ಜಂಗಮ ಮನಸ್ಸಿನ ‘ಸ್ಪಂದನ’ ಶ್ರೀನಿವಾಸು

ಜಂಗಮ ಮನಸ್ಸಿನ ‘ಸ್ಪಂದನ’ ಶ್ರೀನಿವಾಸು

ಚಿತ್ರ ಸೆಲೆ: ಭೂಮಿಕಾ.ಆರ್ಗ್
ಚಿತ್ರ ಸೆಲೆ: ಭೂಮಿಕಾ.ಆರ್ಗ್

ಕರ್ನಾಟಕದ ಯಾವುದೋ ಹಳ್ಳಿಯಲ್ಲಿರುವ ಅಪ್ಪ ಅಮ್ಮ ಅಮೇರಿಕದಲ್ಲಿರುವ ಮಗನ ಮನೆಗೆ ಹೋಗುವುದು ಯಾತಕ್ಕೆ? ‘ಸೊಸೆಯ ಅಥವಾ ಮಗಳ ಬಾಣಂತನಕ್ಕೆ’ ಎನ್ನುವುದು ಜೋಕು. ಅಂತೆಯೇ ಅಮೆರಿಕನ್ನಡಿಗರು ಬೆಂಗಳೂರಿಗೆ ಬರುವುದು ಯಾತಕ್ಕಾಗಿ? ಈ ಬಗ್ಗೆಯೂ ಒಂದು ಜೋಕಿದೆ. ಆ ಜೋಕಿನ ಪ್ರಕಾರ, ಅಮೇರಿಕನ್ನರು ಬೆಂಗಳೂರಿಗೆ ಬರಲು ಕಾರಣಗಳು ಮೂರು: ಮೊದಲನೆಯದು ಮದುವೆಯಾಗಲು, ಎರಡನೆಯದು ಸೈಟು ಕೊಳ್ಳಲು, ಮೂರನೆಯದು ಪುಸ್ತಕ ಬಿಡುಗಡೆ ಮಾಡಲು.

ಅಮೇರಿಕನ್ನಡಿಗ ಪಿ.ಎನ್.ಶ್ರೀನಿವಾಸ್ ಅವರಿಗೆ ಮೇಲಿನ ಜೋಕುಗಳು ಅಷ್ಟಾಗಿ ಹೊಂದುವುದಿಲ್ಲ. ಬಂಧುಮಿತ್ರರ ನಡುವೆ ‘ಶ್ರೀನಿವಾಸು’ ಎಂದೇ ಹೆಸರಾದ ಅವರು ಹೇಳಿಕೇಳಿ ಗಂಭೀರ ಆಸಾಮಿ.

ಅಮೇರಿಕಾದ ಮೇರಿಲ್ಯಾಂಡ್ ನಿವಾಸಿ ಶ್ರೀನಿವಾಸ್ ಕೂಡ ಪ್ರತಿ ಸಲ ಬೆಂಗಳೂರಿಗೆ ಬಂದಾಗಲೂ ಪುಸ್ತಕ, ಸಿನಿಮಾ ಎಂದು ಏನಾದರೊಂದನ್ನು ಹಚ್ಚಿಕೊಂಡೇ ಬರುತ್ತಾರೆ. ಸಿನಿಮಾಗಳು ಸಿದ್ಧವಾದದ್ದು, ಕಾದಂಬರಿಗಳು ಬಿಡುಗಡೆಯಾದದ್ದು ಇಂಥ ರಜೆ ಪ್ರವಾಸಗಳಲ್ಲೇ. ಹೀಗೆಂದ ಮಾತ್ರಕ್ಕೆ ಅವರ ಕನ್ನಡ ಕಾಳಜಿಯನ್ನು ಪುಸ್ತಕ ಅಥವಾ ಸಿನಿಮಾಕ್ಕಷ್ಟೇ ಸೀಮಿತ ಗೊಳಿಸುವಂತಿಲ್ಲ.

ವಿಜ್ಞಾನಿ, ಸಿನಿಮಾಕರ್ಮಿ. ಲೇಖಕ- ಹೀಗೆ ಮೂರೇ ಪದಗಳಲ್ಲಿ ಶ್ರೀನಿವಾಸ್ ಪರಿಚಯವನ್ನು ಮುಗಿಸಿಬಿಡಬಹುದು. ಆದರೆ ಮೇಲಿನ ಮೂರು ಕ್ಷೇತ್ರಗಳಲ್ಲಿನ ಅವರ ಸಾಧನೆ ಇದೆಯಲ್ಲ ಅದು ಸುಲಭಕ್ಕೆ ಮುಗಿಯುವಷ್ಟು ಸರಳವಾದುದಲ್ಲ. ಅದು ಅರ್ಥವಾಗಬೇಕಾದರೆ ಅವರು ಅಮೇರಿಕಾಗೆ ತೆರಳುವ ಮುನ್ನಾ ದಿನಗಳ ಬಗೆಗೆ ತಿಳಿಯಬೇಕು.

ಅಮೆರಿಕಾಗೆ ಹಾರುವ ಮುನ್ನ ಶ್ರೀನಿವಾಸ್ ‘ಇಸ್ರೋ’ದಲ್ಲಿ ಕೆಲಸ ಮಾಡುತ್ತಿದ್ದರು. ೧೯೭೮ರಲ್ಲಿ ಭಾರತದ ಪ್ರಥಮ ಉಪಗ್ರಹ ‘ಆರ್ಯಭಟ’ದ ಉಡಾವಣೆ ನಡೆಯಿತಲ್ಲ? ಈ ಉಡಾವಣೆಯಲ್ಲಿ ಭಾಗವಹಿಸಿದ ವಿಜ್ಞಾನಿಗಳಲ್ಲಿ ಶ್ರೀನಿವಾಸ್ ಕೂಡ ಒಬ್ಬರು. ಈ ಕಾರ್ಯಾಚರಣೆಯಲ್ಲಿ ಉಪಗ್ರಹ ನಿಯಂತ್ರಣ ವ್ಯವಸ್ಥೆಯ ಉಸ್ತುವಾರಿ ಅವರದಾಗಿತ್ತು. ‘ಆರ್ಯಭಟ’ ಉಡಾವಣೆ ಸಂದರ್ಭದಲ್ಲಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ, ಪ್ರೊ.ಯು.ಆರ್. ರಾವ್, ಕಸ್ತೂರಿ ರಂಗನ್, ಪ್ರೊ. ಧವನ್ ಅವರೊಂದಿಗೆ ಕೆಲಸ ಮಾಡಿದ ಅಗ್ಗಳಿಕೆ ಅವರದು. ಇಂಥ ಐತಿಹಾಸಿಕ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದು ಯಾರ ಪಾಲಿಗೂ ಅವಿಸ್ಮರಣೀಯ ಘಟನೆ ತಾನೆ?

‘ಹೌದು ರಷ್ಯಾಯಾದ ಉಡ್ಡಯನ ಕೇಂದ್ರದಿಂದ ಆರ್ಯಭಟ ಬಾನಿಗೆ ಚಿಮ್ಮಿದ ಕ್ಷಣಗಳು ನನ್ನ ಬದುಕಿನ ಮರೆಯಲಾಗದ ಕ್ಷಣಗಳು’ ಎನ್ನುತ್ತಾರೆ ಶ್ರೀನಿವಾಸು.

‘ಆರ್ಯಭಟ’ ಆಗಸದಲ್ಲಿ ಯಶಸ್ವಿ ಹಾರಾಟ ನಡೆಸುತ್ತಿದ್ದ ದಿನಗಳಲ್ಲೇ ಶ್ರೀನಿವಾಸ್ ಅಮೇರಿಕಾ ವಿಮಾನ ಹತ್ತಿದ್ದರು. ಅಲ್ಲಿ ಅಣುಶಕ್ತಿ ಕೇಂದ್ರಗಳ ನಿರ್ಮಾಣದಲ್ಲಿ ತೊಡಗಿಕೊಂಡರು. ಆ ಸಂದರ್ಭದ್ದೊಂದು ಸ್ವಾರಸ್ಯದ ಕಥೆಯಿದೆ: ಅಣುಶಕ್ತಿ ಸಂಸ್ಥೆಯಲ್ಲಿ ಸಮಸ್ಯೆಯೊಂದು ತಲೆದೋರಿತ್ತು. ಈ ಸಮಸ್ಯೆಯಿಂದಾಗಿ ಸಂಸ್ಥೆಗೆ ದಿನವೊಂದಕ್ಕೆ ಒಂದು ಮಿಲಿಯನ್ ಡಾಲರ್ ನಷ್ಟವಾಗುತ್ತಿತ್ತು. ‘ಎರಡು ವಾರ ಟೈಮ್ ಕೊಡಿ, ಪರಿಹರಿಸುತ್ತೇನೆ’ ಎಂದು ಶ್ರೀನಿವಾಸ್ ಮುಂದೆ ಬಂದರು. ‘ಈ ಕಂದು ಮನುಷ್ಯ ಅದೇನು ಮಾಡಿಯಾನು’ ಎನ್ನುವ ಉದಾಸೀನದೊಂದಿಗೇ ಸಂಸ್ಥೆ ಹೂಗುಟ್ಟಿತು. ಸರಿ, ಹಗಲೂ ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡಿದರು. ಸ್ನಾತಕೋತ್ತರ ಎಂಜಿನಿಯರಿಂಗ್‌ನಲ್ಲಿ ಬಂಗಾರದ ಪದಕ ಗಳಿಸಿದ್ದರಲ್ಲ ಅಲ್ಲಿ ಕಲಿತ ಗಣಿತ ಇಲ್ಲಿ ಕೆಲಸಕ್ಕೆ ಬಂತು. ಹದಿಮೂರು ದಿನಕ್ಕೆ ವರದಿಯೊಂದನ್ನು ಸಿದ್ದಪಡಿಸಿಯೂ ಬಿಟ್ಟರು. ತಮಾಷೆಯೆಂದರೆ, ಈ ಸಿಕ್ಕು ಬಿಡಿಸಲಿಕ್ಕಾಗಿ ಹನ್ನೆರಡು ಬಿಳಿಯರು ಎರಡು ವರ್ಷ ಖರ್ಚು ಮಾಡಿದ್ದರು. ಶ್ರೀನಿವಾಸು ಬುದ್ಧಿಮತ್ತೆಗೆ ಸಂಸ್ಥೆ ದಂಗು. ‘ಸರಿ, ನೀವು ನಮ್ಮಸಂಸ್ಥೆಗೊಂದು ಆಭರಣ’ ಎಂದು ಒಪ್ಪಿಕೊಂಡರು. ಬಡ್ತಿ ನೀಡಿದರು.

ಅಣುಶಕ್ತಿ ಕ್ಷೇತ್ರದಲ್ಲಿ ಪಿ‌ಎನ್ನೆಸ್ ತುಂಬಾದಿನ ನಿಲ್ಲಲಿಲ್ಲ. ಕಾಲಲ್ಲಿ ಚಕ್ರ ಇತ್ತಲ್ಲ. ಮಾಹಿತಿ ತಂತ್ರಜ್ಞಾನ ಗಾಳಿಯೂ ಜೋರಾಗಿತ್ತಲ್ಲ. ಅವರು ಕಂಪ್ಯೂಟರ್  ಸಂಸ್ಥೆಯೊಂದಕ್ಕೆ ಸೇರಿಕೊಂಡರು. ದುಡಿಮೆಯ ನಡುವೆ, ರಾತ್ರಿಯ ಕಿರುನಿದ್ದೆಯಲ್ಲೊಂದು ಭಾಗ ತ್ಯಾಗ ಮಾಡಿ ಕನ್ನಡ ಸಾಹಿತ್ಯ-ಸಂಸ್ಕೃತಿ ಎಂದು ಅವರು ತಲೆ ಕೆಡೆಸಿಕೊಳ್ಳುವುದು ನಡೆದೇ ಇದೆ.

ವ್ಯಕ್ತಿ ಬದುಕಿನಲ್ಲಿ ಬದಲಾಣೆಗಳಂತೆ ಪ್ರವೃತ್ತಿಯಲ್ಲೂ  ಶ್ರೀನಿವಾಸ್ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಇದ್ದಾರೆ. ಅವರ ಪಾಲಿಗೆ ಯಾವುದೂ ಪೂರ್ವ ನಿಶ್ಚಯವಲ್ಲ, ಯಾವುದೇ ಕ್ಷೇತ್ರದ ಬಗ್ಗೆ ಪೂರ್ವಾಗ್ರಹವೂ ಇಲ್ಲ. ಸಿನಿಮಾಗಳ ವಿಚಾರವನ್ನೇ ನೋಡಿ: ‘ಸ್ಪಂದನ’. ‘ಅಭಿಮಾನ’ ದಂಥ ಪ್ರಶಸ್ತಿ ವಿಜೇತ ಸಿನಿಮಾಗಳ ಶ್ರೀನಿವಾಸು. ‘ಏನೇ ಬರಲಿ ಪ್ರೀತಿ ಇರಲಿ’ ಎನ್ನುವ ಲವಲವಿಕೆಯ ಚಿತ್ರದ ಶ್ರೀನಿವಾಸು, ನಿರ್ದೇಶನಕ್ಕೆ ಇಳಿದಾಗ ಅವರಿಗೆ ಯಾವ ಅನುಭವವೂ ಇರಲಿಲ್ಲ. ಇದ್ದುದು ಆತ್ಮವಿಶ್ವಾಸ ಹಾಗೂ ಕಾಲೇಜು ದಿನಗಳಲ್ಲಿ ನಾಟಕ ಮಾಡಿದ ಅನುಭವ ಮಾತ್ರ. ಸಿನಿಮಾ ಮಾಡೋಣ ಎಂದು ಗೆಳೆಯರು ಹುರಿದುಂಬಿಸಿದರು. ಸಿನಿಮಾಗೆ ಸಂಬಂಧಿಸಿದ ಪುಸ್ತಕಗಳನ್ನೆಲ್ಲ ಓದಿಕೊಂಡ ಅವರು. ಸಿನಿಮಾ ನಿರ್ದೇಶನಕ್ಕೆ ಇಳಿದೇಬಿಟ್ಟರು. ಸೈ ಅನ್ನಿಸಿಕೊಂಡೂ ಬಿಟ್ಟರು. ನಿರ್ದೇಶನವಷ್ಟೇ ಅಲ್ಲ ಕಥೆ, ಚಿತ್ರಕಥೆ, ಸಂಭಾಷಣೆಯೂ ಅವರದೇ. ನಟನೆಯಲ್ಲೂ ಒಂದು ಕೈ ನೋಡಿದರು.

ನಟನೆ ಎಂದಾಗ ಶ್ರೀನಿವಾಸ್ ಅವರ ಕಾಲೇಜು ದಿನಗಳ ಬಗ್ಗೆ ಹೇಳಬೇಕು. ಪ್ರಶಸ್ತಿಗಾಗಿ ಅವರು ಗೆಳೆಯರೊಂದಿಗೆ ನಾಟಕ ಮಾಡುವುದಿದ್ದೇ ಇತ್ತು. ಆದರೆ ಸೆಂಟ್ರಲ್ ಕಾಲೇಜಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಜಿ.ಪಿ.ರಾಜರತ್ನಂ ನಿರ್ದೇಶಿಸಿದ ‘ನಮ್ಕ್ಳಬ್ಬು’ ನಾಟಕದಲ್ಲಿ ಶ್ರೀನಿವಾಸ್ ಪಿಳ್ಳೂರಾಯನ ಪಾತ್ರ ವಹಿಸಿದ್ದರು. ಈ ನಾಟಕದಲ್ಲಿ ರಾಜರತ್ನಂ ಕ್ಲಬ್ಬಿನ ಮೆಂಬರ್ ಆಗಿ ಅಭಿನಯಿಸಿದ್ದರು. ರಾಜರತ್ನಂ ಪ್ರಭಾವಳಿಯಲ್ಲಿ ಶ್ರೀನಿವಾಸ್ ಸಿಲುಕಿದ್ದರು ಎನ್ನುವುದನ್ನು  ತಿಳಿಸಲಿಕ್ಕೆ ಈ ನಾಟಕದ ಪ್ರಸಂಗ ಹೇಳಸಬೇಕಾಯಿತು. ರಾಜರತ್ನಂ ಸಹವಾಸ ಎಂದ ಮೇಲೆ ಅದು ಕನ್ನಡ ಸಹವಾಸವೇ ಸರಿ. ‘ನಂ ರಾಜರತ್ನಂ ಮೇಷ್ಟ್ರು ಬಿ.ಎಂ.ಶ್ರೀ ಅವರ ‘ಇಂಗ್ಲಿಷ್ ಗೀತೆಗಳು’ ಪದ್ಯಗಳನ್ನು ಎಷ್ಟು ರಸವತ್ತಾಗಿ ಹೇಳಿದ್ರು ಗೊತ್ತೇನ್ರಿ…’ ಎಂದು ಈಗಲೂ ಶ್ರೀನಿವಾಸ್ ನೆನಪುಗಳ ಚಪ್ಪರಿಸುತ್ತಾರೆ. ಅಂಥ ಮೇಷ್ಟ್ರು ಸಿಕ್ಕಬೇಕಾದರೆ ಅದೃಷ್ಟ ದೊಡ್ಡದಿರಬೇಕು ಕಣ್ರೀ!

ಈಗ ಹೇಳಿ, ಆಮೆರಿಕನ್ನರ ತವರು ಪ್ರವಾಸದ ಜೋಕು ಹಾಗೂ ಶ್ರೀನಿವಾಸ್ ಅವರ ಕನ್ನಡ ಪ್ರೇಮಕ್ಕೂ ತಾಳೆ ಹಾಕಲು ಸಾಧ್ಯವಾ? ಹಿರಿಯ ವಿಮರ್ಶಕ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರು ಪಿ‌ಎನ್ನೆಸ್ ಕನ್ನಡ ಕಾಳಜಿಯನ್ನು ಗುರ್ತಿಸಿರುವುದು ಹೀಗೆ: ‘ದೂರದ ಅಮೆರಿಕಾದಲ್ಲಿ ಶ್ರೀನಿವಾಸ್ ಅವರ  ಪ್ರೇಮ ಬರಿಯ ಹಂಬಲವಾಗದೆ, ವಿಷಾದದ ಛಾಯೆ ತಳೆದ ನೆನಪಾಗದೆ, ಕನ್ನಡ ಸಾಹಿತ್ಯದ ಅಧ್ಯಯನ. ಚಿಂತನೆಗಳಲ್ಲಿ ಸಾರ್ಥಕ ರೂಪ ತಳೆದಿದೆ’.

ಪಿ‌ಎನ್ನೆಸ್‌ರ ಕನ್ನಡ ಪ್ರೀತಿಯ ಬಗ್ಗೆ ಮತ್ತೊಂದು ಉದಾಹರಣೆಯಿದೆ. ಅವರು ವಿಮಾನ ಹತ್ತಿ ಅಮೆರಿಕಾಗೆ ಹೋಗಿ ಒಂದಷ್ಟು ವರ್ಷಗಳಾಗಿದ್ದವು. ವೃತ್ತಿಯಲ್ಲಿ ಒಳ್ಳೆಯ ಹೆಸರಿತ್ತು. ಆದರೆ ತನ್ನಿಬ್ಬರು ಮಕ್ಕಳು ಕನ್ನಡ ಸಂಸ್ಕೃತಿಗೆ ಅಪರಿಚಿತರಾಗಿಬಿಡುತ್ತಾರೆ ಎನ್ನುವ ಕೊರಗು ಅವರ ಮನಸ್ಸನ್ನು ಕೊರೆಯುತ್ತಲೇ ಇತ್ತು. ಒಂದು ದಿನ ಕೆಲಸಕ್ಕೆ ರಾಜೀನಾಮೆ ಕೊಟ್ಟ ಅವರು, ಭಾರತದ ವಿಮಾನ ಹತ್ತಿಯೇ ಬಿಟ್ಟರು. ಅನಂತರ ಎರಡು ವರ್ಷ ಬೆಂಗಳೂರಿನಲ್ಲಿ ನೆಲೆಸಿದ ಅವರು, ಮಕ್ಕಳಿಗೆ ಕರ್ನಾಟಕ ದರ್ಶನ ಮಾಡಿಸಿದರು. ಮಕ್ಕಳ ಮನಸ್ಸಿನಲ್ಲಿ ಕನ್ನಡ ಕುಡಿ ಚಿಗುತಿದೆ ಎನ್ನುವುದು ಮನದಟ್ಟಾದ ಮೇಲೆಯೇ ಮರಳಿ ಅಮೇರಿಕಾದತ್ತ  ಮುಖ ಮಾಡಿದ್ದು. ಕೆಲಸ ಹುಡುಕುವ ಪ್ರಮೇಯ ಅವರಿಗೆ ಬರಲೇ ಇಲ್ಲ. ಹಳೆಯ ಸಂಸ್ಥೆಯೇ ಬಡ್ತಿ ನೀಡಿ ಸ್ವಾಗತಿಸಿತು.

‘ಕನ್ನಡ ಕುಡಿ’ ಎನುವ ಮಾತು ಬಂತಲ್ಲ. ಈ ‘ಕುಡಿ’ಯನ್ನು ಜಾಗೃತಗೊಳಿಸುವ ಬಗ್ಗೆ ಪಿ‌ಎನ್ನೆಸ್‌ಗೆ ಅಪಾರ ನಂಬಿಕೆ. ಆಧುನಿಕ ಸಂದರ್ಭದಲ್ಲಿ ಇಂಗ್ಲಿಷ್ ಅನಿವಾರ್ಯತೆಯನ್ನು ನಿರಾಕರಿಸುವುದು ಅಸಾಧ್ಯ. ಆದರೆ ಮಕ್ಕಳಲ್ಲಿ ‘ಕನ್ನಡ ಪ್ರಜ್ಞೆ’ ಮೂಡಿಸಬೇಕು. ಈ ಪ್ರಜ್ಞೆ ಕುಡಿಯೊಡೆದಾಗ ಅವರು ಹುಡುಕಿಕೊಂಡು ಕನ್ನಡ ಕಲಿಯುತ್ತಾರೆ. ಇದು ಅವರ ನಿಲುವು.

ಅದು ಸರಿ ಶ್ರೀನಿವಾಸ್- ನಿಮ್ಮ ‘ಮಾತುಗಳು’ ವಿಮರ್ಶೆಯ ಪುಸ್ತಕ. ‘ನಡೆ’ ಮತ್ತು ‘ಸೆರೆ’ ಕಾರಂಬರಿಗಳನ್ನು ನಾವು ಮೆಚ್ಚಿದ್ದೇವೆ. ಚಲನಚಿತ್ರ ವಿಮರ್ಶಕ ಕೃತಿಗೆ ರಾಷ್ಟ್ರಪ್ರಶಸ್ತಿ ದೊರೆತದ್ದೂ ಸಂತೋಷ. ಆದರೆ ನೀವು ಸಿನಿಮಾ ಯಾಕೆ ಮರೆತಿರಿ?

ಹಾಗೇನೂ ಇಲ್ಲ ಎನ್ನುತ್ತಾರೆ ಪಿ‌ಎನ್ನೆನ್. ‘ನಡೆ’ ಕಾದಂಬರಿಯನ್ನು ಸಿನಿಮಾ ಮಾಡುವ ಬಯಕೆಯಿದೆ. ಆದರೆ ಬಿಡುವೇ ಇಲ್ಲ. ಬಿಡುವಾದಾಗಲೆಲ್ಲ ಕಂಪ್ಯೂಟರ್‍‍ನಲ್ಲಿ ಚಿತ್ರ ಮಾಡಿಟ್ಟುಕೊಳ್ಳೋಣ ಎಂದುಕೊಂಡಿದ್ದೇನೆ. ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ- ನಯಾಗರಾ ಜಲಪಾತದ ತಪ್ಪಲ ದೃಶ್ಯವನ್ನು ಜಲಪಾತದ ಬಳಿ ಹೋಗದೆಯೇ ಚಿತ್ರೀಕರಿಸಬಹುದು. ನಡೆಯನ್ನೂ ಹೀಗೆಯೇ ನಿರ್ಮಿಸಬೇಕು ಎಂದು ಅವರು ತಮ್ಮ ಸಿನಿಮಾ ಕನಸನ್ನು ಮುಂದಿಡುತ್ತಾರೆ.

‘ಸೆರೆ’ ಕಾದಂಬರಿಯ ಬಿಡುಗಡೆ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದ ಶ್ರೀನಿವಾಸ್ ಅವರನ್ನು ‘ಇಸ್ರೋ’ ಗೆಳೆಯರು ಅಭಿನಂದಿಸಿದ್ದಾರೆ. ಅವರು ಬೆಂಗಳೂರಿಗೆ ಬಂದಾಗಲೆಲ್ಲ ಸಿನಿಮಾ- ಸಾಹಿತ್ಯ, ಹೀಗೆ ಯಾವುದಾದರೊಂದು ರೂಪದ ಸೃಜನಶೀಲ ಅಚ್ಚರಿ ಇದ್ದೇ ಇರುತ್ತದೆ. ಯಾರಿಗೆ ಗೊತ್ತು, ಸಿನಿಮಾ-ಸಾಹಿತ್ಯ ಎರಡನ್ನೂ ಬಿಟ್ಟು ಮತ್ತೊಂದು ಕ್ಷೇತ್ರ ಅವರನ್ನು ಆಕರ್ಷಿಸಲೂಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೂಬನ – ಸಿರಿಮನ
Next post ಪರಕೀಯ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys