ಅಕ್ಷರವಿಧಾನ

ಅಕ್ಷರವಿಧಾನ

ಸದ್ಯ ಲೋಕದಲ್ಲಿರುವ ಸುಮಾರು ಮೂರೋ ನಾಲ್ಕೋ ಸಾವಿರದಷ್ಟು ಭಾಷೆಗಳಲ್ಲಿ ಅಕ್ಷರಗಳಿರುವುದು ಕೇವಲ ಇನ್ನೂರಕ್ಕೂ ಕಡಿಮೆ ಭಾಷೆಗಳಿಗೆ. ಈ ಅಕ್ಷರಗಳಲ್ಲಿ ಮುಖ್ಯವಾಗಿ ಮೂರು ವಿಧಗಳನ್ನು ಕಾಣುತ್ತೇವೆ: ಚೀನೀ ಮತ್ತು ಸ್ವಲ್ಪ ಮಟ್ಟಿಗೆ ಜಪಾನೀ ಭಾಷೆಗಳು ಬಳಸುವ ಚಿತ್ರಾಕ್ಷರ; ಇಂಗ್ಲಿಷ್, ಫ್ರೆಂಚ್, ಜರ್ಮನ್ ಮುಂತಾದ ಭಾಷೆಗಳು ಬಳಸುವ ಧ್ವನ್ಯಾಕ್ಷರ; ಮತ್ತು ಅರಬ್ಬೀ, ಸಂಸ್ಕೃತ, ಹಿಂದಿ, ಕನ್ನಡ ಮುಂತಾದ ಭಾಷೆಗಳು ಬಳಸುವ ವರ್‍ಣಾಕ್ಷರ. ಚಿತ್ರಾಕ್ಷರವೆಂದರೆ ಮಾತಿನ ಆಧಾರವಿಲ್ಲದೆ ನೇರವಾಗಿ ಅರ್ಥವನ್ನು ಸೂಚಿಸುವ ಚಿತ್ರಿಕಾ ವಿಧಾನ. ಚೀನಾದ ವಿಸ್ತಾರವಾದ ಪರದೇಶದಲ್ಲಿ ಒಂದು ಕಡೆಯ ಮಾತು ಇನ್ನೊಂದು ಕಡೆ ಅರ್ಥವಾಗದಷ್ಟು ಭಿನ್ನವಾಗಿರುತ್ತ, ಇಂಥದೊಂದು ಚಿತ್ರಿಕಾ ವಿಧಾನ ಅಲ್ಲಿ ಅಗತ್ಯವಾಯಿತು. ಹೀಗೆ ಬರಹದಲ್ಲಿ ಮಾತ್ರವೇ ಚೀನೀ ಭಾಷೆ ಏಕತ್ರವಾಗಿರುವುದು-ಎಂದರೆ ಅಕ್ಷರ ಗೊತ್ತಿರುವ ಯಾವುದೇ ಪ್ರದೇಶದ ಚೀನೀಯರೂ ಬರಹದ ಮೂಲಕ ಪರಸ್ಪರ ಅರ್ಥಮಾಡಿಕೊಳ್ಳಬಲ್ಲರು; ಆದರೆ ಮಾತಿನಲ್ಲಿ ಹಾಗಾಗುತ್ತದೆ ಎನ್ನುವಂತಿಲ್ಲ. ಚಿತ್ರಾಕ್ಷರದಲ್ಲಿ ಕೆಲವು ಮೂಲ ಕಲ್ಪನೆಗಳನ್ನು ಸೂಚಿಸುವ ಒಂದೊಂದು ರೀತಿಯ ಆಕಾರದ ರೇಖೆಗಳಿರುತ್ತವೆ; ಇಂಥ ರೇಖೆಗಳನ್ನು ಒಂದು ಗುಚ್ಛವಾಗಿ ಜೋಡಿಸಿಕೊಂಡು ಮನುಷ್ಯ, ಮರ, ಬೆಟ್ಟ ಮುಂತಾದ ನಾಮಪದಗಳನ್ನು ಮತ್ತು ಕ್ರಿಯೆಗಳನ್ನು ಸೂಚಿಸಬಹುದು. ಇಂಥ ಒಂದೊಂದು ಪದವೆಂದರೆ ಒಂದು ರೇಖಾಗುಚ್ಛ (‘ಅಕ್ಷರ’ ಅಥವಾ ‘ಅರ್‍ಥ’). ಪದವೊಂದಕ್ಕೆ ಸುಮಾರು ಮೂವತ್ತಮೂರು ರೇಖೆಗಳಿರುವುದೂ ಸಾಧ್ಯ. ಪದಕ್ಕೆ ಪದ ಸೇರಿಸಿಕೊಂಡು ಇನ್ನಿತರ ಪದಗಳನ್ನೂ ಸಂಯೋಜಿಸಿಕೊಳ್ಳಬಹುದಾಗಿದೆ. ಉದಾಹರಣೆಗೆ, ಒಂದೇ ‘ಮರ’ವನ್ನು ಸೂಚಿಸುವ ರೇಖಾಗುಚ್ಛವನ್ನು ದ್ವಿಗುಣಗೊಳಿಸಿದರೆ ‘ಕಾಡು’ ಎಂಬ ಪದ (ಅಥವಾ ಅರ್‍ಥ). ‘ಸೂರ್ಯ’ ಮತ್ತು ‘ಚಂದ್ರ’ ಸೇರಿಸಿದರೆ ‘ಪ್ರಕಾಶ.’ ‘ಹೆಂಗಸು’ ಮತ್ತು ‘ಮಗು’ ಸೇರಿಸಿದರೆ ‘ಒಳ್ಳೆಯತನ.’ ಮರದ ಮೇಲೆ ಸೂರ್ಯನನ್ನಿರಿಸಿದರೆ ‘ಎತ್ತರ’ ಅಥವಾ ‘ಪ್ರಕಾಶಮಾನ.’ ಕೆಳಗಿರಿಸಿದರೆ ‘ಅಡಗಿಸು’ ಅಥವಾ ಕತ್ತಲು. ಇಂಥ ಸುಮಾರು ಐವತ್ತು ಸಾವಿರ ಪದಗಳು ಚೈನೀಸ್ ಭಾಷೆಯಲ್ಲಿವೆ. ಆದ್ದರಿಂದ ಚೈನೀಸ್ ಭಾಷೆಯನ್ನು ಕೈಯಲ್ಲಿ ಬರೆಯುವುದೆಂದರೆ ಒಂದು ರೀತಿಯಲ್ಲಿ ಚಿತ್ರ ಬಿಡಿಸಿದಂತೆ; ಅದನ್ನು ಕಂಪ್ಯೂಟರಿನಲ್ಜಿ ಟೈಪ್ ಮಾಡುವ ವಿಧಾನ ಕೂಡಾ ಬೇರೆಯೇ. ಹೀಗೆ ಮಾತು ಮತ್ತು ಬರಹಕ್ಕೆ ಸಾವಯವ ಸಂಬಂಧವಿಲ್ಲದ ಈ ಚಿತ್ರವ್ಯವಸ್ಥೆ ತಾನೇ ಒಂದು ಪ್ರತ್ಯೇಕ ಭಾಷೆಯಂತಿರುವುದು ಗಮನಿಸತಕ್ಕ ಸಂಗತಿ. ಇದರ ಪ್ರತಿಮಾನಿಷ್ಠತೆ (ಸೂರ್ಯ, ಚಂದ್ರ, ಮರ) ಮತ್ತು ರೂಪಕ ಪ್ರಾಧಾನ್ಯತೆ (ಹೆಂಗಸು ಮತ್ತು ಮಗು ಒಳ್ಳೆಯತನದ ಸೂಚಕವಾಗುವುದು) ಕೆಲವು ಪಾಶ್ಚಾತ್ಯ ಕವಿಗಳನ್ನು ಆಕರ್ಷಿಸಿದೆ. ಅಂಥವರಲ್ಲಿ ಆಧುನಿಕ ಕವಿತೆಯ ವಕ್ತಾರನಾದ ಅಮೇರಿಕನ್ ಕವಿ ಎಝ್ರಾ ಪೌಂಡ್ ಪ್ರಮುಖ. ಅವನ ಪ್ರಕಾರ ಚೈನೀಸ್ ಬರಹವೇ ಕವಿತೆಗೆ ತೀರಾ ಹತ್ತಿರವಾದ್ದು. ಪೌಂಡ್ ಹಲವಾರು ಚೈನೀ ಕವಿತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದು ಮಾತ್ರವಲ್ಲದೆ, ತನ್ನ ಸುದೀರ್ಘ ಕಾವ್ಯ ‘ಕಾಂಟೋಸ್’ನಲ್ಲಿ ಅನೇಕ ಕಡೆ ಚೀನೀ ಪದಗಳನ್ನು ಬಳಸಿಕೊಂಡಿರುವುದೂ ಕುತೂಹಲಕರ.

ಧ್ವನ್ಯಾಕ್ಷರದಲ್ಲಿ ಇನ್ನೊಂದು ತರದ ಸಂಯೋಜನೆಯನ್ನು ಕಾಣುತ್ತೇವೆ. ಇಲ್ಲಿ ಅಕ್ಷರಗಳೆಂದರೆ ಪ್, ಟ್, ಕ್ ಮುಂತಾದ ವ್ಯಂಜನಗಳನ್ನಾಗಲಿ, ಅ, ಇ, ಓ ಮುಂತಾದ ಸ್ಚರಗಳನ್ನಾಗಲಿ ಒಂದೊಂದು ಘಟಕಗಳನ್ನಾಗಿ ತೆಗೆದುಕೊಂಡು ಒಂದೊಂದಕ್ಕೂ ಪತ್ಯೇಕ ಅಕ್ಷರಗಳನ್ನು ನೀಡಿ ಅವುಗಳನ್ನು ಒಂದರ ಪಕ್ಕದಲ್ಲಿ ಒಂದರಂತೆ ಬರೆಯಲಾಗುತ್ತದೆ. ಇಂಗ್ಲಿಷ್ ಇದಕ್ಕೊಂದು ಒಳ್ಳೆಯ ಮಾದರಿ. ಹೀಗೆ ಇಂಗ್ಲಿಷ್‌ನಲ್ಲಿ kanaka ಎಂದು ಬರೆದರೆ ‘ಕನಕ’, slept ಎಂದು ಬರೆದರೆ ‘ಸ್ಲೆಪ್ಟ್’ (ನಿದ್ದೆ ಮಾಡಿದಳು; ಭೂತಕಾಲದಲ್ಲಿ ಇಂಗ್ಲಿಷ್‌ನಲ್ಲಿ ಕ್ರಿಯಾಪದದ ಮೇಲೆ ಲಿಂಗವ್ಯತ್ಯಾಸ ಬರುವುದಿಲ್ಲ). ‘ಎ’ಯಿಂದ ಮೊದಲಾಗಿ ‘ಝೆಡ್’ ವರೆಗೆ ಇಂಗ್ಲಿಷ್ ವರ್‍ಣಮಾಲೆಯಲ್ಲಿ ಓಟ್ಟು ೨೬ ಅಕ್ಷರಗಳಿವೆ. ಧ್ವನಿಲಿಪಿಯಲ್ಲಿ ಮಾತು ಮತ್ತು ಬರಹಕ್ಕೆ ಒಂದಕ್ಕೊಂದರ ನೇರ ಸಂಬಂಧವಿದೆ ಎಂದುಕೊಂಡರೆ ಅದು ತಪ್ಪು. ಒಂದು ಮಟ್ಟಿನ ತೋರ ಸಂಬಂಧ ಮಾತ್ರವೇ ಇರುವುದು. ಈ ಪದ್ಧತಿಯ ಅರಿವಿಲ್ಲದೆ ಕೇವಲ ಅಕ್ಷರದ ಹೆಸರಿನ ಆಧಾರದ ಮೇಲೆ ಇಂಥ ಭಾಷೆಯ ಬರಹಗಳನ್ನು ಓದುವುದು ಸಾಧ್ಯವಿಲ್ಲ. kanaka slepT ಎಂಬಲ್ಲಿರುವುದು ಇಂಗ್ಲಿಷ್ನ ಬರಹದಲ್ಲಿ ಅಪರೂಪವೆನ್ನಬಹುದಾದ ಸರಳ ಸಂಬಂಧ. kanaka ಎಂಬಲ್ಲಿ ಕಕಾರಕ್ಕೆ ಎರಡೂ ಕಡೆ k (ಕೆ”) ಅಕ್ಷರವೇ ಬಂದಿದ್ದರೂ ಏಲ್ಲ ಕಡೆ ಹಾಗೆ ಬರುತ್ತದೆ ಎನ್ನಲಾಗುವುದಿಲ್ಲ. ಉದಾರಣೆಗೆ, America ಎಂಬಲ್ಲಿ ಕಕಾರವನ್ನು ಸೂಚಿಸುವುದು c (‘ಸಿ’)! ವಾಸ್ತವದಲ್ಲಿ ಇಡೀ ಇಂಗ್ಲಿಷ್ ಪದಸಮೂಹವನ್ನು ನೋಡಿದರೆ, ಕಕಾರವನ್ನು ‘ಕೆ’ಗಿಂತ ‘ಸಿ’ ಅಕ್ಷರವೇ ಹೆಚ್ಚಾಗಿ ಸೂಚಿಸುವುದು. ಕೆಲವೆಡೆ c ಮತ್ತು k ಅಥವಾ c ಮತ್ತು h ಒಟ್ಟಾಗಿ ಕಕಾರವನ್ನು ಸೂಚಿಸುತ್ತವೆ: sick, character, chorus ಆದರೆ ಇದೇ ‘ಸಿ’ ‘ಎಚ್’ನ ಜತೆ ಸೇರಿ ಚಕಾರವನ್ನೂ ಧ್ವನಿಸಬಹುದು: chin, chip, chain. `ಕೆ’ ಮತ್ತು ‘ಎಸ್’ ಸೇರಿದ ಸಂಯುಕ್ತ ಲಿಪಿ x: mix, fix, axe ಇತ್ಯಾದಿ ಪದಗಳಲ್ಲಿ. ಫಕಾರವನ್ನು (ಫಿಲ್ಮ್‌ನಲ್ಲಿರುವಂತೆ) ಸಂಕೇತಿಸುವುದಕ್ಕೆ ಕೆಲವೊಮ್ಮೆ f (film, fine), ಮತ್ತೆ ಕೆಲವೊಮ್ಮೆ ph (philosophy, symphony), ಮತ್ತೆ ಕೆಲವೊಮ್ಮೆ gh(rough, cough) ಬಳಸಲ್ಪಡುತ್ತವೆ. ಹಲವು ಅಕ್ಷರಗಳಿಗೆ ಉಚ್ಚಾರಣೆಯೇ ಇಲ್ಲ: know, knight, knit ಮುಂತಾದವುಗಳಲ್ಲಿ ‘ಕೆ’, sign, reignಗಳಲ್ಲಿ ‘ಜಿ’ ಮೌನ. ಇಂಥ ವ್ಯತ್ಯಾಸಗಳು ಕೇವಲ ವ್ಯಂಜನ ಸಂಜ್ಞೆಗಳಲ್ಲಿ ಮಾತ್ರವಲ್ಲ, ಸ್ವರಗಳಿಗೆ ಸಂಬಂಧಿಸಿದ ಸಂಜ್ಞೆಗಳಲ್ಲೂ ಬರುತ್ತವೆ. ಇಂಗ್ಲಿಷ್‌ನ ಇನ್ನೂ ಒಂದು ಸ್ವಭಾವವೆಂದರೆ ಘಾತ (stress). ಎಂದರೆ ಪದವೊಂದರಲ್ಲಿ ಯಾವುದಾದರೊಂದು ‘ಅಕ್ಷರ’ದ (syllable) ಮೇಲೆ ಹೆಚ್ಚು ಒತ್ತು ಬೀಳುತ್ತದೆ. ಇದಕ್ಕೆ ಅನುಗುಣವಾಗಿ ಉಚ್ಚಾರಣೆಯಲ್ಲಿ ವ್ಯತ್ಕಾಸವಾಗುವುದಾದರೂ ಬರಹದಲ್ಲಿ ಇದನ್ನು ತೋರಿಸುವುದಿಲ್ಲ.

ಯಾವ ಪದಗಳನ್ನು ಹೇಗೆ ಬರೆಯಬೇಕು ಎನ್ನುವುದಕ್ಕೆ ‘ಸ್ಪೆಲಿಂಗ್’ ಎನ್ನುತ್ತಾರೆ. ಇಂಗ್ಲಿಷ್ ಸೆಲ್ಲಿಂಗ್ ಮೇಲುಮೇಲಿಂದ ನಮಗೆ ಅವ್ಯವಸ್ಥಿತ ಎಂದು ತೋರುತ್ತದೆ. ಹಾಗೆ ತಿಳಿದವರು ಅದನ್ನು ಬದಲಾಯಿಸಲು ಹೊರಟದ್ದಿದೆ: ನಡಿದಂತೆ ಬರೆಯ-ಬೇಕು, ಬರೆದಂತೆ ನುಡಿಯಬೇಕು ಎನ್ನುವುದು ಈ ಸುಧಾರಣಾವಾದಿಗಳ ಧೋರಣೆ. ಆದರೆ ಪ್ರಪಂಚದ ಯಾವ ಭಾಷೆಯಲ್ಲೂ ನುಡಿದಂತೆ ಬರೆಯುವುದಾಗಲಿ, ಬರೆದಂತೆ ನುಡಿಯುವುದಾಗಲಿ ಸಾಧ್ಯವಿಲ್ಲ. ಯಾಕೆಂದರೆ ನುಡಿಯಲ್ಲಿ ಅನೇಕಾನೇಕ ಪ್ರಭೇದಗಳಿರುತ್ತವೆ. ಅವನ್ನೆಲ್ಲ ಲಿಪಿಯಲ್ಲಿ ತರಬೇಕಾದರೆ ಅಂಥ ಲಿಪಿಯನ್ನು ಬಳಸುವುದೇ ಅಸಾಧ್ಯ. ನುಡಿಯದ್ದೂ ಬರಹದ್ದೂ ಪ್ರತ್ಯೇಕ ಪ್ರತ್ಯೇಕ ವ್ಯವಸ್ಥೆಗಳೆನ್ನುವುದನ್ನು ತಿಳಿದುಕೊಳ್ಳಬೇಕು. ನುಡಿಗೆ ಬರಹ ಒಂದು ದಾರಿಸೂಚನೆಯಂತೆ ಮಾತ್ರವಲ್ಲದೆ ಕನ್ನಡಿಯಂತಲ್ಲ. ಆದ್ದರಿಂದ ಇಂಗ್ಲಿಷ್ ಸ್ಪೆಲ್ಲಿಂಗ್ ಕಲಿಯುವಾಗ ಮೊದಮೊದಲು ತುಸು ಕಷ್ಟವಾಗಬಹುದಾದರೂ, ಕ್ರಮೇಣ ಅದನ್ನು ಕರಗತ ಮಾಡಿಕೊಳ್ಳಬಹುದು. ಇನ್ನು ಫ್ರೆಂಚ್ ಭಾಷೆಯನ್ನು ತೆಗೆದುಕೊಂಡರೆ ಅದರಲ್ಲಿ ಬರೆದಂತೆ ಓದುವುದು ಸಾಧ್ಯವೇ ಇಲ್ಲ: ಯಾಕೆಂದರೆ ಬಹಳಷ್ಟು ಧ್ವನಿಸಂಜ್ಞೆಗಳಿಗೆ ಉಚ್ಚಾರಣೆಯೇ ಇರುವುದಿಲ್ಲ. ಉದಾಹರಣೆಗೆ, ಕೆಲವು ಆಮಂತ್ರಣ ಪತ್ರಿಕೆಗಳಲ್ಲಿ ಕಾಣಿಸುವ R.S.V.P ಎಂಬ ಆದ್ಯಕ್ಷರಗಳು ಫ್ರೆಂಚಿನ respondez s’il vous plait ಎಂಬ ವಾಕ್ಯವನ್ನು ಸೂಚಿಸುವಂಥವು. ಇದನ್ನು ‘ರ್‍ಹೆಪೋಂದೆ ಸಿಲ್ವು ಪ್ಲೆ’ ಎಂದು ಉಚ್ಚರಿಸಲಾಗುತ್ತದೆ; ‘ದಯವಿಟ್ಟು ಉತ್ತರಿಸಿ’ ಎನ್ನುವುದು ಇದರ ಅರ್ಥ. ಇಲ್ಲಿ ಒಂದನೆಯ, ಮೂರನೆಯ ಮತ್ತು ನಾಲ್ಕನೆಯ ಪದಗಳ ಕೊನೆಯ ಅಕ್ಷರಗಳು ನಿಶ್ಶಬ್ದವಾಗಿರುವುದು ಗಮನಿಸತಕ್ಕ ಸಂಗತಿ. ಇದೇ ಭಾಷೆಯ vis-a-vis ಎಂಬ ಪದವನ್ನು ಸಾಮಾನ್ಯವಾಗಿ ಇಂಗ್ಲಿಷ್ನಲ್ಲೂ ಬಳಸುತ್ತಾರೆ; ‘ವೀಝಾವೀ’ ಎಂಬಂತೆ ಉಚ್ಚರಿಸುವ ಈ ಮಾತಿನ ಅರ್ಥ ‘ಸಂಬಂಧಿಸಿ’ ಎಂಬುದಾಗಿ. ಇಲ್ಲಿ ಕೊನೆಯ ‘ಎಸ್’ಗೆ ಉಚ್ಚಾರಣೆಯಿಲ್ಲ; ಮೊದಲ ‘ಎಸ್’ಗೆ ‘ಝ್’ ಎಂಬಂಥ ಉಚ್ಚಾರಣೆ ಬರುತ್ತದೆ; ಕಾರಣ ಮುಂದಿನ ಧ್ವನಿ ಸ್ವರವಾಗಿರುವುದು. ಫ್ರೆಂಚ್ ಬರಹ ಕಲಿಯುವವರು ಇಂಥ ನಿಯಮಗಳನ್ನು ತಿಳಿದಿರುವುದು ಅನಿವಾರ್ಯವಾಗುತ್ತದೆ.

ಮೂರನೆಯ ವಿಧಾನವಾದ ವರ್ಣಾಕ್ಷರ ಕ್ರಮದಲ್ಲಿ ಹೆಚ್ಚೂ ಕಡಿಮೆ ಬರೆದಂತೆಯೇ ಓದಲಾಗುತ್ತದೆ. ಯಾಕೆಂದರೆ ಇಲ್ಲಿ ಒಂದೊಂದು ವರ್ಣವೂ ಒಂದೊಂದು ಅಕ್ಷರವೆಂದು ಲೆಕ್ಕ. ವರ್ಣವೆಂಂದರೆ ಒಂದು ವಿಶ್ವಾಸ ಘಟಕ (syllable). ಸ್ವರ ತಾನಾಗಿ, ಅಥವಾ ವ್ಯಂಜನದ ಜತೆ ಸೇರಿಕೊಂಡು ವರ್ಣವಾಗುತ್ತದೆ. ಸಂಸ್ಕೃತ, ಹಿಂದಿ, ಕನ್ನಡ ಮುಂತಾದ ಹೆಚ್ಚಿನ ಭಾರತೀಯ ಭಾಷೆಗಳಲ್ಲೂ ಈ ರೀತಿಯ ವ್ಯವಸ್ಥೆಯಿದೆ. ಕನ್ನಡವನ್ನೇ ತೆಗೆದುಕೊಂಡರೆ, ಇಲ್ಲಿ ಅ, ಆ, ಇ. ಈ ಮುಂತಾದ ಸ್ವರಾಕ್ಷರಗಳು ಹಾಗೂ ಕ, ಕಾ, ಕಿ ಕೀ ಮುಂತಾದ ಸ್ವರಾನ್ವಿತ ವ್ಯಂಜನಗಳು ಪೂರ್‍ಣಾಕ್ಷರಗಳು. ಸ್ವರ ಸೇರದ ಕ್, ಗ್, ಚ್ ಮುಂತಾದುವು ಹಲಂತಗಳು, ಎಂದರೆ ಕೇವಲ ವ್ಯಂಜನಗಳನ್ನು ಸೂಚಿಸುವ ಅರ್‍ಧಾಕ್ಷರಗಳು. ವರ್‍ಣವೊಂದು ಸ್ವರದಲ್ಲಿ ಕೊನೆಗೊಳ್ಳದೆ ಇನ್ನೊಂದು ವ್ಯಂಜನದೊಂದಿಗೆ ಸೇರಬೇಕಾದಾಗ ಒತ್ತಕ್ಷರಗಳು ಬರುತ್ತವೆ: ಉದಾಹರಣೆಗೆ: ಅಮ್ಮ (ಅಮ್‌ಮ), ಆಸ್ಪತ್ರೆ (ಆಸ್‌ಪತ್‌ರೆ), ಉಪ್ಪಿಟ್ಟು (ಉಪ್‌ಪಿಟ್‌ಟು). ಕನ್ನಡದ ಮಟ್ಟಿಗೆ ಸ್ವಾರಸ್ಯಕರವಾದ ವಿಷಯವೆಂದರೆ, ಬಿಂದು (‘ತೊಂದರೆ’) ಮತ್ತು ಅರ್ಕಾವೊತ್ತು (‘ಸೂರ್ಯ’) ಎಂಬ ಅರ್ಧಾಕ್ಷರಗಳನ್ನುಳಿದು ಇನ್ನೆಲ್ಲಾ ಕಡೆ, ಯಾವುದು ಉಚ್ಚಾರಣೆಯ ಪ್ರಕಾರ ಅರ್ಧಾಕ್ಷರವೋ ಅದು ಬರಹದಲ್ಲಿ ಪೂರ್ಣಾಕ್ಷರವಾಗಿಯೂ, ಯಾವುದು ಉಚ್ಚಾರಣೆಯಲ್ಲಿ ಪೂರ್ಣಾಕ್ಷರವೋ ಅದು ಬರಹದಲ್ಲಿ ಅರ್ಧಾಕ್ಷರವಾಗಿಯೂ ಕಾಣಿಸಿಕೊಳ್ಳುವುದು! ಪದಗಳ ವರ್ಣವಿಂಗಡಣೆಯನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ವರ್ಣಗಳನ್ನು ಒಂದರ ನಂತರ ಒಂದರಂತೆ ಜೋಡಿಸಿಕೊಂಡು ಬರೆಯುವ ಸಂಸ್ಕೃತ, ಹಿಂದಿ, ತಮಿಳು, ಮಲೆಯಾಳಂ ಮುಂತಾದ ಭಾಷೆಗಳಲ್ಲಿ ಈ ವಿಚಿತ್ರವಿಲ್ಲ. ಈ ಎಲ್ಲಾ ಭಾಷೆಗಳಲ್ಲೂ ಅಕ್ಷರಗಳು ಒಂದರ ನಂತರ ಒಂದರಂತೆ ಸರಳ ರೇಖೆಯಲ್ಲಿ ಮುಂದೆ ಸಾಗುತ್ತವೆಯಾದರೂ, ಕೆಲವೊಂದು ಸ್ವರಗಳನ್ನು ಸೇರಿಸುವಾಗ ಮೇಲಕ್ಕೋ ಕೆಳಕ್ಕೋ ಏರುತ್ತವೆ. ಅಥವಾ ಇಳಿಯುತ್ತವೆ; ಆದರೆ ಕನ್ನಡದಲ್ಲಿ, ಅದರಂತೆಯೇ ತೆಲುಗಿನಲ್ಲಿ, ಒತ್ತಕ್ಷರಗಳು ಬಂದಾಗಲೂ ಹೀಗಾಗುತ್ತವೆ ಎನ್ನುವುದು ಇವೆರಡು ಭಾಷೆಗಳ ವಿಶೇಷ.

ಅರಬ್ಬೀ, ಪರ್‍ಶಿಯನ್, ಉರ್‍ದು ಬರಹಗಳಲ್ಲಿ ಕೂಡಾ ಈ ರೀತಿಯ ಮೇಲುಕೆಳಗೆ ಹೋಗುವಿಕೆಯಿದೆ. ಅಲ್ಲದೆ ಅವುಗಳಲ್ಲಿ ಬೊಟ್ಪುಗಳೇ ಮುಂತಾದ ಹಲವು ಕಿರುಚಿಹ್ನೆಗಳೂ ಇವೆ. ಮಾತ್ರವಲ್ಲ, ಅಕ್ಷರ ಪದಾದಿಯಲ್ಲೋ ಪದಮಧ್ಯದಲ್ಲೋ ಪದಾಂತ್ಯದಲ್ಲೋ ಎಲ್ಲಿ ಬರುತ್ತದೆ ಎಂಬುದನ್ನು ಹೊಂದಿಕೊಂಡು ರೂಪಾಂತರಗಳನ್ನೂ ಹೊಂದಬಹುದು! ಈ ಭಾಷೆಗಳಲ್ಲಿ ಸ್ವರಗಳು ಕಡಿಮೆಯಾದುದರಿಂದ ಕೆಲವು ಶೈಲಿಯಲ್ಲಿ ಸ್ವರಸೂಚಕಗಳನ್ನು ಬರೆಯುವುದೇ ಇಲ್ಲ. ಎಂದರೆ, ಈ ಎಲ್ಲಾ ಸಂಪ್ರದಾಯಗಳನ್ನೂ ಕಲಿತರೆ ಮಾತ್ರವೇ ಅರಬ್ಬೀ, ಪರ್ಶಿಯನ್ ಮತ್ತು ಉರ್‍ದು ಬರಹಗಳನ್ನು ಓದುವುದು ಸಾಧ್ಯ.

ಕೆಲವರಿಗೆ ಇಂಥ ಅಕ್ಷರವಿಧಾನಗಳು ಅತಾರ್ಕಿಕವೂ ಅಸಂಬದ್ಧವೂ ಅನಗತ್ಯವಾಗಿ ಕ್ಲಿಷ್ಟಕರವೂ ಅನಿಸಬಹುದು. ಅಂಥವರಿಗೆ ಯುರೋಪಿಯನರ ರೋಮನ್ ಅಕ್ಷರವಿಧಾನ (ಇಂಗ್ಲಿಷ್, ಫ್ರೆಂಚ್ ಮುಂತಾದುವು) ಹೆಚ್ಚು ಆಕರ್ಷಕವೆಂದು ತೋರಬಹುದು. ಟರ್ಕಿಶ್, ವಿಯೆಟ್ನಾಮೀಸ್ ಮುಂತಾದ ಭಾಷೆಗಳು ಇದನ್ನು ಅಳವಡಿಸಿಕೊಂಡಿವೆ. ಕನ್ನಡವನ್ನಾಗಲಿ ಯಾವುದೇ ಭಾಷೆಯನ್ನಾಗಲಿ ಕೆಲವೊಂದು ಕಿರುಚಿಹ್ನೆಗಳನ್ನು ಸೇರಿಸಿ ರೋಮನ್ ಲಿಪಿಯಲ್ಲಿ ಬರೆಯುವುದು ಸಾಧ್ಯ. ಆದರೆ ಅದರಿಂದ ಏನನ್ನು ಸಾಧಿಸಿದಂತಾಯಿತು? ಈಗಾಗಲೇ ಹೇಳಿದಂತೆ ಇಂಗ್ಲಿಷ್‌ನ ಬರಹದಲ್ಲಿ ಸಹಾ ‘ಅತಾರ್ಕಿಕ’ವೆಂದು ತೋರುವ ಹಲವು ಸಂಗತಿಗಳಿವೆ. ಉದಾಹರಣೆಗೆ, ಹೆಸರಿನ ಮತ್ತು ವಾಕ್ಯದ ಮೊದಲಲ್ಲಿ ದೊಡ್ಡಕ್ಷರವಿರಬೇಕೆನ್ನುವುದು ಇಂಗ್ಲಿಷ್‌ನ ನಿಯಮ- ಈ ದೊಡ್ಡಕ್ಷರ ಸಣ್ಣಕ್ಷರ ವ್ಯತ್ಯಾಸ ಫ್ರೆಂಚ್, ಜರ್ಮನ್ ಮುಂತಾದ ಭಾಷೆಗಳಲ್ಲೂ ಇದೆ. ದೊಡ್ಡಕ್ಷರಗಳಲ್ಲಿ ಕೆಲವು ಗಾತ್ರದಲ್ಲಿ ಮಾತ್ರ ದೊಡ್ಡವು; ಇನ್ನು ಕೆಲವು ಆಕಾರದಲ್ಲೂ ಭಿನ್ನವಾದುವು. ಉಚ್ಚಾರಣೆಯಲ್ಲಿ ದೊಡ್ಡಕ್ಷರಕ್ಕೂ ಸಣ್ಣಕ್ಷರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಬರಹದಲ್ಲಿ ಮಾತ್ರ ಯಾಕೆ ಈ ವ್ಯತ್ಯಾಸವನ್ನು ಇಟ್ಟುಕೊಳ್ಳಬೇಕು? ವಾಕ್ಯವನ್ನಾಗಲಿ, ಹೆಸರನ್ನಾಗಲಿ ಸೂಚಿಸುವ ಅಗತ್ಯವೇ ಇಲ್ಲ; ಯಾಕೆಂದರೆ ಇವೆರಡೂ ಇತರ ರೀತಿಯಲ್ಲಿ ಸೂಚಿತವಾಗುತ್ತವೆ. ಈ ದೊಡ್ಡಕ್ಷರಗಳನ್ನು ತೆಗೆದುಹಾಕಿದರೆ ಈ ಭಾಷೆಗಳನ್ನು ಕಲಿಯುವವರಿಗೆ ಸುಲಭವಾಗಬಹುದು.

ಆದರೆ ಇಂಥ ತರ್ಕ ಅರ್ಥವಿಲ್ಲದ್ದು. ಆಯಾ ಅಕ್ಷರವಿಧಾನವನ್ನು ಯಾವೊಬ್ಬ ವ್ಯಕ್ತಿಯೋ ಯಾವೊಂದು ಸಮಿತಿಯೋ ನಿರ್‍ಮಿಸಿದ್ದಲ್ಲ. ಬರಹ ಆಡುನುಡಿಯನ್ನು ಯಥಾವತ್ತಾಗಿ ಚಿತ್ರಿಸಬೇಕೆನ್ನುವುದೂ ಸರಿಯಲ್ಲ. ಒಂದು ವೇಳೆ ಹಾಗೆ ಬಯಸಿದರೂ ಅದು ನೆರವೇರುವ ಸಂಗತಿಯಲ್ಲ: ಆಡುನುಡಿಯ ವೈವಿಧ್ಯ ಹೇರಳವಾದ್ದು ಮತ್ತು ಅದು ಬಹುಬೇಗನೆ ಬದಲಾಗುವಂಥದು. ಬರಹವಾದರೆ ಹೆಚ್ಚು ಸ್ಥಿತಿಸ್ಥಾಪಕ ಗುಣವುಳ್ಳದ್ದು. ಇದೊಂದನ್ನೂ ತಿಳಿಯದೆ ಅಕ್ಷರ ಬದಲಾಯಿಸುತ್ತಾ ಹೋದರೆ, ಕೊಳಕ್ಕೆ ಕೋಣನನ್ನು ಇಳಿಸಿದ ಹಾಗಾಗುತ್ತದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ALBUM
Next post ಎಲ್ಲಿದ್ದಾನೋ ಹಾಳಾದವನು

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…