ಮೈ ಝುಮ್ಮಾಗುವ ಸುಳ್ಳು

ಮೈ ಝುಮ್ಮಾಗುವ ಸುಳ್ಳು

ರಘುವೀರನು ನನ್ನ ಗೆಳೆಯ, ನಮಗೆ ಪರಿಚಯವಾದುದು ಮೊದಲು ಲೇಖನಿಯಿಂದ, ಅವನು ಸಂಪಾದಕನು. ನಾನು, ‘ಸಂಪಾದಕ’ರೆಂಬವರನ್ನು ಪ್ರೀತಿಯಿಂದ ನೋಡುವವನು. “ಹೃದಯರಂಜನ” ಪತ್ರಿಕೆಯನ್ನು ರಘುವೀರನು ಆರಂಭಿಸಿದ ಮೇಲೆ ನಮ್ಮ ಪರಿಚಯವೂ ಫಕ್ಕನೆ ಉಂಟಾಗಿ, ಕೆಲವೇ ಕಾಲದಲ್ಲಿ ಬಲವಾಯಿತು. ಈಗ ರಘುವೀರನು ‘ಸಂಪಾದಕ’ನಲ್ಲ; “ಭೂತಪೂರ್ವ….”ವಾಗಿದ್ದಾನೆ. ಅವನ “ಹೃದಯರಂಜನ”ವು ಹೃದಯಭೇದಕವೆನಿಸುವಂತೆ ಹುಟ್ಟಿದ ದಿನವೇ ಸತ್ತಿತೆಂಬುದು ದುಖಃಪೂರ್ಣವಾದ ‘ಬಹಿರಂಗ ರಹಸ್ಯ.’

ನಿಂತು ಹೋಗಲು ಕಾರಣವೇನು? –
(೧) ಕನ್ನಡಿಗರ ಆದರದ ಅಭಾವ
(೨) ಆರ್ಥಿಕ ದುರ್ದಶೆ
(೩) ಪ್ರಚಾರ ಕಾರ್ಯದ ಅಪೂರ್ಣತೆ
(೪) ಪತ್ರಿಕೆಯು ಆಕರ್ಷಕವಾಗಿಲ್ಲದಿರುವದು

– ಇವು ಒಂದು ಪ್ರತಿಕೆಯ ‘ಅಕಾಲ ನಿಧನ’ಕ್ಕೆ ಕಾರಣವೆಂದು ನಿಮ್ಮ ತರ್ಕವಿರಬಹುದು. ಆದರೆ, ರಘುವೀರನ ಪತ್ರಿಕೆಯ ಅವಸಾನವು ಆತನ ದುಂದುವ್ಯಯದಿಂದಲೇ ಉಂಟಾಯಿತು.

ಹೇಗೆ? – ಒಂದು ಉದಾಹರಣೆಯೇ ಇದು.

ಪತ್ರಿಕೆಗೆ ಚಂದಾದಾರರನ್ನು ಕೂಡಿಸಲು ಆತನು ಸರ್ವೋತ್ತಮನೆಂಬವನ ಸಹಾಯ ಪಡೆದನು. ಸರ್ವೊತ್ತಮನು ಸರ್ವ ವಿದ್ಯೆಗಳಲ್ಲೂ ನಿಷ್ಣಾತನು. ಅವನ ನಾಲಗೆಯೂ, ಅದರಂತೆ ಕೈಯೂ ಹರಿತವಾಗಿವೆ. “ಚಂದಾದಾರರನ್ನು ಕೂಡಿಸುತ್ತ ದಣಿವ ಬದಲಾಗಿ ನಿಮ್ಮನ್ನು ಒಂದೇ ಒಂದು ಹತ್ತು ರೂಪಾಯಿ ನೋಟಿನಲ್ಲಿ ಭಾಗ್ಯವಂತನನ್ನಾಗಿ ಮಾಡಬಲ್ಲೆ” ಎಂದು ಆತನು ರಘುವೀರನಿಗೆ ಭಾಷೆಕೊಟ್ಟನು. ಹೇಗೆಂದು ರಘುವೀರನು ಪ್ರಶ್ನಿಸಲಾಗಿ, “ತಾಯಿತ! ನನ್ನ ಅಜ್ಜನು . . .ಲ್ಲಿ ಕಲಿತು ಬಂದು ನನಗೆ ಹೇಳಿಕೊಟ್ಟನು. ಮಹಾರಹಸ್ಯ; ಖಂಡಿತ ಫಲ!” ಎಂದನು.

‘ಸುಶಿಕ್ಷಿತ’ನು ರಘುವು; ಒಂದು ಪತ್ರಿಕೆಯ ಸಂಪಾದಕನು; ಆದರೆ ಮನುಷ್ಯನು. ಆದುದರಿಂದ ಸರ್ವೋತ್ತಮನು ತೆಳ್ಳಗಿನ ನಾಲಗೆಯಿಂದಾಡಿದ ಮಾತುಗಳನ್ನು ತೆಳ್ಳಗಿನ ಕೈಯಿಂದ ಭಾಷೆಯ ವೆಟ್ಟನ್ನಿತ್ತುದೇ – ನಂಬಿದನು. ‘ಸುಶಿಕ್ಷಿತ’ ರೆಂಬವರಲ್ಲಿ ಹೆಚ್ಚಿನವರು ತಾಯಿತವನ್ನು ತಾಯಿಗಿಂತ ಹೆಚ್ಚು ನಂಬುವರೆಂಬುದು ನಿಮಗರಿತಿರಬಹುದು.

ರಘುವು ಕುಂದಾಪುರದಲ್ಲಿ ಚಂದಾದಾರರನ್ನು ಕೂಡಿಸುವ ಮಹಾಯತ್ನದಲ್ಲಿದ್ದನು. ಅಲ್ಲಿಗೆ ಸರ್ವೋತ್ತಮನ ಹತ್ತು ರೂಪಾಯಿ ಮೌಲ್ಯದ ವಿ. ಪಿ. ತಲಪಿತು. ಮೌಲ್ಯ ತೆತ್ತು, ರಘುವು ಅದನ್ನೊಡೆಯಲು ಒಂದು ಉಂಗುರವು ಸಿಕ್ಕಿತು, ಅದನ್ನು ಬೆರಳಿಗೆ ಸಿಕ್ಕಿಸುತ್ತಲೇ ಮೈ ಝುಮ್ಮೆನ್ನುವುದೆಂದೂ, ಆಗಲೇ ಅದರ ಪ್ರಭಾವವು ಆರಂಭವಾಗಿದೆ ಎಂಒ ಲೆಕ್ಕವೆಂದೂ ಸರ್ವೊತ್ತಮನು ಬರೆದಿದ್ದನು. ಇನ್ನಿದನ್ನು ಕೈಗೆ ಸಿಕ್ಕಿಸಿ ಚಂದಾದಾರರನ್ನು ಕೂಡಿಸ ಹೋಗುವೆನೆಂದು ರಘುವು, ಆ ಕೂಡಲೇ ಕೈಗೆ ಸಿಕ್ಕಿಸಿ, ನಡುಗುವ ಹೃದಯದಿಂದ ಮೈ ಜುಮ್ಮನ್ನು ಕಾಯುತ್ತ ಕುಳಿತನು. ಘಂಟೆ- ದಿನ……. ತಿಂಗಳ ತನಕ ಕಾಯ್ದನು.
ಝುಮ್ಮೇ ಇಲ್ಲ. ವಿಷಾದದ ಸಂಗ್ತಿಯೆಂದ್ರೆ-ಕುಂದಾಪುರದಲ್ಲಿ ಇವನಿಗೆ ಒಬ್ಬನಾದರೂ ಚಂದಾದಾರನು ದೊರೆಯಲಿಲ್ಲ.

ಒಂದು ತಿಂಗಳ ನಂತರ ಸರ್ವೋತ್ತಮನು ಸಿಕ್ಕಲು, ರಘವು ಕೋಪದಿಂದ ಆತನನ್ನು ಕುರಿತು – “ಏನಯಾ – ಈ ನೀಚತನವೇ?”

ಸರ್ವ – “ಏನು ನೀಚತನ?”
ರಘು – “ಉಂಗುರದ ಜುಮ್ಮು? ಇಲ್ಲವೇ ಇಲ್ಲ!”
ಸರ್ವ -ನೀನು ಅದನ್ನು ಹೇಗೆ ಕೈಗೆ ಹಾಕಿಕೊಂಡೆ?”
ರಘು- “ಟಪ್ಪಾಲಿನವನ ಕೈಯಿಂದ ಪಡೆದ ಕೂಡಲೇ.”
ಸರ್ವ – “ಆಗ ಊಟಗೀಟವಾಗಿತ್ತೇ?”
ರಘು- “ಇಲ್ಲಪ್ಪಾ -ಸ್ನಾನ ಕೂಡಾ ಆಗಿರಲಿಲ್ಲ.”
ಸರ್ವ (ಸಂತೋಷದಿಂದ) – “ಸರಿ! ನಿನ್ನಂತಹ ಮೂರ್ಖನು ನೀನೆ! ಸ್ನಾನ ಮಾಡದೆ ಕೈಬೆರಳಿಗೆ ತಾಯಿತದ ಉಂಗುರವನ್ನು ಹಾಕಿಕೊಳ್ಳುವ ಬ್ರಾಹ್ಮಣರೂ ಇರುವರೇ? ಹತ್ತು ರೂಪಾಯಿಗಳನ್ನು ನೀರಿಗೆ ಹಾಕಿದಿಯಲ್ಲ!”

ರಘುವಿಗೆ (ಆಗ ಕೈಯ್ಯಲ್ಲಿ ಉಂಗುರವಿರಲಿಲ್ಲ.) ಮೈ ಝುಮ್ಮೆಂದಿತು.

ರಘುವಿನ ೧೯೩೩ನೇ ಇಸವಿಯ ಡೈರಿಯನ್ನು ತೆಗೆದು, ದಶಂಬರ ತಿಂಗಳ ಪುಟವೊಂದರಲ್ಲಿ ನೋಡಿರಿ- “ಮೈ ಝುಮ್ಮಾಗುವ ಸುಳ್ಳಿಗೆ ಕೊಟ್ಟ ಹಣ- ಹತ್ತು ರೂಪಾಯಿ” ಎಂದು ಬರೆದಿದೆ.

ಈಗ ವರ್ಷವೇ ಕಳೆದರೂ, ಆ ತಾಯಿತವಿಲ್ಲದೆ ಅವನ ಮೈ ಆಗಾಗ ಇದನ್ನು ನೆನೆದಾಗಲೆಲ್ಲಾ ಝುಮ್ಮೆನ್ನುತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ
Next post ಖರ್ಬೂಜದ ಗಾಡಿ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys