ಶಬರಿ – ೧೮

ಶಬರಿ – ೧೮

ತಿಮ್ಮರಾಯಿ ಒಬ್ಬನೇ ಕೂತಿದ್ದ.
ಕಾಂಡ ಕೊಂಬೆಗಳಿಲ್ಲದ ಬುಡಗಳು-ರುಂಡ ಮುಂಡಗಳಿಲ್ಲದ ಪಾದಗಳು!
ಅವನ್ನೂ ಎತ್ತಿ ಹಾಕುತ್ತಾರೆ. ಮಟ್ಟಸ ಮಾಡುತ್ತಾರೆ.
ಇಷ್ಟು ಸಲೀಸಾಗಿ ಶಬರಿಯೊಳಗಿನ ಹೂಸ ಜೀವವನ್ನು ತೆಗೆಯಲಾದೀತೆ?
ಸೂರ್ಯ ಬರದಿದ್ದರೆ ಹೂಸ ಜೀವದ ಗತಿ? ಶಬರಿಯ ಗತಿ?
ಈಗ ಎಲ್ಲ ಅಲ್ಲೋಲ-ಕಲ್ಲೋಲ-ಬಂಡಬಿದ್ದ ಬಾವಿ!
ಕಪಿಲೆಯ ಬಾನಿ ನೀರಿಗೆ ಇಳಿದೀತೆ?
ನೀರು ತುಂಬಿಕೊಂಡು ಮೇಲೇರೀತೆ?
ಕಾಲುವೆ ತುಂಬ ನೀರು ಹರಿಸೀತೆ?
ಇಲ್ಲವೆ-ಬಂಡಯ ಮೇಲೊಂದು ಬಂಡೆ?
ಆಗ ಶಬರಿ ಏನಾದಾಳು? ಹಟ್ಟಿ ಏನಾದೀತು?

ಹಟ್ಟಿಯ ಹಿರಿಯನಾಗಿ ಯಾರನ್ನೂ ತಡೆಯಲಿಲ್ಲ. ಒಳಗೆ ಬಂದ ಸೂರ್ಯನನ್ನು ಬೇಡ ಎನ್ನಲಿಲ್ಲ. ಶಬರಿಯ ಆಸೆಗೆ ಅಡ್ಡಿಮಾಡಲಿಲ್ಲ. ಈಗಲೂ ಅಷ್ಟೆ. ಮಗಳ ಹಾದಿಯಲ್ಲಿ ಹೂವು ಚೆಲ್ಲಬೇಕು….

ಒಂದು ವೇಳೆ ಸೂರ್ಯ ಬರದಿದ್ದರೆ?
ತಿಮ್ಮರಾಯಿಗೆ ತಡೆದುಕೊಳ್ಳಲಾಗಲಿಲ್ಲ.
ಎದ್ದು ಹೊರಟ. ಬೆಟ್ಟಗುಡ್ಡಗಳಲ್ಲಿ ಒಬ್ಬಂಟಿಯಾಗಿ ಓಡಾಡಿದ.
ರಾತ್ರಿ ಹೊತ್ತಾದ ಮೇಲೆ ಮನೆಗೆ ಬಂದ.
ಬಂದಾಗ ಹೆಂಡದ ಬುಂಡೆ ಕೈಯ್ಯಲ್ಲಿತ್ತು.
ಶಬರಿ ಬೇಸರದಿಂದ “ಏನಪ್ಪ ಇದೆಲ್ಲ?” ಎಂದಳು.

“ಏಟ್ ದಿನ ಆತವ್ವ ಕುಡ್ದು. ಏನೊ ಇವತ್ತು ಒಸಿ ರುಚಿ ನೋಡಾನ ಅನ್ನಿಸ್ತು. ಬ್ಯಾಡ ಅಂದ್ರೆ ಬಿಸಾಕ್ ಬಿಡ್ತೀನಿ.” ಎಂದು ತಿಮ್ಮರಾಯಿ ಹೇಳಿದಾಗ, ಶಬರಿ ಅಪ್ಪನ ಕೈಹಿಡಿದು “ಜಾಸ್ತಿ ಕುಡಿಬ್ಯಾಡ ಕಣಪ್ಪ? ಎಂದು ಕೇಳಿಕೊಂಡಳು.

ತಿಮ್ಮರಾಯಿ ಕೂತುಕೊಂಡ. “ಉಂಬಾಕಿಕ್ಕವ್ವ” ಎಂದು ಕೇಳಿದ.
“ಯಾಕಪ್ಪ ಕುಡ್ಯಾಕಿಲ್ವ”- ಶಬರಿ ಆಶ್ಚರ್ಯದಿಂದ ಕೇಳಿದಳು.
“ಇಲ್ಲ ಕಣವ್ವ. ಉಂಬ್ತೀನಿ. ಇಕ್ಕವ್ವ ಉಂಬಾಕೆ.”

ಶಬರಿ ಸಂತೋಷದಿಂದ ಊಟಕ್ಕೆ ಇಟ್ಟಳು. ತಿಮ್ಮರಾಯಿ ಹೂಟ್ಟೆ ತುಂಬ ಊಟಮಾಡಿದ. ಆಮೇಲೆ “ಮಲೀಕಂಬ್ತೀನಿ ಕಣವ್ವ” ಎಂದು ದುಪ್ಪಟಿ ಹೊದ್ದುಕೊಂಡ.

ಶಬರಿ ತಾನೂ ಊಟ ಮಾಡಿ ಹೊರಬಂದಳು.

ಇಂದು ನಡೆದ ಘಟನೆಯ ಬಗ್ಗೆ ಮಾತನಾಡಬೇಕೆಂದು ಎಲ್ಲರನ್ನೂ ಕರೆದಳು. ಎಲ್ಲರೂ ಅವರವರ ಭಾವ ಬಿಚ್ಚಿಟ್ಟರು. ನವಾಬ್ ಮತ್ತು ಗೆಳೆಯರು ಬಂದ ಮೇಲೆ ಸರಿಯಾದ ತೀರ್‍ಮಾನಕ್ಕೆ ಬರಬೇಕೆಂಬುದು ಹೆಚ್ಚೂಕಮ್ಮಿ ಎಲ್ಲರ ಅನಿಸಿಕೆಯಾಗಿತ್ತು.

ಶಬರಿಯ ಜವಾಬ್ದಾರಿ ಹೆಚ್ಚಾಗಿತ್ತು. ನವಾಬ್-ಗೆಳೆಯರು ಬರುವವರೆಗೆ ಹಟ್ಟಿಯ ಹುರುಪನ್ನು ಕಾಯ್ದುಕೊಳ್ಳಬೇಕಾಗಿತ್ತು.

ಒಬ್ಬಾತ ಹೇಳಿದ- “ತೋಪು ತಿರ್‍ಗಾ ಬರಾಕಿಲ್ಲ. ಗಲಾಟೆ ಮಾಡ್ತಾನೇ ಇರಾದ್ಯಾಕೆ?”

ಶಬರಿ ಉತ್ತರಿಸಿದಳು- “ತೋಪು ಇದ್ ಜಾಗ ನಮ್ದು ಅಂಬ್ತ ಕೇಳ್ಬೇಕು. ಆಕಡೆ ಬಯಲೈತಲ್ಲ ಅದನ್ನ ನಮ್ಗೇ ಕೊಡ್ಬೇಕು ಅಂಬ್ತಾನೂ ಕೇಳ್ಬೇಕು. ನಮಿಗ್‌ ಸಿಕ್ಕಿದ್‌ ಮ್ಯಾಲ, ತೋಪಿದ್‌ ಜಾಗ್‌ದಾಗೆ ನಾವೇ ಮರಗಿಡ ಬೆಳುಸ್ಬೇಕು. ಉಳಿದಿದ್ರಾಗೇ ಒಟ್ಟಿಗೇ ಬೆಳೆ ಬೇಳೀಬೇಕು.” ಸಣ್ಣೀರ ಹೇಳಿದ- “ನೀರ್‍ನಾಗ್ ಇಳುದ್ ಮ್ಯಾಗೆ ಮಳೆ ಏನು, ಚಳಿ ಏನು? ತಿರ್‍ಗಾ ಹಿಂದಕ್ ನೋಡ್‌ಬಾರ್‍ದು.”

ಹೀಗೆ ಮಾತುಕತೆ ನಡೆದು ನವಾಬನ ನಿರೀಕ್ಷೆಯಲ್ಲಿ ಎಲ್ಲರೂ ಮಲಗಲು ಹೊರಟರು. ಅಷ್ಟರಲ್ಲಿ ಸಣ್ಣೀರ ಒಂದು ಅನುಮಾನ ಹೇಳಿದ- “ಸ್ಯಬರವ್ವ, ನೆನ್ನೆ ಕತ್ಲಾಗ್ ಮರ ಕೊಯ್ದಂಗೆ ಇವತ್ತು ನಮ್‌ ಅಟ್ಟಿಗೇನೂ ಮಾಡಲ್ಲ ಅಂಬ್ತೀಯ?”

ಎಲ್ಲರೂ ಸ್ತಬ್ಧವಾಗಿ ನಿಂತರು. ಇಲ್ಲ, ಹೌದು- ಎರಡೂ ಹೇಳಲಾಗದ ಸ್ಥಿತಿ, ಆದರೂ ಶಬರಿ ಧೈರ್ಯತುಂಬಿದಳು. “ಅಂಗೆಲ್ಲ ಏನೂ ಆಗಾಕಿಲ್ಲ. ಅಂಗ್ ಮಾಡಂಗಿದ್ರೆ ಎಂದೋ ಮಾಡಾರು; ಈಟ್‌ ದಿನ ಸುಮ್ಕಿರ್‍ತಿರ್‍ಲಿಲ್ಲ.” ಯೋಚಿಸಿದಾಗ ಅದೂ ಸರಿಯೆನ್ನಿಸಿತು. ಹಾಗೂ ಹೀಗೂ ಮತ್ತೆ ಮಾತುಕತೆ ಶುರುವಾಯಿತು. ಸಣ್ಣೀರ ತನ್ನ ಅನುಮಾನ ಹಗುರವಾಗಿ ತಗೆದುಕೂಳ್ಳಬಾರದೆಂದು ಮತ್ತೆ ಮತ್ತೆ ಹೇಳಿದ. ಶಬರಿ ಮತ್ತೆ ಅದೇ ಧೈರ್ಯದ ಮಾತಾಡಿದಳು. ಈ ಮಧ್ಯೆ ಹುಚ್ಚೀರ ಪುಸ್ತಕ ತಂದು ಏನನ್ನೋ ಬರೆದು ತೋರಿಸಿದ.

“ನಾನು ಎಚ್ಚರವಾಗಿ ಕಾಯುತ್ತೇನೆ” ಎಂದು ಬರೆದಿದ್ದ ತಪ್ಪಿಲ್ಲದೆ.

ಹಾಗಾದರೆ ಇಬ್ಬರು ಮೂವರು ಸರದಿಯ ಮೇಲೆ ಕಾಯುವುದು ಸರಿ ಎಂಬ ತೀರ್ಮಾನಕ್ಕೆ ಬಂದರು. ಹುಚ್ಚೀರನ ಜೊತೆಗೆ ಮತ್ತಿಬ್ಬರನ್ನು ಮೊದಲ ಸರದಿಗೆ ಆಯ್ಕೆ ಮಾಡಿದರು. ಉಳಿದವರು ಮಲಗಲು ಹೋದರು.

ಶಬರಿ ಮನೆಯೊಳಗೆ ಹೋದಾಗ ಲಕ್ಷ್ಮಕ್ಕ ಹಿಂದೆಯೇ ಬಂದಳು. ಮಲಗಿರುವ ತಿಮ್ಮರಾಯಿಯನ್ನು ನೋಡಿ “ಈಟ್‌ ಬ್ಯಾಗ ಮಲೀಕಂಡೈತೆ” ಎಂದು ಉದ್ಗಾರ ಮಾಡಿ. ಮೆತ್ತಗೆ “ಎಂಗೈತೆ ನಿನ್ ವೊಟ್ಟೆ. ತಲೆ ತಿರ್‍ಗಾದು ಅದೂ ಇದೂ ಏನೂ ಇಲ್ವ?” ಎಂದು ಕೇಳಿದಳು. ಶಬರಿ, ತಿಮ್ಮರಾಯಿಯ ಕಡೆ ನೋಡುತ್ತ “ಏನೂ ಇಲ್ಲ” ಎಂದಳು. ಲಕ್ಷ್ಮಕ್ಕ “ವೊಟ್ಟೀಗಿರಾ ಕೂಸ್ನ ಚಂದಾಗ್ ನೋಡ್ಕಾಬೇಕವ್ವ” ಎಂದು ಕೆನ್ನೆ ಚಿವುಟಿ, ನಗುತ್ತಾ ಹೊರಟಳು. ಶಬರಿ, ತಿಮ್ಮರಾಯಿ ಹತ್ತಿರ ಬಂದು ದುಪ್ಪಟಿಯನ್ನು ಸರಿಯಾಗಿ ಹೊದಿಸಿದಳು. ಮಗುವಿನಂತೆ ಮುದುಡಿ ಮಲಗಿದ್ದ ಅಪ್ಪನ ತಲೆ ನೇವರಿಸಿದಳು.

“ಅಪ್ಪಯ್ಯ ಏನೋ ತಲೇಗ್‌ ಅಚ್ಕಂಡೈತೆ. ಯಾಕೊ ಬಾಯ್ ಬಿಡ್ತಾ ಇಲ್ಲ. ನನ್ತಾವ್ ಯಾವ್ದೂ ಮುಚ್ಚಿಡ್ತಿರ್‍ಲಿಲ್ಲ….. ಯಾಕಪ್ಪ ಇಂಗ್‌ ಮಾಡ್ತೀಯ? ನನ್ತಾವೆಲ್ಲ ಯೇಳ್ಕಳಪ್ಪ.”

ಮನಸ್ಸು ಮಾತಾಡಿಕೊಂಡಿತು.

ಶಬರಿ ಅಪ್ಪನ ಮಗ್ಗುಲಲ್ಲಿ ಕೂತು ಮುಖವನ್ನೇ ದಿಟ್ಟಿಸುತ್ತ ಮತ್ತೆ ತಲೆಯನ್ನು ನೇವರಿಸಿ, ಮಗುವನ್ನು ಮಲಗಿಸುವಂತೆ ಮೃದುವಾಗಿ ಮೈ ತಟ್ಟಿದಳು.

ಎಷ್ಟೋ ಹೊತ್ತು ಹಾಗೆ ಕೂತಿದ್ದಳು.

ಎದ್ದು ಮಲಗಲು ಹೋಗುವಾಗ ಅಪ್ಪನ ಪಕ್ಕದಲ್ಲಿದ್ದ ಹಂಡದಬುಂಡೆಯತ್ತ ನೋಡಿದಳು.

ಬುಂಡೆ ಬರಿದಾಗಿತ್ತು.
* * *

ಕೋಳಿ ಕೂಗುವ ಹೂತ್ತು.

ನರಳುವ ಸದ್ದು; ತನ್ನ ಹಸರು ಹಿಡಿದು ಕರೆದ ದನಿ; ಪರಿಚಿತ ದನಿ. ಮತ್ತೆ ಮತ್ತೆ ಕರೆದಂತೆ.

ನಿದ್ದೆಮಂಪರಿನಲ್ಲಿ ಎದ್ದಳು ಶಬರಿ.

ಎದ್ದು ನೋಡಿದರೆ ತಿಮ್ಮರಾಯಿ ನರಳುತ್ತಿದ್ದಾನೆ. ಮೇಲೇಳಲು ಪ್ರಯತ್ನ ಮಾಡುತ್ತ, ಎದೆ ಹಿಡಿದುಕೊಂಡು “ಉರಿ ಉರಿ” ಎಂದು ನರಳುತಿದ್ದಾನೆ.

ಗಾಬರಿಗೊಂಡ ಶಬರಿ ಅಪ್ಪನ ಹತ್ತಿರ ಬಂದಳು. ಕೂಡಿಸಿದಳು. “ಯಾಕಪ; ಏನಾಗ್ತಾ ಐತಪ್ಪ?” ಎಂದು ಕಳವಳದಿಂದ ಕೇಳಿದಳು.

“ಎದೇ ಉರೀತಾ ಐತೆ ಕಣವ್ವ. ಅಂಗೇ ವೊಟ್ಟೇನಾಗೂ ಉರಿ ಐತೆ ಮಗ್ಳೆ” ಎಂದು ತಿಮ್ಮರಾಯಿ ನರಳಿದಾಗ ಶಬರಿಗೆ ಭಯ. ತಕ್ಷಣ “ಸಣ್ಣೀರ, ಉಚ್ಚೀರ, ಲಚ್ಮಕ್ಕ, ಪೂಜಾರಪ್ಪ…” ಎಂದು ಒಬ್ಬೊಬ್ಬರನ್ನೇ ಕೂಗತೂಡಗಿದಳು.

ತಿಮ್ಮರಾಯಿ “ಒಸಿ ಇರವ್ವ; ಇರವ್ವ ಒಸಿ” ಎಂದು ಕೈಹಿಡಿದು ಜಗ್ಗಿದರೂ ಕೇಳದೆ ಶಬರಿ ಎದ್ದೋಡಿದಳು. ಕೂಗಿದಳು. ಕಾವಲು ಕಾಯುತ್ತಿದ್ದವರನ್ನೂ ಒಳಗೊಂಡಂತೆ ಎಲ್ಲರೂ ಓಡೋಡಿ ಬಂದರು. ಅವೇಳೆಗೆ ತಿಮ್ಮರಾಯಿ ಕುಸಿದುಬಿಟ್ಟಿದ್ದ. ಎದೆ ಹಿಡಿದು ಒದ್ದಾಡುತ್ತಿದ್ದ. ಶಬರಿಯ ಕಡೆ ನೋಡಿ “ಬಾಮಗ್ಳೇ” ಎಂದು ಕರೆದ; ಕೈ ಹಿಡಿದುಕೊಂಡ.

“ನಾನ್ ವೋಗ್ತೀನಿ… ವೋಗ್ತೀನಿ… ಸೂರ್ಯ ಬತ್ತಾನೆ… ಇವತ್ತಲ್ಲ ನಾಳೆ ಬಂದೆ ಬತ್ತಾನೆ… ವೊಟ್ಟೇಗಿರಾ ಕೂಸ್ನ ಚಂದಾಗ್ ನೋಡ್ಕ ಮಗಳೆ… ಚಂದಾಗ್ ನೋಡ್ಕ ಮಗಳೆ… ಚಂದಾಗ್ ನೋಡ್ಕ…”

ತಿಮ್ಮರಾಯಿ ಮಾತಿನಿಂದ ಶಬರಿ ಬೆಚ್ಚಿಬಿದ್ದಳು.
‘ವೊಟ್ಟೇಗಿರ ಕೂಸು…..”

ಎಲ್ಲಾರೂ ಪ್ರಶ್ನಾರ್ಥಕವಾದರು-ಲಕ್ಷ್ಮಕ್ಕನನ್ನು ಹೊರತುಪಡಿಸಿ. ಶಬರಿಗೆ ಸ್ಪಷ್ಟವಾಯಿತು. ಅಪ್ಪನಿಗೆ ಎಲ್ಲವೂ ಗೊತ್ತಾಗಿದೆ. ಹೇಗೇಂತ ಗೊತ್ತಿಲ್ಲ… ಒಟ್ಟಿನಲ್ಲಿ ಅಪ್ಪ ಹಚ್ಚಿಕೊಂಡಿದ್ದಾನೆ… ಲಕ್ಷ್ಮಕ್ಕನ ಕಡೆ ನೋಡಿದಳು. ಆಕೆ ಶಬರಿಯ ಬಳಿ ಕೂತು ಮೃದುವಾಗಿ ಬೆನ್ನು ತಟ್ಟಿದಳು. ಅದರಲ್ಲಿ ಸಾಂತ್ವನದ ಸಾಲುಗಳಿದ್ದವು. ತಿಮ್ಮರಾಯಿ ಮತ್ತೆ ಮಾತಾಡಿದ- “ನನ್ ಮಗ್ಳು ಇನ್ ಮ್ಯಾಲೆ ನಿಮ್ಗೆಲ್ಲಾರ್‍ಗೂ ಮಗ್ಳು. ಚಿಂದಾಗ್‌ ನೋಡ್ಕಳ್ಳಿ. ಸೂರ್ಯ ಬಂದಾಗ ಮದ್ವೆ ಮಾಡ್ರಿ. ನನ್ ಮಗ್ಳ ವೊಟ್ಟೇನಾಗೆ ಸೂರ್ಯನ್ ಕೂಸು ಬೆಳೀತಾ ಐತೆ. ಇನ್‌ ಮ್ಯಾಗ್ ಇವ್ಳು ನಿಮ್ ಮಗ್ಳು…. ನಿಮ್ಮ ಮಗ್ಳು….

ಮಾತು ನಿಂತಿತು.
ಮನೆಯ ತುಂಬ ಅಳು.
ಯಾರ ಅಳು ಎಂದು ಬಿಡಿಸಿ ಹೇಳಲಾಗದಂಥ ರೋಧನ.
ಅದರಲ್ಲಿ ಎದ್ದು ಕೇಳಿಸಿದ್ದು ಶಬರಿಯ ಆಕ್ರಂದನ.
ಲಕ್ಷ್ಮಕ್ಕ ಮುಂತಾದವರು ಅಳುತ್ತಲೆ ಶಬರಿಯ ಅಳುವನ್ನು ನಿಲ್ಲಸಲು ಪ್ರಯತ್ನಿಸಿದರು. ಆದರೆ ಶಬರಿ ಸುಸ್ತಾಗುವವರಗೆ ಅತ್ತಳು.
ಬೆಳಗಾದ ಮೇಲೆ ಪೂಜಾರಪ್ಪ ನೆಂಟರಿಷ್ಟರಿಗೆಲ್ಲ ಹೇಳಿಕಳಿಸಿದ.

ಎಲ್ಲರೂ ಬಂದು ಸೇರಿ ಮಣ್ಣು ಮಾಡುವ ವೇಳೆಗೆ ಸಾಯಂಕಾಲವಾಗಿತ್ತು. ಅಲ್ಲೀವರೆಗೆ ಒಬ್ಬೊಬ್ಬರದು ಒಂದೊಂದು ಊಹೆ; ವ್ಯಾಖ್ಯಾನ. ಇತ್ತೀಚಿಗೆ ಏನೋ ಹಚ್ಚಿಕೊಂಡಿದ್ದ. ಮಗಳು ಬಸುರಿಯಾದ ವಿಷಯವೇ ಇರಬೇಕು; ಅದಕ್ಕೇ ಸತ್ತ ಎಂಬ ಗುಸುಗುಸು. ಹೆಚ್ಚು ಕುಡೀತಿದ್ದ; ಕರುಳು ಸುಟ್ಟು ಸತ್ತ ಅಂತ ಇನ್ನೊಂದು ಊಹೆ. ಒಟ್ಟಿನಲ್ಲಿ ಹೊಟ್ಟೇನೋವು, ಎದೆನೋವು ಅಂತ ಸತ್ತದ್ದಂತೂ ನಿಜ. ಸಾವಿಗೆ ಇಂಥದೇ ಕಾರಣ ಯಾಕೆ ಬೇಕು? ಅದು ಬರುವಾಗ ಬಂದೇ ಬರುತ್ತೆ- ಎಂಬುದು ಕೊನೆಯ ಮಾತು.

ಒಂದು ಕಡೆ ಶಬರಿಯ ಮೌನ; ಇನ್ನೊಂದು ಕಡೆ ಹುಚ್ಚೀರನ ಮೌನ.
* * *

ಈಗಲೂ ಅಷ್ಟೆ.
ಇಲ್ಲೀವರೆಗಿನ ಎಲ್ಲ ನೆನಪುಗಳ ಕಾಡುಕತ್ತಲಲ್ಲಿ ತತ್ತರಿಸಿ ಕೂತಿದ್ದಳು ಶಬರಿ. ಶಬರಿಯ ಒಳ ಮಾತುಗಳ ಮೂಕವೇದನೆಯಾದ ಹುಚ್ಚೀರ.

ಇಬ್ಬರೂ ಕತ್ತಲಕೂಸುಗಳು.
ಮನಸ್ಸಲ್ಲಿ ಸೂರ್ಯ ನಿರೀಕ್ಷೆಗಳು.
ಅದೇಗಾಳಿ-ಗುಡುಗು-ಮೋಡದ ಬೆಡಗು.

ಬಂದಾನೊ, ಬಾರನೊ?
ಸೂರ್ಯನೂ ಬರಲಿಲ್ಲ; ನವಾಬನೂ ಬರಲಿಲ್ಲ; ಗೌರಿಯೂ ಇಲ್ಲ.
ಏನಾಯಿತೊ ಗೊತ್ತಿಲ್ಲ.

ಗೊತ್ತು ಗುರಿಗಳಿಗೆ ಗರ ಬಡಿದಂತೆ,
ನೀರಿನೊಳಗಿನ ಉರಿಯಂತೆ
ಮೋಡದ ಮರೆಯ ಕೆಂಡಂತೆ…….

ಎಷ್ಟು ಹೂತ್ತಾಯಿತೊ ಗೊತ್ತಿಲ್ಲ; ಶಬರಿ ಬಾಗಿಲಗೆ ಒರಗಿ ಮಲಗಿದಳು-
ನಿದ್ದಯನ್ನು ಒದ್ದು ಬಂದ ನೆನಪುಗಳೆಲ್ಲ ನಿದ್ದೆಗೆ ಸಂದಂತೆ.
ಹೊರ ಚಪ್ಪರದ ಗೂಟಕ್ಕೆ ಒರಗಿ ಹುಚ್ಚೀರ ಮಲಗಿದ್ದ-
ಮೂಕವೇದನೆಯ ಮತ್ತೊಂದು ಆಯಾಮಕ್ಕೆ ಹೋದಂತೆ.
ಏನೋ ಸದ್ದಾಯಿತು.
ಗಲಿಬಲಿಗೊಂಡು ಎದ್ದಳು ಶಬರಿ.
ಇನ್ನೇನು ಸೂರ್ಯ ಹುಟ್ಟುವ ಹೊತ್ತು.
ವಾಹನವೊಂದು ಬಂತು; ಹತ್ತಾರು ಜನರಿದ್ದ ವ್ಯಾನು.
ಕಾಲು ಹಾದಿಯಲ್ಲಿ ಅತ್ತಿತ್ತ ವಾಲಾಡುತ್ತ ಬಂದ ವಾಹನ.
ಶಬರಿ “ಉಚ್ಚೀರ….. ಉಚ್ಚೀರ” ಎಂದು ಗಡಿಬಿಡಿಯಿಂದ ಏಳಿಸಿದಳು.
ಹುಚ್ಚೀರ ಎದ್ದ.
ವಾಹನ ನಿಂತಿತು.
ಮೊದಲು ನವಾಬ ಇಳಿದ; ಆಮೇಲೆ ಗೌರಿ.
ಹುಚ್ಚೀರ ತನ್ನದೇ ದನಿಯಲ್ಲಿ ಕೂಗಿದ.
ಶಬರಿ ಕಣ್ಣರಳಸಿಕೂತಳು.
ಹುಚ್ಚೀರನ ಸದ್ದಿಗೆ ಹಟ್ಟಿಯವರೆಲ್ಲ ಎದ್ದರು; ಹೊರಬಂದರು.

ವ್ಯಾನಿನಿಂದ ಒಬ್ಬೊಬ್ಬರೇ ಇಳಿದರು. ಗೌರಿಯನ್ನು ನೋಡಿ ಪೂಜಾರಪ್ಪನಿಗೆ ಸಂತೋಷವಾಯಿತು. ನವಾಬ ಬಂದದ್ದು ಎಲ್ಲರಿಗೂ ಸಮಾಧಾನ ತಂದಿತ್ತು. ಉಳಿದಂತೆ ಗೆಳೆಯರು ಬಂದಿದ್ದರು.

ಮೌನವಾಗಿದ್ದ ಶಬರಿ ಎಲ್ಲರಿಗೂ ಪ್ರಶ್ನೆಯಾದಳು. ಗೌರಿ, ಶಬರಿಯ ಹತ್ತಿರ ಬಂದಳು. ಶಬರಿ ಆಕೆಯನ್ನು ತಬ್ಬಿಕೊಂಡು ಅಳತೊಡಗಿದಳು. ನವಾಬ್ ಕಳವಳದಿಂದ ಕೇಳಿದಾಗ ಪೂಜಾರಪ್ಪ ತಿಮ್ಮರಾಯಿಯ ಸಾವಿನ ಸುದ್ದಿ ಹೇಳಿದ. ನವಾಬನಿಗೆ ಮಾತೇ ಹೊರಡಲಿಲ್ಲ. ಜೊತೆಗೆ ಬಂದಿದ್ದ ಗೆಳೆಯರ ಕಡೆ ನೋಡಿದ. ತನಗೆ ತಾನೇ ಸಾಂತ್ವನ ಮಾಡಿಕೊಂಡ.

“ಈಗ ಇನ್ನೊಂದ್ ಸುದ್ದಿ ಹೇಳ್ತಿದ್ದೀನಿ” ಎಂದು ಎಲ್ಲರ ಮುಖ ನೋಡಿದ. ಶಬರಿಯ ಹತ್ತಿರ ಬಂದು “ಶಬರಿ ಸಮಾಧಾನ ಮಾಡ್ಕೊ” ಎಂದು ಸಂತೈಸಿದ. ಆಕೆ ಕಣ್ಣೀರು ಒರೆಸಿಕೊಂಡು ಅಳು ನಿಲ್ಲಿಸಿ “ಸೂರ್ಯ ಯಾವತ್‌ ಬತ್ತಾನೆ ನವಾಬಣ್ಣ?” ಎಂದು ಕೇಳಿದಳು.

ನವಾಬ್ ಗದ್ಗದಿತನಾದ. ಮಾತು ಹೂರಡಲಿಲ್ಲ. ಕಣ್ಣಲ್ಲಿ ನೀರು.
ಎಲ್ಲರಿಗೂ ಉರಿವ ಮರಳಲ್ಲಿ ನಿಂತ ಅನುಭವ.
“ಯಾಕಣ್ಣ? ಯಾಕಳ್ತೀಯ?”- ಶಬರಿ ಕೇಳಿದಳು.
ಆಗಲೂ ನವಾಬನಿಗೆ ಹೇಳಲಾಗಲಿಲ್ಲ.
ಆಗ, ಜೊತೆಯಲ್ಲಿ ಬಂದಿದ್ದ ಗೆಳಯರಲ್ಲಿ ಒಬ್ಬ ಮಾತಾಡಿದ.
“ಸೂರ್ಯ ನಮ್ ಜೊತೆ ಇಲ್ಲ.”
“ಅಂಗಂದ್ರೆ?”- ಸಣ್ಣೀರನ ಪ್ರಶ್ನೆ.
“ಸೂರ್ಯ… ಸೂರ್ಯ….. ಸತ್ತುಹೋದ!”
“ಆ!”
ಮಾತಿಲ್ಲದ ಗಳಿಗೆ.
ಅದನ್ನು ಮುರಿದು ಉರಿಯತೊಡಗಿದ ಅಳು…
ಆಗ ವ್ಯಾನಿನ ಬಳಿ ಹೋದ ಗೆಳೆಯರು ಒಳಗಿದ್ದ ಸೂರ್ಯನ ಶವವನ್ನು ಹೊರಗೆ ಇಳಿಸಿದರು. ಜೂತಗೆ ಒಬ್ಬ ವಯಸ್ಸಾದ ಹೆಂಗಸು ಇಳಿದರು.
ಹಟ್ಟಿಯ ನಡುವೆ ಆ ಸೂರ್ಯನ ಶವ ಮಲಗಿತ್ತು!
ಮೂಡಲ ದಿಕ್ಕಿನಲ್ಲಿ ಆ ಸೂರ್ಯನ ಹುಟ್ಟು ಆಗುತ್ತಿತ್ತು!
ಹುಚ್ಚೀರನ ಆಕ್ರಂದನಕ್ಕೆ ಮೇರೆಯೇ ಇಲ್ಲ. ಸೂರ್ಯಶವದ ಕಾಲುಗಳನ್ನು ಭದ್ರವಾಗಿ ಹಿಡಿದು ಅವುಗಳ ಮೇಲೆ ತಲೆಯಿಟ್ಟು ಒಂದೇ ಸಮ ಅತ್ತ.

ಮೂರ್ಛೆಯೊ ಮೌನವೊ ಗೊತ್ತಾಗದ ಸ್ಥಿತಿಯಲ್ಲಿದ್ದ ಶಬರಿಯನ್ನು ಗೌರಿ, ಲಕ್ಷ್ಮಕ್ಕ ಮುಂತಾದವರು ಸೂರ್ಯಶವದ ಬಳಿಗೆ ಕರೆತಂದರು. ಶಬರಿ ಸೂರ್ಯನ ತಲೆಯ ಬಳಿ ಕೂತಳು. ತಲೆಯ ಕೂದಲನ್ನು ನೇವರಿಸಿದಳು. ಕೆನ್ನೆಗಳ ಮೇಲೆ ಕೈಯಾಡಿಸಿದಳು. ತನ್ನ ಕೆನ್ನೆಮೇಲೆ ಹರಿಯುತ್ತಿದ್ದ ಕಣ್ಣೀರನ್ನು ಬೆರಳಲ್ಲಿ ಒರೆಸಿ ಅದನ್ನು ಸೂರ್ಯನ ತುಟಿಗಳ ಮೇಲೆ ಸವರಿದಳು. ನೋಡುತ್ತಿದ್ದವರ ಕರುಳು ಚುರುಗುಡುತ್ತಿರುವಾಗಲೇ ತನ್ನ ಹಣೆ ಕುಂಕುಮವನ್ನು ಬೆರಳಲ್ಲಿ ತಗೆದುಕೊಂಡು ಸೂರ್ಯನ ಹಣೆಗೆ ಇಟ್ಟಳು! ಹೆಂಗಸರ ಕಣ್ಣಿನ ಕಟ್ಟೆ ಒಡೆಯಿತು.

“ನಡ್ ನೀರ್‍ನಾಗ್ ನಮ್ಮನ್ ಬಿಟ್‌ ವೋದೆಲ್ಲಪ್ಪ ಸೂರ್ಯಪ್ಪ” ಎಂದು ಗಟ್ಟಿಯಾಗಿ ರೋಧಿಸಿದರು. “ಸ್ಯಬರಿ… ಸ್ಯಬರಿ…” ಎಂದು ಮುಂದೆ ಹೇಳಲಾಗದೆ ಬಿಕ್ಕಿದರು.

ಸ್ವಲ್ಪ ಹೊತ್ತು ಸುಮ್ಮನಿದ್ದ ಗಂಡಸರು ತಮ್ಮ ಒದ್ದೆಗಣ್ಣುಗಳನ್ನು ಒರೆಸಿಕೊಂಡು ಹೆಂಗಸರನ್ನು ಗದರಿಕೊಂಡರು.

“ನೀವೇ ಇಂಗೆಲ್ಲ ಅತ್ರೆ ಸ್ಯಬರವ್ವನ್ ಗತಿ ಏನು. ಸುಮ್ಕಿರ್ರಿ.’ ಬರಬರುತ್ತ ಅಳು ಒಳಸೇರಿತು.

ಆಗ ಪೂಜಾರಪ್ಪ ನವಾಬನನ್ನು “ಇದೆಲ್ಲ ಎಂಗಾಯ್ತಪ್ಪ? ಎಂದು ಕೇಳಿದ.

ನವಾಬ್ ನಿಟ್ಟುಸಿರುಬಿಟ್ಟು ನಡೆದದ್ದನ್ನು ಹೇಳಿದ.

“ನಾನು ಇಲ್ಲಿಂದ ಸೀದಾ ಈ ಗೆಳೆಯರ ಹತ್ರ ಹೋದೆ. ಎಲ್ಲಾ ಸೇರಿ ನಿಮ್ ತೋಪಿನ ಎಷಯದಲ್ಲಿ ಪತ್ರ ಕೊಡೋಕೆ ಅಂತ ಎಂ.ಎಲ್‌.ಎ. ಧರ್ಮಯ್ಯನ ಹತ್ರ ಹೋದ್ವಿ. ಆತನಿಗೆ ಏನ್‌ ಹೇಳಿದ್ರೂ ಕೇಳೊ ಸ್ಥಿತಿಯಲ್ಲಿ ಇರಲಿಲ್ಲ. ಸಂಬಂಧಪಟ್ಟ ಮಂತ್ರಿಗಳ ಹತ್ರ ಹೋಗ್ಬೇಕು ಅಂತ ಹೊರಟಾಗ ನನ್ನನ್ನ ಪೋಲಿಸರು ಅರೆಸ್ಟ್‌ ಮಾಡಿದ್ರು.”

“ಯಾಕೆ? ಅಂತಾದೇನಪ್ಪ ಆಗಿತ್ತು”- ತಡಯಲಾಗದೆ ಕೇಳಿದ ಪೂಜಾರಪ್ಪ.
“ನಾನು ನಿಮ್ಮನ್ನೆಲ್ಲ ಬೇರೆ ಧರ್ಮಕ್ಕೆ ಬಲಾತ್ಕಾರವಾಗ್ ಸೇರುಸ್ತಿದ್ದೀನಿ ಅಂತ ನರಸಿಂಹರಾಯಪ್ಪ, ಜೋಯಿಸ್ರು, ಸುಳ್‌ಸುಳ್ಳೇ ನಾನ್‌ ಏಜೆಂಟು ಅದೂ ಇದೂ ಅಂತ ಬರ್‌ಕೂಟಿದ್ದಾರೆ.”
“ಎಲಾ ಇವ್ನ”-ಸಣ್ಣೀರ ಸಿಟ್ಟಿನಿಂದ ಉದ್ಗರಿಸಿದ.
ನವಾಬ್‌ ಮುಂದುವರಿಸಿದ.
“ಆಮೇಲ್‌ ನನ್‌ ಗೆಳೆಯರು ಕಾನೂನ್‌ ಪ್ರಕಾರಾನೇ ಬಿಡಿಸ್ಕೊಂಡ್ರು. ಆ ಕೇಸ್‌ ಮುಂದುವರ್‍ಯುತ್ತೆ…”
“ನಮ್ ಸೂರ್ಯಪ್ಪನ್‌ ಇಸ್ಯ ಯೇಳಣ್ಣ”- ಲಕ್ಷ್ಮಕ್ಕ ಒತ್ತಾಯವಾಗಿ ಕೇಳಿದಳು.

“ಅದಕ್ಕೇ ಬಂದೆ ಲಕ್ಷ್ಮಕ್ಕ. ಆಮೇಲ್‌ ಏನಾಯ್ತು ಗೊತ್ತ? ಜೈಲ್‌ನಲ್ಲಿ ಸೂರ್ಯ ನೇಣು ಹಾಕ್ಕೊಂಡ್‌ ಸತ್ತ, ಅಂತ ಸುದ್ದಿ ಬಂತು….”

ನವಾಬ್ ಹೇಳುತ್ತಿರುವಾಗಲೇ ಲಕ್ಷ್ಮಕ್ಕ “ನಮ್‌ ಸೂರ್ಯಪ್ಪಂಗೆ ನೇಣ್ ಅಕ್ಕಳಾ ಅಂತಾದ್ದೇನ್ ಬಂದಿತ್ತು. ಅಂಗೆಲ್ಲ ಆಗಿರಾಕಿಲ್ಲ” ಎಂದಳು. ಮತ್ತೊಬ್ಬಾಕೆ “ಸೂರ್ಯಪ್ಪ ಅಂಗೆಲ್ಲ ಮಾಡ್ಕಳಾ ಮನ್ಸ ಅಲ್ಲ” ಎಂದು ದನಿಗೂಡಿಸಿದಳು.

“ಅದು ನಿಜ.” ನವಾಬ್ ಹೇಳಿದ- “ನಮ್ ಪ್ರಕಾರ ನಡದಿರೋದೆ ಬೇರೆ. ಪೋಲಿಸ್ನೋರು ಸೂರ್ಯಂಗೆ ಹೊಡೆದು ಬಡಿದು ಮಾಡಿದಾರೆ. ಆಗ ಈತ ಸತ್ತಿರ್‍ಬೇಕು. ಆಮೇಲೆ ಪೋಲಿಸ್ನೋರೆ ನೇಣು ಹಾಕಿ ಈತ ಆತ್ಮಹತ್ಯೆ ಮಾಡ್ಕೊಂಡ ಅಂತ ಸುಳ್ಳಸುದ್ದಿ ಹುಟ್ಟಿಸಿದಾರೆ. ಇದೆಲ್ಲ ಕಟ್ಟುಕತೆ ಅಂತ ನಾವು ಹೋರಾಟಕ್‌ ಸಿದ್ಧ ಆಗಿದ್ದೀವಿ.”

“ಸತ್‌ವೋದ್‌ ಮ್ಯಾಗೆ ಏನ್‌ ವೋರಾಟಾನೋ ಏನ್ಕತೆಯೊ” ಎಂದು ಪೂಜಾರಪ್ಪ ನೋವಿನಿಂದ ನುಡಿದ.

“ಇಂಥ ಘಟನೆ ಮುಂದೆ ಆಗ್‌ಬಾರ್‍ದಲ್ಲ. ಅದಕ್ಕೆ ನಾವು ವಿರೋಧ ಮಾಡ್ಲೇ ಬೇಕು”- ಗೆಳೆಯರಲ್ಲೊಬ್ಬ ಹೇಳಿದ.

“ಒಟ್ನಾಗೆ ಸಾವಿಗಿಂತ ದೊಡ್ಡದು ಯಾವ್ದೂ ಇಲ್ಲ ಅಂಬ್ತ ಗೊತ್ತಾತು ಬಿಡ್ರಪ್ಪ” ಎಂದು ಪೂಜಾರಪ್ಪ ಕಣ್ಣು ಒರೆಸಿಕೊಳ್ಳುತ್ತ ಪಕ್ಕಕ್ಕೆ ಹೋದ. ನವಾಬ್ ಗದ್ಗದಿತನಾಗಿ ಇನ್ನೊಂದು ವಿಷಯ ತಿಳಿಸಿದ.

“ಸೂರ್ಯಂಗೆ ಇಲ್ಲೇ- ಈ ಹಟ್ಟಿ ಹತ್ರಾನೇ ಮಣ್ಣಾಗ್‌ ಬೇಕು ಅಂತ ಆಸೆ ಇತ್ತು ಇದನ್ನ ನಮ್‌ ಗೆಳೆಯರ ಹತ್ರ ಹೇಳಿದ್ದ. ಇವರು ಜೈಲಿಗೆ ಹೋಗಿ ನೋಡ್ದಾಗ ಒಂದ್ ವೇಳೆ ನನಿಗ್‌ ಸಾವಿನ ಶಿಕ್ಷೆ ಏನಾದ್ರೂ ಕೊಟ್ರೆ ಹಟ್ಟೀಗ್‌ ಹೆಣ ತಗೊಂಡ್ ಹೋಗಿ ಶಬರಿ ಹೇಳಿದ್ ಕಡೆ ಮಣ್ ಮಾಡಿ ಅಂತ ಹೇಳಿದ್ನಂತೆ…”

ಶಬರಿ “ಸೂರ್ಯ” ಎಂದು ಕಿರುಚಿದ ರಭಸಕ್ಕೆ ಹಟ್ಟಿಗೆ ಹಟ್ಟಿಯೇ ತಲ್ಲಣಗೊಂಡಿತು. ಶಬರಿಯ ಅಳುವಿಗೆ ತಡೆಯಿರಲಿಲ್ಲ. ಅಷ್ಟೇ ಅಲ್ಲ, ಸೂರ್ಯನ ಸಾವಿನಲ್ಲೂ ತಮ್ಮ ಬಗೆಗಿದ್ದ ಪ್ರೀತಿಯನ್ನು ಕಂಡು ಜನರು “ಸೂರ್ಯಪ್ಪ…. ಯಾಕಪ್ಪ ನಮ್ಮನ್ ಬಿಟ್ಟೋದೆ” ಎಂದು ಗಟ್ಟಿಯಾಗಿ ಅಳತೊಡಗಿದರು. ಯಾರು ಯಾರನ್ನೂ ಸುಮ್ಮನಿರಿಸುವ ಸ್ಥಿತಿಯಲ್ಲಿರಲಿಲ್ಲ. ಕಡಗೆ ಗೌರಿ, ಶಬರಿಗೆ ಸಮಾಧಾನ ಹೇಳಿದರೆ, ನವಾಬ ಮತ್ತು ಗೆಳೆಯರು ಉಳಿದವರಿಗೆ ಸುಮ್ಮನಿರಲು ಹೇಳಿದರು. ಪೂಜಾರಪ್ಪ ಮತ್ತೆ ಗದರಿದ- “ಸಾವು ಸಾವೇ ಕಣ್ರೋ. ಯೆಂಗುಸ್ರು ಗಂಡುಸ್ರು ಎಲ್ಲಾ ಅತ್ರು ಅಂಬ್ತ ಸಾವೇನ್ ವೊಂಟೋಯ್ತದ? ಸಾವ್‌ ಬಂದು ಬಡುದ್ ಮ್ಯಾಲ್ ಮುಗ್ದೋತು. ಸುಮ್ಕೆ ಮುಂದಿನ ಕೆಲ್ಸ ನೋಡ್ರಿ. ಎಲ್‌ ಮಣ್‌ ಮಾಡಾದು, ಯಾವಾಗ ಮಾಡಾದು ಸ್ಯಬರವ್ವನ ಕೇಳಿ ಕೆಲ್ಸ ಮುಗುಸ್ರಿ” ಎಂದು ದುಃಖದಲ್ಲೇ ಗದರಿದಾಗ ಅಳು ಕಡಿಮೆಯಾಯಿತು.

ಅಲ್ಲೀವರಿಗೆ ತನ್ನಾರಕ್ಕೆ ತಾನು ಅಳುತ್ತ ಒಬ್ಬಂಟಿಯಾಗಿದ್ದ ವಯಸ್ಸಾದ ಹೆಂಗಸು ಯಾರೆಂದು ಯಾರೂ ಕೇಳಿರಲಿಲ್ಲ. ಪೂಜಾರಪ್ಪನೇ ಕೇಳಿದ.

“ಇಯಮ್ಮ ಯಾರಪ್ಪ? ನಾವ್‌ ಇಚಾರಿಸ್ಕಮ್ಲೇ ಇಲ್ಲ.”

ಆಗ ಗೌರಿ ಆಕೆಯ ಬಗ್ಗೆ ಹೇಳಿದಳು- “ಇವ್ರು ಸೂರ್ಯಪ್ಪನ್ ತಾಯಿ. ಸತ್ ವಿಷ್ಯ ಗೊತ್ತಾದ್ ಮ್ಯಾಲೆ ನಾನೇ ಒಂದಿಬ್ರು ಜತ್ಯಾಗ್ ವೋಗಿ ಕರ್‍ಕಂಡ್ ಬಂದೆ.”

ಶಬರಿ ಆ ತಾಯಿಯ ಕಡೆ ನೋಡಿದಳು.
ಗೌರಿ ಸೂರ್ಯನ ತಾಯಿಯನ್ನು ಶಬರಿಯ ಹತ್ತಿರ ಕರೆತಂದಳು.

ತಾಯಿ ಶಬರಿಯನ್ನು ತಬ್ಬಿ ಸಮಾಧಾನಿಸಿದಳು. “ನಂಗೆಲ್ಲ ಗೊತ್ತು ಶಬರಿ. ನಾನು ಜೈಲಿಗ್‌ ಹೋಗಿ ನೋಡ್ದಾಗ, ಸೂರ್ಯ ನಿನ್ ವಿಷ್ಯ ಎಲ್ಲಾ ಹೇಳಿದ್ದ. ಅಲ್ಲಮ್ಮ ಇವ್ನ್ ವಿಷ್ಯ ಗೊತ್ತಿದ್ದೂ ಹೇಗಮ್ಮ ಇಷ್ಟಪಟ್ಟೆ? ಪೋಲಿಸ್ನೋರು ಇವ್ನ್ ಹಿಂದ್ ಬಿದ್ದಿದ್ರು. ಯಾವತ್ತಿದ್ರು ಇವ್ನು ಹೀಗೇ ಸಾಯೋನು ಅಂತ ನನಗಂತೂ ಅನ್ನಿಸ್ಬಿಟ್ಟಿತ್ತು. ಸಾವಿನ್‌ ಜೊತೇಲೆ ಬದುಕ್ತಾ ಇದ್‌ ನನ್‌ ಮಗನ್ನ ಅದೆಷ್ಟ್ ಹಚ್ಕೊಂಡ್ ಬಿಟ್ಟೆ ಶಬರಿ….”

ತಾಯಿಗೆ ದುಃಖ ಉಮ್ಮಳಿಸಿತು.
ಸಾವಿನ ಜೊತಯಲ್ಲೇ ಬದುಕಿದ ಸೂರ್ಯ!
ಶಬರಿ ದಿಟ್ಟಿಸಿ ನೋಡಿದಳು- ಸೂರ್ಯನನ್ನೊಮ್ಮೆ- ತಾಯಿಯನ್ನೊಮ್ಮೆ

‘ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ!
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗಾನೊಲಿದೆನವ್ವ!
ಭವವಿಲ್ಲದ ಭಯವಿಲ್ಲದ ಚೆಲುವನಂಗಾನೊಲಿದೆ!
ಕುಲುಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ!
ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು ತಾಯೆ.’

ಶಬರಿ ಎದ್ದಳು. ತಾಯಿಯ ಕೈ ಹಿಡಿದು ಏಳಿಸಿದಳು.

ಪೂಜಾರಪ್ಪನ ಕಡೆ ತಿರುಗಿ “ಅಪ್ಪಯ್ಯನ್ ಮಗ್ಗಲಾಗೆ ಮಣ್ ಮಾಡಾನ” ಎಂದು ಹೇಳಿದಳು.

ತಾಯಿಯನ್ನು ಒಳಗೆ ಕರದೊಯ್ದಳು.
* * *

ಮಣ್ಣು ಮಾಡಲು ಸೂರ್ಯನನ್ನು ಹೊತ್ತು ತಂದರು.
ಶಬರಿಯ ಆಸೆಯಂತೆ ತಿಮ್ಮರಾಯಿಯ ಗುಡ್ಡೆಯ ಪಕ್ಕದಲ್ಲೇ ಗುಂಡಿ ತೋಡಲಾಗಿತ್ತು.
ಸೂರ್ಯನ ಶವವನ್ನು ಗುಂಡಿಯಲ್ಲಿ ಮಲಗಿಸಿದರು. ಒಬ್ಬೊಬ್ಬರೇ ಹಿಡಿ ಮಣ್ಣು ಹಾಕುತ್ತ ಹೋದರು.
ಶಬರಿ ಸೆರಗುಹೊದ್ದು ನೋಡುತ್ತಿದ್ದಳು.
ಸೂರ್ಯನ ತಾಯಿ ಸಾಕ್ಷಿಯಂತೆ ಕೂತಿದ್ದಳು.
ಹುಚ್ಚೀರ ಉಮ್ಮಳಿಸುವ ದುಃಖದಲ್ಲಿ ಹಿಡಿ ಮಣ್ಣು ಹಾಕಿದ.
ಶಬರಿಯ ಕಣ್ಣು ಸೂರ್ಯನ ಮುಖದ ಮೇಲೆ.
ಅದೇ ಮುಖ; ಮೊದಲ ದಿನ ನೋಡಿದ ಮುಖ.
ಬಂದದ್ದು ಅಪರಿಚಿತನಾಗಿ;
ಇದ್ದದ್ದು ಎಲ್ಲರೊಳಗೊಂದಾಗಿ;
ಕಲಿಸಿದ ಅಕ್ಷರಗಳಲ್ಲಿ ಸೂರ್ಯನ ತುಡಿತ.
ಬರೆದ ಸಾಲುಗಳೆಲ್ಲ ಭೂಮಿಗೀತ.

“ಈ ಭೂಮಿ ನಮ್ಮದು…”

ಶಬರಿ ‘ನನ್ನದೆಲ್ಲವೂ ನಿನ್ನದು’ ಎಂದಿದ್ದಳು; ಒಂದಾಗಿದ್ದಳು.

ತಾಳಿ ಕಟ್ಟಿದವನು ಒಂದಾಗದೆ ಹೋದ.
ತಾಳಿ ಕಟ್ಟದವನು ಒಂದಾಗಿಯೆ ಹೋದ!

ಹೂಟ್ಟೆಯ ಮೇಲೆ ಕೈ ಇಟ್ಟುಕೊಂಡ ಶಬರಿ ನೆನಪುಗಳನ್ನು ರೆಪ್ಪೆಗಳಲ್ಲಿ ಮುಚ್ಚಿಕೂಳ್ಳುವಂತೆ ಕಣ್ಣು ಮುಚ್ಚಿದಳು. ರೆಪ್ಪೆಗಳ ಸೆರೆಯಿಂದ ತಪ್ಪಿಸಿಕೂಂಡು ಬಂದವು ಹತ್ತಾರು ಹನಿಗಳು.
“ಸ್ಯಬರವ್ವ”- ಪೂಜಾರಪ್ಪ ಕರೆದ.
ಶಬರಿ ಮುಚ್ಚಿದ ಕಣ್ಣು ತೆರೆದಳು.
“ಇನ್‍ ಮಕ ಮುಚ್ಬೇಕು ಕಣವ್ವ. ಸೂರ್ಯಪ್ಪಂಗೆ ಇಷ್ಟ ಅಗಿರಾದೇನಾರ ಇದ್ರೆ ಅದುನ್ನೂ ಗುಡ್ಡೆ ಒಳ್ಗಾಕ್ ಬೇಕು. ಏನಿಷ್ಟ ಇತ್ತು ಯೇಳವ್ವ”
“ಬಗಲುಚೀಲ”- ಶಬರಿಯ ಬಾಯಿಂದ ತಾನೇ ತಾನಾಗಿ ಹೂರಬಿತ್ತು.
ಪೂಜಾರಪ್ಪ “ಸಣ್ಣೀರ ವೋಗ್ ತಗಂಡ್‌ ಬಾರ್‍ಲ” ಎಂದದ್ದೇ ಆತ ತಡಮಾಡದೆ ಅಲ್ಲಿಂದ ಓಡಿದ. ಬೇಗ ತರಬೇಕೆಂಬ ಬಯಕೆ. ಸೂರ್ಯನಿಗೆ ಇಷ್ಟವಾದದ್ದನ್ನು ತಂದು ಕೊಟ್ಟ ಪುಣ್ಯ ಬರುವುದೆಂಬ ನಂಬಿಕೆ.

ಸಣ್ಣೀರ ಆ ಕಡೆ ಹೋದದ್ದು ಯಾಕೆಂದು ತಿಳಿದ ನವಾಬ್ ಮತ್ತು ಗೆಳೆಯರು ಹೇಳಿದರು- “ನಾವ್ ಹೀಗ್ ಹೇಳ್ತೀವಿ ಅಂತ ತಪ್ ತಿಳ್ಕೋಬೇಡಿ. ಸೂರ್ಯಂಗೆ ಇಂಥ ಯಾವ್ದೇ ಆಚರಣೇಲಿ ನಂಬಿಕೆ ಇರ್‍ಲಿಲ್ಲ. ಆದ್ರಿಂದ ಬಗಲು ಚೀಲಾನ ಆತನಿಗೆ ಇಷ್ಟವಾದ್ದು ಅಂತ ಅವ್ನ್‌ ಜೊತೇಲೆ ಮಣ್ಣು ಮಾಡೋದ್ ಬೇಡ. ಬೇಕಾದ್ರೆ ಅವ್ನ್ ತಾಯಿನ್ ಕೇಳಿ.”

ಪೂಜಾರಪ್ಪ ಸೂರ್ಯನ ತಾಯಿಯತ್ತ ನೋಡಿದ. ಆಕೆ “ಅವ್ರ್ ಹೇಳಿದ್ದು ನಿಜ. ನನ್ ಮಗ ಹಳೆ ಆಚರಣೆ ಯಾವ್ದನ್ನೂ ಮಾಡ್ತಿರ್‍ಲಿಲ್ಲ. ಈ ಭೂಮಿ ಕಂಡ್ರೆ ಅವ್ನಿಗ್ ಪಂಚಪ್ರಾಣ ಇತ್ತು. ಭೂಮೀಲ್‌ ಮಲಗಿ ಈ ಭೂಮೀ ಮೇಲಿರೊ ಮಣ್ ಹಾಕಿದ್ರೆ, ಅಷ್ಟೇ ಸಾಕು.” ಎಂದು ಹೇಳಿದರು.

ನುಂಗಿದ ದುಃಖದೂಳಗಿಂದ ಬಂದ ದನಿ.
ತಾಯಿ ಒಂದು ಹಿಡಿ ಮಣ್ಣು ಹಾಕಿದ್ದಾಯಿತು.
ಈಗ ಶಬರಿಯ ಸರದಿ.
ಗೌರಿ ಶಬರಿಯನ್ನು ಹಿಡಿದು ಏಳಿಸಿದಳು. ಕರೆತಂದಳು.
ಶಬರಿ ಮಣ್ಣನ್ನು ಹಿಡಿಯಲಿಲ್ಲ.
ಸೂರ್ಯನ ಮುಖವನ್ನು ಎದೆಯೊಳಗಿಟ್ಟುಕೊಂಡಳು.
“ಮಣ್ ತಗಾ ಶಬರಿ” ಎಂದು ಗೌರಿ ಹಿಡಿಮಣ್ಣು ಕೊಡಹೋದಳು.
ಶಬರಿ ಬೇಡವೆಂದು ತಲೆಯಾಡಿಸಿದಳು.
ಪೂಜಾರಪ್ಪ ಒತ್ತಾಯಿಸಿದ- “ಆಕವ್ವ; ಒಂದ್ ಇಡಿ ಮಣ್‌ ಆಕ್‌ಬಿಡು, ನೀನೊಬ್ಳು ಆಕಿದ್ರೆ ಮಣ್‌ ಮಾಡ್‌ ಬಿಡ್ತೀವಿ.”
ಶಬರಿ, ಮತ್ತೆ ಇಲ್ಲವೆಂದು ತಲೆಯಾಡಿಸಿದಳು.
“ನನ್ ಪಾಲಿಗ್ ಸೂರ್ಯ ಸತ್ತಿಲ್ಲ. ನಿಮಿಗ್‌ ಬೇಕಿದ್ರೆ ಮಣ್‌ ಆಕಿ; ಮಣ್ ಮಾಡ್ರಿ”- ಶಬರಿ, ಸೂರ್ಯನ ಕಡೆ ನೋಡುತ್ತ ನುಡಿದಳು.
ನೆಟ್ಟನೋಟ, ನಿಷ್ಠುರನುಡಿ!
ಪೂಜಾರಪ್ಪನಿಗೆ ಏನು ಮಾಡಬೇಕೆಂದು ತೋಚದೆ ನವಾಬ್‌ ಮತ್ತು ಗೆಳೆಯರ ಕಡೆಗೆ ನೋಡಿದ. ಅವರು ಕೆಲಸ ಮುಗಿಸುವಂತೆ ಮುಖಭಾವದಲ್ಲೇ ಸೂಚಿಸಿದಾಗ ಒಂದು ಕ್ಷಣದಲ್ಲಿ ಕೆಲಸ ಮುಗಿದುಹೋಯಿತು.
ಸೂರ್ಯನ ಮುಖ ಮಣ್ಣಲ್ಲಿ ಮುಚ್ಚಿಹೋಯಿತು.
* * *

ಸಣ್ಣೀರ ಬಗಲುಚೀಲದ ಸಮೇತ ಓಡೋಡಿ ಬಂದ.
ಸೂರ್ಯ ಗುಡ್ಡೆಯಾಗಿರುವುದನ್ನು ನೋಡಿದ.

ಬಗಲು ಚೀಲವನ್ನು ಏನು ಮಾಡಬೇಕೆಂದು ತೋಚದೆ ಅತ್ತಿತ್ತ ನೋಡಿದ; ಯಾರೂ ಮಾತಾಡಲಿಲ್ಲ. ಕಡೆಗೆ ತಾನೇ ತೀರ್ಮಾನಿಸಿದ.

ಬಗಲು ಚೀಲವನ್ನು ಸೂರ್ಯನ ಗುಡ್ಡೆ ಮೇಲೆ ಇಟ್ಟ.

ಆ ವೇಳಗೆ ಹೆಂಗಸರಲ್ಲಿ ಗುಸುಗುಸು ಪ್ರಾರಂಭವಾಗಿತ್ತು. ಸಾವಿನ ಸಂದರ್ಭದಲ್ಲಿ ಕೆಲವು ಪದಗಳನ್ನು ಹಾಡುವ ಪದ್ಧತಿ ಈ ಜನರಲ್ಲಿದ್ದುದರಿಂದ ಯಾವ ಪದವನ್ನು ಹಾಡುವುದು, ಹಾಡಿದರೆ ಸೂರ್ಯನ ಸ್ನೇಹಿತರು ಒಪ್ಪುವರೊ ಇಲ್ಲವೊ-ಹೀಗೆ ಹೆಂಗಸರು ಪಿಸುಗುಡುತ್ತಿದ್ದರು. ಲಕ್ಷ್ಮಕ್ಕ ಹೇಳಿದಳು- “ಈಗ ಹಳೇ ಪದಗಿದ ಬ್ಯಾಡ ಕಣ್ರವ್ವ, ಸೂರ್ಯಪ್ರ ನಮಿಗ್ ಮೊಟ್‌ಮೂದ್ಲು ಕಲ್ಸಿದ್ ಪದ ಐತಲ್ಲ- ಅದೇ ಸ್ಯಬರಜ್ಜಿ ಪದ- ಅದುನ್ನೇ ಯೇಳಾನ; ಸೂರ್ಯಪ್ಪಂಗೂ ಅದು ಇಷ್ಟ ಅಲ್ವಾ?

ಹಾಡು ಆರಂಭಿಸಿದರು:

‘ಗುಡಿಯ ಕಟ್ಟಲಿಲ್ಲ, ಮುಡಿಯ ಕಟ್ಟಲಿಲ್ಲ
ಮಡಿ ಮೈಲಿಗೆಯ ಮನಸು ಮೊದಲೇ ಇಲ್ಲ
ಶಬರಜ್ಜಿ ನಮ್ಮ ಶಬರಜ್ಜಿ
ಸ್ವಾಭಿಮಾನದ ಅಜ್ಜಿ, ಸಾವಿಲ್ಲದ ಅಜ್ಜಿ…’

ಹಾಡಿನ ಸಾಲು ಮುಗಿದಮೇಲೆ ಮೌನ-ಮಾತು ಮಣ್ಣಾದಂತೆ.
ನೋವು ಕಣ್ಣಾದಂತೆ.
ನೀರಿಗೆ ಬಿದ್ದ ಸುಣ್ಣವಾದಂತೆ,
ಕತ್ತಲು ಬೆತ್ತಲಾಗಿ ಕಾದಂತೆ….
ಬೆಳಕು ಬಯಲಾದಂತೆ….

ಶಬರಿ ಮೌನದಲ್ಲಿ ಎದ್ದಳು.
ದಿಟ್ಟಿಸಿದಳು-

ಸಮಾಧಿಯ ಮೇಲೆ ಸೂರ್ಯನ ಚೀಲ!
ಚರಿತ್ರೆಯ ಹಂಬಲ!

ಶಬರಿ ಹತ್ತಿರ ಬಂದಳು; ನಿರ್ಧಾರದಿಂದ ನೋಡಿದಳು.
ಬಗಲು ಚೀಲವನ್ನು ಕೈಗೆತ್ತಿಕೊಂಡಳು.

ಹೆಗಲಿಗೇರಿಸಿಕೊಂಡು ಹೆಜ್ಜೆಯಿಟ್ಟಳು.

“ನಾನು ನಿನಗೊಲಿದೆ. ನೀನು ನನಗೊಲಿದೆ!
ನೀನೆನ್ನನಗಲದಿಪ್ಪೆ, ನಾ ನಿನ್ನನಗಲದಿಪ್ಪೆನಯ್ಯ!
ನಿನಗೆ ನನಗೆ ಬೇರೊಂದು ಠಾವುಂಟೇ?
ನೀನು ಕರುಣೆಯೆಂಬುದ ನಾನು ಬಲ್ಲೆನು!
ನೀನಿರಿಸಿದ ಗತಿಯೊಳಗೆ ಇಪ್ಪವಳಾನಯ್ಯ”
*****
ಮುಗಿಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪ್ಪ ಕೊಡಿಸಿದ ಅಂಗಿ
Next post ಹೇ ರಾಮ್!

ಸಣ್ಣ ಕತೆ

 • ಇನ್ನೊಬ್ಬ

  -

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… ಮುಂದೆ ಓದಿ.. 

 • ವ್ಯವಸ್ಥೆ

  -

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… ಮುಂದೆ ಓದಿ.. 

 • ಆವರ್ತನೆ

  -

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… ಮುಂದೆ ಓದಿ.. 

 • ಗುಲ್ಬಾಯಿ

  -

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… ಮುಂದೆ ಓದಿ.. 

 • ಕೆಂಪು ಲುಂಗಿ…

  -

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… ಮುಂದೆ ಓದಿ..