ಮುಂಜಾವದಲ್ಲಿ ರೈಲಿನ ಕಿಟಕಿಯಿಂದ ನೋಡಿದಾಗ
ಮಲಗಿದ್ದ ನಗರಗಳು,
ರಕ್ಷಣೆಗೆ ಗಮನಕೊಡದೆ
ಬೆನ್ನಡಿಯಾಗಿ ಬಿದ್ದುಕೊಂಡ ದೈತ್ಯ ಪ್ರಾಣಿಗಳು.
ವಿಶಾಲ ಸರ್ಕಲ್ಲುಗಳಲ್ಲಿ ನನ್ನ ಆಲೋಚನೆಗಳು
ಮತ್ತು ಬೆಳಗಿನ ಗಾಳಿ ಮಾತ್ರ ಸುಳಿದಾಡುತ್ತವೆ :
ಕಛೇರಿಯ ಗೋಪುರದಲ್ಲಿ ಮೂರ್ಛೆ ಬಿದ್ದ ಬಾವುಟದ ಮಡಿಕೆಗಳಲ್ಲಿ,
ಮರಗಳಲ್ಲಿ ಎಚ್ಚರವಾಗುತ್ತಿರುವ ಹಕ್ಕಿ ಸದ್ದಿನಲ್ಲಿ
ಪಾರ್ಕಿನ ಹಾಸುಗಲ್ಲಿನ ಮೇಲೆ
ನಿಧಾನ ಮೈ ಮುರಿಯುತ್ತಿರುವ ಬೆಕ್ಕಿನ ಕಣ್ಣಲ್ಲಿ,
ಅಂಗಡಿ ಕಿಟಕಿಗಳ ಮೇಲೆ
ನಾಚಿಕೊಂಡು ಇಷ್ಟಿಷ್ಟೆ ಪ್ರತಿಫಲಿಸುವ ಬೆಳಕು
ಸದಾ ಪ್ರಥಮ ಪ್ರವೇಶದ ನಟ.
ವಾರ್ಸಾದ ಹೊಗೆಯಾಡುವ ಆವೇಶದಂಥ
ಹಬೆಯಾಡುವ ಉದ್ಯಾನ,
ರಾತ್ರಿಯ ಮತ್ತಿನ್ನೂ ಇಳಿಯದ ಕುಡುಕರು
ಅಲ್ಲೊಬ್ಬರು ಇಲ್ಲೊಬ್ಬರು.
ಕಟುಕರಂಗಡಿಯ ಮುಂದೆ
ಇನ್ನೂ ಬಂದಿರದ ವ್ಯಾನು.
ಮುಂಜಾವಿನ ನಗರಕ್ಕೆ ಹೆಸರಿಲ್ಲ.
ಯಾರಿಗೂ ಸೇರಿದ್ದಲ್ಲ.
ಹೆಚ್ಚುವ ಬೆಳಕಲ್ಲಿ
ನಕ್ಷತ್ರಗಳು ಮಂಕಾಗುತ್ತಿರುವಾಗ
ಹೆಚ್ಚುತ್ತಿರುವ ರೈಲಿನ ವೇಗದೊಳಗೆ
ಸೇರಿಹೋದ ನನಗೂ ಹೆಸರಿಲ್ಲ.
*****
ಮೂಲ: ಆಡಂ ಝಗಯೇವ್ಸ್‍ಕಿ