ಕಾಣಲಿಹುದನು ಕಂಡೆನೆಲ್ಲ,
ಕೊಳ್ಳಲಿಹುದನು ಕೊಂಡೆನೆಲ್ಲ,
ಹಿರಿವುದೆಂದೀ ಸಂತೆ ಬಲ್ಲ
ರಾರು ನೆರಸಿದನಲ್ಲದೆ? ೪

ಬಂದು ಪೋಪರು ಮೊತ್ತಮೊತ್ತದೆ-
ಯಾರಿಗೇಕೇನೆಂದು ಗೊತ್ತದೆ?
ಬಾಳದೊಡವೆಗೆ ಬೆಲೆಯ ತೆತ್ತುದೆ
ನನ್ನ ಪಾಲಿನ ಕೌತುಕ. ೮

ಇಲ್ಲಿ ಇನ್ನಿರಲಿಷ್ಟವಿಲ್ಲ-
ಕೆಲಸವಿಲ್ಲದಲಿರಲು ಸಲ್ಲ,
ಇನ್ನು ಮರಳುವೆನೆಂದು ಮೆಲ್ಲ
ನಿಳಿದೆ ಕಡವಿನ ಕೇರಿಗೆ ೧೨

ಸಂತೆಗೆನ್ನಯ ಬಳಿಕ ಬಂದು,
ಸುತ್ತಿ ನನ್ನೊಡನೆನ್ನ ಮುಂದು
ಮನೆಗೆ ಮಗುಳಿದ ಮಡದಿ ನೊಂದು
ಬೇಸರಳೆ ನಾನಿಲ್ಲದೆ? ೧೬

ಮೆಟ್ಟು ಮಿಸುಕದು ಕಡವಿನಲ್ಲಿ;
ನನ್ನನಿಲ್ಲಿಗೆ ನಸುಕಿನಲ್ಲಿ
ತಂದು ಮುಟ್ಟಿಸಿದಂಬಿ ಎಲ್ಲಿ?
ಎಲ್ಲಿಗಾದೆಯ ಅಂಬಿಗ? ೨೦

ತೊಂಡು ತೊಳಸುವ ದೋಣಿಯನ್ನ
ನಂಬಿ ಬಂದೆನೆ? ಅಕಟ, ಮುನ್ನ
ಹುಟ್ಟನರಿಯದನಳವೆ ನನ್ನ
ಹುಟ್ಟನಿಕ್ಕಲು, ೧ಪಾತಿಗ? ೨೪

ಕುಳಿತೆ ನೀಂ ಗಡ ಬೆನ್ನನೆನ್ನ-
ಮಬ್ಬು ಮರಸಿತು ಮೊಗವ ನಿನ್ನ;
ಸಂತೆಗಾಂ ಸಡಗರಿಸುವನ್ನ
ನಿನ್ನ ಹೆಸರೇನೆಂದೆನೆ? ೨೮

ಓಡ ಓಡೆಂದರಚಿ ಕರೆದೆ,
ಆಚೆ ಮೂದಲಿಪಂತೆ ಮೊರೆದೆ,
ಇಲ್ಲ ಮರುಮಾತೆಲ್ಲ ಬರಿದೆ,
ನನ್ನ ಕರೆ ಮೇಣಾಂ ವಿನಾ ೩೨

೨ತೊರೆಯರೆರೆಯಾ, ಏಕೆ ನಿನ್ನ
ಹೊತ್ತಿಗಲ್ಲದೆ ಬಾರೆ ಮುನ್ನ?
ಹೊತ್ತ ಹಿಂಗಿಸಿ ಹಾಯಿಸೆನ್ನ-
ಕಂಬನಿಯ ಕರೆ ಕೇಳದೆ? ೩೬
*****
೧ ಪಾತಿ=ದೋಣಿ, ಪಾತಿಗ=ದೋಣಿಗಾರ
೨ ತೊರೆಯ = ಅಂಬಿಗ