ಒಂದೂರು ಊರೊಳಗೊಂದು ದುರ್ಗ ದುರ್ಗ
ದೊಳಗೊಂದು ಅರಮನೆ ಅರಮನೆ

ಯೊಳಗೊಂದು ಮನೆ ಮನೆ
ಗೇಳು ಬಾಗಿಲು ಹದಿನಾಲ್ಕು ಕಿಟಕಿ

ಪಲ್ಲಂಗದ ಮೇಲೆ ರಾಜಕುಮಾರಿ ಒಂಟಿ
ನಿದ್ದೆ ಹೋಗಿದ್ದಾಳೆ ನಿದ್ರಿಸುವ ಸುಂದರಿ

ಅಮವಾಸ್ಯೆ ರಾತ್ರಿ ಮೂರನೇ ಝಾವ
ಮನೆಯೊಳಗೆ ಮೌನವೋ ಮೌನ

ತೆರೆದಾವು ಏಳು ಬಾಗಿಲು ಹದಿನಾಲ್ಕು ಕಿಟಕಿ
ಅಮವಾಸ್ಯೆ ರಾತ್ರಿ ಮೂರನೇ ಝಾವ

ಎಚ್ಚರಾಗುತ್ತಾಳೆ ನಿದ್ರಿಸುವ ಸುಂದರಿ
ಎದ್ದು ಬರುತ್ತಾಳೆ ಹೊರಗೆ

ಅಂಗಣದಲ್ಲಿ ನಿಂತು ಆಕಾಶ ನೋಡುತ್ತಾಳೆ
ಆಕಾಶದಲ್ಲಿ ಚಂದ್ರನಿಲ್ಲ

ಆಕಾಶದಲ್ಲಿ ಚಂದ್ರನಿಲ್ಲ-ಎನ್ನುತ್ತಾಳೆ
ಆಕಾಶದಲ್ಲಿ ಚಂದ್ರನೇ ಇಲ್ಲ.

ಊರೊಳಗೊಂದು ಕರೆ ಕರೆ
ತುಂಬ ನೀರು ನೀರಿನ ತನಕ ಸೋಪಾನ ಸಾಲು

ಸಾಲಿಗೆ ಸಾಲು ಕುಳಿತ ಶಿಲಾಬಾಲೆ
ಗಳೊಂದು ನೂರು ನೂರು

ನಿದ್ರಿಸುವ ಸುಂದರಿ ಬರುತ್ತಾಳೆ ಕೆರೆಗೆ ಒಂಟಿ
ಊರೊಳಗೆ ಇರುಳೋ ಇರುಳು

ಸೋಪಾನದಲ್ಲಿ ಕುಳಿತು ಕೆರೆಯೊಳಗೆ ನೋಡುತ್ತಾಳೆ
ಕೆರೆಯೊಳಗೆ ಚಂದ್ರನಿಲ್ಲ

ಕೆರೆಯೊಳಗೆ ಚಂದ್ರನಿಲ್ಲ-ಎನ್ನುತ್ತಾಳೆ
ಕೆರೆಯೊಳಗೆ ಚಂದ್ರನೇ ಇಲ್ಲ

ಅಳುತ್ತಾಳೆ ರಾಜಕುಮಾರಿ ಸೋಪಾನದಲ್ಲಿ ಕುಳಿತು
ಕೆರೆಗೆ ಬಿದ್ದಾವು ಕಣ್ಣೀರ ಬಿಂದು

ಎದ್ದೀತು ಗಾಳಿ ಉಕ್ಕೀತು ನೀರು
ಅಳುವಂತೆ ಶಿಲಾಬಾಲೆಗಳು ನೂರು ನೂರು

ಬಂದಾಳು ಮನೆಗೆ ರಾಜಕುಮಾರಿ ಒಂಟಿ
ಅಮಾವಾಸ್ಯೆ ರಾತ್ರಿ ನಾಲ್ಕನೇ ಝಾವ

ಏಳು ಬಾಗಿಲು ಹದಿನಾಲ್ಕು ಕಿಟಕಿ ಮುಚ್ಚಿಕೊಳ್ಳುತ್ತಾವೆ
ನಿದ್ದೆ ಹೋಗುತ್ತಾಳೆ ನಿದ್ರಿಸುವ ಸುಂದರಿ

ಋತುಗಳು ಬರುತ್ತಾವೆ ಹೋಗುತ್ತಾವೆ ಬಾಗಿಲು ಕಿಟಕಿ
ತೆರೆಯುತ್ತಾವೆ ಮುಚ್ಚುತ್ತಾವೆ

ಊರ ಹೊರಗೆಲ್ಲ ಅರೆಗಾಲ ಬರೆಗಾಲ ಬಂದರೂ ಈ
ಕೆರೆನೀರು ಬತ್ತುವುದಿಲ್ಲ

ಕೆರೆ ನೀರು ಬತ್ತುವುದಿಲ್ಲ-ಎನ್ನುತ್ತಾರೆ ಜನ
ಈ ಕಣ್ಣೀರು ಬತ್ತುವುದೆ ಇಲ್ಲ.
*****