ್ಕಿದ. ಉಭಯ ಕುಶಲೊಪರಿಯ ನಂತರ ಮಧು ತನ್ನ ಕತೆಯನ್ನು ವಿವರವಾಗಿ ತಿಳಿಸಿದ. ಕೊನೆಗೆ ರಶ್ಮಿ ಒಡ್ಡಿದ “ಸವಾಲಿನ” ಬಗ್ಗೆಯೂ ವಿವರಿಸಿದ. ಎಲ್ಲವನ್ನು ತಿಳಿದುಕೊಂಡ ತುಕರಾಮ ನಾಳೆ ರಾತ್ರಿ ಪೋನು ಮಾಡುತ್ತೇನೆ. ಖಂಡಿತ ನಿನ್ನೆ ಸಮಸ್ಯೆಯನ್ನು ಪರಿಹರಿಸುತ್ತೇನೆ. ಯಾವುದಕ್ಕೂ ನನಗೆ ಆಲೋಚಿಸಲು ಸಮಯ ಕೊಡು ಎಂದ. ಅಂದು ರಾತ್ರಿ ಮಧು ನೆಮ್ಮದಿಯಿಂದ ಮಲಗಿದ. ಮರುದಿನ ರಾತ್ರಿ ೧ ಗಂಟೆಗೆ ಸರಿಯಾಗಿ ತುಕರಾಮನ ಪೋನು ಬಂತು.

“ನೋಡು ಮಧು, ಕಳೆದ ವರ್ಷದ ಬರ್ತ್‌ಡೇ ದಿವಸ ನೀವಿಬ್ಬರು ಎಲ್ಲೆಲ್ಲಿಗೆ ಹೋಗಿರುವಿರಿ ಎಂಬ ಬಗ್ಗೆ ಆಲೋಚಿಸು. ಈ ಮಾಹಿತಿ ಅತೀ ಅಮೂಲ್ಯವಾದುದು”

ಮಧು ಸ್ವಲ್ಪ ಹೊತ್ತು ಅಲೋಚಿಸಿದ. ನಂತರ ಏನೋ ನೆನಪಾಯಿತು. ಅವನು ಈ ಆಲೋಚನೆ ಗಳಿಸಲು ತುಂಬಾ ಶ್ರಮ ಪಡಬೇಕಾಯಿತು.

“ನೆನಪು ಬಂತು ತುಕರಾಮ. ನಾವು ಮಧ್ಯಾಹ್ನದ ವರೆಗೆ ಮನೆಯಲ್ಲಿಯೇ ಇದ್ದೆವು. ಕೇಕ್ ಕಟ್ ಆದ ಮೇಲೆ ಸ್ವಲ್ಬ ಹೊತ್ತು ಟಿ. ವಿ. ಕಾರ್ಯಕ್ರಮ ನೋಡಿದೆವು ಮಧ್ಯಾಹ್ನದ ಊಟದ ನಂತರ ನಾವು ಸಂಜೆ ಸಿನಿಮಾಕ್ಕೆ ಹೋಗಿದ್ದೆವು. ರಾತ್ರಿ ಹಿಂತಿರುಗುವಾಗ ಹೊಟೇಲ್‌ನಲ್ಲಿ ಊಟ ಮುಗಿಸಿ ಬಂದೆವು. ಇಷ್ಟೇ ನಮ್ಮ ಕಾರ್ಯಕ್ರಮ.

“ನಿನಗೆ ಪಿಕ್ಚರ್ ಯಾವುದೂಂತ ನೆನಪಿದೆಯಾ? ಮತ್ತು ಯಾವ ಟಾಕೀಸು ಎಂದು ಕೂಡಾ ನೆನಪಿದೆಯಾ?”

“ಟಾಕೀಸು ನೆನಪಿದೆ. ಮತ್ತೆ ಅವಳ ಇಷ್ಟದ ಹಿಂದಿ ಚಿತ್ರ ಅದು. ಚಿತ್ರದ ಹೆಸರು “ಮುಹಬ್ಬತೇಂ” ತುಂಬಾ ಸಮಯದಿಂದ ಅದನ್ನ ನೋಡಬೇಕೆಂದು ಹೇಳುತ್ತಿದ್ದಳು. ಅಲ್ಲದೆ ಅದು ಕೊನೆಯ ಪ್ರದರ್ಶನ ಎಂದು ಬೋರ್ಡು ಹಾಕಿತ್ತು”

ಹಾಗಾದರೆ ನೀನೊಂದು ಕೆಲಸ ಮಾಡು. ಆ ಟಾಕೀಸಿನ ಮಾಲೀಕನಿಗೆ ಪೋನು ಮಾಡು ಮತ್ತು ಆ ಚಿತ್ರ ಕೊನೆಯದಾಗಿ ಓಡಿದ ದಿನಾಂಕ ಹಾಗೂ ತಿಂಗಳು ತಿಳಿದುಕೋ. ಆ ದಿನಾಂಕದಂದೇ ಹೆಂಡತಿಯ ಬರ್ತ್‌ಡೇ ದಿನಾಂಕ. ಓ. ಕೇ?”

“ರೈಟ್ ನಾಳೆಯೇ ಟ್ರೈ ಮಾಡಿ ತಿಳಿಸುತ್ತೇನೆ.”

ಮಧು ಆ ದಿನವೂ ಸುಖ ನಿದ್ದೆಗೆ ಹೋದನು. ಮರುದಿನ ಬಹಳ ಕಷ್ಟಪಟ್ಬು ಆ ಟಾಕೀಸಿನ ಮಾಲೀಕನ ಪೋನ್ ನಂಬ್ರ ಸಂಗ್ರಹಿಸಿದ ಮತ್ತು ಪೋನಿನಲ್ಲಿ ಸಂಪರ್ಕಿಸಿದ.

“ಆ ಚಿತ್ರ ಯಾವ ತಿಂಗಳಿನಿಂದ ಯಾವ ತಿಂಗಳ ವರೆಗೆ ಓಡಿದೆ ಎಂದು ಹೇಳಬಹುದು. ಅದಕ್ಕೂ ಸ್ವಲ್ಪ ವಾರಗಳ ಕಾಲಾವಕಾಶ ಬೇಕು. ಯಾಕೆಂದರೆ ನಮ್ಮ  ಮ್ಯಾನೇಜರ್ ಊರಲಿಲ್ಲ. ಅದರ ಕೊನೆಯ ದಿನಾಂಕವನ್ನು ಮಾತ್ರ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಆ ಚಿತ್ರ ಸುಮಾರು ತಿಂಗಳ ಹಿಂದೆ ಪ್ರದರ್ಶನವಾಗಿದೆ”.

ಟಾಕೀಸು ಮಾಲಿಕ ಬಹಳ ಬೇಜವ್ದಾರಿಯಿಂದ ಮತ್ತು ನಿರಾಸಕ್ತಿಯಿಂದ ಉತ್ತರಿಸಿದ. ಮಧುವಿಗೆ ಅವನ ಉತ್ತರದಿಂದ ತೃಪ್ತಿಯಾಗಲಿಲ್ಲ. ಅವನಿಂದ ಹೆಚ್ಚಿನ ಮಾಹಿತಿ ಸಿಗುವುದು ಅಸಾಧ್ಯವೆಂದು ಗೊತ್ತಾಯಿತು. ಮರುದಿನ ಅವನು ತುಕರಾಮನಿಗೆ ವಿಷಯ ತಿಳಿಸಿದ.

“ಆ ಸಿನಿಮಾ ಮಾಲೀಕನನ್ನು ಬಿಟ್ಟುಬಿಡು”

“ಮತ್ತೇನು ಮಾಡುವುದು ತುಕರಾಮ. ಈಗಾಗಲೇ ೫ ದಿವಸ ದಾಟಿತು. ಇನ್ನು ಎರಡೇ ದಿವಸ ಇದೆ”

ನೋಡು. ಕಳೆದ ವರ್ಷದ ಬರ್ತ್‌ಡೇಗೆ ರಾತ್ರಿ ಊಟ ಮಾಡಿದೆವು ಎಂದು ಹೇಳಿದೆಯಲ್ಲಾ. ಅಲ್ಲೇನು ನಡೆಯಿತು? ಮತ್ತೇನಾಯಿತು? ಸ್ವಲ್ಪ ನೆನಪು ಮಾಡಿ ಹೇಳು. ಏನಾದರೂ ಐಡಿಯಾ ಸಿಗಬಹುದು ಮಧು.

“ಮಣ್ಣು ಐಡಿಯಾ. ರಾತ್ರಿ ಊಟ ಮಾಡಿದೆವು. ಬಿಲ್ಲು ಕೊಟ್ಟೆವು ಮನೆಗೆ ಬಂದು ಮಲಗಿದೆವು ಅಷ್ಟೇ”. ಮಧು ನಿರಾಸೆಯಿಂದ ಹೇಳಿದ. ಸ್ವಲ್ಪ ಹೊತ್ತು ಏನೋ ಅಲೋಚನೆಯಲ್ಲಿ ಬಿದ್ದ ಮಧು ಮತ್ತೇನೋ ನೆನಪಿಸಿಕೊಂಡ. ಅವನಿಗೆ ಅ ಘಟನೆ ನಡೆದುದನ್ನು ನೆನೆಸಿಕೊಂಡು ನಗು ಬಂತು.

“ತುಕರಾಮ, ಅವತ್ತೊಂದು ಸಣ್ಣ ತಮಾಷೆ ನಡೆಯಿತು.”

“ಏನು-ಏನು ಹೇಳು.”

ಸಂಜೆ ಸಿನಿಮಾ ನೋಡಿ ಹೊರಬಂದಾಗ ನಮಗೆ ಹಸಿವಾಗಿತ್ತು. ಹಾಗೇ ಒಳ್ಳೆಯ ಸ್ಟಾರ್ ಹೊಟೇಲಿಗೆ ಊಟಕ್ಕೆ ಹೋದೆವು. ರಶ್ಮಿ ನನ್ನೊಂದಿಗೆ ಮೊದಲ ಬರ್ತ್‌ಡೇ ಆಚರಿಸುವುದು ತಾನೇ. ಅವಳಿಗೂ ಖುಷಿಯಾಗಲಿ ಎಂದು ದುಬಾರಿ ಹೊಟೇಲ್ ಅರಿಸಿದ್ದೆ. ಆದರೆ ಟಾಕೀಸ್‌ನಲ್ಲಿಯೋ ಯಾ ಸ್ಟಾಲಿನಲ್ಲಿಯೋ ನನ್ನ ಪರ್ಸ್ ಕಳೆದು ಹೋಗಿತ್ತು . ಬಹುಶಃ ಸ್ಟಾಲಿನಲ್ಲಿ ಕೋಲ್ಡ್‌ ಡ್ರಿಂಕ್ಸ್ ಕುಡಿದು, ಹಣ ಕೊಡುವಾಗ ಪರ್ಸ್ ಮರೆತು ಅಲ್ಲಿಟ್ಟೆನೋ, ಅಥವಾ ಥಿಯೆಟರ್ ಒಳಗೆ ಪಿಕ್-ಪಾಕೆಟ್ ಅಯಿತೋ ಗೊತ್ತಿಲ್ಲ. ಅಂತೂ ಹೊಟೇಲ್‌ನಲ್ಲಿ ನನ್ನ ಮಾನ ಹರಾಜು ಅಗುವುದರಲ್ಲಿತ್ತು.

“ಬಹಳ ಇಂಟ್ರೆಸ್ಟಿಂಗ್ ವಿಷಯ. ಮತ್ತೇನು ಮಾಡಿದೆ”?

“ಆ ಹೊಟೇಲ್ ಮ್ಯಾನೇಜರ್ ನನ್ನ ಪರಿಚಯದವರು. ಯಾಕೆಂದರೆ ನಮ್ಮ ಕಂಪನಿಯ ತಿಂಗಳ ಕಾನ್ಫೆರೆನ್ಸ್ ಅಥವಾ ಮೀಟಿಂಗ್ ಎಲ್ಲಾ ಅದೇ ಹೊಟೇಲಿನಲ್ಲಿ ನಡೆಯುತ್ತಿರುವುದರಿಂದ ಮ್ಯಾನೇಜರ್ ನನಗೆ ತುಂಬಾ ಸ್ನೇಹಿತರಾಗಿ ಬಿಟ್ಟಿದ್ದರು. ನಿಜ ವಿಷಯ ತಿಳಿಸಿದೆ. ಅವರು ನಕ್ಕು ನಿಧಾನ ಕಳಿಸಿಕೊಡಿ ಸಾರ್, ಅದಕ್ಕೇನಂತೆ ಅಂದರು. ಆದರೆ ಅಭಿಮಾನ ಬಿಡಲಿಲ್ಲ”.

“ನೀನೇನು ಮಾಡಿದೆ”

“ಬೈಕಿನ ಬಾಕ್ಸ್‌ನಲ್ಲಿ ಬ್ಯಾಂಕಿನ ಪಾಸ್ ಪುಸ್ತಕ, ಚೆಕ್ ಪುಸ್ತಕ ಯಾವಾಗಲೂ ಇರುತಿತ್ತು. ನಾನು ಬೈಕಿನಿಂದ ಚೆಕ್ ಬುಕ್ ತಂದು ಹೊಟೇಲಿನ ಮೊತ್ತಕ್ಕೆ ಚೆಕ್ ಬರೆದು ಕೊಟ್ಟೆ”

“ಎಷ್ಟು ಮೊತ್ತಕ್ಕೆ ಬರೆದ್ದೀ? ಅದೇನಾದರೂ ನೆನಪಿದೆಯಾ”

“ಇಲ್ಲ ಬಹುಶಃ ೫ಂಂ ರೂಪಾಯಿಯ ಒಳಗಿರಬೇಕು”

“ಗುಡ್. ನೀನು ಬೈಕಿನಿಂದ ಚೆಕ್ ಬುಕ್ ತೆಗೆದು ಕೌಂಟರ್ ಪೂಯಿಲ್ ನೋಡು. ಅಲ್ಲಿ ಹೊಟೇಲಿನ ಹೆಸರು, ಮೊತ್ತ ಗೊತ್ತಾಗುತ್ತದೆ. ಅದರಲ್ಲಿ ದಿನಾಂಕ ಇರುತ್ತದೆ. ಅದೇ ನಿನ್ನ ಹೆಂಡತಿಯ ಹುಟ್ಟಿದ ತಾರೀಕು. ಸರಿ ತಾನೇ”

“ಹೌದೌದು. ಈಗಲೇ ನೋಡುತ್ತೇನೆ ತುಕಾರಾಮ, ನಿನಗೆ ಮತ್ತೆ ಪೋನು ಮಾಡುತ್ತೇನೆ”.

ಮಧು ಪೋನು ಕೆಳಗಿಟ್ಟು ಬೈಕಿನ ಕಡೆಗೆ ಓಡಿದ. ಬೀಗ ತೆಗೆದು ಚೆಕ್‌ಲೀಫ್ ತಿರುಗಿಸಿದ. ಒಂದು ಏಳೆಂಟು ಕೌಂಟರ್ ಫ್ಯೋಲ್‌ಗಳಿದ್ದವು. ಅದರಲ್ಲಿ ಒಂದು ಹೊಟೇಲಿನ ಹೆಸರಿದ್ದು, ಮೊತ್ತ ರೂ. ೪೮೫/- ಬರೆದಿತ್ತು. ದಿನಾಂಕ ದಶಂಬರ ೩ಂ. ಮಧು ಸಂತೋಷ ತಡೆಯಲಾರದೆ ತುಕರಾಮನಿಗೆ ಪೋನು ಮಾಡಿ, ಧನ್ಯವಾದ ತಿಳಿಸಿದ. ಆ ದಿನ ದಶಂಬರ ೨೯. ಇನ್ನೂ ಒಂದು ದಿನ ಕಳೆದು ರಶ್ಮಿಗೆ ಪೋನು ಮಾಡಬೇಕು. ಅಲ್ಲಿಯವರೆಗೂ ಸುಮ್ಮನೆ ಇದ್ದು ಬಿಡುವುದು ಎಂದು ತೀರ್ಮಾನ ಮಾಡಿದ.

ದಶಂಬರ ೨೯ ರ ರಾತ್ರಿ ೧೨ ಗಂಟೆ ೧ ನಿಮಿಷಕ್ಕೆ ರಶ್ಮಿಗೆ ಮಧು ಪೋನು ಮಾಡಿ “ಹ್ಯಾಪಿ ಬರ್ತ್‌ಡೇ ರಶ್ಮಿ” ಎಂದು ಹೇಳಬೇಕೆನಿಸಿತು. ರಶ್ಮಿ ನಿದ್ದೆಯಲ್ಲಿದ್ದಳು. ಮೊಬೈಲ್ ರಿಂಗ್‌ಗೆ ಎಚ್ಚರವಾದಾಗ ಅವಳಿಗೆ ಆಶ್ಚರ್ಯವಾಯಿತು. ಹೌದು. ಸರಿಯಾದ ಸಮಯಕ್ಕೆ ಮಧು ಪೋನು ಮಾಡಿದ್ದ. ಅವಳಿಗೆ ಯಾರೂ ವಿಶ್ ಮಾಡಿರಲಿಲ್ಲ. ಮಧುವಿಗೆ ತಾನೇ ಮೊದಲು ವಿಶ್ ಮಾಡಬೇಕೆಂಬ ಆಸೆ ಇತ್ತು. ಅದಕ್ಕಾಗಿ ಅವನು ರಾತ್ರಿ ೧೨ ಗಂಟೆಯ ವರೆಗೂ ಕುಳಿತುಕೊಂಡಿದ್ದ. ಅವಳಿಗೆ ಒಂದು ಕಡೆ ಸಂತೋಷ. ತನ್ನ ಗಂಡ ನನ್ನ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾನೆ. ಅವನ ಪ್ರೀತಿಯ ಬಗ್ಗೆ ಅವಳಿಗೆ ಎಳ್ಳಷ್ಟೂ ಸಂಶಯವಿಲ್ಲ. ಅವನ ಮರೆವಿನ ಬಗ್ಗೆಯೇ ಅವಳಿಗೆ ಕೋಪ.

“ಥ್ಯಾಂಕ್ಯೂ ಮಧು, ನೀನಿನ್ನೂ ಮಲಗಿಲ್ಲವಾ” ನನ್ನ ಹುಟ್ಟಿದ ದಿನಾಂಕ ಹೇಗೆ ಗೊತ್ತಾಯಿತು?”

“ಅದೊಂದು ದೊಡ್ಡ ಕತೆ” ಮಧು ತಾನು ಒಂದು ವಾರ ಅನುಭವಿಸಿದ ಮಾನಸಿಕ ವೇದನೆ, ತುಮುಲ, ಉದ್ವೇಗ, ತನ್ನ ಮಿತ್ರ ತುಕರಾಮ ಮಾಡಿದ ಸಹಾಯ ಒಂದೊಂದನ್ನೇ ಎಳೆ ಎಳೆಯಾಗಿ ಬಿಡಿಸಿ ಹೇಳಿದ. ಎಷ್ಟು ಗಂಟೆ ಮಾತನಾಡಿದನೋ ಅವನಿಗೆ ಗೊತ್ತಾಗಲಿಲ್ಲ. ಅವನಿಗೆ ತಾನು ರಶ್ಮಿಯ ಹುಟ್ಟಿದ ದಿನಾಂಕ ಕಂಡು ಹಿಡಿದ ಸಂತೋಷ. ತನ್ನ ರಶ್ಮಿ ನನ್ನ ಮನೆಗೆ ಮರಳಿ ಬರುವ ಖುಷಿ, ಇದರಲ್ಲೇ ಎಲ್ಲಾ ನೋವನ್ನು ಮರೆತನು. ಅವನಿಗೆ ರಶ್ಮಿಯ ಯಾವ ತಪ್ಪೂ ಕಾಣಲಿಲ್ಲ. ಬದಲಾಗಿ ತಾನು ಪಟ್ಟ ಶ್ರಮದ ಬಗ್ಗೆಯೇ ಹೆಮ್ಮೆ.  ಕೊನೆಗೆ ತಾನು ಬೆಳಿಗ್ಗೆ ಬಂದು ಕರಕೊಂಡು ಹೋಗುವುದಾಗಿಯೂ ಭರವಸೆ ನೀಡಿದ. ರಶ್ಮಿಯ ಮನಸ್ಸು ಕರಗಿತು. ಅವಳಿಗೆ ಮಧುವಿನ ಗುಣ ನಡತೆಯ ಬಗ್ಗೆ ಸಂಶಯವಿರಲಿಲ್ಲ. ಆದರೆ ಅಗಾಗ್ಗೆ ಉಂಟಾಗುವ ಮರೆವಿನ ಬಗ್ಗೆ ಅವಳಿಗೆ ಕೋಪ. ರಶ್ಮಿ ಆಲೋಚಿಸತೊಡದಗಿದಳು. ಒಂದು ಹೆಣ್ಣಿಗಾಗಲೀ ಒಂದು ಗಂಡಿಗಾಗಲೀ, ಸರ್ವ ರೀತಿಯಲ್ಲಿ ಹೊಂದಾಣಿಕೆಯಾಗುವ ವರ ಅಥವಾ ವಧು ದೊರಕುವುದು ಕನಸಿನ ಮಾತು. ಹತ್ತು ಅಂಕಗಳಲ್ಲಿ ಹತ್ತು ಅಂಕವೂ ದೊರಕುವುದು ಸುಲಭವಲ್ಲ ಹಾಗೂ ಸಾಧ್ಯವೂ ಇಲ್ಲ. ಮಧುವಿನಲ್ಲಿ ಏನು ಕಮ್ಮಿಯಿದೆ? ಅವನು ಕುಡುಕನಲ್ಲ, ವ್ಯಭಿಚಾರಿ ಅಲ್ಲ, ಜೂಗಾರಿಕೋರ ಅಲ್ಲ. ಜವಬ್ದಾರಿ ರಹಿತ ಮನುಷ್ಯನಂತೂ ಅಲ್ಲ. ಮೇಲಾಗಿ ಸುರದ್ರೂಪಿ. ಅವನಿಗೆ ಪೂರ್ತಿ ಅಂಕಪಡೆಯಲು ಒಂದೇ ಒಂದು ಅಂಕದ ಕೊರತೆಯಿದೆ. ಅದೇ ಅವನ ಮರೆವು. ಆದರೆ ಈ ಎಲ್ಲಾ ಗುಣದೆದುರು ಅದು ನಗಣ್ಯ. ಪ್ರಪಂಚದಲ್ಲಿ ಎಂತೆಂತಹ ಗಂಡಸರಿದ್ದಾರೆ. ಸ್ವಾರ್ಥಿಗಳು, ಸ್ತ್ರೀ ಲಂಪಟರು, ಮೋಸಗಾರರು, ಕುಂಟರು, ಕುರುಡರು, ಕುಡುಕರು, ಹಲವು ತರದ ಕಾಯಿಲೆ ಪೀಡಿತರು ಎಲ್ಲಾ ಇದ್ದಾರೆ. ಇವರೆಲ್ಲಾ ಮದುವೆಯಾಗಿ ಜೀವನ ಸಾಗಿಸುವುದಿಲ್ಲವೇ? ಇವರ ಎಲ್ಲಾ ದುರ್ಗುಣಗಳನ್ನು ಸಹಿಸಿಕೊಂಡು, ಅವರನ್ನು ಸರಿ ದಾರಿಗೆ ತಂದು, ಅವರ ಕಷ್ಟ ಸುಖಗಳಿಗೆ ಹೆಗಲುಕೊಟ್ಟು ಜೀವನ ಸಾಗಿಸುವವರಿಲ್ಲವೇ? ಅಪಘಾತದಲ್ಲಿ ದೇಹದ ಭಾಗಗಳನ್ನು ಕಳಕೊಂಡರೂ, ಒಬ್ಬರಿಗೊಬ್ಬರು ಆಸರೆಯಾಗಿ ಬದುಕುವುದಿಲ್ಲವೇ? ಗಂಡನ ಸಂಬಳ ಜೀವನ ಸಾಗಿಸಲು ಸಾಕಾಗುವುದಿಲ್ಲ ಎಂದು ತಿಳಿದಾಗ, ಹೆಂಡತಿಯಾದವಳು ಉದ್ಯೋಗಕ್ಕೆ ಇಳಿಯುವುದಿಲ್ಲವೇ? ಗಂಡನ ವ್ಯಾಪಾರದಲ್ಲಿ ಜೊತೆಯಾಗಿ ಸಹಕರಿಸುವುದಿಲ್ಲವೇ? ತನ್ನ ಗಂಡನ ಒಂದು ಸಣ್ಣ ದೌರ್ಬಲ್ಯವನ್ನು ದೊಡ್ದದು ಮಾಡಿಕೊಂಡು ಅವರಿಗೆ ಒಂದು ವಾರ ಮಾನಸಿಕ ಹಿಂಸೆ ಕೊಟ್ಟೆನಲ್ಲಾ? ನನಗೆ ಕ್ಷಮೆಯಿದೆಯೇ?

“ಏನು ರಶ್ಮಿ? ಯಾಕೆ ಮೌನವಾಗಿಬಿಟ್ಟೆ”

“ಇಲ್ಲರೀ. ತಪ್ಪು ನನ್ನದೇ. ನಾನು ದುಡುಕಿ ಬಿಟ್ಟೆ. ನನ್ನನ್ನು ಕ್ಷಮಿಸಿ”

“ಇಲ್ಲ ರಶ್ಮಿ. ತಪ್ಪು ನನ್ನದೇ. ನನ್ನ ಮರೆವು”

“ನೀವು ಮಂದೆ ಹೇಳ್ಬೇಡಿ. ನಿಮ್ಮ ಮರೆವಿಗೆ ನಾನು ನೆನಪಾಗಿ ಸದಾ ನಿಮ್ಮೊಂದಿಗಿರುತ್ತೇನೆ. ಖುಷಿ ತಾನೇ? ನೀವು ಇಲ್ಲಿಗೆ ಬರಬೇಡಿ. ನಾನಾಗಿಯೇ ನಿಮ್ಮ ಮನೆ ಬಿಟ್ಟು ಬಂದಿದ್ದೇನೆ. ನಾನಾಗಿಯೇ ನಾಳೆ ಬೆಳಿಗ್ಗೆ ಮನೆಗೆ ಹಿಂದೆ ಬರುತ್ತೇನೆ. ನಾಳೆ ಕಛೇರಿಗೆ ರಜೆ ಹಾಕಿ ಬರ್ತಡೇ ಅಚರಿಸೋಣ”

“ಓ ಕೇ. ಗುಡ್‌ನೈಟ್”

“ಗುಡ್‌ನೈಟ್”

ಬೆಳಿಗ್ಗೆ ಎದ್ದವಳೇ ರಶ್ಮಿ ಹೊರಡುವ ಸಿದ್ದತೆ ಮಾಡಿದಳು. ಅವಳಿಗೆ ಒಂದು ನಮೂನೆಯ ಹೊಸ ಜೀವನ ಮಾಡುವಷ್ಟು ಸಂತೋಷ. ಎಷ್ಟು ಬೇಗ ಮಧುವನ್ನು ಸೇರುವೆನೋ ಎಂಬ ತವಕ. ರಾತ್ರಿ ಬೆಳಗಾಗುವುದರ ಒಳಗೆ ಮಗಳಲ್ಲಿ ಆದ ಬದಲಾವಣೆಯಿಂದ ತಂದೆ ತಾಯಿಗಳಿಗೂ ಸಂತೋಷವಾಯಿತು. ಬೆಟ್ಟದಂತಹ ಸಮಸ್ಯೆ ಮಂಜಿನಂತೆ ಕರಗಿ ಹೋಯಿತು. ರಶ್ಮಿ ತಂದೆ ತಾಯಿಯ ಅನುಮತಿ ಪಡೆದು ಮನೆಗೆ ಬಂದಳು. ಮನೆಗೆ ಬೀಗ ಹಾಕಿತ್ತು. ಮನೆಯಲ್ಲಿಯೇ ಇರುತ್ತೇನೆ ಎಂದವರು ಎಲ್ಲಿಗೆ ಹೋದರು ಎಂಬ ಆತಂಕ. ಅಲ್ಲಿ ಇಲ್ಲಿ ಹುಡುಕಾಡಿದರೂ ಮಧುನ ಪತ್ತೆಯಾಗಿಲ್ಲ. ಕೊನೆಗೆ ಸುಸ್ತಾಗಿ ರಶ್ಮಿ ಪೋನು ಮಾಡಿದಳು.

“ಹಲೋ ಮಧು, ಎಲ್ಲಿದ್ದೀರಿ, ನಾನಿಲ್ಲಿ ಮನೆಯ ಹೊರಗೆ ನಿಮ್ಮನ್ನು ಕಾಯುತ್ತಾ ಇದ್ದೇನೆ”

“ಹೋ! ಸಾರಿ ರಶ್ಮಿ. ನಾನು ರಜೆ ಹಾಕಿದ್ದು ಮರೆತು ಕಛೇರಿ ಕಡೆ ಹೋಗುತ್ತಾ ಇದ್ದೇನೆ. ಬೇಸರ ಪಡಬೇಡ. ಕೋಪ ಮಾಡಿಕೊಳ್ಳಬೇಡ. ಐದು ನಿಮಿಷದಲ್ಲಿ ಬಂದು ಬಿಟ್ಟೆ. ಅಲ್ಲೇ ಇರು. ಎಲ್ಲೂ ಹೋಗಬೇಡ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಡುಕಾಟ
Next post ಮಿಂಚುಳ್ಳಿ ಬೆಳಕಿಂಡಿ – ೧೩

ಸಣ್ಣ ಕತೆ

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ವರ್ಗಿನೋರು

  ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…