ತೂತುಗಳನ್ನೆ ಹೊದ್ದ
ಗಾರೆಗಲ್ಲಿನ ಬಂಧಿಖಾನೆಗೂ
ಕಳೆಕಟ್ಟಿದೆ.
ಮೃದು ಮಧುರ ಹಸ್ತವೊಂದರ
ಇರುವು

ನಿರ್ಜೀವ ವಸ್ತುವೊಂದನ್ನು ಜೋಪಾನ
ಮಾಡಿದ ಆನಂದ
ಕಟಕಟೆಯ ಗೋಡೆಗೆ.

ನಿರ್ಜೀವತೆಗೂ ಜೀವ
ಭಾವವ ಬೆಸೆದ ಹುರುಪು
ಹಸ್ತಕ್ಕೆ. ಕಲ್ಪನೆಯ
ವ್ಯಾಪ್ತಿ ಸೀಮಾತೀತ.
ಬಂಧನದ ನಡುವೆಯೇ
ಜಗವನ್ನೆ ಗೆಲ್ಲುವ ಜಾಣತನ.

ಅಂದುಕೊಂಡಿದೆ ಕಲ್ಲಿನ ಗೋಡೆ
ಕೋಮಲ ಕೈಗೆ ಎಲ್ಲಿದೆ
ಕಲ್ಲನ್ನು ಗುದ್ದುವ ಪುಡಿ ಮಾಡುವ
ಗತ್ತು ಗೈರತ್ತು.

ಅದರೆ ಆ ಹಸ್ತಕ್ಕೆ ಗೊತ್ತು
ತನ್ನದೊಂದು ಮುಷ್ಟಿ ಪ್ರೀತಿ ಸಾಕು
ಕಲ್ಲಿನ ಮುಷ್ಟಿಯಗಲದ
ಹೃದಯ ಘಾಸಿಗೊಳ್ಳಲು
ಚಿಂದಿಚಿಂದಿಯಾಗಲು,
ಮತ್ತೆಂದು ಗಾರೆಗಲ್ಲು ಕುತಂತ್ರದ
ಕಾಳಜಿ ಪ್ರದರ್ಶಿಸುವ
ಗೋಡೆಯಾಗದೇ.
ತನ್ನ ಮೃದು ಹಸ್ತಕ್ಕೆ ಮದರಂಗಿಯಾಗಿ
ಬರಬಲ್ಲದೆಂದು.
*****