ಚಿತ್ರ: ಮಿಕೆ ಎಸ್ಟೆಸ್

ಜಗತ್ತಿನಲ್ಲಿ ಅತಿ ಬಲಾಢ್ಯವಾದ ಜೀವಗಳ ಮಾತು ಬಂದಾಗ ನಮ್ಮ ಕಣ್ಮುಂದೆ ಆನೆ ಸಿಂಹಗಳ ಚಿತ್ರ ಮೂಡುತ್ತದೆ. ಆದರೆ ಹಕ್ಕಿಗಳಲ್ಲಿ ಅತಿ ಬಲಾಢ್ಯ ‘ಹಮ್ಮಿಂಗ್ ಬರ್ಡ್’. ಮಧ್ಯ ಅಮೇರಿಕದಲ್ಲಿ ಮಾತ್ರ ವಾಸಿಸುವ ಈ ಹಕ್ಕಿಗಳಲ್ಲಿ ಸುಮಾರು ೭೫೦ ಜಾತಿಗಳಿವೆ.

ಹಮ್ಮಿಂಗ್ ಬರ್ಡ್ ನಿತ್ಯ ತನ್ನ ತೂಕದ ಮೂರುಪಟ್ಟು ಆಹಾರವನ್ನು ಸೇವಿಸುತ್ತದೆ! ಇದರ ನಾಲಿಗೆ ಇಡೀ ದೇಹದಷ್ಟೇ ಉದ್ದವಾಗಿದೆ! ಈ ನಾಲಿಗೆಯೆಂದರೆ ಪೊಳ್ಳಾದ ಎರಡು ಕೊಳವೆಗಳೇ ಎನ್ನಬಹುದು. ಈ ಕೊಳವೆಗಳ ಮೂಲಕ ಇದು ತನ್ನ ಮುಖ್ಯ ಆಹಾರವಾದ ಹೂಗಳ ಮಕರಂಧ ಮತ್ತು ಕ್ರಿಮೀಕೀಟಗಳನ್ನು ಎಳೆದುಕೊಳ್ಳುತ್ತದೆ. ಇದು ಸಕ್ಕರೆಯಿಂದ ಅಪರಿಮಿತ ಶಕ್ತಿಯನ್ನು ಪಡೆಯುತ್ತದೆ. ನಿದ್ರೆಯ ಮಟ್ಟಿಗೆ ಇದು ಕುಂಭಕರ್ಣನಂತೆ. ರಾತ್ರಿಯಿಡೀ ನಿದ್ದೆಯಲ್ಲಿ ಕಳೆಯುತ್ತದೆ. ನಿದ್ದೆಯಲ್ಲಿದ್ದಾಗ ಹೆಚ್ಚು ಕಡಿಮೆ ಸತ್ತಂತೆಯೇ ಇರುವ ಈ ಹಕ್ಕಿಯನ್ನು ಕೈಹಾಕಿ ಸುಲಭವಾಗಿ ಎತ್ತಿಕೊಂಡು ಬರಬಹುದು. ಮನುಷ್ಯನ ಸ್ಪರ್ಶದ ಅರಿವು ಕೂಡ ಆಗ ಇದಕ್ಕಾಗುವುದಿಲ್ಲ!

ಅಗಾಧ ಶಕ್ತಿ
ಇದು ಆಕಾಶದಲ್ಲಿ ಒಂದೆಡೆ ಸ್ಥಿರವಾಗಿ ನಿಲ್ಲಬಲ್ಲದು. ಮುಂದೆ ಸಾಗಿದಂತೆ ಹಿಂದಕ್ಕೂ ಸಾಗಬಲ್ಲದು. ಅಡ್ಡವಾಗಿ ಹಾರಬಲ್ಲದು. ನೇರವಾಗಿ ಮೇಲಕ್ಕೂ ಏರಬಲ್ಲದು. ಇದರ ರೆಕ್ಕೆಗಳು ಪ್ರತಿ ಸೆಕೆಂಡಿಗೆ ೫೫ ಸಲ ಬಡಿಯುತ್ತಿರುತ್ತವೆ. ಇದು ತಾಸಿಗೆ ೬೦ ಮೈಲು ವೇಗದಲ್ಲಿ ಹಾರಬಲ್ಲದು. ಈ ವೇಗದಲ್ಲಿ ಹಾರುತ್ತಿರುವಾಗ ಇದರ ರೆಕ್ಕೆಗಳು ಸೆಕೆಂಡಿಗೆ ೨೦೦ ಸಲ ಚಲಿಸುತ್ತವೆ! ಚಳಿಗಾಲವನ್ನು ಪನಾಮಾದಲ್ಲಿ ಕಳೆಯಲು ಇದು ೫೦೦ ಮೈಲು ಹಾರಿ ಮೆಕ್ಸಿಕೊ ದಾಟಿ ಪನಾಮವನ್ನು ತಲಪುತ್ತದೆ. ೧೨ ತಾಸುಗಳ ಈ ಪ್ರವಾಸದಲ್ಲಿ ಅದು ಮಧ್ಯದಲ್ಲೆಲ್ಲಿಯೂ ನಿಲ್ಲದು. ಇದು ಶೇಖರಿಸಿಕೊಳ್ಳುವ ಕೊಬ್ಬು ೬೦೦ ಮೈಲು ದೂರದವರೆಗೆ ಹಾರಲು ಅದಕ್ಕೆ ಸಾಲುವಷ್ಟಿರುತ್ತದೆ.

ಈ ಹಕ್ಕಿಗೆ ಭಯವೆಂಬ ಶಬ್ಧವೇ ಗೊತ್ತಿಲ್ಲ. ೬೦ ಮೈಲು ವೇಗದಲ್ಲಿ ಹಾರುವ ಅದರ ಚುಂಚು ಬಲು ಭೀಕರವಾದ ಅಸ್ತ್ರವಾಗಿರುವುದರಿಂದ ಅದು ಯಾವ ಹಕ್ಕಿಯನ್ನೂ ಕಾಗೆ-ಗಿಡುಗ-ಹದ್ದುಗಳನ್ನು ಕೂಡ ನಿರ್ಭಯದಿಂದ ಎದುರಿಸುವುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *