ಆರೋಪ – ೧೫

ಆರೋಪ – ೧೫

ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍

ಅಧ್ಯಾಯ ೨೯
ತಾನೊಂದು ಗೊಬ್ಬರದ ಹುಳವಾಗಿ ಛಾವಣಿಯಿಂದ ಕೆಳಗೆ ಬಿದ್ದ ಹಾಗೆ ಕನಸು, ಆದರೆ ನಿಜಕ್ಕೂ ಬಿದ್ದುದು ಮಂಚದಿಂದ ಬಿದ್ದ ಸದ್ದಿಗೆ ಕೇಶವುಲುಗೆ ಕೂಡ ಎಚ್ಚರವಾಗಿ “ಏನು ಏನಾಯಿತು !” ಎಂದು ಕೇಳಿ, ಏನೂ ಆಗಿಲ್ಲ ಎಂದು ಹೇಳಿದ ಮೇಲೆ ಮತ್ತೆ ನಿದ್ದೆಯನ್ನು ಮುಂದರಿಸಿದ್ದ. ಅರವಿಂದನಿಗೆ ಮಾತ್ರ ನಿದ್ದೆ ಬರಲಿಲ್ಲ. ತೋಳಿಗೆ ಸ್ವಲ್ಪ ಪೆಟ್ಟಾಗಿತ್ತು. ಒಂದು ಕ್ಷಣ ಸಹಿಸಲಾರದ ನೋವು ತಣ್ಣಗೆ ಬೆವರು ಬಿಟ್ಟಿತ್ತು. ಮುರಿಯಿತೆ? ಬೆರಳುಗಳನ್ನು ಮುಚ್ಚಿ ತೆರೆದು ಮಾಡಿದ. ಮುರಿದಿರಲಾರದು. ಸಿಗರೇಟು ಹಚ್ಚಿ ಕಿಟಕಿಯ ಪಕ್ಕದಲ್ಲಿ ಕುಳಿತು ಮುಂಜಾವದ ಸಮಯ, ಮಸೀದಿಗಳಿಂದ ಜನರನ್ನು ಪ್ರಾರ್ಥನೆಗೆಬ್ಬಿಸುವ ಕೂಗು ಕೇಳಿಸುತ್ತಿತ್ತು.

ಯಾಕಿಂಥ ಕೆಟ್ಟ ಕನಸು ಬಿತ್ತು ಎಂದುಕೊಂಡ.

ಮರೀನಾಳಲ್ಲಿಗೆ ಮತ್ತೆ ಅವನು ಹೋಗಿರಲಿಲ್ಲ. ಅವಳಲ್ಲಿಂದ ಹೊರಟು ಬಂದು ವಾರಗಳೇ ಕಳೆದಿದ್ದುವು. ಮತ್ತೆ ಸಂಸ್ಥೆಯ ಚಟುವಟಿಕೆಗಳಲ್ಲಿ ತೊಡಗಿದ್ದ ವೈಶಾಖಿ ಒಂದು ದಿನ ಅವನನ್ನು ಕರೆದು “ಕೇಂಬ್ರಿಜಿಗೆ ಹೋಗುತ್ತೀಯಾ?” ಎಂದು ಕೇಳಿದ್ದರು. ಸಂಸ್ಥೆಗೆಂದು ಒಂದು ಫಲೋಶಿಪ್ ಕಾದಿರಿಸಿದ್ದರು. ಹೂಂ ಎಂದರೆ ಕೇಂಬ್ರಿಜ್‌ಗೆ ಹೋಗುವ ಅವಕಾಶ. “ಯೋಚಿಸಿ ಹೇಳುತ್ತೇನೆ.” ಎಂದಿದ್ದ. ವೈಶಾಖಿಗೆ ತುಸು ಆಶ್ಚರ್ಯವೆನಿಸಿರಲೂಬಹುದು. ಇಂಥ ಕೊಡುಗೆಗಳು ಬಂದಾಗ ಯಾರೂ ಯೋಚಿಸಿ ಹೇಳುತ್ತೇನೆ ಅನ್ನುವುದಿಲ್ಲ.

“ಯಾಕೆ, ಏನಾದರೂ ತೊಂದರೆಗಳಿದೆಯೆ?”
“ಇಲ್ಲ.”
“ಮತ್ತೆ?”
“ಥೀಸಿಸ್ ಇನ್ನೂ ಉಳಿದಿದೆಯಲ್ಲ.”
“ಹೋಗಿ ಬಂದು ಮುಗಿಸಿ, ಅಲ್ಲಿರುವಾಗ ಇನ್ನಷ್ಟು ಓದುವ ಅವಕಾಶ ಸಿಗುತ್ತದೆ.”
“ನನ್ನ ಇಲ್ಲಿನ ಕೆಲಸ ಟೆಂಪರರಿ”
“ಅದೇನೂ ಪರವಾಯಿಲ್ಲ.”
“ಮುಂದಿನ ವಾರ ಹೇಳ್ತೇನೆ ಸರ್.”
“ಸರಿ.”
ಮುಂದಿನ ವಾರ ಬಂದು ಹೋಗಿತ್ತು. ಅರವಿಂದ ಯಾವ ತೀರ್ಮಾನವನ್ನೂ ಹೇಳಿರಲಿಲ್ಲ. ಈ ದಿನ ಹೇಳಲೇಬೇಕೆಂದು ನಿರ್ಧರಿಸಿದ.
ಅವನನ್ನು ಕಂಡೊಡನೆ ವೈಶಾಖಿ ಕೇಳಿದರು :
“ಏನೆಂದು ತೀರ್ಮಾನಿಸಿದಿರಿ?”
“ಹೋಗ್ತೇನೆ ಸರ್.”
“ಗುಡ್. ಈ ಫಾರ್ಮು ತುಂಬಿಸಿ ಕೊಡಿ.”
ಫಾರ್ಮು ತುಂಬಿಸಿ ಕೊಟ್ಟು ತನ್ನ ರೂಮಿಗೆ ಬಂದು ಕುಳಿತ ನಾಗೂರು-ಹೈದರಾಬಾದು-ಕೇಂಬ್ರಿಜ್ ! ಇಂಥ ಪ್ರಯಾಣ ಅನಿಸಿತು.

ಏನೋ ಟ್ಯಾಪ್ ಮಾಡುವುದಕ್ಕೆ ಯತ್ನಿಸಿದಾಗ ಎಡತೋಳು ನೋಯುತ್ತಿರುವುದು ಗೊತ್ತಾಯಿತು. ಒಂದು ಪೇಪರ್ ಬ್ಯಾಕ್ ಕಾದಂಬರಿಯನ್ನು ಕೈಗೆತ್ತಿ ಕೊಂಡ.
ಯಾರೋ ಬಾಗಿಲು ತಟ್ಟಿದರು.
“ಕಮ್ ಇನ್!”
ಬಾಗಿಲು ಮೆಲ್ಲನೆ ದೂಡಿ ಒಳಗೆ ಬಂದವಳು ಮರೀನಾ ಕೈಚೀಲವನ್ನು ಎದೆಗವಚಿಕೊಂಡಿದ್ದಳು. ಮುಗುಳುನಗಲು ಯತ್ನಿಸಿದಳು.
ಕುಳಿತುಕೊಳ್ಳುವಂತೆ ಸನ್ನೆ ಮಾಡಿದ ಅರವಿಂದ. ಮರೀನಾ ಕುಳಿತುಕೊಂಡಳು. “ಆಫೀಸಿಗೆ ಹೋಗಲಿಲ್ಲವೆ?”
“ಇಲ್ಲ.”
“ಯಾಕೆ?”
“ನಿಮ್ಮನ್ನು ನೋಡಬೇಕಾಗಿತ್ತು.”
“ಇನ್ನೇನಾದರೂ ತೊಂದರೆಗಳಿವೆಯೆ?”

ಮರೀನಾಳ ಕಣ್ಣುಗಳಲ್ಲಿ ನೀರು ತುಂಬಿ ಬಂತು. ಪ್ರಯಾಸದಿಂದ ಅಳುವನ್ನು ತಡೆದುಕೊಂಡಳು.

ಎಲ್ಲಿಂದಲೋ ಓಡಿ ಬಂದೆ. ಹೆಸರು ಬದಲಾಯಿಸಿದೆ. ಅಜ್ಞಾತವಾಗಿ ಜೀವಿಸತೊಡಗಿದೆ… ಇದೆಲ್ಲ ಯಾಕೆ ಎಂದು ನೀವು ಕೇಳಿಕೊಳ್ಳಲಿಲ್ಲವೆ? ನನ್ನನ್ನು ತಪ್ಪು ತಿಳಿದುಕೊಳ್ಳುವುದರಲ್ಲೇ ನಿಮಗೆ ತೃಪ್ತಿಯಿರುವಂತೆ ಕಾಣುತ್ತದೆ !”

ಅವಳ ಧ್ವನಿ ಕಂಪಿಸುತ್ತಿತ್ತು,

ಅರವಿಂದನಿಗೆ ಕೆಡುಕೆನಿಸಿತು. ಮರೀನಾಳನ್ನು ಇಂಥ ಸ್ಥಿತಿಯಲ್ಲಿ ಅವನು ಹಿಂದೆಂದೂ ಕಂಡಿರಲಿಲ್ಲ.

“ಫರ್ಗೆಟ್ ಇಟ್,” ಎಂದ.

“ಇಲ್ಲ. ನಿಮಗೆ ಎಲ್ಲವನ್ನು ಹೇಳಬೇಕೆಂದೇ ಈಗ ಬಂದಿದ್ದೇನೆ. ಅನೇಕ ಬಾರಿ ಹೇಳಬೇಕೆಂದು ಪ್ರಯತ್ನಿಸಿದೆ. ಆದರೇಕೋ ನಿಮಗೆ ಗಾಬರಿ ಹುಟ್ಟಿಸಲು ಮನಸ್ಸಾಗಲಿಲ್ಲ. ನೀವಾಗಿ ಕೇಳಲೂ ಇಲ್ಲ. ಅರವಿಂದ್‌ ! ಪೋಲೀಸರು ನನ್ನನ್ನು ಹುಡುಕುತ್ತಿದ್ದಾರೆ !”

ಮರೀನಾ ಎಲ್ಲವನ್ನೂ ಹೇಳಿದಳು. ನಾಗೂರಿನಿಂದ ಇಲ್ಲಿನ ತನಕ.

ರಾಜಶೇಖರನೊಂದಿಗೆ ಹೊರಡುವ ತೀರ್ಮಾನ ಅವಳ ಸ್ವಂತದ್ದಾಗಿತ್ತು, ಅದರಲ್ಲಿ ರಾಜಶೇಖರನ ಪಾತ್ರವೇನೂ ಇರಲಿಲ್ಲ. ಮುಖ್ಯ ಅವಳಿಗೆ ಆತನ ವಿಚಾರಗಳು ಹಿಡಿಸಿದ್ದುವು. ಅವನ ಚಟುವಟಿಕೆಗಳು ಅರ್ಥಪೂರ್ಣವಾದುವು ಎನಿಸಿದ್ದುವು. ಅವುಗಳಲ್ಲಿ ತಾನೂ ಭಾಗಿಯಾಗಬೇಕು ಎಂದುಕೊಂಡಳು. ನಾಗೂರಿನಲ್ಲಿ ವಯಸ್ಕರ ಶಿಕ್ಷಣ ಶಿಬಿರ ಹಟಾತ್ತನೆ ನಿಂತು ಹೋದ ರೀತಿಯನ್ನು ಕಂಡು ಅವಳ ಅನುಮಾನಗಳು ಇನ್ನಷ್ಟು ದೃಢವಾದುವು.
ರಾಜಶೇಖರನೊಂದಿಗೆ ಹಲವಾರು ಹಳ್ಳಿಗಳನ್ನು ಅಲೆದಳು. ಆದರೆ ಈಗಾಗಲೇ ಪೋಲೀಸರು ಅವನ ಮೇಲೆ ಕಣ್ಣಿಟ್ಟಿದ್ದರು. ಸಹ್ಯಾದ್ರಿಯ ಸೆರಗಿನಲ್ಲಿ ಆತ ಸಾಕಷ್ಟು ಕ್ರಾಂತಿಯ ಕೂಗನ್ನು ಎಬ್ಬಿಸಿದ್ದ. ಅಲ್ಲಲ್ಲಿ ಕಾರ್ಯಕರ್ತರನ್ನು ಸಂಘಟಿಸಿದ್ದ. ಆದರೆ ಪೊಲೀಸರ ಕಿರುಕುಳ ಜಾಸ್ತಿಯಾಗಿ ಅಪಾಯದ ಸೂಚನೆಗಳು ಕಂಡು ಬಂದುದರಿಂದ ಆ ಪ್ರದೇಶವನ್ನು ಬಿಟ್ಟು ಬಿಡಬೇಕಾಯಿತು.

ನಂತರ ಬಂದುದು ತೆಲಂಗಾಣಕ್ಕೆ.

ರಾಜಶೇಖರನಿಗೆ ಹಲವೆಡೆ ಸಂಪರ್ಕಗಳಿದ್ದುವು. ಹಲವು ಗುಂಪುಗಳಿಗೆ ಒಂದು ಕೇಂದ್ರ ಶಕ್ತಿಯಂತಿದ್ದ ಆತ, ಆದರೂ ಆಗಾಗ ಬಹಳ ನಿರಾಸೆಗೊಳ್ಳುತ್ತಿದ್ದ. ಒಂದೊಂದು ಗುಂಪೂ ಒಂದೊಂದು ದಿಕ್ಕಿನಲ್ಲಿ ಸರಿಯತೊಡಗಿತ್ತು. ಪರಸ್ಪರ ದೋಷಾರೋಪಣೆ, ಅಧಿಕಾರ ದಾಹ, ತಾತ್ವಿಕ ಬಿಕ್ಕಟ್ಟಿನಿಂದಾಗಿ ಚಳುವಳಿ ಒಡೆಯುತ್ತ ಹೋಗುತ್ತಿತ್ತು. ಚಳುವಳಿಯನ್ನು ರಕ್ಷಿಸುವುದು ಹೇಗೆ ಎಂದು ರಾಜಶೇಖರ ಚಿಂತೆಗೊಳಗಾಗಿದ್ದ.

ಈ ಮಧ್ಯೆ ಪೋಲೀಸ್ ಕಾರ್ಯಾಚರಣೆ ಮುಂದರಿಯುತ್ತಲೇ ಇತ್ತು. ಅಲ್ಲಲ್ಲಿ ರೈಡ್, ಘರ್ಷಣೆ, ಬಂಧನ, ಸಾವುಗಳ ಸುದ್ದಿ. ಕಾರ್ಯಕರ್ತರು ಒಮ್ಮಿಂದೂಮ್ಮೆಲೆ ಕಾಣದಾಗಿ ಬಿಡುತ್ತಿದ್ದರು.

ಒಂದು ದಿನ ಮರೀನಾ ಯಾವುದೋ ಕೆಲಸದ ಮೇಲೆ ದೂರದ ಹಳ್ಳಿಗೆ ಹೋಗಿದ್ದಳು. ಅಲ್ಲಿಂದ ಬರುವ ಹೊತ್ತಿಗೆ ಅವರ ವಸತಿಯ ಮೇಲೆ ಪೋಲೀಸ್ ರೈಡ್ ಆದ ಸಂಗತಿ ಗೊತ್ತಾಯಿತು. ಹತ್ತಿರದ ಹಳ್ಳಿಗರನ್ನೂ ಪೊಲೀಸರು ಬಿಟ್ಟಿರಲಿಲ್ಲ, ಎಲ್ಲರನ್ನೂ ಮರ್ದಿಸಿದ್ದರು. ರಾಜಶೇಖರ ಅವರ ಕೈಗೆ ಸಿಕ್ಕಿದನೆ? ತಪ್ಪಿಸಿಕೊಂಡನೆ? ಉಳಿದವರೇನಾದರು? ಒಂದೂ ತಿಳಿಯುವಂತಿರಲಿಲ್ಲ.

ಇಂಥದೇನಾದರೂ ಆದರೆ ಭೂಗತವಾಗಬೇಕೆಂಬ ನಿರ್ದೇಶನವಿತ್ತು, ಮರೀನಾಳ ಬಳಿಯಿದ್ದುದು ಒಂದು ಕೈಚೀಲ ಮಾತ್ರ ಎಲ್ಲಿಗೆ ಹೋಗುವುದು? ಫಕ್ಕನೆ ಅರವಿಂದನ ನೆನಪಾಯಿತು. ಹೈದರಾಬಾದಿನಲ್ಲಿ ಬಂದಿಳಿದಳು.

“ಆದರೆ ನನ್ನ ತೊಡಕಿನಲ್ಲಿ ನಿಮ್ಮನ್ನು ಸಿಕ್ಕಿಸಿಹಾಕುವುದು ನನಗೆ ಬೇಕಿರಲಿಲ್ಲ. ಪೋಲೀಸರು ನನ್ನ ಬೆನ್ನು ಹತ್ತಿದ್ದಾರೆಂದು ನನಗೆ ಗೊತ್ತು. ಯಾರನ್ನೂ ಬಿಡುವುದಿಲ್ಲ ಅವರು ಈ ವ್ಯವಸ್ಥೆಯೇ ಹಾಗೆ. ನಿನ್ನಂದಾಗಿ ನಿಮಗೆ ತೊಂದರೆಯಾಗಬಾರದು…”

ಅರವಿಂದ ಕೇಳುತ್ತಲೇ ಇದ್ದ. ನೆನಪುಗಳು ಮೇಲಿಂದ ಮೇಲೆ ಬರುತ್ತಿದ್ದುವು. ನಾಗೂರಿನ ಪರಿಸರದಲ್ಲಿ ನನ್ನ ಜತೆ ನಗುನಗುತ್ತ ತಿರುಗಾಡಿದ ಹುಡುಗಿಯೇ ಇವಳು? ಈಗ ಭೀತಿಯ ನೆರಳಿನಲ್ಲಿ ಬದುಕುತ್ತಿರುವಂತೆ ಕಾಣುತ್ತಿದ್ದಳು.

ಆರವಿಂದ ಹೇಳಿದ. “ನನ್ನ ಬಗ್ಗೆ ಕಾಳಜಿ ಬೇಡ. ನಿನ್ನ ಆರೋಗ್ಯ ನೋಡಿಕೋ.”
“ನನ್ನ ಭೇಟಿಗೆ ಬರುವುದಿಲ್ಲಾಂತ ಪ್ರಾಮಿಸ್ ಮಾಡಿ.” ಅವಳ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಹೇಳಿದ.”
“ಅಂಥ ಯಾವ ಪ್ರಾಮಿಸ್ ಮಾಡಲಾರೆ.”

ಅವಳು ಇನ್ನೇನನ್ನೊ ಚಿಂತಿಸುವಂತಿತ್ತು. ರಾಜಶೇಖರನ ಕುರಿತೆ? ಚಳುವಳಿಯ ಕುರಿತೆ? ಪೋಲೀಸ್ ಅನ್ವೇಷಣೆಯ ಕುರಿತೆ?

“ನನಗೆ ಭಯವಾಗುತ್ತಿದೆ,” ಎಂದಳು.
“ಪೋಲೀಸರ ಭಯವೆ?”
“ಪೋಲೀಸರ ಭಯ? ಖಂಡಿತ ಅಲ್ಲ. ಇನ್ನೇನೂ ಏನೆಂದೇ ತಿಳಿಯದು. ಬಹುಶಃ ಗುಮ್ಮ!”
ಎಂದು ನಗತೊಡಗಿದಳು.

ಇದಾದ ಕೆಲವು ದಿನಗಳ ನಂತರ ಅರವಿಂದ ಎಂದಿನಂತೆ ಒಂದು ಸಂಜೆ ವಸತಿಗೆ ಮರಳಿದಾಗ ಅಪರೂಪದ ದೃಶ್ಯವೊಂದು ಕಾದಿತ್ತು. ಕೋಣೆಯಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿ ಬಿದ್ದಿತ್ತು. ಯಾರೋ ವಸ್ತುಗಳನ್ನೆಲ್ಲ ಎತ್ತಿ ಒಗೆದು ತಪಾಸಣೆ ಮಾಡಿದಂತಿತ್ತು. ಅಆಸಿಗೆ ತಲೆದಿಂಬುಗಳನ್ನು ಕತ್ತಿಯಿಂದ ಹರಿದು ಶೋಧಿಸ ಲಾಗಿತ್ತು. ಕಾಗದ ಪತ್ರ ಬಟ್ಟೆ ಬರೆ ಚಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದುವು. ಡ್ರಾಯರಿನ ಬೀಗ ಒಡೆದಿತ್ತು. ಎಲ್ಲ ಗೊಂದಲದ ಮಧ್ಯೆ ಕೇಶವುಲು ತಲೆಗೆ ಕೈ ಹೊತ್ತು ಕುಳಿತಿದ್ದ.

“ಕಳವಾಗಿದೆಯೆ?” ಕೇಶವುಲು ಇಲ್ಲವೆಂದು ತಲೆಯಾಡಿಸಿದ.
ರೇಡಿಯೋ, ಶೇವಿಂಗ್ ಸೆಟ್ಟು, ಶೂಗಳು, ಚಪ್ಪಲಿಗಳು, ಚಿಲ್ಲರೆ ಹಣ ಎಲ್ಲವೂ ಇದ್ದವು. ಕೇಶವುಲುನ ಲೈಂಗಿಕ ಸಾಹಿತ್ಯವನ್ನೂ ಕೂಡ ಆಕ್ರಮಣಗಾರರು ಬಿಟ್ಟು ಹೋಗಿದ್ದರು.

ಒಂದು ಕ್ಷಣ ಅರವಿಂದನ ಸಂದೇಹ ಕೇಶವುಲುನತ್ತ ತಿರುಗಿತು. ಈ ಮನುಷ್ಯ ಯಾವ ದಾಂಧಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೋ ಯಾರಿಗೆ ಗೊತ್ತು? ಅವನಿಗೆ ಬೆದರಿಕೆ ಹಾಕಲೆಂದು ಯಾರಾದರೂ ಹೀಗೆ ಮಾಡಿರಲೂಬಹುದು.

ಆದರೆ ಈ ಸಂದೇಹದಲ್ಲಿ ಅರ್ಥವಿಲ್ಲವೆನಿಸಿತು.
“ಪೋಲೀಸ್‌ಗೆ ರಿಪೋರ್ಟ್ ಮಾಡೋಣವೆ?” ಕೇಶವುಲು ಕೇಳಿದ.
“ಏನೆಂದು?”
“ಹೌದು, ಏನೆಂದು? ಏನೂ ಕಳವಾಗಿಲ್ಲವೆಂದ ಮೇಲೆ !” ಪುಸ್ತಕಗಳನ್ನು ಜೋಡಿಸತೊಡಗಿದ ಕೇಶವುಲು ತಟ್ಟನೆ ಹೇಳಿದ.
“ಇದು ಆನಂದನ ಕೆಲಸ !”
’ಆನಂದ?”
“ನನ್ನ ಹಿಂದಿನ ರೂಮ್ ಮೇಟ್ ಇದ್ದನಲ್ಲ. ಅವನು”
*****

ಅಧ್ಯಾಯ ೩೦

ಅರವಿಂದ ಹೇಳಿದುದನ್ನು ರೆಡ್ಡಿ ಗಮನವಿಟ್ಟು ಕೇಳಿದ. ಸಣ್ಣಕೆ ಜ್ವರ ಬರುತ್ತಿದ್ದುದರಿಂದ ಆಫೀಸಿಗೆ ರಜ ಹಾಕಿ ಆತ ಮನೆಯಲ್ಲಿ ಕುಳಿತಿದ್ದ. ಥಂಡಿ ಗಾಳಿ ತುಂತುರು ಮಳೆ ಬೇರೆ ಸುರುವಾಗಿತ್ತು.
“ಟೀ ಮಾಡಲೆ?” ರೆಡ್ಡಿ ಕೇಳಿದೆ.
“ಬೇಡ.”
“ನೀವು ತುಂಬಾ ಗಾಬರಿಯಾದಂತಿದೆ.”
“ಮರೀನಾಳ ಸುರಕ್ಷಿತತೆಯ ಬಗ್ಗೆ ಚಿಂತಿಸುತ್ತಿದ್ದೇನೆ.”
“ಅದು ನನಗೆ ಬಿಡಿ.”
ರೆಡ್ಡಿಯ ಮನೆಯನ್ನು ಕಂಡು ಹುಡುಕಲು ಅರವಿಂದ ಹಳೆ ಹೈದರಾಬಾದಿನ ಅನೇಕ ಗಲ್ಲಿಗಳನ್ನು ಸುತ್ತಿದ್ದ. ಕೊನೆಗೆ ಒಂದು ಮುರುಕು ಕಟ್ಟಡದ ಅಟ್ಟದ ಮೇಲೆ ಆತ ಸಿಕ್ಕಿದ್ದ. ಒಂದೇ ಕೋಣೆಯ ಮನೆ ಒಂದೆಡೆ ಮಂಚ, ಹಾಸಿಗೆ, ಇನ್ನೊಂದೆಡೆ ಕುರ್ಚಿ, ಮೇಜು, ಅಲ್ಲಲ್ಲಿ ಪೇರಿಸಿಟ್ಟ ಪುಸ್ತಕಗಳ ರಾಶಿ.

ರೆಡ್ಡಿ ತನ್ನ ಯೋಚನೆಯನ್ನು ಹೇಳಿದ. ಅನೇಕ ಕಡೆ ಅವನಿಗೆ ಸಂಪರ್ಕಗಳಿದ್ದುವು. ಸುರಕ್ಷಿತವಾದ ಒಂದು ಕಡೆಗೆ ಮರೀನಾಳನ್ನು ಕಳಿಸುವುದು ಅಸಾಧ್ಯವೇನೂ ಆಗಿರಲಿಲ್ಲ.

“ಆದರೆ ನೀವು ಮಾತ್ರ ಈಗ ಅವಳ ಭೇಟಿ ಮಾಡಬಾರದು, ಅವಳಲ್ಲಿಗೆ ಹೋಗದೆ ನೇರವಾಗಿ ಇಲ್ಲಿಗೆ ಬಂದಿರುವುದು ಒಳ್ಳೆಯದೇ ಆಯಿತು. ನಿಮ್ಮ ವಸತಿಗೆ ಹೋಗಿ ನಾಳೆ ನಾನೇ ಫೋನ್ ಮಾಡಿ ಎಲ್ಲವನ್ನೂ ತಿಳಿಸುತ್ತೇನೆ,” ಎಂದ ರೆಡ್ಡಿ.

“ನಿಮಗೆ ಜ್ವರ ಬರ್ತಾ ಇದೆ.”
“ಅದೇನೂ ಅಂಥ ಸೀರಿಯಸ್ಸಾದ ಜ್ವರ ಅಲ್ಲ, ಈ ಥಂಡಿ ಹವೆಗೆ ಅದು ನನಗೆ ಇದ್ದದ್ದೇ.”

ಮಾತಾಡುತ್ತಿದ್ದಂತೆ ವಿದ್ಯುತ್ತು ನಿಂತು ಹೋಗಿ ಎಲ್ಲೆಡೆ ಕತ್ತಲು ಆವರಿಸಿತು. ನೀವೀಗ ಹೋಗಿ,” ಎಂದ ರೆಡ್ಡಿ.

ಅರವಿಂದ ಕತ್ತಲಿನಲ್ಲಿ ತನ್ನ ದಾರಿಯನ್ನು ಅರಸುತ್ತ ಅಟ್ಟದಿಂದ ಕೆಳಗಿಳಿದ. ಮರದ ಮೆಟ್ಟಲುಗಳು ಕಿರ್ರೆಂದು ಸದ್ದು ಮಾಡಿದುವು. ಮತ್ತೆ ಮುಖ್ಯ ರಸ್ತೆಗೆ ಬಂದು ಆಟೋ ಹಿಡಿದುಕೊಂಡು ವಸತಿ ಸೇರುವಾಗ ತುಂಬಾ ಹೊತ್ತಾಯಿತು.

ರೆಡ್ಡಿಯ ಬಂಡುಕೋರ ಮನಸ್ಸೀಗ ಚುರುಕಾಗಿ ಕೆಲಸ ಮಾಡತೊಡಗಿತು. ಮದನಪಳ್ಳಿಯಲ್ಲಿ ಅವನಿಗೆ ಸಂಪರ್ಕಗಳಿದ್ದುವು. ಅಲ್ಲಿನ ಹವೆಯೂ ಮರೀನಾಳಿಗೆ ಒಗ್ಗುವಂಥವೇ. ರಾತ್ರಿ ಹತ್ತರ ಸುಮಾರಿಗೆ ಬೆಂಗಳೂರಿಗೆ ಹೋಗುವ ರೈಲುಗಾಡಿಯಿತ್ತು. ಅದರಲ್ಲಿ ಗುಂತಕಲ್ ತನಕ ಹೋಗಿ ನಂತರ ಬಸ್ಸು ಹಿಡಿಯಬಹುದು. ಅಥವಾ ಬೇರೊಂದು ಗಾಡಿ.

ಹೆಚ್ಚು ಸಮಯವಿರಲಿಲ್ಲ. ಇದ್ದುದರಲ್ಲಿ ದಪ್ಪದ ಅಂಗಿ ಹಾಕಿಕೊಂಡು ಮನೆಯ ಹಿಂದಿನ ಬಾಗಿಲಿನಿಂದ ಹೊರಬಂದ, ವಿದ್ಯುತ್ತು ಹೋಗಿರುವುದು ಅನುಕೂಲವೇ ಆಗಿತ್ತು.

ಅನಿರೀಕ್ಷಿತವಾಗಿ ತನ್ನನ್ನು ಹುಡುಕಿಕೊಂಡು ಬಂದ ರೆಡ್ಡಿಯನ್ನು ನೋಡಿ ಮರೀನಾಳಿಗೆ ಆಶ್ಚರ್ಯವಾಯಿತು. ಒಳಗೆ ಬಂದು ಕುಳಿತುಕೊಳ್ಳಲು ಹೇಳಿದಳು.

“ಇಲ್ಲಿಂದ ಹೊರಡಲು ನಿಮಗೆ ಎಷ್ಟು ಸಮಯಬೇಕು?”
“ಯಾಕೆ?”
ಮರೀನಾ ಚಕಿತಳಾಗಿ ಕೇಳಿದಳು.
“ಅರ್ಧ ಗಂಟೆ ಸಾಕೆ?” ಅವಳ ಪ್ರಶ್ನೆಯನ್ನು ಕಡೆಗಣಿಸಿ ಕೇಳಿದ ರೆಡ್ಡಿ.
“ಸಾಕು.”
ರೆಡ್ಡಿ ಎಲ್ಲವನ್ನೂ ತಿಳಿಸಿದ. ಮರೀನಾಳ ಮುಖ ಬಿಳಿಚಿತು. ಅಲ್ಲಲ್ಲಿ ಬೆವರ ಹನಿಗಳು ಮೂಡಿದುವು.
“ಗಾಬರಿಗೆ ಕಾರಣವಿಲ್ಲ,” ರೆಡ್ಡಿ ಸಮಾಧಾನ ಹೇಳಿದೆ.
“ನಾನು ಅರವಿಂದ್‌ನನ್ನು ಕಾಣಬಹುದೆ?”
“ಕಾಣುವುದಕ್ಕೆ ಸಮಯವಿಲ್ಲ. ಕಂಡರೆ ಒಳಿತಲ್ಲ ಎಂಬುದು ನಿಮಗೂ ಗೊತ್ತಿದೆ.”
ರೆಡ್ಡಿ ಅವಳ ಕೈಯಲ್ಲಿ ರೈಲು ಟಿಕೆಟ್, ಒಂದು ಕಂತೆ ಹಣ ಇರಿಸಿದ.
“ಎಲ್ಲವನ್ನೂ ಮಾಡಿಕೊಂಡೇ ಬಂದಿದ್ದೀರಿ !”
“ಈಗ ನಿಮಗಿರೋದು ಕೇವಲ ನಲವತ್ತು ನಿಮಿಷ.”
“ಮನೆಯವರಿಗೆ ಏನೆಂದು ಹೇಳುವುದು?”
“ಊರಿಂದ ಸಂದೇಶ ಬಂದಿದೆ. ಯಾರಿಗೋ ಸೌಖ್ಯವಿಲ್ಲ ಎನ್ನಿ.” “ಆಫೀಸಿನಲ್ಲಿ?”
“ಎಲ್ಲಾ ನಾನು ನೋಡಿಕೊಳ್ಳುತ್ತೇನೆ.”
“ಅರವಿಂದ್‌ಗೆ ನನ್ನ ನೆನಪು ಹೇಳಿ….”
“ಹೇಳುತ್ತೇನೆ. ಗುಡ್ ಬೈ!”
“ಬೈ”

ರೆಡ್ಡಿ ನೇರವಾಗಿ ಮನೆಗೆ ಮರಳದೆ ಮತ್ತೆ ರೇಲ್ವೆ ಸ್ಟೇಷನಿಗೆ ಬಂದು ಕ್ಯಾಂಟೀನಿನಲ್ಲಿ ಹೋಗಿ ಕುಳಿತ. ಚಹಾಕ್ಕೆ ಹೇಳಿದೆ. ಚಹಾ ಬಂತು. ಕ್ಯಾಂಟೀನ್ ತುಂಬ ಜನ. ರಜೆಯಲ್ಲಿ ಎಲ್ಲೋ ಹೊರಟ ಮಂದಿಯಂತೆ ಕಂಡರು, ಬಹುಶಃ ಕಾಲೇಜ್ ವಿದ್ಯಾರ್ಥಿಗಳಿರಬಹದು ಅನಿಸಿತು.

ಚಹಾ ಮುಗಿಸಿ ಹೊರಬಂದ ಹತ್ತು ನಿಮಿಷಗಳಲ್ಲಿ ಬೆಂಗಳೂರು ಗಾಡಿ ಪ್ಲಾಟ್‌ಫಾರ್ಮಿಗೆ ಬಂದು ನಿಂತಿತು. ಕಾದು ನಿಂತ ಪ್ರಯಾಣಿಕರು ಭರದಿಂದ ಗಾಡಿಯೊಳಕ್ಕೆ ನುಗ್ಗಿದರು. ಇನ್ನು ಹದಿನೈದು ನಿಮಿಷಗಳಲ್ಲಿ ಗಾಡಿ ಸ್ಟೇಷನ್ ಬಿಡುತ್ತದೆ.

ಪ್ಲಾಟ್ ಫಾರ್ಮಿನಲ್ಲಿ ಪೇರಿಸಿಟ್ಟಿದ್ದ ಯಾವುದೋ ಪೆಟ್ಟಿಗೆಗಳ ಮರೆಗೆ ನಿಂತು ರೆಡ್ಡಿ ಕಾದ, ಮನಸ್ಸು ಅರವಿಂದ ಹಾಗೂ ಮರೀನಾ ಬಗ್ಗೆ ಯೋಚಿಸುತಿತ್ತು. ಯೋಚಿಸಿದಂತೆಲ್ಲ ಅವನಿಗೆ ಅನಿಸಿತು. ಚಳುವಳಿ ಕುಸಿದೇ ಹೋಯಿತೆಂದು ನಾನು ಭಾವಿಸಿದೆ. ನಿರಾಸೆಯಿಂದ ಪುಸ್ತಕಗಳ ಪ್ರಪಂಚಕ್ಕೆ ಶರಣಾದೆ. ಆದರೆ ನನ್ನ ಮುಂದೆಯೇ ಇನ್ನೊಂದು ತಲೆಮಾರು ಚಳುವಳಿಗೆ ಹೆಗಲುಕೊಟ್ಟು ಮುನ್ನಡೆಸುತ್ತಿದೆಯಲ್ಲ ! ಇದಕ್ಕಿಂತ ಹೆಚ್ಚಿನ ಭರವಸೆ ಇನ್ನೇನು ಬೇಕು?

“ಮಾಚಸ್?”

ರೆಡ್ಡಿ ತಟ್ಟನೆ ಹಿಂತಿರುಗಿ ನೋಡಿದ. ಯಾವನೋ ಒಬ್ಬ ಪ್ರಯಾಣಿಕ ಬಾಯಲ್ಲಿ ಸಿಗರೇಟು ಕಚ್ಚಿಕೊಂಡು ಬೆಂಕಿ ಪೊಟ್ಟಣ ಕೇಳುತ್ತಿದ್ದ.

“ಸಾರಿ”
“ನಾಟ್ ಎ ಸ್ಮೋಕರ್?”
“ನೋ”
“ಗುಡ್ ಫಾರ್ ಯು”
ಗಾಡಿ ಹೊರಡುವ ಸಮಯ ಸಮೀಪಿಸಿದಂತೆ ರೆಡ್ಡಿಯ ಆತಂಕ ಹೆಚ್ಚತೊಡಗಿತು. ಮರೀನಾ ಬರುತ್ತಾಳೆಯೇ? ಇಲ್ಲವೆ? ಏನಾದರೂ ಅನಿರೀಕ್ಷಿತ ಸಂಭವಿಸಿರಬಹುದೆ? ಅಥವಾ ಈಗಾಗಲೇ ಬಂದು ಗಾಡಿಯಲ್ಲಿ ಕುಳಿತಿರಬಹುದೆ? ಹತ್ತು ಹದಿನೈದು ಬೋಗಿಗಳನ್ನು ಜೋಡಿಸಿದ ನೀಳವಾದ ಗಾಡಿ ಅದು. ಒಂದು ಬೋಗಿಯಿಂದ ಇನ್ನೊಂದಕ್ಕೆ ಹಾದುಹೋಗುವುದಕ್ಕೆ ವೆಸ್ಟಿಬ್ಯೂಲುಗಳಿದ್ದುವು.

ರೆಡ್ಡಿ ಮರೀನಾಳಿಗೋಸ್ಕರ ರಿಸರ್ವೇಶನ್ ಟಿಕೆಟ್ ಖರೀದಿಸಿದ್ದ, ರೈಲ್ವೆ ಸ್ಟೇಷನ್ ನಲ್ಲಿ ಗೆಳೆಯರಿದ್ದುದರಿಂದ ಕೇವಲ ಹತ್ತು ನಿಮಿಷದಲ್ಲಿ ಇದು ಸಾಧ್ಯವಾಗಿತ್ತು.

ಧ್ವನಿದರ್ಧಕ ಸದ್ದು ಮಾಡಿತು. ಇನ್ನು ಕೇವಲ ಐದು ನಿಮಿಷದಲ್ಲಿ ಬೆಂಗಳೂರು ಕಡೆ ಹೊರಡುವ ಗಾಡಿ ಸ್ಟೇಷನ್ ಬಿಡುತ್ತದೆ.
ಎದುರುಗಡೆಯ ಫ್ಲಾಟ್‌ಫಾರ್ಮ್‌ನಲ್ಲಿ ಇನ್ನಾವುದೋ ಗಾಡಿ ಬಂದು ನಿಂತು ಜನ ಇಳಿಯತೊಡಗಿದರು. ಇದೇ ಗೊಂದಲದ ನಡುವೆ ಮರೀನಾ ದಾರಿ ಮಾಡಿ ಕೊಂಡು ಬರುವುದನ್ನು ರೆಡ್ಡಿ ಗಮನಿಸಿದ. ತನ್ನ ಪುಟ್ಟ ಸೂಟ್‌ಕೇಸ್‌ನೊಂದಿಗೆ ಬೆಂಗಳೂರು ಗಾಡಿಯ ಕಡೆ ಯಾವ ಅನುಮಾನವೂ ಇಲ್ಲದವಳಂತೆ ಹಜ್ಜೆ ಹಾಕುತ್ತಿದ್ದಳು ಅವಳು.

ನಂತರ ಒಂದು ಬೋಗಿಯನ್ನು ಹತ್ತಿದಳು.

ಧ್ವನಿವರ್ಧಕದಿಂದ ಇನ್ನೊಮ್ಮೆ ಸೂಚನೆ, ಗಾಡಿ ಸಿಳ್ಳು ಹಾಕುತ್ತ ಥಡ್ ಥಡ್ ಎಂದು ಚಲಿಸತೊಡಗಿತು. ಕೆಲವೇ ನಿಮಿಷಗಳಲ್ಲಿ ಕತ್ತಲಲ್ಲಿ ಕಾಣಿಸದಾಯಿತು. ಗಾಡಿ ಇದ್ದಲ್ಲಿ ಈಗ ಹಳಿಗಳು ಮಾತ್ರ.

ಕಳಿಸಿಕೊಡಲು ಬಂದ ಜನ ಓವರ್ ಬ್ರಿಜ್‌ನ ಕಡೆ ನಡೆಯತೊಡಗಿದರು.
ರೆಡ್ಡಿಯೂ ಅವರೊಂದಿಗೆ ಸೇರಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲ್ಲಿಗೆ
Next post ಚಂದ್ರ ಚಕೋರಿ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys