ಮರಿಗಿಳಿಯನ್ನು
ಕಾಡು ಬೆಕ್ಕು ಹೆದರಿಸುತ್ತಿದೆ
ಬಳ್ಳಿ ಚಿಗುರಿನ ಸುತ್ತ
ಕತ್ತಿ ಕತ್ತರಿಗಳು ಕುಣಿಯುತ್ತಿವೆ
ಹೂ ಪಾದದ ಕೆಳಗೆ
ಮುಳ್ಳು ಹರವುತ್ತಿವೆ
ಆಶ್ರಮ ಶಾಂತಿಯಲ್ಲರಳಿದ ಕಿವಿಗಳ ಮೇಲೆ
ಕೋಲಾಹಲದಲೆಯಪ್ಪಳಿಸುತ್ತಿವೆ
ಮರಣದಾಚೆ ಇಣುಕಿ ಬಂದವನಿಗೆ
ಉರಿಮಾರಿಯ ಮೆರವಣಿಗೆ ಕುಕ್ಕುತ್ತಿದೆ
ನಿಸರ್ಗಲಾಸ್ಯದೊಡನೆ
ಒಲೆದಾಡಿದ ಇವನ ಮೈಯನ್ನು
ಅಸಂಬದ್ಧ ಪ್ರೇತ ಕುಣಿತ ಕೆಣಕುತ್ತಿವೆ
ದಿವ್ಯಗಾನಕೆ ದನಿಗೂಡಿಸಿದವನಿಗೆ
ಅಸಂಗತ ಕಿರುಚಾಟ ಸವಾಲೆಸೆದಿದೆ
ಸ್ವಚ್ಛಂದ ಲೀಲೆಯವನನ್ನು
ನೂರು ಹಗ್ಗಗಳು ಬಂಧಿಸುತ್ತಿವೆ
ಮೌನದ ಜೇನ ಕುಡಿದವನನ್ನು
ಮಾತಿನ ಕುಡುಕುತನ
ಜಗಳಕ್ಕೆ ಕರೆಯುತ್ತಿದೆ
ಬೇರಿನ ಬಿಳಿಹೂವ
ನೆತ್ತಿಗೇರಿಸಿ ಮೂಸಿದವನನು
ನೋಟ ಕೂಟ ಕಟಿ
ಸೂತ್ರಗಳು ಕೆಳಗೆಳೆಯುತ್ತಿವೆ
ಇವನು ಸ್ವದೇಶದಲ್ಲೇ
ಪರದೇಶಿಯಾಗಿದ್ದಾನೆ
ತನ್ನ ಮನೆಯಲ್ಲೇ
ಪರಕೀಯನಾಗಿದ್ದಾನೆ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)