ಮೊನ್ನೆ ನನ್ನ ಲಗ್ನ ಪತ್ರಿಕೆ ನೋಡಿ, ಏನೇನೋ ಲೆಕ್ಕ ಮಾಡಿ, ನಮ್ಮಪ್ಪ “ಲೋ! ನಿನಗೆ ಮದುವೆಯಾಗಿ ವರ್‍ಷೂವರೆ ಆಯಿತು” ಎಂದು ಏನೋ ಮಾತಿನ ಮೇಲೆ ಮಾತು ಬಂದು ಎಂದರು. ನಮ್ಮ ಮನೆ ಪುರೋಹಿತರು, ವೆಂಕಣ್ಣನವರು, ಬೆರಳು ಮಡಿಸಿ, ಬೆರಳು ಬಿಚ್ಚಿ, “ನಮ್ಮ ರಾಯರಿಗೆ ಮದುವೆಯಾಗಿ, ಅಧಿಕಮಾಸವೂ ಸೇರಿಕೊಂಡರೆ, ಮುಂದಿನ ಚೌತಿಗೆ ವರ್ಷದ ಮೇಲೆ ಆರೂವರೆ ತಿಂಗಳು ಮೂರು ದಿನ ಆಗುತ್ತೆ” ಎಂದರು. ಆದರೆ ನನ್ನ ಲೆಕ್ಕಾಚಾರದಲ್ಲಿ, ತಾನು ಯಾವತ್ತು ‘ಕಾಣಿಕೆ’ ಎನ್ನುವ ಪದ್ಯ ಬರೆದೆನೋ, ಆ ದಿನದಿಂದ ಲೆಕ್ಕ, ಸುಮಾರು ಹದಿನೈದು ಇಪ್ಪತ್ತು ದಿನವಿರಬಹುದು ; ನನಗೆ ಮದುವೆಯಾಗಿ, ಸರಿಯಾಗಿ, ಇರಲಿ.

ನಮ್ಮ ಪುರೋಹಿತರ ಮಾತಿನ ಹಾಗೆಯೇ ವರ್ಷದ ಮೇಲೆ ಆರೂ ವರೆ ತಿಂಗಳು ಮೂರು ದಿನ ಆದರೂ, ಈಗ ಮೊನ್ನೆ ಹೋಗಿದ್ದುದೂ ಸೇರಿದರೆ, ನಾನು ನನ್ನ ಮಾವನ ಮನೆಗೆ ಹೋಗಿರುವುದು ಹದಿಮೂರು ಸಲವಾಗುತ್ತೆ. ಹಿಂದೆ ಹನ್ನೆರಡು ಸಲ ಹೋದವನು-ಹೋಗುವಾಗ ನಗುತ ನಗುತ ಹೋಗುವುದು, ಅಲ್ಲಿಂದ ಬರುವಾಗ ಸಿಡುಗುಟ್ಟುತ ಬರುವುದು ಹೀಗಾಗಿಹೋಗಿತ್ತು. ಅಲ್ಲಿ ಹೊತ್ತು ಹೊತ್ತಿಗೆ ಸರಿಯಾಗಿ ಹೊಟ್ಟೆಗೆ ಹಿಟ್ಟಿಲ್ಲ. ನಮ್ಮ ಅತ್ತೆಯವರೇನೊ ರುಚಿರುಚಿಯಾಗಿ ತಿಂಡಿ ಮಾಡಿ ಕಳುಹಿಸುವರು, ಅದರ ರೂಪ ನೋಡಿ, ಕಂಪನ್ನು ಕುಡಿದರೆ ತಿನ್ನ ಬೇಕೆಂದು ಆಸೆಯಾಗುವುದು. ಆದರೆ ತಿನ್ನಲು ಬೇಕಾಗಲಿಲ್ಲ. ಏಕೆಂದರೆ ನಾನು ಅಲ್ಲಿಗೆ ಹೋಗುವುದು ನನ್ನ ವಿಲಾಸಿನಿಗಾಗಿಯೇ, ಇಲ್ಲ ಅವರ ತಿಂಡಿಗಾಗಿಯೆ? ತಿಂಡಿ ಮಾತ್ರವಿದ್ದು ವಿಲಾಸಿನಿಯಿಲ್ಲದಿದ್ದರೆ, ಆ ತಿಂಡಿಯಲ್ಲಿ ತಾನೆ ಏನು ಸಾರವಿರುತ್ತದೆ? ಅವಳನ್ನು ಇರು ಎನ್ನೋಣ ಎಂದರೆ, ಅವಳ ಕೆಲಸಗಳೆಲ್ಲ ಹೆಂಗಸರ ಮನಸ್ಸಿನ ಹಾಗೆ-ಅಲ್ಲ, ಮಿಂಚಿನ ಹಾಗೆ, ಕಣ್ಣು ಮುಚ್ಚಿ ಕಣ್ದೆರೆಯುವಷ್ಟರಲ್ಲಿ, ನನ್ನ ಮುಂದೆ ತಿಂಡಿ ಹಾಜರಾಗಿರುವುದು, ಆದರೆ ಅವಳು ಮಾತ್ರ ಅಲ್ಲಿಲ್ಲ ! ತಿಂಡಿ ತಂದಿಟ್ಟವಳೇನೊ ಅವಳೆ. ನನಗೆ ಆ ತಿಂಡಿ ಕಂಡರೆ ಅಗಿದು ಉಗಿದ ಕಬ್ಬಿನ ಹೀದೆಯಂತೆ ಕಾಣುತ್ತಿತ್ತು-ರಸವು ಕೊಂಚವೂ ಇಲ್ಲದೆಯೆ, ಆದರೆ ‘ವಿಲಾಸಿಯನ್ನು ಕಳುಹಿಸಿ’ ಎಂದು ಹೇಳುವುದು ಹೇಗೆ ? ಹೀಗಾಗಿ, ಹೇಳುವುದಕ್ಕಿಲ್ಲ, ಹೇಳದಿರುವುದಕ್ಕಿಲ್ಲ ಈ ಸಂಕಟ. ನನಗೆ ಹೊಟ್ಟೆ ಗಿಲ್ಲ. ಮನಸ್ಸಿಗೆ ನೆಮ್ಮದಿಯಿಲ್ಲ. ಹನ್ನೆರಡು ಸಲವೂ ಹೀಗೆಯೇ ಆಯಿತು. ನಮ್ಮ ಅತ್ತೆಯವರು ಮಾತ್ರ ‘ಅಳಿಯಂದರ ರುಚಿ ಏನೋ ಎಂತೋ’ ಎಂದು ಒಂದೊಂದು ದಿನ ಒಂದೊಂದು ವಿಧ ಪಾಕಕ್ಕೆ ಮೊದಲು ಮಾಡಿ, ಕೊನೆಗೆ (ಇವರಿಗೂ ತಿಂಡಿಗೂ ದ್ವೇಷ’ ಎಂದು ತೀರ್‍ಮಾನಿಸಿ ಸುಮ್ಮನಾಗಿದ್ದರು. ಆದರೆ ನನ್ನ ಹೊಟ್ಟೆಯ ಅಳತೆ ನನ್ನ ಜತೆಯಲ್ಲಿ ಹೋಟಲಿಗೆ ಬಂದವರಿಗೆ ಗೊತ್ತು.

ಮದುವೆಯಾದ ತರುಣದಲ್ಲಿ ನನ್ನ ಉತ್ಸಾಹವೆಷ್ಟು! ಮೊದಲು ಮೊದಲು ವಿಲಾಸಿನಿಗೆಂದು ಸಿಲ್ಕ್ ತೆಗೆದುಕೊಂಡು ಹೋದೆ. ಅವಳನ್ನು ಮಾತನಾಡಿಸಲು ಸರಿಯಾದ ಸಮಯಾನುಕೂಲಗಳು ಸಿಕ್ಕದೆ ಆಶಾ ಭಂಗವಾಯಿತು. ವಸ್ತುತಃ ಅಲ್ಲದಿದ್ದರೂ, ಮನೆಯವರು ಬೇಕೆಂದು ಮಾತನಾಡುವುದಕ್ಕೆ ಅಡಚಣೆ ಮಾಡುತ್ತಿರುವಂತೆ ಭಾಸವಾಯಿತು. ಮತ್ತೇನು? ಹುಡುಗಿಯು ಬರುವುದೇ ಅಪರೂಪ. ಬಂದರೂ ನಿಲ್ಲುವುದು ಅಪರೂಪ. ನಿಂತರೂ ಜತೆಯಲ್ಲಿ ಅಕ್ಕ ತಂಗಿಯರ ಕಾವಲು. ನನಗೂ ಬಹಳ ಅಸಮಾಧಾನವಾಗಿ, ಕೊನೆಗೆ ತಂದಿದ್ದ ಸಿಲ್ಕನ್ನು ಅಂಗಡಿಗೆ ವಾಪಸು ಕೊಟ್ಟು ಬಿಟ್ಟೆ. ನಾನು ಓದಿ ಓದಿ ತೃಪ್ತಿ ಯಾಗದಿರುವ ಹಲವು ಸುಂದರವಾದ ಬರಹಗಳನ್ನು ಅವಳಿಗೆ ಓದಿಹೇಳಿ ಆನಂದಪಡಿಸಲೆಳಸಿ ಬಂದಿದ್ದ ನನ್ನ ಉತ್ಸಾಹದ ಪೂರ್ಣ ಪ್ರವಾಹವು ಒಮ್ಮೆಯೇ ಬತ್ತಿಹೋಯಿತು. ಹೀಗೆ ಮಾವನ ಮನೆಯಿಂದ ಹಿಂದಿರುಗುವಾಗ ಮನಸ್ಸಿಗೆ ಕರೆಕರೆಯಾದರೂ, ಪುನಃ ಹೋಗಬೇಕೆಂಬಾಸೆ ಮಾತ್ರ ತೊಲಗಲಿಲ್ಲ. ಪುನಃ ಪುನಃ ಹೋಗುವುದೇಕೆ–ತಿಳಿದೂ ತಿಳಿದೂ? ಬಂಡಿದ್ದೆಡೆ ಭ್ರಮರವೆರಗುವುದು. ಜೀವವಿರುವ ತನಕ ಮನುಷ್ಯನಿಗೆ ಆಸೆಯುಂಟು. ಆದ ಸಲವು ಈಗ ಕೊಂಚ ದಿನಗಳ ಕೆಳಗೆ-ಹದಿಮೂರನೆಯ ಸಲ ಬೆಂಗಳೂರಿನಿಂದ ಮಂಡ್ಯಕ್ಕೆ ಹೊರಟೆ.

ಬೆಂಗಳೂರು ಬಿಟ್ಟು ಮಂಡ್ಯವನ್ನು-ನನ್ನ ಮಾವನ ಊರುಸೇರುವವರೆಗೂ ದೇವಿಧ್ಯಾನವೇ!
* * * *

ಹಾಗೆ ಹೀಗೆ ಆಗಿ ಐದು ಗಂಟೆ ಸುಮಾರಿಗೆ ರೈಲು ಮಂಡ್ಯ ಸೇರಿತು. ಯಾವ ಮಹರಾಯ ಮಾಡಿದನೊ ಗಂಟೆಗೆ ಅರವತ್ತು ನಿಮಿಷ! ‘ಮಂಡ್ಯಾ ! ಮಂಡ್ಯಾ !’ ಎಂದ ಪೋರ್‍ಟರು. ನಾನು ಎದ್ದು ಪಂಚೆ ಕೋಟಿನ ಮೇಲಿರುವ ಧೂಳು ಒದರಿ, ವೇಷ ಸರಿಯಾಗಿದೆಯೆ ಎಂದು ರೈಲಿನ ಕಿಟಕಿಗೆ ಹಾಕಿರುವ ಕನ್ನಡಿಯಲ್ಲಿ ನೋಡಿಕೊಂಡು, ತಲೆ ಕೂದಲನ್ನು ಸವರಿಸಿ, ಗಂಟು ಕೈಯಲ್ಲಿ ಹಿಡಿದು, ರೈಲಿಳಿದೆ. ಟಿಕೀಟು ಕೊಡುವುದಕ್ಕೆ ಹೋದಾಗ, ಸ್ಟೇಷನ್ನು ಮಾಸ್ಟರು “ಓಹೋ! ಯಾವಾಗ ಬಂದಿರಿ?” ಎಂದು ಕೇಳಿ, ಇವರೆ ಸ್ವಾಮಿ ! ನಮ್ಮ ವೆಂಕಟರಾಯರ ಮಕ್ಕಳ ಅಳಿಯಂದಿರು” ಎಂದು ಪಕ್ಕದವರಾರಿಗೊ ನನ್ನ ಪರಿಚಯ ಮಾಡಿಕೊಟ್ಟರು. “ಹಾಗೆಯೆ!” ಎಂದು ಹಲ್ಲು ಕಿರಿದರು ಆ ಮಹಾಶಯರು. “ಷುರುವಾಯಿತಪ್ಪ ಇನ್ನು!” ಎಂದು ಕೊಂಡೆ.

ಸ್ಟೇಷನ್ನು ಮಾಸ್ಟರನ್ನು ಬೀಳ್ಕೊ೦ಡು, ಊರು ಸೇರಲು ಹೊರಟೆ; ದಾರಿಯಲ್ಲಿಯೇ ಮೊದಲಾಯಿತು. ಸುಬ್ಬಪ್ಪನವರ ಅಳಿಯಂದಿರು ಬಂದರು! ಯಾವಾಗ ದಯಮಾಡಿಸಿದ ಹಾಗೆ ಬುದ್ಧೀ?” ಎಂದು ಊರಿನ ರೈತರು ಮಾತನಾಡಿಸುತ್ತ ಬಂದರು. ಊರೊಳಕ್ಕೆ ಬಂದರೆ, ಅಲ್ಲಿಯ ಹೆಂಗಸರು “ಲ್ರೇ! ಬನ್ರೇ! ಶಾರದಮ್ಮ ನವರ ಅಳಿಯ ಬರ್‍ತಿದಾರೆ” ಎಂದದ್ದು ಕೇಳಿಸಿತು. ನಾನು ಸಾಮಾನ್ಯ ಸಂಕೋಚ ಪ್ರಕೃತಿಯವನಾದರೂ, ಈ ಊರಿನವರಿಗೆಲ್ಲ ನಾನು ಎಷ್ಟು ಮಾನ್ಯ, ನನ್ನ ಕಂಡರೆ ಇವರಿಗೆ ಎಷ್ಟು ಮಮತೆ, ಮರ್‍ಯಾದೆ, ಎಂದು ಹೆಮ್ಮೆ. ರೈತರ ಬಳಿ ಗಂಭೀರವಾಗಿ ಒಂದು ಗತ್ತಿನಿಂದ ಮಾತನಾಡುತ್ತ, ಮೈ ನೆಟ್ಟಗೆ ನಿಲ್ಲಿಸಿ ಪಟ್ಟದಾನೆ ಬರುವಂತೆ ತೂಗಿ ಬರುತ್ತಿದ್ದೆ. ಬರುಬರುತ್ತ ಚಿಕ್ಕ ಪುಟ್ಟ ಹುಡುಗಿಯರು “ಲೇ! ಸುಬ್ಬಿ! ಬಾರೆ. ವಿಲಾಸಿ ಗಂಡ ಬಂದ” ಎಂದುದು ಕಿವಿತಾಗಿತು. ನನಗೇಕೆ ಇದನ್ನು ಕೇಳಿ ಬಹಳ ಇದಾಗಿಹೋಯಿತು. ಭೂಮಿ ಪಾತಾಳಕ್ಕಿಳಿಯಿತು. ಮನೆಗಳ ಸೂರು ಮುಗಿಲೇರಿತು. ಬೆಟ್ಟದ ಬಳಿ ಸುಳಿವ ಇರುವೆಯಂತಾದೆ ನಾನು. ಕಣ್ಣಿಗೆ ಕಪ್ಪು ಕವಿದಿತು. ಹಾಗೆ ಹೀಗೆ ಮಾಡಿ, ಕಾಲೆಳೆದುಕೊಂಡು ಮನೆಯ ಬಳಿ ಬಂದೆ.

ಬಂದರೆ… ನಾನು ಇಂತಹ ರೈಲಿನಲ್ಲಿ ಬರುವೆನೆಂದು ವಿಲಾಸಿನಿಗೆ ಕಾಗದ ಬರೆದಿದ್ದೆ. ಮನೆಯ ಹತ್ತಿರ ಬಂದಾಗ, “ಕಿಟಕಿಯಲ್ಲಿ ನಿಂತು ಕಾಯುತ್ತಿರುತ್ತಾಳೆ ನನ್ನ ವಿಲಾಸ” ಎಂದು ಮನಮಾಡಿಕೊಂಡು, ಅವಳ ಕೊಠಡಿಯ ಕಿಟಕಿಕಡೆ ನೋಡಿದೆ. ಆ ಕಿಟಕಿಯ ಬಾಗಿಲು ತರೆದಿರುವುದೆ, ನನ್ನ ಆಸೆಗೆ ಜೀವವೆರೆದಂತೆ, ಆ ಕಿಟಕಿ ಬಾಗಿಲು ಮುಚ್ಚಿತ್ತು. ನನ್ನ ಉಲ್ಲಾಸವಡಗಿತು. ಪಕ್ಕದಲ್ಲಿ ತಿರುಗಿ ನೋಡಿದರೆ, ತಲೆ ತಗ್ಗಿಸಿ ಸೊಂಟದಲ್ಲೊಂದು ಕೊಡ ಹೊತ್ತು, ವಿಲಾಸಿನಿ ಕೊಳದ ಕಡೆ ಹೋಗುತ್ತಿದ್ದಾಳೆ! ಎಲ್ಲಿಂದ ಬಂದಳವಳು? ಹಿತ್ತಲ ಬಾಗಿಲಿನಿಂದ ಬಂದಿರಬೇಕು. ನನಗೆ ಮನಸ್ಸು ಕೆಟ್ಟಿತು-ನಾನು ಬರುತ್ತೇನೆ ಎಂದು ತಿಳಿದರೂ, ಇವಳು ಮಾತನಾಡಲು ನಿಲ್ಲದೆ, ಹೀಗೆ ಹೊರಟಿರುವಳಲ್ಲ ಎಂದು. ಜತೆಯಲ್ಲಿ ಬಂದಿದ್ದ ರೈತರನ್ನು ಕೂಡ ಮಾತನಾಡಿಸದೆ ಸರ್ರನೆ ಬೀದಿ ಹೊರಗಿನ ಚಿಕ್ಕ ಮನೆಯಲ್ಲಿ ಗಂಟೆಸೆದು, ಕುರ್‍ಚಿಯ ಮೇಲೆ ಕುಕ್ಕರಿಸಿಕೊಂಡೆ.

“ಥೂ! ಯಾಕೆ ಬಂದೆನೊ ಈ ಹಾಳೂರಿಗೆ!” ಎನ್ನಿಸಿತು … ನಾ ಬರುವುದೇತಕ್ಕೆ ? ವಿಲಾಸಿನಿಯನ್ನು ನೋಡುವುದಕ್ಕೆ, ಅವಳೊಡ ನಿರುವುದಕ್ಕೆ, ಅವಳೊಡನೆ ಮಾತನಾಡುವುದಕ್ಕೆ ಏನೂ ಇಲ್ಲದೆ ಭೂತ ಹಿಡಿದ ಪಿಶಾಚಿಯಂತೆ ಈ ಕೋಣೆಯಲ್ಲಿ ಕುಳಿತು ತಿಂಡಿ ತಿಂದು ನಿದ್ದೆ ಮಾಡುವುದಕ್ಕೆ? ಜೀವಕ್ಕೆ ಉಸಿರು ಹೇಗೊ, ಮಾವನ ಮನೆಗೆ ಹೆಂಡತಿ ಹಾಗೆ. ನಾನು ಹಿಂದೆ ಬಂದು ಬಂದು ಸುಸ್ತು ಅಂದಿದ್ದರೂ, ತಿರುಗಿ ಏಕೆ ಬರಬೇಕಿತ್ತು? ಮುಖ್ಯ ನನಗೆ ಬುದ್ದಿ ಇದ್ದರಲ್ಲವೆ!”… ನಾನು ಏಕೆ ಬರುತ್ತೇನೆ ಎನ್ನುವುದು ಆ ಹುಡುಗಿಗೆ ಗೊತ್ತಿಲ್ಲವೆ? ಗೊತ್ತಿದ್ದರೂ ಸಂಕೋಚ ಎನ್ನೋಣ. ಅನುಭವಸ್ತರು, ನಮ್ಮ ಅತ್ತೆ ಮಾವ, ಅವರಿಗಾದರೂ ‘ಅಳಿಯ ಏಕೆ ಬರುತಾನೆ ಹೀಗೆ ಮೂರು ಮೂರು ದಿನಕ್ಕೂ’ ಎಂತ ತೋಚಬೇಡವೆ!…. ಶುದ್ದ ಗೊಡ್ಡುಗಳಪ್ಪ, ಹಳ್ಳಿಯ ಗೊಡ್ಡುಗಳು. ನಾನೂ ಎಷ್ಟೋ ಹಿಂಟ್ (Hint) ಕೊಟ್ಟಿದ್ದೇನೆ . . . “ಇವನು ಸರಿಯಾಗಿ ತಿಂಡಿ ತಿನ್ನುವುದಿಲ್ಲ . . . ಉಟಮಾಡುವುದಿಲ್ಲ . . . ಏನೊ ಬೇಜಾರು ಪಟ್ಟು ಕೊಂಡಿದ್ದಾನೆ . . . ಏಕೆ? ಓಹೊ! ವಿಲಾಸಿ ಅವನ ಬಳಿ ಸರಿಯಾಗಿ ಮಾತನಾಡಿ ಓಡಾಡುವುದಿಲ್ಲ; ಅದಕ್ಕೇ!? … ಇಷ್ಟು ತಿಳಿಯುವುದಿಲ್ಲವಲ್ಲ ಇವರಿಗೆ . . . ಸಾಲದುದಕ್ಕೆ ಹಿಂದೆ ಒಂದು ಸಲ ಬೇಸಿಗೆ ರಜದಲ್ಲಿ, ನಮ್ಮ ಮಾವನವರಿಂದ ‘ಬಾ’ ಎಂದು ಕಾಗದ ಬಂದಿದ್ದರೂ, ವಿಲಾಸಿನಿ ಮೈಸೂರಿನಲ್ಲಿ ಅವಳ ದೊಡ್ಡಪ್ಪನ ಮನೆಯಲ್ಲಿದ್ದುದರಿಂದ, ಮಂಡ್ಯದಲ್ಲಿ ನನಗೇನು ಕೆಲಸ ಅಂತ ಏನೊ ಕುಂಟ ನೆವ ಹೇಳಿ ಹೋಗದೆ ಇದ್ದುದು ಅವರಿಗೆ ಗೊತ್ತಿದೆ. ಗೊತ್ತಾಗಿಯೂ ಹೀಗೆ ಮಾಡಿದರೆ ಏನು ಹೇಳೋಣ? ಇದನ್ನೆಲ್ಲಾ – ನಿಮ್ಮ ಮಗಳು ನನ್ನ ಹತ್ತಿರ ಕುಳಿತುಕೊಂಡು ಮಾತನಾಡುವುದಿಲ್ಲ’ ಅಂತ ಬಾಯಿಬಿಟ್ಟು ಹೇಳುವುದಕ್ಕಾಗುತ್ತದೆಯೇ ? ನಾಚಿಕೆಗೇಡು! ಅದು ಅವರವರೇ ತಿಳಿದು ಕೊಳ್ಳಬೇಕು. ಈ ಹಿಂದೆ ಬಂದಾಗಲೆಲ್ಲ ಸರಿಯಾಗಿ ಊಟಮಾಡಲಿಲ್ಲ, ತಿಂಡಿ ತಿನ್ನಲಿಲ್ಲ, ಇದೇಕೆ?’ ಅಂತ ಕೊಂಚವಾದರೂ ಯೋಚಿಸಲೇ ಬೇಡವೇ? … ನಾನು ಇಲ್ಲಿಗೆ ಬರೇ ತಿಂಡಿಗೆ ಬರುವುದಾದರೆ, ಈ ಮಂಡ್ಯದ ಮಾವನ ಮನೆಗೂ, ನಾನು ಬೆಂಗಳೂರಿನಲ್ಲಿ ದುಡ್ಡು ಕೊಟ್ಟು ಹೋಗುವ ಮಾವನ ಮನೆಗಳಿಗೂ ಏನು ವ್ಯತ್ಯಾಸ? . . . ನಮ್ಮ ಅತ್ತೆ
ಲಕ್ಷಣವಾಗಿ ನಮ್ಮ ಅಳಿಯಂದಿರ ರುಚಿ ಗೊತ್ತೇ ಆಗೋಲ್ಲ. ಏನು ಮಾಡಿದರೂ ಹೇಗೆ ಮಾಡಿದರೂ ಅವರಿಗೆ ಸರಿಯೆ ಬೀಳೋಲ್ಲ’ ಅಂತ ರಾಗ ಎಳಿತಾರೆ. ಯಾಕೆ ಸರಿಹೋಗಲ್ಲ ಅಂತ ಸ್ವಲ್ಪ ಬುದ್ದಿ ಉಪಯೋಗಿಸ ಬಾರದೆ? … ಆ ಹುಡುಗಿ ತಿಂಡಿ ತರುತ್ತಾಳಲ್ಲ-ನಿದಾನವಾಗಿ ಒಂದೆರಡು ನಿಮಿಷ ನಿಲ್ಲುತ್ತಾಳೆಯೇ? ಉಹು! ತರುತ್ತಾಳೆ, ಇಡುತ್ತಾಳೆ, ಮಿಂಚಿನ ಹಾಗೆ ಮರೆಯಾಗುತ್ತಾಳೆ. ಒಂದು ವೇಳೆ ನಿಂತಳು ; ಮಾತನಾಡಿಸುವ ಅಂದರೆ ಸುತ್ತ ಕಾವಲು. ಅವರೆದುರಿಗೆ ಮಾತನಾಡುವುದಕ್ಕುಂಟೆ? ಆಡಿದರೆ ತಾನೆ ನನಗೆ ಮಾನ ಉಳಿಯುತ್ತದೆಯೆ? . . . ಮುಖ್ಯ ನಾನು ಮಾಡಿದುದು ತಪ್ಪು ಕೆಲಸ. ಮದುವೆಗೆ ಮುಂಚೆ ಯಾರು ಯಾರೋ ಹೇಳಿದರು: “ಲೋ ! ಕಟ್ಟಿ ಕೊಳ್ಳೋದು ಕಟ್ಟಿ ಕೊಂಡೂ ಆ ಹಳ್ಳಿಯದನ್ನು ಯಾಕೊ ಕಟ್ಟಿಕೊಳ್ಳುತ್ತೀಯೆ?’ ಎಂದು. ಅವರ ಮಾತು ಕೇಳ ಬೇಕಾಗಿತ್ತು. ಹಿತಕ್ಕಾಗಿ ಹೇಳಿದವರು ಹೊಡೆದು ಹೇಳಿದರು ಎನ್ನುವ ಹಾಗೆ … ಮದುವೆ ಮಾಡಿಕೊಳ್ಳಬಾರದಾಗಿತ್ತು. ಮಾಡಿಕೊಂಡುದು ತಪ್ಪು, ಅಳಿಯತನದ ಗೌರವ ಹೊಗುತ್ತೆ … ದೂರ ಇದ್ದಷ್ಟೂ ಮರ್‍ಯಾದಿ ಹೆಚ್ಚು … ನನಗೂ ಸುಖ … ಬಂದ ತಪ್ಪಿಗೆ ಬೆಳಗಿನ ವರೆವಿಗೂ ಇದ್ದು ಬಿಟ್ಟು, ಬೆಳಿಗ್ಗೆ ಮೈಸೂರಿಗೆ ಹೋಗುವ ನೆವ ಹಾಕಿಕೊಂಡು, ಬೆಂಗಳೂರಿನಲ್ಲಿ ಗೂಡು ಸೇರಿಕೊಂಡರೆ, ಈ ಹೊಟ್ಟೆಗಿಲ್ಲದೆ ಒದ್ದಾಡಿ ಸಾಯುವ ಅವಸ್ಥೆ ತಪ್ಪುತ್ತೆ…

ಇಷ್ಟರಲ್ಲಿ ನಮ್ಮತ್ತೆಯವರು ಬಂದು ಮಾತನಾಡಿಸಿದರು. ಅವರನ್ನು ನೋಡಿದ ಮೇಲೆಯೂ ಸಿಡುಕಲು ಮೋರೆಯುಂಟೆ? ಅವರನ್ನು ನೋಡಿದರೆ ನಾನು ಎಳೆತನದಲ್ಲಿ ಕಳೆದುಕೊಂಡ ನನ್ನ ತಾಯಿಯ ನೆನಪುಂಟಾಗುತ್ತೆ. ಅದೇ ಮಾಧುರ್ಯ, ನಡೆನುಡಿಗಳಲ್ಲಿ ಅದೇ ಮಮತೆ, ತತ್ಕ್ಷಣ ನಗುಮುಖ ಮಾಡಿಕೊಂಡೆ. ಪರಸ್ಪರ ಕುಶಲಪ್ರಶ್ನೆಗಳಾಗು ತಿರುವಲ್ಲಿ ಒಳಗಿನಿಂದ ‘ಅಮ್ಮಾ!’ ಎಂಬ ದನಿ ಕೇಳಿಸಿತು. ಮೈ ಜುಮ್ಮೆಂದಿತು! ಸುಣ್ಣ ತೊಡೆದ ಗೋಡೆಯನ್ನು ಉದ್ದವಾದ ಉಗುರಿ ನಿಂದ ಕರೆಯುತ್ತಿದ್ದರೆ ಹೇಗಾಗುವುದೋ ಹಾಗಾಯಿತು. ವಿಲಾಸಿಯ ದನಿಯದು ! ನನ್ನ ಅಸಮಾಧಾನವೆಲ್ಲ ಉಷೆಯೆದುರಿನ ನಿಶಿಯಂತೆ ಮರೆಯಾಯಿತು. ಊರಿಗೆ ಹೋಗಬೇಕೆಂದಿದ್ದ ಯೋಚನೆ ಕಾಡಿಗೆ ಓಡಿಹೊಯಿತು.

ಈಗ ನಾನು ಹೇಳುವುದು ನನ್ನವಳೆಂಬ ಅಭಿಮಾನದಿಂದ ಹೇಳುವ ಮಾತಲ್ಲ. ಯಾರಾದರೂ ಓದಿದವರು – ಸರಿ ; ಕಡೆಗೆ ಏನಪ್ಪ ಏನು ಬೇಕಾದರೂ ಹೇಳಬಹುದು’ ಎಂದರೆ, ಅವರಿಗೆ ನಾನು ಹೇಳುವುದೊಂದು. ಒಂದೇ ಪ್ರಕೃತಿಯನ್ನು ಮಂದಿಯೂ ನೋಡುತ್ತಾರೆ, ಒಬ್ಬ ಕವಿಯೂ ನೋಡುತ್ತಾನೆ. ಆದರೆ ಕವಿಗೆ ಕಾಣುವ ಸೂಕ್ಷಾಂಶಗಳು, ಸೌಂದರ್‍ಯಾತಿಶಯಗಳು ಇತರರ ಕಂಗಳಿಗೆ ಅಗೋಚರವು. ಅಂತೆಯೆ ಒಂದೇ ವ್ಯಕ್ತಿಯನ್ನು ಕೂರ್ತವರು ನೋಡುವುದಕ್ಕೂ ಸಾಮಾನ್ಯರು ನೋಡುವುದಕ್ಕೂ ಅನಂತ ಅಂತರವಿದೆ. ನನ್ನ ವಿಲಾಸಿ ನನ್ನಷ್ಟೇ ಎತ್ತರವಿದ್ದರೂ, ಎತ್ತರಕ್ಕೆ ಸಮನಾದ ಗಾತ್ರ, ಲಾವಣ್ಯ ಲೇಪನವ ಪೂಸಿದ ಸುಧಾಕರನಂತಿರುವಳವಳು. ಕಾಂತಿಕಡಲೊಳು ಮಿಂದು ಹೊರಬಂದ ಸೂರಿಯನ ಸಮನಿಸುತ ಶೋಭಿಪಳು ಎನ್ನ ಲಲನೆ. ವಯೋನುಗುಣವಾಗಿ ಬಳೆದ ಸುಕುಮಾರ ದೇಹ, ಮುದ್ದಾದ ಮುಖ. ಚೆಲುವಾದ ಗಲ್ಲ. ಅವಳ ಕಂಗಳ ಕಾಂತಿ ಕಣ್ಣ ಕೊರಯಿಸುವ ಸೆಳೆಮಿಂಚಿನಂತಲ್ಲ; ರಮ್ಯಾರುಣೋದಯದ ಸಮಯದಲಿ, ಇನನ ಬರವನು ಕಂಡು, ದಳದ ಕದಗಳ ತೆಗೆದು, ಹೊರಗಿಣಿಕಿ ನೋಡುತ್ತಿರುವ ವನಸುಮದ ಸೊಬಗು. ನೋಡಿದಷ್ಟೂ ಇನ್ನೂ ನೋಡಬೇಕೆನ್ನಿಸುವುದು. ಅವಳು ನಕ್ಕಳೆನೆ, ಹೊಳೆವ ಹಲ್ಲಿನ ಕಾಂತಿ, ದನಿಯ ಆ ಮಾಧುರ್ಯ, ಎಳನಗೆಯ ಲಾವಣ್ಯ, ಕಂಗಳ ಚೆಲುವು, ಮುಖದ ಆವುದೋ ನೈಜವಾದ ಅನಿರ್ವಚನೀಯ ಸೌಂದರ್ಯ, ಇವೆಲ್ಲ ಸಮರಸವಾಗಿ ಕಲೆತು, ಅವಳ ಮುಖ ಎಳನೇಸರಂತ ಸತ್ವಸಾರಗುಣಪೂರ್ಣವಾಗುತ್ತಿತ್ತು. ಅವಳು ಹೆಜ್ಜೆ ಯಿಟ್ಟರೆ ಸಾಕು-ಕಾಲುಗೆಜ್ಜೆ ಯ ಸರವು ಮನವ ಮೋಹಿಸಿ ಸೆಳೆಯುತಿತ್ತು . . . (ಹೇಳಲಿಲ್ಲವೆ- ಇದು ಕೂರ್ತವರ ಕಣ್ಣಿನ ಬಣ್ಣನೆ ಯೆಂದು !) ಹೀಗೆಷ್ಟು ಹೊತ್ತು ಆರಾಧನೆಯ ಮೂರ್ತಿಯನ್ನು ನೆನೆಯುತ್ತಿದ್ದೆನೋ ಅರಿಯೆ. ಅವಳ ‘ಅಮ್ಮ’ ಎಂಬ ಶಬ್ದ ವೊಂದರಲ್ಲಿ ಓಂಕಾರದ ಸತ್ವವೆಲ್ಲ ಅಡಗಿತ್ತೆಂದು ತೋರುತ್ತದೆ.

ತಲೆಯೆತ್ತಿ ನೋಡಿದರೆ, ಎದುರಿನಲ್ಲಿ ಪ್ರತ್ಯಕ್ಷ ಮೂರ್ತಿ- ನನ್ನ ವಿಲಾಸಿ ! ತಟ್ಟೆ ಲೋಟ ಹಿಡಿದು ನಿಂತಿದ್ದಾಳೆ. ತಟ್ಟೆಯಲ್ಲಿ ದೋಸೆ. ಲೋಟದಲ್ಲಿ ಹಾಲು, ನಾನು ಮುಖ ನೋಡಿದೆನೋ ಇಲ್ಲವೊ-ನಾಚಿ ಕೊಂಡಳೆಂದು ತೋರುತ್ತೆ-ತಂದಿದ್ದುದನ್ನು ಮೇಜಿನ ಮೇಲಿಟ್ಟು, ಹೊರಡಲನುವಾದಳು. ಇನ್ನು ಬಿಟ್ಟರೆ ಸಿಕ್ಕಳು, ಸಾಲದುದಕ್ಕೆ ಜತೆಗಾರೂ ಇಲ್ಲ. ಈಗಲೆ ನಿಲ್ಲಿಸಿ ಮಾತನಾಡಿಸಬೇಕೆಂದು, ಇನ್ನೆಲ್ಲಿ ಹಾರಿ ಹೊಗುವಳೋ ಎಂಬ ಭಯದಿಂದ, ಅವಳು ಹೊರಡುವುದಕ್ಕೆಂದು ಹೆಜ್ಜೆ ಮುಂದಿಟ್ಟಾಗ, ಅವಳ ರೆಟ್ಟೆ ಹಿಡಿದುಕೊಂಡೆ.

“ಹಾ! ನೋಯುತ್ತ!” ಎಂದಳು.

ಮುಳ್ಳು ತುಳಿದಂತಾಗಿ, ಕೈ ಸಡಲಿಸಿ ನೋಡಿದೆ. ಅವಳ ಕೇದಗೆ ರಾಗದ ತೋಳಿನ ಮೇಲೆ ಕೆಂಪಗೆ ಬರೆಯೆಳೆದಂತೆ ನನ್ನ ಕೈಯ ಐದುಬೆರಳುಗಳ ಗುರುತು ಇತ್ತು. ವಿಲಾಸಿಯ ಕಣ್ಣಿನಲ್ಲಿ ನೀರು ತುಂಬಿ ಕೊಂಡಿತ್ತು. ಬಹಳ ನೋವಾಗಿದ್ದಿರಬೇಕು. ನನ್ನ ರಾಕ್ಷಸಿ ವರ್ತನೆಯಿಂದ ನನಗೆ ನಾಚಿಕೆಯಾಯಿತು.

“ವಿಲೂ! ನೋವಾಯಿತೆ?” ಎಂದೆ.

ವಿಲಾಸಿ ನೆಲ ನೋಡುತ್ತ ಸುಮ್ಮನಿದ್ದಳು.

“ನೋಡು . . . ನಿನ್ನ ಕೂಡ ಮಾತಾಡಬೇಕೆಂದು . . . ಬಹಳ ಆಸೆ… ಇವತ್ತು … ನಿಲ್ಲಿಸಿಕೊಳ್ಳೋಣ . . . ಇಲ್ಲದಿದ್ದರೆ ಓಡಿ ಹೋಗುತ್ತಾಳೆ . . . ಎಂತ ನಿಲ್ಲಿಸಿಕೊಂಡೆ . . . ಪಾಪ ! . . . ನೋವಾಯಿತೆ ? … ನೋವುಮಾಡಬೇಕು ಅಂತ ಹಾಗೆ ಮಾಡಲಿಲ್ಲ . . .” ಎಂದೆ. ಮಾಡಬಾರದುದನ್ನು ಮಾಡಿದವನಂತಿತ್ತು ನನ್ನ ಸ್ಥಿತಿ.

ವಿಲಾಸಿ ಎರಡು ಮೂರು ಸಲ ಉಗುಳು ನುಂಗಿ, ನೋಟ ಕೆಳಗಿದ್ದಂತೆಯೇ “ನೀವೇ . . . ನಿಂತುಕೋ ಎಂದಿದ್ದರೆ … ನಿಲ್ಲುತ್ತಿದ್ದೆ …” ಎಂದಳು.

ಮುಳುಗುವವನಿಗೆ ಓಡೆ ದೊರೆತಂತಾಗಿ “ಹಾಗಾದರೆ . . . ಈಗ ನಿಲ್ಲುತ್ತೀಯ ?” ಎಂದೆ. ನನ್ನ ಕಣ್ಣೆಡೆದು ಬರುತ್ತಿತ್ತು ಒಳಗಿನ ಆಸೆ.

“ನಿಲ್ಲು ಅಂತ ನೀವು ಹೇಳಿದರೆ . . .”

“ನಿಂತು … ನಿಂತು … ನನ್ನ ಜತೇಲೆ ತಿಂಡಿ ತಗೆದುಕೊಳ್ಳುತ್ತೀಯ?” ಮನುಷ್ಯನಿಗೆ ಅತಿ ಆಸೆ!

“ನೀವು ಕೊಟ್ಟರೆ … ಬೇಡ ಎನ್ನಲೆ?”

ಅದೇನೊ ಸ್ವರ್ಗ ಅಂತಂತಾರಲ್ಲ-ಅಲ್ಲಿಗೂ ನನಗೂ ಅರ್ಧ ಹಂಚಿ ಕಡ್ಡಿ ದಾಯ . . .

“ಆ ಬಾಗಿಲು ಮುಚ್ಚಿ ಬಾ ಹಾಗಾದರೆ?”

ವಿಲಾಸಿನಿ ಬಾಗಿಲಿಕ್ಕಿ, ಸೆರಗು ಸರಿಪಡಿಸಿಕೊಂಡು, ಹತ್ತಿರ ಬಂದು ನಿಂತುಕೊಂಡಳು. ‘ಕುಳಿತುಕೊ’ ಎಂದೆ. ಬಹು ಸಂಕೋಚದಿಂದ ಸೀರೆ ಮುದುರಿಕೊಂಡು ಪಕ್ಕದಲ್ಲಿ ಕುಳಿತವಳು ಹತ್ತಿರಕ್ಕೆ ಸರಿದು ಬಂದಳು. ಸಾಮೀಪ್ಯದಿಂದ ಸಂಕೋಚ ತೊಲಗಿ ಸಲುಗೆಯುಂಟಾಯಿತು.
ಅವಳ ಕಣ್ಣಿನಲ್ಲಿ ನೀರು ಹಾಗೆಯೇ ಇತ್ತು. “ನೋಡು ! ಕಣ್ಣೀರು ಇನ್ನು ಹಾಗೆಯೇ ಇದೆಯಲ್ಲ. ಎಲ್ಲಿ?” ಎಂದು ಅವಳ ಕಣ್ಣು ಒರಸುವುದಕ್ಕೆ ಹೋದಾಗ, ನನ್ನ ಕೈಗವಳ ಕೆನ್ನೆ ಸೋಕಿತು. ಹೊಸ ಕುಸುಮಗಳ ಬುಟ್ಟಿಯಲ್ಲಿ ಕೈಯಿಡುವೆನೆಂದು ನಾನೆಣಿಸಿರಲಿಲ್ಲ!

ಈ ನೂತನ ಅನುಭವದ ಸಲುವು ಅವಳ ಮುಖ ನೋಡಿದೆ. ವಿಲಾಸಿಯು ಲಜ್ಜೆಯಿಂದ ತಲೆಬಾಗಿಸಿದಳು. ಅವಳ ಮುಖ ಆರಕ್ತವಾಯಿತು! ಜ್ಯೋತಿಗೆ ಜ್ಯೋತಿ ಬೆರೆದಂತಾಯಿತು. ಕೊರಲೊಂದು ಕಡೆ ಕೊಂಕಿಸಿ, ನೆಲ ನೋಡುತ್ತ ಕುಳಿತಿದ್ದಳು. ಅವಳ ಕೆಂಪಾದ ಬೆವರಿರುವ ಮುಖವನ್ನೂ, ಮುಖಕ್ಕಿಂತ ಕೆಂಪಾದ ತುಟಿಗಳನ್ನೂ, ತೆಳ್ಳಗೆ ಬೆಚ್ಚಿರುವ ಅರಿಸಿನದಿಂದಲಂಕೃತವಾದ ಅರ್ಧ ವೃತ್ತಾಕಾರದ ಹೊಂಬಣ್ಣದ ಕೆನ್ನೆಗಳನ್ನೂ, ಮುಖಕ್ಕೆ ಸಿಂಗರಿಸಲು ಕಟ್ಟಿದ ಕುಚ್ಚುಗಳಂತಿದ್ದ ಉಂಗುರ ಕುರುಳುಗಳನ್ನೂ ನೋಡಿದೆ. ಕಿಟಕಿಯಿಂದ ಹರಿದು ಬರುತ್ತಿದ್ದ ಸಂಧ್ಯಾ ಸೂರ್‍ಯನ ಬೆಳಕು ಅವಳ ಮುಖದ ಮೇಲೆ ಬಿದ್ದು ಚಿನ್ನಕ್ಕೆ ಪುಟ ವಿಟ್ಟಂತಿತ್ತು. ಹೀಗೆಷ್ಟು ನೋಡಿದರೂ, ನೋಡಿ ನೋಡಿ ತಣಿಯದೆ, ಏನನ್ನೋ ಭಾವಿಸಿ “ವಿಲಾಸಿ!” ಎಂದೆ.

ಸಂಜೆವೆಣ್ಣು ಮರೆಯಾಗುತ್ತಿರುವಾಗ, ನೀಲದೆಡೆಯಲ್ಲಿ, ಮೋಡದ ಅಂಚಿನ ಮರೆಯಿಂದ ಹೊರಗೆ ತಲೆಹಾಕಿ ನೋಡುವ ಚುಕ್ಕಿಯಂತೆ, ವಿಲಾಸಿ ಮೆಲ್ಲಗೆ ತಲೆಯೆತ್ತಿ “ಏನು?” ಎಂದಳು.

ನನ್ನ ಕೈಲಿದ್ದ ದೋಸೆಯ ಚೂರೊಂದು ತಟ್ಟೆಯೊಳಗೆ ಬಿತ್ತು. ಬಾಗಿಲ ಕಡೆ ನೋಡಿದೆ. ಬಾಗಿಲು ಹಾಕಿತ್ತು.

“ವಿಲಿ! ದೇವಸ್ಥಾನದಲ್ಲಿ ದೇವರಿಗೆ ಹಣ್ಣು ಕಾಯಿ ಒಪ್ಪಿಸ ಬೇಕಾದರೆ ಏನು ಮಾಡುತ್ತಾರೆ?”

“ಏನು ಮಾಡುತ್ತಾರೆ?”

“ಏನು ಮಾಡುತ್ತಾರೆ? ಹೇಳು?”

“. . . . . . .”

“ಪೂಜೆ ಮಾಡುವುದಕ್ಕೆ ಕಾಣಿಕೆ ಕೊಡುತ್ತಾರಷ್ಟೆ?”

“ಹೌದು, ಕೊಡುತ್ತಾರೆ.”

“ಕೊಡುತ್ತಾರೆ. ಸರಿ, ಈಗ … ನೋಡು … ನೀನು ತಂದಿರುವ ಈ ದೋಸೆ ಹಾಲು ನಾನು ತೆಗೆದುಕೊಳ್ಳಬೇಕಾದರೆ ನೀನು ನನಗೆ ಕಾಣಿಕೆ ಕೊಡಬೇಕು.”

ವಿಲಾಸಿ ತಲೆ ತಗ್ಗಿಸಿದವಳು, ಮರುನಿಮಿಷದಲ್ಲಿಯೇ ನನ್ನ ಕಡೆ ನೋಡಿ, ‘ಆಗಬಹುದು’ ಎಂಬಂತೆ ಮುಖ ಮಾಡಿದಳು.

ಈ ಬಾರಿ ತೋಳು ಸೆಳೆದುದಕ್ಕೆ ಉಸಿರೆತ್ತಲಿಲ್ಲ. ಉಷೆಯಲ್ಲಿ, ಮೇಲೆ ನಿಂತಿರುವ ಹಿಮಕಣಗಳು ಇಂಗಿ, ಸೂರ್‍ಯಕಿರಣ ಸ್ಪರ್‍ಶದಿಂದ ಸುಖೋಷ್ಣತೆಯಾಂತ ಪಾರಿಜಾತ ಪುಷ್ಪಗಳ ದಂಡೆಯು ನನ್ನ ತುಟಿ ಗಳಿಗೆ ಸೋಕಿದಂತಾಯಿತು … ಕಣ್ಮುಚ್ಚಿದೆ … ಕಣ್ದೆರೆದು ನೋಡುವೆನೆ, ನನ್ನ ತೆಕ್ಕೆಯೊಳಡಗಿ ನನ್ನೊಡನೆ ನಾನಾಗಿಯೇ ಇದ್ದಳು ನನ್ನ ನಲ್ಲೆ.

ನಮ್ಮೀ ಭಾವಪರವಶತೆಯು ತಿಳಿದನಂತರದಲ್ಲಿ “ಸ್ವಲ್ಪ ತಡೆ, ವಿಲಾಸ” ಎಂದು ಎದ್ದು ಒಂದು ಕಾಗದದಲ್ಲಿ “ಕಾಣಿಕೆ” ಎಂಬ ಪದ್ಯವನ್ನು ಬರೆದು, ಅವಳಿಗೆ ಓದಿ ಹಾಡಲು ಹೇಳಿಕೊಟ್ಟೆ.

ಕೊನೆಗೆ ವಿಲಾಸಿ, “ಹಿಂದೆ ಬಂದಾಗಲೆಲ್ಲ ಉಪ್ಪಂತ ಗಡಿಗೆ ಮುಖ ಮಾಡಿಕೊಂಡಿದ್ದವರಿಗೆ ಈ ಸಲ ಏನು ಇಷ್ಟು ಸುಮ್ಮಾನ? ” ಎಂದಳು.

“ನಿನ್ನ ಹತ್ತಿರ ಮಾತನಾಡಿ ಕಾಣಿಕೆ ವಸೂಲು ಮಾಡುವುದಕ್ಕೆ ಇಷ್ಟು ಹೆಣಗಾಡಬೇಕಾಯಿತು.”

“ಅಬ್ಬಾ! ಅದಕ್ಕೆ ಇಷ್ಟು ಆವಟವೆ? ಯಾಕಪ್ಪಾ ಇವರು ಹೀಗೆ ಎಂತಿದ್ದೆವು ನಾವೆಲ್ಲ! ಈ ಕಾಣಿಕೆ ನಿಮಗಲ್ಲದೆ ಇನ್ಯಾರಿಗೆ? ಮೊದಲೇ ಬಾಯಿಬಿಟ್ಟು ಕೇಳಿದ್ದರೆ . . . ”

“ಓಹೋ ! ಕೇಳಬೇಕಾಗಿತ್ತೇನೋ!”

“ಇಲ್ಲ ಮತ್ತೆ! ಗೊತ್ತಿಲ್ಲವೆ ನಿಮಗೆ? ಮೇಲೆ ಬಂದು ಬಿದ್ದ … ಗೊತ್ತಿದೆ ತಾನೆ ?”

“ಗೊತ್ತಿದೆ.”
* * * *

ರಾತ್ರಿ ಅಡುಗೆಯ ಮನೆಯಲ್ಲಿ ನಮ್ಮ ಅತ್ತೆಯವರು ಯಾರ ಹತ್ತಿರವೋ ಹೇಳುತ್ತಿದ್ದರು-ಬಹುಶಃ ನಮ್ಮ ಮಾವನವರ ಹತ್ತಿರವಿರಬಹುದು: “ಅಲ್ಲ ಅಂದ್ರೆ, ನನಗಿಷ್ಟು ತಿಳಿಯಲಿಲ್ಲವಲ್ಲ. ಸಾರ್ಥಕ ವಾಯ್ತು-ನಾನೂ ಮಕ್ಕಳನ್ನು ಹೊತ್ತು ಹೆತ್ತು ಸಾಕಿದ್ದಕ್ಕೆ, ಇದುವರಿವಿಗೆ ನನಗೆ ತೋಚಲೇ ಇಲ್ಲವಲ್ಲ-ಏಕೆ ಇವರು ಹೀಗೆ ಮಾಡ್ತಾರೆ ಅಂತ. ಅಯ್ಯೋ ನನ್ನ ಬುದ್ದೀನೆ…?”

“ನಿನಗೆ ಮುಂಚೆ ಬುದ್ದಿಯಿದ್ದರಲ್ಲವೆ, ನೀನು ಅಯ್ಯೋ ನನ್ನ ಬುದ್ದೀನೆ” ಅಂತ ರಾಗ ಎಳಿಯುವುದಕ್ಕೆ !?” ಎಂದ ಹಾಗಿತ್ತು ನಮ್ಮ ಮಾವನವರು.
*****