
ಕನ್ನಡಮ್ಮನ ಕರುಳಿನ ಕುಡಿಯೆ
‘ಏನಾದರೂ ಆಗು’ -ಮೊದಲು
ಕನ್ನಡ ಮಣ್ಣಿನ ಸತ್ವಹೀರಿ-ನೀ
ಗಂಧದ ಮರವಾಗು-ನೀ
ಗಂಧದ ಕೊರಡಾಗು
ಪಂಪ-ರನ್ನ-ಸರ್ವಜ್ಞ-ದಾಸರ
ಜ್ಞಾನದ ಬೆಳಕಲ್ಲಿ
ತೊಳೆಯುತ ನಿನ್ನಯ ಕತ್ತಲ ಕೊಳೆಯನು
ಸ್ಫಟಿಕವೇ ಆಗಿಲ್ಲಿ-ಬೆಳ
ಕಾಗುತ ಬೆಳೆಯುತಲಿ
ಹಕ್ಕ-ಬುಕ್ಕ-ಪುಲಿಕೇಶಿ-ಹೊಯ್ಸಳ
ನಡೆದಿಹ ಮಾರ್ಗದಲಿ
ಮುನ್ನಡೆಯುತ ನೀ ಏರಿಸು ಬಾವುಟ
ಮುಗಿಲಿನ ಮಟ್ಟದಲಿ-ಜಗದ
ಕಣ್ಮನ ಸೆಳೆಯುತಲಿ
ಕನ್ನಡ ರಥವು ಸವೆದಿಹ ಹಾದಿಯ
ಪ್ರಜ್ಞೆಯ ಪಡೆಯುತಲಿ
ಹೊಸ ದಿಕ್ಕಿಗೆ ಪಥ ಮೂಡಿಸಿ ನಡೆಸು
ಕನ್ನಡ ಉಳಿಸುತಲಿ-ನಿಜ
ಕನ್ನಡ ಬೆಳೆಸುತಲಿ
*****


















