ಬೊಬ್ಬಿಡುವ ಶರದಿ ನಾನಲ್ಲ
ಸದ್ದಿಲ್ಲದೆ ಹರಿವ ನದಿಯೂ ಅಲ್ಲಾ
ಬಳ್ಳಿ ಕುಸುಮ ಕೋಮಲೆ ನಾನಲ್ಲ
ನಾನು ನಾನೇ ಗೆಳೆಯ
ನಾನು ನಾನೇ, ನಾನು ನಾನೇ
ಮನದಾಳದ ಭಾವಗಳೆಲ್ಲ
ಉರಿವ ಕೆಂಡವಲ್ಲ
ಬೆಳದಿಂಗಳ ತಂಪೂ ಅಲ್ಲಾ
ಕೆಂಪು ಕೆಂಡ ತಂಪಿನ
ಮಧ್ಯೆದೊಳಗಿನ ಭಾವ ನಾನು
ನೊಸಲಿನ ಸಿಂಧೂರದಂತೆ
ಸಿಂಗಾರವಲ್ಲ ನಾ ಗೆಳೆಯ
ಬದುಕ ಹಾದಿಯಲಿ
ಹೆಜ್ಜೆ ಜೋಡಿಸುವ ಸಹಚಾರಿ
ಬಾಳಬಂಡಿಯ ಮತ್ತೊಂದುಗಾಲಿನಾ
ಗುಡಿಯ ಕಳಸದ ಹೊನ್ನ ಶಿಕರವಲ್ಲ
ಗರ್ಭಗುಡಿಯ ಸಿರಿದೇವಿಯೂ ಅಲ್ಲಾ
ಅನುಕ್ಷಣವೂ ನಿನ್ನೊಳಗೆ ನಾನಂತೆ
ನನ್ನೊಡನೇ ನೀನು
ನಾನು ನಾನಾಗಿರುವೆ ಗೆಳೆಯ
ನೀನು ನೀನಾಗಿರು
*****