ತುಳುನಾಡಿನ ಸಾಹಿತ್ಯ ಸಿರಿ

ತುಳುನಾಡು ರಮಣೀಯವಾದ ಪವಿತ್ರ ಕ್ಷೇತ್ರ ಇದನ್ನು “ಲ್ಯಾಂಡ್ ಆಫ್ ಟೆಂಪಲ್ಸ್” ಎಂದು ಕರೆಯಲಾಗಿದೆ. ಜಲ-ನೆಲ-ಗಾಳಿ-ಮಳೆ ಜನೋಪಯೋಗಕ್ಕಾಗಿ ವಿಪುಲವಾಗಿ ಲಭ್ಯವಿರುವ, ವನ ಸಂಪತ್ತು, ಕೃಷಿ, ಅನೇಕ ಬಗೆಯ ಮನೋಹರವಾದ ಫಲ-ಪುಷ್ಪಗಳಿಂದ ಸಮೃದ್ಧವಾದ ಈ ನೆಲದ ಜನಪದವೂ ಶಕ್ತಿ-ಸಾಹಸ, ವಿದ್ಯಾಬುದ್ಧಿಯ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಧರ್ಮಸ್ಥಳ, ಉಡುಪಿಯ ಅಷ್ಠಮಠ, ಸುಬ್ರಹ್ಮಣ್ಯ, ಕೊಲ್ಲೂರು, ಕಟೀಲು, ಬಪ್ಪನಾಡು ಮೊದಲಾದ ಪುಣ್ಯಕ್ಷೇತ್ರಗಳು ಲೋಕಾಕರ್ಷಕವಾಗಿವೆ. ವಾಸ್ತುಶಿಲ್ಪ ತುಳುನಾಡಿನ ಸಾಂಸ್ಕೃತಿಕ ಮೌಲ್ಯವನ್ನು ಹೆಚ್ಚಿಸಿದೆ. ಯಕ್ಷಗಾನ, ಭೂತಾರಾಧನೆ ಮೊದಲಾದ ಜಾನಪದ ಕಲೆಗಳು ವಿದೇಶೀ ವಿದ್ವಾಂಸರ ಗಮನವನ್ನು ಸೆಳೆದು ನಾಡಿಗೆ ಗೌರವವನ್ನು ತಂದಿವೆ. ಬೇಸಾಯ ಇಲ್ಲಿಯ ಪ್ರಧಾನ ವೃತ್ತಿ. ತೆಂಗು ಕಂಗು ಸಮುದ್ರ ಸಂಪತ್ತು ಇಲ್ಲಿಯ ಪ್ರಮುಖ ಉತ್ಪತ್ತಿ. ಮಣಿಪಾಲ, ನಿಟ್ಟೆ, ಮಂಗಳೂರುಗಳು ವಿದೇಶೀ ವ್ಯಾಪ್ತಿಯನ್ನು ಪಡೆದ ತುಳುನಾಡಿನ ವಿದ್ಯಾಕೇಂದ್ರಗಳು, ‘ಯಕ್ಷಗಾನ’ ತುಳು ನೆಲದ ಮನಸೆಳೆಯುವ ಬಯಲಾಟ. ಪಾರ್ತಿಸುಬ್ಬ, ಶಿವರಾಮ ಕಾರಂತ, ಬಣ್ಣದ ಮಾಲಿಂಗ, ಅಳಕೆ, ಕುಂಬ್ಳೆ, ಕೆರೆಮನೆ ಮೊದಲಾದ ಕಲಾ ಪ್ರಭೃತಿಗಳು ಈ ಸಮಗ್ರ ಕಲೆಗೆ ವಿದೇಶಗಳ ಮಾನ್ಯತೆಯನ್ನು ಗಳಿಸಿಕೊಟ್ಟಿದ್ದಾರೆ. ಕಂಬಳ, ಕೋಳಿಯಂಕ, ನಾಗಮಂಡಲ, ಕೋಲ ಮುಂತಾದ ದೈವೀಶಕ್ತಿಗಳ ಆಟೋಟಗಳ ಪ್ರದರ್ಶನಗಳೂ ತುಳುನಾಡಿನ ಜಾನಪದ ಸಂಸ್ಕೃತಿಯ ಹಿರಿಮೆಯನ್ನು ಸಾರುತ್ತವೆ.

೨೦೦೦ದ ವರೆಗಿನ ತುಳುನಾಡಿನ ಸಾಹಿತಿ-ಸಾಹಿತ್ಯ-ಒಂದು ಮೇಲ್ನೋಟ

ತುಳುನಾಡಿನ ಸಾಹಿತ್ಯ ಸಿರಿಯನ್ನು ಮೂಡಬಿದಿರೆಯ ರತ್ನಾಕರ ವರ್ಣಿಯಿಂದ ಗುರುತಿಸಬಹುದು. ಅವನ ‘ಭರತೇಶ ವೈಭವ’ ಕನ್ನಡ ಸಾಹಿತ್ಯಕ್ಕೆ ಒದಗಿ ಬಂದ ಅಕ್ಷಯ ಸಂಪತ್ತು. ಕನ್ನಡ ಸಾಹಿತ್ಯಕ್ಕೆ ಇದು ತುಳುನಾಡಿನ ಅಪೂರ್ವ ಕೊಡುಗೆ. ಭರತೇಶನ ‘ಯೋಗಭೋಗ’ ಸಮನ್ವಯದ ಜೀವನದೃಷ್ಟಿಯ ಅದ್ಭುತ ಕಲ್ಪನಾಸೃಷ್ಟಿ ದಿವ್ಯವಾದುದಾಗಿದೆ. ‘ಗಣನೆಯಿಲ್ಲದ ಸುಖದೊಳೋಲಾಡಿದನು’ ಭರತ ಚಕ್ರವರ್ತಿ. ‘ಭೋಗ ಸಂಧಿ’ ಶೃಂಗಾರ ರಸಸಾಗರ. ಕುಸುಮಾಜಿಯೊಡನೆ ಮಾಡಿದ ಸರಸ ಸಲ್ಲಾಪ ಮುದ್ದಣ-ಮನೋರಮೆಯರ ಸರಸ ಸಲ್ಲಾಪದಷ್ಟೇ ರೋಚಕವಾಗಿದೆ. ‘ಭರತೇಶ ವೈಭವ’ದ ಕವಿ ಕಾವ್ಯದೃಷ್ಟಿ ಉನ್ನತವಾದುದು. ಶೈಲಿ ಲಲಿತ ಮನೋಹರವಾದುದು. ಸಾಂಗತ್ಯವೆಂಬ ದೇಶೀ ಛಂದಸ್ಸನ್ನು ಇಷ್ಟು ವಿಸ್ತಾರವಾಗಿ ಪ್ರಯೋಗಿಸಿದ ಕವಿ ಕನ್ನಡದಲ್ಲಿ ಇನ್ನೊಬ್ಬನಿಲ್ಲ.

ಮುದ್ದಣ ಗದ್ಯ ಪರಂಪರೆಯನ್ನು ಪುನರ್ ರಚಿಸಿದ ಕವಿ. ಅವನ ಜೀವನಾನುಭವ ಅವನ ಕೃತಿಗಳಲ್ಲಿ ಸಂವೇದನೆಯಾಗಿ ಹರಿಯುತ್ತದೆ. ಅವನು ದಕ್ಷಿಣ ಕನ್ನಡದ ಶ್ರೀಮಂತ ಕವಿಯಾಗಿಯೂ ಅತೀವ ಬಡತನದಲ್ಲಿ ಬದುಕಿದವನು. ಪಿ.ಟಿ.ಮಾಸ್ತರನಾಗಿ ಅನಾರೋಗ್ಯದೊಂದಿಗೆ ತಾಳ-ಮೇಳ ಮಾಡಿಕೊಂಡು ಮನೋರಮೆಯೊಂದಿಗೆ ಹಂಚಿಕೊಂಡಿದ್ದಾನೆ. ಮನೋರಮೆ ಓದುಗರ ಪ್ರತಿನಿಧಿಯಾಗಿ, ಅಸಹಾಯಕಳಾಗಿ ಅವನಿದ್ದ ಕಾಲದ ಹೆಣ್ಣಿನ ಸಾಮಾಜಿಕ ಚಲನೆಯನ್ನು ದೃಷ್ಟಿಸುತ್ತಾಳೆ. ಕಾವ್ಯದ ಪದ್ಯ ಪರಂಪರೆಯನ್ನು ತ್ಯಜಿಸಿ ಗದ್ಯದ ಹೊಸದೊಂದು ಮಾರ್ಗವನ್ನು ಶೋಧಿಸಿಕೊಟ್ಟು – “ಪದ್ಯಂ ವದ್ಯಂ ಗದ್ಯಂ ಹೃದ್ಯಂ” ಎಂದು ಘೋಷಿಸಿ ದಿಟ್ಟತನದಿಂದ ರಾಮಾಯಣದ ಕಥೆಯನ್ನು ಹೇಳಿದ. ‘ಮುದ್ದಣ್ಣ ಆಧುನಿಕತೆಯಿಂದ ಬೆನ್ನು ತಿರುಗಿಸಿದ್ದು ಹೊಸ ಸಾಹಿತ್ಯಕ್ಕೆ ತಡೆಯನ್ನುಂಟು ಮಾಡುವುದಕ್ಕಾಗಿರದೆ ಪ್ರಾಚೀನ ಸಾಹಿತ್ಯಕ್ಕೆ ನಮ್ಮೆಲ್ಲರ ವತಿಯಿಂದ ಕೊನೆಯ ನಮಸ್ಕಾರ ಹೇಳುವುದಕ್ಕೆ’- (ಕೀರ್ತಿನಾಥ ಕುರ್ತಕೋಟಿ).

‘ಮುದ್ದಣ’ನ ಗದ್ಯದ ಆಯ್ಕೆಯೇ ಒಂದು ರೀತಿಯ ಪ್ರತಿಭಟನೆಯಾಗಿದೆ ಮತ್ತು ಆಧುನಿಕತೆಯ ಸಂಕೇತವಾಗಿದೆ’ (ಬಿಳಿಮಲೆ)

‘ಅಳಿದೊಡಂ ಉಳಿದೊಡಂ ಬಟ್ಟೆದೋರಿಪ ರಸಭರಿತ ಚರಿತಂ’ ರಾಮಾಯಣ. ಇದುವೇ ಅವನಿಗೆ ಅತ್ಯಂತ ಪ್ರಿಯವಾದ ವಸ್ತು ಮತ್ತು ಅವನ ಆದರ್ಶ.

ಗೋಪಾಲಕೃಷ್ಣ ಅಡಿಗರು ಒಂದು ಜನಾಂಗದ ಕಣ್ಣು ತೆರೆಸಿದ ಕವಿ. ಅವರು ತಮ್ಮ ಕಾಲದ ಸಾಮಾಜಿಕ, ರಾಜಕೀಯ ಹಾಗೂ ವೈಯಕ್ತಿಕ ಸಂವೇದನೆಗಳ ಮೂಲಕ ಓದುಗರನ್ನು ಮುಟ್ಟುವ ಪ್ರಯತ್ನ ಮಾಡಿದರು. ಸ್ವಾತಂತ್ರ್ಯಾನಂತರ ದೇಶದ ಕೆಟ್ಟ ಸಾಮಾಜಿಕ ಪರಿಸ್ಥಿತಿ ಮತ್ತು ರಾಜಕೀಯ ಜನವಿರೋಧೀ ಧೋರಣೆಗಳಿಗೆ ಸಿಟ್ಟುಗೊಂಡ ಕವಿ ನವ್ಯರಲ್ಲಿ ಪ್ರಸ್ತುತ ಪ್ರಜ್ಞೆಯನ್ನು ಜಾಗ್ರತಗೊಳಿಸಲು ಕಾವ್ಯ ಮಾಧ್ಯಮವನ್ನು ಬಳಸಿಕೊಂಡರು. ಕನ್ನಡದ ಹೊಸಕಾವ್ಯ ಹೊಸ ದಿಕ್ಕನ್ನು ಹಿಡಿಯಲು ಹೊಸ ವಿಚಾರ, ಉಗ್ರ ಶೈಲಿಯನ್ನು ಅಳವಡಿಸಿಕೊಂಡರು. ಅನೇಕ ನವ್ಯರು ಅಡಿಗರ ದಿಢೀರ್ ಭಕ್ತರಾದರು. ಅವರ ‘ನಡೆದು ಬಂದ ದಾರಿ’, ‘ಕಟ್ಟುವೆವು ನಾವು’, ‘ಚಂಡೆ ಮದ್ದಳೆ’ ನವ ಸಮಾಜವೊಂದರ ರಚನೆಗೆ ರಣ ಕಹಳೆಯಾಗುವ ಕಾವ್ಯ ಕೃತಿಗಳು. ‘ಅಡಿಗರು ಸಂಪ್ರದಾಯ ವಿರೋಧಿಗಳಲ್ಲ, ಅವರ ಕಾವ್ಯ ಸಾರ್ವಕಾಲಿಕ. ಮೌಲ್ಯಗಳ ಅನ್ವೇಷಣೆಗಾಗಿ ದುಡಿಯುತ್ತದೆ.’ ಎಂದಿದ್ದಾರೆ ಕುರ್ತುಕೋಟಿ.

ಕನ್ನಡದ ನವೋದಯ ಕಾವ್ಯದಲ್ಲಿ ಜೀವನ ಶ್ರದ್ಧೆ, ಆಶಾವಾದ, ನಂಬಿಕೆ, ಗೌರವ, ಪ್ರಕೃತಿ ಪ್ರೇಮ ಗುಣಾಂಶಗಳನ್ನು ಗುರುತಿಸಬಹುದಾಗಿತ್ತು. ದಕ್ಷಿಣ ಕನ್ನಡದಲ್ಲಿ ನವೋದಯದ ಕವಿಗಳು ಭಾವಗೀತೆಗಳನ್ನು ಬರೆದರೂ ಕಥನ ಗೀತಗಳತ್ತ ಅವರ ಒಲವು ಹೆಚ್ಚಾಗಿದ್ದುದನ್ನು ಕಾಣುತ್ತೇವೆ. ಕಥನ, ಕವನ, ಖಂಡಕಾವ್ಯ, ಸಣ್ಣ ಕಾವ್ಯಗಳಲ್ಲಿ ಇಲ್ಲಿಯ ಕವಿಗಳ ಪ್ರತಿಭೆ ಮಿಂಚಿದೆ. ಪಂಜೆ ಮಂಗೇಶರಾಯರ ‘ಕಡೆಕಂಜಿ’ ‘ಡೊಂಬರ ಚೆನ್ನಿ’ ಪಾಡ್ದನ ಕಥೆಯಾಗಿ ‘ಕೋಟಿ ಚೆನ್ನಯ’, ಗೋವಿಂದ ಪೈಗಳ ‘ಗೋಲ್ಗೋಥಾ’ ‘ವೈಶಾಖ’ ಮೊದಲಾದ ಖಂಡ ಕಾವ್ಯಗಳು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆಯಾಗಿವೆ. ಕಡಂಗೋಡ್ಲು ಶಂಕರ ಭಟ್ಟರ ಜನಪ್ರಿಯ ‘ಮಾದ್ರಿಯ ಚಿತೆ’, ‘ಹೊನ್ನಿಯ ಮದುವೆ’. ‘ಮುರಲೀನಾದ’ ಎಂಬ ಕಥನ ಕಾವ್ಯಗಳಲ್ಲಿ ನಲ್ಮೆಯ ಮುಖ್ಯ ಭಾವವಾಗಿದೆ. ಸೇಡಿಯಾಪು ಅವರ ‘ಶಬರಿ’ ‘ತರುಣಧಮನಿ’, ‘ಅಶ್ವಮೇಧಗಳು’ ಭಾವಪೂರ್ಣ ನೀಳ್ಗವಿತೆಗಳು. ನವೋದಯದ ಸಂದರ್ಭದಲ್ಲಿ ಕನ್ನಡ ಕವಿಗಳಿಗೆ ಆಂಗ್ಲ ಸಾಹಿತ್ಯದ ಪ್ರಭಾವ ಸಾಕಷ್ಟು ಆಗಿದೆ ಎಂದಾದರೂ ದಕ್ಷಿಣ ಕನ್ನಡದ ಕವಿಗಳಿಗೆ ಈ ಮಾತು ಅನ್ವಯಿಸುವುದಿಲ್ಲವೆಂದೇ ಹೇಳಬಹುದು. ಪಂಜೆ, ಗೋವಿಂದ ಪೈ, ಸೇಡಿಯಾಪು, ಕಡಂಗೋಡ್ಲು ಇವರ ಕಾವ್ಯವನ್ನು ಓದಿದಾಗ ಅವುಗಳಲ್ಲಿ ಯಾವುದೇ ಪರಕೀಯ ಪ್ರೇರಣೆಯನ್ನು ಗುರುತಿಸಲು ಕಷ್ಟವಾಗಬಹುದು. ಎಂ.ಎಸ್.ಪುಟ್ಟಣ್ಣ ಅವರ ‘ಮಾಡಿದ್ದುಣ್ಣೋ ಮಹಾರಾಯ’ ಸಮಕಾಲೀನ ಸಾಮಾಜಿಕ ಅಕೃತ್ಯಗಳನ್ನು ತೆರೆದು ತೋರಿಸುವ ಕನ್ನಡದ ಮಹತ್ವದ ಕಾದಂಬರಿ.

ಶೀನಪ್ಪ ಹೆಗ್ಗಡೆಯವರು (೧೮೯೦-೧೯೬೬) ಮೊಳಲಿಯಲ್ಲಿ ಒಂದು ಗುತ್ತಿಗೆ ಸೇರಿದವರು. ಅವರು ತುಳುನಾಡಿನ ಪ್ರತಿಷ್ಠಿತ ಸಾಹಿತಿ. ಅವರು ತುಳುವಿನಲ್ಲಿ ಬರೆದ ‘ಮಿತ್ಯನಾರಾಯಣನ ಕತೆ’ ತುಳುವಿನ ಮೊದಲ ಕಾದಂಬರಿ. ತುಳುವಿನಲ್ಲಿ ಕಾದಂಬರಿಯ ಒಂದು ಪರಂಪರೆ ಬೆಳೆದದ್ದೆ ಇಲ್ಲ ಎನ್ನುವಾಗ ‘ಮಿತ್ಯ ನಾರಾಯಣ’ ಆ ಕೊರತೆಯನ್ನು ತುಂಬುತ್ತದೆ. ಇದು ಮೊಳಲಿಯಲ್ಲಿ ನಡೆಯುವ ಕತೆ. ಮನುಷ್ಯ ಸುಳ್ಳಿನ ಗೆಲುವಿನಲ್ಲಿ ಕೆಲಕಾಲ ಸುಖ ಪಡೆದರೂ ಕೊನೆಯಲ್ಲಿ ಆಗುವುದು ಅಧಃಪತನ. ಮಾಡಿದ್ದನ್ನು ಉಣ್ಣಲೇ ಬೇಕು. ಅರಮನೆಯ ರಾಣೀವಾಸದಲ್ಲಿ ನಡೆಯುವ ಸಂಭಾಷಣೆಯಲ್ಲಿ ತುಳುವಿನ ಸೊಬಗು ಎದ್ದು ತೋರುವ ಅಂಶ.

ಮುಳಿಯ ತಿಮ್ಮಪ್ಪಯ್ಯನವರ ‘ನಾಡೋಜ ಪಂಪ’ ಪಂಪ ಕಾವ್ಯದ (ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ) ಅಧಿಕೃತ ವಿಮರ್ಶನ ಗ್ರಂಥ. ಪಂಪನ ಮುಂದಿನ ವಿಮರ್ಶೆಗೆ ಇದುವೇ ಮಾರ್ಗದರ್ಶನ ನೀಡಬಲ್ಲ ಬೃಹತ್‌ ಕೃತಿ. ‘ಪಾರ್ತಿಸುಬ್ಬ’ ಯಕ್ಷಗಾನ ಪ್ರಸಂಗ. ಕಲೆ, ಅಭಿನಯಗಳ ಕುರಿತಾದ ವಿಸ್ತೃತ ವಿವರಗಳನ್ನು ನೀಡುವ ಬಹುಮೂಲ್ಯ ಕೃತಿ. ಸಾಹಿತ್ಯದ ಕುರಿತಾದ ಅವರ ಲೇಖನಗಳೂ ಸಾಹಿತ್ಯ ವಿಮರ್ಶೆಯ ಮುಂದಿನ ನೆಲೆಯನ್ನು ನಿರ್ದೇಶಿಸುವ ಸಾರ್ಥಕ ರಚನೆಗಳು.

ಶಿವರಾಮ ಕಾರಂತರು ವಿಶ್ವಸಾಹಿತಿ. ಅವರನ್ನು ‘ಎನ್‌ಸೈಕ್ಲೋಪೆಡಿಯಾ’ ಎಂದು ಸಂಬೋಧಿಸಿದ್ದು ವ್ಯರ್ಥವಲ್ಲ. ಅವರ ಪ್ರಬುದ್ಧ ಜ್ಞಾನಕ್ಕೆ ಸಮಾನವಾದ ಸಾಹಿತಿ ಭಾರತದ ಸಂದರ್ಭದಲ್ಲಿ ಇನ್ನೊಬ್ಬನಿಲ್ಲ. ಅವರು ಕಾದಂಬರಿ ಸಾಮ್ರಾಟ, ಜ್ಞಾನಪೀಠ ದೊರೆತ ‘ಮೂಕಜ್ಜಿಯ ಕನಸು’ ಒಂದು ಅದ್ಭುತ ಸಂಸ್ಕೃತಿಯ ಪರಿಶೋಧನೆಗೆ ಹೊರಟ ಕಾದಂಬರಿ. ‘ಮರಳಿ ಮಣ್ಣಿಗೆ’ ಕೌಟುಂಬಿಕ ಜೀವನದ ಅನೇಕ ಮಗ್ಗಲುಗಳನ್ನು ಪರಿಶೀಲಿಸುವ ಮಹತ್ವಾಕಾಂಕ್ಷೀ ಕಾದಂಬರಿ. ‘ಚೋಮನ ದುಡಿ’ ಹೊಲೆಯನೋರ್ವನ ಬದುಕಿನ ನಂಬಿಕೆ ಮತ್ತು ಆಶೋತ್ತರಗಳನ್ನು ಚಿತ್ರಿಸುವ ಅಪೂರ್ವ ಕಾದಂಬರಿ. ಕಾರಂತರು ನಮ್ಮ ಕರಾವಳಿಯ ಭಾರ್ಗವ. ವಿಚಾರವಾದಿ, ವಿಚಾರವಾದ ಅವರ ಕಲೆಯ ಮೂಲ ಅಂತಃಸ್ಫುರಣೆ. ಅವರ ಸಮಕಾಲೀನರಾದ ಅನಕೃಷ್ಣರಾಯರೂ ವಿಚಾರವಾದಿ ಸಾಹಿತಿ. ಕಾರಂತರ ಕಾದಂಬರಿಗಳು ತುಳುನಾಡಿನಿಂದ ಮುಂಬಯಿ, ಮದ್ರಾಸು, ದಿಲ್ಲಿಗಳವರಗೆ ಪ್ರಯಾಣ ಮಾಡುತ್ತವೆ. ಅವರದು ವಿಸ್ತಾರವಾದ ವಿಜ್ಞಾನ ಜಗತ್ತು.

ಏರ್ಯ ಚಂದ್ರಭಾಗಿ ಕೆ. ರೈ ಹಳೆ ತಲೆ ಮಾರಿನ ಬರಹಗಾರರಲ್ಲಿ ಸ್ತ್ರೀಯ ಭಾವತುಡಿತಗಳನ್ನು ತನ್ನ ಬರವಣಿಗೆಯ ಕೇಂದ್ರ ವಸ್ತುವನ್ನಾಗಿಸಿಕೊಂಡು ಅನೇಕ ಕತೆ, ನೀಳ್ಗತೆ, ಕವನ ಲೇಖನಗಳನ್ನು ಬರೆದು ಪ್ರಕಟಿಸಿ ಹೆಸರು ಮಾಡಿದವರು ಏರ್ಯದ ಚಂದ್ರಭಾಗಿ ರೈಯವರು. ಇವರು ನಲ್ವತ್ತರ ದಶಕದಲ್ಲಿ ಶಿವರಾಮ ಕಾರಂತರ ಸಮಕಾಲೀನರಾಗಿ ಸಮಾಜ ಮತ್ತು ವ್ಯಕ್ತಿಯ ಜೀವನದ ಅನೇಕ ಮುಖಗಳ ಚಿತ್ರಣವನ್ನು ತಮ್ಮ ಬರಹಗಳಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾರೆ. ಚಂದ್ರಭಾಗಿಯವರಿಗೆ ಬದುಕಿನಲ್ಲಿ ಅಪರಿಮಿತ ಆಸಕ್ತಿ, ಶ್ರದ್ಧೆ, ಪ್ರೀತಿಗಳಿದ್ದವು. ೧೯೯೬ ಅವರ ಮೊದಲ ಪುಸ್ತಕ ಚಂದ್ರಭಾಗಿ ಕೆ ರೈ ಆವರ ಆಯ್ದ ಬರಹಗಳು ಹೊರಗೆ ಬಂತು. ಅವರ ಎರಡನೆಯ ಪುಸ್ತಕ ‘ಪ್ರೇಮವೇ ದೇವರು’ ೧೯೯೭ರಲ್ಲಿ ಮಂಗಳೂರಿನಲ್ಲಿ ಜರಗಿದ- ಅಖಿಲ ಭಾರತ ೬೬ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಯಿತು. ಇವರಿಗೆ ‘ಕಾಂತಾಬಾಯಿ ದತ್ತನಿಧಿ’ ಪುರಸ್ಕಾರ ಹಾಗು ‘ಅತ್ತಿಮಬ್ಬೆ’ ಪುರಸ್ಕಾರಗಳು ದೊರಕಿದವು.

ಚಂದ್ರಭಾಗಿಯವರ ಸಾಹಿತ್ಯ- ‘ಆಯ್ದಬರಹಗಳು’ ಅವರ ಮೊದಲ ಕೃತಿ. ೧೯೪೦ರಲ್ಲಿ ಇದರ ಬಿಡುಗಡೆಯಾಯಿತು. ಅವರ ಆಸಕ್ತಿಯ ಭಿನ್ನತೆ ಅವರ ಬರಹಗಳಲ್ಲಿ ಕಾಣುತ್ತದೆ. ಐತಿಹಾಸಿಕ, ಸಾಮಾಜಿಕ, ಜಾನಪದ, ಕಿರುಗತೆ, ಸ್ಥಳಪುರಾಣ, ಸ್ತ್ರೀಪರಚಿಂತನೆ ಅವರ ಲೇಖನಗಳ ಪ್ರಮುಖ ಅಂಶ. ‘ಮಹಿಳೆ’ ‘ಶಾಶ್ವತ ಸೌಂದರ್ಯ’ ‘ವೀರಭದ್ರ ದೇವರ ಜಾತ್ರೆ’ ಇವಲ್ಲದೆ ‘ಸಾಹಿತಿಯ ಸಂಕಷ್ಟ’ ‘ಪತಿವ್ಯಾಧಿ’ ಎಂಬ ಕಿರುಗತೆಗಳೂ ಈ ಸಂಗ್ರಹದಲ್ಲಿ ಇವೆ. “ಮಂಗಳ ಅಮಂಗಳ” ಒಂದು ನೀಳ್ಗತೆ. ವಿಧವಾ ಸಮಸ್ಯೆಯ ಕುರಿತು ಬೆಳಕು ಚೆಲ್ಲುವ ವಸ್ತು. ‘ಪ್ರೇಮವೇ ದೇವರು’ ಲೇಖನ ಸಂಗ್ರಹದಲ್ಲಿ ಸಾಮಾಜಿಕ ಕಳಕಳಿಯ ಇನ್ನಷ್ಟು ಲೇಖನಗಳಿವೆ. ‘ಹರಿಜನೋದ್ಧಾರ’ ‘ಹಳ್ಳಿಗಳ ಹೆಂಗಸರು’ ‘ಕಾಲಕ್ಕೆ ತಕ್ಕ ಕೋಲ’ ಇವು ಕೆಲವು ಅವರ ಕೃತಿಗಳು. ಚಂದ್ರಭಾಗಿಯವರು ನಾಟಕ, ಪ್ರವಾಸ ಕಥನ, ವಿಡಂಬನೆ ಹಾಗೂ ತುಳುವಿನಲ್ಲಿ ಕವಿತೆಗಳನ್ನು ಬರೆದಿದ್ದಾರೆ. ‘ಭಕ್ತೆ ಮೀರಾಬಾಯಿ’ ಅಂದಿನ ದಿನಗಳಲ್ಲಿ ಅವರ ಜನಪ್ರಿಯ ನಾಟಕ. ತುಳು ಜನಪದದಲ್ಲಿ ಅವರ ‘ಮಾಣಿಗ ಬಲ್ಲಾಳ’ ಎಂಬ ಕತೆ ಸೆಡಿಯಾಪು ಕೃಷ್ಣ ಭಟ್ಟರ ‘ಚೆನ್ನೆಮಣೆ’ಯ ಕತೆಯಂತಿದೆ. ಅವರ ತುಳು ಕವಿತೆಗಳ ಸೊಗಸಿಗೆ ಒಂದೆರಡು ಉದಾಹರಣೆಗಳು

ತೂದು ಮುಗಿಯಂದ್ ತುಳುನಾಡ್‌ದ ಪೊರ್‍ಲುನು
ಕೇಂಡದ್ ಬೋಡಿಯಂದ್ ತುಳು ಭಾಷೆದ ತಿರ್‍ಲನ್

ಹೀಗೆ ತುಳುನಾಡಿನ ಸೊಬಗು.

ತರೆಟ್ಟ್ ಪಾಲೆದ ದೊರೆ ಟೊಪ್ಪಿ
ಮೋನೆದ ಅರದಲ ಮಂಜಲ್ ಬಣ್ಣ
ಕೆಂಪುದ ಅಂಗಿ, ಜೋಲುನ ಲುಂಗಿ
ಕೈಟ್ಟೊಂಜಿ ಓಲೆದ ತತ್ರ
ಕಾರ್‌ಡ್ ಗಗ್ಗರ ಕುಲುಕಾಟ

ಇದೊಂದು ‘ಅಟಿಕಳಂಜ’ ವೇಷದ ಸೊಗಸು.

ನಾಡೋಜ ಕಯ್ಯಾರ ಕಿಂಙ್ಞಣ್ಣ ರೈ – ಕಯ್ಯಾರ ತುಳುನಾಡಿನ ಮತ್ತು ಕನ್ನಡದ ನಾಡೋಜ. ಅತ್ಯಂತ ಮಹತ್ವದ ಸಮಕಾಲೀನ ಹಿರಿಯ ಕವಿ. ಇವರು ಕೇರಳದ ಗಡಿನಾಡು ‘ಕಾಸರಗೋಡಿ’ನವರು ಎನ್ನುವ ಒಂದು ಕಾರಣಕ್ಕೆ ಹೊರನಾಡಿನವರು ಎನ್ನಲಾಗುವುದಿಲ್ಲ. ಅವರ ಕಾವ್ಯದ ಆಳ ಮತ್ತು ಶ್ರೇಷ್ಠತೆ ತುಳುನಾಡಿಗೆ ಗೌರವ ತರುವ ವಿಷಯ. ಕರಾವಳಿಯ ಮಹಾಕವಿ, ಕರ್ನಾಟಕ ಗಡಿನಾಡರತ್ನ ಎಂಬ ಬಿರುದುಗಳಿಂದ, ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಗೌರವದಿಂದ ಶೋಭಿತರಾದ ಕೈಯಾರರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲು ಕೃತಿರಚನೆ ಮಾಡಿದ್ದಾರೆ. ೬೬ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಪೀಠವನ್ನು ಅಲಂಕರಿಸಿದ್ದಾರೆ. ತನ್ನ ಜೀವಮಾನದಲ್ಲಿ ಕಾಸರಗೋಡನ್ನು ಕರ್ನಾಟಕಕ್ಕೆ ವಿಲೀನಗೊಳಿಸಬೇಕೆಂದು ಹೋರಾಟ ನಡೆಸಿದ್ದಾರೆ.

ಹಾಗೆಯೇ ದೇಶಭಕ್ತ ನಾರಾಯಣ ಕಿಲ್ಲೆ. ಪೇಜಾವರ ಸದಾಶಿವ ರಾವ್, ಕವಿಭೂಷಣ ವೆಂಕಪ್ಪ ಶೆಟ್ಟರು, ಗಿರಿಬಾಲೆ, ಶಿಕಾರಿ ಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸಿದ ಜತ್ತಪ್ಪ ರೈ (ಇವರು ಮುದ್ದಣ್ಣನ ‘ರಾಮಾಶ್ವಮೇಧ’ವನ್ನು ಸಮರ್ಥವಾಗಿ ತುಳುವಿಗೆ ಅನುವಾದ ಮಾಡಿದ್ದಾರೆ) ಮೊದಲಾದ ಲೇಖಕರೂ ತುಳು ಸಾಹಿತ್ಯ ಸಂಪತ್ತನ್ನು ಬೆಳೆಸಿದ್ದಾರೆ.

ಸಾಹಿತ್ಯದ ಪ್ರೀತಿ ಮತ್ತು ಅಭಿರುಚಿ ತುಂಬಾ ಮಹತ್ವದ್ದು. ಇದು ಪುಸ್ತಕ ಪ್ರೀತಿಯನ್ನೂ ಒಳಗೊಂಡಿರುತ್ತದೆ. ತುಳುವರು ಕನ್ನಡ ಭಾಷಿಕರೂ ಹೌದು. ಕನ್ನಡದಂತಯೇ ತುಳುವಿನಲ್ಲಿಯೂ ಸಾಹಿತ್ಯವನ್ನು ರಚಿಸಬಲ್ಲರು. ಇಂದಿನ ಯುವಕರಲ್ಲಿ ಅಭಿರುಚಿಗೆ ಕೊರತೆಯಿಲ್ಲ. ಬರೆಯುವ ಅಭಿಲಾಷೆಯೂ ಸಾಕಷ್ಟಿದೆ. ಆದರೆ ಅವರು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ತಮ್ಮ ನಾಡಿನ ಸಾಹಿತ್ಯ ಕೃತಿಗಳನ್ನು ಓದಿ ಅರಿತುಕೊಳ್ಳುವುದು ಇಂದಿನ ಅಗತ್ಯವಾಗಿದೆ. ಹೀಗೆ ಮಾಡುವುದರಿಂದ ತಮ್ಮ ನಾಡಿನ ಸಾಹಿತ್ಯ ಪ್ರತಿಷ್ಠೆಯ ಪರಿಚಯ ಉಂಟಾಗಿ, ಅವರ ಶ್ರೀಮಂತಿಕೆಯಿಂದ ಪ್ರೇರಣೆಯನ್ನು ಪಡೆಯಲು ಸಾಧ್ಯವಿದೆ. ಮುದ್ದಣ ಅಲ್ಪ ಜೀವಾವಧಿಯಲ್ಲಿ ಬದುಕಲು ಹೋರಾಡುವುದರ ಜೊತೆಗೆ ಸಾಹಿತ್ಯದ ಹಾಗೂ ಯಕ್ಷಗಾನದ ಆಸಕ್ತಿಯನ್ನು ಸಂಗ್ರಹಕ್ಕೆ ವಿನಿಯೋಗಿಸಿ ಪ್ರಬುದ್ಧ ಸಾಹಿತಿಯಾದನು. ಕನ್ನಡ ಸಾಹಿತ್ಯದ ಸಂಧಿಕಾಲದ ಸಂದಿಗ್ಧಗಳಿಗೆ ತೆರೆದ ದಾರಿಯಾದನು. ಹೊಸದಾದೊಂದು ಗದ್ಯ ಪದ್ಧತಿಯನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟನು. ಇದು ಯಾವುದೇ ಸಾಹಿತ್ಯಾಸಕ್ತಿಗೆ ಪ್ರಚೋದನೆಯಾಗಬಲ್ಲುದು.

ಎಂ.ಎಸ್.ಪುಟ್ಟಣ್ಣ, ನಿರಂಜನ, ಎಂ.ಎನ್.ಕಾಮತ್, ಆನಂದಿ ಸದಾಶಿವರಾವ್, ಕೆ.ಟಿ.ಗಟ್ಟಿ, ವ್ಯಾಸರಾವ್ ಬಲ್ಲಾಳ, ಮಂದಾರ ಕೇಶವ ಭಟ್, ಕು.ಶಿ. ಹರಿದಾಸ ಭಟ್, ಪಾವೆಂ., ಪರಮೇಶ್ವರ ಬಟ್, ಬೆಳ್ಳೆ ರಾಮಚಂದ್ರರಾಯರು ಮತ್ತು ಇನ್ನೂ ಹಲವು ಮಹತ್ವದ ಸಾಹಿತಿಗಳು ತುಳುನಾಡ ಸಾಹಿತ್ಯವನ್ನು ಬೆಳೆಸಿದ್ದಾರೆ. ತುಳುನಾಡಿನಲ್ಲಿ ‘ತುಳು ಸಾಹಿತ್ಯ ಅಕಾಡೆಮಿ’ ಇದೆ. ಇದಕ್ಕೆ ಕರ್ನಾಟಕ ಸರಕಾರದಿಂದ ಅನುದಾನ ಸಿಗುತ್ತದೆ. ತುಳುನಾಡಿನಲ್ಲಿ ಸಾಹಿತ್ಯ-ಸಂಸ್ಕೃತಿಯ ಹಲವಾರು ಕಾರ್ಯಕ್ರಮಗಳು ದಿನನಿತ್ಯ ನಡೆಯುತ್ತಿರುತ್ತವೆ. ಮುಂಬಯಿ ಹಾಗು ತುಳು- ಕನ್ನಡಿಗರಿರುವ ಎಲ್ಲ ಹೊರನಾಡುಗಳಲ್ಲಿ ಸಾಹಿತ್ಯಕ ಚಟುವಟಿಕೆಗಳು ಸತತ ಜರಗುತ್ತಿರುತ್ತವೆ. ಹೀಗಿರುವಾಗ ತುಳುನಾಡಿನಂಗಳದ ಪರಿಮಳ ದ್ರವ್ಯವನ್ನು ದೂರ ದೂರಕ್ಕೆ ಹರಡುವ ಸಲುವಾಗಿ ‘ತುಳುನಾಡ ಸಾಹಿತ್ಯ ಸಿರಿ’ ಎಂಬ ಬೃಹತ್‌ ಸಂಪುಟವನ್ನು ಯಾಕೆ ಪ್ರಕಟಿಸಬಾರದು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ಬಂದರೆ ತಾನೆ ಏನು ?
Next post ಮತ್ಸರ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…