ದೇವಯ್ಯ ಹರವೆ ಅವರ ನನ್ನ ದೃಷ್ಟಿಯಲ್ಲಿ ಮಾರ್ಕ್ಸ್‌ವಾದ ಮತ್ತು ಸಾಹಿತ್ಯ : ಒಂದು ಪ್ರತಿಕ್ರಿಯೆ

ದೇವಯ್ಯ ಹರವೆ ಅವರ ನನ್ನ ದೃಷ್ಟಿಯಲ್ಲಿ ಮಾರ್ಕ್ಸ್‌ವಾದ ಮತ್ತು ಸಾಹಿತ್ಯ : ಒಂದು ಪ್ರತಿಕ್ರಿಯೆ

ಕರ್ನಾಟಕದ ದಲಿತ-ಬಂಡಾಯದ ಸಾಹಿತ್ಯಕ-ಸಾಂಸ್ಕೃತಿಕ ಸಂದರ್ಭದಲ್ಲಿ ದೇವಯ್ಯ ಹರವೆ ಅವರದು ಗಮನಾರ್ಹ ಹೆಸರು. ಈ ನಿಟ್ಟಿನಲ್ಲಿ ಪ್ರಸ್ತುತ ಟಿಪ್ಪಣಿಯಲ್ಲಿ ಪ್ರಾತಿನಿಧಿಕವಾಗಿ ಅವರ ಮೇಲ್ಕಂಡ ಲೇಖನವನ್ನು ಗುರುತಿಸಿಕೊಳ್ಳಲಾಗಿದೆ.

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪ್ರಗತಿಶೀಲ ಲೇಖಕರ ಮೇಲೆ ಮಾರ್ಕ್ಸ್‌ವಾದವು ಗುರುತರವಾದ ಪ್ರಭಾವವನ್ನು ಬೀರಿದೆ. ಚದುರಂಗ, ಕಟ್ಟೀಮನಿ, ನಿರಂಜನ ಮೊದಲಾದವರು ಈ ನೆಲೆಯಲ್ಲಿ ಮುಖ್ಯರೆಂಬುದು ಹಳೆಯ ಮಾತು.

ಇಲ್ಲಿಂದ ಆದಿಯಾಗಿ ಮಾರ್ಕ್ಸ್‌ವಾದವು ತನ್ನ ಪ್ರಭಾವವನ್ನು ಆನಂತರದ ಕನ್ನಡ ಸಾಹಿತ್ಯದ ಮೇಲೆಯೂ ಬೀರಿದೆ. ಮುಖ್ಯವಾಗಿ ದಲಿತ-ಬಂಡಾಯಗಳ ಸಂದರ್ಭದಲ್ಲಿಯೂ ಇದರ ಕಾವು ಇತ್ತು. ಪರಂಪರೆಯ ಪ್ರಜ್ಞೆಯಿಂದ ವಿಮುಖರಾಗಿದ್ದ ಹಲವು ಬರಹಗಾರರು ಪರಂಪರೆಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದರು. ಆದ್ದರಿಂದ ಭಾರತೀಯ ಸಂಸ್ಕೃತಿ ಮತ್ತು ಅದರ ಇತಿಹಾಸವನ್ನು ಕಾಣುವಾಗ ತಮ್ಮ ಕಣ್ಣುಗಳು ಕೆಂಪಾಗುತ್ತಿದ್ದವು. ಅಂತಹ ದೃಷ್ಟಿಗೆ ಕಪು ಇತಿಹಾಸ ಗೋಚರಿಸುತ್ತಿತ್ತು. ಅದೇ ಕಪು ನೆಲದಲ್ಲಿ ಕೆಂಪು ಕಾಲುಗಳಾಗಿ ಚಲಿಸಲು ಪ್ರಾರಂಭಿಸಿತು. ಈ ನೆಲೆಯಲ್ಲಿಯೇ ಭಾರತದ ಪ್ರಧಾನ ಸಂಸ್ಕೃತಿಯಿಂದ ಅಲಕ್ಷ್ಯಕ್ಕೆ ಈಡಾದಂತಹ ಹಲವು ಶ್ರಮ ಸಂಸ್ಕೃತಿಗಳ ವಕ್ತಾರರು ಮಾತಾಡಲು ಆರಂಭಿಸಿದ್ದು. ಆ ಮಾತುಗಳು ಸಾಹಿತ್ಯಕ ವಲಯದಲ್ಲಿಯೂ ಕೇಳಿ ಬಂದವು. ಅಂತಹ ಬರಹಗಾರರಲ್ಲಿ ಹಲವು ಮಂದಿ ಮಾರ್ಕ್ಸ್‌ವಾದದಿಂದ ಪ್ರಭಾವಿತರಾಗಿಯೂ ತಮ್ಮ ನೆಲಕ್ಕೆ ಅಂಟಿಕೊಂಡು ಸಾಹಿತ್ಯಕವಾಗಿ ಮಾತಾಡಿದರೆ, ಮತ್ತಷ್ಟು ಮಂದಿ ನೆಲದಿಂದ ಒಂದು ಅಡಿ ಮೇಲೆ ನಿಂತು, ಪಟ್ಟಣಗಳನ್ನು ಮಾತ್ರ ನೋಡಿ, ಆಕಾಶಕ್ಕೆ ಕೇಳುವಂತೆ ಮಾತಾಡುತ್ತಿದ್ದರು. ಈ ವಿಂಗಡಣೆಯು ವಾಸ್ತವವಾಗಿ ಇಲ್ಲಿ ಹೇಳಿರುವಷ್ಟು ಸರಳವಲ್ಲ.

ಇಂತಹ ಸಾಹಿತ್ಯ-ಸಾಂಸ್ಕೃತಿಕ ಸಂದರ್ಭದಲ್ಲಿ ಕನ್ನಡದಲ್ಲಿ ಕಾಣಿಸಿಕೊಂಡ ಮಾರ್ಕ್ಸಿಸ್ಟ್ ಎನ್ನಬಹುದಾಗಿದ್ದ ಸಾಹಿತ್ಯಕ್ಕೆ ಪ್ರತಿಕ್ರಿಯೆಯಾಗಿ ದೇವಯ್ಯ ಹರವೆಯವರ ನನ್ನ ದೃಷ್ಟಿಯಲ್ಲಿ ಮಾರ್ಕ್ಸ್‌ವಾದ ಮತ್ತು ಸಾಹಿತ್ಯ ಎಂಬ ಲೇಖನ ಪ್ರಸ್ತುತವಾಗುತ್ತದೆ.

ಈ ಲೇಖನದಲ್ಲಿ ಲೇಖಕರು ತಮ್ಮ ವಿಚಾರಧಾರೆಗೆ ಪೋಷಕವಾಗಿ ಸ್ವಗ್ರಾಮದ ಹಲವು ವಿವರಗಳನ್ನು ಬಳಸಿಕೊಳ್ಳುತ್ತಾರೆ. ಅದರಂತೆ, ಹಲವು ಜಾತಿಗಳ ಜನಸಮೂಹಗಳು ಇಲ್ಲಿ ನೆಲೆಸಿವೆ. ಈ ಗ್ರಾಮದಲ್ಲೂ ಜಾತಿಯಾಧಾರಿತ ಶ್ರೇಣಿಕೃತ ಸಮಾಜವಿದೆ. ಇದರ ಉನ್ನತ ಸ್ಥಾನವನ್ನು ಲಿಂಗಾಯಿತರು ಪಡೆದಿದ್ದಾರೆ. ಕೆಳಮಟ್ಟದಲ್ಲಿ ಹೊಲೆಯ-ಮಾದಿಗ-ಜಾಡಮಾಲಿ ಮೊದಲಾದ ಹಲವು ದಲಿತ ಸಂಬಂಧಿ ಜಾತಿಗಳಿವೆ. ಈ ಎರಡೂ ಸಮೂಹಗಳ ನಡುವೆ ಎನ್ನಬಹುದಾದ ನೆಲೆಯಲ್ಲಿ ಸ್ವತಃ ಇದು ಸತ್ಯ ಎಂದು ಪರಿಭಾವಿಸಿರುವ ನಾಯಕ (ಅಥವಾ ತೊರೆಯರು ಅಥವಾ ರಾಜ ಪರಿವಾರದವರು) ಜನಾಂಗದವರು ನಿಂತಿದ್ದಾರೆ. ದಲಿತರೊಂದಿಗೆ ಹೋಲಿಸಿಕೊಂಡು ತಮ್ಮನ್ನು ಉತ್ತಮ ಮತಸ್ಥರು ಎಂದು ಭಾವಿಸಿದ್ದಾರೆ. ತಮಗಿಂತ ಕೀಳು ಎಂದು ಭಾವಿಸಲ್ಪಟ್ಟಿರುವ ದಲಿತ ಜನಾಂಗದವರೊಂದಿಗೆ ನಡೆಸುವ ಅನೌಪಚಾರಿಕ ವ್ಯವಹಾರಗಳಲ್ಲಿ ಅವರನ್ನು ಸಂಭೋದಿಸಿ ಆಡುವ ಏಕವಚನದ ಮಾತುಗಳು ಅವರ ಜಾತಿ ಪ್ರೇರಿತ ಅಹಂಕಾರವನ್ನು ತೋರಿಸುತ್ತವೆ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ಅಸ್ಪಶ್ಯತೆಯನ್ನು ಪೋಷಿಸುವ ನಿಟ್ಟಿನಲ್ಲಿ ಅವರ ಮತ್ತು ಇತರೆ ಹಲವು ನಿದರ್ಶನಗಳನ್ನೂ ಈ ಲೇಖನಕ್ಕೆ ಪೂರಕವಾಗಿ ಬಳಸುತ್ತಾರೆ.

ಹೀಗೆ ತಮ್ಮ ಗ್ರಾಮದ ಜಾತಿಯಾಧಾರಿತವಾದ ಹಲವು ಸಂಗತಿಗಳನ್ನು ಪ್ರಸ್ತಾಪಿಸುತ್ತಲೇ, ಇದನ್ನು ಜಾತಿಯಾಧಾರಿತವಾಗಿ ಶ್ರೇಣೀಕರಣಗೊಂಡ ಭಾರತದ ಪ್ರತೀಕವಾಗಿ ನಿರ್ವಚಿಸುತ್ತಾರೆ. ಇಂತಹ ನಿರ್ವಚನದ ಮೂಲಕ ಅಸ್ಪೃಶ್ಯತೆಯ ಪೋಷಣೆಗೆ ಬ್ರಾಹ್ಮಣರು ಮಾತ್ರ ಮುಖ್ಯ ಕಾರಣಕರ್ತರು ಎಂಬ ಸಿದ್ಧ ಮಾದರಿಯನ್ನು ಒಡೆಯಲು ಮೊದಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಭಾರತದಲ್ಲಿ ಜಾತಿ ವೈಷಮ್ಯಕ್ಕೆ ಎಲ್ಲ ಜಾತಿಯ ಜನರೂ ಮುಖ್ಯ ಕಾರಣಕರ್ತರಾಗಿದ್ದಾರೆ ಎಂಬ ಒಟ್ಟು ವಿವಕ್ಷೆಯನ್ನು ನೀಡುತ್ತಾರೆ.
ಇಲ್ಲಿಯವರೆಗೂ ಭಾಷೆಯನ್ನು ನಾಜೂಕಾಗಿ ಬಳಸುತ್ತಾರೆ. ತದನಂತರದಲ್ಲಿ ಮಂಡಿಸುವ ವಿಚಾರಗಳಿಗೆ ರೋಷಭರಿತ ಭಾಷೆಯನ್ನು ಬಳಸುತ್ತಾರೆ. ಈ ರೋಷಕ್ಕೆ ಹಿನ್ನೆಲೆಯಾದ ಅವರ ಸಾಂಸ್ಕೃತಿಕ ನೋವು ಗಮನಾರ್ಹವೆನಿಸುತ್ತದೆ.
* * *

ಶೋಷಣೆಯೆಂಬುದು ಬಹುತೇಕ ರಾಷ್ಟ್ರಗಳ ಮೂಲ ತತ್ವಗಳಲ್ಲೊಂದು ಭಾರತದಂತಹ ರಾಷ್ಟ್ರಗಳಲ್ಲಿ ಇದು ಮುಖ್ಯವಾಗಿ ಜಾತಿಯಾಧಾರಿತವಾಗಿರುತ್ತದೆ. ಆದ್ದರಿಂದ ಭಾರತದ ಬದುಕನ್ನು ಸುಧಾರಿಸಬೇಕೆನ್ನುವ ಮಾರ್ಕ್ಸ್‌ವಾದಿ ಚಿಂತಕರು, ಇಲ್ಲಿಯ ಜಾತಿ ಮೂಲವಾದ ಶೋಷಣೆಗೆ ಕಾರಣಕರ್ತರೆನಿಸಿದ ಶೋಷಿತರು ಮತ್ತು ಶೋಷಕರು-ಈ ಎರಡು ವರ್ಗಗಳನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಸಾಹಿತ್ಯ ಕೃಷಿ ನಡೆಸಬೇಕೆಂಬುದು ಲೇಖಕರ ಒತ್ತಾಸೆಯಾಗಿದೆ. ಈ ಹಂತದಲ್ಲಿಯೇ ಇವರು ಮತ್ತೂ ಒಂದು ಎಚ್ಚರಿಕೆಯನ್ನು ನೀಡುತ್ತಾರೆ. ಕೆಂಪುಬಣ್ಣವನ್ನು ಹೇಳಿದಾಕ್ಷಣ ಕ್ರಾಂತಿಯ ಹಾಗೂ ಮಾರ್ಕ್ಸ್‌ವಾದವನ್ನು ಸಾಹಿತ್ಯದಲ್ಲಿ ಸಮರ್ಥವಾಗಿ ಹೇಳಿದಂತಾಗುವುದಿಲ್ಲ. ಆದ್ದರಿಂದ ನೆಲಕ್ಕೆ ಅನುಗುಣವಾಗಿ ಮಾರ್ಕ್ಸ್‌ವಾದಿ ಚಿಂತನೆಗಳನ್ನು ಸಾಹಿತ್ಯದಲ್ಲಿ ತರಬೇಕು. ಅದು ಜನರಿಗೆ ಮುಟ್ಟಿ, ಸುಧಾರಣೀಕರಣಗೊಂಡ ಸಮಾಜ ನಿರ್ಮಾಣಕ್ಕೆ ಪೋಷಕವಾಗಬೇಕು ಎಂಬ ನಿಲುವನ್ನು ತಾಳುತ್ತಾರೆ.

ಮಾರ್ಕ್ಸ್‌ವಾದವನ್ನು ಬಂಡವಾಳವನ್ನಾಗಿ ಮಾಡಿಕೊಂಡ ಸಾಹಿತಿಗಳು ಮತ್ತು ರಾಜಕಾರಣಿಗಳನ್ನು ಕುರಿತು ವ್ಯಗ್ರವಾಗಿ ಮಾತನಾಡುತ್ತಾರೆ. ಬ್ರಾಹ್ಮಣ ದ್ವೇಷವನ್ನು ಮಾತ್ರ ಪ್ರಧಾನ ಸ್ಥಾಯಿ ಗುಣವನ್ನಾಗಿ ಮಾಡಿಕೊಂಡ ಶೂದ್ರ ವರ್ಗಗಳ ಮೂಲದ ಡೋಂಗಿ ಲೋಹಿಯಾವಾದಿಗಳನ್ನು ವಾಸ್ತವದ ನೆಲೆಯಲ್ಲಿಯೇ ಟೀಕಿಸುತ್ತಾರೆ. ಹೀಗೆ ಲೋಹಿಯಾವಾದಿಗಳಲ್ಲದೆ ಅಂಬೇಡ್ಕರ್‌ವಾದಿಗಳೆಂದು ಅಂಬೇಡ್ಕರ್‌ಗೇ ನಾಮವನ್ನಿಡುವ ನಾಯಕರನ್ನೂ, ಸಾಹಿತಿ-ಚಿಂತಕರನ್ನೂ ಟೀಕಿಸುತ್ತಾ, ಇಂತಹ ಅಪ್ರಾಮಾಣಿಕರಿಗಿಂತ ಇಲ್ಲದ ದೈವವನ್ನು ಇದೆಯೆಂದು ಭ್ರಮಿಸಿ ನಡೆಯುವ ಜನರನ್ನು ಒಪುತ್ತಾ, ಈ ದೈವ ತತ್ವಗಳನ್ನು ಬೋಧಿಸುವ ಪೂಜಾರಿಗಳಿಗಿಂತಲೂ ಮೇಲಿನ ರೀತಿಯ ನಾಯಕರು ಮಹಾ ಮೋಸಗಾರರು ಎಂಬ ಮಾತುಗಳನ್ನು ತೀವ್ರವಾದ ರೊಚ್ಚಿನಿಂದಲೇ ಆಡುತ್ತಾರೆ.

ಅಂತಿಮವಾಗಿ ಅಂಬೇಡ್ಕರ್, ಲೋಹಿಯಾ ಮತ್ತು ಮಾರ್ಕ್ಸ್‌ವಾದಗಳು ಈ ದೇಶಕ್ಕೆ ಅಗತ್ಯವಿದ್ದು, ಇವು ಈ ನೆಲದ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಸಂಬಂಧಪಡುವ ಹಾಗೆ ಕಾರ್ಯರೂಪಕ್ಕೆ ಬರಬೇಕಿದೆ. ಇಂತಹ ಚಿಂತನೆಗಳನ್ನು ಸಾದರಪಡಿಸುವ ಬರಹಗಾರರಲ್ಲಿ ಬದುಕು ಮತ್ತು ತಮ್ಮ ಬರವಣಿಗೆಯ ನಡುವಿನ ಅಂತರ ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ಜಾತ್ಯಾತೀತ ಸಾಹಿತ್ಯ ಮೂಡಿ, ಜಾತಿರಹಿತ ಸಮಾಜವನ್ನು ಕಟ್ಟಬೇಕಾಗಿದೆ. ಅಂತಹ ಸಾಹಿತ್ಯಕ್ಕಾಗಿ ಹಾತೊರೆಯುತ್ತಾ ಪ್ರಸ್ತುತ ಲೇಖನವನ್ನು ಮುಗಿಸುತ್ತಾರೆ ಅಥವಾ ಆರಂಭಿಸುತ್ತಾರೆ.
*****
ಬಹುಜನ ಕನ್ನಡಿಗರು, ನವೆಂಬರ್-ಡಿಸೆಂಬರ್ ೨೦೦೧

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೋಕದ ರೀತಿ
Next post ನಾಗರ ಪಂಚಮಿ

ಸಣ್ಣ ಕತೆ

 • ಜುಡಾಸ್

  "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

 • ಸ್ನೇಹಲತಾ

  ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

 • ಶಾಕಿಂಗ್ ಪ್ರೇಮ ಪ್ರಕರಣ

  ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…