ಲೋಕ ನೀತಿ ವಿಧ ವಿಧ ರೀತಿ
ಮೇಲೇ ಕಾಣದು ಸತ್ಯದ ಜ್ಯೋತಿ || ಪ ||

ಕಲ್ಲುಗಳೆಲ್ಲ ರತ್ನಗಳಲ್ಲ
ಮಣ್ಣುಗಳೆಲ್ಲ ಸತ್ವಗಳಲ್ಲ
ಗುಡ್ಡಗಳೆಲ್ಲ ಲೋಹಾದ್ರಿಯಲ್ಲ
ಕಾಡುಗಳೆಲ್ಲ ಶ್ರೀಗಂಧವಲ್ಲ || ೧ ||

ಮೋಡಗಳೆಲ್ಲ ಮಳೆಯವು ಅಲ್ಲ
ಜಾಡುಗಳೆಲ್ಲ ಸತ್ಪಥವಲ್ಲ
ಹೂವುಗಳೆಲ್ಲ ವಾಸನೆಯಲ್ಲ
ಹಣ್ಣುಗಳೆಲ್ಲ ಸಿಹಿರಸವಲ್ಲ || ೨ ||

ಮಂದಿಗಳೆಲ್ಲ ಮಾನವರಲ್ಲ
ಮಾನವರೆಲ್ಲ ಮಹಾತ್ಮರಲ್ಲ
ಕಲಿತವರೆಲ್ಲ ಜಾಣರು ಅಲ್ಲ
ಜಾಣರು ಎಲ್ಲ ಜ್ಞಾನಿಗಳಲ್ಲ || ೩ ||

ದನಗಳು ಎಲ್ಲ ಹೈನುಗಳಲ್ಲ
ಊರುಗಳೆಲ್ಲ ನಂದನವಲ್ಲ
ಹುಟ್ಟಿದ್ದು ಎಲ್ಲ ಶಾಶ್ವತವಲ್ಲ
ಬದುಕುಗಳೆಲ್ಲ ಬಂಗಾರವಲ್ಲ || ೪ ||

ಹೆಣ್ಣುಗಳೆಲ್ಲ ಚೆಲುವೆಯರಲ್ಲ
ಗಂಡುಗಳೆಲ್ಲ ಧೀರರು ಅಲ್ಲ
ಕನಸುಗಳೆಲ್ಲ ಕೈಗೂಡೊದಿಲ್ಲ
ಮನಸುಗಳೆಲ್ಲ ತಿಳಿಹೊಳೆಯಲ್ಲ || ೫ ||

ಪ್ರತಿ ಹಣವೆಲ್ಲ ಬೆವರಿನದಲ್ಲ
ಪ್ರತಿ ನಡೆ ಎಲ್ಲ ಮುನ್ನಡೆಯಲ್ಲ
ಬರೆದದ್ದು ಎಲ್ಲ ಕಾವ್ಯವು ಅಲ್ಲ
ಹಾಡುವುದೆಲ್ಲ ಸಂಗೀತವಲ್ಲ || ೬ ||

ನೋಟಗಳೆಲ್ಲ ಕೂಟಗಳಲ್ಲ
ಕೂಟಗಳೆಲ್ಲ ಸುರತಗಳಲ್ಲ
ಬೀಜಗಳೆಲ್ಲ ಸಂತಾನವಲ್ಲ
ಸಂತತಿ ಎಲ್ಲ ಸಂಸ್ಕಾರವಲ್ಲ || ೭ ||

ಎಳ್ಳಲಿ ಎಣ್ಣೆ ಹಾಲಲಿ ಬೆಣ್ಣೆ
ತೆಂಗಲಿ ನೀರು ಗಣಿಯಲಿ ಚಿನ್ನಾ
ಗೊಳ್ಳಲಿ ತಿರುಳು ಇರುವಾ ರೀತಿ
ಸತ್ಯವು ಸುಲಭಕೆ ಸಿಗದೋ ಅಣ್ಣ || ೮ ||
*****