ಆಧುನಿಕ ಅಜವಿಲಾಪ

ಆಧುನಿಕ ಅಜವಿಲಾಪ

ಹೌದ್ರೆಪಾ; ಜನರಿಗೆ ಸಮಾಧಾನ ಹೇಳುವದು ಸಸಾರ ಇರತದ. ಇದೇ ಪ್ರಸಂಗ ನಿಮ್ಮ ಮೇಲೆ ಬಂದಿದ್ದರ ನಿಮ್ಮ ಬಾಯಿಗೆ ಇಂಥ ಬೋಧಾಮೃತದ ಶೆಲಿ ಬೀಳ್ತಿದ್ದಲ್ಲ. ಅಂತ “ಈ ಜಗತ್ತಿನಲ್ಲಿ ಯಾರೂ ಚಿರಂಜೀವಿಯಲ್ಲ. ಎಲ್ಲರಿಗೂ ಇಂದಿಲ್ಲ ನಾಳೆ ಸಾವಿದ್ದದ್ದೇ. ಇಂದು ನಿಮ್ಮ ಹೆಂಡತಿ ತೀರ ಕೊಂಡ್ಲು. ನಾಳೇ ನೀವು ಹೋಗುವವರು ವಿನಾಕಾರಣ ದುಃಖ ಮಾಡಿ ಉಪಯೋಗವೇನು?”

ವಾವಾ ಹೀಗೆ ಸಮಾಧಾನ ಹೇಳಲಿಕ್ಕೆ ನಮಗೂ ಬರತಿತ್ತು. ನಿಮ್ಮ ಮ್ಯಾಲೆ ಈ ಪ್ರಸಂಗ ಬಂದಿದ್ರ ಆ ಬೋಧದಿಂದ ನಿಮ್ಮ ಸಮಾಧಾನ ಆಗತಿತ್ತೇನು? ಇದೇ ನನ್ನ ಪ್ರಶ್ನೆ.

ಲಗ್ನ ಆದಮ್ಯಾಲೆ ಎಂಟು ಹತ್ತು ವರ್ಷಗಳಲ್ಲಿಯೇ ಆಕಿ ತೀರಿಕೂಂಡಿದ್ದರೆ ಇಷ್ಟು ಕೆಟ್ಟು ಅನಿಸ್ತಿದ್ದಿಲ್ಲ. ಈಗ ಲಗ್ನ ಆಗಿ ನಲವತ್ತು ವರ್‍ಷಾಯ್ತು. ಒಂದು ರೀತಿಯಿಂದ ಆಕಿ ಚಟ ಬಿದ್ಹಾಂಗೇ ಆಗಿತ್ತು. ಮೊನ್ನೆ ಮೊನ್ನೆ ಹತ್ತಿದ ನಾಸೀ ಪುಡೀ ಚೀಟಿ ಬಿಟ್ಬೇನಂದರ ಬಿಡವಲ್ತು. ಇದು ನಲವತ್ತು ವರ್ಷದ ಚಟ, ಬಿಡಬೇಕು ಹ್ಯಾಂಗ, ನನಗಂತೂ ಬೆಳಿಗ್ಗೆದ್ದ ಕೂಡಲೆ ಮಾರೀಮ್ಯಾಲ ಕೈಯಾಡಿಸಬೇಕು ಮತ್ತು ಆ ಕೈಗೆ ಮೂಗುಹತ್ತಬಾರದು ಹೀಗೆ ಸ್ಥಿತಿ ಯಾಗೇದ. ಇನ್ನು ಅವಳ ಜಾಗಾ ತುಂಬೂ ಬಗೀ ಹ್ಯಾಂಗ, ಏನೀ ಇರ್‍ಲಿ ಈಗ ಸಿಟ್ಟಿಗೆದ್ದರ ಬೈಬೇಕು ಯಾರ್‍ನ ಇದರದು ಸಹಿತ ಪಂಚೇತಿ ಬಂದದ.

ಅಡಗೀ ವಿಚಾರ ಮಾಡಿದ್ರ ನೋಡ್ರಿ ಖಾರ, ಹುಳಿ, ಉಪ್ಪು ಪದಾರ್ಥ ಹ್ಯಾಂಗಾದ್ಹಂಗ ನುಂಗಬೇಕು ಸುಮ್ಮನೆ. ಸ್ವಲ್ಪ ಇಳೀಸ್ವರದಲ್ಲಿ ತಪ್ಪು ತಗೀಲಿಕ್ಕೆ ಹೋದರ ಅಡಿಗಿಯವಳು ಸಿಟ್ಟಿಗೆದ್ದು ದುಮು ದುಮು ಉರಿಯಹತ್ತುವಳು. ಮತ್ತ ಅಡಿಗೀಯವಳ್ನ ತಗದು ಯಾವನಾದರೂ ಗಂಡಾಳು ಅಡಿಗೆಯವನ್ನ ಇಡಬೇಕಾದ್ರ ಅಡಿಗೀ ಮನೀ ಒಳಗ ಕಾಲಿಡಬೇಕಾದ್ರ ಮನಸ್ಸು ಹಿಂಜರಿತದ. ಒಲೀ ಹತ್ರ ಸುಟ್ಟ ಬೀಡಿಯರೇ ಕಾಣಸ್ತದ. ಅಥವಾ ಮುಂದು ಬಗ್ಗಿ ಉರಿಯುವ ಒಲಿಯೊಳಗ ತಂಬಾಕದ ಜೀಕಳಿ ಹೊಡೆಯುವ ಬಲ್ಲವಾಚಾರ್‍ಯರೇ ಕಾಣಸ್ತಾರ. ಅವಗ ಸಿಟ್ಟು ಮಾಡ್ತೀನಽ ನನಗಿಂತ ಮೊದಲೇ ಅವನು ನೋಟೀಸ ಕೊಟ್ಟು ಸ್ವತಂತ್ರ ಆಗತಾನ. ಆದರ ಇವಳ ವಿಷಯದಲ್ಲಿ ನೋಟೀಸಿನ ಅಂಜಿಕೆ ಯಾವಾಗಲೂ ಇದ್ದಿದ್ದಿಲ್ಲ ಎಷ್ಟೇ ಸಿಟ್ಟು ಮಾಡಿ ಕಾಲು ಅಪ್ಪಳಿಸುತ್ತಾ ನಾವು ಹೊರಬಿದ್ರೂ ನನ್ನ ಬದಲಿ ಮನೆಯಲ್ಲಿಯ ಹುಡುಗರ್‍ನ ಮಾತ್ರ ನಾಲ್ಕು ಪೆಟ್ಟು ಬಡಕೋತಿದ್ಲು. ಮತ್ತೆ ನಾನು ಸಾಯಂಕಾಲ ತಿರುಗಿ ಬರುವ ಕಾಲಕ್ಕೆ ನನಗೆ ಸೇರುವ ಖಾರಸಜ್ಗಿ ಮಾಡಿಟ್ಟಿರತಿದ್ಲು. ಹೇಳಿದರ ಈಗ ಸಹ ಯಾರಾದರೂ ಖಾರ ಸಜ್ಜಿಗಿ ಮಾಡ್ಯಾರು ಆದರೆ ಹೊಟ್ಟೀಯೊಳಗಿನ ಎಲ್ಲಾ ಸಿಟ್ಟ ನುಂಗಿ ನಗೆಮಾರಿಯಿಂದ ಸಜ್ಜಿಗೀ ತಿನ್ನಲಿಕ್ಕೆ ಕರೆಯುವರ್‍ಯಾರು?

ಖರೇ ಹೇಳ್ತಿನಿ ನಗಬ್ಯಾಡ್ರಿ ಕದಾಚಿತ್‌ ನಿನುಗೆ ಖೊಟ್ಟಿ ಅನಿಸೀತು? ಆದರ ನಿಜವಾಗಿ ಇಕೀಯಿಂದ ನನ್ನ ತಾಯಿಯದು ಸಹ ವಿಸ್ಮರಣೆಯಾಗಿತ್ತು. ನಾನು ಮನೆಯೊಳಗೆ ಇದ್ದೇನೆಂದರೆ ಕೇವಲ ಕಾಲೇಜದೂಳಗಿನ ಒಬ್ಬ ಚೈನೀಬಾಜೀ ವಿದ್ಯಾರ್ಥಿಯಂತೆಯೇ ಇದ್ದೆ. ಸಂತಿ ಇಲ್ಲ ಪ್ಯಾಟಿ ಇಲ್ಲ. ಏನ್‌ ತರೂದಿಲ್ಲ ಬರೂದಿಲ್ಲ. ಎಲ್ಲಾ ವ್ಯವಸ್ಥೆ ಆಯಾ ವ್ಯಾಳ್ಯಾಕ್ಕ ಬರೋ ಬರಿ ಆಗತ್ತಿತ್ತು. ನನಗೇನೂ ನೋಡಬೇಕಾಗ್ತಿದ್ದಿಲ್ಲ. ಈಗ ಪರಿಸ್ಥಿತಿ ಅದರ ಉಪರಾಟಿಯಾಗೇದ. ಬೆಳಿಗ್ಗೆದ್ದು ನೀರು ಕಾಸಲಿಕೆ ಹಂಡೇದ ಒಲಿಗೆ ಉರಿ ಹಚ್ಚುವದರಿಂದ ಹಾಲಿಗೆ ಹೆಪ್ಪು ಹಾಕ್ಯಾರೋ ಇಲ್ಲೋ ಈ ವರಗೆ ಎಲ್ಲ ಕೆಲಸಗಳನ್ನು ನಾನೇ ಮಾಡಬೇಕು. ಅಥವಾ ಆಗ್ಯಾವೋ ಇಲ್ಲೊ ನೋಡಬೇಕು. ಇದಕ್ಕೂ ಹೆಚ್ಚು ತ್ರಾಸಿನ ಸಂಸಾರ ಹುಡುಕಿದರ ಸಿಗಲಿಕ್ಕಿಲ್ಲ.

ಮನೆಯೊಳಗಿನ ಆಳುಗಳು ಸುದ್ದ ಇದೇ ಹಾಡು. ಇಕೀ ಇರುವವರೆಗೆ ಭಾಂಡೀ ತಿಕ್ಕುವ ಹೆಣ್ಮಗಳಿಂದ ಅಗಸರವರೆಗೆ ಎಲ್ಲರ ಕೆಲಸಗಳು ಚನ್ನಾಗಿ ಆಗ್ತಿದ್ದವು. ಈಗ ಈ ಮಕ್ಕಳಿಗೆ ಏನಾಗೇದೋ ಯಾರಿಗೊತ್ತು? ಭಾಂಡೇ ತಿಕ್ಕಾಕಿರೆ ಬಂದ್ರ ಕೈಕೆಳಗಿನ ಆಳು ಬರುವದಿಲ್ಲ. ಇವರಿಬ್ಬರೂ ಬಂದ್ರ ಎಮ್ಮೀ ಕಾಯುವವ ಬರುವದಿಲ್ಲ, ಇವರ ಮರಜೀ ಹಿಡಿದು ಜೀವ ಓಲ್ಯಾಗೇದ. ನಮ್ಮ ಸಂಸಾರ ಮೋಟರದ ಘಾಲಿ ದರುಸ್ತ ಅದ ಎಂದು ಹೇಳಲಿಕ್ಕೆ ಬರೂದಿಲ್ಲ. ಕನಿಷ್ಟಪಕ್ಷಕ್ಕ ಒಂದು ಘಾಲಿಯಾದರೂ ಘಾಳಿ ಹೋಗಿರತದ. ಈ ಬೇಜಾರಕ್ಕ ಬೇಸತ್ತು ಒಮ್ಮೊಮ್ಮೆ ಅತ್ಯಂತ ಭಯಂಕರ ವಿಚಾರಗಳು ಮನಸಿನಲ್ಲಿ ಬರುವವು. ಎಲ್ಲ್ಯಾದರೂ ಒಂದು ಧೊಡ್ಡ ಕಡವಂಡೀ ಮ್ಯಾಲಿಂದ ಹಾರಕೊಂಡು ಜೀವ ಕೊಡಬೇಕು ಅಥವಾ ಹಿಂದು ಮುಂದೆ ನೋಡದೆ ಭರದಿಂದ ಎರಡನೇ ಲಗ್ನಾ ಮಾಡಿಕೊಂಡು ಬಿಡಬೇಕು. ಹೀಗನಸ್ತದ- ಆದರ ಈ ವಯಸ್ಸಿನಲ್ಲಿ ಲಗ್ನಾ ಮಾಡಿಕೂಂಡರ ಒಂದು ಪಂಚೇತಿ. ಬಿಟ್ಟರ ಪಂಚೇತಿ. ಈ ಪೇಚಿನಲ್ಲಿ ಬಿದ್ದಿರುವೆನು. ಈ ಹೊಸ ಕುಟುಂಬದ ಚಟ ಬೀಳುವರ ಒಳಗಾಗಿ ಹೇಮಗರ್‍ಭ ಮಾತ್ರೆ ಅಗತ್ಯ ಬಿದ್ದಿರುತ್ತದೆ ಏನು ಮಾಡ್ಲೀರಿ! ಈಗ! ನನ್ನ ಅರ್‍ಧಾಂಗಿ ತೀರಿಕೊಂಡಿಲ್ಲ ಆದರೆ ಈಗ ನನಗೆ ಅರ್‍ಧಾಂಗವಾಯುವೇ ಆಗೇದ. ಇಂಥ ಸಮಯದಲ್ಲಿ ಅಳದೇ ಏನು? ಶಂಖವಾದ್ಯ ಮಾಡಲ್ಯಾ? ನೀವೇ ಹೇಳ್ರಿ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುತ್ತ ಪೇಟೆಯ ಸುಖ ಕಾಣಲೆಂತಿಲ್ಲಿ ಸುಖವನರಸುವುದು?
Next post ಪ್ರಳಯ ಸೃಷ್ಟಿ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys